ರಾಜಿ ತನ್ನವರು ಎನಿಸಿಕೊಂಡ ಸಂಬಂಧದಿಂದಾಗಿ ಬದುಕುವುದಕ್ಕೆ ಕೊರತೆ ಇಲ್ಲವಾದರೂ, ಅಲ್ಲಿ ಯಾರಿಂದಲೂ ನಿರ್ಮಲ ಸ್ನೇಹ, ವಾತ್ಸಲ್ಯ ಅಪೇಕ್ಷಿಸುವಂತಿರಲಿಲ್ಲ. ಅತಿ ಸ್ವಾರ್ಥಿಗಳ ಲೋಕದಿಂದ ತನ್ನನ್ನು ತಾನು ದೂರ ಇರಿಸಿಕೊಳ್ಳಲು ಅವಳು ಬಯಸಿದಳು. ಮುಂದೆ ಅವಳ ಜೀವನದಲ್ಲಿ ನಡೆದದ್ದೇನು….?

“ಹಲೋ ಅಪರಾಜಿತಾ! ಇದೀಗ ತಾನೇ ಮೇಲ್ ಬಂತು. ಮುಂದಿನ ವಾರದಿಂದ ನಾನು ಹೊಸದಾಗಿ ಬ್ಯಾಂಕ್‌ ಕೆಲಸಕ್ಕೆ ರಿಪೋರ್ಟ್‌ ಮಾಡಿಕೊಳ್ಳಬೇಕಿದೆ. ಹೀಗಾಗಿ ನಮ್ಮ ಫ್ರೆಂಡ್ಸ್ ಗೆಲ್ಲ ಪಾರ್ಟಿ ಕೊಡೋಣ ಅಂತ. ನೀನು ಸಂಜೆ 7 ಗಂಟೆ ಹೊತ್ತಿಗೆ ಹೋಟೆಲ್ ಬ್ಲೂಮೂನ್‌ ಗೆ ಬಂದುಬಿಡು,” ಕಾವ್ಯಾ ತನಗೆ ಕೆಲಸ ದೊರಕಿದ ಖುಷಿಯಲ್ಲಿ ಹಿಗ್ಗುತ್ತಾ ತನ್ನ ಆಪ್ತ ಗೆಳತಿ ರಾಜಿಗೆ ತಿಳಿಸಿದಳು.

“ನೀನೂ ಸಹ ಕೋರಮಂಗಲದ ಆ ಹೊಸ ಬ್ರಾಂಚಿಗೆ ರಿಪೋರ್ಟ್‌ ಮಾಡಿಕೊಳ್ತಿದ್ದಿಯೇನು? ನನಗೂ ಅಲ್ಲಿಗೇ ಬರಬೇಕು ಅಂತ ಹೊಸ ಆರ್ಡರ್‌ ಬಂದಿದೆ….” ಎಂದು ರಾಜಿ ಉತ್ತರಿಸಿದಳು.

“ಓ… ಹೌದೇನು….?” ಕಾವ್ಯಾ ಖುಷಿಯಿಂದ ಕಿರುಚಿದಳೆಂದೇ ಹೇಳಬೇಕು.

“ನಾವಿಬ್ಬರೂ ಒಂದೇ ಶಾಲೆಯಲ್ಲಿ ಓದಿದವರು, ಒಂದೇ ಕಾಲೇಜ್, ಯೂನಿವರ್ಸಿಟಿಯಲ್ಲೂ ಜೊತೆ ಜೊತೆಗೆ ಇದ್ದೆ.

ಇದೀಗ ಒಂದೇ ಕಡೆ ಕೆಲಸ ಮಾಡೋದು ಅಂದ್ರೆ ಎಂಥ ಮಜಾ ಅಲ್ವಾ? ನನಗಂತೂ ನಂಬೋದಕ್ಕೆ ಆಗುತ್ತಿಲ್ಲ. ನಾನು ಇಂದು ಸಂಜೆ ಅಮ್ಮ ಅಪ್ಪನಿಗೆ ಈ ವಿಷಯ ಖಂಡಿತಾ ತಿಳಿಸುತ್ತೇನೆ. ಅವರಿಗೂ ಬಹಳ ಸಂತೋಷವಾಗುತ್ತದೆ. ಸರಿ, ಸಂಜೆ ಪ್ರೋಗ್ರಾಂ ನೆನಪಿಟ್ಟುಕೊ, ಖಂಡಿತಾ ಲೇಟ್‌ ಮಾಡಬೇಡ. ಇವತ್ತು ಎಲ್ಲರೂ ಸೇರಿ ಬೊಂಬಾಟ್‌ ಮಜಾ ಮಾಡೋಣ!” ಕಾವ್ಯಾ ಖುಷಿಯಿಂದ ಗೆಳತಿ ಬಳಿ ಫೋನಿನಲ್ಲಿ ವಿಷಯ ಹೇಳುತ್ತಿದ್ದಳು.

ಫೋನ್‌ ಇರಿಸಿದ ರಾಜಿ ತುಸು ಬೇಸರಗೊಂಡಳು. ತನ್ನ ಮನಸ್ಸಿನ ಖುಷಿ ಹಂಚಿಕೊಳ್ಳಲು ಮನೆಯಲ್ಲಿ ಅವಳಿಗೆ ಅಂಥ ಆಪ್ತರು ಯಾರೂ ಇರಲಿಲ್ಲ. ಹೇಳಲಿಕ್ಕೇನೋ ಅವಳು ಇಬ್ಬರು ಅಣ್ಣಂದಿರ ತಂಗಿ, ಆದರೆ ಅವರಂತೂ ಇವಳ ಯಾವ ವಿಷಯದಲ್ಲೂ ಆಸಕ್ತಿ ತೋರಿಸುತ್ತಿರಲಿಲ್ಲ. ಅವರಿಬ್ಬರ ಜೀವನದಲ್ಲಿ ಇವಳಿಗೆ ಯಾವ ಪ್ರಾಮುಖ್ಯತೆಯೂ ಇರಲಿಲ್ಲ. ಅವರವರ ಲೋಕದಲ್ಲಿ ಇಬ್ಬರೂ ಮುಳಗಿ ಹೋಗಿದ್ದರು.

ಅವಳ ತಾಯಿ ರಾಧಿಕಾಳಿಗೂ ಮಗಳ ಮೇಲೆ ಹೆಚ್ಚಿನ ಮಮತೆ ಇರಲಿ. ತನ್ನ ಹಿರಿಯ ಗಂಡು ಮಕ್ಕಳು ಮಾತ್ರ ತನಗೆ ಮುಖ್ಯ ಎಂಬಂತೆ ಆಕೆ ಮೊದಲಿನಿಂದಲೂ ಮಗಳ ವಿಷಯದಲ್ಲಿ ಹೆಚ್ಚಿನ ಅಕ್ಕರೆ ತೋರಿಸುತ್ತಿರಲಿಲ್ಲ.

ಆಗ ಅವಳ ಕಂಗಳ ಮುಂದೆ ಸದಾ ಹಸನ್ಮುಖಿಯಾಗಿ, ಅರಳು ಹುರಿದಂತೆ ಮಾತನಾಡುವ ಕಾವ್ಯಾಳ ಚಿತ್ರ ಗೋಚರಿಸಿತು. ಅವಳ ತಾಯಿ ತಂದೆಗೆ ಮಗಳೆಂದರೆ ಪಂಚಪ್ರಾಣ, ಒಬ್ಬನೇ ತಮ್ಮನಿಗೂ ಅಕ್ಕಾ ಅಂದ್ರೆ ಅಷ್ಟು ಅಕ್ಕರೆ. ಕಾವ್ಯಾ ಹೊಸದಾಗಿ ಬ್ಯಾಂಕ್‌ ಕೆಲಸಕ್ಕೆ ಸೇರುತ್ತಿರುವ ವಿಚಾರ ಆ ಮನೆಯಲ್ಲಿ ದೊಡ್ಡ ಸಂಭ್ರಮಾಚರಣೆಗೆ ಕಾರಣವಾಗಿತ್ತು.

ಅಷ್ಟರಲ್ಲಿ ಅವಳ ತಾಯಿ ರಾಧಿಕಾ ಬಂದು ಕೇಳಿದಳು, “ರಾಜಿ, ನಿನ್ನ ಹತ್ತಿರ ಸ್ವಲ್ಪ ಹಣ ಇದ್ದರೆ ಕೊಟ್ಟಿರು. ನಿಮ್ಮಣ್ಣ ಭಾಸ್ಕರನಿಗೆ ಹೊಸ ಶೂ ಕೊಳ್ಳಬೇಕಂತೆ. ಅವನ ಹಳೆ ಶೂ ಪೂರ್ತಿ ಸವೆದಿದೆ.”

ರಾಜಿಯ ಮನದಲ್ಲಿದ್ದ ಕಹಿ ಬಾಯಿಗೆ ಬಂದಿತ್ತು, “ಅಮ್ಮಾ, ನಿನ್ನ ಮಗರಾಯನಿಗೆ ತನ್ನ  ಖರ್ಚು ತಾನೇ ನಿರ್ವಹಿಸಬೇಕು ಅಂತ ಬುದ್ಧಿ ಹೇಳು. ನಿನ್ನೆ ಸಂಜೆ ನನಗೆ ಹೊಸ ಜಾಬ್‌ ಸಿಕ್ಕಿತು ಅಂತ ಫ್ರೆಂಡ್ಸ್ ಗೆಲ್ಲ ಪಾರ್ಟಿ ಕೊಟ್ಟಿದ್ದೆ. ಈ ತಿಂಗಳ ನನ್ನ ಟ್ಯೂಶನ್‌ ಹಣ ಪೂರ್ತಿ ಖಾಲಿ ಆಗಿದೆ.”

“ಅಯ್ಯೋ ಹಾಳಾದವಳೆ…. ಪಾರ್ಟಿಗೋಸ್ಕರ ನಿನ್ನ ಇದ್ದಬದ್ದ ಹಣ ಪೂರ್ತಿ ಖರ್ಚು ಮಾಡಿಬಿಡೋದೇ? ಇದರಲ್ಲಿ ನಿನ್ನ ಅಣ್ಣನಿಗೆ ಖಂಡಿತಾ ಒಳ್ಳೆ ಶೂ ಬರ್ತಿತ್ತು. ಪಾಪ, ಸವೆದ ಶೂ ಹಾಕಿಕೊಂಡೇ ಹೊರಗಡೆ ಹೋಗ್ತಾನೆ. ನಿನಗೆ ಅಂಥ ಪಾರ್ಟಿ ಕೊಡುವ ಅಗತ್ಯ ಏನಿತ್ತು? ಏನೋ ಒಂದು ಕೆಲಸ ಅಂತ ಸಿಕ್ಕಿದೆಯೇ ಹೊರತು, ಕೋಟ್ಯಧೀಶರ ಮನೆಯ ಸೊಸೆ ಅಂತೂ ಆಗ್ತಿಲ್ಲವಲ್ಲ? ಪಾರ್ಟಿಗೆ ಹಾಕುವ ದುಡ್ಡನ್ನು ನಿನ್ನ ಅಣ್ಣನಿಗೆ ಕೊಡಬಾರದಿತ್ತೇ?”

ಅಮ್ಮನ ಕಟು ಮಾತುಗಳಿಂದ ಅವಳ ಕಂಗಳು ಕಂಬನಿ ಮಿಡಿದವು. ಅದನ್ನು ತಡೆಹಿಡಿಯುತ್ತಾ ಅವಳು ಹೇಳಿದಳು, “ಕಳೆದ ತಿಂಗಳು ಇದೇ ಅಣ್ಣ ತನ್ನ ಬರ್ತ್‌ ಡೇ ಪಾರ್ಟಿಗೆ ಅಂತ ನನ್ನ ಬಳಿ ಹಣ ಕೇಳಿ ತಗೊಂಡಿರಲಿಲ್ಲವೇ? ಅದರ ಹಿಂದಿನ ತಿಂಗಳು ನಿನ್ನ ಕಿರಿಯ ಮಗ ಸುಧೀರ್‌ ನನ್ನ ಪೂರ್ತಿ 5 ಸಾವಿರ ಕಿತ್ತುಕೊಂಡು ಪಿಕ್ನಿಕ್‌ ಅಂತ ಹೋಗಿರಲಿಲ್ಲವೇ? ಅದನ್ನು ಅವರು ವಾಪಸ್ಸು ಕೊಟ್ಟರೆ ಅಂತ ಒಂದು ಸಲವಾದರೂ ಕೇಳಿದ್ದೀಯಾ? ನಾನು ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ ಪಾರ್ಟಿ ಮಾಡಿಕೊಂಡರೆ ಅದು ದೊಡ್ಡ ತಪ್ಪೇ? ನನ್ನ ಹಣ ಖರ್ಚು ಮಾಡಿಕೊಳ್ಳಲು ನಾನು ನಿಮಗೆಲ್ಲ ಲೆಕ್ಕ ಕೊಡಬೇಕೇ? ಖಂಡಿತಾ ಇದೆಲ್ಲ ಸರಿ ಇಲ್ಲ ಕಣಮ್ಮ!”

“ಸಾಕು… ಸಾಕು…. ಸುಮ್ಮನೆ ಬಾಯಿ ಮಾಡಬೇಡ! ಏನೋ 5-6 ಸಾವಿರ ಸಂಪಾದಿಸಿದ ಮಾತ್ರಕ್ಕೆ ನಿನ್ನ ಕಾಲು ನೆಲದ ಮೇಲೆ ನಿಲ್ಲೋದಿಲ್ಲ ಅಲ್ಲವೇ? ಸದಾ ಆಕಾಶದಲ್ಲೇ ಸಂಚರಿಸುತ್ತಿರಬೇಡ. ಸ್ವಲ್ಪ ಹದ್ದುಬಸ್ತಿನಲ್ಲಿ ಇರೋದನ್ನು ಕಲಿತುಕೋ!”

“ಸದಾ ಯಾವಾಗಲೂ ಆ ನಿನ್ನ ಗಂಡು ಮಕ್ಕಳನ್ನೇ ನಿನ್ನ ತಲೆ ಮೇಲೆ ಕೂರಿಸಿಕೊಳ್ತೀಯಲ್ಲಮ್ಮ….? ನಿನ್ನ ಈ ಭೇದಭಾವದ ಬುದ್ಧಿಯಿಂದ ಇದುವರೆಗೂ ಅವರು ಒಂದು ಜವಾಬ್ದಾರಿಯೂ ಇಲ್ಲದೆ ಉಂಡಾಡಿ ಗುಂಡರಾಗಿದ್ದಾರೆ. ಅವರಿಬ್ಬರಿಗಿಂತ ಚಿಕ್ಕವಳಾದ ನನಗೆ ಇದೀಗ ಬ್ಯಾಂಕಿನಲ್ಲಿ ಕೆಲಸ ಸಿಕ್ಕಿದೆ. ಈ ಕೆಟ್ಟ ಅಣ್ಣಂದಿರು ಇದುವರೆಗೂ ಒಂದಾದರೂ ಕೆಲಸದಲ್ಲಿ ನೆಟ್ಟಗೆ ನೆಲೆ ನಿಂತಿದ್ದಾರಾ? ಏನಾದರೂ ಮನೆ ಕಡೆ ಜವಾಬ್ದಾರಿ ತಗೊಳ್ತಾರಾ?”

“ಸಾಕಮ್ಮ ಮಹಾತಾಯಿ…. ಬರ್ತಾ ಬರ್ತಾ ನಿನ್ನ ನಾಲಿಗೆ ಬಹಳ ಉದ್ದ ಆಗ್ತಾ ಇದೆ…. ಪಾಪ, ಅವರು ಒಳ್ಳೆ ಕೆಲಸಕ್ಕಾಗಿ ಪ್ರಯತ್ನ ಪಡ್ತಾನೇ ಇದ್ದಾರೆ. ಅದು ಸಿಕ್ಕಬೇಕು ತಾನೇ?”

“ಹಾಗೆ ಸರಿಯಾಗಿ ಹೇಳಮ್ಮ ನಿನ್ನ ಮುದ್ದು ಮಗಳಿಗೆ…. ಸದಾ ನಮ್ಮನ್ನು ಆಡಿಕೊಳ್ಳೋದೇ ಆಗೋಯ್ತು,” ದೊಡ್ಡಣ್ಣ ಭಾಸ್ಕರ್‌ಇವರ ಮುಂದೆ ನಿಂತು ಅಬ್ಬರಿಸಿದ.

“ಅಣ್ಣ, ಮೊದಲಿನಿಂದ ನೆಟ್ಟಗೆ ಓದು ಮುಗಿಸಿ ಒಂದು ಡಿಗ್ರಿ ತಗೊಂಡಿದ್ದರೆ ಇಷ್ಟು ಹೊತ್ತಿಗೆ ಒಂದು ಕೆಲಸ ಸಿಗುತ್ತಿರಲಿಲ್ಲವೇ? ಸದಾ ಫ್ರೆಂಡ್ಸ್ ಜೊತೆ ಹೊರಗೆ ಬೀದಿ ಸುತ್ತೋದೇ ಆಗಿಹೋಯಿತು. ಡಿಗ್ರಿ ಸಹ ಇಲ್ಲದೆ ಉತ್ತಮ ನೌಕರಿ ಎಲ್ಲಿಂದ ಸಿಗಬೇಕು? ಹೋಗಲಿ, ಯಾವುದೋ ಒಂದು ಕೆಲಸ ಅಂತ ಸಿಕ್ಕಿದ್ದನ್ನು ನೆಟ್ಟಗೆ ಮಾಡಿಕೊಂಡು ಹೋಗ್ತೀಯಾ? ಇಲ್ಲದ ಕಣಿ ಹೇಳಿಕೊಂಡು 2-2 ತಿಂಗಳಿಗೆ ಕೆಲಸ ಬಿಡ್ತಾ ಇದ್ದರೆ ಎಲ್ಲಿಂದ ಉದ್ಧಾರ ಆಗೋದು? ನಾನು ಇಡೀ ವರ್ಷ ಇಷ್ಟು ಕಷ್ಟ ಪಟ್ಟಿದ್ದಕ್ಕೆ ತಾನೇ ಈಗ ಒಂದು ಒಳ್ಳೆ ಕೆಲಸ ಅಂತ ಸಿಕ್ಕಿರೋದು?”

ಅಷ್ಟರಲ್ಲಿ ತಾಯಿ ಹಿರಿ ಮಗನನ್ನು ವಹಿಸಿಕೊಳ್ಳುತ್ತಾ ಮತ್ತೆ ಹೇಳಿದಳು, “ಪಾಪ, ಅವರು ತಾನೇ ಏನು ಮಾಡ್ತಾರೆಯೇ? ಇರೋ ಪ್ರೈವೇಟ್‌ ಕೆಲಸ ಕಷ್ಟಪಟ್ಟು ಮಾಡ್ತಾರೆ, ಆ ಬಾಸ್‌ ಗಳು ಬಾಯಿಗೆ ಬಂದಂತೆ ಬೈದರೆ, ಅಲ್ಲೇ ಸಹಿಸಿಕೊಂಡು ಇರೋಕ್ಕಾಗುತ್ತೇನು? ಏನೋ ಓದಿನಲ್ಲಿ ತುಸು ಹಿಂದುಳಿದರು, ಒಂದು ಸರ್ಕಾರಿ ಕೆಲಸ ಅಂತ ಸಿಕ್ಕಿದ್ದರೆ ಇಷ್ಟು ಹೊತ್ತಿಗೆ ಇಬ್ಬರಿಗೂ ಮದುವೆ ಆಗಿರ್ತಿತ್ತು. ಒಂದು ಮಾತು ನೆನಪಿಡು, ಇನ್ನು ಕೆಲವೇ ದಿನಗಳಲ್ಲಿ ನಿನಗಿಂತ ಎಷ್ಟೋ ಉತ್ತಮ ಕೆಲಸ ಇವರಿಗೆ ಸಿಗದೇ ಹೋಗೋದಿಲ್ಲ.”

“ಹೌದಮ್ಮ, ಸದಾ ಫ್ರೆಂಡ್ಸ್ ಜೊತೆ ಸುತ್ತಾಡುತ್ತಾ ಬೀದಿ ಬೀದಿ ಅಲೆಯುತ್ತಿದ್ದರೆ ಇವರಿಗೆ ಖಂಡಿತಾ ಒಳ್ಳೆ ಕೆಲಸ ಸಿಗುತ್ತೆ. ನಮ್ಮ ದೇಶದ ತುಂಬಾ ಇಂಥವರೇ ಜಾಸ್ತಿ ಇರೋದ್ರಿಂದ ನಿರುದ್ಯೋಗ ಸಮಸ್ಯೆ ಇಷ್ಟು ಹೆಚ್ಚಿದೆ. ಇದೆಲ್ಲ ನಿಮ್ಮಂಥವರಿಗೆ ಅರ್ಥ ಆದರೆ ತಾನೇ? ಸದಾ ಅವರನ್ನು ನಿನ್ನ ತಲೆ ಮೇಲೆ ಕೂರಿಸಿಕೊಂಡು ಮೆರೆಸು, ಮುಂದೆ ಮುಗ್ಗರಿಸಿ ಬಿದ್ದಾಗ ನಿನಗೇ ಗೊತ್ತಾಗುತ್ತೆ!” ರಾಜಿ ಅಮ್ಮನಿಗೆ ಸರಿಯಾಗಿ ಜವಾಬು ಕೊಟ್ಟು ಬೇಸರದಿಂದ ತನ್ನ ಲ್ಯಾಪ್‌ ಟಾಪ್‌ ಹಿಡಿದು ಕುಳಿತಳು.

ಅದರಲ್ಲಿ ಅವಳು ಮೇಲ್ ‌ಬಾಕ್ಸ್ ತೆರೆದು ಮತ್ತೆ ತನ್ನ ಅಪಾಯಿಂಟ್‌ ಮೆಂಟ್‌ ಆರ್ಡರ್‌ ಬಗ್ಗೆ ಪರಿಶೀಲಿಸಿದಳು. ಅಗತ್ಯ ಕಡಿತಗಳ ನಂತರ ಅವಳಿಗೆ 70 ಸಾವಿರ ಸಂಬಳ ಸಿಗಲಿತ್ತು. ಎಷ್ಟೋ ದಿನಗಳ ನಂತರ ಅವಳ ಮನದಲ್ಲಿ ನೆಮ್ಮದಿಯ ಆಶಾಕಿರಣ ಮೂಡಿತ್ತು. ಅವಳು ಕಣ್ಣು ಮುಚ್ಚಿ ಹಾಗೆ ದಿಂಬಿಗೆ ಒರಗಿದಳು. ಅವಳ ಮನಃಪಟಲದಲ್ಲಿ ಹಿಂದಿನ ಘಟನೆಗಳ ಸುರುಳಿ ಬಿಚ್ಚಿಕೊಂಡವು.

ಕೆಳ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ್ದ ಅವಳು ಮೊದಲಿನಿಂದಲೂ ಆ ಮನೆಗೆ ಬೇಡದ ಮಗಳಾಗಿಯೇ ಬೆಳೆದಿದ್ದಳು. ಹಳೆ ಕಂದಾಚಾರಿಗಳಾದ ಹೆತ್ತವರು, ಗಂಡು ಮಕ್ಕಳೇ ಮಿಗಿಲು ಎಂದು ಸದಾ ಅವರನ್ನಷ್ಟೇ ಮೆರೆಸುತ್ತಿದ್ದರು. ಹೆಣ್ಣಾದ ಕಾರಣ ಇವಳು ಸದಾ ಅವರ ಭೇದಭಾವಕ್ಕೆ ಸಿಲುಕುತ್ತಿದ್ದಳು. ಹೆಣ್ಣಾದ್ದರಿಂದಲೇ ಅವಳು ಆ ಮನೆಯಲ್ಲಿ 2ನೇ ದರ್ಜೆ ಪ್ರಜೆ ಎಂಬಂತೆ ಕಾಣುತ್ತಿದ್ದರು. ಹೆತ್ತವರ ಪ್ರೀತಿ ವಾತ್ಸಲ್ಯಗಳೇನು ಎಂಬುದನ್ನು ಅರಿಯದೆಯೇ ಬೆಳೆದಳು.

ಅದೆಲ್ಲ ಕೇವಲ ಅವಳ ಅಣ್ಣಂದಿರ ಪಾಲಾಗಿತ್ತು. ಅವರ ಬೇಕು ಬೇಡಗಳನ್ನು ತಲೆಯ ಮೇಲೆ ಹೊತ್ತು ಪೂರೈಸುತ್ತಿದ್ದರು. ಅವರು ಕೇಳಿದ್ದನ್ನೆಲ್ಲ ಬೇಡ ಅನ್ನದೆ ಒಂದೂ ಬಿಡದಂತೆ ಕೊಡಿಸುತ್ತಿದ್ದರು. ಊಟತಿಂಡಿ, ಬಟ್ಟೆಬರೆ, ಓದುಬರಹ, ಐಷಾರಾಮ ಏನೇ ಇರಲಿ, ಮೊದಲು ಅವರ ಬೇಡಿಕೆಗಳಷ್ಟೇ ಈಡೇರುತ್ತಿದ್ದವು. ತನಗೆ ಅವರು ಮಾಡುತ್ತಿದ್ದ ಭೇದಭಾವವನ್ನು ಅವಳು ಬಾಲ್ಯದಿಂದಲೇ ಗಮನಿಸುತ್ತಿದ್ದಳು. ಸದಾ ಅವರು ಮುದ್ದಿಸಲ್ಪಡುತ್ತಿದ್ದರೆ, ಇವಳು ಆಸೆ ಕಂಗಳಿಂದ ಅದನ್ನು ನೋಡುವುದಷ್ಟೇ ಆಗಿತ್ತು.

ಇವಳ ಕೋಮಲ ಮನಸ್ಸಿನ ಮೇಲೆ ಅವರ ಆ ಭೇದಭಾವ ಅಪಾರ ನೋವಿನ ಛಾಯೆ ಹರಡಿತ್ತು. ಅವಳು ತನ್ನಲ್ಲೇ ತಾನು ಮುದುಡಿ ಹೋಗುತ್ತಿದ್ದಳು. ಸದಾ ಅಂತರ್ಮುಖಿಯಾಗಿ ಇರುತ್ತಿದ್ದ ಅವಳು ಮಾತನಾಡುತ್ತಿದ್ದುದೇ ಕಡಿಮೆ.

ಹೀಗಾಗಿ ರಾಜಿ ತನ್ನೆಲ್ಲ ಸಮಯವನ್ನೂ ಸದಾ ಪುಸ್ತಕಗಳ ಮಧ್ಯೆ ಕಳೆದುಬಿಡುತ್ತಿದ್ದಳು. ಕಥೆ, ಕಾದಂಬರಿ, ಪಠ್ಯಪುಸ್ತಕಗಳ ಮಧ್ಯೆ ಅವಳು ತನ್ನೆಲ್ಲ ನೋವನ್ನು ಮರೆಯುವಳು. ಅವಳಿಗೆ ಸದಾ ನೆಮ್ಮದಿ ನೀಡುತ್ತಿದ್ದ ತಾಣ ಎಂದರೆ ಶಾಲೆ, ಗೆಳತಿಯರು.

ಮನೆಯಲ್ಲಿ ಸಿಗದ ಆನಂದ, ಸಂತೃಪ್ತಿಯನ್ನು ಅವಳು ಶಾಲೆಯ ಟೀಚರ್‌ ಗಳ ಬಳಿ ಪಡೆದಳು. ತನ್ನ ಉತ್ತಮ ಓದು, ಅಂಕಗಳಿಂದಾಗಿ ಶಾಲೆಯಲ್ಲಿ ಅವರೆಲ್ಲರ ಕಣ್ಮಣಿಯಾದಳು. ತಾಯಿ ತಂದೆ, ಅಣ್ಣಂದಿರ ಸತತ ನಿರ್ಲಕ್ಷ್ಯವನ್ನು ಅವಳು ಹೊರಗಿನವರ ಪ್ರೀತಿ ಆದರಗಳಲ್ಲಿ ಮರೆಯುತ್ತಿದ್ದಳು. ತನಗೂ ಒಂದು ವ್ಯಕ್ತಿತ್ವವಿದೆ ಎಂಬುದನ್ನು ಅಲ್ಲಿ ಅವರೆಲ್ಲರ ಮುಂದೆ ನಿರೂಪಿಸಿದಳು.

ಸದಾ ಓದಿನಲ್ಲಿ ಮಗ್ನಳಾಗಿರುತ್ತಿದ್ದ ಅವಳು ಎಲ್ಲ ತರಗತಿಗಳಲ್ಲೂ ಅತಿ ಉನ್ನತ ಅಂಕ ಗಳಿಸುತ್ತಿದ್ದರೆ, ಅವಳ ಅಣ್ಣಂದಿರು ಜೀವನಾಂಶದ 35-40% ಅಂಕ ಗಳಿಸಿ ಹೇಗೋ ಅಂತೂ ಪಾಸಾಗಿ ಮುಂದುವರಿಯುತ್ತಿದ್ದರು. ಈ ಕಾರಣದಿಂದಾಗಿಯೇ ಅವಳು ಒಂದೇ ಶಾಲೆಯಲ್ಲಿ ಅಣ್ಣಂದಿರ ಜೊತೆ ಓದುತ್ತಿದ್ದಾಗ, `ನಿಮ್ಮ ತಂಗಿಯನ್ನು ನೋಡಿ ಬುದ್ಧಿ ಕಲಿಯಿರಿ!’ ಎಂದು ಟೀಚರ್‌ ಗಳಿಂದ ಅವರು ಸದಾ ಬೈಸಿಕೊಳ್ಳುತ್ತಿದ್ದರು. ಆ ಸೇಡನ್ನು ಅವಳ ಮೇಲೆ ತೀರಿಸಿಕೊಂಡು ಪೈಶಾಚಿಕ ತೃಪ್ತಿ ಹೊಂದುತ್ತಿದ್ದರು.

aprajita-story2

ಅವಳ ಮನೆಯ ಆರ್ಥಿಕ ಸ್ಥಿತಿ ಅಷ್ಟಕ್ಕಷ್ಟೇ ಇತ್ತು. ಅವಳ ತಂದೆ ಒಂದು ಖಾಸಗಿ ಕಂಪನಿಯಲ್ಲಿ ಗುಮಾಸ್ತೆ ಆಗಿದ್ದರು. ಅವರ ಸಂಬಳ ಸಂಸಾರದ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ, ಹೇಗೋ ಕಷ್ಟದಲ್ಲಿ ದಿನಗಳು ಉರುಳುತ್ತಿದ್ದವು. ತನಗಾಗಿ ಎಂದಾದರೂ ಹೆತ್ತವರು 10/ ರೂ. ಕೊಟ್ಟು ಏನಾದರೂ ಹೊರಗೆ ತಿಂದುಕೋ ಎಂದು ಹೇಳಿದ್ದ ನೆನಪೇ ಇಲ್ಲ. ಶಾಲೆಯ ಪಿಕ್ನಿಕ್‌ ಪ್ರವಾಸಗಳು ಅವಳಿಗೆ ಎಂದೆಂದೂ ಗಗನ ಕುಸುಮಗಳೇ ಆಗಿದ್ದವಪ. ಅವಳೆಂದೂ ಗೆಳತಿಯರ ಬರ್ತ್‌ ಡೇ ಪಾರ್ಟಿಗಳಿಗೆ 10/ ರೂ.ಗಳ ಒಂದು ಉಡುಗೊರೆ ಹಿಡಿದು ಹೊರಟಿದ್ದು ನೆನಪಿಲ್ಲ, ಹಾಗಿರುಲಗ ಮನೆಯಲ್ಲಿ ಅಲಳ ಬರ್ತ್‌ ಡೇ ಯಾರು ಆಚರಿಸಬೇಕು?

ಹೀಗಾಗಿ ಅವಳು PUC ಸೇರಿದಾಗಿನಿಂದ, ತನ್ನ ಅಕ್ಕಪಕ್ಕದ ಪ್ರೈಮರಿ ಶಾಲೆಯ ಮಕ್ಕಳಿಗೆ ಟ್ಯೂಷನ್‌ ಹೇಳಿಕೊಟ್ಟು, ಒಂದಿಷ್ಟು ಪುಡಿಗಾಸು ಸಂಪಾದಿಸಿ ತನ್ನ ಸ್ವಂತ ಖರ್ಚು ನಿರ್ವಹಿಸತೊಡಗಿದಳು. ಕಳೆದ 3-4 ವರ್ಷಗಳಿಂದ ತನ್ನ ಆ ಪುಟ್ಟ ಸಂಪಾದನೆಯಲ್ಲೇ ಅಮ್ಮನಿಗೂ ಪ್ರತಿ ತಿಂಗಳು ಒಂದು ನಿಗದಿತ ಮೊತ್ತ ಕೊಡುತ್ತಿದ್ದಳು. ಮುಂದೆ ಅವಳು ಪದವಿ ಪಡೆದು, ಸ್ನಾತಕೋತ್ತರ ಪದವೀಧರೆ ಎನಿಸಿ, ಬ್ಯಾಂಕಿಂಗ್‌ ಪರೀಕ್ಷೆ ಪಾಸು ಮಾಡಿ, ಅಂತೂ ಇಂತೂ ಈ ಕೆಲಸ ಗಿಟ್ಟಿಸಿಕೊಂಡಳು.

ಅವಳ ವ್ಯಾಸಂಗದ ಕೊನೆ ಹಂತದ ಹೊತ್ತಿಗೆ ತಂದೆ ಹೃದಯಾಘಾತದಿಂದ ತೀರಿಹೋದರು. ಮನೆಯ ಆರ್ಥಿಕ ಸ್ಥಿತಿ ಮತ್ತಷ್ಟು  ಬಿಗಡಾಯಿಸಿತು. ತಂದೆಯ ಮೂಲ ಆದಾಯ ಇಲ್ಲದೆ, ಮುಂಚಿನಂತೆ ಮನೆ ಸುವ್ಯವಸ್ಥಿತವಾಗಿ ನಡೆಯುವುದೇ ದುಸ್ತರವಾಯಿತು. ತಾತನ ನೆರವಿನಿಂದಾಗಿ ಅಂತೂ ವಾಸಕ್ಕೆ ಒಂದು ಮನೆ ಇತ್ತು. ಅದರಲ್ಲಿ ಒಂದು ಭಾಗವನ್ನು ಬಾಡಿಗೆಗೆ ಕೊಟ್ಟಿದ್ದರು. ಈಗ ಆ ಹಣ ಇವರ ಮನೆ ಖರ್ಚಿಗೆ ಆಧಾರವಾಯಿತು.

ಇಷ್ಟೆಲ್ಲ ಕಷ್ಟಗಳ ಮಧ್ಯೆಯೂ, ಅವಳು ಹೇಗೋ ತನ್ನ ವ್ಯಾಸಂಗ ಪೂರೈಸಿ, ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ, ಉತ್ತಮ ನೌಕರಿಗಾಗಿ ಬಹಳ ಕಷ್ಟಪಟ್ಟಳು. ಹೀಗೆ ಅವಳ ಸತತ ಪ್ರಯತ್ನದಿಂದಾಗಿ ಈ ನೌಕರಿ ಸಿಗುವಂತಾಯಿತು.

ಹೀಗೆ ಯೋಚಿಸುತ್ತಿರುವಾಗಲೇ ಇವಳ ಫೋನ್‌ ರಿಂಗಾಗಿ ಕಾವ್ಯಾ ಸಂಜೆಯ ಕಾರ್ಯಕ್ರಮದ ಬಗ್ಗೆ ವಿವರಿಸಿದಳು. ಸಂಜೆ 7ರ ಹೊತ್ತಿಗೆ ಹೋಟೆಲ್ ಬ್ಲೂಮೂನ್‌ ತಲುಪಬೇಕಿತ್ತು. ಅಂತೂ ಅವಳು ಒಂದು ಆಟೋ ಬಳಸಿ, ಸಮಯಕ್ಕೆ ಸರಿಯಾಗಿ ಹೋಟೆಸ್‌ತಲುಪಿ, ಗೆಳತಿಯರನ್ನು ಭೇಟಿಯಾದಳು.

“ನಮ್ಮ ಕಾವ್ಯಾ ಜೊತೆ ನಿನ್ನದೂ ಸೆಲೆಕ್ಷನ್‌ ಆಯ್ತು ಅಂತ ಕೇಳಿ ಬಹಳ ಸಂತೋಷವಾಯಿತು ಕಣಮ್ಮ…. ಕಂಗ್ರಾಜುಲೇಶನ್ಸ್! ಇಬ್ಬರು ಗೆಳತಿಯರೂ ಹೀಗೆ ಸದಾ ಅನ್ಯೋನ್ಯವಾಗಿರಿ,” ಎಂದು ಕಾವ್ಯಾಳ ತಾಯಿ ಕಾವೇರಮ್ಮ ಇವಳನ್ನು ಬಾಯಿ ತುಂಬಾ ಹರಸಿದರು. ಕಾವ್ಯಾಳ ತಂದೆ, ತಮ್ಮ ಸಹ ಇವಳನ್ನು ಬಹುವಾಗಿ ಪ್ರಶಂಸಿಸಿದರು. ಅವರೆಲ್ಲರಿಗೂ ತುಂಬುಮನದಿಂದ ಧನ್ಯವಾದ ಅರ್ಪಿಸಿ, ಆ ಸಂಭ್ರಮದಲ್ಲಿ ಪಾಲ್ಗೊಂಡಳು.

“ಅಂತೂ ನಿಮ್ಮ ಜೋಡಿ ಕಾಲೇಜಿನಿಂದ ಕೆಲಸದವರೆಗೂ ಹಾಗೇ ಮುಂದುರಿಯಲಿದೆ,” ಕಾವ್ಯಾಳ ತಂದೆ ಹೇಳಿದಾಗ, ಇವರಿಬ್ಬರೂ ಸಂತೋಷದಿಂದ ಆಲಂಗಿಸಿಕೊಂಡು, ಖುಷಿ ಹೆಚ್ಚಿಸಿಕೊಂಡರು.

“ನೀನಿದ್ದ ಮೇಲೆ ನಾನು ಕಾವ್ಯಾ ಬಗ್ಗೆ ಪ್ರತ್ಯೇಕವಾಗಿ ಚಿಂತಿಸುವ ಅಗತ್ಯವೇ ಇಲ್ಲ ಕಣಮ್ಮ,” ಕಾವೇರಮ್ಮ ಮತ್ತೆ ಅವಳ ಭುಜ ತಟ್ಟಿ ಹೇಳಿದರು.

“ಅಯ್ಯೋ ಅಮ್ಮ…. ನಾನಿನ್ನೂ ಪ್ರೈಮರಿ ಶಾಲೆಯ 2ನೇ ಕ್ಲಾಸ್‌ ವಿದ್ಯಾರ್ಥಿನಿಯೇ….? ಅದೇ ಹಳೆ ರಾಗ ಹಾಡ್ತಿದ್ದಿ ನೀನು! ಎಳೆ ಮಗು ತರಹ ನನ್ನನ್ನು ರಾಜಿಯ ಜವಾಬ್ದಾರಿಗೆ ತಳ್ಳುತ್ತಿದ್ದೀಯಾ…..” ಎಂದು ಕಾವ್ಯಾ ಅಮ್ಮನ ಮೇಲೆ ಹುಸಿ ಮುನಿಸು ತೋರಿದಳು.

“ನೀವೆಷ್ಟೇ ದೊಡ್ಡವರಾದರೂ ತಾಯಿಯ ದೃಷ್ಟಿಯಲ್ಲಿ ಸದಾ ಮಕ್ಕಳೇ!” ತಂದೆ ಹೇಳಿದಾಗ ಎಲ್ಲರೂ ಜೋರಾಗಿ ನಕ್ಕರು.

“ಓ…. 50 ದಾಟಿದರೂ ನಾವು ಇದೇ ಡೈಲಾಗ್‌ ಕೇಳುತ್ತಿರಬೇಕೇ?” ಕಾವ್ಯಾ ನಾಟಕೀಯವಾಗಿ ಕೇಳಿದಳು.

“ಹೌದು ಮತ್ತೇ!” ಕಾವೇರಮ್ಮ ಹೇಳಿದಾಗ ಮತ್ತೆ ನಗುವಿನ ಲಹರಿ ಉಕ್ಕಿ ಹರಿಯಿತು.

“ಅದು ಸರಿ ಕಣ್ರಮ್ಮ… ಯಾವಾಗಿನಿಂದ ನೀವು ಬ್ಯಾಂಕಿನಲ್ಲಿ ಕೆಲಸ ಶುರು ಮಾಡಬೇಕು?” ಕಾವ್ಯಾಳ ತಂದೆ ಕೇಳಿದರು.

ಅವರ ಈ ಮಾತಿಗೆ ರಾಜಿ ನಸುನಗುತ್ತಾ ಹೇಳಿದಳು, “ಅಂಕಲ್, ನಮ್ಮಿಬ್ಬರ ಡ್ಯೂಟಿ ರಿಪೋರ್ಟ್‌ ಒಂದೇ ದಿನ…. ಅಂದ್ರೆ ಮುಂದಿನ ಆಗಸ್ಟ್ 1 ರಿಂದ ಹೋಗಬೇಕು.”

“ವೆರಿ ಗುಡ್‌! ಈ ಬೆಸ್ಟ್ ಫ್ರೆಂಡ್ಸ್ ನ್ನು ಅಗಲಿಸಬಾರದು ಎಂದು ಬಹುಶಃ ಆ ಬ್ಯಾಂಕಿನವರಿಗೂ ಗೊತ್ತಾಗಿರಬೇಕು,” ಎಂದು ಅವರು ನಗುತ್ತಾ ಹೇಳಿದರು.

“ಹೌದು ಅಂಕಲ್, ನೋಡ್ತಾ ಇರಿ…. ನಮ್ಮ ಜೋಡಿ ಆ ಬ್ಯಾಂಕಿನ ಸಿಬ್ಬಂದಿ ಮುಂದೆ ಹೇಗೆ ಮಿಂಚುತ್ತೆ ಅಂತ!”

“ಏನೇ ಆಗಲಮ್ಮ, ನೀನು ಸದಾ ನಮ್ಮ ಕಾವ್ಯಾಳ ಬೆನ್ನೆಲುಬಾಗಿರು. ನಿನ್ನ ಈ ಫ್ರೆಂಡ್‌ ಗೆ ಸದಾ ಡಯೆಟಿಂಗ್‌ ಹುಚ್ಚು. ಇಬ್ಬರೂ ಒಟ್ಟಿಗೆ ಲಂಚ್‌ ಮಾಡಿ, ನಾನು ಇಬ್ಬರಿಗೂ ಆಗುವಂತೆ ಅವಳ ಬಾಕ್ಸ್ ತುಂಬಿಸಿ ಕಳುಹಿಸಿರುತ್ತೇನೆ. ನೀನೇ ಅವಳನ್ನು ಗಮನಿಸಿಕೊಳ್ಳಬೇಕು,” ಕಾವೇರಮ್ಮ ಅಕ್ಕರೆಯಿಂದ ಹೇಳಿದರು.

“ಹ್ಞೂಂ ಆಂಟಿ….. ನೀವು ಹೇಳಿದಂತೆ ಆಗಲಿ,” ಎಂದು ರಾಜಿ ಅವರ ಕೈ ಕುಲುಕಿದಳು. ಅಂದಿನ ಇಡೀ ಸಂಜೆ ಆ ಪಾರ್ಟಿಯಲ್ಲಿ ಅವಳು ಅತಿ ಸಂತೋಷದಿಂದ ಕಾಲ ಕಳೆಯುವಂತಾಯಿತು.

ಅವಳು ಕಾವ್ಯಾಳ ಮನೆಗೆ ಬಂದಾಗೆಲ್ಲ, ಆ ಕುಟುಂಬದ ಮನಃಪೂರ್ವಕ ಪ್ರೀತಿ ವಾತ್ಸಲ್ಯ, ಸ್ನೇಹ ಆದರಗಳಿಂದ ಅವಳ ಹೃದಯ ತುಂಬಿ ಹೋಗುತ್ತಿತ್ತು. ಜನರಿದ್ದೂ ಮನೆಯಲ್ಲಿ ತಾನು ಒಬ್ಬಂಟಿ, ತನ್ನನ್ನು ವಿಚಾರಿಸಿಕೊಳ್ಳುವವರೇ ಇಲ್ಲ ಎಂಬ ಕೊರಗು ದೂರವಾಗಿತ್ತು. ಕಾವ್ಯಾಳಿಗೆ ಆ ಮನೆಯಲ್ಲಿ ಸಿಗುತ್ತಿದ್ದ ಪ್ರಾಮುಖ್ಯತೆ ನೆನೆದು, ತನ್ನ ಸ್ಥಿತಿಗಾಗಿ ಮೂಕವಾಗಿ ಕೊರಗುತ್ತಿದ್ದಳು. ಇದನ್ನೆಲ್ಲ ಯೋಚಿಸುತ್ತಾ ಅವಳು ಯಾವಾಗ ನಿದ್ದೆಗೆ ಜಾರಿದಳೋ ತಿಳಿಯಲಿಲ್ಲ.

ಅಂತೂ ಕೊನೆಗೆ ಬ್ಯಾಂಕ್‌ ಜಾಯಿನಿಂಗ್‌ ತಾರೀಕು ಬಂದೇಬಿಟ್ಟಿತು. ಇಬ್ಬರೂ ಸಂಭ್ರಮದಿಂದ ಆ ದಿನ ಕಳೆದರು. ಹೀಗೇ ಕೆಲಸದ ಓಡಾಟದಲ್ಲಿ ಒಂದು ತಿಂಗಳು ಸರಿದು ಹೋದದ್ದೇ ತಿಳಿಯಲಿಲ್ಲ.

ಅಂದು ಅವಳ ಸಂಬಳದ ದಿನ. ತನ್ನ ಅಕೌಂಟ್‌ ಗೆ ಜಮಾ ಆದ ಮೊತ್ತ ಗಮನಿಸಿ ಅವಳು ಸಂತಸದಿಂದ ಹಿಗ್ಗಿದಳು. ಅಷ್ಟು ಮೊತ್ತದ ಹಣ ಅಂದೇ ಅವಳು ಕಂಡದ್ದು. ಇಬ್ಬರೂ ಕೆಲಸ ಮುಗಿಸಿ ಶಾಪಿಂಗ್‌ ಮಾಡಲೆಂದು ಹೊರಟರು. ಮನೆಯಲ್ಲಿ ತಮ್ಮವರಿಗಾಗಿ ಬಟ್ಟೆಬರೆ, ಸ್ವೀಟ್ಸ್, ಉಡುಗೊರೆಗಳನ್ನು ಕೊಂಡರು.

ಖುಷಿಯಾಗಿ ಮನೆಗೆ ಬಂದು, “ಅಮ್ಮ, ಈ ಸೀರೆ ನಿನಗಾಗಿ ತಂದಿದ್ದೇನೆ. ಅಣ್ಣ….. ಈ ಗಿಫ್ಟ್ ನಿಮಗಾಗಿ,” ಎಂದು ಎಲ್ಲರಿಗೂ ಸಿಹಿ, ಉಡುಗೊರೆ ಹಂಚಿದಳು.

“ವಾಹ್‌ ರಾಜಿ…. ನಿನಗೆ ಲಾಟರಿ ಹೊಡೆಯಿತು! ಇನ್ನು ಮುಂದೆ ಪ್ರತಿ ತಿಂಗಳೂ ನಿನ್ನ ಹೆಸರಿಗೆ 70 ಸಾವಿರ ಕ್ರೆಡಿಟ್‌ ಆಗುತ್ತಲ್ವಾ?” ಹಿರಿಯಣ್ಣ ಬಾಯಲ್ಲಿ ಜೊಲ್ಲು ಸುರಿಸುತ್ತಾ ಕೇಳಿದ.

“ಹೌದಣ್ಣ….. ನೀವಿಬ್ಬರೂ ಪ್ರಯತ್ನಪಟ್ಟು ಡಿಗ್ರಿ ಮುಗಿಸಿಕೊಂಡರೆ ನಿಮಗೂ ಖಂಡಿತಾ ಒಳ್ಳೆ ಕೆಲಸ ಸಿಕ್ಕೇ ಸಿಗುತ್ತದೆ,” ಎಂದಳು.

“ಸಾಕು ಸಾಕು ನಿನ್ನ ಭಾಷಣ…. ಏನೋ ಒಂದು ಒಳ್ಳೆ ಕೆಲಸ ಸಿಕ್ಕಿದೆ ಅಷ್ಟೆ, ಕೋಟ್ಯಂತರ ರೂ.ಗಳ ಲಾಟರಿ ಏನಲ್ಲವಲ್ಲ? ಒಂದೇ ಸಮನೆ ನಮಗೆ ಪ್ರವಚನ ನೀಡಬೇಡ,” ಕೈ ಚಾಚಿ ಉಡುಗೊರೆ ಪಡೆದಿದ್ದರೂ ಅಣ್ಣಂದಿರು ಅವಳನ್ನು ಮೂದಲಿಸಲು ಮರೆಯಲಿಲ್ಲ.

“ಇಬ್ಬರೂ ತಿಂದುಂಡು ಗಡವಾ ಆಗಿದ್ದೀರಿ. ಈಗಲೂ ಒಂದೊಂದು ನಯಾ ಪೈಸೆಗೂ ಅಮ್ಮನ ಬಳಿ ಕೈ ಚಾಚ್ತೀರಿ, ನನ್ನನ್ನು ಪೀಡಿಸುತ್ತೀರಿ. ಇದು ಸರೀನಾ ಅಂತ ನಿಮ್ಮ ಎದೆ ಮುಟ್ಟಿ ಹೇಳಿ ನೋಡೋಣ….”

“ಸಾಕಮ್ಮ ಮಹಾತಾಯಿ ಸಾಕು! ಇನ್ನೂ ಕೆಲವೇ ದಿನ…. ಖಂಡಿತಾ ನಮಗೂ ಒಳ್ಳೇ ದಿನ ಬಂದೇಬರುತ್ತೆ, ಅದೃಷ್ಟ ಖುಲಾಯಿಸುತ್ತೆ! ಆಗ ಯಾರು ನಿನ್ನ ಮೂಸುತ್ತಾರೆ?”

“ಇದೆಲ್ಲ ಬೂಟಾಟಿಕೆ ಕಟ್ಟಿಟ್ಟು, ಕಷ್ಟಪಟ್ಟು ಒಂದೊಳ್ಳೆ ಕೆಲಸ ಹುಡುಕಿಕೊಂಡು ಮನೆಗೆ ತಕ್ಕ ಗಂಡು ಮಕ್ಕಳು ಅನಿಸಿಕೊಳ್ಳಿ!”

ರಾಜಿಗೆ ಕೆಲಸ ಸಿಕ್ಕಿ 1 ವರ್ಷ ಕಳೆದರೂ ಆ ಉಂಡಾಡಿ ಗುಂಡರು ಮಾತ್ರ ಯಾವ ಕೆಲಸಕ್ಕೂ ಸೇರದೆ, ತಂಗಿಯ ಸಂಪಾದನೆಯಲ್ಲಿ ತಿಂದುಂಡು ಪೋಲಿ ತಿರುಗುತ್ತಿದ್ದರು.

ಆ ದಿನ ಸಂಜೆ ಕೆಲಸ ಮುಗಿಸಿಕೊಂಡು ಬಂದು ಸುಸ್ತಾಗಿ ಕುಳಿತಿದ್ದ ಇವಳ ಬಳಿ ನುಗ್ಗಿದ ಹಿರಿಯಣ್ಣ ಭಾಸ್ಕರ್‌, ಅವಳ ಪರ್ಸ್ ಕಿತ್ತುಕೊಂಡು ಅದರಲ್ಲಿ ಸಿಗಬಹುದಾದ 500ರ ನೋಟುಗಳಿಗಾಗಿ ತಡಕಾಡಿದ.

“ಅಣ್ಣ, ನನ್ನ ಪರ್ಸ್‌ ಮುಟ್ಟಬೇಡ! ಏನು ಬೇಕು ಅಂತ ಬಾಯಿ ಬಿಟ್ಟು ಕೇಳಬಾರದೇ?”

“ರಾಜಿ, ನನಗೆ ಅರ್ಜೆಂಟ್‌ ಸಾವಿರ ರೂ. ಹಣ ಬೇಕು. ನೋಡು… ನೀನಿಲ್ಲಿ ಇರಿಸಿರುವ ಹಣ ತೆಗೆದುಕೊಳ್ತಿದ್ದೀನಿ,” ಎಂದು ಅವಳ ಕಡೆ ತಿರುಗಿಯೂ ನೋಡದೆ ಅಲ್ಲಿಂದ ಹೊರಡಲು ಎದ್ದ.

“ಅಣ್ಣ…. ಈ ಹಣ ನಾನು ಅಮ್ಮನಿಗೆ ಮನೆ ಖರ್ಚಿಗಾಗಿ ಅಂತ ಈಗ ತಾನೇ ಡ್ರಾ ಮಾಡಿಕೊಂಡು ಬಂದದ್ದು. ಖಂಡಿತಾ ಅದನ್ನು ತಗೋಬೇಡ!”

ಅವನು ಅವಳತ್ತ ಕುಟಿಲ ನಗೆ ಬೀರುತ್ತಾ, “ಇಷ್ಟೆಲ್ಲ ಸಂಪಾದಿಸ್ತೀಯಾ…. ನಮಗಾಗಿ ಆಗಾಗ 4-5 ಸಾವಿರ ಕೊಡಕ್ಕಾಗಲ್ವಾ?” ಎಂದು ದಾಪುಗಾಲು ಹಾಕುತ್ತಾ ಹೊರಟುಹೋದ.

ಇದರಿಂದ ಅವಳಿಗೆ ಕೆಟ್ಟ ಕೋಪ ಬಂತು, “ನೀವಿಬ್ಬರೂ ನಯಾ ಪೈಸೆ ದುಡಿದು ಮನೆಗೆ ಅಂತ ಕೊಡಬೇಡಿ. ಪುಂಡು ಪೋಕರಿಗಳ ಜೊತೆಗಿನ ಖರ್ಚಿಗಾಗಿ ತಂಗಿ ದುಡಿದ ಹಣ ಕಿತ್ತುಕೊಂಡು ಹೋಗ್ತೀರಲ್ಲ…. ನಾಚಿಕೆ ಆಗಲ್ವಾ ನಿಮ್ಮ ಜನ್ಮಕ್ಕೆ!”

“ಅಯ್ಯೋ, ಹೋಗಲಿ ಬಿಡಮ್ಮ…. ಏನೋ ಅರ್ಜೆಂಟು ಅಂತ ತಗೊಂಡಿರ್ತಾನೆ. ನಾಳೆ ಕೆಲಸಕ್ಕೆ ಸೇರಿದ ಮೇಲೆ ನಿನ್ನ ಹಣ ವಾಪಸ್ಸು ಕೊಡದೆ ಇರ್ತಾನಾ?” ಎಂದಿನಂತೆ ಅವಳ ತಾಯಿ ಮಗನ ಪಕ್ಷ ವಹಿಸಿದರು.

“ನಾನು ಬದುಕಿರುವವರೆಗೂ ಆ ದಿನ ಬರಲ್ಲ ಬಿಡಮ್ಮ…. ಇವರ ವ್ಯವಹಾರ ನೋಡಿದರೆ ಈ ಜನ್ಮದಲ್ಲಿ ಕೆಲಸಕ್ಕೆ ಸೇರ್ತಾರೆ ಅಂತ ಅನಿಸಲ್ಲ!” ಅವಳಿಗೆ ಅಮ್ಮನ ಮೇಲೂ ಕೋಪ ಬಂದಿತ್ತು.

“ನೀನಂತೂ ಯಾವಾಗ ಬಾಯಿ ಬಿಟ್ಟರೂ ಅಶುಭವೇ ಬರುತ್ತಮ್ಮ….. ಸ್ವಂತ ಅಣ್ಣಂದಿರು ಅನ್ನುವ ಮಮಕಾರ ನಿನಗೆ ಸ್ವಲ್ಪವಾದರೂ ಇದೆಯಾ? ನೀನು ಮಾಡ್ತಿರೋದು ಖಂಡಿತಾ ಸರಿಯಲ್ಲ!” ಅವರು ಮಗಳನ್ನೇ ಗದರಿಕೊಂಡರು.

ಅಮ್ಮನ ಈ ಪಕ್ಷಪಾತದ ಮಾತುಗಳು ಅವಳನ್ನು ಕಂಬನಿ ಮಿಡಿಯುವಂತೆ ಮಾಡಿದವು. ಅಷ್ಟರಲ್ಲಿ ಕಿರಿಯಣ್ಣ ಸುಧೀರ್‌ ಬಂದು, “ಏನೋ…. ಒಂದು ಕೆಲಸ ಸಿಕ್ಕಿದೆ ಅಂತ ಆಕಾಶದಲ್ಲಿ ಹಾರಾಡಬೇಡ, ನೆಟ್ಟಗೆ ಭೂಮಿ ಮೇಲೆ ನಡೆಯೋದನ್ನು ಕಲಿ! ಯಾವತ್ತಿದ್ದರೂ ನಮಗಿಂತ ಚಿಕ್ಕವಳು ನೀನು, ನಾವು ಹೇಳಿದಂತೆ ಕೇಳಬೇಕು ಅನ್ನೋದನ್ನು ಮರೆಯಬೇಡ. ಈ ಮನೆಗಾಗಿ, ನಮಗಾಗಿ ನಿನ್ನಿಂದ ಇಷ್ಟು ಮಾತ್ರ ಮಾಡಲು ಆಗೋದಿಲ್ಲವೇ?” ಎಂದು ಗುಡುಗಿದ.

ಆಗ ಅವಳಮ್ಮ ಸಹ ಕಿರುಚುತ್ತಾ, “ನೋಡು ರಾಜಿ, ನಿಮ್ಮಣ್ಣ ಸರಿಯಾಗೇ ಹೇಳ್ತಿದ್ದಾನೆ. ಕೆಲಸಕ್ಕೆ ಸೇರಿದಾಗಿನಿಂದ ನಿನಗೆ ಬಹಳ ಅಹಂಕಾರ ಬಂದಿದೆ. ಕಾಸು ದುಡ್ಡು ಮುಖ್ಯ ಅಲ್ಲ ಕಣೆ, ನಿನ್ನವರು, ತನ್ನವರು ಅನ್ನೋರು ಯಾರು ಅಂತ ನೋಡಿಕೊಂಡು ಮಾತನಾಡುವುದನ್ನು ಕಲಿ. ನೀನು ಹುಟ್ಟಿ ಬೆಳೆದದ್ದು ಈ ಮನೆಯಲ್ಲಿ, ಇಲ್ಲೇ ಊಟ ಮಾಡಿಕೊಂಡಿದ್ದಿ ಅಂತ ನೆನಪಿರಲಿ. ಹಾಗಿರುವಾಗ ಅಣ್ಣಂದಿರು ಕೇಳಿದಾಗ ಒಂದಿಷ್ಟು ಹಣ ಖರ್ಚು ಮಾಡಿಬಿಟ್ಟರೆ ನಿನ್ನದೇನು ಗಂಟು ಹೋಗುತ್ತೆ? ನೀನೇನು ಮರದಿಂದ ಹುಟ್ಟಿ ಬಂದವಳಲ್ಲ…. ಇಷ್ಟು ವರ್ಷ ಈ ಮನೆ ನಿನಗೆ ಅನ್ನ ಹಾಕಿದೆ ಅಂತ ನೆನಪಿಡು!”

ಅಮ್ಮ, ಅಣ್ಣಂದಿರ ಮಾತು ಕೇಳಿ ಅವಳ ಮನಸ್ಸು ಜರಡಿಯಾಗಿತ್ತು. ಇವರ ಪಾಲಿಗೆ ತಾನು ಮನೆ ಮಗಳಲ್ಲ, ಕೇವಲ ದುಡಿದು ತಂದು ಹಾಕುವ ಯಂತ್ರ ಮಾತ್ರ ಎಂದು ಸ್ಪಷ್ಟ ಗುರುತಿಸಿದಳು, “ಆಯ್ತು ಬಿಡಮ್ಮ, ನಿಮ್ಮ ಹತ್ತಿರ ಇಷ್ಟೆಲ್ಲ ಅನ್ನಿಸಿಕೊಂಡ ಮೇಲೂ ನಾನು ಇನ್ನೂ ಇದೇ ಮನೆಯಲ್ಲಿ ಅನ್ನ ತಿನ್ನುತ್ತಾ ಯಾಕೆ ಬಿದ್ದಿರಲಿ? ನನ್ನ ದಾರಿ ನಾನು ನೋಡಿಕೊಳ್ತೀನಿ ಬಿಡು…. ನಾನು ಅಂದ್ರೆ ಬರೀ ಹಣ ಸಂಪಾದಿಸುವ ಯಂತ್ರ ಮಾತ್ರ ಅಲ್ಲವೇ? ಇನ್ನು ಮೇಲೆ ನಿಮಗೆ ಹೊರೆಯಾಗಿ ನಾನು ಈ ಮನೆಯಲ್ಲಿ ಇರೋದಿಲ್ಲ,” ಎಂದು ಬ್ಯಾಂಕಿನ ಕೆಲಸಕ್ಕೆ ಅವಳು ಹೊರಟುಹೋದಳು.

ಆ ಇಡೀ ದಿನ ಅವಳು ನೆಮ್ಮದಿಯಾಗಿ ಕೆಲಸ ಮಾಡಲು ಆಗಲೇ ಇಲ್ಲ. ಅವರುಗಳ ಮಾತು ಈಟಿಯಂತೆ ಇರಿಯುತ್ತಿತ್ತು. ಹೇಗಾದರೂ ಬೇರೆ ಮನೆ ಮಾಡಿಕೊಂಡು ಹೊರಡಲೇಬೇಕು ಎಂಬ ಗಟ್ಟಿ ನಿರ್ಧಾರಕ್ಕೆ ಬಂದಳು.

ಅವರುಗಳ ಮನಸ್ಸಿನಲ್ಲೇನಿದೆ ಎಂಬುದು ಈಗ ಅವಳಿಗೆ ಸ್ಪಷ್ಟ ಅರಿವಾಗಿತ್ತು. ಇಂಥ ಸ್ವಾರ್ಥ ಸಂಬಂಧ ತೊರೆದು, ತನಗಾಗಿ ಅವಳು ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಬಯಸಿದಳು.

ಕಾವ್ಯಾಳ ಮನೆಗೆ ಹೋದಾಗೆಲ್ಲ, ತಾನು ನಿಜವಾಗಿಯೂ ಹಿತೈಷಿಗಳ ಮನೆಗೆ ಹೋದಂತೆ ಅವರ ಮೃದು ವ್ಯವಹಾರ ಅವಳಿಗೆ ನೆಮ್ಮದಿ ನೀಡುತ್ತಿತ್ತು. ಕಾವ್ಯಾಳಂತೆ ತಾನು ಅದೃಷ್ಟವಂತೆಯಲ್ಲ ಎಂಬುದು ಅವಳಿಗೆ ಇವರ ಪ್ರತಿ ವ್ಯವಹಾರದಿಂದಲೂ ಮನದಟ್ಟಾಗುತ್ತಿತ್ತು. ಇಂಥ ಸ್ವಾರ್ಥಿಗಳ ಮಧ್ಯೆ ಬದುಕಿ ತಾನೇ ಏನು ಫಲ? ಎಂದು ದೃಢವಾಗಿ ಬೇರೆ ಹೋಗಲು ನಿರ್ಧರಿಸಿದಳು.

ಹೀಗಾಗಿ ಅವಳು ತನ್ನ ಮೇಲಧಿಕಾರಿಗಳನ್ನು ಸಂಪರ್ಕಿಸಿ, ಬ್ಯಾಂಕಿನ ಕ್ವಾರ್ಟರ್ಸ್‌ ಗೆ ಅರ್ಜಿ ಹಾಕಿ, ಸಿಂಗಲ್ ಬೆಡ್‌ ರೂಂ ಮನೆಗೆ, ಮುಂದಿನ ತಿಂಗಳೊಳಗೆ ಶಿಫ್ಟ್ ಆದಳು. ತನ್ನದಾದ ಕೆಲವು ಸಾಮಗ್ರಿ, ಬಟ್ಟೆಬರೆ ಮಾತ್ರ ಆ ಮನೆಯಿಂದ ತಂದಿದ್ದಳು. ಬಾಕಿ ಅತ್ಯಗತ್ಯ ಸಾಮಗ್ರಿಗಳನ್ನು ಕಾವ್ಯಾಳ ನೆರವಿನಿಂದ ಶಾಪಿಂಗ್‌ ಮಾಡಿಕೊಂಡಿದ್ದಳು. ಅಂತೂ ಹೊಸ ಮನೆಯಲ್ಲಿ ಒಬ್ಬಂಟಿಯಾಗಿ ಅವಳು ಮೊದಲ ದಿನ ಕಳೆದಿದ್ದಳು. ತನ್ನ ಹೊಸ ಮನೆಯಲ್ಲಿ ಯಾವ ಕಿರಿಕಿರಿಯೂ ಇಲ್ಲದೆ, ಅವಳಿಗೆ ಅಕ್ಷರಶಃ ನೆಮ್ಮದಿ ಮೂಡಿತ್ತು.

ಅವಳು ಆ ಹೊಸ ಮನೆಗೆ ಬಂದು 1 ವಾರ ಕಳೆದಿತ್ತು. ಆ ಕಡೆಯಿಂದ ತಾಯಿ ಇವಳ ಮೊಬೈಲ್ ‌ಗೆ ಫೋನ್‌ ಮಾಡಿ ಅಳುತ್ತಾ ಹೇಳಿದರು, “ನೀನಂತೂ ಬೇಜಾರು ಮಾಡಿಕೊಂಡು ಮನೆಯಿಂದ ಹೊರಟುಬಿಟ್ಟೆ, ನಿನ್ನ ಒಬ್ಬರು ಅಣ್ಣಂದಿರೂ ಈಗ ದಿನೇ ದಿನೇ ನನ್ನನ್ನು ಒಂದೊಂದು ಪೈಸೆಗಾಗಿ ಪೀಡಿಸುತ್ತಿದ್ದಾರೆ. ನೀನು ಹಣ ಕೊಡ್ತಾ ಇದ್ದುದರಿಂದ ಕಳೆದ 4-5 ವರ್ಷಗಳಿಂದ ಮನೆಯಲ್ಲಿ ಒಲೆ ಹಚ್ಚಲು ಸಾಧ್ಯವಾಗಿತ್ತು.

“ಬಾಡಿಗೆ ಹಣ ಇಡೀ ತಿಂಗಳ ಖರ್ಚಿಗೆ ಎಲ್ಲಿಂದ ಸಾಧ್ಯವಾದೀತು? ಇಬ್ಬರೂ ಸದಾ ಜಗಳ ಆಡ್ತಾ ಇರ್ತಾರೆ. ನಿನ್ನೆ ಏನೂ ಮಾಡಲು ಆಗಲಿಲ್ಲ ಅಂತ ಅನ್ನ ಮಾಡಿ, ಟೊಮೇಟೊ ಗೊಜ್ಜು ತುಸು ನೀರಾಗಿ ಮಾಡಿರಿಸಿದ್ದೆ. ಈ ದರಿದ್ರ ಯಾರು ತಿಂತಾರೆ ಅಂತ ತಟ್ಟೆ ನನ್ನ ಮುಖಕ್ಕೆ ಎಸೆದು, ನನ್ನನ್ನು ಗೋಡೆಗೆ ತಳ್ಳಿ ಹೊರ ಹೋದರು ಇನ್ನೂ ಮನೆಗೆ ಬಂದಿಲ್ಲ. ನನ್ನ ತಲೆ ಗೋಡೆಗೆ ಬಡಿದು ಬಾವು ಬಂದಿದೆ, ಅಸಾಧ್ಯದ ತಲೆನೋವು. ಹೇಗಮ್ಮ ನಾನು ಇವರ ಜೊತೆ ಹೆಣಗಲಿ?”

“ಗಂಡು ಮಕ್ಕಳ ಮೇಲೆ ಅತ್ಯಧಿಕ ಧೃತರಾಷ್ಟ್ರ ಪ್ರೇಮ ಹರಿಸುವ ಮೊದಲು ನೀನು ಇದನ್ನೆಲ್ಲ ಸಾವಿರ ಸಲ ಯೋಚಿಸ ಬೇಕಿತ್ತಮ್ಮ…. ಅವರಿಗೆ ನಾನು ಏನು ಹೇಳಲಿ? ನಿನಗೆ ಆ ಮನೆಯಲ್ಲಿ ಆಗೋದೆ ಇಲ್ಲ ಅಂದ್ರೆ, ಬೇಕಾದ ಸಾಮಾನು ತಗೊಂಡು ಇಲ್ಲಿ ನನ್ನ ಮನೆಗೆ ಬಂದುಬಿಡು, ನಿನಗೆ ಅನ್ನ ಹಾಕಿ ಸಾಕುವಷ್ಟು ಯೋಗ್ಯತೆಯಂತೂ ಆ ದೇವರು ನನಗೆ ಕೊಟ್ಟಿದ್ದಾನಮ್ಮ. ಬೇಕೆನಿಸಿದಾಗ ಇಲ್ಲಿಗೆ ಬಾ!”

“ಬೇಡಮ್ಮ ಬೇಡ…. ನಾನು ಅಲ್ಲಿಗೆ ಬಂದುಬಿಟ್ಟರೆ ಇವರಿಗೆ ಅಡುಗೆ ಮಾಡಿ ಹಾಕೋರು ಯಾರಮ್ಮ…? ಅವರನ್ನು ಬಿಟ್ಟು ನಾನು ಬರಲಾರೆ!”

“ನಿನ್ನ ಈ ಮೂರ್ಖತನಕ್ಕೆ ನಾನು ಏನು ಹೇಳಲಮ್ಮ? ಇಬ್ಬರಿಗೂ 4 ಕತ್ತೆ ವಯಸ್ಸಾಯ್ತು, ತಮ್ಮ ಅನ್ನ ತಾವು ಸಂಪಾದಿಸಿಕೊಳ್ಳಲು ಯೋಗ್ಯತೆ ಇಲ್ಲ. ಸರಿ, ಸಂಜೆ ಬರುವಾಗ ನಿನಗೆ ಸ್ವಲ್ಪ ಹಣ ಕೊಡ್ತೀನಿ. ನೀನು ಬದುಕಿಕೊಳ್ಳುವ ದಾರಿ ನೋಡಮ್ಮ,” ಎಂದು ಆ ಸಂಜೆ ಅಮ್ಮನ ಮನೆಗೆ ಹೋಗಿ ಅವರಿಗೆ 2 ಸಾವಿರ ಹಣ ಕೊಟ್ಟು ತನಗೆ ತೋಚಿದ್ದನ್ನೆಲ್ಲ ಹೇಳಿದಳು.

3-4 ದಿನ ಕಳೆಯುವಷ್ಟರಲ್ಲಿ ಅಮ್ಮ ಮತ್ತೆ ಫೋನ್‌ ಮಾಡಿದರು, “ರಾಜಿ, ಸಂಜೆ ಬರುವಾಗ 5 ಸಾವಿರ ಡ್ರಾ ಮಾಡಿಕೊಂಡು ಬಾ. ಮನೆಯಲ್ಲಿ ಕಾಳು ಕಡ್ಡಿ ಏನೂ ಇಲ್ಲ. ನಾಳೆಗೆ ಏನು ಅಡುಗೆ ಮಾಡಲಿ?”

“ಅಲ್ಲಮ್ಮ…. ಮೊನ್ನೆ ಕೊಟ್ಟ ಹಣ ಅಷ್ಟು ಬೇಗ ಖರ್ಚಾಗಿ ಹೋಯ್ತೆ? 2-3 ದಿನಗಳಲ್ಲಿ ಹೀಗೆ ಹಣ ಉಡಾಯಿಸಿದರೆ ನಾನೇನು ಮಾಡಲಿ?”

“ಅವರಿಬ್ಬರ ಕಷ್ಟ ನೋಡಾಗದೆ ನಾನೇ ಅವರಿಗೆ 500-500ರ ನೋಟು ನೀಡಿದೆ. ಉಳಿದ ಹಣದಲ್ಲಿ ಇಷ್ಟು ದಿನ ಊಟ ಮಾಡಿದೆವು.”

“ಅದೆಲ್ಲ ನನಗೆ ಗೊತ್ತಿಲ್ಲಮ್ಮ…… ನಿನ್ನ ಆ ಗಂಡು ಮಕ್ಕಳಿಗೆ ದುಡಿದು ಸಂಪಾದಿಸಲು ಹೇಳು, ನಿನಗೆ ಅಲ್ಲಿ ಬದುಕಲು ಆಗದ್ದಿದರೆ ಇಲ್ಲಿಗೇ ಬಂದುಬಿಡು. ನಾನು ದಿನವಿಡೀ ಬೆವರು ಸುರಿಸಿ ದುಡಿದು ಸಂಪಾದಿಸಿದ್ದನ್ನು ಅವರು ಅಶಡ್ಡಾಳವಾಗಿ ಹಣ ಖರ್ಚು ಮಾಡಲು ಆಗಾಗ ಕೊಡೋದಿಕ್ಕೆ ಖಂಡಿತಾ ಸಾಧ್ಯವಿಲ್ಲ! ಇದು ಖಂಡಿತಾ ಸರಿಯಲ್ಲ ಕಣಮ್ಮ. ಇನ್ನು ಮುಂದೆ ಒಂದು ನಯಾ  ಪೈಸೆ ಕೊಡೋದಿಲ್ಲ. ನಾನು ಬೇಕು ಅನ್ನಿಸಿದಾಗ ಇಲ್ಲಿಗೆ ಬಾ!” ಎಂದು ಫೋನ್‌ ಇರಿಸಿಬಿಟ್ಟಳು.

ಆ ರಾತ್ರಿ ತಾಯಿ ಮತ್ತೆ ಫೋನ್‌ ಮಾಡಿದ್ದರು. ರಾಜಿ ಆ ಕಾಲ್ ‌ಕಟ್‌ ಮಾಡಿ ಫೋನ್‌ ಸ್ವಿಚ್‌ ಆಫ್‌ ಮಾಡಿದಳು.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ