ಸಮಾಜದ ರೂಢಿ ವಾದಿ ಪರಂಪರೆಗಳನ್ನು ಬದಿಗೊತ್ತಿ ದಿನೇಶ್ ಮತ್ತು ಸ್ವಾತಿ ತಮ್ಮ ಜೀವನವನ್ನು ವಿಭಿನ್ನವಾಗಿ ನಡೆಸಲು ಯತ್ನಿಸಿದಾಗ, ಅವರು ಈ ಚಿತ್ರ ವಿಚಿತ್ರ ಜನರನ್ನು ಎದುರಿಸಿದ್ದು ಹೇಗೆ…..?
ತೆಳುಕಾಯದ, ಉದ್ದನೆ, ಹಾಲು ಕೆನೆಯ ಮೈ ಬಣ್ಣದ, 48ರ ಹರೆಯದ ಸ್ವಾತಿ ಬೆಂಗಳೂರಿನ ಪಾಶ್ ಏರಿಯಾದ ಆ ಫ್ಲಾಟಿನಲ್ಲಿ ಮೊದಲಿನಿಂದ ಒಬ್ಬಳೇ ಒಂಟಿಯಾಗಿ ವಾಸಿಸುತ್ತಿದ್ದಳು. ಆ ಮನೆಗೆ ತಾನು ಸುಖಿಯಾಗಿ ಜೀವನ ನಡೆಸಬಹುದು ಎಂದು ನೂರಾರು ಆಸೆಗಳನ್ನು ಹೊತ್ತು ಬಂದಿದ್ದಳು. ಆದರೆ ಅವಳ ಕನಸು ನನಸಾಗಲಿಲ್ಲ. ಸುಖ ಅವಳ ಪಾಲಿಗೆ ಮರೀಚಿಕೆ ಆಗಿತ್ತು.
ಸ್ವಾತಿಯ ತಂದೆಗೆ ಇಬ್ಬರು ಪತ್ನಿಯರು. ಅವರ ಹಿರೀ ಪತ್ನಿ ತೀರಿಕೊಂಡ ನಂತರ ಇವಳ ತಾಯಿಯನ್ನು ಮದುವೆ ಆಗಿದ್ದರು. ಮೊದಲ ಪತ್ನಿಗೆ ಒಬ್ಬನೇ ಮಗನಿದ್ದ. ಇವಳ ತಾಯಿ ಜಾನಕಮ್ಮ ಆ ಮಲಮಗನನ್ನೂ ತಮ್ಮ ಸ್ವಂತ ಮಗನಂತೆಯೇ ಸಾಕಿದ್ದರು. ಅಣ್ಣ-ತಂಗಿ ಮಧ್ಯೆ ಎಂದೂ ಮಲಮಕ್ಕಳೆಂಬ ಭಾವನೆ ಬರಲೇ ಇಲ್ಲ. ಎಲ್ಲವೂ ಸಹಜವಾಗಿಯೇ ಮುಂದುವರಿದಿತ್ತು. ಮುಂದೆ ತಾಯಿ ತಂದೆ ಒಂದು ಆಕಸ್ಮಿಕ ದುರ್ಘಟನೆಯಲ್ಲಿ ತೀರಿ ಹೋದರು. ಆ ನಂತರ ಅಣ್ಣನ ಮದುವೆ ಆಗಿತ್ತು. ಮನೆಗೆ ಬಂದ ಅತ್ತಿಗೆ, ಪರಿಸ್ಥಿತಿ ಗಮನಿಸಿಕೊಂಡು ಗಂಡನನ್ನು ತನ್ನ ಕೈಗೊಂಬೆ ಮಾಡಿಕೊಂಡು ಅಣ್ಣತಂಗಿ ಮಧ್ಯೆ ಇದ್ದ ಪ್ರೀತಿವಾತ್ಸಲ್ಯಕ್ಕೆ ಬೆಂಕಿ ಇಟ್ಟಳು.
ನಾದಿನಿ ತನಗೆಂದಿದ್ದರೂ ಕಂಟಕವೇ ಎಂದು ಸಾಧ್ಯವಾದ ಎಲ್ಲಾ ಕಾಟಗಳನ್ನೂ ಮುಂದೊಡ್ಡಿದಳು. ಒಂದು ಖಾಸಗಿ ಕಾಲೇಜಿನಲ್ಲಿ ಲೆಕ್ಟರರ್ ಆಗಿದ್ದ ಸ್ವಾತಿ, ಆ ಮನೆಗೆ ಹೊರಗೂಒಳಗೂ ದುಡಿಯುವ ಯಂತ್ರವಾಗಿದ್ದಳು. ಅಣ್ಣ ಕಂಡೂ ಕಾಣದಂತೆ ತಲೆ ತಗ್ಗಿಸಿ ಓಡಾಡಿಕೊಂಡಿದ್ದ. ಕೊನೆಗೆ ಆ ಮಹಾತಾಯಿ, 32ರ ಗಡಿಗೆ ಬಂದಿದ್ದ ಈ ನಾದಿನಿಯನ್ನು ಹೇಗಾದರೂ ಸಾಗ ಹಾಕಬೇಕೆಂದು 40ರ ಮಧ್ಯಮ ವರ್ಗದ ಗಂಗಾಧರ್ ಜೊತೆ ಮದುವೆಗೆ ಏರ್ಪಾಡು ನಡೆಸಿದಳು. ಎಂದಿನಂತೆ ಅಣ್ಣ ಅವಳ ಮಾತಿಗೆ ತಲೆಯಾಡಿಸಿದ್ದ. ಇಲ್ಲಿ ಸ್ವಾತಿಯ ಅಭಿಪ್ರಾಯ ಯಾರಿಗೂ ಬೇಕಿರಲಿಲ್ಲ.
ಗಂಗಾಧರ್ ಅವಳಿಗಿಂತ 8 ವರ್ಷ ದೊಡ್ಡವನಾಗಿದ್ದ, ತಂದೆ ಇರಲಿಲ್ಲ, ರೋಗಿಷ್ಟ ತಾಯಿ ಮಾತ್ರ ಇದ್ದರು. ಆ ಮಹಾತಾಯಿಯ ಹಠದ ಮುಂದೆ ಈ ಒಬ್ಬನೇ ಮಗನಿಗೆ ಒದಗಿಬರುತ್ತಿದ್ದ ವಧುಗಳೆಲ್ಲ ಕ್ಯಾನ್ಸಲ್ ಆಗುತ್ತಾ, 40ನ್ನು ಸಮೀಪಿಸಿದ್ದ. ಇವಳ ಮದುವೆ ಆಗಿ 4 ವರ್ಷ ಕಳೆಯುವಷ್ಟರಲ್ಲಿ ಅತ್ತೆ ತೀರಿಕೊಂಡರು, ಅದಾಗಿ 4 ವರ್ಷಗಳಲ್ಲಿ ಗಂಗಾಧರನಿಗೂ ಹೃದಯಾಘಾತವಾಗಿ ಕಣ್ಮುಚ್ಚಿದ್ದ. ಹೀಗೆ ಮದುವೆಯಾಗಿ ಕೇವಲ ವರ್ಷಗಳಲ್ಲೇ ಅವಳ ವೈವಾಹಿಕ ಜೀವನ ಬಾಡಿ ಹೋಯಿತು.
ಅದಾದ ಮೇಲೆ ಮತ್ತೆ ತವರಿಗೆ ಆಸರೆ ಬಯಸಿ ಬರಬೇಕಾಯಿತು. ಮತ್ತೆ ಯಥಾ ಪ್ರಕಾರ, ಆ ಮನೆಯಲ್ಲಿ ದುಡಿಯುವ ಯಂತ್ರವಾದಳು. ಬಾಣಲೆಯಿಂದ ಬೆಂಕಿಗೆ ಎಂಬುದಕ್ಕೆ ಅವಳ ಜೀವನ ಒಂದು ನಿದರ್ಶನವಾಗಿತ್ತು. ಹೀಗೆ 40+ ಆದ ಅವಳು ಆ ಮನೆಗೆ ಬೇಡದ ಸದಸ್ಯೆಯಾಗಿ ಜೀವನ ನಡೆಸಲೇಬೇಕಿತ್ತು. ಈ ಎಲ್ಲಾ ಕಂಟಕಗಳಿಂದ ಪಾರಾಗಲು ಅವಳಿಗಿದ್ದ ಒಂದೇ ದಾರಿ, ತಾನು ಪ್ರತ್ಯೇಕವಾಗಿ ಬೇರೆ ಮನೆಯಲ್ಲಿ ವಾಸಿಸುವುದಾಗಿತ್ತು.
ಅಂತೂ ಅವಳು ದೃಢವಾಗಿ ಆ ನಿರ್ಧಾರ ತಳೆಯಲು ಮತ್ತೆರಡು ವರ್ಷ ಕಳೆಯಬೇಕಾಯಿತು. ಈ ರೀತಿ ಅವಳು ಹೇಗೋ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ಸೇರಿ, ಅಣ್ಣನ ಮನೆ ಏರಿಯಾದಿಂದ ಬಹು ದೂರ ಸಾಗಿಬಂದಿದ್ದಳು. ತನ್ನ ಕೆಲಸಕ್ಕೆ ಆ ಹಾಸ್ಟೆಲ್ ದೂರವಾದರೂ, ನೆಮ್ಮದಿಯ ಒಂಟಿ ಜೀವನ ನಡೆಸತೊಡಗಿದಳು. ಹಾಸ್ಟೆಲ್ ಜೀವನ ಸಾಕಾದಾಗ ಮುಂದೆ ಸರ್ಕಾರಿ ಕ್ವಾರ್ಟರ್ಸ್ ನ ಫ್ಲಾಟ್ ಗೆ ಬಂದಳು.
ಇದನ್ನೆಲ್ಲ ಯೋಚಿಸುತ್ತಲೇ ಅವಳು ಅಂದು ಬೆಳಗಿನ ಹೊತ್ತು ಆಫೀಸಿಗೆ ಬೇಗ ಬೇಗ ರೆಡಿ ಆಗುತ್ತಿದ್ದಳು. ಅಂದು ಅವಳು ಅಪರೂಪಕ್ಕೆ ನೀಲಿ ಸ್ಟ್ರೆಚೆಬಲ್ ಜೀನ್ಸ್ ಹಾಗೂ ಮ್ಯಾಚಿಂಗ್ ಸ್ಕೈ ಬ್ಲೂ ಚಿಕನ್ ಕಾರಿ ಕುರ್ತಿ ಧರಿಸಿ ಸ್ಮಾರ್ಟಾಗಿ ಹೊರಟಳು.
ಎಂದಿನಂತೆ ಅವಳು ಮೂಲೆಯಲ್ಲಿನ ತನ್ನ ಮೇಜಿನ ಬಳಿ ಬಂದು, ಫ್ಯಾನ್ ಹಾಕಿ ದಣಿವಾರಿಸಿಕೊಂಡು, ಕಂಪ್ಯೂಟರ್ ಆನ್ ಮಾಡಿ, ಬಿಡುವಿಲ್ಲದ ತನ್ನ ಕೆಲಸ ಶುರು ಮಾಡಿಕೊಂಡಳು. ಅವಳ ಸಹೋದ್ಯೋಗಿಗಳು ಮಹಾ ಮೈಗಳ್ಳರು. ಏನೋ ಒಂದು ಮಾತನಾಡಿಸುತ್ತಾ, ಇವಳು ನೆಮ್ಮದಿಯಾಗಿ ಬೇಗ ಬೇಗ ತನ್ನ ಕೆಲಸ ಮಾಡಿಕೊಳ್ಳಲು ಅವಕಾಶ ಕೊಡುತ್ತಿರಲಿಲ್ಲ. ಬೇರೆ ಕಡೆ ಖಾಸಗಿ ಕಾಲೇಜಿನಲ್ಲಿ ದುಡಿಯುತ್ತಿದ್ದವಳಿಗೆ ಗಂಗಾಧರ್ ನ ಮರಣದ ಕಾರಣ, ಈ ಸರ್ಕಾರಿ ಡಿಸ್ಟ್ರಿಕ್ಟ್ ಎಜುಕೇಶನ್ ಆಫೀಸ್ ನಲ್ಲಿ ಖಾಯಂ ನೌಕರಿ ದೊರಕಿತ್ತು. ಈ ಸರ್ಕಾರಿ ಕಛೇರಿ ಸೇರಿ ಈಗಾಗಲೇ ಅವಳಿಗೆ ವರ್ಷದ ಮೇಲಿನ ಅನುಭವ ಆಗಿತ್ತು.
ಇಂದೂ ಸಹ ಅವಳು ತನ್ನ ಕೆಲಸದಲ್ಲಿ ನಿರತಳಾದಾಗ ಸಹೋದ್ಯೋಗಿಗಳಾದ ಮಹೇಶ್ ಕುಮಾರ್ ಮತ್ತು ಗೋಪಾಲ್ ರಾವ್ ಇವಳ ಕಡೆಯೇ ಓರೆಗಣ್ಣಿನಿಂದ ನೋಡುತ್ತಿದ್ದರು. ಒಬ್ಬಂಟಿ ಹೆಂಗಸಿನ ಬಗ್ಗೆ ಎಲ್ಲರಿಗೂ ಹಗುರ ಅಭಿಪ್ರಾಯವೇ! ಅವರಿಬ್ಬರದೂ 46-48ರ ಹರೆಯ. ಈ ಮೂವರು ಮಾತ್ರವಲ್ಲದೆ, ಆ ಆಫೀಸಿನಲ್ಲಿ ದುಡಿಯುತ್ತಿದ್ದವರು ಇನ್ನೂ 20 ಮಂದಿ ಇದ್ದರು. ಬೇಕೆಂದೇ ಅವಳನ್ನು ಕೆಣಕು ಮಾತನಾಡುವುದು ಅವರಿಗೆ ವಾಡಿಕೆಯಾಗಿತ್ತು.
“ಅಬ್ಬಾ…. ಈ ಬೆಂಗಳೂರಿನಲ್ಲಿ ದಿನೇ ದಿನೇ ಸೆಖೆ ಜಾಸ್ತಿ ಆಗ್ತಿದೆ…. ಈ ಉಷ್ಣತೆಯಲ್ಲಿ ಆ ರಶ್ಶಾಗಿರುವ ಬಸ್ಸು ಏರಿಕೊಂಡು, ಕಂಡೋರ ಮೈ ತಾಕಿಸಿಕೊಳ್ಳುತ್ತಾ ಯಾಕೆ ಕಷ್ಟ ಪಡಬೇಕು? ನಮ್ಮಂಥ ಸಹೋದ್ಯೋಗಿಗಳ ಬೈಕ್ ಇರುವುದಾದರೂ ಏಕೆ?” ಮಹೇಶ್ ಗೋಪಾಲ್ ಕಡೆ ಕುಟಿಲ ನಗೆ ಬೀರುತ್ತಾ ಇವಳಿಗೆ ಕೇಳಲೆಂದೇ ಹೇಳಿದ.
ಅದೇ ಸಮಯಕ್ಕೆ ಹೊರಗೆ ಕಾಫಿಗೆ ಹೋಗಿದ್ದ ಅಂಜಲಿ, ಸುನಂದಾ ಸ್ವಾತಿಯ ಮೇಜಿನ ಬಳಿ ಬರುವಾಗ ಈ ಮಾತು ಅವರಿಗೂ ಸ್ಪಷ್ಟ ಕೇಳಿಸಿತ್ತು. ಮಹೇಶ್ ಅವರತ್ತ ಕಣ್ಣು ಮಿಟುಕಿಸಿ ಕುಹಕದ ನಗೆ ನಗಲು ಅವರೂ ಕಿಸಕ್ಕನೆ ನಕ್ಕು ಅಲ್ಲಿಂದ ಮುಂದೆ ನಡೆದರು. ಆ ನಾಲ್ವರೂ ಆಫೀಸಿನಲ್ಲಿ ದುಷ್ಟ ಚತುಷ್ಟಯರೆಂದೇ ಕುಖ್ಯಾತರಾಗಿದ್ದರು.
ಇದನ್ನೆಲ್ಲ ಕೇಳಿಸಿಕೊಂಡ ಸ್ವಾತಿಗೆ ಜಿಗುಪ್ಸೆಯಿಂದ ಮೈ ಪರಚಿಕೊಳ್ಳುವಂತಾಗಿತ್ತು. ತಾನು ತನ್ನ ಕೆಲಸದಲ್ಲಿ ಎಷ್ಟೇ ಮುಳುಗಿರುವೆನೆಂದು ಸೀರಿಯಸ್ ಆಗಿ ತೋರಿಸಿಕೊಂಡರೂ, ಇಂಥ ಕುಹಕದ ಮಾತುಗಳು ಆಗಾಗ ಅವಳ ಕಿವಿಗೆ ಬೀಳುತ್ತಿದ್ದವು.
ಲಲಿತಮ್ಮ ಸ್ವಾತಿಯ ಪ್ರೌಢ ವಯಸ್ಸಿನ ಸಹೋದ್ಯೋಗಿ ಆಗಿದ್ದರು. ಮೊದಲಿನಿಂದಲೂ ಗಂಗಾಧರ್ ಅಕೆ ಜೊತೆ ಬಹಳ ನಮ್ರ ವ್ಯವಹಾರ ಇರಿಸಿಕೊಂಡಿದ್ದ. ಅಂಥ ವಿಧವೆಗೆ ಈ ಕೆಟ್ಟ ಮಂದಿಯ ಕಾಕದೃಷ್ಟಿ ಬಿತ್ತಲ್ಲ ಎಂದು ನೊಂದುಕೊಳ್ಳುತ್ತಾ, ಯಾವುದೋ ಫೈಲ್ ಹಿಡಿದು ಆ ಕಡೆ ಬಂದವರು ಸ್ವಾತಿ ಬಳಿ ಬಂದು ಹೇಳಿದರು, “ಈ ಜನರ ಬುದ್ಧಿ ಬಹಳ ಕೆಳ ಮಟ್ಟದ್ದು. ನೋಡಲಿಕ್ಕೇನೋ ಓದಿಕೊಂಡವರೇ, ಆದರೆ ವ್ಯವಹಾರ ಮಾತ್ರ ಇಂಥ ಕೀಳು ಮಟ್ಟದ್ದು. ನೀನು ತುಸು ಆಧುನಿಕ ಗೆಟಪ್ ನಲ್ಲಿ ಬಂದಿದ್ದೀಯಲ್ಲ, ಅದು ಇವರಿಗೆ ಇಂಥ ಕೆಣಕು ಮಾತನಾಡಲು ದಾರಿ ಮಾಡಿದೆ.
“ಹಳೆಯ ಸಿನಿಮಾಗಳಂತೆ ಹಣೆಗಿಲ್ಲದೆ, ಬಿಳಿ ಸೀರೆ ಉಟ್ಟು, ತಲೆ ತಗ್ಗಿಸಿ ಸದಾ ದುಃಖದಲ್ಲಿ ಇದ್ದದ್ದರೆ…. ಆಗ ಇವರುಗಳ ಬಾಯಿಗೆ ಬೀಗ ಬಿದ್ದಿರುತ್ತಿತ್ತೇನೋ…. ಎಲ್ಲರೊಂದಿಗೆ ನೀನು ಶಿಷ್ಟಾಚಾರದಿಂದ ನಡೆದುಕೊಳ್ತೀಯಾ, ನಗು ಮಗುತ್ತಾ ಮಾತನಾಡ್ತಾ ಇರ್ತೀಯಾ, ಆಧುನಿಕ ಡ್ರೆಸ್ ಧರಿಸಿದ್ದೀಯಾ ಅಂತ ಅನಗತ್ಯ ಸಲುಗೆ ತೋರಲು ಯತ್ನಿಸುತ್ತಾರೆ. ನೀನೇನೂ ಬೇಜಾರು ಮಾಡಿಕೊಳ್ಳಬೇಡಮ್ಮ, ಹೊರಗಿನ ಬೀದಿಯಲ್ಲಿ ನಡೆಯುವಾಗ ಕಾಲಿಗೆ ಹೊಲಸು ತಗುಲದೆ ಇರುತ್ತದೆಯೇ? ನೀನು ಈಗಿರುಲಮತೆ ಸದಾ ಸ್ಟ್ರಿಕ್ಟ್ ಆಗಿರು,” ಎಂದು ಕುದಿವ ಅವಳ ಮನಸ್ಸಿಗೆ ನಾಲ್ಕು ತಂಪಿನ ಮಾತನಾಡಿದರು.
ಎಷ್ಟೇ ಆಧುನಿಕ ಕಾಲ ಬಂದಿದೆ ಎಂದುಕೊಂಡರೂ ನಮ್ಮ ಸಮಾಜದಲ್ಲಿ ಇಂದಿಗೂ ವಿಧವೆ ಮನೆಯ ಹೊರಗಿನ ಓಡಾಟಗಳಲ್ಲಿ ಎರಡನೇ ದರ್ಜೆಯ ಪ್ರಜೆಯೇ. ಆಕೆ ವಿಚ್ಛೇದಿತೆ ಆದರೆ 3ನೇ ದರ್ಜೆ ಪ್ರಜೆ ಆಗುತ್ತಾಳೆ. ನಮ್ಮ ಸಮಾಜದ ಸಂಕುಚಿತ ಮನೋಭಾವ ಬದಲಾಗಲು ಇನ್ನೆಷ್ಟು ದಶಕಗಳು ಬೇಕೋ? ಜನರ ಭಾವನೆಗಳು ಬದಲಾಗುವುದೆಂದೋ?
ಅದೇ ಒಬ್ಬ ಗಂಡಸು ವಿಧುರನಾದರೆ, ಎಲ್ಲರೂ ಅವನತ್ತ ಸಹಾನುಭೂತಿ ತೋರುವವರೇ. ಅದರಲ್ಲೂ ಮಕ್ಕಳಿದ್ದರೆ, ಪಾಪ…. ಪ್ರಾಣಿ ಮನೆ ನಿರ್ವಹಿಸುತ್ತಾ, ಆಫೀಸ್ ಕೆಲಸ ಹೇಗೆ ಸಂಭಾಳಿಸುತ್ತದೋ ಎಂದು ಹೆಚ್ಚಿನ ಅನುಕಂಪ ತೋರುತ್ತಾರೆ. ಹೀಗಾಗಿ ಆತ ತನ್ನ ವೈಯಕ್ತಿಕ ಮನರಂಜನೆಗಾಗಿ ಬೇರೆ ಹೆಣ್ಣನ್ನು ಹುಡುಕಿಕೊಂಡರೂ, ಪತ್ನಿ ಸತ್ತು ಮೂರೇ ತಿಂಗಳಲ್ಲಿ ಮರುಮದುವೆ ಆದರೂ ಅದು ಮಾನ್ಯವೇ! ಆದರೆ ಹೆಣ್ಣಿಗೆ ಮಾತ್ರ ಎಂದೆಂದೂ ಆ ಸ್ವಾತಂತ್ರ್ಯ ಇಲ್ಲ ಎಂದೇ ಹೇಳಬಹುದು. ಇಂಥದೇ ಯೋಚನೆಗಳಲ್ಲಿ ಅವಳಿಗೆ ಆ ದಿನ ಹೇಗೋ ಕಳೆಯಿತು.
ಇವರ ಆಫೀಸಿಗೆ ಹೊಸದಾಗಿ ನಿತಿನ್ ಎಂಬ ತರುಣ ಬಂದು ಸೇರಿದ. ಸ್ವಾತಿಗಿಂತ 7-8 ವರ್ಷ ಚಿಕ್ಕವನಾದ ಆತನ ಶಿಷ್ಟ ವ್ಯವಹಾರ ಅವಳಿಗೆ ಇಷ್ಟವಾಯಿತು. ತಾನಾಯಿತು, ತನ್ನ ಕೆಲಸವಾಯಿತು ಎಂಬ ಅವನ ಗುಣ ಅವಳಿಗೆ ಹಿಡಿಸಿತು. ಕೆಲಸದ ಸಲುವಾಗಿ ಸ್ವಾತಿ ಅವನೊಂದಿಗೆ ಎಷ್ಟೋ ಸಲ ವ್ಯವಹರಿಸಬೇಕಾಗಿ ಬರುತ್ತಿತ್ತು. ಕ್ರಮೇಣ ಇಬ್ಬರಲ್ಲೂ ಸ್ನೇಹ, ಸೌಹಾರ್ದತೆ ಬೆಳೆಯಿತು. ಅವರು ಪ್ರತಿ ಸಲ ಆಫೀಸ್ ಕೆಲಸದ ನಂತರ, ಲೋಕಾಭಿರಾಮವಾಗಿ ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಮಾತುಕಥೆ ಆಡುತ್ತಿದ್ದರು. ಇಬ್ಬರಿಗೂ ಪರಸ್ಪರರ ಕೌಟುಂಬಿಕ ವಿಷಯ ಕೆದಕುವ ಅಗತ್ಯ ಇರಲಿಲ್ಲ.
ಎಷ್ಟೋ ಸಲ ಊಟ ತರಲಾಗದೆ ಇದ್ದಾಗ, ಸ್ವಾತಿ ನಿತಿನ್ ಜೊತೆ ಕ್ಯಾಂಟೀನ್ ಗೆ ಊಟಕ್ಕೆ ಹೋಗುತ್ತಿದ್ದಳು. ಅವನು ಬ್ಯಾಚುಲರ್ ಆದ್ದರಿಂದ, ಆ ಆಫೀಸಿನಲ್ಲಿ ಹೇಳಿಕೊಳ್ಳುವಂಥ ಬೇರೆ ಯಾವ ಸ್ನೇಹ ಜೀವಿಯೂ ಇಲ್ಲವಾದ್ದರಿಂದ, ಸಹಜವಾಗಿಯೇ ಇವಳ ಸಾಂಗತ್ಯ, ಸ್ನೇಹ ಬಯಸಿ ಜೊತೆಗೂಡುತ್ತಿದ್ದ. ಹೀಗೆ ಆಗಾಗ ಕಾಫಿಗೆ ಹೋಗಿಬರುವ ತನಕ ಅವರಲ್ಲಿ ಸಲುಗೆ ಬೆಳೆದಿತ್ತು. ಸಹಜವಾಗಿಯೇ ಇವರಿಬ್ಬರ ಈ ಸ್ನೇಹ ಕಂಡು ಅಲ್ಲಿದ್ದ ದುಷ್ಟ ಚತುಷ್ಟಯರಿಗೆ ಮೈಯೆಲ್ಲ ಉರಿಯುತ್ತಿತ್ತು. ಹೀಗೆ ಕಾಲ ಓಡುತ್ತಿತ್ತು.
ಅಂದು ನಿತಿನ್ ಆಫೀಸಿಗೆ ಬಂದಿರಲಿಲ್ಲ. ಆ ವಿಚಾರ ಗೊತ್ತಿಲ್ಲದ ಅವಳು, ಮತ್ತೆ ಮತ್ತೆ ಅವನಿಗಾಗಿ ಬಾಗಿಲ ಕಡೆ ತಿರುಗಿ ನೋಡುತ್ತಿದ್ದಳು. ಅವಳು ಒಬ್ಬಳೇ ಕಾಲೆಳೆಯುತ್ತಾ ಊಟಕ್ಕಾಗಿ ಕ್ಯಾಂಟೀನ್ ಕಡೆ ಹೆಜ್ಜೆ ಹಾಕಿದಳು. ಅಂದು ಅವನ ಕಂಪನಿ ಇಲ್ಲದೆ, ಒಬ್ಬಳೇ ಊಟ ಮಾಡಬೇಕಲ್ಲ ಎಂದು ಬೇಸರವಾಗಿತ್ತು. ಬಹಳ ದಿನಗಳ ನಂತರ ತಾನು ಒಬ್ಬಂಟಿಯಾದೆ ಎಂಬ ಭಾವ ಕಾಡತೊಡಗಿತು. ಯಾಕೋ ತಡೆಯಲಾರದೆ ಅವಳು ನಿತಿನ್ ಗೆ ಕಾಲ್ ಮಾಡಿದಳು. ಇದೇ ಮೊದಲ ಸಲ ಅವಳು ಅವನಿಗೆ ಕಾಲ್ ಮಾಡಿದ್ದು. ಅಪರೂಪಕ್ಕೆ ಹಿಂದೆ ಯಾವಾಗಲೋ ಅವನು ಅವಳಿಗೆ ಒಮ್ಮೆ ಕಾಲ್ ಮಾಡಿದ್ದುಂಟು, ಹೀಗಾಗಿ ನಂಬರ್ ಸೇವ್ ಆಗಿತ್ತು.
ಆದರೆ ಅದೇಕೋ ನಿತಿನ್ ಆ ಕಡೆಯಿಂದ ಇವಳ ಕರೆ ರಿಸೀವ್ ಮಾಡಲೇ ಇಲ್ಲ. ಅವನು ಏನು ಬಿಝಿ ಆಗಿದ್ದನೋ ಏನೋ… ಸಾಮಾನ್ಯ ವಿಷಯವೇ ಆಗಿದ್ದರೂ ಇದೇಕೋ ಅವಳನ್ನು ಮತ್ತೆ ಮತ್ತೆ ಕುಟುಕ ತೊಡಗಿತು. ತನ್ನನ್ನು ತಾನು ಸಮಾಧಾನ ಪಡಿಸಿಕೊಂಡು ಹೇಗೋ ಊಟ ಮುಗಿಸಿ ಬಂದಳು.
ಮಧ್ಯಾಹ್ನ ದಿಢೀರ್ ಎಂದು ಬಾಸ್ ದಿನೇಶ್ ಅವಳಿಗೆ ಹೇಳಿ ಕಳಿಸಿದ್ದರು. ಸ್ವಾತಿ ಅವರ ಕ್ಯಾಬಿನ್ ಗೆ ಹೋದಳು. 52ರ ಹತ್ತಿರದ ಆತ ಗಂಭೀರ ವ್ಯಕ್ತಿತ್ವ ಹೊಂದಿದ್ದರು. ಎತ್ತರದ ಪರ್ಸನಾಲಿಟಿ, ಗಡ್ಡ ಬೆಳೆಸಿ, ಮುಖದಲ್ಲಿ ಪ್ರೌಢತೆ ಪ್ರದರ್ಶಿಸಿದ್ದರು. ಇದುವರೆಗೂ ಸ್ವಾತಿ ಆತನನ್ನು ಇಷ್ಟು ಹತ್ತಿರದಿಂದ ಗಮನಿಸಿರಲಿಲ್ಲ.
ಬಾಸ್ ಆ ಭಾನುವಾರ ತಮ್ಮ ಬರ್ತ್ ಡೇ ಇದೆ, ಎಲ್ಲ ಸ್ಟಾಫ್ ಬರುತ್ತಾರೆ, ನೀವು ಬರಬೇಕೆಂದು ಸ್ವಾತಿಗೆ ಆಗ್ರಹಿಸಿದರು. ಹಾಗೇ ಆಗಲಿ ಎಂದು ಅವರಿಗೆ ಅಡ್ವಾನ್ಸ್ ವಿಶಸ್ ತಿಳಿಸಿ ಹೊರಟಳು.
ಗಂಗಾಧರ್ ತೀರಿಕೊಂಡ ನಂತರ, ಸಹಜವಾಗಿಯೇ ಬೇಸರದಿಂದ ಅವಳೆಂದೂ ಯಾವ ಶುಭ ಕಾರ್ಯಕ್ಕೂ ಹೋಗುತ್ತಲೇ ಇರಲಿಲ್ಲ. ಇವಳನ್ನು ಆತ್ಮೀಯವಾಗಿ ಕರೆಯುವವರೂ ಇರಲಿಲ್ಲ. ಒಂಟಿತನ ಅವಳಿಗೆ ಚೆನ್ನಾಗಿಯೇ ಅಭ್ಯಾಸವಾಗಿ ಹೋಗಿತ್ತು.
ಮದುವೆಗೆ ಮುಂಚೆ ಅವಳು ಕೆಲಸದಲ್ಲಿದ್ದಾಗ, ಸಹಜವಾಗಿಯೇ ಸಹೋದ್ಯೋಗಿಗಳ ಮದುವೆಮುಂಜಿಯಂಥ ಶುಭ ಕಾರ್ಯಗಳಿಗೆ ಅನೇಕ ಸಲ ಹೋಗಿದ್ದುಂಟು. ಆಗಿನ ಸಂದರ್ಭವೇ ಬೇರೆ, ಇದೇ ಬೇರೆ ಎಂದು ನಿಡುಸುಯ್ದಳು. ಗಂಡ ಹೋದ ಮೇಲೆ ಒಬ್ಬಳೇ ಇರುವುದನ್ನು ರೂಢಿಸಿಕೊಂಡು, ಸದಾ ಪುಸ್ತಕ, ಫೋನ್, ಏಕಾಂಗಿತನವನ್ನೇ ತನ್ನ ಸಂಗಾತಿ ಮಾಡಿಕೊಂಡಿದ್ದಳು.
ಅಂತೂ ಭಾನುವಾರ ಅವಳು ಬಾಸ್ ಬರ್ತ್ ಡೇಗೆಂದು ಚಂದದ ನೀಲಿ ಸೀರೆಯುಟ್ಟು, ಒಂದು ಸೊಗಸಾದ ಹೂವಿನ ಬೊಕೆ ಹಿಡಿದು ಹೊರಟಳು.
ಇವಳು ದಿನೇಶ್ ಮನೆ ತಲುಪುವಷ್ಟರಲ್ಲಿ ಆಫೀಸ್ ಸಿಬ್ಬಂದಿ ಮಾತ್ರವಲ್ಲದೆ, ಅವರ ನೆಂಟರಿಷ್ಟರು ಬಹುತೇಕ ಮಂದಿ ಪಾರ್ಟಿಗೆ ಬಂದಾಗಿತ್ತು. ನಿತಿನ್ ಸಹ ಬಂದಿದ್ದ. ಅವಳು ಸೀದಾ ಬಾಸ್ ದಿನೇಶ್ ರನ್ನು ಕಂಡು, ಹಾರ್ದಿಕವಾಗಿ ಶುಭಾಶಯ ಕೋರಿ, ಒಂದು ಕಡೆ ಬಂದು ಕುಳಿತಳು. ನಿತಿನ್ ತನಗಿಲ್ಲಿ ಕಂಪನಿ ಆಗಬಹುದು ಎಂದು ನಿರೀಕ್ಷಿಸಿದಳು, ಆದರೆ ಅವನು ಇವಳನ್ನು ಕಂಡೂ ಕಾಣದಂತೆ ಬೇರೆಯವರ ಜೊತೆ ಬೆರೆತುಹೋದ.
ಅದೇ ಸಮಯಕ್ಕೆ ಔಪಚಾರಿಕವಾಗಿ ಹಾಯ್, ಹಲೋ ಎನ್ನುತ್ತಾ ಅಂಜಲಿ, ಸುನಂದಾ ಇವಳ ಬಳಿ ಬಂದು ಕುಳಿತರು. ಬೇಕೆಂದೇ ಅತಿ ಗ್ಲಾಮರಸ್ ಆಗಿ ರೆಡಿಯಾಗಿ ಬಂದಿದ್ದ ಅವರು, ಆ ಪಾರ್ಟಿಯ ಕೇಂದ್ರಬಿಂದುವಾಗಲು ಹೆಣಗುತ್ತಿದ್ದರು.
“ಸ್ವಾತಿ, ಇದೇನು ಒಬ್ಬರೇ ಕುಳಿತಿದ್ದೀರಿ? ನಿತಿನ್ ಎಲ್ಲಿ ಕಾಣ್ತಾ ಇಲ್ಲ…..?” ಎಂದು ಸುನಂದಾ ನಾಟಕೀಯವಾಗಿ ಕೇಳಿದಳು.
“ಏನೋಪ್ಪ…. ಕಾಣಲಿಲ್ಲ. ನಿತಿನ್ ಬಂದಿದ್ದಾರಾ?” ತನಗೇನೂ ಗೊತ್ತಿಲ್ಲ ಎಂಬಂತೆಯೇ ಸ್ವಾತಿ ಹೇಳಿದಳು. ಆದರೆ ನಿತಿನ್ ಹಾಗೆ ವರ್ತಿಸಿದ್ದು ಅವಳಿಗೆ ನಿಜಕ್ಕೂ ಬೇಸರವಾಗಿತ್ತು. ಇಷ್ಟು ದಿನದ ತಮ್ಮ ಸ್ನೇಹಕ್ಕೆ ಇಷ್ಟೇನೇ ಅವನು ಬೆಲೆ ಕೊಟ್ಟಿದ್ದು? ಅವಳಿಗೆ ಅವನ ವರ್ತನೆ ನೋವು ನೀಡಿತು.
ಸುನಂದಾಳ ಕಟಕಿ ಅಷ್ಟಕ್ಕೇ ನಿಲ್ಲಲಿಲ್ಲ, “ಅಂಥ ಸನ್ಯಾಸಿ ಸ್ವಭಾದವನಿಗೆ ಬೇರೆ ಯಾರು ಸರಿಹೋಗುತ್ತಾರೆ? ಒಂದು ವಿಧದಲ್ಲಿ ಸದಾ ನಿಮ್ಮ ಜೊತೆ ಕಾಫಿ, ಊಟಕ್ಕೆ ಬರ್ತಾ ಇದ್ದದ್ದು ಒಳ್ಳೆಯದಾಯ್ತು, ನಿಮಗೂ ಒಂದು ಕಂಪನಿ ಅಂತ ಬೇಕಲ್ಲ ಮತ್ತೆ?”
ಇಳಿಗ್ಯಾಕೆ ತನ್ನ ವಿಷಯದಲ್ಲಿ ಇಷ್ಟೊಂದು ಅಸೂಯೆ? ಒಂದು ಘಳಿಗೆ ಬಹಳ ದುಃಖವಾದರೂ ಮತ್ತೆ ಸಂಭಾಳಿಸಿಕೊಂಡು ಸುಮ್ಮನಾದಳು.
ಯಾರೋ ಬಂದಿದ್ದರೆಂದು ಆ ಕಡೆ ಹೋಗಿದ್ದ ಅಂಜಲಿ ಇತ್ತ ಬರುತ್ತಾ, “ಇದೇನು ಸುನಂದಾ… ಇನ್ನೂ ಇಲ್ಲೇ ಕುಳಿತಿದ್ದೀಯಾ? ನಾನು ಆ ಕಡೆ ಲಾಂಜ್ ನಲ್ಲಿ ಯಾರೋ ವಿಐಪಿಗಳ ಜೊತೆ ಇದ್ದೆ, ನೀನೂ ಅಲ್ಲೇ ಬರ್ತೀಯಾ ಅಂದುಕೊಂಡಿದ್ದೆ……”
“ಅದೇನು ಹೊಸ ವಿಷಯ?”
“ನೋಡಿಲ್ಲಿ ನನ್ನ ಈ ಹೊಸ ಡೈಮಂಡ್ ನೆಕ್ಲೇಸ್…. ಇದು ಯಾರ ಗಿಫ್ಟ್ ಇರಬಹುದು ಹೇಳು ನೋಡೋಣ!”
“ಬೇರಿನ್ನಾರು ಕೊಡಿಸಲು ಸಾಧ್ಯ? ನಿನ್ನ ಗಂಡ ಇರಬೇಕಷ್ಟೆ. ನಿನ್ನೆ ನಾವು ಸಹ ಶಾಪಿಂಗ್ ಗೆ ಹೋಗಿದ್ದೆವು. ಅವರೂ ನನ್ನನ್ನು ಇಂಥದ್ದೇ ಡೈಮಂಡ್ ನೆಕ್ಲೇಸ್ ತಗೋ ಅಂತ ಬಹಳ ಒತ್ತಾಯ ಮಾಡಿದರು. ನಾನು ಈಗಲೇ ಬೇಡ, 2 ತಿಂಗಳ ನಂತರ ನಮ್ಮ ವೆಡ್ಡಿಂಗ್ ಆ್ಯನಿವರ್ಸರಿಗೆ ತಗೊಳ್ಳೋಣ ಅಂತ ಅಂದುಬಿಟ್ಟೆ. ಈಗಾಗಲೇ 2-3 ಇದೇ ತರಹ ಮನೆಯಲ್ಲಿ ಸುಮ್ಮನೆ ಕೊಳೀತಾ ಬಿದ್ದಿವೆ. ಈ ಸಲ ಯಾವುದಾದರೂ ಅಮೆರಿಕನ್ ಅಥವಾ ಇಂಗ್ಲೆಂಡ್ ಜ್ಯೂವೆಲರಿ ಖರೀದಿಸೋಣ ಅಂದೆ.
“ಅದು ಸರಿ ಸ್ವಾತಿ, ನಿಮ್ಮ ಕುತ್ತಿಗೆಯ ಈ ಹಾರ ಅಸಲಿ ಮುತ್ತಿನದೋ? ಈಗಿನ ಕಾಲಕ್ಕೆ ಇದೇ ಸರಿ ಬಿಡಿ. ಎಲ್ಲ ಕಡೆ ಕಳ್ಳರ ಕಾಟ. ಮೊದಲೇ ಒಂಟಿ ಜೀವ. ನಮ್ಮ ತರಹ ರಾಶಿ ರಾಶಿ ಒಡವೆ ಹೇರಿಕೊಂಡು ಏನು ಮಾಡ್ತೀರಾ? ಎಲ್ಲಿಗೆ ಹೋಗಬೇಕು?”
“ಏ ಸುನಂದಾ, ಪಾಪ ಅವರನ್ನೇನು ಕೇಳ್ತೀಯಾ? ಇಂಥವರಿಗೆ ಡೈಮಂಡ್ ನೆಕ್ಲೇಸ್ ಯಾರು ಕೊಡಿಸಬೇಕು?”
“ಆ ನಿತಿನ್ ಇದ್ದಾನಲ್ಲ….. ಎಲ್ಲದಕ್ಕೂ ಕಂಪನಿ ಕೊಡೋದಿಕ್ಕೇ! ಬರೀ ಫ್ರೀಯಾಗಿ ಎಲ್ಲಾ ಗಿಟ್ಟಿಸಿದರೆ ಆಯ್ತಾ…. ಏನಾದರೂ ಇಂಥ ಕಾಸ್ಟ್ಲಿ ಗಿಫ್ಟ್ ಕೊಡಿಸಬೇಕಪ್ಪ,” ಸುನಂದಾ ತಾನೇನೋ ದೊಡ್ಡ ಜೋಕ್ ಹೇಳಿದವಳಂತೆ ಅಂಜಲಿಯ ಬೆನ್ನಿಗೆ ಗುದ್ದಿದಾಗ, ಇಬ್ಬರೂ ಬೇಕೆಂದೇ ಜೋರು ಜೋರಾಗಿ ನಗತೊಡಗಿದರು.
ಹಾಗೆ ಹೇಳುತ್ತಾ ಇನ್ನಾರೋ ಕೈ ಬೀಸಿದರೆಂದು ಇವರು ಆ ಕಡೆ ಹೋದಾಗ, ಇತ್ತ ಸ್ವಾತಿಗೆ ಅಸಾಧ್ಯ ಸಿಟ್ಟು ಬಂದಿತ್ತು.
ಅವಳು ಒಬ್ಬಳೇ ಮೌನ ವಹಿಸಿ ಕುಳಿತಿದ್ದರೂ, ತನ್ನ ಸರಳ ಚೆಲುವಿನಿಂದ ಅತಿಥಿಗಳನ್ನೆಲ್ಲ ಆಕರ್ಷಿಸಿದ್ದಳು. ಎಲ್ಲರೂ ಒಮ್ಮೆ ಅವಳತ್ತ ತಿರುಗಿ ನೋಡಿಯೇ ಮುಂದುವರಿಯುತ್ತಿದ್ದರು. ಇತರ ಸಿಬ್ಬಂದಿ ಜೊತೆ ಸ್ವಾತಿ ಹೆಚ್ಚಿನ ಪರಿಚಯ ಹೊಂದಿರಲಿಲ್ಲ. ಹೀಗಾಗಿ ಎಲ್ಲರಿಂದ ತುಸು ದೂರ ಉಳಿದಳು.
ದಿನೇಶ್ ಬಂದವರನ್ನೆಲ್ಲ ವಿಚಾರಿಸಿಕೊಳ್ಳುತ್ತಾ, ಆಗಾಗ ಇವಳೆಡೆ ನೋಡಿ ಮುಗುಳ್ನಗು ಬೀರುತ್ತಿದ್ದರು. ಬೇರೆಯವರು ಏನೂ ತಿಳಿಯಬಾರದೆಂಬಂತೆ, ತಾನು ತನ್ನ ಮೊಬೈಲ್ ಗಮನಿಸಿಕೊಳ್ಳುತ್ತಾ ಅದರಲ್ಲಿ ಬಹಳ ಬಿಝಿ ಎಂಬಂತೆ ನಟಿಸುತ್ತಿದ್ದಳು. ಎಲ್ಲರನ್ನೂ ಬಫೆ ಡಿನ್ನರ್ ಗೆ ಕಳುಹಿಸುತ್ತಾ, ದಿನೇಶ್ ಇವಳ ಕಡೆ ತಾವೇ ನಡೆದು ಬಂದರು. ಅಷ್ಟು ಹೊತ್ತಿಗೆ ಇವರಿದ್ದ ಹಾಲ್ ಬಹುತೇಕ ಖಾಲಿ ಆಗಿತ್ತು. ಹೇಗೆ ಮಾತು ಆರಂಭಿಸುವುದೋ ತಿಳಿಯದೆ ಇಬ್ಬರೂ ಕಸಿವಿಸಿಗೊಂಡರು. ಅಷ್ಟರಲ್ಲಿ ಜನ ಒಂದು ಬ್ಯಾಚ್ ಊಟ ಮುಗಿಸಿ ವಿದಾಯ ಕೋರುತ್ತಾ ಹೊರಟಿದ್ದರು.
“ಬನ್ನಿ, ನೀವು ಊಟ ಮಾಡ್ತೀರಂತೆ,” ದಿನೇಶ್ ಇವಳನ್ನು ಉಪಚರಿಸುತ್ತಾ ಹೇಳಿದರು.
ಔಪಚಾರಿಕತೆಗೆ ಹಾಗೆ ಹೇಳಿದ್ದರೂ, ಸ್ವಾತಿ ಇನ್ನಷ್ಟು ಹೊತ್ತು ಅಲ್ಲೇ ಉಳಿದು ತನ್ನ ಬಳಿ ಏಕಾಂತದಲ್ಲಿ ಏನಾದರೂ ಮಾತಾಡಲಿ, ತನ್ನ ಬಗ್ಗೆ ವಿವರ ಕೇಳಿ ತಿಳಿಯಲಿ, ತನ್ನ ಕುರಿತು ಹೇಳಲಿ ಎಂದು ದಿನೇಶ್ ಬಯಸಿದರು.
ಆ ನಿತಿನ್ ಹಾಗೇಕೆ ಮಾಡಿದ ಎಂಬ ಶಾಕ್ ನಲ್ಲಿದ್ದ ಅವಳಿಗೆ ದಿನೇಶ್ ಹೇಳಿದ ಮಾತಿಗೆ ಏನು ಉತ್ತರಿಸುವುದೋ ತಿಳಿಯದೆ, ಬರಿದೇ ನಕ್ಕು ಸುಮ್ಮನಾಗಿದ್ದಳು.
“ಏನಾಯ್ತು…..? ಯಾಕೋ ನೀವು ಪಾರ್ಟಿ ಎಂಜಾಯ್ ಮಾಡ್ತಾ ಇಲ್ಲ ಅನ್ಸುತ್ತೆ. ಬಹಳ ಬೋರ್ ಆಯ್ತಾ? ನನ್ನಿಂದ ನಿಮಗೆ ತೊಂದರೆಯೇ ಆಯ್ತು,” ದಿನೇಶ್ ಮತ್ತೆ ಹೇಳಿದರು.
ಅಯ್ಯೋ…. ಈತ ತನ್ನ ಬಾಸ್, ತನಗಾಗಿ ಇಷ್ಟು ಕಾಳಜಿ ತೋರುತ್ತಿರುವಾಗ ತಾನು ಉತ್ತರಿಸದೆ ಸುಮ್ಮನಿದ್ದರೆ ಅದಕ್ಕೆ ಅಪಾರ್ಥ ಕಲ್ಪಿಸಿಕೊಂಡರೆ ಎಂದು, “ಹಾಗೇನಿಲ್ಲ ಸಾರ್…. ಸಣ್ಣಗೆ ಸ್ವಲ್ಪತಲೆ ನೋವಿತ್ತು, ಅಷ್ಟೆ,” ಎಂದಳು.
“ನಿಜವಾಗಿಯೂ ತಲೆನೋವೇ? ಅಥವಾ ನಿಮ್ಮನಿತಿನ್ ಕುರಿತು ಜನ ಬೆನ್ನ ಹಿಂದೆ ಆಡಿಕೊಳ್ಳುತ್ತಿದ್ದಾರೆ ಎಂಬ ಬೇಸರವೇ?”
ಇದಂತೂ ಅವಳಿಗೆ ಹೊಸ ವಿಚಾರವಾಗಿತ್ತು. ನಿತಿನ್ ಜೊತೆ ತನ್ನ ಹೆಸರು ಜೋಡಿಸಿ ಜನ ಹೀಗೆಲ್ಲ ಆಡಿಕೊಳ್ತಿದ್ದಾರೆ ಎಂದು ಅವಳಿಗೆ ಖಂಡಿತಾ ತಿಳಿದಿರಲಿಲ್ಲ.
ಸದಾ ಒಬ್ಬಂಟಿಯಾಗಿದ್ದ ಅವಳಿಗೆ ಆಫೀಸ್ ನಲ್ಲಿ ನಿತಿನ್ ಸಾಂಗತ್ಯ ಮರುಳುಗಾಡಿನ ಓಯೆಸಿಸ್ ಆಗಿತ್ತು. ಕೆಲವು ದಿನ ಕಾಫಿ, ಊಟಕ್ಕೆ ಜೊತೆ ಜೊತೆಯಾಗಿ ಹೋದ ಮಾತ್ರಕ್ಕೆ ಜನ ತಮ್ಮ ಕುರಿತು ಇಷ್ಟೆಲ್ಲ ಮಾತನಾಡಿಕೊಳ್ಳುತ್ತಾರೆ ಎಂದು ಅವಳು ಕನಸು ಮನಸಿನಲ್ಲೂ ನೆನೆಸಿರಲಿಲ್ಲ.
ಅವಳ ಬಾಡಿ ಹೋದ ಮುಖ ಗಮನಿಸಿ ದಿನೇಶ್ ತಾವೇ ಹೇಳಿದರು, “ನಡೆಯಿರಿ, ಊಟ ಮಾಡೋಣ. ಎಲುಬಿಲ್ಲದ ನಾಲಿಗೆ… ಜನರಿಗೆ ಅಂದು ಆಡಿಕೊಳ್ಳುವುದೊಂದೇ ಗೊತ್ತು. ಅಂಥ ಜನರ ಮಾತಿಗೆ ಎಳ್ಳಷ್ಟೂ ಕಿವಿಗೊಡಬೇಡಿ. ನನ್ನ ವೈಯಕ್ತಿಕ ವಿಚಾರ ತಿಳಿದರೆ ನಿಮಗೆ ಅದರ ಮುಂದೆ ಇದೇನಲ್ಲ ಅಂತ ಅನಿಸಬಹುದು. ಬನ್ನಿ, ಹೋಗೋಣ…..” ಎಂದು ಡೈನಿಂಗ್ ಹಾಲ್ ನತ್ತ ಹೊರಟರು.
ಆಗ ಅಚಾನಕ್ಕಾಗಿ ಅವಳಿಗೆ ಹೊಳೆದ ವಿಚಾರ, ಇದೇನು ಬಾಸ್ ಇಷ್ಟು ದೊಡ್ಡ ಮನೆಯಲ್ಲಿ ಒಬ್ಬರೇ ಕಾಣಿಸುತ್ತಿದ್ದಾರೆ…. ಇವರ ಪತ್ನಿ, ಮಕ್ಕಳು ಎಲ್ಲಿ? ಆದರೆ ಸಂಕೋಚದ ಕಾರಣ ಅವಳು ಏನೂ ಕೇಳಲಿಕ್ಕೆ ಹೋಗಲಿಲ್ಲ.
ಊಟ ಮುಗಿದ ನಂತರ ಸ್ವಾತಿ ಬೇಡ ಬೇಡ ಎನ್ನುತ್ತಿದ್ದರೂ ಕೇಳದೆ, ಮಳೆ ಬರುವ ಹಾಗಿದೆ ಎಂದು ದಿನೇಶ್ ತಾವೇ ಕಾರ್ ಡ್ರೈವ್ ಮಾಡುತ್ತಾ ಇವಳನ್ನು ಮನೆ ತಲುಪಿಸಿದರು.
ಮತ್ತೊಂದು ಭಾನುವಾರ, ಬೆಳಗ್ಗೆ 8 ಗಂಟೆ ಹೊತ್ತಿಗೆ ನಿತಿನ್ ಇವಳ ಮನೆ ಮುಂದೆ ಹಾಜರಾಗಿದ್ದ. ಆಗಿದ್ದಾಯ್ತು, ಇವನು ಮತ್ತೇನು ಹೇಳಲು ಬಂದಿದ್ದಾನೋ? ಎಂದು ಒಲ್ಲದ ಮನದಿಂದೀಲೇ ಅವನನ್ನು ಒಳಗೆ ಕೂರಿಸಿ ಮಾತನಾಡಿಸಿದಳು.
“ಇದೇನು ಇಷ್ಟು ಬೇಗ ಬಂದ್ರಿ ನಿತಿನ್? ಜನ ಆಗಲೇ ಏನೇನೋ ಮಾತನಾಡ್ತಿದ್ದಾರೆ. ನೀವು ಬೇರೆ ಹೀಗೆ…. ಮನೆವರೆಗೂ ಬಂದರೆ…..”
“ಅದನ್ನೇ ನಾನೂ ಹೇಳಲು ಬಂದಿದ್ದು…. ಬರಬೇಕು ಅಂತ ನನಗೂ ಇರಲಿಲ್ಲ. ಆದರೆ….. ಒಂದು ಅರ್ಜೆಂಟ್ ಕೆಲಸವಿತ್ತು.”
“ಏನದು….?”
“ಪ್ಲೀಸ್… ನೀವು ಬಂದು ಸ್ಮಿತಾ ಮತ್ತು ಅವಳ ತಾಯಿಗೆ ನಮ್ಮ ಈ ಸ್ನೇಹದಲ್ಲಿ ನನ್ನದು ಏನೂ ದೋಷ ಇಲ್ಲ ಅಂತ ಹೇಳಿಬಿಡಿ. ನೀವೇ ಹೇಳಿದ್ದರಿಂದ ನಾನು ನಿಮ್ಮ ಜೊತೆ ಕಂಪನಿ ಕೊಡ್ತಿದ್ದೆ ಅಂತ ಸ್ಪಷ್ಟಪಡಿಸಿ.”
“ಅರೆ… ಏನು ಹೇಳ್ತಿದ್ದೀರಿ ನಿತಿನ್? ನಮ್ಮ ಈ ಸಾಧಾರಣ ಸ್ನೇಹವನ್ನು ಇಷ್ಟು ಘೋರವಾಗಿ ಹೇಳಿಕೊಳ್ಳುವ ಅಗತ್ಯವೇನಿದೆ? ಅದು ಸರಿ, ಈ ಸ್ಮಿತಾ ಯಾರು? ನಾನೇಕೆ ಅವಳ ತಾಯಿ ಬಳಿ ಬಂದು ಏನೇನೋ ಹೇಳಬೇಕು…..?”
“ಸ್ಮಿತಾ… ನಾನು ಮದುವೆ ಆಗಲಿರುವ ಹುಡುಗಿ. 2 ತಿಂಗಳ ನಂತರ ನಮ್ಮ ಮದುವೆ ನಡೆಯಲಿದೆ. ಹೀಗಾಗಿ ಅವಳ ಬಗ್ಗೆ ಏನೂ ಹೇಳಲಿಲ್ಲ. ಈ ವಿಚಾರ ತಿಳಿದರೆ ನೀವು ತಪ್ಪು ತಿಳಿಯಬಹುದೇನೋ ಅಂತ….”
“ಅರೇ…. ಇದರಲ್ಲಿ ನಾನು ತಪ್ಪು ತಿಳಿಯುಂಥದ್ದು ಏನಿದೆ? ಜನ ಏನು ಮಾತನಾಡಿಕೊಳ್ತಿದ್ದಾರೋ ಅದರ ಬಗ್ಗೆ ತಾನೇ ನೀವು ಹೇಳ್ತಿರೋದು? ಈಗ ಬಂದು ನನ್ನ ಮುಂದೆ ಇದನ್ನು ಹೇಳಬೇಕೆಂದರೆ, ನಿಮ್ಮ ಸ್ವಾರ್ಥಕ್ಕೆ ನಾನು ಅಡ್ಡಿ ಅಂತಲೇ?
“ನೀವೇ ಹೇಳಿ ನಿತಿನ್, ನಾನು ಎಂದಾದರೂ ನಿಮ್ಮನ್ನು ಫ್ರೆಂಡ್ ಶಿಪ್ ಬೇಕು ಅಂತ ಪೀಡಿಸಿದ್ದುಂಟೇನು? ಹಾಗಿರುವಾಗ ನಾನೇ ಏನೋ ತಪ್ಪು ಮಾಡಿರುವ ಹಾಗೆ ಅವರ ಮುಂದೆ ಏಕೆ ಒಪ್ಪಿಕೊಳ್ಳಲಿ? ನಿಮ್ಮ ಜೊತೆ ನನಗೆ ಯಾವ ಸಂಬಂಧ ಇದೆ ಅಂತ ಹೀಗೆಲ್ಲ ಹೇಳಬೇಕಿದೆ? ಒಂದು ಸಾಧಾರಣ ಫ್ರೆಂಡ್ ಶಿಪ್ ಇತ್ತು, ನೀವು ಅದಕ್ಕೂ ಲಾಯಕ್ ಅಲ್ಲ ಅಂತ ಈಗ ಪ್ರೂವ್‌ಮಾಡಿಕೊಂಡಿರಿ! ನಮ್ಮದೇನೋ ಅನುಚಿತ ಸಂಬಂಧವಿದೆ, ಇದರಲ್ಲಿ ನಾನು ನಿಮ್ಮನ್ನು ವಿಕ್ಟಿಂ ಆಗಿಸಿದ್ದೇನೆ ಅಂತೆಲ್ಲ ಏಕೆ ಹೇಳಬೇಕು? ಖಂಡಿತಾ ಇಲ್ಲ! ತಪ್ಪೇ ಮಾಡದಿದ್ದ ಮೇಲೆ ಅದಕ್ಕೆ ಕ್ಷಮಾಪಣೆ ಏಕೆ?”
“ನೋಡಿ ಸ್ವಾತಿ, ವಯಸ್ಸಿನಲ್ಲಿ ನೀವು ನನಗಿಂತ ದೊಡ್ಡವರು. ಹೀಗಾಗಿ ನಿಮ್ಮ ಬಳಿ ಬಂದು ವಿನಂತಿಸಿ ಕೊಳ್ಳುತ್ತಿದ್ದೇನೆ. ನಿಮಗೆ ನಾನು ಸಪೋರ್ಟ್ ಮಾಡಿದ ಕಾರಣಕ್ಕಾಗಿ, ಕಂಪನಿ ನೀಡುತ್ತಿದ್ದೆ ಅಂತ ಜನ ನಮ್ಮಿಬ್ಬರ ಬಗ್ಗೆ ಇಲ್ಲಸಲ್ಲದ ಸಂಬಂಧ ಕಟ್ಟಿ ಏನೇನೋ ಆಡಿಕೊಳ್ತಿದ್ದಾರೆ. ಜನರ ಈ ಕೆಟ್ಟ ಮಾತುಗಳನ್ನು ಕೇಳಿ ಕೇಳಿ ನನ್ನ ಫಿಯಾನ್ಸಿ ಅದನ್ನೇ ನಿಜ ಅಂತ ನಂಬಿಕೊಂಡಿದ್ದಾಳೆ. ನೀವು ನನ್ನ ಪರವಾಗಿ ಹೇಳಲೇಬೇಕು, ಹಾಗೇ ಆ ಸುನಂದಾ, ಅಂಜಲಿಯರ ಕೈಲೂ ಅವಳಿಗೆ ಹೇಳಿಸುತ್ತೇನೆ. ನಿಮ್ಮ ಫೋನ್ ಗೆ ನಾನು ಸ್ಮಿತಾಳ ನಂಬರ್ ಫಾರ್ವರ್ಡ್ ಮಾಡುತ್ತೇನೆ. ದಯವಿಟ್ಟು ಮಾತನಾಡಿ, ಇಲ್ಲದಿದ್ದರೆ ನನ್ನ ಮದುವೆ ಕ್ಯಾನ್ಸಲ್ ಆಗುತ್ತೆ…. ಅದಕ್ಕೆ ನೀವು ಒಂದು ವಿಧದಲ್ಲಿ ಕಾರಣ ಆಗ್ತೀರಿ!” ಎಂದು ಹೇಳಿ ನಿತಿನ್‌ಹೊರಟುಬಿಟ್ಟ.
ಎಷ್ಟೋ ಸಲ ನಮಗೆ ಯಾವುದು ಇಷ್ಟವಿಲ್ಲವೋ, ಬೇಡದಿದ್ದರೂ ಆ ಕೆಲಸವನ್ನು ಬಲವಂತವಾಗಿ ಮಾಡಬೇಕಾಗುತ್ತದೆ. ಈಗ ಸ್ವಾತಿಗೂ ಅದೇ ಸ್ಥಿತಿ ಬಂದಿತ್ತು. ತಾನೀಗ ಏನು ಮಾಡಲಿ? ಒಂದು ಕಾಲದಲ್ಲಿ ತನ್ನ ಹಿತೈಷಿಯಾಗಿ, ತನ್ನೊಂದಿಗೆ ಕೆಲವು ಕಾಲ ಸ್ನೇಹಿತನಾಗಿದ್ದ ಎಂದು ಅವನಿಗಾಗಿ ತಾನೀಗ ಈ ಮಾತುಗಳನ್ನು ಹೇಳಲೇಬೇಕಿದೆ. ಇದರಲ್ಲಿ ತನ್ನದೇನೂ ತಪ್ಪಿಲ್ಲದಿದ್ದರೂ, ನಿತಿನ್ ನ ಮದುವೆ ಸುಸೂತ್ರವಾಗಿ ಜರುಗಲಿ ಎಂದು ಅವನ ಹಿತೈಷಿಯಾಗಿ ತಾನೀಗ ಈ ಸಮಜಾಯಿಷಿ ನೀಡಲೇಬೇಕಿದೆ ಎಂದುಕೊಂಡಳು.
ಏನೋ ಒಂದು ದೃಢ ನಿರ್ಧಾರ ತಳೆದವಳಂತೆ ತಕ್ಷಣ ಅವಳು ಬಾಸ್ ದಿನೇಶ್ ಗೆ ಫೋನ್ ಮಾಡಿದಳು. ತಾನೀಗ ಅರ್ಜೆಂಟಾಗಿ ಬಂದು ಅವರನ್ನು ನೋಡಲಿರುವುದಾಗಿ, ಚುಟುಕಾಗಿ ನಿತಿನ್ ಪ್ರಕರಣದ ಬಗ್ಗೆ ಹೇಳಿದಳು. ಅವರು ಹ್ಞೂಂ ಎಂದದ್ದೇ ತಡ, ಬೇಗ ರೆಡಿಯಾಗಿ, ಒಂದು ಆಟೋ ಹಿಡಿದು ಅವರ ಮನೆಗೆ ಹೊರಟಳು.
ದಿನೇಶ್ ರ ಸ್ನೇಹಮಯ ವ್ಯಕ್ತಿತ್ವ ಈಗ ಅವಳಿಗೆ ತನ್ನೆದುರು ಬಂದಿದ್ದ ಕಷ್ಟವನ್ನು ವೈಯಕ್ತಿಕವಾಗಿ ಅವರೊಂದಿಗೆ ಹಂಚಿಕೊಳ್ಳುವಷ್ಟು ಧೈರ್ಯ ನೀಡಿತ್ತು. ಅಂತೂ ಅವರ ಮನೆ ತಲುಪಿ ಕರೆಗಂಟೆ ಒತ್ತಿದಳು. ಆಳು ಬಂದು ಬಾಗಿಲು ತೆರೆದು, ಅವಳನ್ನು ಒಳಗೆ ಕೂರಿಸಿದ. 2 ನಿಮಿಷ ಕಳೆಯುವಷ್ಟರಲ್ಲಿ ಅವರು ಡ್ರೆಸ್ ಸರಿಪಡಿಸಿಕೊಳ್ಳುತ್ತಾ ಕೆಳಗೆ ಬಂದರು.
“ಬನ್ನಿ, ನಮ್ಮ ಕಾಂಪೌಂಡ್ ನಲ್ಲಿ ಕುಳಿತುಕೊಳ್ಳೋಣ. ಅಲ್ಲಿ ಇಷ್ಟು ಹೊತ್ತಲ್ಲಿ ತಂಪಾದ ಗಾಳಿ ಇರುತ್ತೆ. ರಾಮು, ಇಬ್ಬರಿಗೂ ಅಲ್ಲೇ ಕಾಫಿ ತಂದುಬಿಡು,” ಎಂದು ಆಳಿಗೆ ಹೇಳಿ ಇವಳನ್ನು ಅವರ ವಿಶಾಲ ಕಾಂಪೌಂಡಿಗೆ ಕರೆದುಕೊಂಡು ಹೊರಟರು. ಸುತ್ತಲೂ ಹೂ ಗಿಡಗಳ, ಹಸಿರು ಕೈ ತೋಟದ ರಮ್ಯ ವಾತಾವರಣ, ಬೀಸುತ್ತಿದ್ದ ತಂಗಾಳಿ ಅವಳ ಚಿಂತೆ ದೂರ ಸರಿಸಿ ಆಹ್ಲಾದಕತೆ ನೀಡಿತ್ತು.
ಎಂದಿನ ಔಪಚಾರಿಕ ಮಾತುಕಥೆ ಆಡುತ್ತಿದ್ದಂತೆ, ರಾಮು ಇವರಿಗೆ ಸ್ಯಾಂಡ್ ವಿಚ್ ಟೋಸ್ಟ್, ಹಬೆಯಾಡುತ್ತಿದ್ದ ಕಾಫಿ ತಂದುಕೊಟ್ಟ, “ಪ್ಲೀಸ್…. ತಗೊಳ್ಳಿ,” ಎಂದವರ ಮಾತಿಗೆ ಧನ್ಯವಾದ ಸಲ್ಲಿಸುತ್ತಾ ಸಂಕೋಚದಿಂದಲೇ ಅದನ್ನು ಸೇವಿಸಿದಳು.
ಕಾಫಿ ಮುಗಿದ ನಂತರ ಅವರು, “ಹ್ಞೂಂ, ಈಗ ಹೇಳಿ ಸ್ವಾತಿ. ನೀವು ಫೋನಿನಲ್ಲಿ ಹೇಳಿದ ಪ್ರಕಾರ ನಿತಿನ್ ಮಾತುಗಳಿಂದ ನೀವು ಬಹಳ ಗಾಬರಿಗೊಂಡಿದ್ದೀರಿ ಅಂತ ತಿಳಿಯಿತು. ಅದರ ಬಗ್ಗೆ ಮಾತನಾಡುವ ಮೊದಲು ನನ್ನ ಬಗ್ಗೆ ನಾನು ನಿಮಗೆ ಹೇಳಬೇಕು.
“ನಮ್ಮದು ಸಾಂಪ್ರದಾಯಿಕ ವಿವಾಹ. ಎಲ್ಲರಂತೆ ನಮ್ಮ ಜೀವನ ಚೆನ್ನಾಗಿತ್ತು. ಮದುವೆಯಾದ 2 ವರ್ಷಕ್ಕೆ ಮಗಳು ಹುಟ್ಟಿದಳು. ಅವಳಿಗೆ 10 ವರ್ಷ ತುಂಬುವಷ್ಟರಲ್ಲಿ ನನ್ನ ಪತ್ನಿ ತನ್ನ ಪ್ರಿಯಕರನಾದ ಒಬ್ಬ ವಿವಾಹಿತ ಮುಸ್ಲಿಂ ವ್ಯಕ್ತಿ ಜೊತೆ ಶಾಶ್ವತವಾಗಿ ಮನೆಬಿಟ್ಟು ಓಡಿಹೋದಳು. ಅವರಿಬ್ಬರೂ ಒಂದೇ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
“ಇದರಿಂದಾಗಿ ನಾನು ನಮ್ಮ ಸಮುದಾಯದ ಎದುರು ತಲೆ ಎತ್ತಲಾಗದೆ ತತ್ತರಿಸಿಹೋದೆ. ಹೆಂಡತಿಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲಾಗದ ಕೈಲಾಗದವನು ಎಂದು ಎಲ್ಲರೂ ನನ್ನ ಬಗ್ಗೆ ಹಿಂದೆ ಮುಂದೆ ಬಗೆಬಗೆಯಾಗಿ ಆಡಿಕೊಂಡರು. ಒಂದು ವಿಧದಲ್ಲಿ ನನ್ನ ಬಂಧು ಬಳಗ, ಇಡೀ ನಮ್ಮ ಸಮುದಾಯ ನನಗೆ ಅಲಿಖಿತ ಬಹಿಷ್ಕಾರ ವಿಧಿಸಿತು. ಅಂದಿನಿಂದ ನಾನು ಯಾವುದೇ ಸಾಮಾಜಿಕ ಫಂಕ್ಷನ್, ಪಾರ್ಟಿ ಎಂದು ಹೊರಗೆ ಹೋಗಲೇ ಇಲ್ಲ. ಮಾಡದ ತಪ್ಪಿಗೆ ನಾನು ಎಲ್ಲರ ಮುಂದೆ ತಲೆ ತಗ್ಗಿಸಬೇಕಾಯಿತು.
“ನನ್ನ ಒಬ್ಬಂಟಿ ಮಗಳು, ತಾಯಿ ಇಲ್ಲದ ತಬ್ಬಲಿಯಾಗಿ ನನ್ನ ಇಡೀ ಪ್ರಂಪಚವಾದಳು. ಆ ಮಗುವಿಗೆ ಏನೆಂದು ನಾನು ವಿವರಿಸಿ ಹೇಳಲಿ? ಅವಳ ಅಮ್ಮನಿಗೆ ವಿದೇಶದಲ್ಲಿ ಕೆಲಸ ಸಿಕ್ಕಿದೆ, ಮುಂದಿನ ವರ್ಷ ಬರುತ್ತಾಳೆ ಎಂದು ಹೇಳುತ್ತಲೇ ಕಾಲ ಮುಂದೂಡುತ್ತಾ ಬಂದೆ. ಅವಳಂತೂ ಓಡಿಹೋಗುವ ಹಿಂದಿನ ದಿನದವರೆಗೂ ನನ್ನೊಂದಿಗೆ ಎಂದಿನಂತೆ ಸಹಜವಾಗಿಯೇ ವರ್ತಿಸುತ್ತಿದ್ದಳು. ನನಗೆ ಗೊತ್ತಾಗಿದ್ದೇ ನಂತರ… ಇದರಲ್ಲಿ ನನ್ನ ಅಸಹಾಯಕತೆ ಬಿಟ್ಟರೆ ಬೇರೇನಿದೆ?
“ಅತ್ತ ಓಡಿ ಹೋದವನ ಹೆಂಡತಿ ಬಂದು ಅಸಹಾಯಕಳಾಗಿ ಕಣ್ಮೀರು ಸುರಿಸುತ್ತಾ ಹೇಗಾದರೂ ಅವಳ ಗಂಡನನ್ನು ಹುಡುಕಿಸಿ ಕೊಡಬೇಕು, ಮುಂದೆ ತನ್ನ 3 ಮಕ್ಕಳ ಗತಿ ಏನು? ತವರಿನವರು ಸಹ ಆಸರೆ ನೀಡುವುದಿಲ್ಲ ಎಂದು ಗೋಳಾಡುತ್ತಿದ್ದಳು. ಹೀಗೆ ನಾನು ಎಲ್ಲ ಕಡೆಯಿಂದಲೂ ಸಮಸ್ಯೆಗಳ ಸುಳಿಗೆ ಸಿಲುಕಿದ್ದೆ.
“ಹೀಗೆ ಕಾಲ ಕಳೆಯುತ್ತಾ ಹೋಯಿತು. ಓಡಿ ಹೋದವರು ಎಂದಾದರೂ ಬರುವುದುಂಟೆ? ನನ್ನ ಮಗಳನ್ನು ನಾನು ಹೇಗೋ ಸಂಭಾಳಿಸಿಕೊಂಡೆ. ಆ ಮುಸ್ಲಿಂ ಹೆಂಗಸಿಗೆ ಒಂದು ತರಕಾರಿ ಅಂಗಡಿ ಇಟ್ಟುಕೊಳ್ಳಲು ಹಣದ ಸಹಾಯ ಮಾಡಿ, ಅವಳ 3 ಮಕ್ಕಳನ್ನೂ ಶಾಲೆಗೆ ಸೇರಿಸಿ, ನನ್ನಿಂದಾದ ಅಲ್ಪಸ್ವಲ್ಪ ನೆರವು ನೀಡಿದೆ. ಹೀಗೆ ಅವಳ ಬಾಳು ಒಂದು ದಡಕ್ಕೆ ಬಂತು, ಈಗ ಆ ಮಕ್ಕಳು ವಾಸ್ತವ ಅರಿತು ಬೆಳೆಯುತ್ತಿದ್ದಾರೆ, ನನ್ನ ಮಗಳಿಗೂ ಎಲ್ಲಾ ಕಷ್ಟ ಸುಖದ ಅರಿವು ಮೂಡಿದೆ.
“ನನ್ನ ಮಗಳು ಈಗ ವಿದೇಶದಲ್ಲಿ ವೈದ್ಯಕೀಯ ಕಾಲೇಜು ಸೇರಿದ್ದಾಳೆ. ಅವಳಿಗೆ ತಾಯಿಯ ನೆನಪು ಎಳ್ಳಷ್ಟೂ ಇಲ್ಲ. ತಂದೆ ಒಬ್ಬರೇ ತನಗೆ ಸಾಕು ಎಂದು ನನ್ನೊಂದಿಗೆ ಪ್ರಾಣಪ್ರಿಯವಾಗಿ ಬದುಕುತ್ತಿದ್ದಾಳೆ. ಹೀಗಿದೆ ನನ್ನ ಬದುಕು. ಈಗ ನೀವೇ ಹೇಳಿ, ಅವಕಾಶ ಸಿಕ್ಕಿದಾಗ ಕಾಲೆಳೆಯುವ ಈ ಜನರ ಮಾತಿಗೆ ಬೆಲೆ ಕೊಡಬೇಕೇ? ನಿಮ್ಮ ದೃಢವಾದ ನಿಲುವು ನಿಮ್ಮದು, ಜನರ ಮಾತು, ಅವರ ಸಮಾಧಾನಕ್ಕಾಗಿ ನಾವು ಬಾಳಬೇಕಿಲ್ಲ. ನನ್ನ ಕಥೆ ಕೇಳಿದ ಮೇಲೆ ನೀವೇ ಹೇಳಿ…. ಗಂಡು ಅಥವಾ ಹೆಣ್ಣನ್ನು ಅಪವಾದಕ್ಕೆ ಗುರಿ ಆಗಿಸುವ ಈ ಸಮಾಜಕ್ಕೆ ನಾವು ಸದಾ ಭಯಪಡಬೇಕೇ?”
“ನಿಜ…. ನಿಮ್ಮ ಮಾತಿನಿಂದ ನನಗೀಗ ಎಷ್ಟೋ ಆತ್ಮವಿಶ್ವಾಸ ಮೂಡಿಬಂದಿದೆ! ನಾನು ಖಂಡಿತಾ ಕಂಡೇ ಇರದ ಆ ಸ್ಮಿತಾಳ ಬಳಿ ನನ್ನ ಸ್ಪಷ್ಟೀಕರಣ ನೀಡಲಾರೆ ಅಥವಾ ಏನೂ ತಪ್ಪು ಮಾಡಿರದ ನನ್ನ ಮೇಲೆ ಬೆದರಿಕೆ ಒಡ್ಡುವ ಆ ನಿತಿನ್ ಗೂ ಹೆದರಲಾರೆ! ಯಾರಿಗೆ ಬೇಕೋ ಅವರೇ ಬಂದು ನನ್ನ ಬಳಿ ವಿವರಣೆ ಕೇಳಿಕೊಳ್ಳಲಿ…. ನಾನಂತೂ ನನ್ನ ಪಾಡಿಗೆ ಇದ್ದುಬಿಡುತ್ತೇನೆ.”
“ಇದಲ್ಲವೇ ಮಾತು! ಸರಿಯಾಗಿ ಹೇಳಿದಿರಿ. ನಿಮ್ಮ ನಿರ್ಧಾರ ನಿಮ್ಮದು, ಯಾರಿಗೂ ಹೆದರಬೇಕಿಲ್ಲ, ಸ್ಪಷ್ಟೀಕರಣ ಕೊಟ್ಟುಕೊಂಡು ತಿರುಗಬೇಕಿಲ್ಲ. ಇದರ ಜೊತೆ ಇನ್ನೊಂದು ಮಾಡಬೇಕಲ್ಲ ನೀವು…..?”
“ಅದೇನು? ಹೇಳಿ…. ನೀವು ಹೇಳಿದಂತೆ ಖಂಡಿತಾ ಮಾಡುತ್ತೇನೆ,” ಆತ್ಮವಿಶ್ವಾಸದಿಂದ ಹೇಳಿದಳು ಸ್ವಾತಿ.
“ನಮ್ಮಿಬ್ಬರ ಈ ಪರಿಚಯ, ಸ್ನೇಹಕ್ಕೆ ಒಂದು ಉತ್ತಮ ತಿರುವು ನೀಡಬೇಕೆಂದು, ನೀವು ನನ್ನ ಮನೆಗೆ ಬಂದಾಗಲೇ ನಾನು ನಿರ್ಧರಿಸಿದ್ದೆ. ನನಗೆ ಯಾವುದೇ ಅವಸರವಿಲ್ಲ….. ನೀವಾಗಿ ಒಂದು ಗಟ್ಟಿ ನಿರ್ಧಾರ ತಳೆಯುವವರೆಗೂ ಕಾಯುವೆ.”
“ಅದೆಂಥ ನಿರ್ಧಾರ?” ಅವರ ಮಾತಿನಿಂದ ಎಲ್ಲವೂ ಸ್ಪಷ್ಟವಾಗಿದ್ದರೂ, ಬೇಕೆಂದೇ ಅವರ ಬಾಯಿಂದ ಅದನ್ನು ಕೇಳ ಬಯಸಿದಳು ಸ್ವಾತಿ.
“ಅದೇ…. ನೀವು ನನ್ನ ಬಾಳಿಗೆ ಹೊಸ ಆಶಾಕಿರಣವಾಗಿ ಬರಬೇಕು. ಬರಿದಾದ ನನ್ನ ಮನೆ ತುಂಬಿ, ನನ್ನ ಮಗುವಿಗೆ ತಾಯಿ ಆಗಬೇಕು. ನನ್ನ ಕೈ ಹಿಡಿಯಲು ನಿಮಗೆ ಒಪ್ಪಿಗೆಯೇ?”
ಇದೇ ಅವರ ಪ್ರಶ್ನೆ ಇರಬಹುದು ಎಂದು ತಿಳಿದಿದ್ದ ಸ್ವಾತಿ, ಆದರೂ ಮೆಲ್ಲಗೆ ಹೇಳಿದಳು, “ಜನ ಏನಂತಾರೋ ಏನೋ…..”
ಅವಳ ಕೈಗಳನ್ನು ತಮ್ಮ ಕೈಗಳಲ್ಲಿ ತೆಗೆದುಕೊಳ್ಳುತ್ತಾ, “ಈಗಲೂ ನೀವು ಜನರ ಮಾತಿಗೆ ತಲೆಬಾಗಬೇಕೇ? ನಿಮ್ಮ ಮನಸ್ಸು ಏನು ಹೇಳುತ್ತಿದೆ?” ಎಂದು ಪ್ರೀತಿಯಿಂದ ಕೇಳಿದರು.
ಅರ ಎದೆಗೊರಗಿದ ಸ್ವಾತಿ ಆನಂದಾಶ್ರು ಸುರಿಸಿದಳು. ಪ್ರೌಢ ವಯಸ್ಸಿನಲ್ಲಿ ನೊಂದಿದ್ದ ಆ ಜೀವಗಳೆರಡೂ ತಮಗೆ ತಾವೇ ಸಾಂತ್ವನ ಕಂಡುಕೊಂಡಿದ್ದವು.