ಯಾವುದೋ ಕೆಲಸದ ಸಲುವಾಗಿ ಮನೆಗೆ ಬೀಗ ಹಾಕಿ, ಎರಡು ದಿನ ಊರಿಗೆ ಹೊರಟಿದ್ದ ರಾಮಣ್ಣ ಬಂದು ನೋಡುವಷ್ಟರಲ್ಲಿ, ಮಗಳ ಮದುವೆಗೆಂದು ಇರಿಸಿದ್ದ ಹಣ ಒಡವೆ ಎಲ್ಲವೂ ಕಳುವಾಗಿತ್ತು. ಪವಾಡದಂತೆ ಅದು ಅವನಿಗೆ ವಾಪಸ್ಸು ದೊರಕಿದ್ದು ಹೇಗೆ……?

ಚಂದ್ರಣ್ಣ ಊರಿನಿಂದ ಪೇಟೆಗೆ ಬಂದಿದ್ದ. ಎಷ್ಟು ಬೇಗ ಅಂದ್ರೂ ಕೆಲಸ ಮುಗಿಯುವಷ್ಟರಲ್ಲಿ ಸಂಜೆಯಾಗಿ ಹೋಯಿತು. ತಮ್ಮ ಊರಿನ ಕೊನೆ ಬಸ್ಸು ಹಿಡಿದು ಹೊರಟ. ಜೋರು ಮಳೆ ಅಮಾವಾಸ್ಯೆ ಕಗ್ಗತ್ತಲು, ಸಧ್ಯ ಬಸ್ಸು ಸಿಕ್ಕಿತು. ಇಲ್ಲಾ ಅಂದರೆ ಐದು ಕಿ.ಮೀ. ನಡೆದು ಈ ಕತ್ತಲೆ, ಮಳೆಯಲ್ಲಿ ಮನೆ ಸೇರುವುದು ಕಷ್ಟವಾಗುವುದು ಅಂದುಕೊಂಡ.

ಇನ್ನೇನು ಮನೆಗೆ ಎರಡು ಕಿ.ಮೀ. ದೂರ ಇದೆ ಎನ್ನುವಾಗ ಬಸ್ಸು ಕೆಟ್ಟು ನಿಂತಿತು. ಎಲ್ಲಾ ಇಲ್ಲಿಯೇ ಇಳಿದುಬಿಡಿ ಅಂದ ಡ್ರೈವರ್‌. ಚಂದ್ರಣ್ಣ ಇಳಿದು ಹೊರಟ. ಜೋರಾಗಿ ಸುರಿದ ಮಳೆ ಈಗ ಸಣ್ಣಗೆ ಬರುತ್ತಿತ್ತು. ಕೊಡೆ ಹಿಡಿದು ನಡೆದ. ರಸ್ತೆಯೆಲ್ಲಾ ಕಿತ್ತು ಗುಂಡಿಯಾಗಿದೆ, ಮಳೆ ನೀರು ತುಂಬಿ ಹಳ್ಳಕೊಳ್ಳ ಏನೂ ಕಾಣಿಸುವುದಿಲ್ಲ.

ಹೇಗಪ್ಪಾ ಮನೆ ಸೇರುವುದು ಎಂದು ಯೋಚಿಸುತ್ತಾ, ಮನದಲ್ಲಿ ಧೈರ್ಯ ಬರಲಿ ಅಂತ ಸಣ್ಣದಾಗಿ, `ಕರುಣಾಳು ಬಾ ಬೆಳಕೆ. ಮುಸಕಿದೀ ಮಬ್ಬಿನಲಿ ಕೈ ಹಿಡಿದು ನಡೆಸನ್ನನು…..’ ಹಾಡುತ್ತಾ ಬರುತ್ತಿರುವ ಇವನ ಮೊರೆ ದೇವರಿಗೆ ಕೇಳಿಸಿತೇನೋ….. ಎಂಬಂತೆ ಮಿಂಚು ಬಂತು. ದೂರದಲ್ಲಿ ಯಾರೋ ಇಬ್ಬರೂ ಏನೋ ಗಂಟು ಹಿಡಿದು ನಿಂತಿರುವುದು ಕಾಣಿಸಿತು. ಅವರನ್ನು ನೋಡಿದರೆ ತಮ್ಮೂರಿನವರ ತರಹ ಕಾಣಲಿಲ್ಲ.

“ಹೋಯ್‌…. ಹೋಯ್‌….. ಯಾರದು ನಿಲ್ಲಿ,” ಎಂದು ಕೂಗಿದ. ಕಗ್ಗತ್ತಲೆಯಲ್ಲಿ ಅವರು ಓಡುವ ಸದ್ದು ಕೇಳಿಸಿತು.

“ಯಾರೋ ಕಳ್ಳರು ಬಂದಿದ್ದಾರೆ ಬನ್ರೋ…. ಓಡ್ತಿದ್ದಾರೆ ಹಿಡೀರಿ….” ಎಂದು ಕೂಗುತ್ತಾ ಚಂದ್ರಣ್ಣನೂ ಓಡಿದ. ತಾನೊಬ್ಬನೇ ಇರುವುದು ನೋಡಿ ತನಗೆ ಏನಾದರೂ ಮಾಡಿದರೆ ಎಂದು ನೆನೆಸಿ ಜೊತೆಯಲ್ಲಿ ಯಾರೋ ಇದ್ದಾರೆ ಎನ್ನುವ ಹಾಗೆ ಕರೆದ. ಅವರು ದೂರ ಹೋದರು ಎನಿಸಿತು, ಹೆಜ್ಜೆಯ ಸಪ್ಪಳ ದೂರವಾಯಿತು. ಇನ್ನೂ ಸ್ವಲ್ಪ ದೂರ ಬರುವಷ್ಟರಲ್ಲಿ ಕಾಲಿಗೆ ಏನೋ ತಗುಲಿತು. ಸರಿಯಾದ ಸಮಯಕ್ಕೆ ಮಿಂಚು ಬಂದು ಒಂದು ಕ್ಷಣ ಬೆಳಕಾಯಿತು. ಕಾಲಿಗೆ ತಗುಲಿದ್ದು ಅವರು ಹಿಡಿದುಕೊಂಡಿದ್ದ ಗಂಟು.  ಏನಿದೆ ನೋಡೋಣ ಎಂದು ಅದನ್ನೆತ್ತಿಕೊಂಡ. ಗಂಟನ್ನು ಮುಟ್ಟಿ ನೋಡಿದಾಗ ಒಡವೆ, ಹಣ ಇದ್ದಂತಿತ್ತು. `ಅವರು ಕಳ್ಳರಿರಬಹುದು…. ಏನು ಮಾಡಲಿ?’ ಯೋಚಿಸಿದ. ಗಂಟನ್ನು ಬಿಡಲು ಮನಸ್ಸಾಗದೆ ಮನೆಗೆ ತೆಗೆದುಕೊಂಡು ಹೋದ.

ಮನೆಯ ಬಾಗಿಲು ತೆಗೆದ ಹೆಂಡತಿ ತಕ್ಷಣ, “ಏನಿದು ಪಂಚೆಯ ಗಂಟು?” ಎಂದು ಕೇಳಿದಳು.

“ಏನೋ ಒಂದು ಸುಮ್ಮನಿರು,” ಎಂದು ಅವಳ ಬಾಯಿ ಮುಚ್ಚಿಸಿ ಯಾರಿಗೂ ಕಾಣದ ಹಾಗೆ ಅದನ್ನು ಕೋಣೆಯಲ್ಲಿಟ್ಟು ಬಂದ.

ಬಟ್ಟೆ ಬದಲಿಸಿ ಕೈಕಾಲು ತೊಳೆದು ಊಟ ಮಾಡಿ ಮಲಗಿದಾಗಲೂ ಅವನಿಗೆ ಗಂಟಿನ ಬಗ್ಗೆ ಯೋಚನೆ. ಏನಿರಬಹುದು ಅದರಲ್ಲಿ…… ಏನಿರಬಹುದು ಅಂತ.

ಮಧ್ಯ ರಾತ್ರಿ ನಿದ್ದೆ ಬರಲಿಲ್ಲ. ಕುತೂಹಲದಿಂದ ಮತ್ತೆ ಎದ್ದು ಲೈಟ್‌ ಹಾಕಿ ಗಂಟು ತೆಗೆಯಲು ಹೋದ. “ಯಾರು ಲೈಟ್ ಹಾಕಿದ್ದು….?” ಹೆಂಡತಿ ಕೂಗಿದಳು.

ಮೆಲ್ಲಗೆ ಲೈಟ್‌ ಆಫ್‌ ಮಾಡಿ ಬಂದು ಮಲಗಿದ. ಮತ್ತೆ ಮರುದಿನ ಗಂಟು ತೆಗೆದು ನೋಡಲು ಸಮಯವಾಗಲಿಲ್ಲ. ಗಂಟು ಯಾವಾಗ ಬಿಚ್ಚುವುದು ಎನ್ನುವ ಥ್ರಿಲ್‌ ನಲ್ಲೇ ಕಳೆದ. ರಾತ್ರಿಯೆಲ್ಲರೂ ಮಲಗಿದ ಮೇಲೆ ಅರ್ಧ ಗಂಟೆ ಬಿಟ್ಟು ಕುತೂಹಲ ತಡೆಯಲಾರದೆ ಲೈಟ್‌ ಹಾಕಿದರೆ ಹೆಂಡತಿ ಏಳುತ್ತಾಳೆ ಎಂದು ಬ್ಯಾಟರಿ ಬೆಳಕಿನಲ್ಲಿ ಬಿಚ್ಚಿ ನೋಡಿದ.

ಗಂಟಿನಲ್ಲಿ ಒಂದಿಷ್ಟು ದುಡ್ಡಿನ ಕಟ್ಟು ಹಾಗೂ ಒಂದಿಷ್ಟು ಒಡವೆಗಳಿದ್ದ. `ಸಧ್ಯ ಇದು ನನಗೆ ಸಿಕ್ಕಿದ್ದು ಒಳ್ಳೆದಾಯ್ತು. ಸಾಲವಾದರೂ ತೀರಿಸಿ ಆರಾಮವಾಗಿ ಇರಬಹುದು,’ ಎಂದು ಯೋಚಿಸಿದನು, `ಹೆಂಡತಿಗೆ ವಿಷಯ ತಿಳಿಸಬಾರದು. ಹೆಂಗಸರ ಬಾಯಲ್ಲಿ ಗುಟ್ಟು ನಿಲ್ಲುವುದಿಲ್ಲ. ಒಬ್ಬರಿಂದ ಒಬ್ಬರಿಗೆ ಹೇಳಿ ವಿಷಯ ಹೊರಗೆ ಬರುತ್ತದೆ,’ ಎಂದು ಹೆಂಡತಿಗೆ ಹೇಳಲಿಲ್ಲ.

ಎರಡು ದಿನ ಇದೇ ತಾಕಾಟದಲ್ಲಿ ಕಳೆದ. ಹೆಂಡತಿ ಕೇಳಿದಾಗೆಲ್ಲಾ ಏನೋ ಪಂಚೆ ಗಂಟು ಎನ್ನುತ್ತಾ ಅವಳನ್ನು ಸುಮ್ಮನಾಗಿಸಿದ. ಎರಡು ದಿನದ ನಂತರ ತೋಟಕ್ಕೆ ಹೋದಾಗ ರಸ್ತೆಯಲ್ಲಿ ಅವನ ಬಾಲ್ಯ ಗೆಳೆಯ ರಾಮಣ್ಣ ಸಿಕ್ಕಿದ. ಇಬ್ಬರೂ ಮಾತನಾಡುತ್ತಾ ರಾಮಣ್ಣ, “ಚಂದ್ರಣ್ಣ ನಿನಗೆ ವಿಷಯ ಗೊತ್ತಾಯ್ತಾ…. ಎರಡು ದಿನಗಳ ಹಿಂದೆ ನಮ್ಮನೇಲಿ ಕಳ್ಳತನ ಆಗಿಬಿಡ್ತು. ನಾವು ಊರಿಗೆ ಹೋಗಿದ್ದೆವು. ಅಂದು ರಾತ್ರಿ ಮನೆಯಲ್ಲಿ ಯಾರೂ ಇರಲಿಲ್ಲ. ಇನ್ನೂ ಎಲ್ಲೆಲ್ಲಿ ಕಳ್ಳತನ ಮಾಡುತ್ತಿದ್ದರೋ ಏನೋ…. ಅಷ್ಟರಲ್ಲಿ ಮಳೆ ಸಿಕ್ಕಾಪಟ್ಟೆ ಸುರಿಯಿತಂತೆ. ಹಾಗಾಗಿ ಎಷ್ಟೋ ಕಡೆ ಕಳ್ಳತನ ಆಗುವುದು ತಪ್ಪಿದೆ ಅನಿಸುತ್ತೆ.

“ಏನು ಮಾಡುವುದು ಎಂದು ತೋಚುತ್ತಿಲ್ಲ. ಮಗಳ ಮದುವೆಗೆ ಇನ್ನೂ ಎರಡು ತಿಂಗಳು ಇದೆ. ಮಗಳ ಮದುವೆಗೆ ಅಂತ ಒಡವೆ, ದುಡ್ಡು ಎಲ್ಲವನ್ನೂ ಮನೆಯಲ್ಲೇ ಜೋಡಿಸಿಟ್ಟಿದ್ದೆ. ಈಗ ಎಲ್ಲಾ ಕಳ್ಳತನವಾಯಿತು. ಎಲ್ಲಾ ಕಡೆ ಸಾಲ ತೆಗೆದುಕೊಂಡಿದ್ದೇನೆ. ಇನ್ಯಾರ ಬಳಿ ಹೋಗಿ ಕೇಳಲಿ…..? ತಲೆ ಕೆಟ್ಟು ಹೋಗಿದೆ. ಅದಕ್ಕೆ ಪೊಲೀಸ್‌ ಕಂಪ್ಲೇಂಟ್‌ ಆದರೂ ಕೊಟ್ಟು ಬರೋಣ ಅಂತ ಹೊರಟಿದ್ದೀನಿ,” ಎಂದ.

ಚಂದ್ರಣ್ಣ ಮನದಲ್ಲೇ ಯೋಚನೆ ಮಾಡಿದ, `ರಾಮಣ್ಣ ಮಗಳ ಮದುವೆಗೆಂದು ಸೇರಿಸಿದ್ದ ದುಡ್ಡು ಇದು. ಇದನ್ನು ನಾನು ಇಟ್ಟುಕೊಂಡರೆ ಕಳ್ಳನಾಗುವೆ. ಕದ್ದವರಿಗಿಂತ ಹೆಚ್ಚಿನ ಪಾಪ ನನಗೆ ಬರುತ್ತದೆ. ಪರರ ಧನ ಮುಟ್ಟಬಾರದೆಂದು ಅಪ್ಪಾ ಹೇಳುತ್ತಿದ್ದರು. ಛೇ….. ಇದನ್ನು ಕೊಟ್ಟುಬಿಡಬೇಕು. ನನ್ನ ಕಷ್ಟ ನನಗೆ,’ ಎಂದು ಯೋಚಿಸಿದ.

“ರಾಮಣ್ಣ ನನ್ನ ಮನೆಗೆ ಹೋಗೋಣ ಬಾ….. ನಿನಗೆ ಏನೋ ತೋರಿಸಬೇಕು,” ಎಂದು ಅವನನ್ನು ಮನೆಗೆ ಕರೆದುಕೊಂಡು ಹೋಗಿ, ಮೂರು ದಿನದ ಹಿಂದೆ ನಡೆದ ಘಟನೆಯನ್ನೆಲ್ಲಾ ಸವಿಸ್ತಾರವಾಗಿ ಹೇಳಿ ಆ ಗಂಟನ್ನು ಬಿಚ್ಚಿ ತೋರಿಸುತ್ತಾ, “ಇದು ನಿನ್ನ ಮನೆಯ ಒಡವೆಗಳಾ ನೋಡು…” ಎಂದು ಕೇಳಿದ.

“ಹೌದು ಕಣೋ ಚಂದ್ರಣ್ಣ…. ಇದೆಲ್ಲಾ ನಮ್ಮದೇ ಒಡವೆ. ಬೇಕಿದ್ದರೆ ಬಿಲ್ ಇಲ್ಲೇ ಇದೆ ನೋಡು. ಪೊಲೀಸ್‌ ಕಂಪ್ಲೇಂಟ್‌ ಕೊಡಲು ಜೇಬಿನಲ್ಲಿ ಇಟ್ಟುಕೊಂಡು ಬಂದಿದ್ದೆ,” ಎನ್ನುತ್ತಾ ಬಿಲ್ಲುಗಳ್ನು ತೋರಿಸಿದವನ ಕಣ್ಣುಗಳಲ್ಲಿ ಧಾರಾಳ ಕಂಬನಿ ಇತ್ತು.

“ನೀನು ಧರ್ಮಾತ್ಮ ಕಣಯ್ಯಾ….. ನಿನ್ನ ಕೈಗೆ ಸಿಕ್ಕಿದ್ದರಿಂದ ಇದನ್ನು ನನಗೆ ವಾಪಸ್‌ ಕೊಟ್ಟೆ! ಬೇರೆ ಯಾರಿಗಾದರೂ ಸಿಕ್ಕಿದ್ದರೆ ಅದು ನನಗೆ ತಿರುಗಿ ಸಿಗುತ್ತಿರಲಿಲ್ಲ. ನಿನ್ನಿಂದ ತುಂಬಾ ಉಪಕಾರವಾಯಿತು ಚಂದ್ರಣ್ಣ,” ಎಂದು ಅವನಿಗೆ ಕೈ ಮುಗಿದ.

“ಅಯ್ಯೋ…. ನಾನ್ಯಾವ ಧರ್ಮಾತ್ಮ. ನಾನೂ ಕೆಟ್ಟ ಯೋಚನೆ ಮಾಡಿದ್ದೆ. ಇಷ್ಟೊಂದು ಹಣ, ಒಡವೆ ಸಿಕ್ಕಿದೆ. ಯಾರಿಗೂ ಹೇಳುವುದು ಬೇಡ. ನನ್ನ ತಾಪತ್ರಯಗಳನ್ನು ತೀರಿಸಿಕೊಳ್ಳಬೇಕೆಂದು ಯೋಚಿಸಿದ್ದೆ. ಸಧ್ಯ ನೀನು ನನಗೆ ಸಿಕ್ಕಿ ಕಳ್ಳತನದ ವಿಷಯ ಹೇಳಿದ್ದು ಒಳ್ಳೆದಾಯಿತು. ಇಲ್ಲಾಂದ್ರೆ ನನ್ನಿಂದ ಎಂತಹ ತಪ್ಪಾಗುತ್ತಿತ್ತು….. ಛೇ,” ಎಂದು ಪೇಚಾಡಿದ ಚಂದ್ರಣ್ಣ. ಅಂತೂ ರಾಮಣ್ಣನ ಪುಣ್ಯದಿಂದ ಕಳುವಾಗಿದ್ದ ಮಾಲು ಚಂದ್ರಣ್ಣನಿಗೇ ಸಿಕ್ಕಿ, ಅದು ಅವನಿಗೆ ಸುರಕ್ಷಿತವಾಗಿ ವಾಪಸ್ಸು ದೊರೆಯುವಂತಾಯಿತು.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ