ಸೋಶಿಯಲ್ ಮೀಡಿಯಾದಲ್ಲಿ ಒಬ್ಬ ಅಪರಿಚಿತನೊಂದಿಗೆ ಗೆಳೆತನ ಆರಂಭಿಸಿದ ದಿವ್ಯಾ, ಮುಂದೆ ಅದಕ್ಕೆ ತಾನು ಅಪಾರ ಬೆಲೆ ತೆರಬೇಕಾದೀತು ಎಂದು ಕನಸಲ್ಲೂ ಯೋಚಿಸಿರಲಿಲ್ಲ. ತಾನು ಸಿಲುಕಿದ್ದ ಜೇಡರ ಬಲೆಯಿಂದ ತಪ್ಪಿಸಿಕೊಳ್ಳಲು ಮುಂದೆ ಅವಳಿಗೆ ಸಾಧ್ಯವಾಯಿತೇ.....?
ಸಂಜೆ ಅದಾಗಲೇ 6 ಗಂಟೆ ದಾಟಿತ್ತು. ಥಂಡಿ ಗಾಳಿ ಸುಂಯ್ಯೆಂದು ಬೀಸುತಿತ್ತು. ದಿವ್ಯಾ ತನ್ನ ಮನೆಯ ಎದುರಿನ ಕೈ ತೋಟದಲ್ಲಿ ಕುಳಿತು, ಕೈಯಲ್ಲೊಂದು ಪತ್ರಿಕೆ ಹಿಡಿದು, ಒಂದೊಂದೇ ಗುಟುಕು ಕಾಫಿ ಹೀರುತ್ತಾ ಆಸ್ವಾದಿಸುತ್ತಿದ್ದಳು. ಆಗ ಅವಳ ಫೋನಿನ ಸೋಶಿಯಲ್ ಸೈಟ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ನ ಒಂದು ನೋಟಿಫಿಕೇಶನ್ ಬಂದಿತು. ದಿವ್ಯಾ ಆ ಪತ್ರಿಕೆ ಬದಿಗಿಟ್ಟು, ಮೊಬೈಲ್ ಕೈಗೆತ್ತಿಕೊಂಡಳು. ರೋಹಿತ್ ಎಂಬ ತರುಣನ ರಿಕ್ವೆಸ್ಟ್ ಆಗಿತ್ತದು. ಯಾವುದೋ ಲಹರಿಯಲ್ಲಿ ಅವಳು ಅದನ್ನು ಅಕ್ಸೆಪ್ಟ್ ಮಾಡಿಕೊಂಡಳು.
ಅವಳು ರಿಕ್ವೆಸ್ಟ್ ಸ್ವೀಕರಿಸಿದ್ದೇ ತಡ, ಕ್ಷಣಾರ್ಧದಲ್ಲಿ ಆ ಕಡೆಯಿಂದ ರೋಹಿತ್ ನ ಮೆಸೇಜ್ `ಹೋ....' ಎಂದು ಬಂದೇಬಿಟ್ಟಿತು. ದಿವ್ಯಾ ಆ ಮೆಸೇಜ್ ನತ್ತ ಹೆಚ್ಚು ಗಮನಕೊಡದೆ, ತನ್ನ ಪತ್ರಿಕೆಯನ್ನು ಓದತೊಡಗಿದಳು. 2 ನಿಮಿಷ ಬಿಟ್ಟು ರೋಹಿತ್ ನ ಮೆಸೇಜ್‌ಮತ್ತೆ ಕಾಣಿಸಿಕೊಂಡಿತು. ಅವಳು ಈ ಬಾರಿ ಮೆಸೇಜ್ ಕಡೆ ಗಮನ ಕೊಡಲೇ ಇಲ್ಲ. ಅದಾದ 10 ನಿಮಿಷಕ್ಕೆ ಮತ್ತೆ ಅವನದೇ ಮೆಸೇಜ್. ಈಗಾಗಲೇ ಅವನಿಂದ 3 ಮೆಸೇಜ್ ಬಂದಿತ್ತು. `ಮೇಡಂ, ಪ್ಲೀಸ್ ರಿಪ್ಲೈ ಮಾಡಿ!'
ಅದಾಗಿ ಸ್ವಲ್ಪ ಹೊತ್ತಿಗೆ ಮತ್ತೆ ಅವನಿಂದ ಮೆಸೇಜ್, `ನಾನು ನಿಮ್ಮ ಉತ್ತರಕ್ಕಾಗಿಯೇ ಕಾಯುತ್ತಿದ್ದೇನೆ.'
ಕೊನೆಗೂ ದಿವ್ಯಾ ಉತ್ತರವಿತ್ತಳು, `ಹಾಯ್....'
`ನಾನು ಮೈಸೂರಿನ ರೋಹಿತ್, ದೊಡ್ಡ ಬಿಸ್ ನೆಸ್ ಮ್ಯಾನ್,' ಉತ್ತರ ಸಿಕ್ಕಿದ ತಕ್ಷಣ ಇದು ಅವನ ಪ್ರತಿಕ್ರಿಯೆ.
`ಓಕೆ.... ನೈಸ್' ಚುಟುಕಾಗಿ ಉತ್ತರಿಸಿದಳು ದಿವ್ಯಾ.
`ದಿವ್ಯಾ ಮೇಡಂ, ನೀವು ನನ್ನ ಫ್ರೆಂಡ್ ಆಗ್ತೀರಾ...?'
ದಿವ್ಯಾ ಅದಕ್ಕೇನೂ ಉತ್ತರಿಸಲಿಲ್ಲ. ಮೊಬೈಲ್ ಸ್ವಿಚ್ ಆಫ್ ಮಾಡಿ ತನ್ನ ಪತ್ರಿಕೆಯಲ್ಲಿ ಲೀನವಾದಳು. ಆಕೆ ವಿವಾಹಿತೆ, ಒಂದು ಖಾಸಗಿ ಕಂಪನಿಯಲ್ಲಿ ಉದ್ಯೋಗಿ. ಆಕೆಯ ಪತಿ ಬಿಸ್ ನೆಸ್ ಸಲುವಾಗಿ ಚೆನ್ನೈ, ಮುಂಬೈ, ದೆಹಲಿಗೆಂದು ವಾರದಲ್ಲಿ 4-5 ದಿನ ಸದಾ ಟೂರಿಂಗ್ ನಲ್ಲಿ ಇರುತಿದ್ದ. ಮೈಸೂರಿನ ಆ ದೊಡ್ಡ ಬಂಗಲೆಯಲ್ಲಿ ಆಳುಕಾಳಿನ ಜೊತೆ ಅವಳು ಬಹುತೇಕ ಒಂಟಿಯಾಗಿಯೇ ಇರುತ್ತಿದ್ದಳು.
ರಾತ್ರಿ ಅವಳು ಫೋನ್‌ನಲ್ಲಿ ನೆಟ್ ಆನ್ ಮಾಡಿದ ತಕ್ಷಣ, ರೋಹಿತ್ ನ ಅನೇಕ ಮೆಸೇಜ್ ಕಾಣಿಸಿಕೊಂಡ. ಇವಳು ಆನ್ ಲೈನ್ ಆದದ್ದೇ ತಡ, ಮತ್ತೆ ಅವನ ಸಂದೇಶಗಳ ಸುರಿಮಳೆ! `ಇವನೆಂಥ ಹುಚ್ಚ..... ಹೀಗೆ ಮೆಸೇಜ್ ಮಾಡುವುದು ಬಿಟ್ಟರೆ ಇವನಿಗೆ ಬೇರೆ ಕೆಲಸವೇ ಇಲ್ಲವೇ....?' ದಿವ್ಯಾಳಿಗೆ ರೇಗಿತು.
ಅದನ್ನೇ ಅವಳು ಉತ್ತರಿಸುತ್ತಾ, 'ನಿಮಗೆ ಬೇರೆ ಕೆಲಸವೇ ಇಲ್ಲವೇನು?' ಎಂದಳು.
`ಕೆಲಸವೇನೋ ಬಹಳ ಇದೆ. ಆದರೆ ಸದ್ಯಕ್ಕಂತೂ ನಿಮ್ಮ ಮೆಸೇಜ್ ಗಾಗಿ ಕಾಯುವುದೇ ದೊಡ್ಡ ಕೆಲಸಾಗಿದೆ!'
`ನೀವು ಏನು ಹೇಳಬೇಕು ಅಂತಿದ್ದೀರಿ?' ಇವಳು ಕೇಳಿದಳು.





