ಜವಾಬ್ದಾರಿ ಇಲ್ಲದ ಗಂಡನೊಂದಿಗೆ ಬಾಳಲಾಗದೆ ಸೀತಾ ಅನಿವಾರ್ಯವಾಗಿ ಮಕ್ಕಳೊಂದಿಗೆ ಬೇರೆ ಇರಬೇಕಾಯಿತು. ಕಷ್ಟಪಟ್ಟು ಮಕ್ಕಳನ್ನು ಒಂದು ದಡ ಸೇರಿಸುವಷ್ಟರಲ್ಲಿ, ಬೇರಾವುದೋ ರೂಪದಲ್ಲಿ ಮತ್ತೆ ಶನಿಕಾಟ ಆರಂಭವಾಗುವುದರಲ್ಲಿತ್ತು. ಸೀತಾಳಿಗೆ ಸಮಾಜ ಕಟ್ಟಿದ ಪರಿತ್ಯಕ್ತೆಯ ಪಟ್ಟ ಎಷ್ಟು ಸರಿ…….?

“ನೋಡಿ ಅತ್ತಿಗೆ….. ನಾನು ನಿಮ್ಮ ಮೈದುನ ಅಷ್ಟೇ ಅಲ್ಲ, ಹಿತೈಷಿಯೂ ಸಹ…. ಅಣ್ಣನಿಂದ ನಿಮೆಗೆಲ್ಲಾ ಎಷ್ಟು ತೊಂದರೆ ಆಗಿದೆ ಎನ್ನುವುದು ನನಗೆ ಗೊತ್ತಿದೆ. ಆದರೆ ಒಮ್ಮೆ ಯೋಚಿಸಿ, ನೀವು ಹಠ ಹಿಡಿಯುವುದರಿಂದ ಏನಾಗಬಹುದು ಎಂದು. ನೀವು ವಿವೇಚನೆ ಇರುವವರು ಎಂದೇ ನಾನು ಅಣ್ಣನ ಮಾತುಗಳನ್ನು ನಿಮಗೆ ತಲುಪಿಸುತ್ತಿದ್ದೇನೆ. ಹಾಗಲ್ಲ ಎಂದರೆ ಇದರಲ್ಲಿ ನಮಗ್ಯಾವ ಲಾಭವೂ ಇಲ್ಲ ಅಲ್ಲವೇ…..? ಅವನೀಗ ಸುಧಾರಿಸಿದ್ದಾನೆ ಇನ್ನು ನಿಮ್ಮಿಷ್ಟ,” ಎಂದು ಅತ್ತಿಗೆಯ ಮುಖ ನೋಡುತ್ತಾ ಅಭಿಪ್ರಾಯಕ್ಕಾಗಿ ಕಾದ ನಾರಾಯಣ.

“ನೋಡೂ….. ಇದು ಸಣ್ಣ ವಿಷಯಲ್ಲ ಹಾಗೂ ನನ್ನೊಬ್ಬಳ ನಿರ್ಧಾರವಲ್ಲ. ಶಾಂಭವಿ ಬಂದ ಮೇಲೆ ಅವಳೊಂದಿಗೆ ಮಾತನಾಡಿದ ನಂತರವಷ್ಟೇ ನಾನು ಉತ್ತರ ಕೊಡಬಲ್ಲೆ….” ಎಂದರು ಸೀತಾ.

ಈಗ ಕೊಂಚ ಅಸಮಾಧಾನದಲ್ಲಿ ತುಸು ಧ್ವನಿ ಏರಿಸಿದ ನಾರಾಯಣ, “ಅಲ್ಲಾ ಅತ್ತಿಗೇ…. ಇದು ಮಕ್ಕಳನ್ನು ಕೇಳುವ ವಿಷಯವೇ? ನಿಮಗೆ ನೋವಾಗಬಾರದು ಎಂದು ಇಷ್ಟು ಹೊತ್ತೂ ನಾನು ಹೇಳಿರಲಿಲ್ಲ. ಕಳೆದ ವಾರ ಕಮಲಾಳೊಂದಿಗೆ ಅಮ್ಮ ನಮ್ಮಲ್ಲಿಗೆ ಬಂದು, ವಾರವಿದ್ದು ನಿನ್ನೆಯಷ್ಟೇ ಹಿಂತಿರುಗಿದ್ದು ನಿಮಗೆ ಗೊತ್ತಾ…..?” ಎಂದ.

ಅಚ್ಚರಿ ತುಂಬಿದ ಭಾವನೆಯಲ್ಲಿ ಸೀತಾ ಇಲ್ಲ ಎಂಬಂತೆ ತಲೆ ಅಲ್ಲಾಡಿಸಿದಾಗ, “ಹ್ಞೂಂ ನಿಮಗಿದು ಗೊತ್ತಿರಲಿಕ್ಕಿಲ್ಲ. ನಾನೇನೋ ಅಮ್ಮ ಹಾಗೂ ಕಮಲಾಗೆ ನಿಮ್ಮಲ್ಲಿ ಒಮ್ಮೆ ಭೇಟಿ ಕೊಡಿ. ಇಲ್ಲದೇ ಹೋದರೆ, ಅತ್ತಿಗೆಗೆ ತಿಳಿದರೆ ಬೇಸರವಾಗುತ್ತದೆ ಎಂದ. ಆದರೆ ಅಮ್ಮ, ಯಜಮಾನನಿಲ್ಲದ ಮನೆ, ದೇವರಿಲ್ಲದ ಗುಡಿಯಂತೆ ಎಂದು ನಿರಾಕರಿಸಿದರು. ಅವರ ಪ್ರೀತಿಯ ಹಿರಿ ಸೊಸೆ ನೀವಾಗಿದ್ದರೂ, ಅವರದೇ ಈ ಅಭಿಪ್ರಾಯ ಎಂದರೆ, ಮಿಕ್ಕವರು ನಿಮ್ಮ ಬಗ್ಗೆ ಏನು ಮಾತಾಡಿಯಾರು…. ಎಂದು ಯೋಚಿಸಬೇಕಲ್ಲವೇ….?”  ಎಂದು ಹೇಳಿ ಮಾರ್ಮಿಕವಾಗಿ ಸೀತಾಳನ್ನು ನೋಡುತ್ತಾ ಕುಳಿತಾಗ, ಅವಳ ದುಃಖದ ಕಟ್ಟೆ ಒಡೆಯಲಾರಂಭಿಸಿತು.

ಈಗೇನು ಮಾಡಲಿ? ಹೇಗಿದ್ದ ನನ್ನ ಬಾಳು ಹೇಗಾಗಿ ಹೋಯಿತು. ಅತ್ತೆಯ ಅಚ್ಚುಮೆಚ್ಚಿನ ಹಿರಿ ಸೊಸೆ, ನಾದಿನಿ ಕಮಲಾಳ ಪ್ರೀತಿಯ ಅತ್ತಿಗೆ ನಾನು ಎಂಬುದು ಈಗ ಇತಿಹಾಸವಾಗುತ್ತಾ ಇದೆಯೇ…? ತನ್ನದು ಹಾಗಿರಲಿ, ತನ್ನ ನಿರ್ಧಾರ ತಪ್ಪಾದರೆ, ಮಕ್ಕಳಿಗೆ ಅದರಲ್ಲೂ ಮದುವೆಗೆ ಬಂದ ಮಗಳು ಶಾಂಭವಿಗೆ ಮುಳುವಾದರೆ? ತೊಳಲಾಟ ಶುರುವಾಗಿ, ಕಣ್ಣೀರು ಒರೆಸಿಕೊಳ್ಳುತ್ತಿದ್ದಾಗ ಸ್ಪಷ್ಟ ಧ್ವನಿಯಲ್ಲಿ ಬಂದಿತ್ತು ಉತ್ತರ.

“ಜನ ಏನನ್ನುತ್ತಾರೆ ಎಂದು ಕೇಳಿದಿರಲ್ಲವೇ ಚಿಕ್ಕಪ್ಪಾ…. ಪರಿತ್ಯಕ್ತೆ ಎನ್ನುತ್ತಾರೆ, ಇನ್ನೂ ನಿಮ್ಮದೇ ಭಾಷೆಯಲ್ಲಿ ಹೇಳುವುದಾದರೆ ಗಂಡ ಬಿಟ್ಟವಳು ಅನ್ನುತ್ತಾರೆ ಎಂದು ಹೇಳಲು ನಿಮಗೆ ಕಷ್ಟವಾಗಬಹುದೆಂದು ನಾನೇ ಹೇಳುತ್ತೇನೆ. ಅಂದಹಾಗೆ, ಏನಂದಿರಿ…..? ದೇವರಿಲ್ಲದ ಗುಡಿಯಂತೆ ಯಜಮಾನನಿಲ್ಲದ ಮನೆ ಅಂದಿರಲ್ಲವೇ…..? ನಿಮ್ಮ ಅಣ್ಣ ಯಜಮಾನರಂತಿದ್ದರೆ, ಹಾಗೆ ಅವರನ್ನು ಇರಲು ಕೆಲವರು ಬಿಟ್ಟಿದ್ದರೆ, ಇಂದು ನೀವು ಈ ಮಾತನ್ನು ಆಡುತ್ತಿರಲಿಲ್ಲ ಅಲ್ವಾ…..?” ಎಂದ ಶಾಂಭವಿಯ ಕಡೆಯ ಮಾತು ಮೊನಚಾಗಿಯೇ ಬಂದು ನಾರಾಯಣನನ್ನು ಚುಚ್ಚಿತ್ತು.

“ಅರೇ ಶಾಂಭವಿ…. ನೀನ್ಯಾವಾಗ ಬಂದೆ….?” ಎಂದು ತಡವರಿಸುತ್ತಾ ನಾರಾಯಣ ಕೇಳಿದ.

“ನಾನು ಈ ದಿನ ಕೆಲವು ಮುಖ್ಯ ಕಾರಣಗಳಿದ್ದುದರಿಂದ ಅರ್ಧ ದಿನ ರಜೆ ಹಾಕಿ ಮನೆಗೆ ಬಂದೆ. ನೀವು ಅಮ್ಮನೊಂದಿಗೆ ಮಾತಾಡುವಾಗ, ನನ್ನ ಹೆಸರು ಕೇಳಿದ್ದರಿಂದ ಹೊರಗೇ ನಿಂತೆ. ನಿಮ್ಮ ಮಾತುಗಳು ಜೋರು ದನಿಯಲ್ಲಿದ್ದ ಕಾರಣ ಚೆನ್ನಾಗಿಯೇ ಕೇಳಿಸಿತು. ಕ್ಷಮಿಸಿ ಚಿಕ್ಕಪ್ಪಾ….. ಕದ್ದು ಕೇಳುವ ಇರಾದೆ ನನಗೆ ಇರಲಿಲ್ಲ. ಇನ್ನು ಅಮ್ಮನ ಒಳಿತು, ಕೆಡಕಿನ ಬಗ್ಗೆ ನಿಮಗೆ ಕಾಳಜಿ ಇದ್ದಿದ್ದರೆ ನೀವು ಅಪ್ಪನಿಗೆ ಸಕಾಲದಲ್ಲಿ ಬುದ್ಧಿ ಮಾತು ಹೇಳುತ್ತಿದ್ದಿರಿ. ಆದರೆ…. ನೀವೇನು ಮಾಡಿದಿರಿ ಮತ್ತು ಏಕೆ ಮಾಡಿದಿರಿ ಎಂದು ನಮ್ಮೆಲ್ಲರಿಗೂ ಹಾಗೂ ನಿಮ್ಮ ಅಂತರಾತ್ಮಕ್ಕೂ ಚೆನ್ನಾಗಿ ಗೊತ್ತು. ಇನ್ನು ನಮ್ಮ ಜೀವನದ ಕಷ್ಟಸುಖ ನಾವು ನೋಡಿಕೊಳ್ಳುತ್ತೇವೆ. ಬಹುಶಃ ಇನ್ನು ಹೇಳಲು ನಿಮಗೇನೂ ಉಳಿದಿಲ್ಲ ಅಂದುಕೊಳ್ತೀನಿ,” ಎಂದು ಶಾಂಭವಿ ಹೇಳಿದಾಗ ನಾರಾಯಣನಿಗೆ ಮುಖಭಂಗವಾದಂತಾಗಿ ಸೀತಮ್ಮನ ಕಡೆ ಒಮ್ಮೆ ನೋಡಿ ಎದ್ದು ಹೊರಟುಹೋದ.

“ಅಮ್ಮಾ…. ಬಿಸಿಲಲ್ಲಿ ಬಂದಿದ್ದಕ್ಕೋ…. ಹೊರಗೆ ಬಿಸಲಲ್ಲಿ ನಿಂತಿದ್ದಕ್ಕೋ ಏನೋ ನನಗೆ ತಲೆ ನೋಯುತ್ತಿದೆ. ಸ್ವಲ್ಪ ಹೊತ್ತು ಮಲಗಿ ನಂತರ ಊಟ ಮಾಡುತ್ತೇನೆ. ನನಗಾಗಿ ಕಾಯದೇ ಊಟ ಮುಗಿಸಿ,” ಎಂದು ಶಾಂಭವಿ ಕೋಣೆ ಸೇರಿದಳು.

ಸೀತಮ್ಮನಿಗೆ ಮೈದುನ ನಾರಾಯಣನ ಮಾತು ತನ್ನ ಅದುವರೆಗಿನ ಜೀವನ ಮೆಲುಕು ಹಾಕಿಸಿತು. ಕೂಡು ಕುಟುಂಬಕ್ಕೆ ಹಿರಿ ಸೊಸೆಯಾದ ಸೀತಾ ಎಲ್ಲರಿಗೆ ಮೆಚ್ಚಿನವಳಾದಳು. ಆದರೆ ಅವಳ ಪತಿ ವಲ್ಲಭನಿಗೂ, ಅವನ ತಂದೆಗೂ ಯಾವಾಗಲೂ ಒಂದಲ್ಲ ಒಂದು ವಿಷಯಕ್ಕೆ ವಿರೋಧ ಅಭಿಪ್ರಾಯಗಳು ಹಾಗೂ ಆ ಮೂಲಕ ಜಗಳಗಳು ಇರುತ್ತಿದ್ದವು. ಒಮ್ಮೆ ಹೀಗೆ ಜಗಳ ಜೋರಾಗಿ ಮನೆ ಪಾಲಾಗಬೇಕಾಯ್ತು. ನಂತರದಲ್ಲಿ ವಲ್ಲಭನಿಗೆ ಅಲ್ಲಿರಲು ಮನಸ್ಸಿರದೆ, ತನ್ನ ಭಾಗಕ್ಕೆ ಬಂದ ಮನೆಗೆ ಬೀಗ ಜಡಿದು, ಸೀತಾಳ ಅಣ್ಣ ತಾರಾನಾಥನ ಸಹಾಯ ಪಡೆದು, ಬೇರೊಂದು ಊರಿನಲ್ಲಿ ಹೋಟೆಲ್ ತೆರೆದ. ಅವನು ತಾಯಿ, ಹೆಂಡತಿ ಯಾರ ಹಿತನುಡಿ ಕೇಳುವವನಾಗಿರಲಿಲ್ಲ.

ಹೊಸ ಊರು, ಹೊಸ ವ್ಯವಹಾರ ಮೊದ ಮೊದಲು ಕಷ್ಟವಾದರೂ ನಂತರ ಕೈ ಹಿಡಿದಿತ್ತು. ಎರಡು ಹೆಣ್ಣುಮಕ್ಕಳೊಂದಿಗೆ ಊರು ಬಿಟ್ಟವರ ಸಂಸಾರಕ್ಕೆ ಮತ್ತೆರೆಡು ಹೆಣ್ಣುಮಕ್ಕಳ ಸೇರ್ಪಡೆಯಾಗಿತ್ತು. ಒಟ್ಟಿನಲ್ಲಿ ಎಂಥವರೂ ಮೆಚ್ಚುವ ಚಂದದ ಸಂಸಾರ ಅವರದಾಗಿತ್ತು. ದಿನದಿನಕ್ಕೆ ಅಭಿವೃದ್ಧಿಯಾಗಿ ಹಣ, ಒಡವೆ, ವಸ್ತ್ರಕ್ಕೆ ಕೊರತೆ ಇಲ್ಲದಂತಾಗಿತ್ತು. ಕ್ರಮೇಣ ತನ್ನ ಸುತ್ತುವರಿದ ಹೊಗಳುಭಟ್ಟರ ನುಡಿಗಳಿಗೆ ಮಾರುಹೋಗಿ ಹೆಂಡತಿಗೆ ಹೇಳದೇ ಕೇಳದೇ ಅವರಿಗೆ ಹಣ ಕೊಡುತ್ತಿದ್ದ. ಹಾಗೇ ವ್ಯಾಪಾರದ ಕಾರಣ ಕೊಟ್ಟು ಮನೆಗೆ ಸರಿಯಾಗಿ ಬಾರದಾದಾಗ ಸೀತಾಳಿಗೆ ಅನುಮಾನ ಬಂದರೂ, ವಲ್ಲಭನ ಜೋರು ಬಾಯಿಯ ಮುಂದೆ ಅವಳದೇನೂ ನಡೆಯುತ್ತಿರಲಿಲ್ಲ.

ಗ್ರಹಚಾರವೆಂಬಂತೆ ಒಂದು ದಿನ ನಾರಾಯಣ ತನ್ನ ಕುಟುಂಬದೊಂದಿಗೆ ಉಟ್ಟ ಬಟ್ಟೆಯ ಸಮೇತ ಇವರ ಮನೆಗೆ ಬಂದಿಳಿದ. ಅಣ್ಣ, ಅತ್ತಿಗೆಯ ಕಾಲು ಹಿಡಿದು, ತಾನು ವ್ಯಾಪಾರದಲ್ಲಿ ಸಂಪೂರ್ಣ ನಷ್ಟ ಅನುಭವಿಸಿ, ನಿರ್ಗತಿಕನಾಗಿ ಆಶ್ರಯ ಬೇಡಿ ಬಂದಿದ್ದೇನೆ ಎಂದಾಗ ವಲ್ಲಭ ಕರಗಿಹೋದ. ಒಂದಾರು ತಿಂಗಳು ಅವರಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟು, ನಂತರ ಅವನಿಗೆ ವಾಸಕ್ಕೆ ಬಾಡಿಗೆ ಮನೆ ಒದಗಿಸಿಕೊಟ್ಟ. ತನ್ನ ವ್ಯವಹಾರ ನೋಡಿಕೊಳ್ಳುವಂತೆ ಹೇಳಿದಾಗ ಮಾತ್ರ ಸೀತಾ ಹೌಹಾರಿದ್ದಳು. ಅವಳೆಷ್ಟೇ ಕೋರಿದರೂ, ನಾರಾಯಣನ ಜೋಲು ಮುಖ ಹಾಗೂ ಬಣ್ಣದ ಮಾತುಗಳು ಗೆದ್ದು, ಅಣ್ಣನ ಕಾರುಭಾರು ನೋಡಿಕೊಳ್ಳಲು ಶುರು ಮಾಡಿದ.

ಜೊತೆಗೆ ನಾರಾಯಣ, ಅತ್ತಿಗೆಗೆ ಹಿತೈಷಿ ಎಂಬಂತೆ, ವಲ್ಲಭನ ಎಲ್ಲಾ ಚಟಗಳು ಹಾಗೂ ಅವುಗಳಿಗೆ ನೀರಿನಂತೆ ಹಣ ಸುರಿಯುವುದನ್ನು ಹೇಳಿ, ತಾನು ಹೇಳಿದ್ದೆಂದು ತಿಳಿಸಬಾರದು ಎಂದು ಭಾಷೆಯನ್ನೂ ಪಡೆದ. ಸಹಜವಾಗಿ ಕೆರಳಿದ ಸೀತಾ ವಲ್ಲಭನನ್ನು ಕೇಳಿದಾಗ, ಹಾರಿಕೆಯ ಉತ್ತರ ಕೊಡಲು ಮುಂದಾದ. ಆದರೆ ಸೀತಾ ಪಟ್ಟು ಬಿಡದಿದ್ದಾಗ, ಅದು ತಾನು ದುಡಿದ ಹಣ, ತಾನೇನಾದರೂ ಮಾಡಿಕೊಳ್ಳುವೆ ಹಾಗೂ ತಾನು ಯಾರ ಮಾತೂ ಕೇಳುವುದಿಲ್ಲ ಎಂದದ್ದಲ್ಲದೇ, ಇನ್ನು ಮುಂದೆ ಎಲ್ಲಾ ಚಟುವಟಿಕೆಗಳನ್ನು ರಾಜಾರೋಷವಾಗಿ ಮಾಡುತ್ತೇನೆಂದು ಘೋಷಿಸಿಬಿಟ್ಟ. ಸೀತಾಳ ಕಣ್ಣೀರು, ಹೌಹಾರಿ ಭಯದಲ್ಲಿ ಮುದ್ದೆಯಾಗಿ ಕುಳಿತ ಹೆಣ್ಣುಮಕ್ಕಳ ದೀನನೋಟ ಅವನನ್ನು ಕರಗಿಸಲಾಗದಷ್ಟು ಚಟಗಳ ದಾಸನಾಗಿಬಿಟ್ಟಿದ್ದ.

ವಲ್ಲಭ ಕೂಡಿಟ್ಟ ಹಣ್ಣೆಲ್ಲಾ ಕರಗಿ, ಮನೆಯಲ್ಲಿದ್ದ ಒಡವೆಗಳು ಕರಗಿಹೋದವು. ಹೀಗೇ ಮುಂದುವರಿದು ಸಾಲಗಾರರ ಬಲೆಯಲ್ಲಿ ಸಿಕ್ಕಿಬಿದ್ದವನಿಗೆ ಸಂಸಾರ ನಡೆಸಲು ಹಣ ಕೇಳುವ ಹೆಂಡತಿ, ಮಕ್ಕಳು ಶತ್ರುಗಳಂತೆ ಕಾಣಲಾರಂಭಿಸಿದರು. ಅವರು ತನ್ನನ್ನು ಏನೂ ಕೇಳದಂತೆ ಮಾಡಲು ಕಂಠಪೂರ್ತಿ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡಿ, ಸುಮ್ಮನಿರಿಸಲು ಬಂದ ಹೆಂಡತಿಗೆ ಹೊಡೆದೂಬಿಟ್ಟ! ನಂತರದಲ್ಲಿ ಹಣ ಕೇಳಿದಾಗೆಲ್ಲಾ ಇದು ಪುನರಾವರ್ತನೆ ಆಗತೊಡಗಿತು. ಅಕ್ಕಪಕ್ಕದ ಹಾಗೂ ಬಂಧುಬಳಗದ ನಡುವೆ ತಲೆ ಎತ್ತದಂತೆ ಮಾಡಿದ್ದಲ್ಲದೇ, ಅವರು ಅರೆ ಹೊಟ್ಟೆಗೂ ಯೋಚಿಸುವ ಸ್ಥಿತಿ ತಂದಿಟ್ಟುಬಿಟ್ಟ.

ಕಡೆಗೊಮ್ಮೆ ನಾರಾಯಣನ ಬಳಿ ಸೀತಾ ಗೋಳಾಡಿಕೊಂಡಾಗ, ತಾನೂ ಅಣ್ಣನನ್ನು ಬಯ್ದನಲ್ಲದೇ, ತನಗೂ ಸರಿಯಾಗಿ ಸಂಬಳ ಕೊಡದ ಕಾರಣ ಕೆಲಸವನ್ನು ಬಿಟ್ಟಿದ್ದೇನೆಂದೂ ಹಾಗೂ ತನ್ನದೇ ಹೋಟೆಲ್ ‌ಒಂದನ್ನು ನಡೆಸುತ್ತೇನೆಂದು ಹೇಳಿದಾಗ, ಸೀತಾಳಿಗೆ ವಿಷಯ ಚೆನ್ನಾಗಿಯೇ ಮನದಟ್ಟಾಯ್ತು. ಈಗಾಗಲೇ ವಲ್ಲಭ ಸೀತಾಳ ತವರಿನವರೊಂದಿಗೂ ಸಂಬಂಧ ಕೆಡಿಸಿಕೊಂಡ ಕಾರಣ, ಅಲ್ಲಿಯೂ ಸೀತಾಳಿಗೆ ಸಹಾಯ ಸಿಗುವಂತಿರಲಿಲ್ಲ. ಅವಳು ಹಪ್ಪಳ, ಸಂಡಿಗೆ ಮಾಡಿ ಮಾರಲಾರಂಭಿಸಿದಳು. ಶಾಂಭವಿ ಹಾಗೂ ಪಲ್ಲವಿ ಹೊಲಿಗೆ, ಮನೆಪಾಠಗಳನ್ನು ಓದಿನೊಂದಿಗೇ ಮಾಡುತ್ತಿದ್ದುದರಿಂದ ಪರಿಸ್ಥಿತಿ ಸುಧಾರಿಸತೊಡಗಿತು. ಕಡೆಗೊಂದು ದಿನ ಸಾಲಗಾರರ ಕಾಟ ತಡೆಯದೇ ವಲ್ಲಭ ಇದ್ದಬದ್ಧ ವಹಿವಾಟನ್ನೆಲ್ಲಾ ಮಾರಿ, ಸಾಲಗಳನ್ನು ತೀರಿಸಿ, ಉಳಿದ ಹಣ ಬಾಚಿಕೊಂಡು ಊರಿನಲ್ಲಿದ್ದ ತನ್ನ ಸ್ವಂತ ಮನೆ ಸೇರಿಕೊಂಡ. ಆದರೆ ಅದರ ಪತ್ತೆ ಮಾಡುವಲ್ಲಿ ನಾರಾಯಣ ಅಣ್ಣನಿಗೆ ಸಹಾಯ ಮಾಡಿದ್ದ.

ಇಷ್ಟಾಗುವಾಗ, ಶಾಂಭವಿಯನ್ನು ಆ ದೇವರೇ ಕೈ ಹಿಡಿದಿದ್ದ. ಅದೇ ಊರಿನಲ್ಲಿ ಅವಳಿಗೆ ಸರ್ಕಾರಿ ಕೆಲಸ ಸಿಕ್ಕು ಜೀವನ ಸುಗಮವಾಗಿತ್ತು. ಸೀತಮ್ಮನಿಗೆ ಮಗಳ ದುಡಿಮೆ ತಿಂದು ಬದುಕುವುದು ಇಷ್ಟವಿರಲಿಲ್ಲ. ಎಲ್ಲಾ ತಾಯಿಯರಂತೆಯೇ ಮಗಳಿಗೆ ಮದುವೆ ಮಾಡಬೇಕೆಂದು ಅಂದುಕೊಂಡಿದ್ದಳು. ಅದಕ್ಕೆ ಸರಿಯಾಗಿ ಉತ್ತಮ ಸಂಬಂಧವೊಂದು ಅರಸಿ ಬಂದಿತ್ತು. ಇದರ ಸುಳಿವು ದೊರೆತ ನಾರಾಯಣ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಬಂದಿದ್ದ. ಅದಕ್ಕೆ ಕಾರಣ ಇತ್ತು.

ಅತ್ತ, ವಲ್ಲಭ ಕೈಯಲ್ಲಿದ್ದ ಹಣವನ್ನು ಖರ್ಚು ಮಾಡಿಕೊಂಡು ಬರಿಗೈ ದಾಸನಾಗಿ, ತನ್ನ ಮನೆಗೆ ಹೋಗಲು ಮುಖವಿಲ್ಲದ ಕಾರಣ, ನಾರಾಯಣನ ಮನೆಗೆ ಬಂದು ಇರುವುದಾಗಿ ಗಂಟುಬಿದ್ದ. ಈಗ ಫಜೀತಿಗೆ ಬಿದ್ದ ನಾರಾಯಣ, ತನ್ನಣ್ಣನನ್ನು ಹೇಗಾದರೂ ಮಾಡಿ ಅವನ ಹೆಂಡತಿ ಹಾಗೂ ಮಕ್ಕಳೊಂದಿಗೆ ಪುನಃ ಬಾಳಲು ಅವಕಾಶ ಕಲ್ಪಿಸುವುದಾಗಿ ಹೇಳಿ, ಸೀತಮ್ಮನ ಬಳಿ ಬಂದು ಕಡೆಯ ಅಸ್ತ್ರ ಬೀರಿದ್ದ. ಆದರೆ ಆಕಸ್ಮಿಕವಾಗಿ ಅಲ್ಲಿಗೆ ಬಂದ ಶಾಂಭವಿಯ ನಿಮಿತ್ತ ಅವಮಾನದೊಂದಿಗೆ ವಾಪಸ್ಸು ಹೋಗುವಂತಾಯಿತು.

ತಲೆ ನೋವೆಂದು ಮಲಗಿದ್ದ ಶಾಂಭವಿ, ಎದ್ದು ಬಂದಾಗ ಗೋಡೆಗೊರಗಿ ಯೋಚಿಸುತ್ತಾ ಕುಳಿತ ತಾಯಿಯನ್ನು ಕಂಡು, ಅವಳ ಬಳಿ ಕುಳಿತಳು. ಆಗ ಮನೆಗೆ ಬಂದ ಪಲ್ಲವಿ, ಇಬ್ಬರ ಬಳಿ ವಿಷಯ ಕೇಳಿದಳು, ಅದಕ್ಕೆ ಸೀತಮ್ಮ ತಾನು ಪರಿತ್ಯಕ್ತೆಯಾದ ಕಾರಣ ಬಂದ ಒಳ್ಳೆಯ ಸಂಬಂಧ ತಪ್ಪಿ ಹೋದರೆ ಎಂದು ಅಳಲಾರಂಭಿಸಿದಾಗ, ಇಬ್ಬರೂ ಸೀತಮ್ಮನನ್ನು ಸಮಾಧಾನ ಪಡಿಸಿದರು. ನಂತರ ಶಾಂಭವಿ, “ಅಮ್ಮಾ, ಈ ದಿನ ನಾನು ರಜೆ ಹಾಕಿ, ಆ ವರನನ್ನು ಖುದ್ದು ಭೇಟಿ ಮಾಡಿ, ಎಲ್ಲಾ ವಿಷಯಗಳನ್ನು ಇದ್ದಿದ್ದು ಇದ್ದಂತೆಯೇ ತಿಳಿಸಿದ್ದೇನೆ. ಎಲ್ಲಾ ವಿಷಯಗಳನ್ನು ಕೇಳಿದ ಬಳಿಕ ಅವರ ನಿರ್ಧಾರ ಬದಲಾಗಿಲ್ಲ. ಹಾಗೇ ನಿಮಗೆ ಹಣ ಸಹಾಯ ಮಾಡಲೂ ಅವರ ಅಭ್ಯಂತರವಿಲ್ಲ. ಇದನ್ನು ಹೇಳಲೆಂದೇ ಮನೆಗೆ ಬಂದಾಗ ಚಿಕ್ಕಪ್ಪನ ಮಾತು ಕೇಳಿ ಅಲ್ಲೇ ನಿಂತೆ. ಅವರು ಹೇಳಿದ `ಪರಿತ್ಯಕ್ತೆ’ ಪಟ್ಟ ತರುವ ಬಾಣ, ನಾನು ಬಂದ ಕಾರಣ ಗುರಿ ಮುಟ್ಟಲಿಲ್ಲ. ಹೇಗೂ ಎಲ್ಲರೂ ಸೇರಿ ಚಂದದ ಬಾಳನ್ನು ಕಟ್ಟಿಕೊಳ್ಳುತ್ತಾ ಇವರು ಈ ಸಮಯದಲ್ಲಿ ಅವರ ಮಾತನ್ನು ಕೇಳಿ ಪುನಃ ಅಪ್ಪನನ್ನು ಬಿಟ್ಟುಕೊಂಡಿರೋ…. ಮತ್ತೆ ಎಲ್ಲರ ಜೀವನ ನರಕವೇ! ಇನ್ನು ತೀರ್ಮಾನ ನಿಮ್ಮದು,” ಎಂದಾಗ, ಸೀತಮ್ಮಳ ಮನ ತಿಳಿಯಾಯಿತು.

ಹಾಗೊಮ್ಮೆ ತನಗೆ ಪರಿತ್ಯಕ್ತೆ ಎನ್ನುವ ಪಟ್ಟ ಸಿಕ್ಕರೂ ಸರಿಯೇ, ಈ ಮಕ್ಕಳ ಬಾಳು ಹಸನಾಗುವುದಕ್ಕಿಂತ ಅದು ಹೆಚ್ಚಲ್ಲ ಎನಿಸಿತು. ಆಗ ಪಲ್ಲವಿ, “ಅಂದಹಾಗೆ ನನ್ನ ಕಡೆಯಿಂದಲೂ ಸಿಹಿ ಸುದ್ದಿಯಿದೆ. ನಾನು ಬ್ಯಾಂಕ್‌ ಕೆಲಸಕ್ಕೆ ಆಯ್ಕೆಯಾಗಿದ್ದೇನೆ. ಮತ್ತೆ ಅಕ್ಕಾ… ಇನ್ನು ಮೇಲೆ ತನ್ನ ಜವಾಬ್ದಾರಿಯನ್ನು ನನಗೆ ವರ್ಗಾಯಿಸಬೇಕು,” ಎನ್ನುತ್ತಲೇ ಎಲ್ಲರ ಮನಸ್ಸು ಸಂತಸದ ಅಲೆಯಲ್ಲಿ ತೇಲಿತ್ತು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ