ಮೊದಲಿನಿಂದಲೂ ಎಲ್ಲರಿಗಿಂತ ವಿಭಿನ್ನವಾಗಿ, ಅತಿ ಮುದ್ದಿನಿಂದ ಅಹಂಕಾರಿಯಾಗಿ ಬೆಳೆದ ದೇವಿಕಾ ತಾನು ಹೇಳಿದ್ದೇ ಸರಿ ಎಂದು ಬಾಳುತ್ತಿದ್ದಳು. ಹೆತ್ತವರ ಮಾತು ಕೇಳದೆ ಲಿವ್ ಇನ್ನಿಂದ ಮಗು ಪಡೆದು ಒಬ್ಬಂಟಿಯಾಗಿಯೇ ಬದುಕಿದಳು. ಮುಂದೆ ಅವಳ ಭವಿಷ್ಯ…..?

“ದೇವಿಕಾ, ದೇವಿಕಾ…. ನಿನ್ನ ರಿಸಲ್ಟ್ ನೋಡಿದೆಯಾ…? ನೀನು ಸ್ಕೂಲಿಗೆ ಮೊದಲಂತೆ….!” ಎಂದು ಸಂತೋಷದಿಂದ ಮಗಳನ್ನು ಕೂಗುತ್ತಾ ಒಳಗೆ ಬಂದರು ಜಗದೀಶ್‌.

“ಹೌದೇನ್ರಿ….. ನಿಮಗೆ ಯಾರು ಹೇಳಿದರು?” ಎನ್ನುತ್ತಾ ಅಡುಗೆ ಮನೆಯಿಂದ ಓಡಿ ಬಂದರು ಪಾರ್ವತಮ್ಮ.

“ರಸ್ತೆಯಲ್ಲಿ ಅವಳ ಕ್ಲಾಸ್‌ ಟೀಚರ್‌ ಸಿಕ್ಕಿದ್ರು. ಅವರೇ ಹೇಳಿದರು.”

“ನನಗೆ ಗೊತ್ತಿತ್ತು. ನಮ್ಮ ಮಗಳೇ ಶಾಲೆಗೆ ಮೊದಲು ಬರುವುದು ಅಂತ. ಅವಳು ಒಂದನೇ ತರಗತಿಯಿಂದಲೂ ಮೊದಲ ಸ್ಥಾನ ಯಾರಿಗೂ ಬಿಟ್ಟುಕೊಟ್ಟಿಲ್ಲ,” ಎಂದರು ಪಾರ್ವತಮ್ಮ.

“ಸಾಕು ಸಾಕು… ಮಗಳನ್ನು ಹೊಗಳಿದ್ದು. ಮೊದಲು ದೇವರ ಮುಂದೆ ತುಪ್ಪದ ದೀಪ ಹಚ್ಚಿಟ್ಟು ಬಾ…. ಹಾಗೇ ಏನಾದರೂ ಸ್ವೀಟ್‌ ಮಾಡು,” ಎಂದರು ಜಗದೀಶ್‌.

“ಆಗಲೇ ಸ್ವೀಟ್‌ ಮಾಡಿಟ್ಟಿರುವೆ,” ಎಂದ ಆಕೆ, “ದೇವಿ….” ಎಂದು ಕೂಗುತ್ತಾ ದೇವರ ಮನೆಗೆ ಹೋದರು ಪಾರ್ವತಮ್ಮ.

ಅಷ್ಟರಲ್ಲಿ ಹೊರಗೆ ಬಂದ ದೇವಿಕಾ, “ಹೌದು ಅಪ್ಪಾ…. ನೆಟ್‌ ಕನೆಕ್ಟ್ ಆಗದೆ ನಾನು ನೋಡಿರಲಿಲ್ಲ. ಈಗ ತಾನೇ ಹೆಡ್ ಮಾಸ್ಟರ್‌ ಫೋನ್‌ ಮಾಡಿ ಹೇಳಿದರು,” ಎಂದಳು ಮುದ್ದು ಮಗಳು ದೇವಿಕಾ.

ಪಾರ್ವತಮ್ಮ ದೇವರಿಗೆ ತುಪ್ಪದ ದೀಪ ಹಚ್ಚಿ, ಸ್ವೀಟ್‌ ತೆಗೆದುಕೊಂಡು ಬಂದು ಗಂಡ, ಮಗಳಿಗೆ ತಿನ್ನಿಸಿದರು. ಜೊತೆಗೆ ಅಕ್ಕಪಕ್ಕದ ಮನೆಯವರಿಗೂ ಸಿಹಿ ಹಂಚಿ ಸಂಭ್ರಮಿಸಿದರು. ದೂರದ ಬಂಧು ಬಳಗದವರಿಗೆ, ಸ್ನೇಹಿತರಿಗೆ ಫೋನ್‌ ಮಾಡಿ ಹೇಳಿದ್ದೇ ಹೇಳಿದ್ದು. ತಮ್ಮ ಮಗಳು ಎಷ್ಟು ಬುದ್ಧಿವಂತಳು ಎಂದು ಹೆಮ್ಮೆಪಟ್ಟರು.

ಶಿವಮೊಗ್ಗದಲ್ಲಿ ಕೆಲಸದಲ್ಲಿದ್ದ ಜಗದೀಶ್‌ ಮತ್ತು ಪಾರ್ವತಮ್ಮ ದಂಪತಿಗಳಿಗೆ ಒಬ್ಬಳೇ ಮಗಳು ದೇವಿಕಾ. ಮದುವೆಯಾಗಿ ಐದು ವರ್ಷಗಳ ನಂತರ ಹುಟ್ಟಿದವಳು. ಕಂಡ ಕಂಡ ದೇವರಿಗೆ ಹರಕೆ ಹೊತ್ತು ಹುಟ್ಟಿದ ಮಗಳು ಇವಳು. ಊರಿನಲ್ಲೂ ಎರಡೂ ಮನೆಯ ಅಜ್ಜಿ ತಾತಂದಿರಿಗೆ ಮುದ್ದಿನ ರಾಜಕುಮಾರಿ. ಓದಿನಲ್ಲಿ ತುಂಬಾ ಜಾಣೆ, ಮೊದಲಿನಿಂದಲೂ ತರಗತಿಯಲ್ಲಿ ಮೊದಲ ಸ್ಥಾನವನ್ನು ಯಾರಿಗೂ ಬಿಟ್ಟು ಕೊಡುತ್ತಿರಲಿಲ್ಲ. ಜೊತೆಗೆ ಬುದ್ಧಿವಂತೆ, ರೂಪವಂತೆ ಅಲ್ಲದೆ ಸ್ವಲ್ಪ ಹಠಮಾರಿ ಕೂಡ. ಈಗ ಹತ್ತನೇ ತರಗತಿಯಲ್ಲಿ ಸ್ಕೂಲಿಗೆ ಮೊದಲು ಬಂದಿದ್ದರಿಂದ ಇನ್ನಷ್ಟು ಅಹಂಕಾರ.

“ನಾನು ಬೆಂಗಳೂರಿನಲ್ಲೇ ಕಾಲೇಜ್‌ಓದುತ್ತೇನೆ,” ಎಂದು ಹಠ ಮಾಡಿ ಹಾಸ್ಟೆಲ್ ‌ಗೆ ಸೇರಿದಳು.

ಊರಿನ ಮನೆಯಲ್ಲಿ ಸಂಪ್ರದಾಯಸ್ಥರು. ಎಲ್ಲ ತರಹದ ಡ್ರೆಸ್‌ ಗಳನ್ನು ಹಾಕುವ ಹಾಗಿರಲಿಲ್ಲ. ಹೇರ್‌ ಕಟ್‌ ಮಾಡಿಕೊಂಡು, ಮಾಡರ್ನ್‌ ಡ್ರೆಸ್‌ ಹಾಕ್ಕೊಂಡು ಓಡಾಡಬಹುದೆಂದು ಅಲಳು ಹಾಸ್ಟೆಲ್ ‌ಗೆ ಸೇರಿಕೊಂಡಳು. ಮೊದಲಿನಿಂದಲೂ ಅವಳ ಯೋಚನೆಗಳೆಲ್ಲಾ ಮಾಡರ್ನ್‌ಆಗಿತ್ತು. ಅವಳಿಗೆ ಸ್ನೇಹಿತರ ಜೊತೆ ಹೋಟೆಲ್, ಸಿನಿಮಾ ಎಂದು ತಿರುಗುವುದು ಬಲು ಇಷ್ಟ. ಮನೆಯಲ್ಲಿ ಇದಕ್ಕೆಲ್ಲಾ ಅವಕಾಶವಿರಲಿಲ್ಲ. ದೇವಿಕಾಗೆ ಗಂಡು ಹೆಣ್ಣು ಭೇದವಿರಲಿಲ್ಲ. ಅವಳ ಸ್ನೇಹಿತರಲ್ಲಿ ಹುಡುಗರೂ ಇದ್ದರು.

ಸಂಪ್ರದಾಯಸ್ಥರಾದ ತಂದೆ ತಾಯಿ ಹುಡುಗರ ಜೊತೆಗೆ ಸೇರಲು ಬಿಡುತ್ತಿರಲಿಲ್ಲ. ಸ್ಕೂಲ್ ‌ನಿಂದ ಪಿಕ್‌ನಿಕ್‌ ಹೋಗಬೇಕಾದರೆ ಹೆಣ್ಣುಮಕ್ಕಳು ಇದ್ದರೆ ಮಾತ್ರ ಕಳುಹಿಸುತ್ತಿದ್ದರು. ಅದಕ್ಕೆ ಬೆಂಗಳೂರಿನ ಕಾಲೇಜಿಗೆ ಸೇರಿದರೆ ತನ್ನಿಷ್ಟದಂತೆ ಇರಬಹುದು ಎನ್ನುವ ಆಶಯ ದೇವಿಕಾಳದು.

ಮೊದಲು ಮನೆಯಲ್ಲಿ ಒಪ್ಪದಿದ್ದರೂ, ಸ್ಕೂಲ್ ಟೀಚರ್ಸ್‌, ದೇವಿಕಾ ತುಂಬಾ ಚೆನ್ನಾಗಿ ಓದುತ್ತಾಳೆ. ಬೆಂಗಳೂರಿನಲ್ಲಿ ಒಳ್ಳೊಳ್ಳೆಯ ಕಾಲೇಜುಗಳಿವೆ ಸೇರಿಸಿ, ಎಂದು ಮತ್ತೆ ಮತ್ತೆ ಹೇಳಿದಾಗ ಒಪ್ಪಿಕೊಂಡರು.

ಅಂತೂ ತನ್ನಿಷ್ಟದಂತೆ ದೇವಿಕಾಳಿಗೆ ಬೆಂಗಳೂರು ಕಾಲೇಜಿನಲ್ಲಿ ಸೀಟು ಸಿಕ್ಕಿತು. ಹಾಸ್ಟೆಲ್ ‌ಕೂಡ ಸಿಕ್ಕಿತು. ಬೆಂಗಳೂರಿನಲ್ಲಿ ಹೊಸ ವಿದ್ಯಾರ್ಥಿ ಜೀವನ ಶುರು ಮಾಡಿದಳು ದೇವಿಕಾ.

ದೇವಿಕಾಗೆ ಬೆಂಗಳೂರಿಗೆ ಬಂದಿದ್ದು ಲಂಗು ಲಗಾಮು ಇಲ್ಲದಂತಾಯಿತು. ಊರಿನಲ್ಲಿ ರಾತ್ರಿ ಬೇಗ ಮಲಗಬೇಕು, ಬೆಳಗ್ಗೆ ಬೇಗ ಏಳಬೇಕು. ಹೆಚ್ಚು ಹೊತ್ತು ಮೊಬೈಲ್ ‌ಹಿಡಿದರೆ ಬೈಯ್ಯುತ್ತಿದ್ದರು. ಆದರೆ ಇಲ್ಲಿ ಯಾರ ಭಯ ಇರಲಿಲ್ಲ. ವೀಕೆಂಡ್ಸ್ ಫ್ರೆಂಡ್ಸ್ ಜೊತೆ ಸುತ್ತಾಟ, ಸಿನಿಮಾ, ಹೋಟೆಲ್ ಎಂದು ಹೋಗತೊಡಗಿದಳು.

ಎಷ್ಟೋ ಸಲ ಯಾರದಾದರೂ ಬರ್ತ್‌ ಡೇ ಇರುವಾಗ ಹುಡುಗರು ಹುಡುಗಿಯರು ಎಲ್ಲಾ ಸೇರಿ ರೆಸಾರ್ಟ್‌ ಗೆ ಹೋಗಿ ಪಾರ್ಟಿ ಮಾಡಿ ಬರುತ್ತಿದ್ದರು. ಪಾರ್ಟಿಗೆಲ್ಲಾ ಮಾಡರ್ನ್‌ ಡ್ರೆಸ್‌ ಹಾಕ್ಕೊಂಡು ಹೋಗುತ್ತಿದ್ದರು. ಅಪ್ಪ ಅಮ್ಮನಿಗೆ ತಿಳಿಯದಂತೆ ನೋಡಿಕೊಳ್ಳುತ್ತಿದ್ದಳು. ಊರಿನಿಂದ ಇವಳ ಜೊತೆ ಬಂದಿದ್ದ ಇನ್ನಿಬ್ಬರು ಹುಡುಗಿಯರು ಇವಳ ಹಾಗೆ ಓಡಾಡುತ್ತಿರಲಿಲ್ಲ.

ಒಂದು ದಿನ ಅವಳ ಜೊತೆಗೆ ಬಂದ ರೂಪಾ, “ದೇವಿಕಾ, ಇದೆಲ್ಲಾ ನಮಗೆ ಬೇಡ ಕಣೇ. ನಾವು ಓದಲು ಬಂದವರು. ಚೆನ್ನಾಗಿ ಓದೋಣ,” ಎಂದು ಹೇಳಿದಳು.

“ನಾನು ಓದುತ್ತಿಲ್ಲವೇ…..! ಇಲ್ಲೂ ಮೊದಲ ಸ್ಥಾನ ಯಾರಿಗೂ ಬಿಟ್ಟುಕೊಟ್ಟಿಲ್ಲ. ನೀವು ಹಳ್ಳಿ ಗುಗ್ಗುಗಳು. ನಿಮಗೆ ಏನೂ ತಿಳಿಯುವುದಿಲ್ಲ. ಈಗಿನ ಜನರೇಶನ್‌ ಗೆ ತಕ್ಕಂತೆ ಇರಬೇಕು,” ಎಂದು ಅವಳಿಗೆ ಬೈದಳು ದೇವಿಕಾ.

ದೇವಿಕಾ ಎಷ್ಟೇ ವಿಧವಾಗಿ ಡ್ರೆಸ್‌ ಮಾಡಲಿ, ಓಡಾಡಲಿ, ಓದಿನಲ್ಲಿ ಮಾತ್ರ ಯಾವಾಗಲೂ ಮುಂದಿದ್ದಳು. ಹಾಗೆ ಪಿಯುಸಿ ಮುಗಿಯಿತು. ನಂಬರ್‌ ಒನ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಸೀಟ್‌ ಸಿಕ್ಕಿತು. ಆಗ ಊರಿನಿಂದ ಬಂದ ರೂಪಾ, ದೀಪಾ ಇಬ್ಬರೂ ಪದವಿ ಕಾಲೇಜಿಗೆ ಸೇರಿದ್ದರಿಂದ ಇವಳಿಂದ ದೂರಾದರು. ಮೊದ ಮೊದಲು ಆ ಇಬ್ಬರು ಗೆಳತಿಯರು ಮನೆಯಲ್ಲಿ ಹೇಳಿದರೆ ಎಂದು ಸ್ವಲ್ಪ ಭಯವಿತ್ತು. ಈಗ ಅವರು ಇಲ್ಲದೆ ಇದ್ದರಿಂದ ಇವಳ ಓಡಾಟಕ್ಕೆ ರೆಕ್ಕೆ ಬಂದಂತಾಯಿತು.

ಹೆಚ್ಚಾಗಿ ಹುಡುಗರ ಸ್ನೇಹವನ್ನೇ ಮಾಡಿದಳು. ಮನದ ತುಂಬಾ ಆಧುನಿಕತೆ ಮೈಗೂಡಿಸಿಕೊಂಡು, ಅಮೆರಿಕಾ ಸಂಸ್ಕೃತಿ ಇಷ್ಟಪಡುತ್ತಾ, ಅಲ್ಲೇ ನೆಲೆಸುವ ಕನಸು ಕಾಣುತ್ತಲೇ ಎಂಜಿನಿಯರಿಂಗ್‌ ಮುಗಿಸಿದಳು. ಯು.ಎಸ್‌ ನಲ್ಲಿ ಎಂ.ಎಸ್‌ ಮಾಡಲು ಸೀಟು ಸಿಕ್ಕಿತು. ಮನೆಯಲ್ಲಿ ಬೇಡ ಎಂದರೂ ಹಠ ಮಾಡಿದ್ದರಿಂದ ಅವಳ ಮುಂದಿನ ಓದಿಗೆ ಜಗದೀಶ್‌ ಸಾಲ ಮಾಡಿ, ಯುಎಸ್‌ ಗೆ ಕಳುಹಿಸಿದರು.

ಬೆಂಗಳೂರಿನಲ್ಲಿ ತನ್ನೊಂದಿಗೆ ಓದಿದ್ದ ಇನ್ನೂ ಇಬ್ಬರು ಹುಡುಗಿಯರ ಜೊತೆ ಸೇರಿ ಯುಎಸ್‌ ಗೆ ಬಂದಳು. ಓದುತ್ತಲೇ ಪಾರ್ಟ್ ಟೈಮ್ ಕೆಲಸ ಮಾಡತೊಡಗಿದಳು. ಓದು ಮುಗಿದು ಕೆಲಸ ಸಿಕ್ಕಿತು. ಸಾಲ ತೀರಿಸುವ ತನಕ ಅಲ್ಲೇ ನೆಲೆಸುವುದು ಅನಿವಾರ್ಯವಾಯಿತು.

ಇಂಡಿಯಾದಿಂದ ಬಂದಿದ್ದ ಜೀವನ್‌ ಎಂಬ ಯುವಕನ ಪರಿಚಯ ಆಯಿತು. ಇಬ್ಬರ ಮನೋಭಾವ ಒಂದೇ ಆಗಿತ್ತು. ಇಬ್ಬರಿಗೂ ಮದುವೆ ಇಷ್ಟವಿರಲಿಲ್ಲ. ಒಮ್ಮೆ ಅವನ ಬಳಿ, “ಜೀವನ್‌, ನನಗಂತೂ ಇಂಡಿಯಾದ ತರಹ ಮದುವೆಯಾಗಿ ಸಾಯುವತನಕ ಜೊತೆಗೆ ಇರುವ ಕಾನ್ಸೆಪ್ಟ್ ಇಷ್ಟವಿಲ್ಲ,” ಎಂದಳು.

“ಹೌದು ದೇವಿ, ನನಗೂ ಆ ತರಹ ಇರುವುದು ಇಷ್ಟವಿಲ್ಲ,” ಎಂದು ಅವನೂ ಹೇಳಿದ.

ಇಬ್ಬರ ಪರಿಚಯ ಪ್ರೇಮಕ್ಕೆ ತಿರುಗಿತು. ವೀಕೆಂಡ್‌ ನಲ್ಲಿ ಜೊತೆಯಲ್ಲೇ ಎಲ್ಲಾ ಕಡೆ ಸುತ್ತುತ್ತಿದ್ದರು. ಇಬ್ಬರೂ ಓಡಾಡದ ಸ್ಥಳವಿಲ್ಲ, ಇಬ್ಬರ ಯೋಚನೆಗಳು ಒಂದೇ ರೀತಿಯಲ್ಲಿ ಇತ್ತು.

ಒಂದು ದಿನ ದೇವಿಕಾ, “ಜೀವು, ನನಗೆ ನಿನ್ನನ್ನು ಬಿಟ್ಟು ಇರಲು ಕಷ್ಟ. ನಾವು ಲಿವಿಂಗ್‌ ಟು ಗೆದರ್‌ ತರಹ ಇರೋಣ್ವಾ…..?” ಎಂದು ಕೇಳಿದಳು.

“ದೇವಿ, ನಾನೇ ಹೇಳೋಣವೆಂದಿದ್ದೆ. ನಾನಂತೂ ನಿನ್ನಿಂದ ಹುಚ್ಚನಾಗಿರುವೆ. ಇಬ್ಬರೂ ಒಂದೇ ಮನೆಯಲ್ಲಿ ವಾಸಿಸೋಣ. ಎಲ್ಲಾ ಖರ್ಚುಗಳನ್ನು ಶೇರ್‌ ಮಾಡಿಕೊಳ್ಳೋಣ,” ಎಂದ.

“ಖರ್ಚು ವೆಚ್ಚ ಮಾತ್ರವಲ್ಲ, ಕೆಲಸವನ್ನೂ ಶೇರ್‌ ಮಾಡಬೇಕು,” ಎಂದಳು ನಗುತ್ತಾ ದೇವಿಕಾ.

“ಡನ್‌… ನೀನೇ ನನ್ನ ಫ್ಲಾಟ್‌ ಗೆ ಬಂದುಬಿಡು,” ಎಂದ ಜೀವನ್‌.

ಅದಕ್ಕೆ ಒಪ್ಪಿದ ದೇವಿಕಾ, ಮುಂದಿನ ವಾರ ಇಬ್ಬರೂ ಸೇರಿ ಅವಳ ಫ್ಲಾಟ್‌ ಖಾಲಿ ಮಾಡಿದರು. ಜೀವನ್‌ ಫ್ಲಾಟ್‌ ಗೆ ಶಿಫ್ಟಾದಳು. ಮನೆಯಲ್ಲಿ ಮದುವೆಗೆ ಪ್ರಯತ್ನ ಮಾಡಿದರೆ, ನಾನು ಈಗಲೇ ಮದುವೆಯಾಗೋಲ್ಲ ಅಂತ ಹಠ ಮಾಡಿದಳು.

“ಕಾಣದ ದೂರದ ದೇಶದಲ್ಲಿ ಎಷ್ಟು ದಿನ ಒಂಟಿಯಾಗಿ ಇರ್ತೀಯಾ….? ಇಂಡಿಯಾಗೆ ಬಂದು ಬಿಡು. ನಮಗೂ ಇನ್ಯಾರು ಇದ್ದಾರೆ,” ಎಂದು ಪರಿಪರಿಯಾಗಿ ಕೇಳಿದರು.

“ಇನ್ನೂ ಸ್ವಲ್ಪ ದಿನ ನಾನು ಇಲ್ಲೇ ಇರ್ತೀನಿ….” ಎಂದು ಹಠ ಮಾಡಿದಳು.

ದೇವಿಕಾ ಜೀವನ್‌ ಜೊತೆ ಒಂದೇ ಮನೆಯಲ್ಲಿ ವಾಸಿಸುತ್ತಿರುವುದಾಗಿ ಮನೆಯವರಿಗೆ ಹೇಳದೆ, “ಇಂಡಿಯಾದವರೆ ಒಬ್ಬರು ಫ್ರೆಂಡ್‌ ಆಗಿದ್ದಾರೆ. ಇಬ್ಬರೂ ಸೇರಿ ಮನೆ ಮಾಡಿದ್ದೀವಿ. ನಾವು ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದೇವೆ, ನೀವೇನೂ ಯೋಚಿಸಬೇಡಿ,” ಎಂದಳು.

ಫ್ರೆಂಡ್‌ ಎಂದರೆ ಯಾರೋ ಹುಡುಗಿ ಎಂದು ಅಮ್ಮ ಅಪ್ಪ ಅಂದುಕೊಂಡರು.

ಜೀವನ್‌ ಜೊತೆ ಜಗಳ ಕಿತ್ತಾಟ, ಹುಸಿ ಮುನಿಸು, ಮತ್ತೆ ಒಂದಾಗುವುದು ಹೀಗೆ ಮಾಡುತ್ತಾ ಸುಖ ಸಂತೋಷವಾಗಿದ್ದಳು. ಒಮ್ಮೆ ರಜೆಗೆಂದು ಊರಿಗೆ ಬಂದಿದ್ದಾಗ, “ನಿನಗೆ ಅಲ್ಲೇ ಇರುವುದು ಇಷ್ಟವಾದರೆ ಸರಿ, ಅಲ್ಲಿ ಇರುವ ಹುಡುಗನನ್ನೇ ನೋಡ್ತೀವಿ. ಮದುವೆ ಮಾಡಿಕೊಂಡು ಹೋಗು,” ಎಂದು ತಂದೆ ಜಗದೀಶ್‌ ಅವಳನ್ನು ಮದುವೆಯಾಗುವಂತೆ ಬಲವಂತ ಮಾಡಿದರು.

“ನೋ… ನೋ….! ನಾನು ಮದುವೆ ಆಗುವುದಿಲ್ಲ. ನಾನು ಜೀವನ್‌ ನನ್ನು ಪ್ರೀತಿಸುತ್ತಿದ್ದೇನೆ. ನಾವಿಬ್ಬರೂ ಲಿವಿಂಗ್‌ ಟು ಗೆದರ್ ಆಗಿ ಜೊತೆಗೇ ಇದ್ದೇವೆ,” ಎಂದಳು ದೇವಿಕಾ.

“ಥೂ…. ನಾಚಿಕೆಗೆಟ್ಟವಳೆ! ಮದುವೆಯಾಗದೇ ಒಂದು ಹುಡುಗನ ಜೊತೆ ಇದ್ದೀಯಾ….? ನಮ್ಮ ಮನೆ ಮರ್ಯಾದೆ ಹರಾಜು ಹಾಕ್ತೀಯಾ…?” ಎಂದು ಜಗದೀಶ್‌ ಬೈದರು.

“ಅಯ್ಯೋ…. ನಾವಿಬ್ಬರೂ ಜೊತೆಯಾಗಿ ಇದ್ದು ಆಗಲೇ ಆರು ತಿಂಗಳಾಯಿತು. ಬಾಡಿಗೆ, ಖರ್ಚು ವೆಚ್ಚ ಎಲ್ಲವನ್ನೂ ಇಬ್ಬರೂ ಶೇರ್‌ ಮಾಡಿಕೊಳ್ತೀವಿ. ಅವನು ತುಂಬಾ ಒಳ್ಳೆಯವನು,” ಎಂದಳು.

“ಥೂ…. ನಿನ್ನನ್ನು ಹೆತ್ತು ತಪ್ಪು ಮಾಡಿದೆ. ನನ್ನ ಮಗಳು ಬುದ್ಧಿವಂತೆ, ರೂಪವಂತೆ ಎಂದು ಎಲ್ಲರ ಬಳಿ ಹೊಗಳಿಕೊಂಡೆ. ಈಗ ನೀನು ಹೀಗೆ ಅಂತ ತಿಳಿದರೆ ನಮ್ಮ ಮರ್ಯಾದೆ ಏನಾಗಬೇಕು,” ಎಂದು ಕೋಪದಿಂದ ಕೂಗಾಡಿದರು.

“ನಮ್ಮ ಬಳಿ ಹೇಳಿದಂತೆ ಯಾರ ಬಳಿಯೂ ಹೇಳಬೇಡವೇ ಮನೆಹಾಳಿ…. ಆಮೇಲೆ ನಾವು ಊರಿನಲ್ಲಿ ತಲೆ ಎತ್ತಿಕೊಂಡು ಓಡಾಡಲು ಆಗುವುದಿಲ್ಲ. ಹಾಳಾಗಿ ಹೋಗಲಿ ಅವನನ್ನು ಇಲ್ಲಿಗೆ ಬರಲು ಹೇಳು ಅವನನ್ನೇ ಮದುವೆ ಮಾಡಿಕೊಳ್ಳುವೆಯಂತೆ,” ಎಂದು ಪಾರ್ವತಮ್ಮ ಹೇಳಿದರು.

“ಇವರು ವಿಷಯ ಹೇಳಲು ನನಗೆ ಯಾಕೆ ಭಯ….? ಅದೇನೂ ತಪ್ಪಲ್ಲ. ಅಮಮೆರಿಕಾದಲ್ಲಿ ಮಾತ್ರವಲ್ಲ, ನಮ್ಮ ಇಂಡಿಯಾದಲ್ಲೂ ಕಾನೂನು ಇದಕ್ಕೆ ಸಮ್ಮತಿ ನೀಡಿದೆ. ನೀವು ಹಳೆಯ ಕಾಲದವರು. ನಿಮಗೆ ಇದೆಲ್ಲ ತಿಳಿಯುವುದಿಲ್ಲ. ಮದುವೆ ಮಾಡಿಕೊಂಡು, ಗಂಡ, ಅತ್ತೆ, ಮಾವ ಹೇಳಿದಂತೆ ಕೇಳಿಕೊಂಡಿರಲು ನನಗೆ ಸಾಧ್ಯವಿಲ್ಲ…..” ಎಂದು ನಿಷ್ಠೂರವಾಗಿ ಹೇಳಿದಳು ದೇವಿಕಾ.

“ನಮಗೆ ಖುಷಿಯಿದ್ದಷ್ಟು ದಿನ ಜೊತೆಗೆ ಇರ್ತೀವಿ. ನಂತರ ಮಿಸ್‌ ಅಂಡರ್‌ ಸ್ಟಾಂಡ್‌ ಗೆ ಬಂದರೆ ದೂರಾಗುತ್ತೇವೆ. ಅದೇ ಮದುವೆ ಮಾಡಿಕೊಂಡರೆ ಜೀವನ ಪರ್ಯಂತ ಹೊಂದಾಣಿಕೆ ಇಲ್ಲದಿದ್ದರೂ ಇಬ್ಬರೂ ಕಚ್ಚಾಡುತ್ತಾ ಜೊತೆಗೇ ಇರಬೇಕು. ಇದು ನನ್ನಿಂದ ಸಾಧ್ಯವೇ ಇಲ್ಲ,” ಎಂದಳು.

“ನೀನು ನಮ್ಮ ಮಗಳೇ ಅಲ್ಲ….. ಹೊರಟು ಹೋಗು. ನಮ್ಮ ಮಾನ ತೆಗೆಯಲು ಹುಟ್ಟಿದ್ದೀಯಾ…..” ಎಂದು ಜಗದೀಶ್‌ ಬೈದರು.

“ಅಮ್ಮ  ಬಾ…. ಬಾ…. ಅಂತ ಕಣ್ಣೀರು ಹಾಕಿದ್ದಕ್ಕೆ ಬಂದೆ. ಇಲ್ಲಾ ಅಂದರೆ ಇಲ್ಲಿಗೆ ಬರುತ್ತಲೇ ಇರಲಿಲ್ಲ. ನನಗೆ ಈ ದೇಶ ಇಷ್ಟವಿಲ್ಲ. ಇಲ್ಲಿ ವ್ಯವಸ್ಥೆ ಸರಿಯಾಗಿಲ್ಲ. ನಾನು ಇನ್ನೂ ಬರುವುದೇ ಇಲ್ಲ,” ಎಂದು ಕೂಗಾಡಿದಳು.

ಮರುದಿನವೇ ಬೆಂಗಳೂರಿಗೆ ಬಂದು ಫ್ರೆಂಡ್‌ ಗೆ ಹೇಳಿ ಸರ್ವೀಸ್‌ ಅಪಾರ್ಟ್‌ ಮೆಂಟ್‌ ನಲ್ಲಿ ಹದಿನೈದು ದಿನವಿದ್ದು, ಕಾಲೇಜ್‌ ನಲ್ಲಿ ಓದುವಾಗ ಇದ್ದ ಹಳೆಯ ಫ್ರೆಂಡ್ಸ್ ಗಳನ್ನೆಲ್ಲಾ ಭೇಟಿಯಾಗಿ, ಅವರುಗಳ ಜೊತೆ ಇಂಡಿಯಾದ ಕೆಲವು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದಳು. ಪಬ್ಬು, ಬಾರ್‌ ಎಂದು ಸುತ್ತಾಡಿಕೊಂಡು ರೆಸಾರ್ಟ್‌, ಪಾರ್ಟಿ ಎಂದೆಲ್ಲಾ ಮೋಜು ಮಾಡಿದಳು. ಒಮ್ಮೆಯೂ ಮನೆಗೆ ಫೋನ್‌ ಮಾಡಲಿಲ್ಲ. ಫೋನ್‌ ಮಾಡಿದರೆ ಮದುವೆ ಆಗು ಎಂದು ಕಣ್ಣೀರು ಹಾಕಿ ತಲೆ ಕೆಡಿಸುತ್ತಾರೆ ಎಂದು ವಾಪಸ್‌ ಅಮೆರಿಕಾಗೆ ಹೊರಟು ಹೋದಳು.

ಹಾಗೇ ಎರಡು ವರ್ಷ ಕಳೆಯಿತು. ದೇವಿಕಾ ಮನೆಗೆ ಎಲ್ಲೋ ಒಂದು ಎರಡು ಬಾರಿ ಫೋನ್‌ ಮಾಡಿದ್ದಳು. ತಂದೆ ಜಗದೀಶ್ ಮಾತನಾಡಲೇ ಇಲ್ಲ. ತಾಯಿ ಮಾತ್ರ ಒಮ್ಮೆ,“ಇನ್ನೂ ಅವನ ಜೊತೆಗೇ ಇದ್ದೀಯಾ….” ಎಂದು ಅದೇ ವಿಷಯ ಕೇಳಿದರು.

“ಹೌದು,” ಎಂದಳು.

“ಯಾವ ಜಾತಿಯಾದರೂ ಪರವಾಗಿಲ್ಲ, ಅವನನ್ನೇ ಮದುವೆಯಾಗಿಬಿಡು. ಮದುವೆಯಾಗದೆ ಹಾಗೇ ಜೊತೆಗಿರುವುದು ನಮ್ಮ ಸಂಪ್ರದಾಯವಲ್ಲ. ಎಲ್ಲೋ ಮದುವೆ ಆಗಿದ್ದೀಯಾ ಅಂತ ಮನಸ್ಸಿಗೆ ನೆಮ್ಮದಿ ತಂದುಕೊಂಡು ನಿರಾಳವಾಗಿ ಇರುತ್ತೇವೆ,” ಎಂದು ಪರಿಪರಿಯಾಗಿ ಕೇಳಿದರು.

“ಛೇ…. ಅದಕ್ಕೆ ನಿಮಗೆ ಫೋನ್‌ ಮಾಡಲು ಬೇಸರ. ನನ್ನ ಬಗ್ಗೆ ವಿಚಾರಿಸುವುದಿಲ್ಲ. ಬರೀ ಬುದ್ಧಿವಾದ ಹೇಳ್ತೀರಾ…. ನಿನ್ನ ಮಗಳು ಎಷ್ಟು ದೊಡ್ಡ ಹುದ್ದೆಯಲ್ಲಿ ಇದ್ದೀನಿ. ಎಷ್ಟು ಸಂಬಳ ಬರುತ್ತದೆ. ಆದರೆ ಅದರ ಬಗ್ಗೆ ನಿಮಗೆ ಹೆಮ್ಮೆಯೇ ಇಲ್ಲ…..” ಎನ್ನುತ್ತಾ ಫೋನ್‌ ಕಟ್‌ ಮಾಡಿದಳು.

ಜೀವನ್‌ ಮನೆಯಲ್ಲೂ ಇಂಡಿಯಾಗೆ ವಾಪಸ್‌ ಬಂದು ಮದುವೆಯಾಗು ಎಂದು ಬಲವಂತ ಮಾಡತೊಡಗಿದರು. ಅದಕ್ಕೆ ಸರಿಯಾಗಿ ಅವನಿಗೂ ವಿದೇಶದ ಜಾಬ್‌ ಕಾಂಟ್ರಾಕ್ಟ್ ಮುಗಿಯಿತು. ಬೇರೆ ಕೆಲಸಕ್ಕಾಗಿ ಎಲ್ಲೆಲ್ಲೋ ಪ್ರಯತ್ನಿಸಿದ. ಕೆಲಸ ಸಿಗಲಿಲ್ಲ. ಅವನಿಗೂ ಏಕೋ ವಿದೇಶ ಜೀವನ ಬೇಸರವಾಗತೊಡಗಿತು. ಊರಿನಲ್ಲಿ ಬೇಕಾದಷ್ಟು ಆಸ್ತಿ ಪಾಸ್ತಿ ಇರುವಾಗ ಇಲ್ಲಿ ಯಾಕೆ ಒದ್ದಾಡಬೇಕು ಎಂದು ಇಂಡಿಯಾಗೆ ವಾಪಸ್‌ ಹೋಗಲು ನಿರ್ಧರಿಸಿದ.

“ದೇವಿ…. ನನಗೆ ಕಾಂಟ್ರಾಕ್ಟ್ ಮುಗಿಯಿತು. ಬೇರೆ ಕೆಲಸ ಸಿಗುತ್ತಿಲ್ಲ. ಹುಡುಕಲೂ ಬೇಸರ. ನಾನು ಇಂಡಿಯಾಗೆ ವಾಪಸ್ ಹೋಗ್ತೀನಿ. ನಿನ್ನನ್ನು ಬಿಟ್ಟು ಇರಲು ನನಗೆ ಕಷ್ಟ. ಆದ್ದರಿಂದ ನಾವಿಬ್ಬರೂ ಮದುವೆ ಆಗೋಣ,” ಎಂದ.

“ನೋ… ನೋ… ನನಗೆ ಮದುವೆ ಆಗಲು ಇಷ್ಟವಿಲ್ಲ. ನಾನು ಸದ್ಯಕ್ಕೆ ಇಂಡಿಯಾಗೆ ಬರುವುದಿಲ್ಲ. ನೀನು ಹೋಗು ನನ್ನ ಅಭ್ಯಂತರವಿಲ್ಲ,” ಎಂದಳು.

“ನೀನು ಮದುವೆಯಾಗಲು ಒಪ್ಪಿದರೆ ನಿನಗೋಸ್ಕರ ಇಲ್ಲೇ ಇರಲು ಪ್ರಯತ್ನಿಸುವೆ,” ಎಂದು ಅವನು ಪರಿ ಪರಿಯಾಗಿ ಕೇಳಿಕೊಂಡ. ಅದಕ್ಕೆ ಒಪ್ಪದ ದೇವಿಕಾ, “ನೋ…. ಖಂಡಿತಾ ನನಗೆ ಮದುವೆಯಾಗಲು ಇಷ್ಟವಿಲ್ಲ ಜೀವನ್‌. ನೀನು ಬಲವಂತ ಮಾಡಬೇಡ,” ಎಂದಳು ಖಡಾಖಂಡಿತವಾಗಿ.

“ಮನೆಯಲ್ಲಿ ನನಗೆ ಹುಡುಗಿಯನ್ನು ನೋಡಿದ್ದಾರೆ. ನಾನು ಇಂಡಿಯಾಗೆ ಹೋದ ತಕ್ಷಣ ಮದುವೆ ಮಾಡುತ್ತಾರೆ. ನೀನೇ ಬಂದು ಬಿಡು ಪ್ಲೀಸ್‌. ಬೇಕು ಎನಿಸಿದರೆ ಮದುವೆಯಾಗಿ ವಾಪಸ್‌ ಇಲ್ಲಿಗೆ ಬರೋಣ,” ಎಂದು ಗೋಗರೆದ.

“ನೀನು ಮದುವೆ ಮಾಡಿಕೊಂಡು ಹೊಸ ಬದುಕು ಶುರು ಮಾಡು. ನಾನು ಮತ್ತೆ ನಿನ್ನ ಜೀವನದಲ್ಲಿ ಬರುವುದಿಲ್ಲ. ನಿನ್ನ ಮುಂದಿನ ಬದುಕಿಗೆ ನನ್ನಿಂದ ಯಾವುದೇ ತರಹದ ತೊಂದರೆ ಆಗುವುದಿಲ್ಲ. ನೀನು ಇಂಡಿಯಾಗೇ ಹೋದ ಮೇಲೆ ನಿನ್ನ ಕಾಂಟ್ಯಾಕ್ಟ್ ಮಾಡುವುದಿಲ್ಲ,” ಎಂದು ಹೇಳಿದಳು.

“ನೋಡು… ನನ್ನ ಇಂಡಿಯಾದ ನಂಬರ್‌ ಕೊಟ್ಟಿರುತ್ತೀನಿ. ನೀನೇನಾದರೂ ಮನಸ್ಸು ಬದಲಿಸಿದರೆ, ನನ್ನನ್ನು ಮರೆಯಲಾಗದಿದ್ದರೆ ಕಾಲ್ ಮಾಡು. ಸ್ವಲ್ಪ ದಿನ ಮದುವೆ ಮುಂದೂಡಿ ನಿನಗಾಗಿ ಕಾಯುತ್ತಿರುವೆ,” ಎಂದು ಹೇಳಿ ಅವನು ವಾಪಸ್‌ ಇಂಡಿಯಾಗೆ ಬಂದ.

ದೇವಿಕಾ ಅಮೆರಿಕಾದಲ್ಲಿ ಒಂಟಿಯಾಗಿಯೇ ಇದ್ದಳು. ಇನ್ಯಾರ ಜೊತೆಗೆ ಇರಲು ಮನಸ್ಸು ಬರಲಿಲ್ಲ. ಅವನು ಕೊಟ್ಟ ನಂಬರ್‌ ನ್ನು ಎಲ್ಲೋ ಬಿಸಾಡಿದಳು, `ಸಿಲ್ಲಿ …. ಈ ಜೀವನ್‌. ಅವನನ್ನು ಮರೆಯಲು ಆಗದಿದ್ದರೆ ಫೋನ್‌ ಮಾಡು ಎನ್ನುತ್ತಾನೆ. ಒಳ್ಳೆ ಪಾರ್ಟ್ ನರ್‌ ಆಗಿದ್ದ. ಹಾಗಂತ ಅವನಿಗೆ ಸಿಟ್ಟು, ಹಠ ಎಲ್ಲವೂ ನನ್ನಂತೆ ಇತ್ತು. ತಮ್ಮಿಬ್ಬರ ನಡುವೆ ಜಗಳ, ವಾಗ್ವಾದ ಎಲ್ಲವೂ ಇತ್ತಲ್ವಾ….? ಮದುವೆಯಾಗಿದ್ದರೆ ತಾನೇ ಮೇಲು ಎನ್ನುವ ಅಹಂ ಅವನಲ್ಲೂ ಇರುತ್ತಿತ್ತು. ಗಂಡ ಎನ್ನುವ ಪಟ್ಟವೇ ಹಾಗೆ. ಎನಿವೇ…. ಬೇರೆಯವಳನ್ನು ಮದುವೆಯಾಗಿ ಸುಖವಾಗಿ ಇರಲಿ,’ ಎಂದು ಮನದಲ್ಲೇ ಯೋಚಿಸಿದಳು.

ಸ್ವಲ್ಪ ದಿನ ಯಾರು ಬೇಡ ಒಂಟಿಯಾಗಿಯೇ ಇರೋಣ ಎಂದುಕೊಂಡು ಹಾಗೇ ಮೂರು ತಿಂಗಳು ಕಳೆಯಿತು. ಒಂದು ದಿನ ತನ್ನ ದೇಹದಲ್ಲಿ ಬದಲಾವಣೆ ಆದ ಹಾಗೆ ಅನ್ನಿಸಿತು. ಡಾಕ್ಟರ್‌ ಬಳಿ ಹೋದಾಗ ಪ್ರೆಗ್ನೆಂಟ್‌ ಎಂದು ತಿಳಿಯಿತು.

`ಛೇ….! ಇದೇನಾಯಿತು…? ಎಷ್ಟು ಎಚ್ಚರಿಕೆಯಿಂದ ಇದ್ದೆ, ಏಕೆ ಹೀಗಾಯಿತು….? ಜೀವನ್‌ ಇಂಡಿಯಾಗೆ ಹೋಗುವ ಮೊದಲು ಒಂದು ವಾರ ಇಬ್ಬರೂ ಎಲ್ಲಾ ಕಡೆ ಸುತ್ತಾಡಿ, ಎಂಜಾಯ್‌ ಮಾಡಿದ್ದರು. ಬಹುಶಃ ಆಗ ಏನೋ ಎಡವಟ್ಟಾಗಿದೆ. ನಾಳೆ ಡಾಕ್ಟರ್ ಬಳಿ ಹೋಗಿ ಮೊದಲು ತೆಗೆಸಬೇಕು,’ ಎಂದು ಯೋಚಿಸಿದಳು.

ಡಾಕ್ಟರ್‌ ಅಬಾರ್ಷನ್‌ ಮಾಡಿಸಿದರೆ ನಿಮ್ಮ ಆರೋಗ್ಯಕ್ಕೆ ತುಂಬಾ ಕಷ್ಟ, ಮಾಡಿಸುವುದು ಬೇಡ ಎಂದರು. ಏನು ಮಾಡಬೇಕೆಂದು ತಿಳಿಯದೆ, “ಇಲ್ಲಾ ಡಾಕ್ಟರ್‌…. ನಾವು ಲಿವಿಂಗ್‌ ಟು ಗೆದರ್‌ ಆಗಿ ಇದ್ದೆ. ಬೈ ಮಿಸ್ಟೇಕ್‌ ಆಗಿದೆ….” ಎಂದಳು.

“ದೇವಿಕಾ, ಈಗ ಇದನ್ನು ರಿಮೂವ್ ‌ಮಾಡಿದರೆ, ನಿಮ್ಮ ಜೀವಕ್ಕೆ ಅಪಾಯ. ನಿಮ್ಮ ಪಾರ್ಟ್‌ ನರ್‌ ಜೊತೆ ಹೇಳಿ ಮ್ಯಾರೇಜ್ ಆಗಿಬಿಡಿ. ಇಲ್ಲಾಂದ್ರೆ ಸಿಂಗಲ್ ಪೇರೆಂಟ್‌ ಆಗಿ ಮಗುವನ್ನು ಬರಮಾಡಿಕೊಳ್ಳಿ,” ಎಂದರು ಡಾಕ್ಟರ್‌.

“ಯೋಚಿಸುವೆ….” ಎಂದು ಹೇಳಿ ವಾಪಸ್‌ಬಂದಳು.

ಈಗ ಬೇರೆ ದಾರಿಯಿಲ್ಲ ಎಂದು ನೆನೆಸಿ ಜೀವನ್‌ ಗೆ ಇರುವ ವಿಷಯ ಹೇಳಬೇಕು ಎಂದು ಅವನನ್ನು ಕಾಂಟ್ಯಾಕ್ಟ್ ಮಾಡಲು ಪ್ರಯತ್ನಿಸಿದಳು. ಅವನು ಕೊಟ್ಟ ನಂಬರ್‌ ನ್ನು ಎಲ್ಲೋ ಬಿಸಾಡಿದ್ದಳು. ಅವನ ಗೆಳೆಯನನ್ನು ಭೇಟಿಯಾಗಬೇಕು ಎನ್ನುತ್ತಾ ಹಾಗೇ ತಿಂಗಳು ಕಳೆದೇ ಹೋಯಿತು. ನಂತರ ಕಷ್ಟಪಟ್ಟು ಅವನ ಗೆಳೆಯನನ್ನು ಹುಡುಕಿದಳು. ಅವನಿಗೆ ಇವರ ವಿಷಯ ತಿಳಿದಿತ್ತು.

“ಹಾಯ್‌ ದೇವಿಕಾ ಹೇಗಿದ್ದೀರಾ…..? ಈಗ ಯಾರ ಜೊತೆ ಇದ್ದೀರಾ…..?” ಎಂದು ಕೇಳಿದ ಮಧುಸೂಧನ್‌.

“ಒಬ್ಬಳೇ ಇದ್ದೀನೀ ಮಧು, ಏಕೋ ಜೀವನ್‌ ಇಂಡಿಯಾಗೆ ಹೋದ ಮೇಲೆ ಯಾರ ಫ್ರೆಂಡ್‌ ಶಿಪ್‌ ಬೇಡ ಎನಿಸಿತು,” ಎಂದು ಹೇಳಿ ಜೀವನ್‌ ಬಗ್ಗೆ ಕೇಳಿದಳು.

“ಜೀವನ್‌, ಇಲ್ಲಿಂದ ಹೋದ ಎರಡು ತಿಂಗಳಲ್ಲೇ ಮದುವೆಯಾದ,” ಎಂದು ವಾಟ್ಸ್ ಆ್ಯಪ್‌ ನಲ್ಲಿ ಕಳುಹಿಸಿದ ಇನ್ವಿಟೇಶನ್ ತೋರಿಸಿದ.

pechida-hal-story2

“ಓ…. ಹೌದಾ….” ಎಂದು ವಾಪಸ್‌ ಬಂದು, `ತಾನಿನ್ನೂ ಜೀವನ್‌ ಬದುಕಿನಲ್ಲಿ ಪ್ರವೇಶಿಸಬಾರದು. ಒಂಟಿಯಾಗಿಯೇ ಮಗುವನ್ನು ಸಾಕಬೇಕು’ ಎಂದು ನಿರ್ಧರಿಸಿದಳು ದೇವಿಕಾ.

ವಿಧಿ ಇಲ್ಲದೆ ತಾಯಿ ತಂದೆಗೆ ವಿಷಯ ತಿಳಿಸಿದಳು, “ನೀನು ನಮ್ಮ ಮಗಳೇ ಅಲ್ಲ. ನಮಗೆ ಫೋನ್‌ ಮಾಡಬೇಡ,” ಎಂದು ಕೂಗಾಡಿದರು ತಂದೆ ಜಗದೀಶ್‌.

“ಅವನು ಯಾರಾದರೂ ಸರಿ, ಅವನನ್ನೇ ಮದುವೆ ಮಾಡಿಕೋ,” ಎಂದರು ಪಾರ್ವತಮ್ಮ.

“ಇಲ್ಲ ಅಮ್ಮಾ, ಈ ವಿಷಯ ತಿಳಿದಾಗ ನಾನು ಹಾಗೇ ಯೋಚಿಸಿದೆ. ಆದರೆ ನಾನು ಅವನನ್ನು ಮದುವೆಯಾಗಲು ನಿರಾಕರಿಸಿದ ಕಾರಣ ಮನೆಯವರ ಬಲವಂತಕ್ಕೆ ಬೇರೆ ಮದುವೆಯಾಗಿದ್ದಾನೆ. ಅಲ್ಲದೆ, ಅವನು ಈಗ ಅಮೆರಿಕಾದಲ್ಲಿ ಇಲ್ಲ. ಅವನಿಗೆ ಈ ವಿಷಯ ತಿಳಿದಿಲ್ಲ,” ಎಂದಳು ದೇವಿಕಾ.

“ನಿನ್ನ ಜೊತೆ ಇದ್ದು ಹೇಗೆ ಇನ್ನೊಂದು ಹುಡುಗಿಯನ್ನು ಮದುವೆಯಾದ? ಈಗ ಫೋನ್‌ ಮಾಡಿ ಹೀಗಾಗಿದೆ ಎಂದು ಹೇಳು, ನಿನ್ನನ್ನು ಮದುವೆ ಮಾಡಿಕೊಳ್ಳಲಿ,” ಎಂದರು ಪಾರ್ವತಮ್ಮ ನೋವಿನಿಂದ.

“ಸುಮ್ಮನಿರಮ್ಮಾ….. ನಾನೇ ಅವನಿಗೆ, `ಇನ್ನು ನಿನ್ನ ಜೀವನದಲ್ಲಿ ಬರುವುದಿಲ್ಲ. ಮದುವೆ ಮಾಡಿಕೋ,’ ಎಂದು ಮಾತು ಕೊಟ್ಟಿರುವೆ. ಈಗ ಹಳ್ಳಿ ಗುಗ್ಗು ತರಹ ಮತ್ತೆ ಮದುವೆಯಾಗು ಎಂದು ಕೇಳಲಾ? ಹೋಗಮ್ಮಾ….. ಈಗ ನಾನು ಮಗುವನ್ನು ಹೆರಲು ನಿರ್ಧರಿಸಿದ್ದೇನೆ. ಸಿಂಗಲ್ ಪೇರೆಂಟ್‌ ಆಗಿಯೇ ಮಗುವನ್ನು ಬೆಳೆಸುತ್ತೇನೆ. ನಿನಗೆ ಸಾಧ್ಯವಾದರೆ ಇಲ್ಲಿಗೆ ಬಾ….. ಇಲ್ಲಾಂದ್ರೆ ನಾನು ಸಹಾಯಕರನ್ನು ಇಟ್ಟುಕೊಂಡು ಒಂಟಿಯಾಗಿಯೇ ಇರುವೆ,” ಎಂದಳು.

“ಯಾವ ಮುಖ ಇಟ್ಟುಕೊಂಡು ಬಂಧು ಬಳಗದವರ ಮುಂದೆ ಮದುವೆ ಇಲ್ಲದೆ, ಮಗಳು ಬಸುರಿ ಎಂದು ಹೇಳಲಿ? ನೀನು ತುಂಬಾ ಬುದ್ಧಿವಂತೆ ಎಂದು ಎಲ್ಲರ ಮುಂದೆ ಹೊಗಳಿ ಕೊಂಡಾಡಿದೆ. ನೀನು ನೋಡಿದರೆ ನಮ್ಮ ಮಾನವನ್ನು ಹರಾಜು ಹಾಕಿಬಿಟ್ಟೆ. ಸಮಾಜದಲ್ಲಿ ಮಾನವನಾಗಿ ಬದುಕುವುದು ತಿಳಿಯದ ನಿನಗೆ ಎಷ್ಟು ವಿದ್ಯೆ ಬುದ್ಧಿ ಇದ್ದರೇನು ಪ್ರಯೋಜನ,” ಎಂದರು ತಾಯಿ.

“ಅಮ್ಮಾ….. ಪ್ಲೀಸ್‌ ಸುಮ್ಮನಿರು. ಕಾಲ ಬದಲಾಗಿದೆ ನಿನಗೆ ಅರ್ಥ ಆಗುವುದಿಲ್ಲ,” ಎಂದು ಫೋನ್‌ ಇಟ್ಟಳು.

ಸಹಾಯಕ್ಕೆ ಇಬ್ಬರು ನಾನಿಯನ್ನು ಇಟ್ಟುಕೊಂಡು ಮಗುವನ್ನು ಹೆತ್ತಳು. ಮನಸ್ಸು ತಡೆಯದೆ ಪಾರ್ವತಮ್ಮ ಮಾತ್ರ ಬಂದು ಆರು ತಿಂಗಳು ಬಂದು ಮಗಳ ಜೊತೆಗಿದ್ದರು. ಊರಿನಲ್ಲಿ ದೇವಿಕಾ ಅಲ್ಲೇ ಮದುವೆಯಾಗಿದ್ದಾಳೆ ಎಂದು ಸುಳ್ಳು ಹೇಳಿದರು.

“ಅರೇ…. ಪಾರ್ವತಮ್ಮ ನಮಗೆ ಹೇಳಲೇ ಇಲ್ವಲ್ಲಾ….” ಎಂದು ಎಲ್ಲರೂ ಕೇಳತೊಡಗಿದರು.

“ನಮಗೇ ಗೊತ್ತಿರಲಿಲ್ಲ. ಫೋನ್‌ ಮಾಡಿ ಬರಲು ಹೇಳಿದ್ದಳು. ನಾವು ಕೋಪ ಮಾಡಿಕೊಂಡು ಹೋಗಿರಲಿಲ್ಲ. ಯಾರಿಗೂ ಹೇಳಲಿಲ್ಲ,” ಏಕೆಂದರೆ ಮದುವೆಯಾಗದೆ ಮಗುವಾ ಎಂದು ಊರೆಲ್ಲಾ ಜನ ಆಡಿಕೊಳ್ಳುತ್ತಾರೆ, ಎಂದು ಸುಳ್ಳು ಹೇಳಿ ಮಾನ ಮುಚ್ಚಿಕೊಂಡರು.

ತನಗೆ ಪರಿಚಿತರಿರುವವರು ಇಂಡಿಯಾಗೆ ಬಂದು ಮತ್ತೆ ವಾಪಸ್‌ ಅಮೆರಿಕಾಗೆ ಬರುವಾಗ ಅವರ ಸಂಗಡ ಪಾರ್ವತಮ್ಮನನ್ನು ಕರೆದುಕೊಂಡು ಬರಲು ಅರೇಂಜ್‌ ಮಾಡಿದ್ದಳು ದೇವಿಕಾ.

ಜಗದೀಶ್‌ ಗೆ ಇಷ್ಟವಿಲ್ಲದಿದ್ದರೂ ಹೆಂಡತಿಯನ್ನು ಕಳುಹಿಸಿಕೊಟ್ಟರು. ಕೇಳಿದವರ ಬಳಿ ಸುಳ್ಳು ಹೇಳಲು ಮನಸ್ಸು ಬಾರದೇ, ನಿಜ ಹೇಳಲೂ ಆಗದೇ ಮನದಲ್ಲೇ ಕೊರಗಿದರು. ಬಂಧು ಬಳಗ, ಸ್ನೇಹಿತೆಯರ ಮನೆಗೂ ಹೋಗದೆ ಒಂಟಿಯಾಗಿ ಮನೆಯಲ್ಲಿ ಇರತೊಡಗಿದರು.

`ದೇವರೇ, ನಮಗೆ ಮಕ್ಕಳಾಗದಿದ್ದರೂ ಚಿಂತೆ ಇರಲಿಲ್ಲ. ಇಂಥ ಮಗಳನ್ನು ಯಾಕೆ ಕೊಟ್ಟೆ,’ ಎಂದು ದೇವರ ಮುಂದೆ ಕುಳಿತು ಕಣ್ಣೀರು ಹಾಕುತ್ತಿದ್ದರು. ಆರು ತಿಂಗಳು ಪಾರ್ವತಮ್ಮ ಮಗಳು ಮೊಮ್ಮಗುವಿನ ಜೊತೆ ಕಳೆದರು. ಗಂಡ ಒಂಟಿಯಾಗಿ ಇರುತ್ತಾರೆಂದು ವಾಪಸ್‌ ಇಂಡಿಯಾಗೆ ಬಂದರು. ಅಮೆರಿಕಾದಲ್ಲೇ ಇದ್ದರೂ ಪಾರ್ವತಮ್ಮನಿಗೆ ಗಂಡನದೇ ಯೋಚನೆಯಾಗಿತ್ತು. ಆದರೂ ಮಗಳಿಗೆ ಬಾಣಂತನ ಮಾಡಲೇಬೇಕು, ಇನ್ನೂ ಅಲ್ಲೇ ಇದ್ದರೆ ಇಲ್ಲಿ ಇವರೇನು ಏನಾದರೂ ಹೆಚ್ಚು ಕಡಿಮೆ ಮಾಡಿಕೊಂಡರೆ ಎಂಬ ಭಯ ಅವರಿಗಿತ್ತು. ದೇವಿಕಾ ಒಮ್ಮೆ ಫೋನ್‌ ಮಾಡಿ, “ಅಮ್ಮಾ…. ನೀನು ಅಪ್ಪ ಇಲ್ಲಿಗೇ ಬಂದು ಬಿಡಿ. ನಿಮಗೆ ಊರಿನಲ್ಲಿ ಇನ್ಯಾರು ಇದ್ದಾರೆ,” ಎಂದು ಕರೆದಳು.

“ಬೇಡಮ್ಮಾ ತಾಯಿ…. ಕಂಡು ಕೇಳದ ಊರಿನಲ್ಲಿ ಹೇಗಿರುವುದು? ನಮ್ಮ ದೇಶ, ನಮ್ಮ ಊರು ನಮಗೆ ಹೆಚ್ಚು. ನಮ್ಮ ಹಿರಿಯರು ಬಾಳಿ ಬದುಕಿದ ಊರು ಇದು. ನಾವು ಇಲ್ಲಿಯೇ ಇರುತ್ತೇವೆ,” ಎಂದರು ಪಾರ್ವತಮ್ಮ.

ಇತ್ತ ದೇವಿಕಾಗೆ ಯಾರ ಜೊತೆ ಇರಲು ಮನಸ್ಸು ಬರಲಿಲ್ಲ. ಮಗುವನ್ನು ನೋಡುತ್ತಾ, ಮುದ್ದು ಮಾಡುತ್ತಾ ಇದ್ದ ಅವಳಿಗೆ ಯಾರ ಸಹವಾಸ ಬೇಕೆನಿಸಲಿಲ್ಲ. ಮಗುವಿನ ಜೊತೆ ಒಂಟಿಯಾಗಿಯೇ ಇದ್ದಳು. ಮಗುವಿನ ಆಟ ಪಾಠ ನೋಡುತ್ತಾ ಖುಷಿಯಾಗಿದ್ದಳು. ಅವಳು ಪ್ರೆಗ್ನೆಂಟ್‌ ಆಗಿದ್ದಾಗ ಒಬ್ಬ ಸಹಾಯಕಳನ್ನು ಇಟ್ಟುಕೊಂಡಿದ್ದಳು. ಅವಳು ದೇವಿಕಾಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ಈಗಲೂ ಅವಳನ್ನೇ ಜೊತೆಗೆ ಇಟ್ಟುಕೊಂಡಿದ್ದಳು. ದೇವಿಕಾ ಕೆಲಸಕ್ಕೆ ಹೋದಾಗ ಅವಳೇ ಮಗುವನ್ನು ನೋಡಿಕೊಳ್ಳುತ್ತಿದ್ದಳು.

ತಿಂಗಳಿಗೊಮ್ಮೆ ಅಪ್ಪ ಅಮ್ಮನ ಬಳಿ ಎರಡು ಮಾತನಾಡಿ ಆರೋಗ್ಯ ವಿಚಾರಿಸುತ್ತಿದ್ದಳು. ಮಗಳಿಗೆ ಎರಡು ವರ್ಷವಾದಾಗ ಒಂದು ಹದಿನೈದು ದಿನದ ಮಟ್ಟಿಗೆ ಊರಿಗೆ ಬಂದಿದ್ದಳು. ಜಗದೀಶ್‌ ಮಗಳ ಜೊತೆ ಸರಿಯಾಗಿ ಮಾತನಾಡಲೇ ಇಲ್ಲ, ಮೊಮ್ಮಗಳನ್ನು ಮಾತ್ರ ಮುದ್ದು ಮಾಡಿದರು. ಅಪ್ಪ ತನ್ನಿಂದಲೇ ಹೀಗಾಗಿದ್ದಾರೆ. ಅವರು ತುಂಬಾ ಮೌನಿಯಾಗಿದ್ದಾರೆ, ಎಲ್ಲರ ಜೊತೆಗೂ ಮಾತನಾಡುವುದನ್ನು ಬಿಟ್ಟಿದ್ದಾರೆ. ಮೂರು ಹೊತ್ತು ದೇವರ ಮನೆ, ಇಲ್ಲಾ ಅಂದರೆ ಆಧ್ಯಾತ್ಮದ ಪುಸ್ತಕ ಓದುವುದು ಇವರ ಹವ್ಯಾಸವಾಗಿತ್ತು. ಮೊದಲೆಲ್ಲಾ ಎಷ್ಟು ಲವಲವಿಕೆಯಿಂದ ಇದ್ದರು, ಈಗ ಹೀಗಾಗಿರುವುದು ತನ್ನಿಂದಲೇ ಎಂದು ದೇವಿಕಾಗೆ ಅರಿವಾಯಿತು.

ಮತ್ತೊಮ್ಮೆ ಹೆತ್ತವರನ್ನು ತನ್ನ ಜೊತೆ ಬರಲು ಕರೆದಳು. ಅವರು ಬರುವುದಿಲ್ಲ ಎಂದಾಗ ವಾಪಸ್‌ ಅಮೆರಿಕಾಗೆ ಹೋದಳು. ಮಗಳಿಗೆ ನಾಲ್ಕು ವರ್ಷವಾಯಿತು. ದೇವಿಕಾಳ ಯೋಚನೆಯಲ್ಲೇ ಕೊರಗಿ ಕೊರಗಿ ಅಪ್ಪ ಹೋಗಿಬಿಟ್ಟರೆಂದು ಇಂಡಿಯಾಗೆ ಬಂದಳು ದೇವಿಕಾ. ತಾಯಿ ಒಂಟಿಯಾಗುತ್ತಾರೆಂದು ಇಂಡಿಯಾದಲ್ಲೇ ಇರಲು ತೀರ್ಮಾನಿಸಿದಳು.

“ಅಮ್ಮಾ…. ನಾನು ಇನ್ನೂ ನಿನಗೆ ಜೊತೆಯಾಗಿ ಇಂಡಿಯಾದಲ್ಲೇ ಇರುತ್ತೀನಿ. ಶಿವಮೊಗ್ಗದಲ್ಲಿ ಇರುವುದು ಬೇಡ. ಬೆಂಗಳೂರಿನಲ್ಲಿ ಮನೆ ಮಾಡುವೆ…. ಅಲ್ಲಿ ನನಗೆ ಒಳ್ಳೆಯ ಕೆಲಸ ಸಿಗುತ್ತದೆ,” ಎಂದಳು.

ದೇವಿಕಾಳಿಂದ ಎಲ್ಲರೂ ಆಡಿಕೊಳ್ಳುತ್ತಾರೆ ಎನ್ನುವ ಕಾರಣಕ್ಕೆ, ಬಂಧು ಬಳಗದವರ ಮನೆಗೆ ಹೋಗುವುದನ್ನೇ ನಿಲ್ಲಿಸಿದ್ದರು ಜಗದೀಶ್‌ ಮತ್ತು ಪಾರ್ವತಮ್ಮ. ಈಗ ಪಾರ್ವತಮ್ಮನವರಿಗೆ ಇಲ್ಲಿ ಒಂಟಿಯಾಗಿ ಇರುವುದು ಕಷ್ಟ ಎಂದು ಅವರಿಗೆ ತಿಳಿದಿತ್ತು. ಹೆಚ್ಚು ಹಠ ಮಾಡದೆ, ಮಗಳ ಜೊತೆಗೆ ಬೆಂಗಳೂರಿಗೆ ಹೋದರು. ಯಾವಾಗಲೂ ತಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ದೇವಮ್ಮನನ್ನು ಜೊತೆಗೆ ಕರೆದುಕೊಂಡು ಬಂದರು.

ದೇವಿಕಾ ಹೇಳಿದಂತೆ ಅವಳಿಗೆ ಬೆಂಗಳೂರಿನಲ್ಲಿ ಒಳ್ಳೆಯ ಕೆಲಸ ಸಿಕ್ಕಿತು. ಪಾರ್ವತಮ್ಮ ಮಾತ್ರ ಅಕ್ಕಪಕ್ಕದವರಲ್ಲಿ ಅಳಿಯ ವಿದೇಶದಲ್ಲಿ ಇರುವರೆಂದು ಸುಳ್ಳು ಹೇಳಿ ಮರ್ಯಾದೆ ಕಾಪಾಡಿಕೊಂಡರು. ಆದರೆ ದೇವಿಕಾಗೆ ಸುಳ್ಳು ಹೇಳಲು ಮನಸ್ಸು ಬರಲಿಲ್ಲ. ಕೇಳಿದವರಿಗೆ ತಾನು ಮದುವೆಯಾಗಿಲ್ಲ. ಸಿಂಗಲ್ ಪೇರೆಂಟ್‌ ಎಂದು ಹೇಳುತ್ತಿದ್ದಳು. ಹೋದಲ್ಲಿ ಬಂದಲ್ಲಿ ಮಗುವಿನ ತಂದೆ ಎಲ್ಲಿ ಎಂದು ಕೇಳುತ್ತಿದ್ದರು. ತಾನು ಸಿಂಗಲ್ ಪೇರೆಂಟ್‌ ಅಂದರೆ ವಿಚಿತ್ರವಾಗಿ ಬೆಂಗಳೂರಿನಲ್ಲಿ ತುಂಬಾ ನೆಂಟರು, ಪರಿಚಿತಿಯವರು ಇದ್ದರೂ, ಇವಳಿಗೆ ಯಾರ ಮನೆಗಳಿಗೂ ಹೋಗಲು ಬೇಸರವಾಗುತ್ತಿತ್ತು.

ಮಗಳನ್ನು ಸ್ಕೂಲಿಗೆ ಸೇರಿಸುವಾಗಲೂ ತಂದೆಯ ಹೆಸರು ಕೇಳಿದರು. ಸಿಂಗಲ್ ಪೇರೆಂಟ್‌ ಎಂದು ತನ್ನ ಹೆಸರನ್ನೇ ಕೊಟ್ಟಳು. ತಂದೆಯ ಹೆಸರು ಹೇಳಿ ಮೇಡಂ ಎಂದಾಗ, ಪ್ರಿನ್ಸಿಪಾಲರ ರೂಮಿಗೆ ಹೋಗಿ, “ನಾನು ಮದುವೆ ಆಗಿಲ್ಲ. ಮಗಳಿಗೆ ಅಪ್ಪ ಅಮ್ಮ ಎರಡೂ ನಾನೇ. ನನ್ನ ಹೆಸರನ್ನು ಬರೆಯಲು ಹೇಳಿ, ತಲೆ ಹರಟೆ ಮಾಡುತ್ತಾರೆ ನಿಮ್ಮ ಸಿಬ್ಬಂದಿ. ಅವರಿಗೆ ಹೇಳಿದಷ್ಟು ಬರೆಯಲು ಹೇಳಿ. ಇಲ್ಲಾಂದ್ರೆ ನಾನು ಬೇರೆ ಸ್ಕೂಲ್ ‌ಗೆ ಸೇರಿಸುತ್ತೇನೆ,” ಎಂದಳು.

ಸ್ಕೂಲ್ ‌ಗೆ ಹೆಚ್ಚು ಡೊನೇಶನ್‌ ಕೊಡಲು ದೇವಿಕಾ ಒಪ್ಪಿದ್ದು ಅಲ್ಲದೆ, ಮಗುವಿನ ಹುಟ್ಟಿದ ಸ್ಥಳ ಅಮೆರಿಕಾ ಎಂಬ ಕಾರಣಕ್ಕೆ ಪ್ರಿನ್ಸಿಪಾಲ್‌, “ನಾನು ಹೇಳುವೆ, ನೀವು ಡಿಟೇಲ್ಸ್ ಕೊಟ್ಟು ಹೋಗಿ,” ಎಂದು ಗೌರವ ಸೂಚಿಸಿದರು.

ಸ್ಕೂಲ್ ‌ಗೆ ಸೇರಿದ ಮಗುವಿಗೂ ಸಹ, `ನಿನಗೆ ಅಪ್ಪಾ ಇಲ್ವಾ….? ನಿನ್ನ ಅಪ್ಪನ ಹೆಸರು ಏನು?’ ಎಂದು ಬೇರೆ ಮಕ್ಕಳು ಕೇಳುತ್ತಿದ್ದರು.

ಮಗಳು ಮನೆಗೆ ಬಂದು, “ನನ್ನ ಅಪ್ಪ ಯಾರು…? ನನಗೆ ಯಾಕೆ ಅಪ್ಪ ಇಲ್ಲ…. ಎಲ್ಲರಿಗೂ ಅಪ್ಪ ಇದ್ದಾರೆ ನನಗೆ ಯಾಕೆ ಇಲ್ಲ,” ಎಂದು ಕೇಳಿದಳು.

ದೇವಿಕಾ ಕೋಪದಿಂದ, “ಅಪ್ಪ…. ಅಪ್ಪ… ಅಪ್ಪ…. ಎಲ್ಲಿ ಹೋದರೂ ಅಪ್ಪನ ಹೆಸರು ಮೊದಲು ಕೇಳುತ್ತಾರೆ. ಅದಕ್ಕೆ ನನಗೆ ಈ ಇಂಡಿಯಾ ಇಷ್ಟವಿಲ್ಲ…..” ಎಂದು ಕೂಗಾಡಿದಳು.

“ಸರಿ ಮಮ್ಮಿ….. ನನಗೆ ಅವರನ್ನು ತೋರಿಸಬೇಡಿ, ಆದರೆ ಹೆಸರು ಹೇಳಿ ಸಾಕು. ಎಲ್ಲರೂ ತಮ್ಮ ಹೆಸರಿನ ಮುಂದೆ ಅಪ್ಪನ ಹೆಸರು ಸೇರಿಸಿದ್ದಾರೆ. ನನ್ನ ಹೆಸರು ಮಾತ್ರ ಸ್ವೀಟಿ ಅಷ್ಟೇನಾ,” ಎಂದು ಕೇಳಿದಳು.

ಮಗಳು ಅಪ್ಪನ ಹೆಸರೇನು ಎಂದು ಪದೇ ಪದೇ ಕೇಳಿದಾಗ, ದೇವಿಕಾಳಿಗೆ ತಾನು ಮಾಡಿದ ತಪ್ಪಿನ ಅರಿಲಯಿತು. ನಿಧಾನಕ್ಕೆ ಅಕ್ಕಪಕ್ಕದ ಜನ ಎರಡು ವರ್ಷವಾಯಿತು ನಿಮ್ಮ ಅಳಿಯ ಒಂದು ಸಲ ಬರಲೇ ಇಲ್ಲ ಎಂದು ಕೇಳಲು ಆರಂಭಿಸಿದರು. ಜೊತೆಗೆ ಗುಸು ಗುಸು ಮಾತನಾಡುತ್ತಿದ್ದರು. ಇದರಿಂದ ಪಾರ್ವತಮ್ಮನವರಿಗೆ ಅವಮಾನವಾಗಿ ಇಲ್ಲೂ ಮನೆಯಿಂದ ಹೊರಗೆ ಹೋಗದೆ ಒಳಗೇ ಇರತೊಡಗಿ, ಮನದಲ್ಲೇ ಕೊರಗತೊಡಗಿದರು.

“ನೋಡು ನಿನ್ನ ಕೆಟ್ಟ ನಿರ್ಧಾರದಿಂದ ಎಷ್ಟೊಂದು ಅವಾಂತರಗಳು. ನಮ್ಮ ಸುತ್ತಮುತ್ತಲಿನ ಸಮಾಜ ಇರುವಂತೆ ನಾವು ಇರಬೇಕು. ಬೇರೇನೋ ಮಾಡ್ತೀವಿ ಅಂತ ಹೋದರೆ ಸಾಕಷ್ಟು ಅವಮಾನ ಪಡಬೇಕು. ನಿನ್ನ ಹೆತ್ತ ತಪ್ಪಿಗೆ ನಿಮ್ಮಪ್ಪ ಕೊರಗಿ ಕೊರಗಿ ಸತ್ತರು. ನೀನೇ ಬುದ್ಧಿವಂತಳು ಎಂದು ಹೆತ್ತವರಿಗೆ ಎಷ್ಟು ನೋವು ಕೊಟ್ಟೆ. ಅವನನ್ನು ಕಾಂಟ್ಯಾಕ್ಟ್ ಮಾಡಿ ನಿಜ ವಿಷಯ ಹೇಳಿ ಮಗುವಿಗೆ ಅಪ್ಪನನ್ನು ತೋರಿಸು,” ಎಂದು ಪಾರ್ವತಮ್ಮ ಮಗಳಿಗೆ ತಿಳಿ ಹೇಳಿದರು.

“ನೋ…. ನೋ… ಅದು ಸಾಧ್ಯವಿಲ್ಲ. ಅವನ ಬದುಕನ್ನು ಹಾಳು ಮಾಡುವುದಿಲ್ಲ,” ಎಂದಳು.

“ಹೋಗಲಿ ಬೇರೆ ಯಾರನ್ನಾದರೂ ಮದುವೆ ಮಾಡಿಕೋ. ನಿನಗೂ ಜೊತೆಯಾಗುತ್ತದೆ ಮಗುವಿಗೂ ಅಪ್ಪ ಸಿಕ್ಕ ಹಾಗಾಗುತ್ತದೆ. ನಮ್ಮ ನೆಂಟರಲ್ಲೇ ಡೈವೋರ್ಸ್‌ ಆಗಿರುವ ಒಬ್ಬ ಹುಡುಗ ಬೆಂಗಳೂರಿನಲ್ಲೇ ಇದ್ದಾನಂತೆ ವಿಚಾರಿಸಾ….” ಎಂದು ಕೇಳಿದರು.

“ಬೇಡ ಅಮ್ಮಾ….. ನಾನು ಮದುವೆ ಮಾಡಿಕೊಳ್ಳುವುದಿಲ್ಲಾ ಅಂತ ನಿನಗೆ ಎಷ್ಟು ಸಲ ಹೇಳಲಿ….? ಈ ಇಂಡಿಯಾದಲ್ಲಿ ಇದ್ದರೆ ಹೀಗೆ…. ಅಪ್ಪ ಯಾರು? ಏನು ಕೆಲಸ? ಅಂತ ನೂರೆಂಟು ಪ್ರಶ್ನೆಗಳು. ಇಲ್ಲಿಯ ಜನಕ್ಕೆ ಬೇರೆಯವರ ಬಗ್ಗೆ ಆಡಿಕೊಳ್ಳದೆ ಅವರ ಬಗ್ಗೆ ಮಾತನಾಡದೇ ಇದ್ದ ತಿಂದ ಅನ್ನ ಜೀರ್ಣ ಆಗುವುದಿಲ್ಲ.

“ಅಮ್ಮಾ….. ನಾನು ಇನ್ನು ಮೇಲೆ ಇಲ್ಲಿ ಇರುವುದೇ ಬೇಡ. ನನಗೆ ಅಮೆರಿಕಾದಲ್ಲಿ ಕೆಲಸ ಸಿಕ್ಕಿದೆ. ಇನ್ನು ಆರು ತಿಂಗಳು ಬಿಟ್ಟು ಅಲ್ಲಿಗೆ ಹೊರಟು ಹೋಗೋಣ. ಅಲ್ಲಿ ನಮ್ಮನ್ನು ಅವಮಾನ ಪಡಿಸುವವರು ಯಾರೂ ಇರುವುದಿಲ್ಲ. ಅಲ್ಲಿ ಇದೆಲ್ಲಾ ಕಾಮನ್‌. ಒಬ್ಬರ ಬದುಕಲ್ಲಿ ಇನ್ನೊಬ್ಬರು ಇಣುಕಿ ನೋಡುವುದಿಲ್ಲ,” ಎಂದು ರೇಗಿದಳು ದೇವಿಕಾ.

ಪಾರ್ವತಮ್ಮನಿಗೆ ಕುಳಿತರೆ ನಿಂತರೆ ಮಗಳದೇ ಯೋಚನೆ. ಚಿಕ್ಕ ವಯಸ್ಸಿನಲ್ಲಿ ಎಷ್ಟು ಮುದ್ದು ಮುದ್ದಾಗಿದ್ದಳು. ಎಷ್ಟು ಬುದ್ಧಿವಂತಳು. ಎಲ್ಲರೂ ನಿಮ್ಮ ಮಗಳು ವಿದ್ಯೆ, ಬುದ್ಧಿ, ಸೌಂದರ್ಯದಲ್ಲಿ ಎಲ್ಲರಿಗಿಂತ ಮುಂದೆ ಎಂದು ನಮ್ಮನ್ನು ಹೆಮ್ಮೆಯಿಂದ ನೋಡುತ್ತಿದ್ದರು. ತಾನೂ ಅಷ್ಟೇ ಶಾರದೆಯ ಕೃಪಾಕಟಾಕ್ಷದಿಂದ ಇಷ್ಟು ಅಪ್ರತಿಮ ಸೌಂದರ್ಯದ ಅತಿ ಬುದ್ಧಿವಂತಿಕೆಯ ಮಗಳು ಹುಟ್ಟಿದ್ದಾಳೆ ಎಂದು ಬೀಗುತ್ತಿದ್ದೆ. ಅದೇ ಬುದ್ಧಿವಂತಿಕೆ ಅದೇ ಸೌಂದರ್ಯ ಅವಳ ಬಾಳಿಗೆ ಮುಳುವಾಯಿತು. ಬುದ್ಧಿ ಕಡಿಮೆಯಿದ್ದರೆ ಇಂಡಿಯಾದಲ್ಲೇ ಇರುತ್ತಿದ್ದಳು. ವಿದೇಶಕ್ಕೆ ಹೋಗುತ್ತಿರಲಿಲ್ಲ. ನೋಡಲು ರೂಪಸಿ ಆಗಿಲ್ಲದಿದ್ದರೆ ಯಾರೂ ಅವಳನ್ನು ಇಷ್ಟಪಡುತ್ತಿರಲಿಲ್ಲ. ಎಲ್ಲಾ ನಮ್ಮ ಹಣೆಬರಹ ಎಂದು ಯೋಚಿಸಿ, .ಯೋಚಿಸಿ ಕೊರಗತೊಡಗಿದರು.

ಮನದಲ್ಲೇ ಕೊರಗಿ ಕೊರಗಿ ತುಂಬಾ ಕ್ಷೀಣಿಸತೊಡಗಿದರು. ಅಮೆರಿಕಾಕಕ್ಕೆ ಹೋದ ಮೇಲೆ ಸರಿಯಾಗುತ್ತಾರೆ ಎಂದುಕೊಂಡಳು ದೇವಿಕಾ. ಆದರೆ ಅಮೆರಿಕಾಕ್ಕೆ ಹೋಗುವ ಮೊದಲೇ ಪಾರ್ವತಮ್ಮನವರು ಇದ್ದಕ್ಕಿದ್ದಂತೆ ಈ ಲೋಕ ಬಿಟ್ಟು ಹೋದಾಗ ದೇವಿಕಾ ಅಕ್ಷರಶಃ ಒಂಟಿಯಾದಳು. ಅಮ್ಮನ ಕಾರ್ಯಗಳನ್ನು ಮುಗಿಸಿ ಶಿವಮೊಗ್ಗಾಕ್ಕೆ ಬಂದ ದೇವಿಕಾ, ಇದ್ದ ತಮ್ಮ ಪೂರ್ವಿಕ ಆಸ್ತಿಯಲ್ಲಿ ಒಂದು ಚಿಕ್ಕ ಮನೆಯನ್ನು ಬಿಟ್ಟು ಉಳಿದೆಲ್ಲವನ್ನೂ ಮಾರಿದಳು. ಚಿಕ್ಕಂದಿನಿಂದಲೂ ಇವರ ಮನೆಯಲ್ಲೇ ಇದ್ದ ದೇವಮ್ಮನಿಗೆ ಆ ಚಿಕ್ಕ ಮನೆಯನ್ನು ಕೊಟ್ಟಳು. ತಾನು ಬೆಂಗಳೂರಿನಲ್ಲಿ ಇರುವವರೆಗೆ ತನ್ನ ಜೊತೆ ಇರು, ನಂತರ ವಾಪಸ್ಸು ಬಂದು ಶಿವಮೊಗ್ಗಾದ ಈ ಮನೆಯಲ್ಲೇ ಇರು ಎಂದು ದೇವಮ್ಮನಿಗೆ ಹೇಳಿದಳು.

ಬೆಂಗಳೂರಿನ ಕೆಲಸಕ್ಕೆ ರಿಸೈನ್‌ ಮಾಡಿ ಅಮೆರಿಕಾಕ್ಕೆ ಹೋಗಲು ನಿರ್ಧರಿಸಿದಳು ದೇವಿಕಾ. ಹೋಗುವ ಮೊದಲು ಒಮ್ಮೆಯಾದರೂ ಜೀವನ್‌ ನನ್ನು ಭೇಟಿಯಾಗಬೇಕು ಎಂದು ಮನಸ್ಸು ತೂಗುಯ್ಯಾಲೆಯಾಡಿತು. `ಅವನನ್ನು ಭೇಟಿ ಮಾಡುವುದು ಬೇಡ. ಅವನು ಹೆಂಡತಿ ಮಕ್ಕಳೊಡನೆ ಸುಖವಾಗಿರಲಿ. ಮಗುವಿಗೆ ತಂದೆಯ ಪರಿಚಯ ಮಾಡಿಸಿ ಮನದಲ್ಲಿ ಗೊಂದಲ ಎಬ್ಬಿಸುವುದು ಬೇಡ. ತಾನು ಸಿಂಗಲ್ ಪೇರೆಂಟ್‌ ಆಗಿಯೇ ಇರುವೆ. ಅಮೆರಿಕಾದಲ್ಲಿ ಇದು ಕಾಮನ್‌. ಮಗಳು ಸ್ವಲ್ಪ ದೊಡ್ಡವಳಾದ ಮೇಲೆ ಹೇಳಿದರಾಯಿತು,’ ಎಂದುಕೊಂಡಳು.

ಅಂದು ಭಾನುವಾರ. ಮಗಳು ಹಾಗೂ ಸಹಾಯಕ್ಕೆಂದು ಜೊತೆಗಿದ್ದ ದೇವಮ್ಮನ ಜೊತೆಗೆ ಮಾಲ್ ಗೆ ಬಂದಿದ್ದಳು ದೇವಿಕಾ. ಆಗ ಅಚಾನಕ್ಕಾಗಿ ಜೀವನ್‌ ಭೇಟಿಯಾದ. ಅವನು ದೇವಿಕಾಳನ್ನು ನೋಡಿ ಹರ್ಷದಿಂದ, “ಹಾಯ್‌ ದೇವಿ….. ಸರ್ಪ್ರೈಸ್‌! ಯಾವಾಗ ವಾಪಸ್‌ ಬಂದೆ ಇಂಡಿಯಾಗೆ,” ಎಂದು ಕೇಳಿದ ಜೀವನ್‌.

“ಆಗಲೇ ಎರಡು ವರ್ಷವಾಯಿತು. ಮತ್ತೆ ಮುಂದಿನ ತಿಂಗಳು ತಿರುಗಿ ಅಮೆರಿಕಾಗೆ ವಾಪಸ್‌ ಹೋಗುತ್ತೇನೆ,,” ಎಂದು ನಿಧಾನಕ್ಕೆ ಹೇಳಿದಳು ದೇವಿಕಾ.

“ಓ…. ನಿನ್ನ ಭೇಟಿಯಾಗದೆ ಆರೇಳು ವರ್ಷವಾಯಿತು. ಇನ್ನೂ ಹಾಗೇ ಇದ್ದೀಯಾ… ಸೋ  ಬ್ಯೂಟಿಫುಲ್…..!!” ಎನ್ನುತ್ತಾ ಅವಳನ್ನು ಮೆಚ್ಚುಗೆಯಿಂದ ನೋಡಿದ ಜೀವನ್‌.

“ಮಮ್ಮಿ ಐಸ್‌ ಕ್ರೀಮ್….” ಎಂದು ಕೈ ಹಿಡಿದು ಎಳೆದ ಮಗಳಿಗೆ, “ಅಜ್ಜಿ ಕೊಡಿಸುತ್ತಾರೆ ಹೋಗು,” ಎಂದು ತನ್ನ ಜೊತೆ ಸಹಾಯಕ್ಕಿದ್ದ ದೇವಮ್ಮನಿಗೆ, “ಐಸ್‌ ಕ್ರೀಮ್ ಕೊಡಿಸು, ಅಷ್ಟರಲ್ಲಿ ಬರುತ್ತೇನೆ,” ಎಂದು ಕಳುಹಿಸಿದಳು.

“ಮಗಳಾ….!? ಹಾಯ್‌ ಸ್ವೀಟಿ….” ಎಂದು ಮಗುವಿನ ಗಲ್ಲ ಹಿಡಿದು ಹೇಳಿದ.

ಮಗು ಕೂಡ, “ಹಾಯ್‌,” ಎನ್ನುತ್ತಾ ಅಜ್ಜಿ ಜೊತೆ ಐಸ್‌ ಕ್ರೀಮ್ ತಿನ್ನಲು ಓಡಿದಳು.

“ಹೇಳು ದೇವಿ ಮತ್ತೇನು ಸಮಾಚಾರ…. ಯಾವಾಗ ಮದುವೆ ಮಾಡಿಕೊಂಡೆ. ಇಷ್ಟು ದೊಡ್ಡ ಮಗಳಿದ್ದಾಳೆ. ಎಲ್ಲಿ ಮಗುವಿನ ಅಪ್ಪ…..” ಎಂದು ಕೇಳಿದ ಜೀವನ್‌.

ಮನದಲ್ಲೇ, `ನೀನೇ ಕಣೋ ಅವಳ ಅಪ್ಪ,’ ಎಂದಕೊಂಡರೂ ಬಾಯಿ ಬಿಟ್ಟು ಹೇಳದೆ ಮಾತು ಬದಲಿಸುತ್ತಾ, “ಇರೋ ಮಾರಾಯ…… ನೀನಿನ್ನೂ ಬದಲಾಗಿಲ್ಲ. ಒಂದೇ ಸಲ ಸಾವಿರ ಪ್ರಶ್ನೆ ಕೇಳುವುದನ್ನೂ ನಿಲ್ಲಿಸಿಲ್ಲ,” ಎಂದಳು ದೇವಿಕಾ.

ಆಷ್ಟರಲ್ಲಿ ಆ ಕಡೆಯಿಂದ ಜೀವನ್‌ ಹೆಂಡತಿ ಐದು ವರ್ಷದ ಮಗನ ಕೈ ಹಿಡಿದು, “ರೀ… ಇಲ್ಲಿದೀರಾ…? ನೋಡಿ ಚಿನ್ನುಗೆ ಟಾಯ್ಸ್ ಬೇಕಂತೆ….” ಎಂದಳು.

“ಪಲ್ಲವಿ, ನಾನು ಅಮೆರಿಕಾದಲ್ಲಿದ್ದಾಗ ದೇವಿಕಾ ಅಂತ ಒಬ್ಬರು ಫ್ರೆಂಡ್‌ ಇದ್ದರು ಎಂದು ಹೇಳಿದ್ದೆನಲ್ವಾ ಇವಳೇ ದೇವಿಕಾ,” ಎಂದ ಜೀವನ್‌,

“ದೇವಿಕಾ, ಇವಳು ನನ್ನ ವೈಫ್‌ ಪಲ್ಲವಿ. ಇವನು ನಮ್ಮ ರಾಜಕುಮಾರ. ಇಲ್ಲಿ ಒಳಗಡೆ ರಾಜಕುಮಾರಿ ಆಚೆ ಬರಲು ಕಾಯುತ್ತಿದ್ದಾಳೆ,” ಎಂದು ಹೆಂಡತಿಯ ಹೊಟ್ಟೆ ಮುಟ್ಟಿ ತೋರಿಸಿದ.

“ನೀನು ಸ್ವಲ್ಪವೂ ಬದಲಾಗಿಲ್ಲ. ತಮಾಷೆಯಾಗಿ ಮಾತನಾಡುತ್ತ ಹಾಗೇ ಇದ್ದೀಯಾ…..” ಎಂದಳು ದೇವಿಕಾ.

“ಹಾಯ್‌ ಪಲ್ಲವಿ…. ಹಾಯ್‌ ಚಿನ್ನು,” ಎಂದು ಮಗುವಿನ ಕೆನ್ನೆ ನೇವರಿಸಿದಳು ದೇವಿಕಾ.

ಪಲ್ಲವಿ ದೇವಿಕಾಳನ್ನು ನೋಡಿ ಮುಖ ಸಿಂಡರಿಸಿದ್ದನ್ನು ಸೂಕ್ಷ್ಮವಾಗಿ ಗಮನಿಸಿದ ದೇವಿಕಾ, “ಸರಿ ಮತ್ತೆ ಸಿಗೋಣ,” ಎಂದಳು.

“ಹಲೋ…. ಎಷ್ಟು ವರ್ಷಗಳ ನಂತರ ಸಿಕ್ಕಿದ್ದೀಯಾ…. ಹೊರಟೆ ಬಿಟ್ಟಿಯಾ…. ಸ್ವಲ್ಪ ಹೊತ್ತು ಇರು. ನಿನ್ನ ಬಳಿ ತುಂಬಾ ಮಾತನಾಡಬೇಕು,” ಎಂದ ಜೀವನ್‌.

ಪಲ್ಲವಿ ಅವನನ್ನು ದುರುಗುಟ್ಟಿ ನೋಡಿದ್ದನ್ನು ಗಮನಿಸಿದ ದೇವಿಕಾ, “ಸಾರಿ ಜೀವನ್‌…. ನಾವು ಅಮೆರಿಕಾಗೆ ಹೋಗಲು ಹೆಚ್ಚು ಸಮಯವಿಲ್ಲ. ಬಹಳಷ್ಟು ಕೆಲಸ ಇದೆ. ಇನ್ನೊಮ್ಮೆ ಸಿಗೋಣ,” ಎಂದಳು.

“ನಿನ್ನ ಫೋನ್‌ ನಂಬರ್‌ ಕೊಡು ದೇವಿ. ಇದರಲ್ಲಿ ನನ್ನ ಫೋನ್‌ ನಂಬರ್‌ ಹಾಗೂ ವಿಳಾಸವಿದೆ. ಆಮೆರಿಕಾಗೆ ಹೋಗುವ ಮೊದಲು ನೀವು ಕುಟುಂಬ ಸಮೇತ  ನಮ್ಮ ಮನೆಗೆ ಬರಬೇಕು,” ಎನ್ನುತ್ತಾ ತನ್ನ ವಿಸಿಟಿಂಗ್‌ ಕಾರ್ಡ್‌ ಕೊಟ್ಟ.

“ಫೋನ್‌ ನಂಬರ್‌ ಮೆಸೇಜ್‌ ಮಾಡುವೆ. ಸರಿ ಕಣೋ….  ಇಷ್ಟು ಹೊತ್ತಾದರೂ ನಾನು ಹೋಗಲಿಲ್ಲ ಅಂದರೆ ಮಗಳು ಐಸ್ ಕ್ರೀಮ್ ಅಂಗಡಿಯನ್ನೇ ಖಾಲಿ ಮಾಡುತ್ತಾಳೆ,” ಎನ್ನುತ್ತಾ ಮತ್ತೊಮ್ಮೆ ಇಬ್ಬರಿಗೂ ಬೈ ಹೇಳಿ ಅಲ್ಲಿಂದ ಹೊರಟಳು ದೇವಿಕಾ.

ಜೀನ್ಸ್ ಪ್ಯಾಂಟ್‌, ಸ್ಲೀವ್ ಲೆಸ್‌ಕುರ್ತಾ ತೊಟ್ಟ ದೇವಿಕಾ ಇನ್ನೂ ಪುಟ್ಟ ಹುಡುಗಿಯಂತೆಯೇ ಹೋಗುತ್ತಿದ್ದ ಅವಳನ್ನೇ ಮೆಚ್ಚುಗೆಯಿಂದ ನೋಡುತ್ತಿದ್ದ ಜೀವನ್‌ ನನ್ನು ಪಲ್ಲವಿ ಎಚ್ಚರಿಸಿ ಕರೆದುಕೊಂಡು ಹೋದಳು.

ರಾತ್ರಿ ಮಲಗಿದಾಗ ವಿಸಿಟಿಂಗ್‌ ಕಾರ್ಡ್‌ ಕೈಯಲ್ಲಿ ಹಿಡಿದು ಯೋಚಿಸ ತೊಡಗಿದಳು, `ಇನ್ನೊಂದು ತಿಂಗಳಲ್ಲಿ ವಾಪಸ್‌ ಅಮೆರಿಕಾಗೆ ಹೋಗುತ್ತೇನೆ. ಮತ್ತೆಂದೂ ಇಂಡಿಯಾಗೆ ಬರುವುದಿಲ್ಲ. ಇನ್ನೊಮ್ಮೆ ಜೀವನಾ ಭೇಟಿ ಮಾಡಲಾ….? ನನ್ನ ಮನದ ನೋವೆಲ್ಲಾ ಹಂಚಿಕೊಳ್ಳಲಾ…? ಏನು ಮಾಡಲಿ….? ಜೀವನ್‌ ಮಗುವಿನ ಅಪ್ಪ ಎಲ್ಲಿ ಎಂದು ಕೇಳಿದಾಗ ನೀನೇ ಕಣೋ ಅವಳಪ್ಪ…. ಜೀವು ಇವಳು ನಿನ್ನ ಮಗಳೇ ಕಣೋ…. ಎಂದು ಮನದಲ್ಲೇ ಹೇಳಿದೆನೇ ಹೊರತು  ಬಹಿರಂಗವಾಗಿ ಹೇಳಿ ಅವನ ಜೀವನದಲ್ಲಿ ಬಿರುಗಾಳಿ ಏಳಬಾರದೆಂದು ಎದುರಲ್ಲಿ ಏನೂ ಹೇಳದೆ ಮೌನವಾದೆ. ಸುಳ್ಳು ಹೇಳಲು ಅವಕಾಶ ಆಗದಂತೆ ಸದ್ಯ ಅವನ ಹೆಂಡತಿ ಮಧ್ಯೆ ಬಂದಳು.

`ಇಲ್ಲಾ…. ಖಂಡಿತಾ ನಾನು ಅವನನ್ನು ಭೇಟಿಯಾಗಬಾರದು. ಅವನ ಎದುರಿಗೆ ಸುಳ್ಳಾಡಲು ಮನಸ್ಸು ಬರುವುದಿಲ್ಲ. ನಾನು ಬೇರೆ ಯಾರನ್ನೋ ಮದುವೆಯಾಗಿ ಗಂಡ ಮಗಳ ಜೊತೆ ಸುಖವಾಗಿದ್ದೀನಿ ಎಂದು ಅವನು ಈಗ ಅಂದುಕೊಂಡ ಹಾಗೆ ಇರಲಿ. ಅದೇ ಸರಿ. ಇದು ನನ್ನ ಸ್ವಯಂಕೃತ ಅಪರಾಧ. ನಾನೇ ತಪ್ಪು ಮಾಡಿದ್ದು, ದೇವಿ…. ಇದೆಲ್ಲಾ ಈಗ ಮಾತ್ರ ಚೆಂದ, ಯಾವಾಗಲೂ ಹೀಗಿರಲು ಸಾಧ್ಯವಿಲ್ಲ. ನಾವು ತಪ್ಪು ಮಾಡುತ್ತಿದ್ದೇವೆ ಅನಿಸುತ್ತಿದೆ. ನಮ್ಮ ಸಂಸಾರ, ಕುಟುಂಬ, ಮಕ್ಕಳು ಮರಿ ಅಂತ ಇರಬೇಕು. ಹೇಗಿದ್ದರೂ ಎರಡು ವರ್ಷಗಳಿಂದ ಜೊತೆಗೇ ಇದ್ದೀವಿ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದೇನೆ. ನಮ್ಮಿಬ್ಬರ ಮನೆಯಲ್ಲಿ ಜಾತಿ ಬೇರೆ ಎಂದು ಗಲಾಟೆ ಮಾಡಿದರೂ ನಾವು ನಮ್ಮ ಮನೆಯವರನ್ನು ಒಪ್ಪಿಸಿ, ಇಬ್ಬರೂ ಮದುವೆಯಾಗಿ ಬಿಡೋಣ, ಎಂದು ಜೀವು ಎಷ್ಟು ತಿಳಿ ಹೇಳಿದ್ದ. `ನಾನೇ ಹಠ ಮಾಡಿದೆ. ಮದುವೆ ಬೇಡವೇ ಬೇಡ ಎಂದೆ. ಮದುವೆ ಮಾಡಿಕೊಂಡು ಆಮೇಲೆ ನನ್ನ ಮೇಲೆ ದರ್ಬಾರು ಮಾಡೋಣ ಅಂತ ಅಲ್ವಾ ನಿನ್ನ ಉದ್ದೇಶ. ಮದುವೆ ಆದ ಮೇಲೆ ಗಂಡ ಅನ್ನುವ ಅಹಂ…. ಬಂದುಬಿಡುತ್ತದೆ. ಈಗಿನ ತರಹ ಇರುವುದಿಲ್ಲ. ಇದಕ್ಕೆ ನನಗೆ ಮದುವೆ ಇಷ್ಟವಿಲ್ಲ ಎಂದು ನಿರಾಕರಿಸಿದೆ. ಅವನ ಮಾತು ಕೇಳದೆ ನಾನು ತಪ್ಪು ಮಾಡಿದೆ. ಇಂಡಿಯಾ ಸಂಸ್ಕೃತಿಯನ್ನು ಹಳಿದೆ. ಇಂಡಿಯಾ ಪುರುಷ ಪ್ರಧಾನ ಸಮಾಜ ನನಗೆ ಇಷ್ಟವಿಲ್ಲ ಎಂದು ಇಂಡಿಯಾವನ್ನು ಮತ್ತು ನಮ್ಮ ಸಂಸ್ಕೃತಿಯನ್ನು ಹಳಿದೆ. `ಜೀವು ನನ್ನನ್ನು ಬಿಟ್ಟು ಹೋದರೆ ಹೋಗಲಿ, ಇನ್ನಾರಾದರೂ ಇಷ್ಟವಾದರೆ ಅವರ ಜೊತೆ ಇರೋಣ. ಇನ್ನೊಬ್ಬನೇನಾ ಅಂದುಕೊಂಡೆ. ಆದರೆ ಅವನು ವಾಪಸ್‌ ಇಂಡಿಯಾಗೆ ಬಂದ ಮೇಲೆ ನನಗೆ ಅವನ ಬೆಲೆ ಗೊತ್ತಾಯಿತು. ಅವನನ್ನು ಮರೆಯಲಾಗದೆ ಹಗಲೂ ರಾತ್ರಿ ಅವನ ನೆನಪು ಬಿಡದೆ ಕಾಡಿದರೂ ಫೋನ್‌ ಮಾಡಲು ಅಹಂ ಅಡ್ಡ ಬಂದಿತ್ತು. ಎಷ್ಟು ತಿಂಗಳಾದರೂ ನಾನು ಫೋನ್‌ ಮಾಡದೇ ಇದ್ದದ್ದರಿಂದ ಜೀವು ಬೇರೆ ಮದುವೆಯಾದ. ಇದರಲ್ಲಿ ಅವನ ತಪ್ಪು ಏನೂ ಇಲ್ಲ. ಇದು ನನ್ನ ಸ್ವಯಂಕೃತ ಅಪರಾಧ, ಅದಕ್ಕೆ ಶಿಕ್ಷೆ ನನಗೆ ಮಾತ್ರವೇ ಇರಲಿ. ಸತ್ಯ ಆಚೆ ಬರಬಾರದು ಅದು ನನ್ನಲ್ಲೇ ಹುದುಗಿಹೋಗಲಿ. ಅವನ ಕುಟುಂಬದವರು ಸುಖವಾಗಿರಲಿ,’ ಎಂದು ಗಟ್ಟಿ ಮನಸ್ಸು ಮಾಡಿದಳು.

ಒಂದು ತಿಂಗಳು ಇಲ್ಲೇ ಇದ್ದೆರೆ ಅವನು ಮತ್ತೆ ಸಿಗಬಹುದು. ಇಲ್ಲಾ ಅಂದರೆ ನನ್ನ ಮನಸ್ಸು ಬದಲಾಗಬಹುದು ಎಂದುಕೊಂಡು ದೇವಮ್ಮನಿಗೆ, “ದೇವಮ್ಮಾ…. ನಿನಗೆ ತೀರ್ಥ ಕ್ಷೇತ್ರಗಳನ್ನು ನೋಡುವಾಸೆ ಇತ್ತಲ್ಲ. ನಡೀ ಎಲ್ಲೆಲ್ಲಿ ಹೋಗಬೇಕು  ಹೇಳು. ನಾನು ವಿದೇಶಕ್ಕೆ ಹೋದರೆ ಇನ್ನೆಂದೂ ಇಂಡಿಯಾಗೆ ಬರುವುದಿಲ್ಲ,” ಎಂದವಳೇ ಮರುದಿನ ದೇವಮ್ಮ ಹಾಗೂ ಮಗಳನ್ನು ಕರೆದುಕೊಂಡು ಉತ್ತರ ಭಾರತ ಪ್ರವಾಸ ಹೊರಟಳು.

ದೇವಿಕಾಳನ್ನು ಕಂಡು ಜೀವನ್‌ ಗೆ ತುಂಬಾ ಖುಷಿಯಾಗಿತ್ತು. ಹಳೆಯದೆಲಲ್ ನೆನಪಾಯಿತು. ಅವನು ಅವಳನ್ನು ಮರೆತೇ ಇರಲಿಲ್ಲ. ಇಂಡಿಯಾಗ ಬಂದವನಿಗೆ ತಕ್ಷಣ ಒಳ್ಳೆಯ ಕೆಲಸ ಸಿಕ್ಕಿತು. ಮದುವೆ ಬೇಡ ಎಂದರೂ ಹಾಸಿಗೆ ಹಿಡಿದ ಅಜ್ಜನ ಬಲವಂತಕ್ಕೆ ಒಪ್ಪಬೇಕಾಯಿತು. ಆರೇಳು ಹುಡುಗಿಯರನ್ನು ಸೆಲೆಕ್ಟ್ ಮಾಡಿದ್ದರು ಅವನ ಅಪ್ಪ ಅಮ್ಮ. “ಜೀವು, ಈ ಹುಡುಗಿಯರಲ್ಲಿ ನಿನಗೆ ಯಾರು ಇಷ್ಟ? ಅವಳನ್ನೇ ಮದುವೆ ಮಾಡೋಣ. ಆದರೆ ಇವರೆಲ್ಲರ ಜಾತಕಗಳು ಚೆನ್ನಾಗಿ ಹೊಂದುತ್ತವೆ. ಎಲ್ಲರೂ ನಿನಗೆ ಸರಿ ಜೋಡಿ. ನಿನಗೆ ಯಾರು ಬೇಕು ನೋಡು,” ಎಂದರು ಜೀವುನ ತಾಯಿ.

ಅವನಿಗೆ ಇಂಟ್ರೆಸ್ಟೇ ಇರಲಿಲ್ಲ. ಅವನ ಮನದ ತುಂಬಾ ದೇವಿಕಾಳೇ ತುಂಬಿದ್ದಳು. ಅದರಿಂದ, “ಅಮ್ಮಾ…. ನೀವು ಯಾವುದು ಎಂದು ಹೇಳುತ್ತೀರೋ ಅವಳನ್ನು ಮದುವೆ ಆಗುವೆ,” ಎಂದ ಜೀವನ್‌.

ಅವರಿಗೆ ಪಲ್ಲವಿ ಇಷ್ಟವಾದ ಕಾರಣ ಅವಳನ್ನು ಸೆಲೆಕ್ಟ್ ಮಾಡಿದ್ದರು. ಜೀವನ್‌ ಕೂಡ ಹ್ಞೂಂ ಎಂದಿದ್ದ. ಮದುವೆಯ ಹಿಂದಿನ ದಿನದವರೆಗೂ ದೇವಿಕಾ ಕರೆಗಾಗಿ ಕಾದಿದ್ದ. ಅವಳಿಂದ ಕರೆ ಬರಲೇ ಇಲ್ಲ. `ಹಠಮಾರಿ ಹುಡುಗಿ ದೇವಿಕಾ…. ಮದುವೇನೇ ಬೇಡ ಎಂದಳು ಕೊನೆಗೂ ಮದುವೆಯಾದಳಲ್ಲ….. ಯಾರಿರಬಹುದು ಆ ಹುಡುಗ… ಅವಳ ಮನ ಬದಲಾಯಿಸಿ ಮದುವೆಯಾದನು…? ಹೇಗಿದ್ದರೂ ಮನೆಗೆ ಬರಲು ಹೇಳಿದ್ದೀನಿ ಆಗ ಕೇಳಿದರಾಯಿತು,’ ಎಂದುಕೊಂಡ.

ಒಂದು ವಾರ ಕಳೆಯಿತು ದೇವಿಕಾಳಿಂದ ಫೋನ್‌ ಬರಲೇ ಇಲ್ಲ. `ಅವಳು ಮರೆತು ಬಿಟ್ಟಳಾ…. ನಾಳೆ ಸಂಡೆ ಬರಬಹುದು ಎಂದುಕೊಂಡು ತನ್ನ ಎಲ್ಲಾ ಪ್ರೋಗ್ರಾಂ ಕ್ಯಾನ್ಸಲ್ ಮಾಡಿ ಮಾಡಿ ಆ ದಿನವೆಲ್ಲಾ ಅವಳಿಗಾಗಿ ಕಾದ. ಅವಳೂ ಬರಲಿಲ್ಲ, ತನ್ನ ನಂಬರ್‌ ಕೂಡ ಕಳುಹಿಸಲಿಲ್ಲ. ದೇವಿಕಾ ಮುಂದಿನ ತಿಂಗಳು ಹೊರಟು ಬಿಡುತ್ತಾಳೆ ಅಷ್ಟರಲ್ಲಿ ಒಮ್ಮೆಯಾದರೂ ಭೇಟಿಯಾದರೆ ಚೆನ್ನಾಗಿರುತ್ತದೆ. ಅವಳು ಸಿಕ್ಕಿದ ಮಾಲ್ ‌ಗೆ ಬಂದು ಅವಳು ಎಲ್ಲಾದರೂ ಕಾಣಿಸುತ್ತಾಳಾ ಎಂದು ಆ ರಸ್ತೆಯಲ್ಲಿ ಬಹಳ ಸಲ ಓಡಾಡಿದ. ಅವಳು ಕಾಣಿಸಲೇ ಇಲ್ಲ.

“ಅವಳಿಗೆ ಇನ್ನೂ ಅಹಂಕಾರ, ಅದಕ್ಕೆ ಗಂಡನನ್ನು ಕರೆದುಕೊಂಡು ಮನೆಗೆ ಬರಲಿಲ್ಲ. ಅಟ್‌ ಲೀಸ್ಟ್ ಒಂದು ಫೋನ್‌ ಆದರೂ ಮಾಡಬಹುದಿತ್ತು. ಅವಳ ನಂಬರ್‌ ಸಹ ಕೊಡಲಿಲ್ಲ. ಮೋಸ್ಟ್ಲಿ ಅವಳ ಗಂಡನಿಗೆ ನನ್ನನ್ನು ಪರಿಚಯಿಸಲು ಮನಸ್ಸಿಲ್ಲಾ ಅನಿಸುತ್ತದೆ. ಎಲ್ಲಾದರೂ ಇರಲಿ ಸುಖವಾಗಿರಲಿ,’ ಎಂದುಕೊಂಡ.

ದೇವಿಕಾಳಿಗೆ, `ಜೀವನ್‌ ತನ್ನನ್ನು ಹುಡುಕುತ್ತಾನೆ ಎಂದು ತಿಳಿದಿತ್ತು. ಅವನು ತನ್ನನ್ನು ನೋಡಿದ ತಕ್ಷಣ ಖುಷಿಯಿಂದ ಅವನ ಕಣ್ಣಲ್ಲಿ ಕೋಟಿ ನಕ್ಷತ್ರದ ಬೆಳಕು ಕಂಡಿದ್ದಳು. ಅವನು ತನ್ನನ್ನು ಮರೆತಿಲ್ಲ. ಅವನ ಮನಸ್ಸಿನಲ್ಲಿ ಇನ್ನೂ ತಾನಿರುವೆ….. ಅಷ್ಟೇ ಸಾಕು ನನಗೆ. ಪಾಪ… ಅವನನ್ನು ನಂಬಿ ಮದುವೆಯಾದ ಪಲ್ಲವಿಯ ಜೀವನ ಸುಖವಾಗಿರಲಿ. ಅವಳು ತನ್ನನ್ನು ಶಪಿಸುವಂತಾಗಬಾರದು,’ ಎಂದುಕೊಂಡೇ ದೇವಿಕಾ ಉತ್ತರ ಭಾರತದ ಪ್ರವಾಸದ ನೆಪ ಮಾಡಿ ಹೊರಟು ಬಂದಿದ್ದಳು.

ಅಮೆರಿಕಾಗೆ ಹೋಗಲು ಇನ್ನೊಂದು ವಾರವಿದ್ದಾಗ ಪ್ರವಾಸದಿಂದ ವಾಪಸ್‌ ಬಂದಳು. ವಾರದಲ್ಲೇ ಎಲ್ಲವನ್ನೂ ಪ್ಯಾಕ್ ಮಾಡಿದಳು. ಬೇಡದಿರುವ ವಸ್ತುಗಳನ್ನು ದೇವಮ್ಮನಿಗೆ ಕೊಟ್ಟಳು. ಇನ್ನೂ ಈ ದೇಶದಲ್ಲಿ ದೇವಿಕಾಳಿಗೆ ತನ್ನವರು ಎನ್ನುವವರು ಯಾರೂ ಇಲ್ಲ. ಮತ್ತೆ ವಾಪಸ್‌ ಬರುವ ಪ್ರಮೇಯವೇ ಇಲ್ಲ. ಅಪ್ಪ, ಅಮ್ಮನನ್ನು ಕಳೆದುಕೊಂಡಳು. ಅವಳಿಗೆ ಬಂಧು ಬಳಗದವರ ಬಳಕೆ ಮೊದಲೇ ಇರಲಿಲ್ಲ. ಈಗ ಒಬ್ಬಳೇ ಮಗಳನ್ನು ಜೊತೆಗೆ ಕರೆದುಕೊಂಡು ವಾಪಸ್‌ ಹೊರಟಿದ್ದಳು.

ಏರ್‌ ಪೋರ್ಟ್‌ ಗೆ ಬಂದು ಇಂಡಿಯಾಗೆ ಗುಡ್‌ ಬೈ ಹೇಳಿದಳು. ಇನ್ನೂ ನಾಳೆಯಿಂದ ತನ್ನ ಹೊಸ ಜೀವನ. ನನ್ನ ಮಗಳು, ಕೆಲಸ ಅಷ್ಟೇ ನನ್ನ ಬದುಕು ಎಂದು ಕಣ್ಣಲ್ಲಿ ನೀರು ಹಾಕಿದಳು. ಅಪ್ಪ ಅಮ್ಮನ ಮಾತು ಕೇಳದೆ ಹಠ ಮಾಡಿ, ಅವರಿಗೆ ನೋವು ಕೊಟ್ಟಿದ್ದಕ್ಕೆ ತನಗೆ ಈ ಶಿಕ್ಷೆ ಸರಿಯಾಗಿಯೇ ಇದೆ ಎಂದುಕೊಂಡಳು. ತಾನು ಎಷ್ಟು ವಿದ್ಯಾವಂತೆ, ಬುದ್ಧಿವಂತಳಾದರೂ, ಮಾಡಿದ ತಪ್ಪಿನಿಂದ ತನ್ನ ಬದುಕು ತಪ್ಪಿದ ತಾಳವಾಯಿತು, ಎಂದುಕೊಂಡು ಫ್ಲೈಟ್‌ ಹತ್ತಲು ಮಗಳೊಂದಿಗೆ ಓಡಿದಳು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ