ಮನೆಯವರ ಒತ್ತಾಯಕ್ಕೆ ಮಣಿದು ಮಂಜುಳಾ ಮದುವೆ ಮಾಡಿಕೊಂಡು ಅತ್ತೆ ಮನೆಗೇನೋ ಸೇರಿದಳು, ಆದರೆ ಅಲ್ಲಿ ಅವಳು ಅವಿದ್ಯಾವಂತ, ಕಂದಾಚಾರಿಗಳ ನಡುವೆ ಉಸಿರುಗಟ್ಟಿಸುವಂಥ ವಾತಾವರಣದಲ್ಲಿ ಜೀವನ ಎದುರಿಸಬೇಕಾಯಿತು. ಅಲ್ಲಿಂದ ಅವಳು ಹೊಸ ಹಾದಿ ಕಂಡು ಕೊಂಡದ್ದಾದರೂ ಹೇಗೆ……?

“ಅಪ್ಪಾಜಿ…. ಖಂಡಿತಾ ನನಗೆ ಈ ಮದುವೆ ಬೇಡ! ಪ್ಲೀಸ್‌, ನನ್ನ ಮಾತು ಅರ್ಥ ಮಾಡಿಕೊಳ್ಳಿ…..”

“ಏನು ಹೇಳ್ತಿದ್ದೀಯಮ್ಮ ನೀನು…. ಆ ಸುರೇಂದ್ರನಿಗೆ ಏನು ಕಡಿಮೆ ಆಗಿದೆ ಅಂತ? ಅಂದಗಾರ, ಸ್ಮಾರ್ಟ್‌ ಪರ್ಸನಾಲಿಟಿ…. ಒಳ್ಳೆ ಆಸ್ತಿವಂತರ ಮನೆ ಹುಡುಗ…… ಊರಲ್ಲಿ ಅವರ ಹೊಲಗದ್ದೆಗಳಿಗೆ ಏಕೈಕ ವಾರಸುದಾರ. 3 ಮಹಡಿಗಳ ಭವ್ಯ ಮಹಲಿನ ಮನೆ, ಅದೂ ಸ್ವಂತದ್ದು! ಆಳುಕಾಳು, ಓಡಾಟಕ್ಕೆ ಕಾರು…. ಇನ್ನೇನಮ್ಮ ಕಡಿಮೆ? ಮನೆ ತುಂಬಾ ಹಸು, ಕರು, ಬೆಳ್ಳಿ ಚಿನ್ನ…. ಯಾವುದಕ್ಕೂ ಕೊರತೆ ಇಲ್ಲದ ಸಂಪತ್ತು. ನಾವು ಅನುಕೂಲಸ್ಥರು…. ಆದರೆ ಅವರು ನಮಗಿಂತ 10 ಪಟ್ಟು ಶ್ರೀಮಂತರು,” ಅಪ್ಪಾಜಿ ತುಸು ಕೋಪದಲ್ಲೇ ಹೇಳಿದರು.

“ಆದರೆ ಅಪ್ಪಾಜಿ…. ಸುರೇಂದ್ರ ಬರಿ 10ನೇ ಕ್ಲಾಸ್‌ ಓದಿದವರು. ಆತನಿಗೆ ಸರಿಯಾಗಿ ಇಂಗ್ಲಿಷ್‌ ಸಹ ಬರಲ್ಲ…. ಜೊತೆಗೆ ನನಗಿಂತ 8-10 ವರ್ಷ ದೊಡ್ಡವರು….. ನಾನು  ಗ್ರ್ಯಾಜುಯೇಟ್‌! ನಮ್ಮಿಬ್ಬರ ಈಡುಜೋಡು ಸರಿಹೋದೀತೇ….?”

“ಮಂಜು…. ಒಂದು ವಿಷಯ ನೆನಪಿಡು. ಅಪ್ಪಾಜಿ ಏನೇ ಮಾಡಿದರೂ ಅದು ನಿನ್ನ ಒಳ್ಳೆಯದಕ್ಕೆ. ಓದಿನ ವಿಷಯ ಒಂದು ದೊಡ್ಡ ಚರ್ಚಾಸ್ಪದ ವಿಷಯವೇ? ಹುಡುಗ ಇಷ್ಟೆಲ್ಲ ಅನುಕೂಲಸ್ಥ ಆಗಿರುವಾಗ, ಅಂಥ ಒಳ್ಳೆ ಮನೆತನ ಅಂತಿರೋವಾಗ, ನೀನು ಅನಗತ್ಯ ವಿಷಯಕ್ಕೆ ಮಹತ್ವ ಕೊಟ್ಟು ಒದಗಿಬಂದ ಈ ಸಂಬಂಧಕ್ಕೆ ಕಲ್ಲು ಹಾಕಬೇಡಮ್ಮ…… ಹೆಣ್ಣು ಹೆತ್ತವರ ಜವಾಬ್ದಾರಿ ಗುರುತರವಾದುದು ಕಣಮ್ಮ. ಮಗಳನ್ನು ಒಳ್ಳೆ ಮನೆಗೆ ಸೇರಿಸಿದಿವಿ ಅಂತ ನಮಗೂ ಒಂದು ಸಾರ್ಥಕತೆ ಇರಬೇಕು ತಾನೇ….” ಅಮ್ಮ ಸ್ಟ್ರಿಕ್ಟ್ ಆಗಿ ಅವಳು ಒಪ್ಪುವಂತೆ ಮನವೊಲಿಸಿದರು.

“ಅಮ್ಮ…. ನಿಮಗೆಲ್ಲ ಗೊತ್ತಿರುವ ಹಾಗೆ ನನಗೆ ಇನ್ನೂ ಪಿ.ಜಿ ಮಾಡುವ ಮನಸ್ಸಿದೆ….. ನನ್ನ ರಿಸರ್ಚ್‌ ಗೆ ಇನ್ನೂ 2-3 ವರ್ಷ ಬೇಕು. ಅಷ್ಟರಲ್ಲಿ ಈ ಮದುವೆ ಬಂಧನ, ಸಂಸಾರದ ಜಂಜಾಟ, ಜವಾಬ್ದಾರಿ…. ಮುಂದೆ ನಮ್ಮದೇ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ನಂತರ ಪ್ರಿನ್ಸಿಪಾಲ್ ‌ಆಗಬೇಕೂಂತ ಕನಸು ಕಾಣುತ್ತಿದ್ದೇನೆ. ನನ್ನ ಸ್ವಂತ ಸಂಪಾದನೆಯಲ್ಲಿ ನನ್ನ ಕಾಲ ಮೇಲೆ ನಾನು ನಿಲ್ಲುವುದು ಬೇಡವೇ?” ಮಂಜುಳಾ ಈಗಲೂ ವಾದ ನಿಲ್ಲಿಸಲಿಲ್ಲ.

“ಅಯ್ಯೋ…. ಸಾಕು ಬಿಡಮ್ಮ ನಿನ್ನ ಓದು, ವಿದ್ಯಾಭ್ಯಾಸ! ಆ ಕಾಲದಿಂದ ಈ ಕಾಲದವರೆಗೂ ಬರೀ ಓದು ಓದೇ ಆಗೋಯ್ತು. ಇನ್ನಾದರೂ ಈ ಅತಿ ಮಾಡರ್ನ್‌ ವ್ಯಾಮೋಹಗಳಿಂದ ಹೊರಗೆ ಬಾ. ಹೆಣ್ಣಾಗಿ ಹುಟ್ಟಿದ ಮೇಲೆ ಮದುವೆ ಬೇಡ ಅಂದ್ರೆ ಆಗುತ್ತದೆಯೇ? ಹಣ ಸಂಪಾದನೆ ಒಂದೇ ಅವಳಿಗೆ ಪ್ರಧಾನವಲ್ಲ. ಈ ಸಂಬಂಧದಲ್ಲಿ ಕೋಟ್ಯಂತರ ಆಸ್ತಿ ಕೊಳ್ಳೆ ಹೋಗ್ತಿದೆ. ಅವರಿಗೂ ಕಲಿತ ಹುಡುಗಿಯೇ ಬೇಕಂತೆ. ಕೆಲಸ, ಓಡಾಟ, ಅಂತ ನೀನು ಸಂಪಾದನೆಗಾಗಿ ಅಂಡಲೆಯಬೇಕೇ?

“ಇಷ್ಟೆಲ್ಲ ಜಂಜಾಟವಿಲ್ಲದೆ ನೀನು ರಾಣಿ ಹಾಗೆ ಆ ಮನೆಯಲ್ಲಿ ನೆಮ್ಮದಿಯಾಗಿ ಇರಬಹುದು. ಅಲ್ಲಿ ಮುಂದಿನ 4 ಪೀಳಿಗೆಗೆ ಆಗುವಷ್ಟು ಆಸ್ತಿಪಾಸ್ತಿ ಇದೆ. ಇದೆಲ್ಲ ಹಠ ಬಿಟ್ಟುಬಿಡಮ್ಮ….. ಹಠದಿಂದ ಹೆಣ್ಣು ಕೆಟ್ಟಳು, ಚಟದಿಂದ ಗಂಡು ಕೆಟ್ಟ ಅಂತ ಗಾದೇನೇ ಇದೆ. ಸುಮ್ಮನೆ ಈ ಮದುವೆಗೆ ಒಪ್ಪಿಕೊಂಡು ಅದಕ್ಕೆ ಬೇಕಾದ ಶಾಪಿಂಗ್‌ ಗೆ ರೆಡಿ ಮಾಡಿಕೋ. ಇನ್ನು ನಿನ್ನ ವಿತಂಡವಾದ ಕೇಳಲು ನಾವು ರೆಡಿ ಇಲ್ಲ. ನೀನು ಅಲ್ಲಿ ಹೋಗಿ ಹೊಸ ಜೀವನ ಶುರು ಮಾಡು, ಇಲ್ಲಿ ನಾವು ನೆಮ್ಮದಿಯಾಗಿ ಇರಲು ಅವಕಾಶ ಮಾಡಿಕೊಡು,” ಅಪ್ಪಾಜಿ ನಯಾಗಿಯೇ ತಿಳಿಸುತ್ತಾ, ತಮ್ಮ ಕೊನೆ ನಿರ್ಧಾರದ ಬಗ್ಗೆ ಹೇಳಿದರು.

ಬೇರೆ ದಾರಿ ಕಾಣದೆ ಮಂಜುಳಾ ಮದುವೆಗೆ ಒಪ್ಪಲೇಬೇಕಾಯಿತು. ಬೆಂಗಳೂರಿನಂಥ ಮಹಾನಗರಿಯಲ್ಲಿ ಬೆಳೆದಳು, ಸುರೇಂದ್ರನನ್ನು ವರಿಸಿ ಶಿವಮೊಗ್ಗದ ಬಳಿಯ ಸಾಗರದ ಒಳವಲಯದ ಚಿಕ್ಕ ಊರಿಗೆ ಶಿಫ್ಟ್ ಆದಳು. ಮೊದಲಿನಿಂದಲೂ ಅವಳು ಸಂಪ್ರದಾಯಸ್ಥ ಕುಟುಂಬದಲ್ಲೇ ಬೆಳೆದು ಬಂದವಳು. ಅವಳ ತಂದೆ ಸರ್ಕಾರಿ ಪ್ರೈಮರಿ ಶಾಲೆಯಲ್ಲಿ ಮೇಷ್ಟ್ರು. ಒಬ್ಬಳೇ ಮಗಳಾದ್ದರಿಂದ ತುಸು ಮುದ್ದಾಗಿಯೇ ಬೆಳೆದು ಬಂದಳು, ಆದರೆ ಮಧ್ಯಮ ವರ್ಗವಾದ್ದರಿಂದ, ಅಂಕೆ ಶಂಕೆಯ ಕಟ್ಟುಪಾಡಿನಲ್ಲಿದ್ದಳು. ಆದರೆ ಅವಳ ಅತ್ತೆಮನೆ ಕುಟುಂಬ ಅತಿ ಕಟ್ಟುನಿಟ್ಟಿನ ಕಂದಾಚಾರಿಗಳ ನೆಲೆಯಾಗಿತ್ತು. ಪ್ರತಿ ಹೆಜ್ಜೆಗೂ ಅವಳಿಗೆ ಇಲ್ಲಿ ಮೂಢನಂಬಿಕೆಯೇ ಕಾಣುತ್ತಿತ್ತು. ಅನಕ್ಷರಸ್ಥ ಪರಿವಾರ, ಯಾರ ಮಾತನ್ನು ಒಪ್ಪುವವರಲ್ಲ. ಅವಳ ತವರಿಗಿಂತ ಇಲ್ಲಿ ಮಡಿಮೈಲಿಗೆ, ಕಟ್ಟುಪಾಡುಗಳು ಅನಂತವಾಗಿದ್ದವು. ಹೆಂಗಸರು ಯಾವ ದಿನ ಎಂಥ ಬಣ್ಣದ ಸೀರೆ ಉಡಬೇಕು ಎಂದು ಕರಾರಾಗಿತ್ತು. ಅತ್ತೆಯ ಮಾತೇ ಅಲ್ಲಿ ಶಾಸನ! ಯಾವ ದಿನ ತಲೆಗೆ ಸ್ನಾನ ಮಾಡಬೇಕು, ಯಾವಾಗ ಉಗುರು ಕತ್ತರಿಸಬೇಕು, ಯಾವ ದಿನ ಮನೆ ಸೊಸೆ ಮೊರದ ತುಂಬಾ ಅಕ್ಕಿ ರಾಗಿಯನ್ನು ದಾನ ದಕ್ಷಿಣೆ ಸಮೇತ, ಬೇಡಿಬಂದವರಿಗೆ ಹಂಚಬೇಕು ಎಂಬುದೆಲ್ಲ ಅಲಿಖಿತ ಕಟ್ಟುಪಾಡುಗಳಾಗಿದ್ದವು.

ವಾರದಲ್ಲಿ 4 ದಿನ ಅವಳು ಯಾವುದೋ ದೇವಿದೇವತೆ ಹೆಸರಲ್ಲಿ ವ್ರತ ಕೈಗೊಳ್ಳಲೇ ಬೇಕಿತ್ತು. ಕೆಲವು ದಿನಗಳಲ್ಲಿ ಕಟ್ಟುನಿಟ್ಟು ಉಪವಾಸ ಆಗದಿದ್ದರೂ ಸಾಂಗೋಪಾಂಗವಾಗಿ ವ್ರತ ಕೆಡದಂತೆ ನಡೆಸಲೇಬೇಕಿತ್ತು. ಸಂಪ್ರದಾಯಗಳನ್ನು ಚಾಚೂ ತಪ್ಪದೆ ಪಾಲಿಸಬೇಕಿತ್ತು. ಮಂಜುಳಾ ತನ್ನೆಲ್ಲ ಡಿಗ್ರಿ ಸರ್ಟಿಫಿಕೇಟ್‌ ಗಳನ್ನೂ, ತನ್ನ ಜ್ಞಾನಾರ್ಜನೆಯ ಪಾಂಡಿತ್ಯವನ್ನೂ ಬೀರುವಿನಲ್ಲಿಟ್ಟು ಬೀಗ ಹಾಕಿ, ಮನೆ ಮಂದಿ ಹೇಳಿದ್ದಕ್ಕೆಲ್ಲ ಕೋಲೆ ಬಸವನಂತೆ ತಲೆ ಆಡಿಸುವುದೊಂದೇ ಈಗ ಮಾಡಬೇಕಿದ್ದ ಕೆಲಸ! ಇಲ್ಲಿ ಅವಳ ಡಿಗ್ರಿಗಳಿಗೆ ಯಾವ ಕೆಲಸ ಇರಲಿಲ್ಲ.

ಅವಳ ಮುಖ್ಯ ಕೆಲಸವೆಲ್ಲ ಸದಾ ಗಂಡನಿಗೆ ಸಹಾಯ ಮಾಡುವುದು, ಅತ್ತೆ ಮಾವಂದಿರ ಸೇವೆ, ನಡುನಡುವೆ ಅಡುಗೆ ಮನೆಯಲ್ಲಿ ಭಟ್ಟರಿಗೆ ಸಲಹೆ ಸೂಚನೆ ಕೊಡುತ್ತಾ ಗಮನಿಸಿಕೊಳ್ಳುವುದು, ಮನೆಯ ಮೇಲುಸ್ತುವಾರಿ….. ಹೀಗೆ ದಸರಾ ಗೊಂಬೆಯಂತೆ ಸದಾ ಅಲಂಕರಿಸಿಕೊಂಡು ಮನೆ ತುಂಬಾ ಓಡಾಡುತ್ತಾ, ವ್ರತ ನೇಮಗಳನ್ನು ನಿಷ್ಠೆಯಿಂದ ಅನುಸರಿಸುತ್ತಾ ಆ ಮನೆಗೆ ಒಂದು ಷೋ ಪೀಸ್‌ ಆಗಿ ಉಳಿದುಹೋದಳು. ಪತಿಯ ಖುಷಿ, ಅವನ ಸಂತೃಪ್ತಿಯೇ ಅವಳ ಸರ್ವಸ್ವವಾಗಿತ್ತು. ಇವಳಿಗೊಂದು ಪ್ರತ್ಯೇಕ ವ್ಯಕ್ತಿತ್ವವಿದೆ, ಇವಳಿಗೂ ಕನಸುಗಳಿವೆ ಎಂಬುದು ಇಲ್ಲಿ ಗೌಣವಾಗಿತ್ತು.

ಹೀಗೇ ಕಾಲ ಸರಿಯುತ್ತಿತ್ತು. ನೊಂದ ಮನಸ್ಸಿನಿಂದ, ಏನೋ ಅತೃಪ್ತಿ, ಅಶಾಂತಿಯಿಂದ ಮಂಜುಳಾ ತನ್ನ ವೈವಾಹಿಕ ಜೀವನ ಮುಂದುವರಿಸಿದ್ದಳು. ಈ ಮಧ್ಯೆ ಯಾವಾಗ 1 ವರ್ಷ ಕಳೆಯಿತೋ ಗೊತ್ತೇ ಆಗಲಿಲ್ಲ. ಮದುವೆಯಾಗಿ ವಾರ್ಷಿಕೋತ್ಸವ ಮುಗಿದರೂ ಸೊಸೆ ಏನೂ ಶುಭ ಸಮಾಚಾರ ಹೇಳಲಿಲ್ಲ ಎಂದು ಮೆಲ್ಲಗೆ ಮನೆಯವರ ಮನದಲ್ಲಿ ಅಸಮಾಧಾನದ ಹೊಗೆ ಹೊರಹೊಮ್ಮಿತು.

ಕ್ರಮೇಣ ಅತ್ತೆ ಹೆಚ್ಚು ಕಟ್ಟುನಿಟ್ಟಾಗಿ ವ್ರತ, ಉಪಾಸನೆ ಮಾಡಿಸತೊಡಗಿದರು. ಆ ಮಠ, ಈ ಮಠ ಎಂದು ಬಾಬಾಗಳ ದರ್ಶನ, ಪ್ರವಚನಕ್ಕಾಗಿ ಹೋಗಿದ್ದಾಯಿತು. ಮನೆಯಲ್ಲಿ ಹೋಮ, ಹವನ ಏರ್ಪಡಿಸಿ ಗುರೂಜಿ ನೀಡಿದ ಭಸ್ಮ ತಿನಿಸಿದ್ದಾಯಿತು. ಹೀಗೆ ಮತ್ತೊಂದು ವರ್ಷ ಮಗುವಿನ ಆಗಮನಕ್ಕಾಗಿ ನಾನಾ ಪರಿಪಾಠ ನಡೆಯಿತು. ಇಂಥ ಕಂದಾಚಾರಿ ಜನರ ಮಧ್ಯೆ ತಾನು ಏಗುವುದಾದರೂ ಹೇಗೆ ಎಂದು ಅವಳಿಗೆ ಅರ್ಥವೇ ಆಗುತ್ತಿರಲಿಲ್ಲ. ಇವಳ ಯಾವುದೇ ಆಧುನಿಕ ವಿಚಾರಧಾರೆಗೆ ಗಂಡ ಸುರೇಂದ್ರ ಓಗೊಡುತ್ತಿರಲಿಲ್ಲ.

ಅಂತೂ ಇಂತೂ ಕಾಲ ಸರಿಯುತ್ತಿತ್ತು. ಈ ಮಧ್ಯೆ ತನ್ನ ಬೇಸರ ಕಳೆಯಲು ಅವಳು ಪತ್ರಿಕೆ, ಮೊಬೈಲ್ ಫೋನ್‌, ಫೇಸ್‌ ಬುಕ್ ಎಂದು ಬಿಝಿ ಆದಳು. ಅಲ್ಲಿ ಅವಳಿಗೆ ಪರಿಚಯ ಆದವನೇ ಅಂಕಿತ್‌. ಅವನೊಂದಿಗೆ ಫೇಸ್‌ ಬುಕ್‌ ದೋಸ್ತಿ ಬೆಳೆಯಿತು. ಓದಿ ಕಲಿತವನಾಗಿದ್ದ ಅಂಕಿತ್‌ ಆಧುನಿಕ, ಆದರ್ಶ ವಿಚಾರಧಾರೆಯ ಯುವಕ, ಇವಳ ಸಮವಯಸ್ಕ ಸಹ. ಈಗ ಅವನ ಬಳಿ ಮಂಜುಳಾ ಮುಕ್ತವಾಗಿ ಎಲ್ಲಾ ವಿಚಾರಗಳನ್ನೂ ಚರ್ಚಿಸುವಷ್ಟು ಅವರ ಸ್ನೇಹ ಬೆಳೆಯಿತು.

ಇವಳಿಗೆ ಬೇಕಾದ ಯಾವುದೇ ಸಹಾಯ ಮಾಡಲು ಅಂಕಿತ್‌ ತುದಿಗಾಲಲ್ಲಿ ಕಾದಿದ್ದ. ತನಗೆ ತಿಳಿದ ಎಲ್ಲಾ ಹೊಸ ವಿಷಯಗಳನ್ನೂ ತಕ್ಷಣ ಶೇರ್‌ ಮಾಡುತ್ತಿದ್ದ. ಇವರಿಬ್ಬರ ಮಧ್ಯೆ ಅಗೋಚರ ಆಕರ್ಷಣೆ ಸಹಜವಾಗಿಯೇ ಬೆಳೆಯಿತು. ಆದರೆ ಮಂಜುಳಾ ವಿವಾಹಿತೆ ಎಂದು ಅರಿತಿದ್ದ ಅಂಕಿತ್‌, ಎಂದೂ ತನ್ನ ಸೀಮಾರೇಖೆ ದಾಟಿ ಅನಗತ್ಯ ಮಾತನಾಡುತ್ತಿರಲಿಲ್ಲ.

ಒಂದು ದಿನ ಅಂಕಿತ್‌ ಇವಳಿಗೆ ಮೆಸೇಜ್‌ ಮಾಡಿ, ತಾನು ಇಷ್ಟರಲ್ಲಿ ಸಿಂಗಾಪುರ್‌ ಗೆ ಹೊರಡಲಿರುವುದಾಗಿಯೂ, ಅಲ್ಲಿ ತನ್ನ ಚಿಕ್ಕಮ್ಮನ ಮನೆಯಲ್ಲಿ ಉಳಿಯುತ್ತೇನೆ, ಕೆಲಸಕ್ಕೆ ಅಲ್ಲೇ ಸೇರುವುದಾಗಿಯೂ ತಿಳಿಸಿದ.

naya-safar-story2

ಇದರಿಂದ ಮಂಜು ಸಹ ಆಶಾಭಾವನೆಯ ಮೊದಲ ಮೆಟ್ಟಿಲೇರುವಂತೆ ಆಯಿತು. ಈ ಎಲ್ಲಾ ಬಂಧನದಿಂದ ಹೊರಬಂದು, ಯಾರಿಗೂ ತಿಳಿಯದಂತೆ, ತಾನು ಅವನ ಜೊತೆ ವಿದೇಶದಲ್ಲಿ ಹೋಗಿ ನೆಲೆಸಿದರೆ ಮುಂದಿನ ಬದುಕು ಮಧುರ ಎನಿಸಿತು.

ಮಾರನೇ ದಿನ ಅವಳು ಅಂಕಿತನಿಗೆ ಫೋನಾಯಿಸಿ, “ನಾನು ನಿನ್ನ ಜೊತೆ ಸಿಂಗಾಪುರ್‌ ಗೆ ಬರಬಹುದೇ….?”

“ಆದರೆ….? ನಿನ್ನ ಅತ್ತೆ ಮನೆಯವರು ಇದಕ್ಕೆ ಅಷ್ಟು ಸುಲಭವಾಗಿ ಒಪ್ಪಿಗೆ ಕೊಡುವರೆ….?”

“ಅವರ ಅನುಮತಿ ಕೇಳಿದಾಗ ತಾನೇ ಆ ಜಂಜಾಟಗಳು…..ನನಗೆ ಈ ಉಸಿರುಗಟ್ಟಿಸುವ ವಾತಾವರಣದಿಂದ ಪಾರಾಗಿ ಸರ್ವತ್ರ ಸ್ವತಂತ್ರಳಾಗಿ ಬದುಕುವ ಆಸೆ!”

“ನಿನಗೆ ನಿಜವಾಗಿಯೂ ಅಷ್ಟು ಧೈರ್ಯವಿದೆಯೇ?” ಅಂಕಿತನಿಗೆ ನಿಜವಾಗಿಯೂ ನಂಬಲಾಗಲಿಲ್ಲ.

“ಖಂಡಿತಾ ಇದೆ! ನನ್ನ ಕನಸುಗಳನ್ನು ನನಸಾಗಿಸಿಕೊಳ್ಳಲು ನಾನು ಏನು ಮಾಡಲಿಕ್ಕೂ ತಯಾರು!”

“ಸರಿ, ಹಾಗೆ ಆಗಲಿ. ಆದರೆ ಸಿಂಗಾಪುರಕ್ಕೆ ಹೊರಡುವುದು ಅಷ್ಟು ಸುಲಭವಲ್ಲ. ಮೊದಲು ನಿನ್ನ ಪಾಸ್‌ ಪೋರ್ಟ್‌ ಆಗಬೇಕು, ಟೂರಿಸ್ಟ್ ವೀಸಾ ರೆಡಿ ಆಗಬೇಕು. ಇದಕ್ಕೆಲ್ಲ ಖಂಡಿತಾ ಟೈಂ ಬೇಕು. ಹ್ಞಾಂ…., ನನಗೊಬ್ಬ ಫ್ರೆಂಡ್‌ ಟ್ರಾವೆಲ್ ‌ಏಜೆನ್ಸಿಯಲ್ಲಿದ್ದಾನೆ. ಇಂಥ ಕೆಲಸಗಳನ್ನು ಆದಷ್ಟು ಬೇಗ ಮುಗಿಸಿ ಕೊಡ್ತಾನೆ. ಆದರೆ ಇದಕ್ಕಾಗಿ ನೀನು ಬೇಕಾದ ಎಲ್ಲಾ ಡಾಕ್ಯುಮೆಂಟ್ಸ್, ಹಣ ಇತ್ಯಾದಿ ರೆಡಿ ಮಾಡಿಕೊಂಡು ಬರಬೇಕು. ನೀನು ಮೊದಲು ಬೆಂಗಳೂರಿಗೆ ಬಂದುಬಿಡು, ಇಲ್ಲೇ ಉಳಿದುಕೊಂಡು ಎಲ್ಲಾ ಫಾರ್ಮಾಲಿಟೀಸ್ ಪೂರ್ತಿ ಮಾಡೋಣ.”

“ಸರಿ, ಏನೋ ಒಂದು ನೆಪದಿಂದ ನಾನು ಬೇಗ ಬೆಂಗಳೂರಿಗೆ ಬಂದುಬಿಡ್ತೀನಿ. ನನ್ನ ಬಳಿ ಒಂದಿಷ್ಟು ಹಣಕಾಸು, ಒಡವೆ, ವಸ್ತ್ರ ಎಲ್ಲಾ ಇದೆ. ಅವನ್ನೆಲ್ಲ ಸರಿಪಡಿಸಿಕೊಂಡು ಬರ್ತೀನಿ. ಎಲ್ಲಿಗೆ, ಯಾವಾಗ ಬರಬೇಕು ಅಂತ ತಿಳಿಸಿಬಿಡು.”

ಮಾರನೇ ದಿನವೇ ಮನೆಯವರಿಗೆ ಏನೋ ಒಂದು ನೆಪವೊಡ್ಡಿ, ಕಾಲೇಜಿನಿಂದ ಸರ್ಟಿಫಿಕೇಟ್‌ ಪಡೆದು, ಗೆಳತಿಯ ಮದುವೆ ಮುಗಿಸಿಕೊಂಡು ಬರುವುದಾಗಿ ಹೇಳಿ ಬೆಂಗಳೂರಿಗೇ ಹೊರಟೇಬಿಟ್ಟಳು. ಅವಳಿಗಾಗಿ ರೈಲ್ವೆ ಸ್ಟೇಷನ್‌ ಬಳಿ ಅಂಕಿತ್‌ ಕಾಯುತ್ತಿದ್ದ. ಕೂಡಲೇ ಅವರು ಪಾಸ್‌ ಪೋರ್ಟ್‌ ಗೆ ಬೇಕಾದ ಫಾರ್ಮಾಲಿಟೀಸ್‌ ಎಲ್ಲಾ ಪೂರೈಸಿದ ನಂತರ, ಮಾರನೇ ದಿನವೇ ಅವಳು ತಕ್ಷಣ ಊರಿಗೆ ಹೊರಟು ಬಂದಳು. ಯಾರಿಗೂ ಯಾವ ಸುಳಿವೂ ತಿಳಿಯಲಿಲ್ಲ, ಅವಳು ಈ ಸಲ ತವರಿಗೆ ಹೋಗಲೂ ಇಲ್ಲ.

ಅಂತೂ ಅವಳು ಒಳಗೊಳಗೇ ಗುಟ್ಟುಗುಟ್ಟಾಗಿ ತನಗೆ ಬೇಕಾದ ಎಲ್ಲಾ ಒಡವೆ ವಸ್ತ್ರ, ಹಣ, ದಾಖಲಾತಿಗಳ ಪ್ಯಾಕಿಂಗ್ ಮುಗಿಸಿಕೊಂಡಳು. ಅಂಥದೇ ಇನ್ನೊಂದು ಕಾರಣ ಹೇಳಿ, ಮಾರನೇ ದಿನ ಹಿಂದಿರುಗುತ್ತೇನೆ ಎಂದು ಬೆಂಗಳೂರಗೆ ಅವಳು ಹೊರಟುಬಿಟ್ಟಳು. ಶಾಶ್ವತವಾಗಿ ಅವಳು ಆ ಮನೆ, ಊರು ತೊರೆಯುತ್ತಿದ್ದಾಳೆಂದು ಅವರಾದರೂ ಹೇಗೆ ತಿಳಿಯಬೇಕು?

ಅಂತೂ ಅವಳು ಅಂಕಿತನ ಕೋಣೆಗೆ ಬಂದು ಸೇರಿದಳು. ಅಂದು ರಾತ್ರಿ 10 ಗಂಟೆಗೆ ಇವರ ಫ್ಲೈಟಿತ್ತು. ಬೇಕಾದ ಕೊನೆಯ ತಯಾರಿ ಮುಗಿಸಿ, ಇವರು ಸೀದಾ ಏರ್‌ ಪೋರ್ಟಿಗೆ ಹೊರಟರು.

ಅದೇ ಮೊದಲ ಸಲ ಅವಳು ವಿಮಾನದಲ್ಲಿ ಪ್ರಯಾಣ ಹೊರಟಿದ್ದು. ಫ್ಲೈಟ್‌ ನಲ್ಲಿ ಕುಳಿತು ಯೋಚಿಸುತ್ತಿದ್ದವಳಿಗೆ, ತನ್ನ ಕನಸುಗಳಿಗೆ ಇಂದು ರೆಕ್ಕೆ ಮೂಡಿದೆ ಅನಿಸಿತು. ಇಂದಿನಿಂದ ಅವಳು ತನ್ನ ಜೀವನದಲ್ಲಿ ತಾನಂದುಕೊಂಡಂತೆ ಬದುಕಬಹುದು, ಯಾರೂ ಏನೂ ಹೇಳುವ ಹಾಗಿರಲಿಲ್ಲ, ಯಾರದೇ ಅಂಕೆ ಇಲ್ಲದೇ ಸ್ವತಂತ್ರಳಾಗಿ ಜೀವಿಸುವ ಹಕ್ಕು ದೊರಕಿದೆ ಎನಿಸಿ ಸಂಭ್ರಮಿಸಿದಳು. ತಾನೆಂದೂ ಮತ್ತೆ ಭಾರತಕ್ಕೆ ಬರಲೇ ಬಾರದು ಎಂದುಕೊಂಡಳು.

ಸಿಂಗಾಪುರ್‌ ತಲುಪಿ, ಆಂಟಿಯ ಮನೆಗೆ ಬಂದ ಅಂಕಿತ್‌, ಇವಳನ್ನು ಅವರಿಗೆ ಪರಿಚಯಿಸಿದ. 2-3 ದಿನ ಇವರು ಆಂಟಿಯ ಜೊತೆಯಲ್ಲೇ ಇದ್ದರು.

ಆಂಟಿ ಇವಳಿಗೆ ಅಲ್ಲಿನ ಲೈಫ್‌ ಸ್ಟೈಲ್‌, ವರ್ಕ್‌ ಕಲ್ಚರ್‌ ಬಗ್ಗೆ ತಿಳಿಸುತ್ತಾ, “ನೀನು ಹೊಂದಿರುವ ಶಿಕ್ಷಣದಿಂದ ಈ ಪ್ರಪಂಚದಲ್ಲಿ ಎಲ್ಲಿ ಬೇಕಾದರೂ ಕೆಲಸ ಗಿಟ್ಟಿಸಿಕೊಂಡು ಬದುಕಬಹುದು. ಇದು ಭಾರತದಲ್ಲಿ ಪಡೆದ ಡಿಗ್ರಿ. ಆದ್ದರಿಂದ ಈ ಊರಲ್ಲಿ ಇದಕ್ಕೆ ಹೆಚ್ಚಿನ ಮಹತ್ವ ಇಲ್ಲ. ನಿನ್ನ ಬಳಿ ಈಗ ಇರುವ ಉತ್ತಮ ಆಯ್ಕೆ ಎಂದರೆ ಹೌಸ್‌ ಹೋಲ್ಡ್ ವರ್ಕ್‌ ಗಮನಿಸಿಕೊಳ್ಳುವುದು. ಈ ಊರಿನಲ್ಲಿ ಮನೆಯ ನಿರ್ವಹಣೆ ನೋಡಿಕೊಳ್ಳುವವರಿಗೆ ಉತ್ತಮ ಸಂಬಳ ಡಾಲರ್‌ ನಲ್ಲೇ ಸಿಗುತ್ತದೆ. ಇಲ್ಲಿನ ವರ್ಕಿಂಗ್‌ ಕಪಲ್ಸ್ ಗೆ ತಮ್ಮ ಮನೆಯ ಹಿರಿಯರು, ಮಕ್ಕಳನ್ನು ಗಮನಿಸಿಕೊಳ್ಳಲು ಇಂಥ ಕೇರ್‌ ಟೇಕರ್ಸ್‌ ಬೇಕೇಬೇಕು. ಹೀಗೆ ಕೆಲಸ ಮಾಡುತ್ತಾ, ಇಲ್ಲಿನ ಡಿಗ್ರಿ ಸಹ ಪಡೆದುಕೋ. ಮುಂದೆ ಇದಕ್ಕಿಂತಲೂ ಉತ್ತಮ ನೌಕರಿ ಸಿಗಬಹುದು.”

ಮಂಜುಳಾಗೆ ಈ ಐಡಿಯಾ ಹಿಡಿಸಿತು. ಆಂಟಿ ತಿಳಿಸಿದಂತೆ, ಅವರ ಪರಿಚಿತರ ಒಂದು ಕುಟುಂಬಕ್ಕೆ ಅವರ ಮನೆಯ ಮಕ್ಕಳನ್ನು ನೋಡಿಕೊಳ್ಳುವ ಕೆಲಸಕ್ಕೆ ಸೇರಿದಳು. ಆ ಮನೆಯ ಉದ್ಯೊಗಸ್ಥ ದಂಪತಿ ಬೆಳಗ್ಗೆ 8ಕ್ಕೆ ಹೊರಟು ರಾತ್ರಿ 9ಕ್ಕೆ ಮನೆಗೆ ಬರುತ್ತಿದ್ದರು.

ಹೀಗೆ ಮಂಜುಳಾ ಆ ಮನೆಯ ಆಯಾ ಆದಳು. ಮನೆಯ ಅಡುಗೆ ಕೆಲಸ ಸಹ ಅವಳ ಪಾಲಿಗೆ ಬಂತು. ಮನೆಯ ಇನ್ನಿತರ ಕೆಲಸಗಳಿಗೆ ವಾರಕ್ಕೆ 2 ದಿನ ಕೆಲಸದವಳು ಬರುತ್ತಿದ್ದಳು. ಭಾರತೀಯ ಕರೆನ್ಸಿಯಲ್ಲಿ ಅವಳಿಗೆ ತಿಂಗಳಿಗೆ 25 ಸಾವಿರ ರೂ. ಸಂಬಳದ ಕೆಲಸ ಅದಾಗಿತ್ತು. ಅವಳ ಊಟ ತಿಂಡಿ ಎಲ್ಲಾ ಅಲ್ಲೇ ಕಳೆದು ಹೋಗುತ್ತಿತ್ತು. ಹೀಗಾಗಿ ಅವಳು ತನ್ನ ಸಂಬಳದ ಬಹು ಪಾಲನ್ನು ಬ್ಯಾಂಕಿಗೆ ಹಾಕಿಡುತ್ತಿದ್ದಳು.

ಕ್ರಮೇಣ ಅವಳ ಬಳಿ ಸಾಕಷ್ಟು ದುಡ್ಡು ಸೇರಿತು. ಆ ಮನೆಯಲ್ಲಿ ಎಲ್ಲರೂ ಅವಳನ್ನು ಬಹಳ ಗೌರವಾದರಗಳಿಂದ, ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದರು. ಆ ಮನೆಯ ಅವಳಿ ಮಕ್ಕಳ ಹೊಣೆ ಇವಳದಾಗಿತ್ತು. 6 ತಿಂಗಳು ಕಳೆಯುವಷ್ಟರಲ್ಲಿ ಅವಳು ಆ ಮಕ್ಕಳೊಂದಿಗೆ ಆಳವಾದ ವಾತ್ಸಲ್ಯ ಬೆಳೆಸಿಕೊಂಡಳು. ಈಗ ಅವಳಿಗೆ ತನ್ನ ತಾಯಿ ತಂದೆ, ಗಂಡ, ಅವನ ಮನೆಯವರು, ಹಳೆಯ ಜೀವನ…. ಯಾವುದೂ ನೆನಪಾಗುತ್ತಿರಲಿಲ್ಲ. ಅವಳು ತನ್ನ ಹೊಸ ಜೀವನದಲ್ಲಿ ಬಹಳ ಖುಷಿ ಕಂಡುಕೊಂಡಿದ್ದಳು. ಅಂಕಿತ್‌ ನಂಥ ಸಂಗಾತಿ, ನಿರ್ಮಲ ಸ್ನೇಹದಿಂದ ಅವಳೀಗ ಹೊಸ ಪರಿವಾರ ಪಡೆದಿದ್ದಳು.

ತನ್ನ ಮಾಲೀಕರ ಸಲಹೆಯ ಮೇರೆಗೆ ಮಂಜುಳಾ ಅಡ್ವಾನ್ಸ್ ಕಂಪ್ಯೂಟರ್‌ ಕೋರ್ಸ್‌ ಗೆ ಸೇರಿದಳು. ಅದರಿಂದ ಮುಂದೆ ಅವಳಿಗೆ ಉತ್ತಮ ನೌಕರಿ ದೊರಕಲಿತ್ತು. ಈಗ ಅವಳು ಆ ದೇಶದ ರೀತಿ ರಿವಾಜು, ಅಲ್ಲಿನ ಜನರು, ಅವರ ಆಚಾರ ವಿಚಾರ ಎಲ್ಲದರ ಬಗ್ಗೆ ಚೆನ್ನಾಗಿ ಬಲ್ಲವಳಾಗಿದ್ದಳು. ಅಲ್ಲಿನ ಲೈಫ್‌ ಸ್ಟೈಲ್ ‌ಅವಳಿಗೆ ಬಹಳ ಇಷ್ಟವಾಗಿತ್ತು. ಅಲ್ಲಿನ ಪರಿಶುಭ್ರ ವಾತಾವರಣ ಅವಳಿಗೆ ಬಹಳ ಹಿಡಿಸಿತು. ಅಂಕಿತ್‌ ನೊಂದಿಗೆ ಅವಳ ಸಂಬಂಧ ರಮ್ಯವಾಗಿತ್ತು.

ಅತ್ತ ಅಂಕಿತ್‌ ಗೆ ಸಹ ಉತ್ತಮ ನೌಕರಿ ಸಿಕ್ಕಿತ್ತು. ಅವನೀಗ ಆಂಟಿ ಮನೆಯಿಂದ ದೂರವಾಗಿ ಒಂಟಿ ಕೋಣೆಯ ಮನೆ ಹಿಡಿದಿದ್ದ. ಮಂಜುಳಾ ಒಬ್ಬಂಟಿಯಾಗಿದ್ದ ಅವನ ಆಂಟಿ ಬಳಿಯೇ ಉಳಿದಿದ್ದಳು. ಪ್ರತಿ ವೀಕೆಂಡ್‌ ಇಬ್ಬರೂ ಹತ್ತಿರದ ಪಿಕ್ನಿಕ್‌ ಎಂದು ಸುತ್ತಾಡಲು ಹೊರಡುತ್ತಿದ್ದರು. ಬಿಡುವಿದ್ದಾಗ ಆಂಟಿ ಸಹ ಇವರ ಜೊತೆ ಬರುತ್ತಿದ್ದರು. ಅವನು ಮಂಜುಳಾಗೆ ಎಲ್ಲ ರೀತಿಯ ಸಹಾಯ ಮಾಡುತ್ತಿದ್ದ. ತಾನು ಅವನ ಪ್ರೀತಿಯಲ್ಲಿ ಹುಚ್ಚಳಾಗಿದ್ದೇನೆ ಎಂದೇ ಅವಳು ಭಾವಿಸಿದಳು. ಅಂಕಿತನ ಕಂಗಳಲ್ಲೂ ಅದೇ ಭಾವ ಕಂಡಿತು. ಆದರೆ ಪ್ರಕಟವಾಗಿ ತಮ್ಮ ಭವಿಷ್ಯದ ಬಗ್ಗೆ ಅವರೆಂದೂ ಚರ್ಚಿಸುತ್ತಿರಲಿಲ್ಲ.

ಒಂದು ದಿನ ಸಂಜೆ ಅಂಕಿತ್‌ ಓಡಿ ಬಂದವನೆ ಗಾಬರಿಯಲ್ಲಿ ಹೇಳತೊಡಗಿದ, “ಮಂಜು, ನಿನ್ನ ಗಂಡನಿಗೆ ಹೇಗೋ ಏನೋ ನೀನು ನನ್ನೊಂದಿಗೆ ಇಲ್ಲಿಗೆ ಬಂದಿರುವ ವಿಚಾರ ತಿಳಿದುಹೋಗಿದೆ. ಯಾರೋ ನಮ್ಮಿಬ್ಬರನ್ನೂ ಏರ್‌ ಪೋರ್ಟ್‌ ನಲ್ಲಿ ನೋಡಿದರು ಅವನಿಗೆ ವಿಷಯ ಮುಟ್ಟಿಸಿದ್ದಾರೆ. ಅದನ್ನು ತಿಳಿದು ಸುರೇಂದ್ರ ನನ್ನ ಅಣ್ಣನ ಮನೆಗೆ ಹೋಗಿ, ರೌಡಿಗಳ ಜೊತೆ ಅವನನ್ನು ಬೆದರಿಸಿ ವಿಷಯ ಕಕ್ಕಿಸಿದ್ದಾನೆ. ನೀನು ನನ್ನೊಂದಿಗೆ ಓಡಿ ಬಂದಿರುವೆ ಎಂದು ಅವನಿಗೆ ಮಹಾ ಸಿಟ್ಟಿದೆ! ಬಹುಶಃ ಇನ್ನು ಕೆಲವೇ ದಿನಗಳಲ್ಲಿ ಅವನು ನಿನ್ನನ್ನು ಹುಡುಕುತ್ತಾ ಇಲ್ಲಿಗೆ ಬಂದರೆ ಆಶ್ಚರ್ಯವಿಲ್ಲ….. ಮುಂದೇನು?”

“ಆದರೆ ಅವನಿಗೆ ಇಷ್ಟು ದೂರ ನನ್ನ ವಿಳಾಸ ಹುಡುಕಿಕೊಂಡು ಬರಲು ಹೇಗೆ ಸಾಧ್ಯ? ಹಾಗೂ ಒಂದು ವೇಳೆ ಬಂದುಬಿಟ್ಟರೆ, ಅದಕ್ಕೂ ಮುಂಚೆ ನಾನು ಇಲ್ಲಿಂದ ಸುರಕ್ಷಿತವಾಗಿ ಬೇರೆಲ್ಲಿಗಾದರೂ ಹೊರಟು ಹೋಗಬೇಕು!” ಮಂಜುಳಾ ಹೆದರುತ್ತಲೇ ಹೇಳಿದಳು.

“ಆದರೆ ನೀನು ಎಲ್ಲಿಗೆ ತಾನೇ ಹೋಗುವೆ?”

ಈ ವಿಷಯವನ್ನು ಅವಳು ತನ್ನ ಮಾಲೀಕಳಾದ ಮಾಲಿನಿ ಬಳಿ ಚರ್ಚಿಸಿದಳು. ಮಾಲಿನಿ ಇವಳಿಗೆ ಧೈರ್ಯ ತುಂಬುತ್ತಾ, “ನೀನೇನೂ ಹೆದರಬೇಡ ಮಂಜು, ನೀನು ಇಲ್ಲಿಂದ ಮಲೇಷಿಯಾಗೆ ಹೊರಟುಬಿಡು. ಅಲ್ಲಿ ನನ್ನ ಅಕ್ಕ ಇದ್ದಾಳೆ. ಅಲ್ಲಿ ನೀನು ಅವಳ ಒಬ್ಬಳೇ ಮಗಳು, ಮುದಿ ಅತ್ತೆ ಮಾವಂದಿರನ್ನು ನೋಡಿಕೊಳ್ಳುವ ಕೆಲಸಕ್ಕೆ ಸೇರು. ಇಷ್ಟು ದಿನ ಹೇಗೋ ಅವಳತ್ತೆ ಸಹಾಯ ಮಾಡುತ್ತಿದ್ದರು, ಈಗ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದಾರೆ. ನಂಬಿಕಸ್ತರಿಗಾಗಿ ಅಕ್ಕ ಆಗಾಗ ನನ್ನ ಬಳಿ ವಿಚಾರಿಸುತ್ತಿದ್ದಳು.

“ನಾನಿಲ್ಲಿ ಬೇರೆ ಯಾರನ್ನಾದರೂ ಕೆಲಸಕ್ಕೆ ನೋಡುವೆ. ನೀನು ಕೂಡಲೇ ಅಲ್ಲಿಗೆ ಹೊರಟುಬಿಡು. ನಾನು ಅಕ್ಕನಿಗೆ ಇವತ್ತೇ ಮಾತನಾಡಿ ಎಲ್ಲಾ ವಿವರ ತಿಳಿಸುತ್ತೇನೆ. ನೀನು ಮುಂದಿನ 6 ತಿಂಗಳು ಅಲ್ಲಿಯೇ ಇದ್ದುಬಿಡು. ಆಮೇಲೆ ನೋಡೋಣ, ಈಗ ಸದ್ಯದ ಕಷ್ಟ ಕಳೆದರೆ ಸಾಕು. ಒಂದು ಪಕ್ಷ ನಿನ್ನ ಗಂಡ ಇಲ್ಲಿಗೆ ಬಂದದ್ದೇ ಆದರೆ, ಇಲ್ಲೆಲ್ಲಿಯೂ ನಿನ್ನ ಸುಳಿ ಸಿಗದೆ ತೆಪ್ಪಗೆ ವಾಪಸ್ಸು ಹೊರಡಬೇಕು. ಆಗ ಬೇಕಾದರೆ ನೀನು ಇಲ್ಲಿಗೇ ವಾಪಸ್ಸು ಬಂದರೂ ನಡೆಯುತ್ತದೆ,” ಎಂದು ವಿವರಿಸಿದರು.

ಮಂಜು ಅಂಕಿತ್‌ ನ ಕಡೆ ತಿರುಗಿ ಅವನ ಅಭಿಪ್ರಾಯ ಕೇಳುವವಳಂತೆ ದಿಟ್ಟಿಸಿದಾಗ, “ಮಂಜು, ಇಲ್ಲಿನ ಚಿಂತೆ ಬಿಡು. ಮಾಲಿನಿ ಮೇಡಂ ಹೇಳಿದಂತೆ ನೀನು ಅಲ್ಲಿಗೆ ಹೊರಡುವುದೇ ಸರಿ. ನಿನ್ನನ್ನು ಮಲೇಷಿಯಾ ತಲುಪಿಸುವ ಜವಾಬ್ದಾರಿ ನನಗಿರಲಿ. ಆದರೆ  ವೀಸಾ ಸಿಗುವವರೆಗೂ ನೀನು ಇಲ್ಲಿ ಬಲು ಜೋಪಾನವಾಗಿ ಇರಬೇಕು. ಸುರೇಂದ್ರ ತನ್ನ ಕಸಿನ್‌ ಮಹೇಶನ ಜೊತೆ ಇಲ್ಲಿಗೆ ಬರುತ್ತಿದ್ದಾನೆ ಅಂತ ಸುದ್ದಿ. ಹಾಗಾಗಿ ಅವರು ಇಲ್ಲಿ ನಿನ್ನನ್ನು ಹುಡುಕಾಡುವಾಗ ನೀನು ತೆರೆಮರೆಯಲ್ಲೇ ಇರಬೇಕು. ಅವರ ಕಣ್ಣಿಗೆ ಅಪ್ಪಿತಪ್ಪಿಯೂ ಕಾಣಿಸಬಾರದು.”

“ಹ್ಞೂಂ ಅಂಕಿತ್‌, ಇದರಿಂದಾಗಿ ಇಲ್ಲಿ ನನ್ನ ಡಿಗ್ರಿಯ ಓದು ಸಹ ಕೈ ಬಿಡಬೇಕಾಗುತ್ತೆ. ಸುರೇಂದ್ರ ಅಥವಾ ಮಹೇಶರಿಗೆ ನನ್ನ ಬಗ್ಗೆ ಒಂದಿಷ್ಟೂ ಕ್ಲೂ ಸಿಗಬಾರದು. ಅವರು ನನ್ನನ್ನು ಹಿಡಿದು, ಪೊಲೀಸರ ಸಮ್ಮುಖದಲ್ಲಿ ಏರ್‌ ಪೋರ್ಟ್‌ ಗೆ ಎಳೆದೊಯ್ದರೂ ಕಾನೂನು ನನಗೆ ಸಹಾಯ ಮಾಡಲಾರದು, ಕೋರ್ಟಿಗೆ ಹಾಜರುಪಡಿಸಿದರೆ, ಇನ್ನೂ ವಿಚ್ಛೇದನ ಆಗಿಲ್ಲ. ಮದುವೆಗೆ ಮಾನ್ಯತೆ ಇದೆ ಎಂದು ಅಲ್ಲೂ ನನಗೆ ಸೋಲೇ! ಹೀಗಾಗಿ ಅವರ ಕೈಗೆ ಸಿಕ್ಕದಿರುವುದೊಂದೇ ಈಗ ಉಳಿದಿರುವ ದಾರಿ. ಅವರಂತೂ ಇಲ್ಲಿಂದ ಮುಂದೆ ಮತ್ತೊಂದು ದೇಶ ಹುಡುಕಿ ಬರಲಾರರು……”

“ನೀನೇನೂ ಹೆದರಬೇಡ ಮಂಜು, ಹೇಗಾದರೂ ನಿನ್ನನ್ನು ಮಲೇಷಿಯಾ ತಲುಪಿಸುವೆ. ಅವರು ಅಕಸ್ಮಾತ್‌ ನನ್ನನ್ನು ಹಿಡಿದರೂ, ನಾನೇ ನಿನ್ನನ್ನು ಅಲ್ಲಿಂದ ಹೊರಡಿಸಿದ್ದು ಎಂದು ನೈತಿಕವಾಗಿ ನನ್ನ ತಪ್ಪು ಒಪ್ಪಿಕೊಳ್ಳುವೆ. ಇಲ್ಲಿಗೆ ನೀನು ಬಂದಿದ್ದು ನಿಜವಾದರೂ ಮುಂದೆ ಎಲ್ಲಿಗೆ ಹೋದೆಯೋ ತಿಳಿಯದು ಅಂತೀನಿ…..” ಎಂದು ಅವಳಿಗೆ ಕೈ ಬೀಸುತ್ತಾ ಅಂಕಿತ್‌ಹೊರಟುಬಿಟ್ಟ.

ಅಸಹಾಯಕಳಾಗಿ ಮಂಜುಳಾ ಅವನು ಹೋದ ದಿಕ್ಕನ್ನೇ ನೋಡುತ್ತಾ, ಓಡಿಬಂದು ಮಾಲಿನಿಯ ತೆಕ್ಕೆಗೆ ಜೋತುಬಿದ್ದು ಬಿಕ್ಕಳಿಸಿದಳು. ಮಾಲಿನಿ ಅವಳಿಗೆಷ್ಟೋ ಧೈರ್ಯ ತುಂಬಿದಳು. ಆ ಪರದೇಶದಲ್ಲಿ ಮಾಲಿನಿ ಅವಳ ಪಾಲಿನ ಹಿರಿಯಕ್ಕನೇ ಆಗಿದ್ದಳು. ಇದಾಗಿ 1 ತಿಂಗಳು ಕಳೆಯಿತು. ಒಂದು ದಿನ ಮಂಜುಳಾ ತನ್ನ ಕಂಪ್ಯೂಟರ್‌ ಕ್ಲಾಸಿನಿಂದ ಹೊರಬಂದಾಗ, ಆ ದಾರಿಯಲ್ಲಿ ಅಸ್ಪಷ್ಟವಾಗಿ ಮಹೇಶನ ಮುಖ ಗೋಚರಿಸಿತು. ಅವಳು ಮುನ್ನಡೆಯುತ್ತಾ ಅದು ತನ್ನ ಭ್ರಮೆ ಇರಬಹುದು ಎಂದುಕೊಂಡಳು. ಮತ್ತಷ್ಟು ದೂರ ನಡೆದವಳಿಗೆ, ರಸ್ತೆಯ ಇನ್ನೊಂದು ಬದಿಯಲ್ಲಿ, ಗಡ್ಡ ಬೆಳೆಸಿಕೊಂಡು ಕೆಂಗಣ್ಣು ಬೀರುತ್ತಾ ದಾಪುಗಾಲು ಹಾಕುತ್ತಿದ್ದ ಸುರೇಂದ್ರ ಕಾಣಿಸಿದಾಗ, ಅವಳ ಜಂಘಾಬಲವೇ ಉಡುಗಿ ಹೋಯಿತು!

ತಾನು ಅಪ್ಪಿತಪ್ಪಿಯೂ ಅವರಿಬ್ಬರ ಕಣ್ಣಿಗೆ ಬೀಳಬಾರದು ಎಂದು ತಕ್ಷಣ ದುಪ್ಪಟ್ಟಾ ಎಳೆದು, ಕಂಗಳು ಮಾತ್ರ ಕಾಣಿಸುವಂತೆ ಮುಖ ಪೂರ್ತಿ ಮುಚ್ಚಿಕೊಂಡು, ಎತ್ತಲೋ ನೋಡುತ್ತಾ ಸರಸರ ನಡೆದಳು. ಅವಳ ಎದೆ ಭಯದಿಂದ ಹೊಡೆದುಕೊಳ್ಳುತ್ತಿತ್ತು. ತನ್ನನ್ನು ಹುಡುಕುತ್ತಲೇ ಅವರು ಇಲ್ಲಿಗೆ ಬಂದಿದ್ದಾರೆ ಎಂಬುದು ಅವಳಿಗೆ ಖಾತ್ರಿಯಾಯಿತು. ತಾನು ಬಹಳ ದಿನ ಇಲ್ಲೇ ಉಳಿಯುವುದು ತುಂಬಾ ಅಪಾಯಕಾರಿ ಎಂದು ಅರಿತಳು.

ಆಂಟಿಯ ಮನೆಗೆ ಬಂದಳೆ ತಕ್ಷಣ ಅಂಕಿತ್‌, ಮಾಲಿನಿ ಇಬ್ಬರಿಗೂ ಕಾನ್ಪರೆನ್ಸ್ ಫೋನ್‌ ಮಾಡಿ, ವಿಷಯ ತಿಳಿಸಿದಳು. ಇನ್ನು ಅವಳು ಹೆಚ್ಚು ದಿನ ಉಳಿಯಬಾರದೆಂದೇ ಅವರಿಬ್ಬರೂ ಸಲಹೆ ನೀಡಿದರು. ಅಷ್ಟು ಹೊತ್ತಿಗೆ ಅಂಕಿತ್‌ ಇವಳ ವೀಸಾಗೆ ಬೇಕಾದ ಏರ್ಪಾಡು ಮಾಡಿದ್ದ. ಮಾರನೇ ದಿನವೇ ಅವಳು ಮಲೇಷಿಯಾಗೆ ಹೊರಡಲು ತಯಾರಿ ನಡೆಸಿದಳು. ಎಲ್ಲಾ ಪ್ಯಾಕಿಂಗ್‌ ಮುಗಿಸಿದ ಮಂಜುಳಾ, ತಾಯಿಯಂತೆ ತನ್ನನ್ನು ಆದರಿಸಿದ ಆಂಟಿಗೆ ನಮಸ್ಕರಿಸಿ ಅತ್ತುಬಿಟ್ಟಳು. ಮಾಲಿನಿ ಬಳಿ ಬಂದು, ವಿದಾಯ ಕೋರಿ ಬಿಕ್ಕಳಿಸಿದಳು. ಮಾಲಿನಿ ಅದಾಗಲೇ ಅಕ್ಕನಿಗೆ ಫೋನ್‌ ಮಾಡಿ, ವಿಡಿಯೋ ಕಾಲ್ ‌ಮೂಲಕ ಮಂಜುವನ್ನು ಅವಳಿಗೆ ಪರಿಚಯಿಸಿದ್ದಳು.

ಮಕ್ಕಳಂತೂ ಇವಳ ಕೈ ಬಿಡದೆ ಹೋಗಬಾರದು ಎಂದು ಬಿಕ್ಕಳಿಸಿದರು. ಮಂಜುವಿಗೆ ಇದು ಹೃದಯ ಹಿಂಡುವ ದೃಶ್ಯವಾಯಿತು. ಅಂತೂ ಅಲ್ಲಿಂದ ಹೊರಟು ಅಂಕಿತ್‌ ಜೊತೆ ಏರ್‌ ಪೋರ್ಟ್‌ ತಲುಪಿದಳು. ತನ್ನ ಮನೆ, ಊರು, ತಾಯಿ ತಂದೆ, ತನ್ನವರು ಎಲ್ಲವನ್ನೂ ಬಿಟ್ಟು ಬಂದವಳಿಗೆ ಕಾಡದ ಒಂಟಿತನ ಈ ಪರದೇಶ ಬಿಟ್ಟು ಹೊರಡುವಾಗ ಬಹಳ ಸಂಕಟ ತರಿಸಿತು. ಅವಳು ಮನದಲ್ಲೇ ಬಿಕ್ಕಳಿಸುತ್ತಿದ್ದಳು.

ಅಂಕಿತ್‌ ನಂತಹ ಸಂಗಾತಿ ಅವಳಿಗೆ ಸಿಕ್ಕಿದ್ದು ನಿಜಕ್ಕೂ ಅದೃಷ್ಟವೆಂದೇ ಹೇಳಬೇಕು. ತಾನು ಸಿಂಗಾಪುರಕ್ಕೆ ಹೊರಡುವೆ ಎಂದು ಅವನು ಸೂಚಿಸಿದಾಗಿನಿಂದ ಇದುವರೆಗೂ, ಹೆಜ್ಜೆ ಹೆಜ್ಜೆಗೂ ಅವಳಿಗೆ ಸಹಕರಿಸುತ್ತಲೇ ಇದ್ದ. ಅಂತವಹನ ಜೊತೆ ತನಗೆ ಲಿವಿ ಇನ್ ರಿಲೇಶನ್‌ ದೊರಕಿದ್ದು, ನೀರಲ್ಲಿ ಮುಳುಗುತ್ತಿದ್ದವಳಿಗೆ ದಡ ಸೇರಿಸಿದಂತಾಗಿತ್ತು. ಅರಿಯದ ಪ್ರೇಮಾನುಬಂಧ ಅವರಿಬ್ಬರನ್ನೂ ಆಳವಾಗಿ ಬೆಸೆದಿತ್ತು. ಇಬ್ಬರಲ್ಲೂ ದಟ್ಟವಾಗಿದ್ದ ಪ್ರೇಮಾನುಬಂಧ, ಇಂಥ ಧೈರ್ಯಕ್ಕೆ ಮುಂದೂಡಿತ್ತು ಎಂದೇ ಹೇಳಬೇಕು.

ಅಂಕಿತ್‌ ಅವಳಿಗೆ, “ಅಲ್ಲಿ ಹುಷಾರಾಗಿರುವ ಮಂಜು. ತಲುಪಿದ ತಕ್ಷಣ, ಸೆಟಲ್ ಆದಮೇಲೆ, ನನಗೆ ಕಾಲ್ ಮಾಡು,” ಎಂದ.

“ನೀನೂ ಅಷ್ಟೇ ಅಂಕಿತ್‌, ಅವರು ನಿನಗೇನೂ ಅಪಾಯ ಮಾಡದಂತೆ ಎಚ್ಚರಿಕೆಯಿಂದಿರು.”

“ಇತ್ತೀಚೆಗೆ ನನಗೆ ನೈಟ್‌ ಶಿಫ್ಟ್…… ದಿನವಿಡೀ ಹೊರಗೆ ಬರಲ್ಲ…. ರಾತ್ರಿ ನಾನು ಅವರ ಕೈಗೆ ಸಿಕ್ಕಿಬೀಳುವ ಪ್ರಮೇಯವೇ ಇಲ್ಲ. ಹೀಗಾದರೂ, ಹಿಂದೆ ನಾನು ನಿನಗೆ ತಿಳಿಸಿದಂತೆ ಅವರನ್ನು ಹೇಗೋ ಸಂಭಾಳಿಸುತ್ತೇನೆ ಬಿಡು. ನನ್ನ ಬಗ್ಗೆ ಯೋಚಿಸಬೇಡ,” ಎಂದು ಅವಳನ್ನು ಬಳಸಿ ಧೈರ್ಯ ತುಂಬಿದನು. ಅವನ ಎದೆಗೊರಗಿ ಬಿಕ್ಕಳಿಸಿದ ಮಂಜುಳಾ, ಭಾರವಾದ ಹೃದಯ ಹೊತ್ತು ಮಲೇಷಿಯಾ ತಲುಪಿದಳು.

ತಾನು ನಡೆದು ಬಂದ ದಾರಿ, ಶಿವಮೊಗ್ಗದ ಸಾಗರದ ಊರಲ್ಲಿ ಬದುಕಿದ ದಿನಗಳು, ಅಂಕಿತನ ಪರಿಚಯ, ಸಿಂಗಾಪುರಕ್ಕೆ ಬಂದ ಬಗೆ….. ಎಲ್ಲವೂ ಅವಳಿಗೆ ಒಂದು ಕನಸಿನಂತೆಯೇ ಕಾಣಿಸಿತು. ತಾನೀಗ ಹೊರಟಿರುವ ಹೊಸ ಹಾದಿ ಕೇವಲ ಹೂವಿನ ಹಾಸಿಗೆಯಲ್ಲ ಎಂದು ಅವಳಿಗೆ ತಿಳಿದಿತ್ತು. ಆದರೂ ಜೀವನದಲ್ಲಿ ತಾನು ಅಂದುಕೊಂಡಂತೆ ಗೆದ್ದಿದ್ದೇನೆ, ಸೂತ್ರದ ಗೊಂಬೆಯಾಗಿ ಉಳಿಯಲಿಲ್ಲ ಎಂಬುದೊಂದೇ ಅವಳಿಗೆ ಈಗಿದ್ದ ಸಮಾಧಾನ.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ