ಶೈಲಜಾ ಹಾಗೂ ಪ್ರಭು ಬೇರೆ ಜಾತಿಯವರಾದರೂ, ಪ್ರೇಮಿಸಿ ಹಿರಿಯರ ಅನುಮತಿ ಪಡೆದು ಮದುವೆಯಾದರು. ಮೊದಲಿನಿಂದಲೂ ಅತೀ ಭಾವುಕಳಾಗಿದ್ದ ಶೈಲಜಾ, ತನಗೆ ಮೈದುನ ನಾದಿನಿ ಹೇಗೆ ಹೊಂದಿಕೊಳ್ಳುವರೋ ಎಂಬ ಆತಂಕದಲ್ಲಿದ್ದಳು. ಇವಳು ತೋರಿದ ಮಾತೃ ವಾತ್ಸಲ್ಯದ ಭಾವಕ್ಕೆ ಅವರ ಪ್ರೀತಿ ವಿಶ್ವಾಸ ಹೇಗೆ ಸ್ಪಂದಿಸಿತು......!
ಶೈಲಜಾ ಕಂಪನಿಯ ಕಛೇರಿಯಿಂದ ಮನೆಗೆ ಬಂದಾಗ ಆಗಲೇ ಸಮಯ ಸಂಜೆ ಏಳು ಗಂಟೆಯಾಗಿತ್ತು. ಮಧ್ಯಾಹ್ನ ನಾಲ್ಕು ಗಂಟೆಯಿಂದಲೇ ಅವಳಿಗೆ ವಿಪರೀತ ತಲೆನೋವು. ತಲೆ ಹಿಡಿಯುತ್ತಿತ್ತು. ಸಹೋದ್ಯೋಗಿ ಮತ್ತು ಆತ್ಮೀಯ ಗಳೆತಿ ಮೈತ್ರಾ ಅದಾಗಲೇ ತನ್ನ ಹ್ಯಾಂಡ್ ಬ್ಯಾಗ್ ನಲ್ಲಿದ್ದ ತಲೆನೋವಿನ ಮಾತ್ರೆಯನ್ನು ಕೊಟ್ಟಿದ್ದಳು. ಆರು ಗಂಟೆಯವರೆಗೆ ತಲೆ ಸಿಡಿತ ಒಂದಿಷ್ಟು ಶಮನವಾಗಿದ್ದೇನೋ ನಿಜ. ಆರು ಗಂಟೆಗೆ ಕಂಪನಿ ಕೆಲಸ ಮುಗಿದಾಗ ಶೈಲಜಾ ಅಪಾರ್ಟ್ ಮೆಂಟ್ ಗೆ ಮರಳಲು ಸಿಟಿ ಬಸ್ ಏರಿದ್ದಳು. ಆರೂವರೆಗೆ ಮತ್ತೆ ತಲೆನೋವು ಸಣ್ಣದಾಗಿ ಪ್ರಾರಂಭವಾಗಿತ್ತು. ಮನೆ ತಲುಪುವಷ್ಟರಲ್ಲಿ ತಲೆನೋವು ತಾರಕಕ್ಕೇರಿತ್ತು, ಸಹಿಸಲಸಾಧ್ಯವಾಗಿತ್ತು. ಎಡಗೈ ಬೆರಳುಗಳು ಅವಳಿಗರಿವಿಲ್ಲದಂತೆ ಕಣ್ಹುಬ್ಬು, ಹಣೆ, ಮುಂದಿಯನ್ನು ನಿಧಾನವಾಗಿ ಒತ್ತತೊಡಗಿದ್ದ. ಹಣೆಯಲ್ಲಿ ನೋವಿನ ಗೆರೆಗಳು ಮೂಡಿ ಮಾಯವಾಗತೊಡಗಿದ್ದ. ಮನೆ ಸೇರುತ್ತಲೇ ಪ್ರತಿ ದಿನ ಬಟ್ಟೆ ಬದಲಾಯಿಸಿ ಕೈ ಕಾಲು ಮುಖ ತೊಳೆದುಕೊಂಡು ಫ್ರೆಶ್ ಆಗಿ ಒಂದಿಷ್ಟು ಚಹಾ ಅಥವಾ ಕಾಫಿಯನ್ನು ಮಾಡಿಕೊಂಡು ಕುಡಿದು ರಾತ್ರಿ ಅಡುಗೆಯ ಕೆಲಸದಲ್ಲಿ ಲವಲವಿಕೆಯಿಂದ ತೊಡಗುತ್ತಿದ್ದಳು. ಮನೆಯಲ್ಲಿ ಇದ್ದದ್ದೇ ನಾಲ್ಕು ಜನರು. ಶೈಲಜಾ, ಅವಳ ಗಂಡ ಪ್ರಭುರಾಜ್. ಅವನ ತಮ್ಮ ಅಥರ್ ಮತ್ತು ತಂಗಿ ಕೀರ್ತನಾ. ಶೈಲಜಾ ಮತ್ತು ಪ್ರಭುರಾಜ್ ಇಬ್ಬರೂ ಸಾಫ್ಟ್ ವೇರ್ ಎಂಜಿನಿಯರ್ಸ್. ಅಥರ್ವನ ಬಿಇ ಮುಗಿಯು ಹಂತದಲ್ಲಿದೆ. ಕೀರ್ತನಾ ಈ ವರ್ಷವಷ್ಟೇ ಬಿಇಗೆ ಸೇರಿಕೊಂಡಿದ್ದಳು. ಬೆಂಗಳೂರಿನ ಮಾರತ್ ಹಳ್ಳಿಯಲ್ಲಿ ಮನೆ. ಶೈಲಜಾ ಮತ್ತು ಪ್ರಭುರಾಜ್ ಮದುವೆಯಾಗಿ ಈಗಷ್ಟೇ ಮೂರು ವರ್ಷವಾಗಿತ್ತು. ಸದ್ಯ ಮಕ್ಕಳು ಬೇಡವೆಂಬ ದೂರದೃಷ್ಟಿಯ ಯೋಜನೆ ಅವರದು.
ಪ್ರಭುರಾಜ್ ಮನೆಗೆ ಬರುವುದು ಎಂಟೂವರೆಯ ನಂತರವೇ. ಕೀರ್ತನಾ ಸಂಬಂಧಿಕರ ಮದುವೆ ಎಂದು ಊರಿಗೆ ಹೋಗಿದ್ದಳು. ಅಥರ್ವ ಸಹ ಕಂಬೈನ್ ಸ್ಟಡೀಸ್ ಅಂತ ಇನ್ನೂ ಮನೆ ಸೇರಿಕೊಂಡಿರಲಿಲ್ಲ. ಮನೆಗೆ ಬಂದ ಶೈಲಜಾ ಹೇಗೋ ಬಟ್ಟೆ ಬದಲಿಸಿ ಮುಖ ತೊಳೆದುಕೊಂಡಳು. ಒಂದಿಷ್ಟು ಚಹಾ ಮಾಡಿಕೊಂಡು ಕುಡಿಯುವುದಕ್ಕೂ ಬೇಸರ ಎನಿಸಿದ್ದರಿಂದ ಹಾಗೇ ಹಾಸಿಗೆಗೆ ಒರಗಿದಳು. ಅಥರ್ವ ಇದ್ದರೆ ಅವನಾದರೂ ಟೀ ಅಥವಾ ಕಾಫಿ ಮಾಡಿ ಕೊಡುತ್ತಿದ್ದ ಎಂಬ ಆಶಾಭಾವನೆ ಅವಳ ಮನಸ್ಸಿನಲ್ಲಿತ್ತು. ತಲೆ ಸಿಡಿತದಿಂದ ಮನಸ್ಸು ಸ್ಥಿಮಿತದಲ್ಲಿ ಇರಲಿಲ್ಲ. ಇನ್ನು ರಾತ್ರಿ ಅಡುಗೆಗೆ ತಯಾರಿ ನಡೆಸಬೇಕಿದೆ ಎಂದು ನೆನಪಾದಾಗ ಮನಸ್ಸಿಗೆ ಒಂಥರ ಬೇಸರವೆನಿಸಿತು. `ಪ್ರಭೂಗೆ ಫೋನ್ ಮಾಡಿ ಹೇಳಿದರೆ ಮನೆಗೆ ಬರುವಾಗ ದಾರಿಯಲ್ಲಿ ಹೋಟೆಲ್ ಅಥವಾ ಖಾನಾವಳಿಯಲ್ಲಿ ಊಟವನ್ನು ಕಟ್ಟಿಸಿಕೊಂಡು ಬಂದಾನು,' ಎಂಬುದು ಮನದ ಪರದೆಯ ಮೇಲೆ ಸುಳಿದು ಹೋಯಿತು. `ನೋಡೋಣ, ಇಷ್ಟರಲ್ಲೇ ಈ ಹಾಳು ತಲೆನೋವು ತೊಲಗಿದರೂ ತೊಲಗಿ ಹೋಗಬಹುದು,' ಎಂದು ಶೈಲಜಾ ತನ್ನೊಳಗೆ ಅಂದುಕೊಂಡಳು.





