ಇಡೀ ಊರಿಗೇ ಊರೇ ನರಸನಾಯಕನ ಕಾಮ ಪಿಪಾಸೆಗೆ ನಡುಗುತ್ತಿದ್ದಾಗ, ಮಂಜಣ್ಣ ತಂಗಿ ರಂಗಮ್ಮನ ಸೊಸೆಯ ಮಾನ ಕಾಪಾಡಲು ಮುಂದಾಗಿದ್ದು ಹೇಗೆ....?
``ಮಂಜಣ್ಣಾ, ನಾ ಹೆಂಗ ಮಾಡ್ಲೋ ಎಪ್ಪಾ? ನನ್ನ ಎದಿ ಒಡ್ಡು ಹೋಗ್ಲಿಕತ್ಯಾದ. ಎದಿ ಒಳಗ ಖಾರಾ ಕಲ್ಸಿದಂಗಾಗ್ಲಿಕತ್ಯಾದ.''
``ಯಾಕಬೇ ತಂಗಿ ರಂಗಮ್ಮಾ.... ಅಷ್ಟ್ಯಾಕ ಚಿಂತಿ ಮಾಡ್ಲಿಕತ್ತೀದಿ?''
``ಅಯ್ಯೋ ಎಣ್ಣಾ, ನಿನಗೆ ಎಲ್ಲಾ ಗೊತ್ತೈತೆ. ನಾ ಮತ್ತೇನು ಹೇಳ್ಲಿ? ನನ್ನ ಕಳ್ಳು ಕಿವಿಚಿದಂಗಾಗ್ಲಿಕತ್ತೈದ. ನಾ ಹೆಂಗ ಸುಮ್ಮನ ಇರ್ಲಿ? ಮಂಜಣ್ಣಾ, ನೀ ಹೆಂಗಾದ್ರೂ ಮಾಡಿ ಕಾಪಾಡೋ ಎಪ್ಪಾ? ನೀನ ನನ್ನ ಪಾಲಿನ ದ್ಯಾವ್ರ ಅಂತ ತಿಳಕೊಂಡೀನಿ.''
``ರಂಗಮ್ಮಾ, ನಾ ಇಲ್ಲೇನಬೇ? ನೀ ಯಾಕ ಅಷ್ಟು ಒದ್ದಾಡ್ಲಿಕತ್ತೀದಿ?''
``ಮಂಜಣ್ಣಾ, ನೀ ಅದೀ ಖರೇ. ಆದ್ರ ನನ ಕಣ್ಣಿಗೆ ನಿದ್ದಿ ಹತ್ತಾರ್ದಂಗ ಆಗೇದ. ಮುಂದಿನ ವಾರನ ನನ್ನ ಮುದ್ದಿನ ಸೊಸಿ ಚೆಲುವಿಗೆ ಹೂ ಮುಡುಸಿ ಎಬ್ಬಿಸಲಿಕ್ಕತ್ಯಾರ. ಹದಿನಾರು ದಿನ ತುಂಬ್ತಾ ಅತ್ತಿಗೆ. ಚೆಲುವಿ ಅಂದ್ರ ಆಕಿ ಖರೇನ ಚೆಲುವಿ ನೋಡು. ರತಿ ಇದ್ದಂಗ ಅದಾಳ. ಆಕಿ ರೂಪ, ಬಣ್ಣ, ಆಕಾರ ಏನಂತ ಹೇಳ್ಲಿ? ದೇವಲೋಕದ ರಂಭಿ ಇದ್ದಂಗ ಅದಾಳ. ಹದಿಮೂರಕ್ಕ ಆಕಿ ಮೈ ಹೆಂಗ ಒಡ್ದದಂದ್ರ, ನೋಡ್ಲಿಕ್ಕ ಎಡ್ಡೂ ಕಣ್ಣು ಸಾಲಂಗಿಲ್ಲ ಬಿಡು. ಅಕಿ ಚಿಗರಿ ಕಣ್ಗಳು, ಕೆಂಪ ಗಜ್ಜರಿ ಅಂತ ಮೈ ಬಣ್ಣ, ಎದಿ ಮೈಮಾಟ, ಒಂದ, ಎರಡ.....? ನಾ ಹೆಂಗ ವರ್ಣನಾ ಮಾಡಿ ಹೇಳ್ಲಿ?''
``ತಂಗಿ ರಂಗಮ್ಮಾ, ನಿನ್ನ ಸೊಸಿ ಮಾನ ಕಾಪಾಡೋ ಜವಾಬ್ದಾರಿ ನಂದೈತೆ ತಿಳ್ಕೋ. ಆಯ್ತಲಾ...?''
``ಮಂಜಣ್ಣಾ, ನೀ ಆಗಿನಿಂದ ಧೈರ್ಯ ಹೇಳ್ಲಿಕತ್ತೀದಿ ಖರೇ, ಆದ್ರೂ ನನಗ ಧೈರ್ಯ ಸಾಲವಲ್ದು ನೋಡು. ಈ ಚೆಲುವಿ ನನ್ನ ಅಣ್ಣನ ಒಬ್ಬಾಕೆ ಮಗಳು. ಈಕಿನ್ನ ನನ್ನ ಮಗಂಗ ತೊಗೋಬೇಕಂತ ಮಾತಾಡೀವಿ. ನನ್ನ ಮಗ ಈ ಚೆಲುವಿ ಮ್ಯಾಲ ತನ್ನ ಜೀವಾನ ಇಟ್ಕೊಂಡಾನ. ಯಾಳ್ಯಾ ಬಾಳ ಐತೆ ನೋಡು, ಅದಕ್ಕ ನನಗೆ ಚಿಂತಿ ಬಾಳ ಹತ್ಯಾದ. ಎಪ್ಪಾ, ಈ ಹೆಣ್ಣ ಜೀವಕ್ಕ ಬೆಲೀನ ಇಲ್ದಂಗಾಗೈತಿ ಇಲ್ಲಿ.''
``ನನ್ನ ಜೀವ ಹೋದ್ರೂ ಚಿಂತಿಲ್ಲಬೇ. ನಿನ್ನ ಸೊಸಿ ಮಾನಕ್ಕೆ ಯಾವ ತೊಂದ್ರಿ ಆಗಬಾರ್ದಂಗ ನೋಡ್ಕೋತೀನಿ. ನೀನ ಗಪ್ಪ ಇರಬೇ ತಂಗಿ.''
``ಹೌದ ಮಂಜಣ್ಣಾ, ನೀನೇನೋ ಹೇಳ್ಲಿಕತ್ತೀದಿ. ಆದರ ದಿವ್ಸ್ ಗೋಳು ಹಂಗ ಹೋಗ್ಲಿಕತ್ಯಾ. ಕಣ್ಣು ಮುಚ್ಚಿ ಕಣ್ಣು ತೆರೆದ್ರೋಳಗ ಒಂದು ಆಗಿಬಿಡುತ್ತ. ಚೆಲಿವಿನ್ನ ನಾ ಪಿರೂತಿಯಿಂದ ಗಿಣಿ ಸಾಕಿದಂಗ ಸಾಕೀವಿ ಎಪ್ಪಾ, ಹೂ ಮುಡಿಸಿದ ದಿನನ ಆಕಿಗೆ ರಂಭಿ ಹಂಗ ಸಿಂಗಾರ ಮಾಡಿ ಆ ಕಟುಕಂಗ ಒಪ್ಸಬೇಕಲ್ಲ! ಈ ನಮ್ಮ ದೊರೆ ಮುದಿಗೂಬೆ ಆಗಿದ್ರೂ, ಹೊಸ್ದಾಗಿ ಮೈನೆರ್ದ ಹುಡ್ಗೀರೆಲ್ಲಾ ಆತನಿಗೇ ಮೀಸಲು ಅಲ್ವಾ....? ನಮ್ಮ ದೊರಿ ಈ ಮೀಸಲು ಮುರೇ ಪದ್ಧತಿ ಇಟ್ಕೊಂಡು ಬಂದಾನಲ್ಲ? ಅರವತ್ತರ ಸಮೀಪದ ಮುದುಕ ದೊರಿಗೆ ಹನ್ನೆರ್ಡು, ಹದಿಮೂರು ವರ್ಷದ ಎಳೆ ಹುಡ್ಗೀರೇ ಬೇಕು. ಈ ದೈನಾಸಿ ಹುಡ್ಗೇರ ಶೋಭನ ದೊರಿ ಜೊತಿಗೇ ಆಗ್ಬೇಕು ಅಲ್ವಾ....? ದೊರಿಗೆ ನೈವೇದ್ಯ ಮಾಡಿದ ಮ್ಯಾಲಾನೇ ಅವರ ಮುಂದಿನ ಜೀವನ ಸಾಗುತ್ತಲ್ಲ....?