ದಿನನಿತ್ಯ ಸೈಬರ್ವಂಚನೆಯ ಲೂಟಿಯ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನಿಸಿದ ಇನ್ಸ್ಪೆಕ್ಟರ್ಪಲ್ಲವಿ ಹೇಗಾದರೂ ವಂಚನೆಯ ಜಾಲವನ್ನು ಕೊನೆಗಾಣಿಸಬೇಕೆಂದು ಕಾರ್ಯೋನ್ಮುಖರಾದರು. ಸಮಸ್ಯೆ ಬಗೆಹರಿದದ್ದು ಹೇಗೆ……?

ಇನ್‌ ಸ್ಪೆಕ್ಟರ್‌ ಪಲ್ಲವಿ ಸೈಬರ್‌ ಠಾಣೆಗೆ ರ್ಗಾಗಿ ಬಂದು ಅಧಿಕಾರ ಸ್ವೀಕರಿಸಿದ್ದರು. ಕಾನಸ್ಟೇಬಲ್ ನ್ನು ಬರ ಹೇಳಿ ಕಳೆದೊಂದು ವರ್ಷದಿಂದ ಪರಿಹರಿಸಲಾಗದೆ ಹಾಗೇ ಉಳಿದಿದ್ದ ಕೇಸುಗಳ ಫೈಲ್ ‌ನ್ನು ತರಿಸಿ ಓದಿದರು. ಮೋಸ ಹೋಗಿ ಸಾವಿರಾರು, ಲಕ್ಷಾಂತರ ರೂಪಾಯಿಗಳನ್ನು ಕಳಕೊಂಡ ಹಲವರು ದೂರು ನೀಡಿದ್ದರು.

ಸೈಬರ್‌ ಕಳ್ಳರಿಂದಾಗಿ ಸಾರ್ವನಿಕರು ಬೇರೆ ಬೇರೆ ರೀತಿಯಲ್ಲಿ ನಿರಂತರವಾಗಿ ಮೋಸ ಹೋಗುತ್ತಿದ್ದುದು ಹಾಗೂ ಅಂತಹ ವಂಚಕರನ್ನು ಹಿಡಿಯಲು ಸಾಧ್ಯವಾಗದಿದ್ದುದು ಇಲಾಖೆಗೆ ನಿಜಕ್ಕೂ ತಲೆ ತಗ್ಗಿಸುವಂತೆ ಆಗಿತ್ತು.

ಒಂದು ದೂರಿನ ಪ್ರಕಾರ ಮೋಸ ಹೋದಾತನ ಮೊಬೈಲ್ ‌ದೂರವಾಣಿ ಸಂಖ್ಯೆಯನ್ನು ಎಲ್ಲಿಂದಲೋ ಪಡಕೊಂಡ ವಂಚಕನು ಬಳಿಕ ಬ್ಯಾಂಕಿನ ಖಾತೆಯ ಸಂಖ್ಯೆಯನ್ನು ಹೇಗೋ ತಿಳಿದುಕೊಂಡು ದೂರುದಾರನ ಖಾತೆಯಿಂದ ಹತ್ತೊಂಬತ್ತು ಸಾವಿರ ರೂಪಾಯಿಗಳನ್ನು ದೋಚಿದ್ದನು. ತಾನು ಖಾತಾ ಸಂಖ್ಯೆಯನ್ನು ಹೇಳಿರಲೇ ಇಲ್ಲ ಎಂದು ದೂರುದಾರನು ಸ್ಪಷ್ಟ ಶಬ್ದಗಳಲ್ಲಿ ದೂರು ನೀಡಿದ್ದನು.

ಇನ್ನೊಂದು ಪ್ರಕರಣದಲ್ಲಿ ದೂರುದಾರನ ಪ್ಯಾನ್‌ ಸಂಖ್ಯೆಯ ಮೂಲಕ ಮೋಸ ಮಾಡಲಾಗಿತ್ತು. ಈ ದೂರುದಾರ ತಾನೂ ಬ್ಯಾಂಕ್‌ ಖಾತೆಯ ವಿವರ ಕೊಟ್ಟಿಲ್ಲವೆಂದೇ ತಿಳಿಸಿದ್ದರೂ, ವಂಚಕರ ಜಾಲ ಖಾತಾ ಸಂಖ್ಯೆಯನ್ನು ಹೇಗೆ ಪಡಕೊಂಡಿರಬಹುದು? ಹಾಗೆಯೇ ಫೈ್ಲ ನ್ನು ತಿರುಗಿಸುತ್ತಿದ್ದಾಗ ಆಧಾರ್‌ ಸಂಖ್ಯೆಯ ಮೂಲಕ ಎಂಭತ್ತಾರು ಸಾವಿರ ರೂಪಾಯಿ ಬ್ಯಾಂಕ್‌ ಖಾತೆಯಿಂದ ಮಾಯ ಆಗಿದ್ದ ಇನ್ನೊಂದು ಪ್ರಕರಣ ಕೈಗೆ ಸಿಕ್ಕಿತು.

ಹೀಗೆ ಹಲವು ಒಂದೇ ರೀತಿಯ ವಂಚನೆಗಳೇ ಆಗಿದ್ದವು. ಇನ್ನು ಕೆಲವೆಲ್ಲ ಹನಿಟ್ರ್ಯಾಪ್‌ ಪ್ರಕರಣಗಳು. ಮನುಷ್ಯನು ತನ್ನನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದಿದ್ದಾಗ ಇವೆಲ್ಲ ಮುಂದೆಯೂ ಖಂಡಿತ ನಡೆಯುವಂತಹುದೇ ಎಂದು ಒಮ್ಮೆ ಅನಿಸಿದರೂ, ಈ ಬಗ್ಗೆ ಹೆಚ್ಚು ಯೋಚಿಸದೆ ಪೊಲೀಸರಾಗಿ ವಂಚಕರನ್ನು ಹಿಡಿಯುವುದು ತಮ್ಮ ಕರ್ತವ್ಯವೆಂದು ಪಲ್ಲವಿಗೆ ಅನಿಸಿತು. ತಲೆ ಚಿಟ್ಟು ಹಿಡಿದಂತಾಗಿ ಪಲ್ಲವಿ ಬಿಸಿ ಬಿಸಿ ಕಾಫಿ ತರಿಸಿ ಕುಡಿಯುತ್ತಾ ಒಂದೈದು ನಿಮಿಷದ ಬಳಿಕ ಮತ್ತೆ ಫೈಲಿನ ಒಳಗೆ ಕಣ್ಣುಗಳನ್ನು ನೆಟ್ಟರು.

ಮಧ್ಯಾಹ್ನ ಹನ್ನೆರಡು ಘಂಟೆಗೆ ಸರಿಯಾಗಿ ಎಲ್ಲ ಕೇಸುಗಳ ಬಗ್ಗೆ ಮಾಹಿತಿಗಳನ್ನು ಜೋಡಿಸಿಕೊಂಡು ಐಜಿಯವರು ಕರೆದಿದ್ದ ಜಿಲ್ಲಾ ಎಸ್‌ ಪಿಗಳು ಮತ್ತು ಪ್ರಮುಖ ಠಾಣೆಗಳ ಇನ್‌ ಸ್ಪೆಕ್ಟರ್‌ಗಳ ವಿಡಿಯೋ ಕಾನ್ಛರೆನ್ಸ್ ನಲ್ಲಿ ಭಾಗವಹಿಸಿದರು. ಹೆಚ್ಚಿನ ಸಂಖ್ಯೆಯ ಅಪರಾಧಗಳಿರುವ ಠಾಣೆಗಳ ಇನ್‌ ಸ್ಪೆಕ್ಟರ್‌ ಗಳ ಉತ್ತರಗಳಿಂದ ಸಮಾಧಾನಗೊಳ್ಳದ ಐಜಿಯವರು ಅಂಥಹವರ ಬೆವರಿಳಿಸಿದರು.

ಪಲ್ಲವಿಯ ಕಾರ್ಯವೈಖರಿ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದ ಐಜಿಯವರು ಆ ಸೈಬರ್‌ ಕಳ್ಳರ ಜಾಲವನ್ನು ಭೇದಿಸಲು ಒಂದು ತಿಂಗಳ ಸಮಯ ನೀಡಿದರು. ಇಷ್ಟರವರೆಗೆ ಫಲಿತಾಂಶದ ಮೂಲಕವೇ ಉತ್ತರ ನೀಡುತ್ತಾ ಬಂದಿದ್ದ ಪಲ್ಲವಿ ಇಲ್ಲೂ ಏನೂ ಮಾತಾಡದೆ, `ಖಂಡಿತಾ ಸಾರ್‌…..’ ಎಂದಷ್ಟೇ ಹೇಳಿ ಮಾತು ಕೊನೆಗೊಳಿಸಿದರು.

ಮರುದಿನ ಬೆಳಗ್ಗೆ ಹನ್ನೊಂದು ಘಂಟೆ ಸುಮಾರಿಗೆ ಸಮೀಪದಲ್ಲೇ ಇದ್ದ ಬ್ಯಾಂಕ್‌ ಶಾಖೆಯ ಎದುರಲ್ಲಿ ಜೀಪಿನಿಂದ ಕೆಳಗಿಳಿದರು. ಗೇಟಿನ ಬಳಿ ಇದ್ದ ವಾಚ್‌ ಮನ್‌ ಇವರ ಸಮವಸ್ತ್ರ ನೋಡಿ ಒಂದು ಸೆಲ್ಯೂಟ್‌ ಹೊಡೆದ. ಪಲ್ಲವಿಯವರು ಮ್ಯಾನೇಜರ್‌ ರವರ ಕ್ಯಾಬಿನ್‌ ಗೆ ಹೋಗಿ ತನ್ನ ಪರಿಚಯ ಹೇಳಿ, “ಪಾಸ್‌ ಪುಸ್ತಕ ತಂದಿಲ್ಲ. ನನ್ನ ಅಕೌಂಟ್‌ ನಲ್ಲಿ ಬ್ಯಾಲೆನ್ಸ್ ಎಷ್ಟಿದೆ ಎಂದು ಹೇಳಬಹುದೇ?” ಎಂದು ಕೇಳಿದರು.

ಕಾಲಿಂಗ್‌ ಬೆಲ್ ಒತ್ತಿದಾಗ ಬಂದ ಅಟೆಂಡರ್‌ ಗೆ ಚಹಾ ತರಲು ಹೇಳಿದ ಮ್ಯಾನೇಜರ್‌, “ತಮ್ಮ ಮೊಬೈಲ್ ‌ನಂಬರ್‌ ಹೇಳಿ ಮೇಡಂ. ಅಕೌಂಟ್‌ ನಂಬರ್‌ ಚೆಕ್‌ ಮಾಡುತ್ತೇನೆ,” ಎಂದರು. ಬರೀ ಮೊಬೈಲ್ ದೂರವಾಣಿ ಸಂಖ್ಯೆಯಿಂದ ಬ್ಯಾಂಕ್‌ ಖಾತೆಯ ಸಂಖ್ಯೆಯನ್ನು ಪಡೆದುಕೊಳ್ಳಲು ಸಾಧ್ಯವಾಗುವುದು ಪಲ್ಲವಿಯವರಿಗೆ ಆಶ್ಚರ್ಯ ಉಂಟು ಮಾಡಿತು.

ಚಹಾ ಹೀರಾತ್ತ ಮ್ಯಾನೇಜರ್‌ ಗೆ ಈ ಬಗ್ಗೆ ಕೇಳಿದಾಗ, “ಪ್ಯಾನ್‌ ನಂಬರ್‌ಅಥವಾ ಆಧಾರ್‌ ಸಂಖ್ಯೆ ಇದ್ದರೂ ಖಾತೆದಾರನ ಅಕೌಂಟ್‌ ನಂಬರ್‌ ನ್ನು ಹುಡುಕಲು ಸಾಧ್ಯ ಮೇಡಂ. ನಿಮ್ಮ ಬೇರೆ ಡೆಪಾಸಿಟ್‌ ಅಕೌಂಟ್‌ ಗಳ ಡೀಟೇಲ್ಸ್ ಬೇಕಾಗಿತ್ತೇ?” ಎಂಬ ಮ್ಯಾನೇಜರ್‌ ಮಾತು ಕೇಳಿ ಸೈಬರ್‌ ಕಳ್ಳರನ್ನು ಹಿಡಿಯಲು ಒಳ್ಳೆಯ ಮಾಹಿತಿ ದೊರಕಿತು ಎಂದು ಒಳಗೊಳಗೇ ಖುಷಿ ಆಯಿತು.

ಸಾರ್ವಜನಿಕರು ಬ್ಯಾಂಕ್‌ ಗಳ ಖಾತಾ ಸಂಖ್ಯೆಯನ್ನು ಹಂಚಿಕೊಳ್ಳದಿದ್ದರೂ ಮೋಸಗಾರರು ಇವನ್ನು ಪಡೆದುಕೊಳ್ಳುವುದರಲ್ಲಿ ನಿಷ್ಣಾತರಾಗಿದ್ದು ಹೇಗೆ ಎಂದು ಪಲ್ಲವಿಯವರಿಗೆ ಈಗ ಅರಿವಿಗೆ ಬಂತು. ಮೊಬೈಲ್ ‌ದೂರವಾಣಿ ಸಂಖ್ಯೆ / ಅಧಾರ್‌ ಸಂಖ್ಯೆ ಅಥವಾ ಆದಾಯ ಇಲಾಖೆ ನೀಡುವ ಪ್ಯಾನ್‌ ಸಂಖ್ಯೆಗಳ ಮುಖಾಂತರ ಬ್ಯಾಂಕುಗಳಲ್ಲಿ ಸಿಬ್ಬಂದಿಗಳಿಗೆ ಅವರ ಎಲ್ಲ ಗ್ರಾಹಕರ ಖಾತಾ ಸಂಖ್ಯೆಯನ್ನು ಹುಡುಕುವ, ಅಷ್ಟೇ ಅಲ್ಲ, ಆಯಾಯ ಬ್ಯಾಂಕ್‌ ಗಳ ಎಲ್ಲ ಶಾಖೆಗಳಲ್ಲಿರುವ ಉಳಿತಾಯ ಖಾತೆ, ಸ್ಥಿರ ಠೇವಣಿ ಮುಂತಾದ ಗ್ರಾಹಕರ ಎಲ್ಲ ಖಾತೆಗಳ ವಿವರಗಳನ್ನು ತಿಳಿದುಕೊಳ್ಳುವ ಆಯ್ಕೆಗಳಿರುವುದು ದಿಗಿಲು ತರಿಸಿತು.

ಅಂದರೆ ಸೈಬರ್‌ ಮೋಸಗಾರರಿಗೆ ಸಾರ್ವಜನಿಕರ ಖಾತೆಯಲ್ಲಿರುವ ಶಿಲ್ಕುಗಳ ವಿವರ ಎಲ್ಲಿಂದ ತಿಳಿಯುತ್ತದೆ ಎಂಬುದು ಸ್ಪಷ್ಟವಾಗಿ ಈಗ ತಿಳಿದು ಬಂತು. ಅಪ್ರಾಮಾಣಿಕರು ಎಲ್ಲ ಸಂಸ್ಥೆಗಳಲ್ಲೂ, ಎಲ್ಲ ಕಾಲದಲ್ಲಿಯೂ ಇದ್ದೇ ಇರುತ್ತಾರೆ. ನಾಲ್ಕು ಕಾಸು ಹೆಚ್ಚಿಗೆ ಸಿಗುತ್ತದೆ ಎಂದಾದರೆ ಬಾಯಿ ಬಿಡುವವರು ಎಲ್ಲ ಕಡೆಯಲ್ಲೂ ಇರುವ ಕಾರಣವೇ ಅಲ್ಲವೇ ಸಮಾಜದಲ್ಲಿ ಇಷ್ಟೆಲ್ಲ ಮೋಸ, ಭ್ರಷ್ಟಾಚಾರಗಳು ನಡೆಯುತ್ತಿರುವುದು ಪಲ್ಲವಿ ಡ್ರೈವರ್‌ ಗೆ ಹೇಳಿ ಜೀಪ್‌ ನ್ನು ಐಜಿಯವರ ಕಛೇರಿ ಕಡೆಗೆ ತಿರುಗಿಸುವಂತೆ ಹೇಳಿದರು. ಪಲ್ಲವಿಯ ಮಾತುಗಳನ್ನು ಆಲಿಸಿದ ಐಜಿಯವರು ಸಾರ್ವಜನಿಕರ ಖಾತೆಗಳ ಗೋಪ್ಯತೆಯನ್ನು ಕಾಪಾಡುವ ದೃಷ್ಟಿಯಿಂದ. ಬ್ಯಾಂಕ್‌ ಗಳಲ್ಲಿ ಈ ರೀತಿ ಎಲ್ಲ ಗ್ರಾಹಕರ ಖಾತೆಗಳನ್ನು ಹುಡುಕುವ ಆಯ್ಕೆ ಅಪಾಯಕಾರಿ ಎಂದು ಕೇಂದ್ರದ ಗೃಹ ಸಚಿವಾಲಯಕ್ಕೆ ವಿವರವಾದ ಅಧಿಕೃತ ಪತ್ರವನ್ನು ಕಳುಹಿಸಿದರು. ಗೃಹ ಸಚಿವಾಲಯದ ಶಿಫಾರಸಿನ ಮೇರೆಗೆ ಹಣಕಾಸಿನ ಸಚಿವಾಲಯ ಈ ಆಯ್ಕೆಯನ್ನು ತೆಗೆದು ಹಾಕುವಂತೆ ಭಾರತೀಯ ರಿಸರ್ವ್ ‌ಬ್ಯಾಂಕಿಗೆ ಆದೇಶ ಹೊರಡಿಸಿತು.

ಸಾರ್ವಜನಿಕರ ದೂರವಾಣಿ ಸಂಖ್ಯೆ/ ಆಧಾರ ಸಂಖ್ಯೆ ಅಥವಾ ಪ್ಯಾನ್‌ ಸಂಖ್ಯೆ ದೊರಕಿದರೂ ಬ್ಯಾಂಕಿನ ಖಾತೆಗಳ ವಿವರ ಇಲ್ಲದಿದ್ದರೆ ವಂಚಕರಿಗೇನು ಮಾಡಲೂ ಸಾಧ್ಯವಾಗದು ಎಂದು ಗೃಹ ಸಚಿವಾಲಯಕ್ಕೂ ಪೊಲೀಸ್‌ ಇಲಾಖೆಗೂ ಸ್ವಲ್ಪ ಮಟ್ಟಿನ ಸಮಾಧಾನ ನೀಡಿತು. ದೂರುದಾರರಿಂದ ವಂಚಕರ ಯಾವ ಯಾವ ಖಾತೆಗಳಿಗೆ ಮೋಸದ ಹಣ ಜಮಾ ಆಗಿದೆ ಎಂದು ಬೇರೆ ಬೇರೆ ಬ್ಯಾಂಕುಗಳ ಮುಖಾಂತರ ತಿಳಿದುಕೊಂಡ ಪಲ್ಲವಿ, ಅಂತಹ ವಂಚಕರ ಅಕೌಂಟ್‌ ಓಪನಿಂಗ್‌ ಫಾರಂನ ಪ್ರತಿಯನ್ನು ತರಿಸಿಕೊಂಡರು. ಅದರಲ್ಲಿ ಇರುವ ಪೂರ್ಣ ವಿಳಾಸ, ಭಾವಚಿತ್ರ ಮುಂತಾದವುಗಳ ಮೂಲಕ ಬೇರೆ ಬೇರೆ ಪೊಲೀಸ್‌ ಠಾಣೆಗಳನ್ನು ಸಂಪರ್ಕಿಸಿದ ಪಲ್ಲವಿಗೆ ಐಜಿಯವರ ಪೂರ್ಣ ಸಹಕಾರ ಸಿಕ್ಕಿದ ಕಾರಣ ಮೂರೇ ವಾರದಲ್ಲಿ ಎಲ್ಲ ವಂಚಕರನ್ನೂ ಹಿಡಿಯಲು ಸಾಧ್ಯವಾಯಿತು.

ಅತ್ಯುತ್ತಮ ಸಲಹೆ ನೀಡಿ ಸೈಬರ್‌ ವಂಚಕರನ್ನು ಹಿಡಿಯಲು ಕಾರಣವಾದ ಇನ್‌ ಸ್ಪೆಕ್ಟರ್‌ ಪಲ್ಲವಿಯವರ ಹೆಸರನ್ನು ರಾಷ್ಟ್ರಪತಿ ಪದಕಕ್ಕಾಗಿ ಶಿಫಾರಸ್ಸು ಮಾಡಲಾಯಿತು.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ