ಯಾವ ರತ್ನಾಳನ್ನು ಮನೆಯವರು ಅನಾಗರಿಕಳು, ಹಳ್ಳಿಗುಗ್ಗು ಎಂದೆಲ್ಲ ಹೀಗಳೆಯುತ್ತಿದ್ದರೋ, ಅದೇ ರತ್ನಾ ಮುಂದೆ ಯಾವ ಚಮತ್ಕಾರ ಮಾಡಿ ಮನೆಯರೆಲ್ಲರ ಮನಗೆದ್ದಳು.....?
ತವರಿನಿಂದ ಇಂದು ವಿಶಾಖಾಳ ಬೀಳ್ಕೊಡುಗೆ ನಡೆಯಲಿತ್ತು. ಅತ್ತೆಮನೆಗೆ ಹೋಗಲಿದ್ದ ಮಗಳ ಪ್ರತಿಯೊಂದು ಬೇಕು ಬೇಡಗಳನ್ನೂ ತವರಿನವರು ತಮ್ಮ ಶಕ್ತಿಗೆ ಅನುಸಾರವಾಗಿ ಬಲು ಪ್ರೀತಿಯಿಂದ ನೆರವೇರಿಸಿದ್ದರು. ಅವಳ ಜೊತೆಗೆ ಕೊಂಡೊಯ್ಯಲು ಧಾರಾಳ ಉಡುಗೊರೆಗಳು ಜೊತೆಗೂಡಿದ್ದವು. ಅಂತೂ ಸಾಂಪ್ರದಾಯಿಕವಾಗಿ ಅವಳು ತವರಿನಿಂದ ಬೀಳ್ಕೊಂಡಳು.
ಅಂತೂ ಅವಳು ಅತ್ತೆ ಮನೆಯಲ್ಲಿ ಗೃಹಪ್ರವೇಶ ನಡೆಸಿ, ಮೊದಲ ದಿನ ಎದುರಿಸುವವಳಿದ್ದಳು. ಆ ಮನೆಯಲ್ಲಿ ಎಲ್ಲೆಲ್ಲೂ ಸಡಗರ, ಸಂಭ್ರಮದ ಗದ್ದಲದ ವಾತಾವರಣ. ಆ ಮನೆಯಲ್ಲಿ ಎಲ್ಲರೂ ಬಹಳ ಖುಷಿಯಾಗಿದ್ದರು. ಎಲ್ಲೆಡೆ ಹರ್ಷೋಲ್ಲಾಸದ ವಾತಾವರಣ ತುಂಬಿ ತುಳುಕಾಡುತ್ತಿತ್ತು.
ವಿಶಾಖಾ ತನ್ನ ಅತ್ತೆಮನೆಯ ಓರಗಿತ್ತಿಯರು, ನಾದಿನಿ, ಮತ್ತಿತರ ಹಿರಿಯ ಹೆಂಗಸರ ನಗು, ಹಾಸ್ಯದ ಕೀಟಲೆಗಳಿಂದ ಕೆಂಪಾಗಿ ಹೋದಳು.
ಅವಳನ್ನು ಕೋಣೆಯಲ್ಲಿ ಕುಳ್ಳಿರಿಸಿ ಅವರೆಲ್ಲ ಹೊರಡುವುದರಲ್ಲಿದ್ದರು. ಅಷ್ಟರಲ್ಲಿ ಅಲ್ಲಿಗೆ ವರುಣ್ ನಿಧಾನವಾಗಿ ನಡೆದು ಬಂದ. ಆಗ ಪಲ್ಲವಿ ಅತ್ತೆ ಬೇಕೆಂದೇ ಅವನ ಕಿವಿ ಹಿಂಡುತ್ತಾ, ``ಓಹೋ....ಹೋ.... ಹೊಸ ಅಳಿಯನಿಗೆ ಎಲ್ಲಿಲ್ಲದ ಅವಸರ..... ಇಡೀ ಜೀವನ ಇಬ್ಬರೂ ಒಟ್ಟಿಗೇ ಕಳೆಯಬಹುದು ತಾನೇ.... ಹೊಸ ಸೊಸೆಗೆ ನಾವು ಒಂದಿಷ್ಟು ಕಿವಿ ಮಾತು ಹೇಳುವಷ್ಟರಲ್ಲಿ ನೀನು ಬಂದೇ ಬಿಡುವುದೇ.....?'' ಎಂದಾಗ ಅಲ್ಲಿದ್ದವರೆಲ್ಲ ಸೂರು ಹಾರುವಂತೆ ಹೋ ಎಂದು ನಕ್ಕರು. ವರುಣ್ ಸಹ ನಾಚಿಕೆಯಿಂದ ತಲೆ ತಗ್ಗಿಸಿದ್ದ.
ವಿಶಾಖಾ ಮಂದಹಾಸ ಬೀರುತ್ತಾ ಎಲ್ಲರ ಕಡೆ ನಿಧಾನವಾಗಿ ನೋಡುತ್ತಿದ್ದಳು. ಎಲ್ಲರ ಮುಖದಲ್ಲೂ ಸಂಭ್ರಮ ಕುಣಿಯುತ್ತಿದ್ದರೆ, ಇವಳ ಅತ್ತೆ ರತ್ನಾಳ ಮುಖದಲ್ಲಿ ಮಾತ್ರ ಏನೋ ಒಂದು ನಿರ್ಲಿಪ್ತ ಭಾವ. ದುಬಾರಿ ಒಡವೆ, ವಸ್ತ್ರ ಧರಿಸಿದ್ದರೂ ಅವಳೇಕೋ ಆ ವಾತಾವರಣದಲ್ಲಿ ಹೊಂದದವಳಂತೆ ವಿಭಿನ್ನವಾಗಿ ಕಂಡುಬಂದಳು.
ವರುಣ್ ವಿಶಾಖಾರ ಮದುವೆಯ ಆರತಕ್ಷತೆ ಅತಿ ಅದ್ಧೂರಿಯಿಂದ ನಡೆದಿತ್ತು. ಅತಿ ದುಬಾರಿ ರೇಷ್ಮೆ ಸೀರೆ, ಹೊಳೆ ಹೊಳೆಯುವ ಆಭರಣಗಳಿಂದ ನವ ವಧು ವಿಶಾಖಾ ಮಿರಿ ಮಿರಿ ಮಿಂಚುತ್ತಿದ್ದಳು. ವರುಣ್ ಸಹ ನೀಲಿ ಸೂಟ್ ನಲ್ಲಿ ಎಲ್ಲರ ಹೊಗಳಿಕೆಗೆ ಪಾತ್ರನಾಗಿದ್ದ.
ಮಾರನೇ ದಿನ ಮಧ್ಯಾಹ್ನ ಊಟದ ನಂತರ ಮದುವೆ ಮನೆಗೆ ಬಂದಿದ್ದ ಅತಿಥಿಗಳೆಲ್ಲ ಒಬ್ಬೊಬ್ಬರೇ ಹೊರಟು ಸಂಜೆ ಹೊತ್ತಿಗೆ ಮನೆ ಖಾಲಿ ಆಗಿತ್ತು. ಈಗ ಮನೆಯಲ್ಲಿ ಉಳಿದವರು ಅಂದ್ರೆ ವಿಶಾಖಾಳ ಅತ್ತೆ ರತ್ನಾ, ಮಾವ ರಾಜೇಶ್, ವರುಣನ ಅಕ್ಕ ಸಂಗೀತಾ ಮಾತ್ರ.
ಅದರ ಮಾರನೇ ದಿನ ವಿಶಾಖಾ ತವರಿಗೆ ಹೋಗಿ ತನ್ನ ಬಟ್ಟೆಬರೆಯ ಸೂಟ್ ಕೇಸ್, ತನ್ನದೇ ಒಂದಿಷ್ಟು ಇತರ ಖಾಸಗಿ ವಸ್ತುಗಳನ್ನು ತರಬೇಕಿತ್ತು. ಬೆಂಗಳೂರಿನಲ್ಲಿಯೇ ಅವಳು ಮದುವೆಯಾಗಿ ತವರಿನ ರಾಜಾಜಿನಗರದಿಂದ ಜಯನಗರದ ಅತ್ತೆ ಮನೆಗೆ ಬಂದಿದ್ದಳಷ್ಟೆ. ಮದುವೆ ಮನೆಗೆ ಅವಳು ತನ್ನೆಲ್ಲ ಸಾಮಗ್ರಿ ಕೊಂಡು ಹೋಗಲು ಸಾಧ್ಯ ಆಗಿರಲಿಲ್ಲ.
ಮದುವೆ ನಂತರ ಮೊದಲ ಸಲ ತವರಿಗೆ ಹೊರಡುತ್ತಿದ್ದಳು. ಹೀಗಾಗಿ ಯಾವ ಸೀರೆ ಉಡಲಿ ಎಂದು ಅತ್ತೆಯನ್ನು ಕೇಳಲು, 2 ಹೊಸ ಸೀರೆ ತೆಗೆದುಕೊಂಡು ಅವರ ಬಳಿ ಹೋದಳು.