ಮಾಧವಿ ಅತಿಯಾಗಿ ಬಯಸಿ ಪಡೆದ ಸ್ವಂತ ಸಂತಾನ, ಎಲ್ಲಾ ವಿಧದಲ್ಲೂ ತಿರುಗಿಬಿದ್ದಾಗ ಇವಳು ಮಮತೆಯಿಂದ ಸಾಕಿದ್ದ ಮಗಳು, ವೈದ್ಧಾಪ್ಯದಲ್ಲಿ ಕೈ ಹಿಡಿದಳೇ......?
ನಗರದ ಪ್ರತಿಷ್ಠಿತ ಚಿನ್ನ ಬೆಳ್ಳಿ ವ್ಯಾಪಾರಿ, ಕೇಶವ ಮೂರ್ತಿ ತನ್ನ ಸಂಬಂಧಿಕರ ಪೈಕಿ ಮಾಧವಿಯ ಕೈ ಹಿಡಿದು ಒಂದು ದಶಕ ಉರುಳಿದರೂ ಅವರಿಗೆ ಸಂತಾನ ಭಾಗ್ಯ ಪ್ರಾಪ್ತಿ ಆಗಿರಲಿಲ್ಲ. ಹಾಗಂತ ಅವರೇನೂ ಪರಸ್ಪರರನ್ನು ದೂಷಿಸುತ್ತಾ ಕಾಲ ಕಳೆಯಲಿಲ್ಲ. ಬದಲಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಪತಿ ಪತ್ನಿಯರು ಗಹನವಾಗಿ ಯೋಚಿಸಿದ ನಂತರ, ಮಾಧವಿ ನೀಡಿದ ಸಲಹೆಯಂತೆ ಅವರು ಒಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಳ್ಳಬೇಕೆಂಬ ನಿರ್ಧಾರಕ್ಕೆ ಬಂದಿದ್ದರು.
ಇವರು ಕೈಕೊಂಡ ನಿರ್ಧಾರಕ್ಕೆ ಹತ್ತಿರದ ಬಂಧು ಬಳಗದವರಿಂದ ಅಪಸ್ವರ ಕೇಳಿ ಬಂದಿತ್ತಾದರೂ ಅದಕ್ಕೆ ಸೊಪ್ಪು ಹಾಕದೇ ತಾವು ನಿಶ್ಚಯಿಸಿದಂತೆ ಮಾಧವಿಯ ಕಡೆಯ ದೂರದ ಸಂಬಂಧಿಗಳ ಪೈಕಿ ಅನಾಥೆಯಾದ ಪರಿಮಳಾಳನ್ನು ಕಾನೂನಿನನ್ವಯ ಎಲ್ಲ ವಿಧಿ ವಿಧಾನಗಳನ್ನು ಕ್ರಮವಾಗಿ ಅನುಸರಿಸಿ, ಒಂದು ಶುಭ ಮುಹೂರ್ತದಲ್ಲಿ ಅವಳನ್ನು ದತ್ತು ಪಡೆದು ಮನೆಗೆ ಕರೆದು ತಂದಿದ್ದರು. ಮೂರು ವರ್ಷದ ಪುಟ್ಟ ಪರಿಮಳಾ ನೋಡಲು ಎಷ್ಟು ಮುದ್ದಾಗಿದ್ದಳೋ ಅಷ್ಟೇ ಚೂಟಿ ಕೂಡ ಆಗಿದ್ದಳು.
ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದು ಬಂದ ಬಾಲೆ, ಅತ್ಯಾಧುನಿಕ ಮಾಧವಿಯ ಮನೆಗೆ ಕಾಲಿಟ್ಟಾಗ ಎಲ್ಲವನ್ನೂ ಬೆರಗು ಕಣ್ಣುಗಳಿಂದ ನೋಡುತ್ತಾ ಆರಂಭದಲ್ಲಿ ಆತಂಕದಲ್ಲಿದ್ದಳು. ಬರಬರುತ್ತಾ ಮಾಧವಿ ತಾಯಿಯ ಪ್ರೀತಿ, ಮಮಕಾರ ಧಾರೆ ಎರೆಯಲು ಆರಂಭಿಸಿದ ಬಳಿಕ ಮುಂದಿನ ಆರೇಳು ತಿಂಗಳುಗಳಲ್ಲಿ ಹೊಸ ಪರಿಸರಕ್ಕೆ ಹೊಂದಿಕೊಂಡು, ಮೂರು ಹೊತ್ತು ಮಾಧವಿಯ ಹಿಂದೆ, ``ಅಮ್ಮಾ.... ಅಮ್ಮಾ.....'' ಎಂದು ಓಡಾಡತೊಡಗಿದಾಗ ಮಾಧವಿ ಅವ್ಯಕ್ತ ಆನಂದ ಅನುಭವಿಸಲು ಆರಂಭಿಸಿದಳು. ಹಾಗೆಯೇ ಮಾಧವಿ ಹೇಳಿ ಕೊಟ್ಟಂತೆ ಆಕೆಯ ಪತಿಯನ್ನು `ಅಪ್ಪಾ.... ಅಪ್ಪಾ....' ಎಂದು ಕರೆಯಲು ರೂಢಿಸಿಕೊಂಡಳು.
ಪರಿಮಳಾ, ಮಾಧವಿ ದಂಪತಿ ಮನೆಗೆ ಬಂದು ಒಂದು ವರ್ಷ ಕಳೆದಿತ್ತು ಅಷ್ಟೆ. ಆಗ ವಿಚಿತ್ರವೋ, ಪವಾಡವೋ ಅಥವಾ ವಿಧಿಯ ಆಟವೋ ಎಂಬಂತೆ ಮಾಧವಿ ಚೊಚ್ಚಲ ಮಗುವಿಗೆ ಗರ್ಭಿಣಿಯಾಗಿದ್ದಳು. ತಾನು ತಾಯಿ ಆಗುತ್ತಿರುವ ವಿಚಾರ ಅವಳಲ್ಲಿನ ಸಂಭ್ರಮ ಇನ್ನೂ ಹೆಚ್ಚಾಗಿಸಿತ್ತು. ಆಗಾಗ ಆಕೆ ಪರಿಮಳಾಳಿಗೆ, ``ಪುಟ್ಟೀ.... ನಿನ್ನ ಜೊತೆ ಆಡೋಕೆ ಪುಟ್ಟ ಬರುತ್ತೆ,'' ಎಂದು ಹೇಳುತ್ತಿದ್ದಳು. ಪುಟ್ಟ ಪರಿಮಳಾ ಅದನ್ನು ಕೇಳಿ ಖುಷಿಯಿಂದ, ಆಶ್ಚರ್ಯದಿಂದ ನಲಿದಾಡಿ ತನ್ನ ಸಂತೋಷ ವ್ಯಕ್ತಪಡಿಸುತ್ತಿದ್ದಳು.
ದಿನಗಳು ಉರುಳಿದ ಬಳಿಕ ಮಾಧವಿ ಒಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದಳು. ಅವಳ ಮನೆಯವರೆಲ್ಲರೂ ಸಂತಸದಲ್ಲಿ ಮಿಂದೆದ್ದಿದ್ದರು. ಪರಿಮಳಾಳಂತೂ ಶಾಲೆಯ ಅವಧಿ ಹೊರತುಪಡಿಸಿ ಉಳಿದೆಲ್ಲ ವೇಳೆಯನ್ನು ಪುಟ್ಟ ಪಾಪುವಿನೊಂದಿಗೆ ಆಟ ಆಡುತ್ತಾ ಕಾಲ ಕಳೆಯುತ್ತಿದ್ದಳು. ಆ ಮಗುವಿಗೆ ಒಂದು ಶುಭ ಮುಹೂರ್ತದಲ್ಲಿ ನಿಶಾಂತ್ ಎಂದು ನಾಮಕರಣ ಮಾಡಿದರು.
ಮಾಧವಿ ಮತ್ತು ಕೇಶವಮೂರ್ತಿಯವರ ಬದುಕಿನ ಹಡುಗು ಈ ರೀತಿ ನಿಶ್ಚಿಂತೆಯಿಂದ ಸಾಗುತ್ತಿದ್ದಾಗ, ಅನಿರೀಕ್ಷಿತವಾಗಿ ಬಿರುಗಾಳಿಗೆ ಸಿಲುಕಿ, ಒಂದು ದೊಡ್ಡ ಬಂಡೆಗೆ ಅಪ್ಪಳಿಸಿದಂತೆ ಒಂದು ದಿನ ಸಂಜೆ ಕೇಶವಮೂರ್ತಿ ಅಂಗಡಿಯಿಂದ ಮನೆಗೆ ಬಂದವನು ತೀವ್ರ ಎದೆನೋವು ಎಂದು ನರಳಲು ಆರಂಭಿಸಿದ. ತಡಮಾಡದೇ ಮಾಧವಿ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ, ನುರಿತ ವೈದ್ಯರಿಂದ ಚಿಕಿತ್ಸೆ ಕೊಡಿಸಿದರೂ ಆತ ಬದುಕಿ ಉಳಿಯಲಿಲ್ಲ. ಪತಿಯನ್ನು ಕಳೆದುಕೊಂಡ ಮಾಧವಿಯ ಜಂಘಾಬಲವೇ ಉಡುಗಿ ಹೋದಂತಾಗಿತ್ತು.