ಸೈನಿಕನಾಗಿ ದೇಶ ಸೇವೆಗೆ ಟೊಂಕ ಕಟ್ಟಿ ನಿಂತಿದ್ದ ರಾಜೇಶ್, ಹಿಮಪಾತದಲ್ಲಿ ಮುಳುಗಿದಾಗ ಯಾರೋ ಅರಿಯದ ಹುಡುಗಿ ತಂಗಿಯಂತೆ ಬಂದು ಅನ್ನ, ನೀರು ಒದಗಿಸಿದ್ದಳು. ಈ ಬಾಂಧವ್ಯ ಮುಂದೆ 50 ವರ್ಷ ಕಳೆದರೂ ಇವರನ್ನು ಅಣ್ಣ ತಂಗಿಯರನ್ನಾಗಿ ಒಂದುಗೂಡಿಸಿತ್ತು. ಆ ನಂತರ ನಡೆದದ್ದು ಏನು.......?
``ಸುಶೀಲಾ.... ಸುಶೀಲಾ....''
``ಅಯ್ಯೋ ಏನಾಯಿತ್ರೀ....? ಯಾಕೆ ಅಷ್ಟೊಂದು ಜೋರಾಗಿ ಕೂಗುತ್ತಿದ್ದೀರಿ....! ಇಲ್ಲೇ ಇದ್ದೀನಿ....'' ಎನ್ನುತ್ತಾ ಸೀರೆ ಸೆರಗಿಗೆ ಕೈ ಒರೆಸಿಕೊಳ್ಳುತ್ತಾ ಮುಂದೆ ಬಂದು ನಿಂತರು ಸುಶೀಲಾ.
ಗಂಡನ ಮುಖದಲ್ಲಿ ಆತಂಕ ಎದ್ದು ಕಾಣುತ್ತಿತ್ತು. ಅತ್ತಿಂದಿತ್ತ ಓಡಾಡುತ್ತಿದ್ದ ಯಜಮಾನರ ಕೈ ಹಿಡಿದು ಕಣ್ಣಲ್ಲೇ, `ಏನು....' ಎಂದು ಕೇಳಿದರು.
ರಾಜೇಶ್‌ಹೆಂಡತಿಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು, ``ಹೊಟ್ಟೆಯಲ್ಲಿ ಏನೋ ಒಂಥರಾ ಸಂಕಟವಾಗ್ತಿದೆ ಕಣೇ, ಎಲ್ಲೋ ಏನೋ ಸರಿ ಇಲ್ಲ ಅನ್ಸುತ್ತೆ..... ಯಾಕೋ ಗಾಬರಿಯಾಗ್ತಿದೆ....'' ಎಂದರು.
``ಅಯ್ಯೋ ದೇವರೇ.... ಬನ್ನಿ ಇಲ್ಲಿ ಕುಳಿತುಕೊಳ್ಳಿ,'' ಎನ್ನುತ್ತಾ ಗಂಡನನ್ನು ಕೂರಿಸಿ, ಆತನ ಹಣೆ ಮುಟ್ಟಿ ನೋಡುತ್ತಾ, ``ಜ್ವರವಿಲ್ಲ... ತಲೆನೋವು ಏನಾದರೂ ಇದೆಯಾ...?'' ಎಂದು ಕೇಳಿದರು.
ರಾಜೇಶ್ ಇಲ್ಲವೆನ್ನುವಂತೆ ಗೋಣು ಅಲುಗಾಡಿಸಿದರು.
``ಅಲ್ಲಾ ರೀ.... ಗಂಟೆ 10, ಬೆಳಗ್ಗೆಯಿಂದ ಒಂದು ಕಪ್ ಟೀ ಕುಡಿದಿದ್ದಷ್ಟೆ.... ಹೊಟ್ಟೆ ಹಸಿವಾಗಿರುತ್ತೆ, ಇಲ್ಲಾ ಗ್ಯಾಸ್ಟ್ರಿಕ್ ಆಗಿರಬೇಕು. ಅದು ಗೊತ್ತಾಗಲ್ಲ ನಿಮಗೆ. ಬನ್ನಿ ತಿಂಡಿ ತಿನ್ನಿ ಅಂತ ಆಗಲಿಂದ ಕರೀತಾ ಇದೀನಿ. ಆಮೇಲೆ ಆಮೇಲೆ ಎನ್ನುತ್ತಾ ಕೂತಿದ್ದೀರಿ,'' ಎಂದರು ಸುಶೀಲಾ ತುಸು ಕೋಪದಿಂದ.
ಹೆಂಡತಿಯ ಮುಖ ನೋಡುತ್ತಾ, ``ಅದೆಲ್ಲಾ ಏನೂ ಇಲ್ಲ.... ಮನಸ್ಸಿನಲ್ಲಿ ಏನೋ ನೋವು ಹೇಳಲಾಗದ ಆತಂಕ ಸುಶೀಲಾ... ನಿನಗೆ ಹೇಗೆ ಹೇಳಲಿ....?'' ಎಂದರು ರಾಜೇಶ್.
``ಅಲ್ಲಾ ರೀ, ವಿನೂತನಿಗೆ ಏನಾದರೂ ಮೈ ಹುಷಾರಿಲ್ಲ ಅಂತ ಫೋನ್ ಬಂದಿತ್ತಾ......? ನಮ್ಮ ಅವಿ ಕಾಲಿಗೆ ಪೆಟ್ಟಾಗಿತ್ತಲ್ಲ ನಿನ್ನೆಯಿಂದ ಸ್ವಲ್ಪ ಯೋಚನೆ ಮಾಡಿರುತ್ತಿದ್ದೀರಿ..... ರಾಧಾ ಹೇಳಲಿಲ್ವಾ ನಿಮ್ಮ ಮೊಮ್ಮಗನ ಕಾಲು ಸರಿಯಾಗಿದೆ ಅಂತ ಮತ್ತೇಕೆ ಯೋಚನೆ....? ತಿಂಡಿ ತರ್ತೀನಿ ತಡೀರಿ,'' ಎನ್ನುತ್ತಾ ಅಡುಗೆ ಮನೆಗೆ ಹೋದರು ಸುಶೀಲಾ.
ಕೈಯಲ್ಲಿ ಬಿಸಿಬಿಸಿ ದೋಸೆ ತಟ್ಟೆ ಹಿಡಿದುಕೊಂಡು ಬಂದರು. ಆಕಾಶವೇ ಕಳಚಿ ಬಿದ್ದ ಹಾಗೆ ಕುಳಿತ ಗಂಡನನ್ನು ನೋಡಿ ಏಕೋ ಸುಶೀಲಾರಿಗೆ ಒಂದು ನಿಮಿಷ ಭಯವೇ ಆಯಿತು. ಗಂಡನ ಮುಂದೆ ಇದ್ದ ಟೀಪಾಯಿ ಮೇಲೆ ತಿಂಡಿ ತಟ್ಟೆ ಇಟ್ಟು ರಾಜೇಶರ ಮುಖವನ್ನು ಬೊಗಸೆಯಲ್ಲಿ ಹಿಡಿದು, ಕಣ್ಣಲ್ಲೇ ಪ್ರೀತಿ ತುಂಬಿಕೊಂಡು, ``ದೇವರು ನಮಗೆ ಎಲ್ಲ ರೀತಿಯಲ್ಲಿಯೂ ಸುಖ ಸಮೃದ್ಧಿಯನ್ನು ಕೊಟ್ಟಿದ್ದಾನೆ. ದಾಂಪತ್ಯದ 50 ವಸಂತಗಳನ್ನು ಕಷ್ಟವೋ ಸುಖವೋ ಇಬ್ಬರೂ ಹಂಚಿಕೊಂಡು ನಡೆದಿದ್ದೀವಿ. ಮಕ್ಕಳಿಬ್ಬರೂ ಸುಖವಾಗಿ ತಮ್ಮ ಜೀವನದಲ್ಲಿ ಮುಂದುವರಿದಿದ್ದಾರೆ. ಮತ್ತೀನೇನು ನಿಮಗೆ ಚಿಂತೆ, ಯಾಕೆ ಇಷ್ಟೊಂದು ಮಂಕಾಗಿ ಕುಳಿತಿದ್ದೀರಿ....'' ಎನ್ನುತ್ತಾ ಕಣ್ಣೀರು ಹಾಕಿದರು.
``ಆರತಿ.... ಆರತಿ...'' ಎಂದು ರಾಜೇಶ್ ರ ಬಾಯಿಂದ ಕೇಳಿ, ಆಶ್ಚರ್ಯದಿಂದ ಕೈಯನ್ನು ಹಿಂದೆ ತೆಗೆದುಕೊಂಡು ಗಂಡನ ತೊಡೆಯ ಮೇಲೆ ಕೈಯೂರಿ, ಕಣ್ಣೀರು ಒರೆಸಿಕೊಳ್ಳುತ್ತಾ ಅವರ ಪಕ್ಕದಲ್ಲಿ ಕುಳಿತರು. ರಾಜೇಶ್ ರ ಕಣ್ಣಲ್ಲಿ ನೀರು ತುಂಬಿತ್ತು.





