ಪತಿಯ ಅಕಾಲಿಕ ಮರಣದ ನಂತರ ಶಾರ್ವರಿ ಆಂತರಿಕವಾಗಿ ಬಹಳ ಕುಗ್ಗಿಹೋಗಿದ್ದಳು. ನಂತರ ಅವಳ ಜೀವನದಲ್ಲಿ ಪ್ರತೀಕ್ ಒಂದು ಆಶಾಕಿರಣವಾಗಿ ಮೂಡಿ ಬಂದಿದ್ದ. ಆದರೆ ಅವನ ಕಾಕದೃಷ್ಟಿ ಅವಳ ಅಪಾರ ಸಂಪತ್ತಿನ ಕಡೆ ಸೀಮಿತವಾಗಿತ್ತೇ……?

ಸುಮಾರು ದಿನಗಳಿಂದ ಅನಾರೋಗ್ಯದಿಂದ ಹೇಗೋ ದಿನ ದೂಡುತ್ತಿದ್ದ ಪತಿ ಅವಿನಾಶ್‌, ಮಾರನೇ ಬೆಳಗ್ಗೆ 8 ಗಂಟೆ ಆದರೂ ಎಚ್ಚರಗೊಳ್ಳದಿದ್ದಾಗ ಶಾರ್ವರಿ ನಿಜಕ್ಕೂ ಬೆಚ್ಚಿಬಿದ್ದಳು. ಅವಳು ಬಂದು ಅವನನ್ನು ಎಬ್ಬಿಸಲು ಯತ್ನಿಸುತ್ತಾ ಹಣೆ ಮುಟ್ಟಿ ನೋಡಿದಳು. ಇಂದು ಅದು ಕೆಂಡದಂತೆ ಸುಡುತ್ತಿತ್ತು. 3-4 ದಿನಗಳಿಂದ ಅವನು ಸತತ ಕೆಮ್ಮುತ್ತಿದ್ದ. ಡಾಕ್ಟರ್‌ ಮನೆಗೇ ಬಂದು ಪರೀಕ್ಷಿಸಿ ಔಷಧಿ ನೀಡಿದ್ದರು. ನಾನು ಆಸ್ಪತ್ರೆ ಸೇರಿ ಅಡ್ಮಿಟ್‌ ಆಗಲಾರೆ ಎಂದು ಅವನು ಹಠ ಹಿಡಿದಿದ್ದ. ಸ್ವಲ್ಪ ಆರಾಮ ಎನಿಸಿದಾಗ ಲ್ಯಾಪ್‌ ಟಾಪ್‌ ಎಳೆದುಕೊಂಡು, ಮನೆಯಿಂದಲೇ ತನ್ನ  ಬಿಸ್‌ ನೆಸ್‌ ಸಂಭಾಳಿಸುತ್ತಿದ್ದ. ಅವನ ಫೋನ್‌ ಕಾಲ್ಸ್ ಅಂತೂ ನಿಲ್ಲುತ್ತಲೇ ಇರಲಿಲ್ಲ. ತಕ್ಷಣ ಅವಳು ಗಂಡನಿಗೆ ಔಷಧಿ ನೀಡಿ, ಹಣೆಗೆ ತಣ್ಣೀರು ಪಟ್ಟಿ ಹಾಕಿ ಬದಲಿಸುತ್ತಿದ್ದಳು.

ಇವರಿಬ್ಬರ ಮದುವೆ ಆಗಿ 2 ವರ್ಷ ಆಗಿರಬಹುದಷ್ಟೆ. ಹಿಂದಿನ ವರ್ಷದವರೆಗೂ ಇವಳ ಅತ್ತೆ ಮಾವ ಇವರ ಜೊತೆ ಬೆಂಗಳೂರಿನಲ್ಲೇ  ಇದ್ದರು. ಆದರೆ ಕೊರೋನಾ ಮಧ್ಯೆ ಶಾರ್ವರಿಯ ಹಿರಿಯ ಓರಗಿತ್ತಿ ಸೀರಿಯಸ್‌ ಆಗಿ ತೀರಿಕೊಂಡಾಗ, ಅವಳ ಅತ್ತೆ ಮಾವ ಬೇರೆ ದಾರಿ ಇಲ್ಲದೆ ಮೈಸೂರಿನ ಹಿರಿ ಮಗನ ಮನೆಗೆ ಹೊರಡಬೇಕಾಯಿತು. ಅಲ್ಲಿ ಆ ಎರಡು ಮೊಮ್ಮಕ್ಕಳ ಜವಾಬ್ದಾರಿ ಅವರ ಮೇಲೇ ಬಂತು.

ಅದಾದ ಮೇಲೆ ಭಾರತದಲ್ಲಿ ಎಲ್ಲೆಡೆ ಕೊರೋನಾದ ಪ್ರಕೋಪ ತೀವ್ರ ಹೆಚ್ಚಿತು. ಬೆಂಗಳೂರಿನ ಎಲ್ಲಾ ಆಸ್ಪತ್ರೆಗಳಲ್ಲೂ ಕೊರೋನಾದ ರೋಗಿಗಳೇ ತುಂಬಿಹೋಗಿದ್ದರು. ಟಿವಿಯ ನ್ಯೂಸ್‌ ನೋಡುತ್ತಿದ್ದಷ್ಟೂ ಇವರ ಆತಂಕ ಹೆಚ್ಚುತ್ತಿತ್ತು. ಒಂದೆಡೆ ವೆಂಟಿವೇಟರ್‌ ಇಲ್ಲ, ಕೆಲವೆಡೆ ಆಕ್ಸಿಜನ್‌ ಸಿಲಿಂಡರ್‌ ಗಳಿಲ್ಲದೆ ರೋಗಿಗಳ ಸಾವಿನ ಸಂಖ್ಯೆ ಮುಗಿಲು ಮುಟ್ಟಿತ್ತು. ಈ ಮಧ್ಯೆ ಅವಿನಾಶ್‌ ಹೀಗೆ ಮಲಗಿದಾಗ ಶಾರ್ವರಿಯ ಜಂಘಾಬಲವೇ ಉಡುಗಿಹೋಗಿತ್ತು.

ಅವಳು ತಕ್ಷಣ ಅಮ್ಮನಿಗೆ ಫೋನ್‌ ಮಾಡಿದಳು, “ಅಮ್ಮ, ಬೆಳಗ್ಗೆಯಿಂದ ಅವವಿಗೆ ಬಹಳ ಜ್ವರ ಹೆಚ್ಚಾಗಿದೆ! ಏನು ಮಾಡಲಿ?”

ಕಾವೇರಮ್ಮ ಸಹ ಕಂಗಾಲಾದರು, “ಯಾಕೋ ಎಲ್ಲಾ ಕಡೆ ಇದೇ ಹಾವಳಿ ಕಣಮ್ಮ. ಇಲ್ಲಿ ನಿನ್ನ ತಮ್ಮ ರಾಜು ಸಹ ಕೊರೋನಾ ಪಾಸಿಟಿವ್ ‌ಆಗಿ ತನ್ನ ಕೋಣೆ ಸೇರಿಬಿಟ್ಟಿದ್ದಾನೆ, ಇಲ್ಲದಿದ್ದರೆ ತಕ್ಷಣ ಅನ್ನ ಕಳಿಸಿಕೊಡ್ತಿದ್ದೆ. ನಮಗೀಗ ಅವನ ಸೇವೆ ಮಾಡೋದೇ ಆಗೋಗಿದೆ. ನೀನು ತಕ್ಷಣ ನಿಮ್ಮ ಫ್ಯಾಮಿಲಿ ಡಾಕ್ಟರ್‌ ನ ಮನೆಗೆ ಕರೆಸಿ, ಅವರ ಸಲಹೆ ಪಡೆದುಕೋ….”

“ಹೌದಮ್ಮ…. ಅತ್ತ ಮೈಸೂರಲ್ಲಿ ನಮ್ಮತ್ತೆಗೂ ಹುಷಾರಿಲ್ವಂತೆ. ಇಲ್ಲಾಂದ್ರೆ ಇವರ ಅಣ್ಣ ಬರ್ತಿದ್ದರು.”

“ಏನೂ ಗಾಬರಿ ಆಗಬೇಡಮ್ಮ. ಸ್ವಲ್ಪ ಧೈರ್ಯದಿಂದ ಇರು…. ಎಲ್ಲಾ ಸರಿಹೋಗುತ್ತದೆ,” ಎಂದು ಕಾವೇರಮ್ಮ ಸಮಾಧಾನ ಹೇಳಿದರು.

ಶಾರ್ವರಿ ತಕ್ಷಣ ಪತಿಗೆ ಕೊರೋನಾ ಟೆಸ್ಟ್ ಮಾಡಿಸಿದಳು….. ಫ್ಯಾಮಿಲಿ ಡಾಕ್ಟರ್‌ ರನ್ನು ಕನ್‌ಸಲ್ಪ್ ಮಾಡಿ, ಅವರ ಸಲಹೆಯಂತೆ ಔಷಧಿ ಮುಂದುವರಿಸಿದ್ದಳು. ಈ ಮಧ್ಯೆ ಅವಿನಾಶ್‌ ಸ್ಥಿತಿ ಮತ್ತಷ್ಟು ಗಂಭೀರ ಆಗತೊಡಗಿತು. ಕೊನೆಗೆ ಅವನನ್ನು ಆಸ್ಪತ್ರೆಗೇ ಕರೆದುಕೊಂಡು ಹೋದಳು.

ಆಸ್ಪತ್ರೆಯಲ್ಲಿ ಎಲ್ಲಿ ನೋಡಿದರೂ ರೋಗಿಗಳ ದಂಡೇ ತುಂಬಿತ್ತು. ಮರಣ ಮೃದಂಗದ ಭೀಕರ ರುದ್ರತಾಂಡವದಿಂದ ಗಾಬರಿಯಾದ ಅವಳು ಹೇಗೋ ಗಂಡನನ್ನು ಅಡ್ಮಿಟ್‌ ಮಾಡಿಸಿದಳು. ಒಮ್ಮೆ ಹೊರಗಿನಿಂದ ಔಷಧಿ ತರಲು, ಮತ್ತೊಮ್ಮೆ ಊಟ ತಿಂಡಿಗೆಂದು ಅವೆದಾಡುತ್ತಲೇ ಇರಬೇಕಾಯಿತು. ಡಾಕ್ಟರ್‌ ಬಂದಾಗೆಲ್ಲ ಅವರ ಚೇಂಬರ್‌ ಗೆ ಹೋಗಿ ವಿಚಾರಿಸಿ, ರಾತ್ರಿ ಹೊತ್ತು ನಿದ್ದೆಗೆಟ್ಟು ಬಹಳ ಸುಸ್ತಾಗಿ ಹೋದಳು.

ಅವಳನ್ನು ಕೊರೋನಾ ವಾರ್ಡ್‌ ಒಳಗೆ ಬಿಡುತ್ತಿರಲಿಲ್ಲ. ಹೊರಗಿನ ರಿಸೆಪ್ಶನ್ನಿನಲ್ಲಿ ಕುಳಿತೇ ಅವಳು ಪತಿಗೆ ಬೇಗ ಗುಣಮುಖವಾಗಲಿ ಎಂದು ದೇವರನ್ನು ಪ್ರಾರ್ಥಿಸುವಳು. ಅತ್ತ ಅವಿನಾಶನ ಸ್ಥಿತಿ ಸುಧಾರಿಸುವ ಬದಲು ದಿನೇದಿನೇ ಬಿಗಡಾಯಿಸುತ್ತಲೇ ಇತ್ತು.

ಆ ದಿನ ಇವಳು ಡಾಕ್ಟರ್‌ ನ್ನು ಭೇಟಿಯಾದಾಗ, ತುಂಬು ಭರವಸೆ ನೀಡಿದ ಅವರು, ಒಂದು ಹೊರೆ ಹೊಸ ಔಷಧಿಗಳನ್ನು ಬರೆದುಕೊಟ್ಟರು. ಹೊರಗಿನಿಂದ ಹೇಗೋ ಅವನ್ನೆಲ್ಲ ತಂದಳು. ಅದರಲ್ಲಿ ಅತಿ ಮುಖ್ಯವಾದದ್ದೇ ಎಲ್ಲೂ ಸಿಗಲಿಲ್ಲ. ಆಸ್ಪತ್ರೆಯಲ್ಲೂ ಅದರ ಸ್ಟಾಕ್‌ ಇರಲಿಲ್ಲ. ಅವಳು ಹತಾಶಳಾಗಿ ತನ್ನ ವಿಧಿಯನ್ನು ಹಳಿಯುತ್ತಾ, ಆಸ್ಪತ್ರೆಯ ಸಾಲು ಬೆಂಚುಗಳಲ್ಲಿ ಒಂದೆಡೆ ಕುಳಿತಳು. ಸ್ವಲ್ಪ ಹೊತ್ತಿಗೆ ಅಲ್ಲಿಗೊಬ್ಬ ಗಡ್ಡಧಾರಿ ಯುವಕ ಬಂದು ಕುಳಿತ. ಅವನು ಬಹಳ ಚಿಂತೆಗೊಂಡಿದ್ದ.

ಅವಳು ಅವನ ಕಡೆ ತನ್ನ ಚೀಟಿ ಚಾಚುತ್ತಾ, “ಈ ಔಷಧಿ ಹತ್ತಿರದಲ್ಲಿ ಎಲ್ಲಾದರೂ ಸಿಗಬಹುದೇ? ನಿಮಗೆ ಏನಾದರೂ ಐಡಿಯಾ ಇದೆಯಾ ನೋಡಿ,” ಎಂದಳು.

“ನಾನೂ ಇದೇ ಔಷಧಿಗಾಗಿ ನಿನ್ನೆಯಿಂದ ಅಲೆದಾಡುತ್ತಿದ್ದೇನೆ. ಹತ್ತಿರದಲ್ಲಿ ಎಲ್ಲೂ ಸಿಗ್ತಿಲ್ಲ. ನನ್ನ ಫ್ರೆಂಡ್‌ ಒಬ್ಬ ದೂರದ ವೈಟ್‌ಫೀಲ್ಡ್ ನಲ್ಲಿ ತನ್ನ ಮೆಡಿಕಲ್ ಸ್ಟೋರ್‌ ನಲ್ಲಿ ಇದು ಲಭ್ಯ ಎಂದು ಹೇಳಿದ. ನಾನೀಗ ಆ ಕಡೆಯೇ ಹೊರಟಿದ್ದೇನೆ. ನಿಮ್ಮ ಚೀಟಿ ನನ್ನ ಹತ್ತಿರವೇ ಇರಲಿ, ನನ್ನದರ ಜೊತೆ ನಿಮಗೂ ಇದನ್ನು ತಂದುಕೊಡ್ತೇನೆ.”

“ನಿಮ್ಮಿಂದ ಬಹಳ ದೊಡ್ಡ ಉಪಕಾರವಾಯಿತು. ಬೆಳಗ್ಗಿನಿಂದ ಇದು ಎಲ್ಲೂ ಸಿಗದೆ ಹುಚ್ಚಳಂತಾಗಿದ್ದೆ….” ಅವಳ ಸ್ವರ ಗದ್ಗದಿತವಾಗಿತ್ತು.

“ಇದರಲ್ಲಿ ಉಪಕಾರದ ಮಾತೇನಿಲ್ಲ. ನನಗಾಗಿ ಹೋಗ್ತಿದ್ದೇನೆ, ಹಾಗೇ ನಿಮಗೂ ತಂದುಕೊಡ್ತೀನಿ ಅಂದೆ. ನಾನು ಅಲ್ಲಿಗೆ ಹೋಗುವಷ್ಟರಲ್ಲಿ ಅಲ್ಲಿ ಸ್ಟಾಕ್‌ ಖಾಲಿ ಆಗಿರಬಾರದು ಅಂತ ಪ್ರಾರ್ಥಿಸಿ…..” ಅವನು ಮೇಲೆದ್ದಾಗ ತಕ್ಷಣ ಅವಳು 500ರ 4 ನೋಟು ನೀಡಲು ಮುಂದಾದಳು.

“ಬೇಡಿ…. ಹಣದ್ದು ಏನೂ ತೊಂದರೆ ಇಲ್ಲ. ಮೊದಲು ಔಷಧಿ ಸಿಗಲಿ, ಆಮೇಲೆ ನೋಡೋಣ. ನನ್ನ ಬಳಿ ಹಣ ಇದೆ, ಚಿಂತಿಸಬೇಡಿ!” ಎನ್ನುತ್ತಾ ಅವನು ಹೊರಟೇಬಿಟ್ಟ.

ಸಂಜೆ ಅವನು ಬಂದಾಗ ಪುಣ್ಯಕ್ಕೆ ಔಷಧಿ ಸಿಕ್ಕಿತ್ತು! ಶಾರ್ವರಿಗೆ ಜೀವದಲ್ಲಿ ಜೀವ ಬಂತು. ಅವನು ತನ್ನಣ್ಣನನ್ನು ಅಲ್ಲಿ ಅಡ್ಮಿಟ್ ಮಾಡಿಸಿದ್ದ. ಹೀಗೆ ಇಬ್ಬರಲ್ಲಿ ಪರಿಚಯ ಬೆಳೆದು, ಆಗಾಗ ಅಲ್ಲೇ ಭೇಟಿ ಆಗಿ ಕಾಫಿಗೂ ಹೋಗಿಬರುತ್ತಿದ್ದರು.

ಇಬ್ಬರದೂ ಒಂದೇ ಸಂಕಟ ಆಗಿತ್ತು. ಗಂಡಸಾದ ಅವನು ಅವಳ ಮುಂದೆ ಅಳುವಂತಿರಲಿಲ್ಲ. ಗಾಬರಿ ಹೆಚ್ಚಾದಾಗೆಲ್ಲ ಅವಳು ಅತ್ತು, ಅದನ್ನು ನಿವಾರಿಸಿಕೊಳ್ಳುತ್ತಿದ್ದಳು. ಇತ್ತೀಚೆಗೆ ಅವಳು ಪ್ರತೀಕನ ಭುಜಕ್ಕೊರಗಿ ಅಳುವಷ್ಟು ಅವರಿಬ್ಬರಲ್ಲಿ ಆತ್ಮೀಯತೆ ಬೆಳೆದಿತ್ತು. ಅವನು ಅವಳ ಬೆನ್ನು ತಟ್ಟಿ ಬಹಳ ಸಮಾಧಾನಪಡಿಸುತ್ತಿದ್ದ. ಈಗೆಲ್ಲ ಅವಳಿಗೆ ಬೇಕಾದ ಎಲ್ಲಾ ಔಷಧಿ ಸಾಮಗ್ರಿ ಪ್ರತೀಕ್‌ ತಾನೇ ತಂದುಕೊಡುತ್ತಿದ್ದ, ರಾತ್ರಿ ಅವಳನ್ನು ಮನೆಯಲ್ಲಿ ಡ್ರಾಪ್‌ ಮಾಡಿ ನಂತರ, ತಾನು ಹೊರಡುತ್ತಿದ್ದ.

ಹೀಗೆ ಕಡು ಕಷ್ಟದ ದಿನಗಳ ಮಧ್ಯೆ ಈ ಇಬ್ಬರು ಅಪರಿಚಿತರು ನಿಕಟವಾಗ ತೊಡಗಿದರು. ಅವರಿಬ್ಬರ ನಡುವೆ ಹೇಳಿಕೊಳ್ಳಲಾಗದ ಒಂದು ಬಾಂಧವ್ಯ ಏರ್ಪಟ್ಟಿತ್ತು. ಅವರಿಬ್ಬರಿಗೂ ಅದು ಪ್ರಿಯವಾಗಿತ್ತು.

ಒಂದು ದಿನ ಅವಿನಾಶ್‌ ನ ಆಕ್ಸಿಜನ್‌ ಲೆವೆಲ್ ‌ಬಹಳ ಏರುಪೇರಾಯಿತು. ಆ ದಿನ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಸಿಲಿಂಡರ್‌ ಸ್ಟಾಕ್ ಮುಗಿದಿತ್ತು. ಆಗ ಪ್ರತೀಕ್‌ ತಾನೇ ಆ ಜವಾಬ್ದಾರಿ ಹೊತ್ತು, ಇಡೀ ದಿನ ಹೊರಗಿನ ಬಿಸಿಲಲ್ಲಿ ಓಡಾಡಿ ಸಂಜೆ ಹೊತ್ತಿಗೆ ಹೇಗೋ ಒಂದು ಸಿಲಿಂಡರ್‌ ನೊಂದಿಗೆ ಹಾಜರಾಗಿದ್ದ.

ಆ ದಿನ ಗದ್ಗದಿತಳಾಗಿ ಅವಳು ಹೇಳಿದಳು, “ಪ್ರತೀಕ್‌, ಯಾವ ಜನ್ಮದ ಋಣಾನುಬಂಧವೋ ಏನೋ…. ನೀನು ಎಲ್ಲಾ ವಿಷಯದಲ್ಲೂ ನನಗೆ ಸಹಾಯ ಮಾಡುತ್ತಿರುವೆ. ನಿನಗಾಗಿ ನಾನು ಏನೂ ಮಾಡುತ್ತಿಲ್ಲ. ನನ್ನ ಬಗ್ಗೆ ಕಾಳಜಿ, ಅಕ್ಕರೆ…. ಇದೆಲ್ಲ ಹೇಗೆ? ನಾನು ನಿನಗೆ ಏನೂ ಅಲ್ಲ….. ಬರಿಯ ಫ್ರೆಂಡ್‌ ಮಾತ್ರ! ಮತ್ತೆ ಇಷ್ಟೆಲ್ಲ ಕಷ್ಟಪಡುತ್ತಿರುವ ನಿನ್ನ ಋಣ ನಾನು ಹೇಗೆ ತಾನೇ ತೀರಿಸಬಲ್ಲೆ…..?”

“ಶಾರ್ವರಿ, ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಲೇಬೇಕು ಅಂತೇನಿಲ್ಲ. ನಾವಿಬ್ಬರೂ ಏನೂ ಅಲ್ಲದಿದ್ದರೂ ಫ್ರೆಂಡ್ಸ್ ಅಂತ ನೀನೇ ಹೇಳಿದ್ದಿ…. ಅಷ್ಟು ಸಾಕು, ಸಮಾನಾಂತರ ದುಃಖಿಗಳು, ಅದನ್ನೇ ಹಂಚಿಕೊಳ್ಳುತ್ತಿದ್ದೇವೆ. ನಿನ್ನ ನೋವಿಗೆ ನಾನು ಏನು ತಾನೇ ಮಾಡಬಲ್ಲೆ? ನನ್ನ ಕೈಲಾದ ಸಹಾಯ ಮಾಡಿ, ಕೊಂಚವಾದರೂ ನಿನ್ನ ಟೆನ್ಶನ್‌ ಕಳೆಯೋಣ ಅಂತ….. ಅಷ್ಟೇ!”

ಅಂಥ ಸಂದಿಗ್ಧದ ಪರಿಸ್ಥಿತಿಯಲ್ಲೂ ಅವಳ ಮನಸ್ಸಿಗೆ ಇವನ ಮಾತುಗಳಿಂದ ಒಂದಿಷ್ಟು ಸಮಾಧಾನ ಎನಿಸಿತು. ಕ್ರಮೇಣ ಅವಿನಾಶ್‌ ನ ಸ್ಥಿತಿ ಮತ್ತಷ್ಟು ಬಿಗಡಾಯಿಸತೊಡಗಿತು. ಮರುದಿನ ಅವನಿಗೆ ವೆಂಟಿಲೇಟರ್‌ ಅನಿವಾರ್ಯವಾಯಿತು. ಆಸ್ಪತ್ರೆಯಲ್ಲಿ ಅದಕ್ಕೂ ಕೊರತೆ ಉಂಟಾಗಿತ್ತು. ಎಷ್ಟೋ ವೆಂಟಿಲೇಟರ್‌ ಗಳು ಕೆಟ್ಟಿದ್ದವು. ಆಗ ಆಸ್ಪತ್ರೆಯ ಪ್ರಬಂಧಕರು, ಇಲ್ಲಿನ ಬಹುತೇಕ ರೋಗಿಗಳನ್ನು ಇನ್ನೂ ಉತ್ತಮ ಸೌಲಭ್ಯಗಳಿದ್ದ ಆಸ್ಪತ್ರೆಗೆ ಸ್ಥಳಾಂತರಿಸಿದರು. ವಿಷಯ ತಿಳಿದ ತಕ್ಷಣ ಅವಳು ಪ್ರತೀಕನಿಗೆ ಫೋನ್‌ ಮಾಡಿದಳು. ಅವನಣ್ಣ ಪ್ರಭಾಕರನನ್ನೂ ಬೇರೆಡೆಗೆ ಅನಿವಾರ್ಯವಾಗಿ ಶಿಫ್ಟ್ ಮಾಡಬೇಕಾದ ಪರಿಸ್ಥಿತಿ ಎದುರಾಗಿತ್ತು.

“ನೀನು ಚಿಂತಿಸಬೇಡ ಶಾರ್ವರಿ, ನನ್ನ ಅಣ್ಣನನ್ನು ಶಿಫ್ಟ್ ಮಾಡಿದ ಕಡೆಯೇ ನಿನ್ನ ಪತಿಯನ್ನೂ ಶಿಫ್ಟ್ ಮಾಡಬೇಕೆಂದು ಸೀನಿಯರ್‌ ಡೀನ್‌ ಬಳಿ ಮಾತನಾಡುತ್ತೇನೆ. ಇಲ್ಲಿಗಿಂತ ಅಲ್ಲಿ ಸಿಲಿಂಡರ್ಸ್‌ವೆಂಟಿಲೇಟರ್ಸ್‌ ಸೌಲಭ್ಯ ಚೆನ್ನಾಗಿದೆಯಂತೆ,” ಇವಳಿಗೆ ಧೈರ್ಯ ತುಂಬಿದ ಪ್ರತೀಕ್‌, ಹೇಳಿದಂತೆಯೇ ಹಿರಿಯ ವೈದ್ಯರ ಅನುಮತಿ ದೊರಕಿಸಿಕೊಂಡು ಇಬ್ಬರನ್ನೂ ಶಿಫ್ಟ್ ಮಾಡಿಸುವ ಎಲ್ಲಾ ಪ್ರಯತ್ನ ಕೈಗೊಂಡ.

ಅಂದು ಸಂಜೆ ಹೊತ್ತಿಗೆ ಇಬ್ಬರು ರೋಗಿಗಳೂ ಹೊಸ ಆಸ್ಪತ್ರೆಯಲ್ಲಿ ಸೆಟಲ್ ಆಗಿದ್ದರು. “ನಿಜ ಹೇಳ್ತೀನಿ ಪ್ರತೀಕ್‌, ನೀನು ಇಲ್ಲದಿದ್ದರೆ ನನಗೆ ಇಷ್ಟು ಹೊತ್ತಿಗೆ ಹುಚ್ಚು ಹಿಡಿಯುತ್ತಿತ್ತು……”

“ನಾನು ಅಲ್ಲದಿದ್ದರೆ ಯಾರೋ ಒಬ್ಬರು ಸಹಾಯ ಮಾಡೇ ಮಾಡ್ತಿದ್ದರು ಬಿಡು. ಈ ಕಾಲದಲ್ಲೂ ಮಾನವೀಯತೆ ಸಂಪೂರ್ಣ ಬತ್ತಿಲ್ಲ ಎಂದೇ ಹೇಳುತ್ತೇನೆ.”

“ಹಾಗಲ್ಲ ಪ್ರತೀಕ್‌…. ನನ್ನ ಪರಿಚಿತರು, ಫ್ರೆಂಡ್ಸ್ ಎಲ್ಲರನ್ನೂ ಗಮನಿಸಿದ್ದೇನೆ. ಅವರವರ ಲೋಕದಲ್ಲಿ ಮಗ್ನರಾಗಿರುತ್ತಾರೆ. ಯಾರನ್ನೂ ನಾವು ಆಕ್ಷೇಪಿಸುವ ಹಾಗಿಲ್ಲ. ಆದರೆ ನೀನಂತೂ ನನ್ನ ಪಾಲಿನ ಗಾಡ್‌ ಫಾದರ್‌ ಆಗಿದ್ದಿ,” ಎಂದು ಅವನಿಗೆ ಕೈ ಮುಗಿದಳು.

2-3 ವಾರಗಳ ಹಿಂದೆ ಅಪರಿಚಿತರಾಗಿದ್ದ ಅವರು ಈಗ ಬಹಳ ಹತ್ತಿರದ ನಂಟಿನವರಾಗಿದ್ದರು. ಅವನ ಸಹಾಯವಿಲ್ಲದೆ ಅವಳು ಒಂದು ಹೆಜ್ಜೆ ಮುಂದಿಡುವಂತಿರಲಿಲ್ಲ. ಅವನು ಇಲ್ಲದೆ ಅವಳು ಮುಂದೆ ಏನು ಮಾಡುತ್ತಾಳೋ ಏನೋ…..?

ಇವಳ ವಿಚಿತ್ರ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಪ್ರತೀಕ್‌ ಅವಳತ್ತ ಒಂದು ಪ್ರತ್ಯೇಕ ನೋಟ ಬೀರಿದ. ನಸುನಗುತ್ತಾ ಅಲ್ಲಿಂದ ಸರಿದುಹೋದ. ಅತ್ತ ಅವಳಿಗೂ ವಿಚಿತ್ರ ಅನುಭೂತಿ ಉಂಟಾಗಿತ್ತು. ತನ್ನ ಅರಿವಿಲ್ಲದೇ ಅವಳು ಎಷ್ಟೋ ಮಾತು ಆಡಿಬಿಟ್ಟಿದ್ದಳು. ಪ್ರತೀಕ್‌ ಒಬ್ಬ ಈ ಸಂದರ್ಭದಲ್ಲಿ ತನ್ನ ನೆರವಿಗೆ ಇಲ್ಲದಿದ್ದರೆ, ತಾನು ತರಗೆಲೆಯಂತೆ ತತ್ತರಿಸಿ ಹೋಗುತ್ತಿದ್ದೆ ಎಂದು ಅಂಜುತ್ತಿದ್ದಳು. ಆ ಆಸ್ಪತ್ರೆಯ ಬೆಂಗಾಡಿನ ನಡುವೆ ಪ್ರತೀಕ್‌ ಅವಳಿಗೊಂದು ಓಯಸಿಸ್‌ ಆಗಿದ್ದ!

ಹೀಗೆ ಮತ್ತೆ 4 ದಿನ ಕಳೆಯಿತು. ಅವಿನಾಶ್‌ ನ ಸ್ಥಿತಿ ಮತ್ತಷ್ಟು ಸೀರಿಯಸ್‌ ಆಯಿತು. ಅದರ ಮುಂದಿನ ವಾರ ಅವಳು ಆಸ್ಪತ್ರೆ ತಲುಪಿದಾಗ, ಅವಿನಾಶ್‌ ತೀರಿಕೊಂಡ ಸುದ್ದಿ ಸಿಕ್ಕಿತು. ಅವಳು ಅಲ್ಲೇ ಕುಸಿದುಬಿದ್ದಳು. ಒಂದು ಕ್ಷಣದಲ್ಲಿ ತಾನು ಎಲ್ಲವನ್ನೂ ಕಳೆದುಕೊಂಡು ಬಟಾಬಯಲಲ್ಲಿ ಒಬ್ಬಂಟಿಯಾಗಿ ನಿಂತಂತೆ ಅನಿಸಿತು. ಅವಳ ಪಾಲಿಗೆ ಈಗ ಏನೂ ಉಳಿದಿರಲಿಲ್ಲ.

ಪ್ರತೀಕ್‌ ತನ್ನ ಕೈ ಮೀರಿ ಅವಳಿಗೆ ಸಾಂತ್ವನ ಹೇಳಿದ. ಕೊರೋನಾ ಕಾರಣ ಅವಳು ಪತಿಯ ಶವವನ್ನು ಮನೆಗೆ ಕೊಂಡುಹೋಗುವ ಹಾಗಿರಲಿಲ್ಲ. ಅಷ್ಟಲ್ಲದೆ ಲಾಕ್‌ ಡೌನ್‌ ಕಾಟ ಇತ್ತು. ಅವಳ ತವರು, ಅತ್ತೆ ಮನೆಯವರು ಬರುವುದೂ ದುಸ್ತರವಾಗಿತ್ತು. ತನ್ನ ಪತಿಯ ಅಂತಿಮ ವಿದಾಯ ಹೇಗೆ ಮಾಡಲಿ  ಎಂದು ಅವಳು ತಲೆ ಮೇಲೆ ಕೈ ಹೊತ್ತು ಕುಳಿತಳು.

ಈಗಲೂ ಪ್ರತೀಕನೇ ಅವಳ ಸಹಾಯಕ್ಕೆ ಧಾವಿಸಬೇಕಾಯಿತು. ಅತಿ ಕಷ್ಟದ ಆ ಕ್ಷಣಗಳಲ್ಲಿ ಮೊದಲು ಅವನು ಅವಳನ್ನು ಶಾಂತಗೊಳಿಸಿದ. ನಂತರ ಅವಳ ಪತಿಯ ದಹನ ಸಂಸ್ಕಾರಕ್ಕೆ ಏರ್ಪಾಡು ಮಾಡಿದ. ಅದನ್ನು ಮುಗಿಸಿ ಅವರು ಮಾತಿಲ್ಲದೆ ಅವಳ ಮನೆಗೆ ಬಂದರು. ಶಾರ್ವರಿಯ ಅಳುವಿಗೆ ಕೊನೆಯೇ ಇರಲಿಲ್ಲ. ಅವಳ ಕೈಕಾಲು ನಡುಗುತ್ತಿತ್ತು. ಹೀಗೇ ಬಿಟ್ಟರೆ ಇವಳಿಗೂ ಗಂಭೀರ ರೋಗ ತಗುಲೀತು ಎಂದು ಪ್ರತೀಕ್‌ ಗಾಬರಿಗೊಂಡ. ಒಬ್ಬಂಟಿಯಾದ ಅವಳು ತನ್ನ ಆಹಾರದ ಕಡೆ ನಿರ್ಲಕ್ಷ್ಯ ತೋರುತ್ತಾಳೆ ಎನಿಸಿತು. ಮುಂದೆ ಹೇಗೋ…. ಏನೋ…..?

ಅವಳನ್ನು ಹಾಲ್ ನ ಸೋಫಾದಲ್ಲಿ ಮಲಗಿಸಿ, ಕೈಕಾಲು ತೊಳೆದು, ತಾನೇ ಅಡುಗೆಮನೆಗೆ ಹೋದ. ಫ್ರಿಜ್‌ ನಲ್ಲಿದ್ದ ಹಾಲಿನಿಂದ ಬಿಸಿ ಬಿಸಿ ಟೀ ತಯಾರಿಸಿದ. ಇಬ್ಬರೂ ಮೌನವಾಗಿ ಟೀ ಕುಡಿದರು. ಅವಳನ್ನು ಸ್ನಾನಕ್ಕೆ ಕಳುಹಿಸಿ, ಊಟಕ್ಕೆ ಆರ್ಡರ್‌ ಮಾಡಿದ. ನಂತರ ತಾನೂ ಸ್ನಾನ ಮುಗಿಸಿ, ಅವಳ ಸಲಹೆಯಂತೆ ಅವಿನಾಶ್‌ ನ ಬಟ್ಟೆಗಳಲ್ಲಿ ಇರುವುದರಲ್ಲಿಯೇ ತುಸು ಹೊಂದುವಂಥದ್ದನ್ನು ಆರಿಸಿಕೊಂಡ. ಊಟ ಬಂದ ನಂತರ ಬಲವಂತವಾಗಿ ಅವಳನ್ನು ಊಟಕ್ಕೆ ಎಬ್ಬಿಸಿದ. ನಂತರ ಹತ್ತಿರದ ಅಂಗಡಿಯಿಂದ ರಾತ್ರಿ ಅವಳಿಗೆ ಬ್ರೆಡ್ಡು, ಹಾಲು, ಹಣ್ಣು ಮುಂತಾದವನ್ನು ತಂದಿರಿಸಿ, ಮತ್ತೆ ಮತ್ತೆ ಸಮಾಧಾನ ಹೇಳಿ ಹೊರಟುಬಿಟ್ಟ.

2-3 ದಿನಗಳ ನಂತರ ಶಾರ್ವರಿ ತುಸು ಚೇತರಿಸಿಕೊಂಡಳು. ಅಗತ್ಯದವರಿಗೆಲ್ಲ ವಿಷಯ ತಿಳಿಸಿದ್ದಾಯಿತು. ಆ ಆಲೋಚನೆ ಬದಿಗೆ ಸರಿಸಿದಾಗ ಅವಳಿಗೆ ಹೊಳೆದದ್ದೇ ಪ್ರತೀಕನ ಹೆಸರು. ಪ್ರತೀಕ್‌ ಇದೀಗ ಅವಳಿಗೆ ಎಲ್ಲರಿಗಿಂತ ಬಲು ಆತ್ಮೀಯ, ಪರಮ ಹಿತೈಷಿ ಎನಿಸಿತ್ತು.

ಅವನು ಎಲ್ಲಿದ್ದಾನೆ, ಎಲ್ಲಿ ಕೆಲಸ ಮಾಡುತ್ತಿದ್ದಾನೆ….. ಇತ್ಯಾದಿ ಅವನ ಬಗ್ಗೆ ಏನೂ ಗೊತ್ತಿರಲಿಲ್ಲ. ಫೋನ್‌ ನಂಬರ್‌ ಒಂದು ಗೊತ್ತಿತ್ತಷ್ಟೇ. ಅದಕ್ಕೇ ಕಾಲ್ ‌ಮಾಡಿದಳು. ಆದರೆ ಫೋನ್‌ ಸ್ವಿಚ್‌ ಆಫ್‌ ಆಗಿತ್ತು. ಅವಳ ಬಳಿ ಅವನ ಬೇರಾವ ಸಂಪರ್ಕವೂ ಇರಲಿಲ್ಲ, ವಿಳಾಸ ಮೊದಲೇ ಗೊತ್ತಿರಲಿಲ್ಲ. ಅವಳು ಅರ್ಧರ್ಧ ಗಂಟೆಗೆ ಹಲವು ಸಲ ಪ್ರಯತ್ನಿಸಿದರೂ ಆ ನಂಬರ್‌ ಸ್ವಿಚ್‌ ಆಫ್ ಎಂದೇ ಬರುತ್ತಿತ್ತು.

ಹೀಗೇ ಯೋಚಿಸುತ್ತಾ ಅವಳು ಮಾರನೇ ದಿನ ಅದೇ ಆಸ್ಪತ್ರೆ ತಲುಪಿದಳು. ಅಲ್ಲಿ ಅವಳ ಪತಿ, ಪ್ರತೀಕನ ಅಣ್ಣ ಅಡ್ಮಿಟ್‌ ಆಗಿದ್ದರು. ಅವಳು ತನಗೆ ಪರಿಚಯವಿದ್ದ ಆಸ್ಪತ್ರೆ ಕಾರಿಡಾರ್‌, ಮತ್ತಿತರ ಜಾಗಗಳಲ್ಲಿ ಅವನಿಗಾಗಿ ಹುಡುಕಾಡಿದಳು. ಅಲ್ಲಿಂದ ಹಾಗೇ ಹುಡುಕುತ್ತಾ ಕ್ಯಾಂಟೀನ್‌ ಕಡೆ ಬಂದಳು.

ಎಲ್ಲಾ ಕಡೆ ಹುಡುಕಾಡಿದರೂ ಅವನ ಸುಳಿವು ಮಾತ್ರ ಸಿಗಲೇ ಇಲ್ಲ. ಹಾಗೇ ಅವಳು ಮತ್ತೆ ರಿಸೆಪ್ಶನ್‌ ಕೌಂಟರ್‌ ಕಡೆಗೆ ಬಂದಳು. ಮುಂದೆ ತಾನು ಅವನನ್ನು ಭೇಟಿ ಆಗುತ್ತೇನೋ ಇಲ್ಲವೋ ಎನಿಸಿಬಿಟ್ಟಿತು.

ಆಗ ಅವಳಿಗೆ ಸಿಸ್ಟರ್‌ ನಿವೇದಿತಾ ಕಾಣಿಸಿದರು. ಇವರಿಬ್ಬರಿಗೆ ಆಕೆ ಪರಿಚಿತ ನರ್ಸ್‌. ಆ ವಾರ್ಡ್‌ ಪೂರ್ತಿ ಆಕೆಯ ಸುಪರ್ದಿನಲ್ಲಿತ್ತು. ಸಿಸ್ಟರ್‌ ನಿವೇದಿತಾ ಅಲ್ಲಿ ಬಹಳ ಒಳ್ಳೆಯ ಹೆಸರು ಗಳಿಸಿದ್ದರು.

ಇವಳನ್ನು ಕಂಡು ಆಕೆ ಗದ್ಗದಿತರಾಗಿ, “ಸಾರಿ ಶಾರ್ವರಿ…. ನಿನ್ನ ಪತಿಯನ್ನು ಉಳಿಸಿ ಕೊಡಲಾಗಲಿಲ್ಲ,” ಎಂದರು.

“ನಾನು ಪಡೆದು ಬಂದದ್ದೇ ಅಷ್ಟು ಸಿಸ್ಟರ್‌….. ನಿಮಗೆ ಪ್ರತೀಕ್‌ ಗೊತ್ತು ತಾನೇ? ಸದಾ ನನ್ನ ಜೊತೆ ಓಡಾಡುತ್ತಾ ಇದ್ನಲ್ಲ…. ಅವನೇ! ಈಗ ಅವರಣ್ಣ ಹೋಗಿದ್ದಾರೆ? ಅವನನ್ನು ಇತ್ತೀಚೆಗೆ ನೋಡಿದ್ರಾ?”

“ಹೌದು ಶಾರ್ವರಿ…. ಅವನ ಅಣ್ಣನೂ ತೀರಿಕೊಂಡರು. ಅವನೀಗ ಕೊರೋನಾ ಪೀಡಿತನಾಗಿ ತಾನೇ ಇಲ್ಲಿ ಅಡ್ಮಿಟ್‌ ಆಗಿದ್ದಾನೆ. ಅವನು ನಿನ್ನ ಪತಿಯಿದ್ದ ಕೋಣೆಯಲ್ಲೇ ಇದ್ದಾನೆ….. ವಾರ್ಡ್‌ ಮಾತ್ರ ಬೇರೆ, ಬೆಡ್‌ ನಂ.125!”

“ನೀವು…. ನೀವು…. ಹೇಳ್ತಾ ಇರೋದು ನಿಜಾನಾ? ನಾನು ಹೇಳಿದ ಪ್ರತೀಕ್‌ ನಿಮಗೆ ಗುರುತು ಸಿಕ್ಕಿತು ತಾನೇ?”

“ಹೌದಮ್ಮ, ಚೆನ್ನಾಗಿಯೇ ಗೊತ್ತು. ಇಲ್ಲಿಯೂ ನಾನೇ ಅವನನ್ನು ಗಮನಿಸಿ ಕೊಳ್ಳುತ್ತಿದ್ದೇನೆ. ನಿನಗೆ ಅವನು ಬಹಳ ಸಹಾಯ ಮಾಡುತ್ತಿದ್ದನಲ್ಲವೇ? ಅದೇ ಪ್ರತೀಕ್‌! ಆದರೆ ಈಗ ಅವನಿಗೆ ಸಹಾಯ ಮಾಡುವವರೇ ಇಲ್ಲದೆ ಒಬ್ಬಂಟಿ ಆಗಿಹೋಗಿದ್ದಾನೆ…..”

“ಅಯ್ಯೋ…. ನಾನಿದ್ದೀನಲ್ಲ ಸಿಸ್ಟರ್‌? ನನ್ನಿಂದ ಏನೇ ಸಹಾಯ ಬೇಕಾದರೂ ಕೂಡಲೇ ಕರೆಯಿರಿ. ನನ್ನನ್ನು ಈಗ ಅವನ ವಾರ್ಡ್‌ ಬಳಿ ಬಿಡಲಾರರು….. ಅಲ್ಲವೇ? ಅವನ ಅಟೆಂಡೆಂಟ್‌ ನಾನು ಎಂದು ಈಗಲೇ ರಿಸೆಪ್ಶನ್ನಿನಲ್ಲಿ ಹೇಳಿ ಕಾರ್ಡ್‌ಮಾಡಿಸುತ್ತೇನೆ……” ಎಂದು ಬಿಕ್ಕಳಿಸಿದಳು.

“ಸರಿ ಕಣಮ್ಮ, ನೀನು ಅಳಬೇಡ. ನಾನೀಗಲೇ ಒಳಗೆ ಹೋಗಿ ಅವನಿಗೆ ವಿಷಯ ತಿಳಿಸುತ್ತೇನೆ. ತನಗೆ ಯಾರೂ ಇಲ್ಲ ಎಂದು ಕೊರಗುತ್ತಿದ್ದ ಅವನಿಗೆ ಈಗ ನೀನೇ ದೇವತೆಯಂತೆ ಬಂದಿದ್ದೀಯ,” ಎಂದು ಸಿಸ್ಟರ್‌ ನಿವೇದಿತಾ ಒಳ ನಡೆದರು.

ಅದಾದ ಮೇಲೆ ಶಾರ್ವರಿ ಪ್ರತೀಕನ ಸೇವೆಗೆ ಟೊಂಕ ಕಟ್ಟಿ ನಿಂತಳು. ಅವನಿಗಾಗಿ ಮನೆಯಲ್ಲೇ ತಯಾರಿಸಿದ ಕಾಫಿ ತಿಂಡಿ, ಊಟ, ಹಣ್ಣು, ಡಾಕ್ಟರ್‌ ಕಾಲಾನುಕಾಲಕ್ಕೆ ಹೇಳುತ್ತಿದ್ದ ಔಷಧಿ…. ಇತ್ಯಾದಿ ಎಲ್ಲವನ್ನೂ ಒದಗಿಸುತ್ತಿದ್ದಳು. ಪ್ರತೀಕನ ಪ್ರತಿ ಜವಾಬ್ದಾರಿಯನ್ನೂ ತಾನೇ ಹೊತ್ತಳು. ಡಾಕ್ಟರ್‌ ಬಿಡುವಾಗಿ ಸಿಕ್ಕಿದಾಗೆಲ್ಲ ಪ್ರತೀಕನ ಆರೋಗ್ಯದ ಬಗ್ಗೆ ಕಳಕಳಿಯಿಂದ ವಿಚಾರಿಸುತ್ತಿದ್ದಳು. ಬಲು ಉತ್ಸಾಹದಿಂದ ವೈದ್ಯರ ಸಲಹೆ ಪಾಲಿಸುತ್ತಿದ್ದಳು. ಈ ಮಧ್ಯೆ ಪ್ರತೀಕನ ಆರೋಗ್ಯ ಬಿಗಡಾಯಿಸಿ ಅವನನ್ನು ಐಸಿಯು ವಾರ್ಡಿಗೆ ಶಿಫ್ಟ್ ಮಾಡಿದರು.

ಅದಕ್ಕಾಗಿ ಆಸ್ಪತ್ರೆಯ ಮ್ಯಾನೇಜ್‌ ಮೆಂಟ್‌ ನವರು ಫಾರ್ಮಾಲಿಟೀಸ್‌ ಗಾಗಿ, ಅವಳ ಮುಂದೆ ಒಂದು ಫಾರ್ಮ್ ಇಟ್ಟು, ತುಂಬಿಸಲು ಹೇಳಿದರು. ರೋಗಿ ಜೊತೆ ಸಂಬಂಧ…. ಎಂದಿದ್ದ ಕಡೆ ತುಸು ಯೋಚಿಸಿ  `ಪತ್ನಿ’ ಎಂದು ಬರೆದೇಬಿಟ್ಟಳು! ತಾನು ಮಾಡಿದ್ದು ಸರಿಯೇ ಎಂದು ವಿಮರ್ಶಿಸಿಕೊಂಡಾಗ, ಇದಕ್ಕಿಂತ ಬೇರೆ ಹೇಗೆ ಬರೆದರೂ ಅದು ಸರಿಹೋಗದು ಎಂದೇ ಅವಳ ಅಂತರಾತ್ಮ ನುಡಿಯಿತು. ಅದನ್ನು ಸಂಬಂಧಿಸಿದ ವೈದ್ಯರಿಗೆ ನೀಡಿ, ಅವರ ನಿರೀಕ್ಷೆಯಲ್ಲೇ ಅವಳು ಕಾಯತೊಡಗಿದಳು.

2-3 ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದ ಪ್ರತೀಕನ ಆರೋಗ್ಯ ಸಾಕಷ್ಟು ಸುಧಾರಿಸಿತು. ಹಾಗಾಗಿ ಅವನನ್ನು ಮತ್ತೆ ನಾರ್ಮಲ್ ಕೋವಿಡ್‌ ವಾರ್ಡ್‌ ಗೆ ವರ್ಗಾಯಿಸಿದರು. ಅದಾಗಿ 2 ವಾರಕ್ಕೆ ಅವನ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಾಣಿಸಿಕೊಂಡು, ರಿಪೋರ್ಟ್‌ ನೆಗೆಟಿವ್ ‌ಬಂದಾಗ, ಆಸ್ಪತ್ರೆಯಿಂದ ಡಿಸ್‌ ಚಾರ್ಜ್‌ ಮಾಡಲಾಯಿತು. ಅಷ್ಟು ದಿನಗಳ ಕಾಲ ಶಾರ್ವರಿ ತನ್ನ ಅನ್ನಾಹಾರ, ವಿಶ್ರಾಂತಿ ನಿದ್ದೆಗಳ ಚಿಂತೆ ಮರೆತು ಸತತ ಅವನ ಸೇವೆಗೆ ತೊಡಗಿದ್ದಳು.

ಡಿಸ್‌ ಚಾರ್ಜ್‌ ದಿನ ಅವಳು ಬಹಳ ಖುಷಿಯಲ್ಲಿದ್ದಳು. ಅವಳು ತನ್ನ ಮನೆಗೇ ಪ್ರತೀಕನನ್ನು ಕರೆದುಕೊಂಡು ಹೋಗಲೆಂದು ಕ್ಯಾಬ್ ಬುಕ್‌ ಮಾಡಿದಳು. ಅವರು ಸೀದಾ ಅಲ್ಲಿಂದ ಅವಳ ಮನೆಗೇ ಹೊರಟರು.

ಪ್ರತೀಕನಿಗೆ ತುಸು ಸಂಕೋಚವೆನಿಸಿತು. ತನ್ನ ಮನೆಗೇ ಹೋಗೋಣ ಎಂದು ಆಗ್ರಹಪಡಿಸಿದ. ಅವನ ಮೂಡ್‌ ಸರಿಪಡಿಸಲೆಂದು ಅವಳು ತುಸು ಕೀಟಲೆಯ ದನಿಯಲ್ಲಿ, “ಆಸ್ಪತ್ರೆ ಅಡ್ಮಿಟ್‌ ಫಾರ್ಮ್ ನಲ್ಲಿ ಒಂದು ಕಡೆ ನಾನು ನಿನ್ನ ಪತ್ನಿ ಎಂದೇ ಬರೆದು ಸೈನ್ ಮಾಡಿ ಕೊಟ್ಟಿದ್ದೇನೆ. ಹೀಗಾಗಿ ಇನ್ನು ಮುಂದೆ ನನ್ನ ನಿನ್ನ ಮನೆ ಬೇರೆ ಬೇರೆ ಅಲ್ಲ….. ಒಂದೇ!” ಎಂದಳು.

“ಆದರೆ ಶಾರ್ವರಿ….. ಜನ ಏಂತಾರೋ ಏನೋ…..?”

“ಯಾವ ಜನ….. ಅವರು ಅನ್ನುವುದನ್ನು ಕೇಳಿಸಿಕೊಳ್ಳುವವರು ಯಾರು? ನಮ್ಮ ಕಷ್ಟಸುಖಕ್ಕೆ ಯಾರು ಒದಗುತ್ತಾರೋ ಅವರು ನಮ್ಮವರೇ ಹೊರತು ಯಾರೋ ಆಡಿಕೊಳ್ಳುವ ಜನರಲ್ಲ ಪ್ರತೀಕ್‌….. ನಾನು ಕಡು ಕಷ್ಟದಲ್ಲಿದ್ದಾಗ ಈ ಆಡಿಕೊಳ್ಳುವ ಜನ ನನ್ನ ಸಹಾಯಕ್ಕೆ ಬಂದರೆ ಅಥವಾ ನಿನ್ನ ಸಹಾಯಕ್ಕೆ ಬಂದರೆ….? ಆ ಸಮಯದಲ್ಲಿ ಪರಸ್ಪರ ನನಗೆ ನೀನು, ನಿನಗೆ ನಾನು ಎಂದು ಮಾತ್ರವೇ ಈ ಪ್ರಪಂಚವಾಗಿತ್ತು. ಮೊದಲು ನೀನು ಸಂಪೂರ್ಣ ಗುಣಮುಖನಾಗಿ ಸದೃಢನಾಗು, ಮುಂದಿನ ಆಲೋಚನೆ ಆಮೇಲೆ ಮಾಡೋಣ!” ಎಂದು ತನ್ನ ದೃಢ ನಿರ್ಧಾರ ತಿಳಿಸಿದಳು.

ಮುಂದಿನ 2 ವಾರ ಪ್ರತೀಕ್‌ ಕಟ್ಟುನಿಟ್ಟಾಗಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಶಾರ್ವರಿ ಅವನಿಗೆ ಆರೈಕೆ ಮಾಡಿದಳು. ಮನಸ್ಸಿನ ನೆಮ್ಮದಿ, ಕಾಲಕಾಲಕ್ಕೆ ಔಷಧಿ, ಹಣ್ಣುಹಂಪಲು, ಪೌಷ್ಟಿಕ ಆಹಾರದಿಂದ ಪ್ರತೀಕ್‌ ಇದೀಗ ಮೊದಲಿನಂತೆ ಕಳೆಕೂಡಿಕೊಂಡು ಆರೋಗ್ಯವಂತನಾದ. ಅದು ಅವಳದೇ ಸ್ವಂತ ಮನೆ, ಅವಿನಾಶ್‌ ಆ ಮನೆ ಕೊಂಡಾಗಲೇ ಅವಳ ಹೆಸರಿನಲ್ಲಿ ಮಾಡಿಸಿದ್ದ. ಅವಳ ಅತ್ತೆಮನೆಯವರು ಈಗ ಮೈಸೂರಿನ ಹಿರೀಮಗನ ಜೊತೆ ಇದ್ದುದರಿಂದ, ಅವರಿಗೆ ಇವಳ ಮರುವಿವಾಹದ ಬಗ್ಗೆ ಆಕ್ಷೇಪ ಇರಲಿಲ್ಲ.

ಅಂದು ಸಂಜೆ ಶಾರ್ವರಿ ಪ್ರತೀಕನ ಜೊತೆ ಕಾಫಿತಿಂಡಿ ಸೇವಿಸುತ್ತಾ ಹೇಳಿದಳು, “ಅಂದು ನಾನು ಫಾರ್ಮ್ ನಲ್ಲಿ ಸಹಿ ಮಾಡಿದಂತೆ ಮುಂದೆ ನಮ್ಮ ಭವಿಷ್ಯದಲ್ಲಿ ನಾವೇಕೆ ಇರಬಾರದು? ನೀನಲ್ಲದೆ ನನಗೆ ಮತ್ತಾರು ಸಂಗಾತಿ ಆಗಲು ಸಾಧ್ಯ? ನನ್ನನ್ನು ನಿನ್ನ ಬಾಳಸಂಗಾತಿ ಆಗಿ ಸ್ವೀಕರಿಸಲು ನಿನಗೆ ಒಪ್ಪಿಗೆ ಇದೆ ತಾನೇ?”

“ಈ ಮಾತನ್ನು ಬಾಯಿಬಿಟ್ಟು ಕೇಳಬೇಕೇ…..?” ಪ್ರತೀಕ್‌ ಅವಳನ್ನು ತನ್ನ ಎದೆಗಾನಿಸಿಕೊಂಡಾಗ, ಅವಳ ಕಂಗಳು ಆನಂದಾಶ್ರು ಮಿಡಿದವು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ