ಅನಾಥ ಪರಮೇಶಿ ಹೇಗೋ ಆ ಊರಿಗೆ ಬಂದು ಸೇರಿಕೊಂಡು ಆ ಊರಿನವನೇ ಆದ. ಊರ ಗೌಡರ ಅಕ್ಕರೆಯಿಂದ ಅವರ ಮನೆ ಮಗನಾದ. ಬೆಳೆದ ಮಗನಿಗೆ ಮದುವೆ ಮಾಡಲು ಗೌಡರು ಮುಂದಾದರು. ಮುಂದೆ ಪರಮೇಶಿ ಸಂಸಾರ ನಡೆದದ್ದು ಹೇಗೆ……?
ಸುರಸುಂದರ, ಸುರಸುಂದರಿ ಅನ್ನುವ ಹಾಗೆ ಸುರಪುರ ಸುಂದರವಾದ ಊರು. ಸುತ್ತಮುತ್ತ ಬೆಟ್ಟಗುಡ್ಡಗಳಿಂದ, ಹಳ್ಳಕೊಳ್ಳಗಳಿಂದ ಕಂಗೊಳಿಸುತ್ತಿತ್ತು. ಅಲ್ಲಿ ಎಲ್ಲ ಇದ್ದು ಇಲ್ಲಿನ ಜನ ಯಾವುದಕ್ಕೂ ಅವಲಂಬಿತರಾಗದೆ ಸ್ವಾವಲಂಬಿ ಬದುಕನ್ನು ಸಾಗಿಸುತ್ತಿದ್ದರು. ಸಮತಟ್ಟಾದ ಜಾಗದಲ್ಲಿ ಗೌಡರ ಮನೆಯಲ್ಲದೆ, ಕಷ್ಟ ಸುಖಕ್ಕೆ ಇರಲಿ ಎಂದು ತಂದಿಟ್ಟುಕೊಂಡಿದ್ದ. ಕುಲಸ್ತರ, ನೆಂಟರಿಷ್ಟರ ಮೂರ್ನಾಲ್ಕು ಮನೆಗಳಿದ್ದವು. ಆ ಊರಿನ ಉಳಿದ ಮನೆಗಳು ಅವರವರ ತೋಟ, ಗದ್ದೆ, ಜಮೀನಿನಲ್ಲಿದ್ದವು.
ಗದ್ದೆ ಬಯಲಿನಲ್ಲಿ ಕಲ್ಲು ಕಟ್ಟಡದಿಂದ ನಿರ್ಮಿಸಿದ ಪುಟ್ಟ ಕಲ್ಯಾಣಿಯು ಕುಡಿಯಲು ನೀರು ಒದಗಿಸುತ್ತಿತ್ತು. ಮಳೆ ಇಲ್ಲದೆ, ಬರಗಾಲ ಬಂದಾಗಲೂ ಎಲ್ಲೆಲ್ಲಿಂದೋ ಬಂದು ಜನ ಆ ಕೊಳದಿಂದ ನೀರನ್ನು ಹೊತ್ತೊಯ್ಯುತ್ತಿದ್ದರು. ಗೌಡರ ಜಮೀನಿನಲ್ಲಿಯೇ ಇದ್ದ ಒಂದು ಕೆರೆ ಅಲ್ಲದೆ, ಆ ಕಡೆ ಕಾಡಿನಂಚಿನಲ್ಲಿ ಹುಳ್ಳಿಕೆರೆ, ಈ ಕಡೆಚೋಕ್ರನ ಕೆರೆ, ಒಂದೆರಡು ಮೈಲಿ ನಡೆದರೆ ಕಟ್ಟೆಹೊಳೆ, ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದ ಈ ಹೊಳೆ ಬೇಸಿಗೆಯಲ್ಲಿ ಗೂರಲು ಮನುಷ್ಯರು ಉಸಿರಾಡುವಂತೆ ನಿಧಾನವಾಗಿ ಹರಿಯುತ್ತಿತ್ತು. ಬಡವನು ಕೂಡ ಬದುಕು ಸಾಗಿಸಬಹುದಾದ ಊರು ಇದಾಗಿತ್ತು.
ಈ ಕಥೆಯ ನಾಯಕ ಪರಮೇಶಿ, ಪರಮೇಶ ಎಂಬುದು ಅವನ ಹೆಸರು. ಅದನ್ನು ಯಾರಿಟ್ಟರೊ ಅವನಿಗೂ ಗೊತ್ತಿಲ್ಲ. ತಾಯಿ ತಂದೆಯಿಲ್ಲದ ತಬ್ಬಲಿ ಹುಡುಗನಾದ ಅವನನ್ನು ಕೆಲವರು ಪರಮ ಎನ್ನುತ್ತಿದ್ದರು. ಇನ್ನೂ ಕೆಲವರು ಪರಮಿ ಎನ್ನುತ್ತಿದ್ದರು. ಕೆಲಸವಾಗಬೇಕಾದರೆ ಪರಮು ಎನ್ನುತ್ತಿದ್ದವರೇ ಕೋಪ ಬಂದಾಗ ಪರಮೇಶಿ ಎನ್ನುತ್ತಿದ್ದರು. ಅವನು ಯಾವುದಕ್ಕೂ ತಲೆ ಕೆಡಿಸಿಕೊಂಡವನಲ್ಲ.
ಇಕ್ಕಿದರೆ ತಾಯಿ, ಅಪ್ಪಿದರೆ ತಂದೆ ಎಂದು ಎಲ್ಲರೊಳಗೊಂದಾಗಿ ಜೀವನ ಸಾಗಿಸುತ್ತಿದ್ದ. ಇವನು ಅರಸೀಕೆರೆಯ ಕಡೆಯ ಒಂದು ಊರಿನವನು. ಗದ್ದೆ ಕೊಯ್ಲಿನ ಸಂದರ್ಭದಲ್ಲಿ ಆ ಹಳ್ಳಿಯ ಜನರ ಜೊತೆ ಇವನು ಬಂದ. ಆಗ ಇವನಿಗೆ ಹದಿನೈದೊ ಹದಿನಾರೋ ವರ್ಷಗಳಿರಬಹುದು. ಅಲ್ಲಿ ಇವನಿಗೆ ಸ್ವಂತದ್ದೆನ್ನುವುದು ಯಾವುದೂ ಇರಲಿಲ್ಲ. ಯಾರ ಮನೆಯಲ್ಲಾದರೂ ಏನಾದರೂ ಕೆಲಸ ಹೇಳಿದರೆ ಮಾಡುತ್ತಿದ್ದ. ಅವರು ಊಟಕ್ಕಿಟ್ಟರೆ ಊಟ ಮಾಡುತ್ತಿದ್ದ. ಎಲ್ಲೋ ಒಂದು ಕಡೆ ಜಾಗ ಸಿಕ್ಕಿದಲ್ಲಿ ಬಿದ್ದುಕೊಳ್ಳುತ್ತಿದ್ದ.
ಗದ್ದೆ ಕೊಯ್ಲು ಮುಗಿಸಿ ಊರಿಗೆ ಹೊರಟಾಗ ಗೌಡರು, “ನೀನು ಇಲ್ಲಿಯೇ ಇದ್ದುಬಿಡು, ಅಲ್ಲಿ ಹೋಗಿ ಏನು ಮಾಡ್ತೀಯ? ಇಲ್ಲಿದ್ದರೆ ನಮ್ಮ ಮಕ್ಕಳ ಹಾಗೆ ನಿನ್ನನ್ನು ಚೆನ್ನಾಗಿ ನೋಡಿಕೊಳ್ತೀವಿ,” ಎಂದರು. ಅವನನ್ನು ಕರೆತಂದಿದ್ದ ಹಿರಿಯರು ಕೂಡ ಅದನ್ನೇ ಹೇಳಿದರು. ಗೌಡರಿಗೆ ಶಾಶ್ವತವಾಗಿ ಒಂದು ಆಳು ಸಿಕ್ಕಿದಂತಾಗುತ್ತದೆ ಎಂಬ ಲೆಕ್ಕಾಚಾರವಾದರೆ, ಪರಮೇಶಿಗೆ ತನ್ನ ಪರಿಸ್ಥಿತಿ ಒಪ್ಪಿಕೊಳ್ಳುವಂತೆ ಮಾಡಿತು. ಅವನು ಊರಿನಲ್ಲಿದ್ದಾಗ ಎಷ್ಟೋ ದಿನ ಊಟಕ್ಕೆ ಪರದಾಡಬೇಕಾಗುತ್ತಿತ್ತು.
ಒಂದೊಂದು ದಿನ ನೀರು ಕುಡಿದು ಮಲಗುತ್ತಿದ್ದುದು ನೆನಪಾಯಿತು. ಇಲ್ಲಿ ಬಂದಾಗಿನಿಂದ ಮೂರು ಹೊತ್ತು ಊಟ ತಿಂಡಿ ಸಿಗುತ್ತಿತ್ತಲ್ಲದೆ ಮನೆಯವರೆಲ್ಲ ಪರಮೇಶ, ಪರಮೇಶ…. ಎಂದು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಈ ಎಲ್ಲಾ ಕಾರಣಗಳಿಂದ ಅವನು ಇಲ್ಲಿಯೇ ಉಳಿಯಲು ತೀರ್ಮಾನಿಸಿದ.
ಏಳೆಂಟು ವರ್ಷ ಗೌಡರ ಮನೆಯಲ್ಲಿಯೇ ಇದ್ದು, ಅವರ ಮನೆಯವರಲ್ಲಿ ಒಬ್ಬನಾದ. ಮನೆ ಮಗನಂತಾದ. ಆಳುಗಳ ಜೊತೆಯಲ್ಲಿ ತೋಟದ ಕೆಲಸ, ಗದ್ದೆ ಕೆಲಸ ಮಾಡುತ್ತಿದ್ದ. ಗೌಡರನ್ನು ಅಣ್ಣಾ…. ಎಂದು ಅವರ ಹೆಂಡತಿಯನ್ನು ಅಕ್ಕಾ…. ಎಂದು ಕರೆಯುತ್ತಿದ್ದ. ಅಣ್ಣನ ಜೊತೆ ಬೇಟೆಗೆ ಹೋಗುತ್ತಿದ್ದ. ಮೀನು ಹಿಡಿಯಲು `ಕೂಳಿ’ ಹಿಡಿದುಕೊಂಡು ಹೋಗುತ್ತಿದ್ದ. ಅಕ್ಕಿ ಮಿಲ್ ಮಾಡಿಸಲು ಗಾಡಿ ಹೊಡೆದುಕೊಂಡು ಹೋಗುತ್ತಿದ್ದ. ಸೌದೆ ಕಡಿಯುವುದು, ಗೊಬ್ಬರ ಹಾಕುವುದು, ಕೆರೆಯಿಂದ ಗೋಡನ್ನು ಗಾಡಿಯಲ್ಲಿ ಹೇರಿಕೊಂಡು ಬಂದು ಗದ್ದೆಗೆ ಸುರಿಯುವುದು, ಗದ್ದೆ ಉಳುವುದು, ಕೊಯ್ಯುವುದು, ಒಕ್ಕಣೆ ಮಾಡುವುದು ಮುಂತಾದ ಕೆಲಸಗಳಲ್ಲಿ ಗೌಡರಿಗೆ ಬಲಗೈ ಬಂಟನಂತಾಗಿಬಿಟ್ಟ. ಅವನು ಹುಟ್ಟಿ ಬೆಳೆದ ಊರನ್ನು ಮರೆತು ಇದೇ ತನ್ನ ಊರು, ಇದೇ ತನ್ನ ಮನೆ ಎನ್ನುವಷ್ಟು ಹೊಂದಿಕೊಂಡುಬಿಟ್ಟ.
ಅವನಿಗೆ ಮೂರು ಹೊತ್ತು ಊಟ ತಿಂಡಿ ಸರಿಯಾಗಿ ಸಿಕ್ಕಿದರೇನೇ ಸಾಕಾಗಿತ್ತು. ಕೊಟ್ಟಿಗೆ ತುಂಬಾ ದನಕರುಗಳಿದ್ದವು. ಮನೆ ಯಾವಾಗಲೂ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಅವನ ಹಸಿವನ್ನು ಹಿಂಗಿಸಿದ್ದವು. ಎಲ್ಲರ ಜೊತೆ ಅವನು ಹಂತಿಯಲ್ಲಿ ಕುಳಿತು ಊಟ ಮಾಡುತ್ತಿದ್ದ. ಹಿಂಡು ಹಿಂಡು ಕೋಳಿಗಳಿದ್ದ ಗೌಡರ ಮನೆಯಲ್ಲಿ ನೆಂಟರಿಗೇನೂ ಬರವಿರಲಿಲ್ಲ. ನೆಂಟರು ಬಂದಾಗೆಲ್ಲಾ ಎರಡೊ ಮೂರೊ ದೊಡ್ಡ ದೊಡ್ಡ ಕೋಳಿಗಳನ್ನು ಹಿಡಿದು ಕೊಯ್ದು ರಿಪೇರಿ ಮಾಡುವ ಕೆಲಸ ಇವನದೆ. ಇಲ್ಲದೆ ಪ್ರತಿದಿನ ಗೌಡರ ಜೊತೆಯಲ್ಲಿ ಬೇಟೆಗೆ ಹೋಗುತ್ತಿದ್ದ. ಅವರು ಬರಿಗೈಲಿ ಬರುತ್ತಿದ್ದುದೇ ಅಪರೂಪ. ಇವೆಲ್ಲ ಅವನ ಸಂತೋಷಕ್ಕೆ ಕಾರಣವಾಗಿದ್ದವು.
ಹೀಗೆ ಏಳೆಂಟು ವರ್ಷ ದುಡಿದ ಪರಮೇಶನಿಗೆ ಒಂದು ಮದುವೆ ಮಾಡಬೇಕೆಂಬ ಆಲೋಚನೆ ಗೌಡರ ಮನಸ್ಸಿಗೆ ಬಂತು. ಅವನು ಕೂಡ ಎಲ್ಲರಂತೆ ಸಂಸಾರಸ್ಥನಾಗಿ ಸುಖವಾಗಿರಲಿ ಎಂಬುದು ಒಂದು ಕಡೆಯಾದರೆ, ಕೆಲಸಕ್ಕೆ ಇನ್ನೊಂದು ಜನ ಸಿಕ್ಕಿದಂತಾಗುತ್ತದೆ ಎಂಬ ಲೆಕ್ಕಾಚಾರ. ಊರೂರು ಸುತ್ತಿ ಗೌಡರ ಮನೆಯಲ್ಲಿ ಬಂದು ಉಳಿದುಕೊಳ್ಳುತ್ತಿದ್ದ ದಾಸಯ್ಯನ ಬಳಿ ಈ ವಿಷಯ ಪ್ರಸ್ತಾಪಿಸಿದರು.
`ಮಾದನೂರಿನಲ್ಲಿ ಒಂದು ಹುಡುಗಿ ಇದೆ. ಅದಕ್ಕೆ ತಾಯಿ ತಂದೆ ಇಲ್ಲ. ಅದರ ಅಜ್ಜಿಯೇ ಸಾಕಿಕೊಂಡಿದೆ. ಒಳ್ಳೆ ಹುಡುಗಿ, ಗುಣವಂತೆ ಬಂಗ ಬಡತನಕ್ಕೆ ಹೊಂದಿಕೊಳ್ಳುತ್ತೆ. ಮುಂದಿನ ಸಾರಿ ಬಂದಾಗ ವಿಚಾರಿಸಿಕೊಂಡು ಬರ್ತೀನಿ,” ಎಂದ ದಾಸಯ್ಯನಿಗೆ, “ಆದಷ್ಟು ಬೇಗ ಆಗಲಿ….” ಎಂದರು ಗೌಡರು.
ಯಾವಾಗ ಈ ಊರಿಗೆ ಬಂದರೂ ಊಟ ತಿಂಡಿ ಅಲ್ಲದೆ ಉಳಿಯಲು ಜಾಗ ಕೊಟ್ಟು ನೆಂಟರಂತೆ ನೋಡಿಕೊಳ್ಳುತ್ತಿದ್ದ ಈ ಮನೆಗೆ ನನ್ನಿಂದ ಒಂದು ಸಣ್ಣ ಸಹಾಯವಾಗಲಿ ಎಂದು ಯೋಚಿಸಿದ ದಾಸಯ್ಯ, ಒಂದು ವಾರದೊಳಗೆ ವಿಚಾರಿಸಿಕೊಂಡು ಬಂದು ತಿಳಿಸಿದ.
“ನಿಮ್ಮ ವಿಚಾರವೆಲ್ಲಾ ಹೇಳಿ, ಹುಡುಗ ಗುಣವಂತ, ಯೋಗ್ಯ, ಸಂಭಾವಿತ, ನೋಡಲು ಲಕ್ಷಣವಾಗಿದ್ದಾನೆ,” ಎಂದೆ.
“ಆಗಲಿ ದೇವರಿಚ್ಛೆ ಹೇಗಿದೆಯೋ ನೀವು ಹೇಳಿದ ಮೇಲೆ ಇನ್ನೇನು ಬಂದು ನೋಡಿಕೊಂಡು ಹೋಗಲಿ. ನನಗೂ ವಯಸ್ಸಾಯ್ತು, ಅವಳಿಗೆ ಒಂದು ಮದುವೆ ಅಂತ ಮಾಡಿ ನೆಲೆ ಕಾಣಿಸಿದ್ರೆ ನಾನು ನೆಮ್ಮದಿಯಿಂದ ಕಣ್ಮುಚ್ಚಬಹುದು,” ಎಂದು ಅಜ್ಜಿ ಹೇಳಿದರೆಂದು ದಾಸಯ್ಯ ಹೇಳಿದಾಗ ಗೌಡರು, “ಆಗಲಿ ಒಳ್ಳೆಯ ಕೆಲಸಕ್ಕೆ ತಡ ಮಾಡುವುದು ಬೇಡ. ನೀವು ಇಂದು ಇಲ್ಲಿಯೇ ಉಳಿಯಿರಿ. ನಾಳೆ ನಾನು, ನೀವು ಪರಮೇಶ ಮೂವರು ಹೋಗಿ ನೋಡಿಕೊಂಡು, ಮಾತಾಡಿಕೊಂಡು ಬರೋಣ,” ಎಂದರು.
ಗಂಡು ಬರುತ್ತದೆಂಬ ಕಾರಣದಿಂದ ಮನೆ ಮುಂದೆ ಸಾರಿಸಿ ರಂಗೋಲಿ ಬಿಡಿಸಿ, ಪಾತ್ರೆ ಪಗಡವನ್ನೆಲ್ಲಾ ಚೆನ್ನಾಗಿ ಬೆಳಗಿಸಿ, ಹುಡುಗಿಗೆ ಸ್ನಾನ ಮಾಡಿಸಿ, ಮುಡಿಯಲು ಹೂ ಕೊಯ್ದು ಮಾಲೆ ಕಟ್ಟಿ ಅಜ್ಜಿ ಏನೇನೋ ತಯಾರಿಗಳನ್ನು ಮಾಡಿಕೊಂಡು ಕಾಯುತ್ತಿದ್ದರು. ಮನೆ ಮುಂದೆ ಗಾಡಿ ಬಂದು ನಿಂತಾಗ ಹೊರಬಂದ ಅಜ್ಜಿ `ಒಳಗೆ ಬನ್ನಿ,’ ಎಂದು ಚಾಪೆ ಹಾಕಿ ಕೂರಲು ಹೇಳಿತು.
ಗೌಡರು, ದಾಸಯ್ಯ ಇಳಿದ ನಂತರ ಪರಮೇಶಿ ಎತ್ತಿನ ಕೊಳ್ಳು ಬಿಚ್ಚಿ ಎತ್ತಿಗೆ ಗಾಡಿಯಲ್ಲಿದ್ದ ಹುಲ್ಲು ಹಾಕಿ ಬಂದು ಗೌಡರ ಬಳಿ ಕುಳಿತ. ದಾಸಯ್ಯನನ್ನು ಎಷ್ಟೋ ವರ್ಷಗಳಿಂದ ನೋಡಿದ್ದ ಅಜ್ಜಿ ಗೌಡರನ್ನು, ಹುಡುಗನನ್ನು ನೋಡಿ ಸಂತೋಷದಿಂದ ಮದುವೆಗೆ ಒಪ್ಪಿದಳು. ಆದರೆ `ನಾನು ಬಡವಿ, ಮದುವೆ ಮಾಡಲು ನನ್ನ ಬಳಿ ಏನೂ ಇಲ್ಲ,’ ಎಂದಾಗ ಗೌಡರು, “ಅದರ ಬಗ್ಗೆ ನೀವು ಏನು ಯೋಚಿಸಬೇಡಿ ಅಮ್ಮ. ನಿಮ್ಮ ಹುಡುಗಿಯನ್ನು ನಮ್ಮ ಹುಡುಗನಿಗೆ ಕೊಡಲು ಒಪ್ಪಿದರೆ ನಮ್ಮೂರಿನಲ್ಲಿಯೇ ಮದುವೆ ಮಾಡೋಣ,” ಎಂದಾಗ, ಇಂತಹ ಸಂಬಂಧವನ್ನು ಬೇಡ ಎನ್ನಲು ಅಜ್ಜಿಗೆ ಯಾವ ಕಾರಣ ಇರಲಿಲ್ಲ.
ಪರಮೇಶ ಪಾರ್ವತಿಯನ್ನು ಒಪ್ಪಿದ ಮರುದಿನವೇ ಅಯ್ನೋರ ಹತ್ತಿರ ಹೋಗಿ, ಹೆಸರು ಬಲ ಕೇಳಿದರು. ಪಾರ್ವತಿ ಪರಮೇಶ್ವರ ಒಳ್ಳೆಯ ಜೋಡಿ, ಗಣ ಕೂಟ ಬಹಳ ಚೆನ್ನಾಗಿದೆ. ಆ ಶಿವ ಪಾರ್ವತಿ ಥರಾನೆ ಇವರೂ ಬಾಳ್ತಾರೆ ಎಂದರು ಅಯ್ನೋರು, “ಮುಂದಿನ ತಿಂಗಳು ಎರಡು ಲಗ್ನ ಚೆನ್ನಾಗಿವೆ,’ ಎಂದರು. ಲಗ್ನದ ದಿನ ಗೊತ್ತು ಮಾಡಿಕೊಂಡು ಬಂದು ಮನೆಯಲ್ಲಿ ಎಲ್ಲರಿಗೂ ತಿಳಿಸಿದರು. ಮದುವೆಗೆ ಏನೇನು ತಯಾರಿ ಮಾಡಿಕೊಳ್ಳಬೇಕೆಂದು ಮನೆಯವರೊಡನೆ ಚರ್ಚಿಸಿದರು. ಮದುವೆಯ ಚಟುವಟಿಕೆಗಳು ಆರಂಭವಾಗಿಯೇಬಿಟ್ಟವು. ಸೌದೆ ಕಡಿಯುವುದು, ಅಕ್ಕಿ ಮಿಲ್ ಮಾಡಿಸುವುದು, ಹಪ್ಪಳ, ಉಪ್ಪಿನಕಾಯಿ ತಯಾರಿಸುವುದು, ಅಕ್ಕಿ ಸೋಸಲು, ಹಪ್ಪಳ ಮಾಡಲು ಊರಿನ ನಾಲ್ಕಾರು ಹೆಂಗಳೆಯರು ಬಂದರು.
ಶಿವಪ್ಪಶೆಟ್ಟರ ಅಂಗಡಿಗೆ ಹೋಗಿ ಮದುವೆಗೆ ಬೇಕಾದ ಬಟ್ಟೆ ಖರೀದಿಸಿ ಅಲ್ಲಿಯೇ ಹೊಲಿಯಲು ಕೊಟ್ಟು ಬಂದರು. ಒಬ್ಬರು ಸೋಮವಾರ ಸಂತೆಗೆ ಹೋಗಿ ಹರಿಣೆ, ಗಡಿಗೆ ತಂದರೆ ಮತ್ತೊಬ್ಬರು ಕುಕ್ಕೆ ವೆಂಕಟೇಶನ ಬಳಿ ಹೋಗಿ ಧಾರೆ ಪೆಟ್ಟಿಗೆ ಹೆಣೆಸಿಕೊಂಡು ಬಂದರು. ತಾಳಿ, ಕಾಲುಂಗುರ ಎಲ್ಲವನ್ನೂ ತಂದಾಯಿತು. ಗೋಧಿ, ರಾಗಿ, ಭತ್ತ, ಹುರುಳಿ ಮುಂತಾದ ಧಾನ್ಯಗಳನ್ನು ಗೊಬ್ಬರದಲ್ಲಿ ಬೆರೆಸಿ ಜಾಗರ ಬೆಳೆಸಲು ನಡುಮನೆಯ ಗೋಡೆಯ ಒಂದು ಮೂಲೆಯಲ್ಲಿ ಸುರಿದರು. ಅರಿಶಿನ, ಕುಂಕುಮ ಹಾಗೂ ಅಕ್ಕಿಹಿಟ್ಟಿನಿಂದ ಹರಿಣೆ ಗಡಿಗೆಗಳ ಮೇಲೆ ಚಿತ್ರ ಬರೆದಿಟ್ಟರು. ಮದುವೆ ಶಾಸ್ತ್ರಗಳನ್ನೆಲ್ಲಾ ನಡೆಸಿಕೊಡುವುದು ಸೋಬಾನೆ ಸಣ್ಣಮ್ಮನ ಕೆಲಸವಾದರೆ, ಧಾರೆ ಊಟಕ್ಕೆ ಅಡುಗೆ ಮಾಡಲು ಗುಡಿಯ ಪೂಜೆ ಮಾಡಿಕೊಂಡಿದ್ದ ಮಹದೇಪ್ಪನವರಿಗೆ ವಹಿಸಲಾಯಿತು.
ದೂರದ ಊರಿನ ನೆಂಟರಿಗೆಲ್ಲಾ ಹೋಗಿ ಮದುವೆಗೆ ಕರೆದು ಬಂದಾಯಿತು. ಅದೇ ಊರಿನವರಿಗೂ ಕರೆಯಲಾಯಿತು. ಮದುವೆಗೆ ಮೂರು ದಿನ ಮುಂಚೆ ನೆಂಟರುಗಳೆಲ್ಲಾ ಬಂದಿಳಿದಾಗ ಮನೆ ಗದ್ದಲದ ಗೂಡಾಯಿತು. ಮನೆ ಮುಂದೆ ಚಪ್ಪರ ಹಾಕುವ ಗದ್ದಲ, ಮನೆಯೊಳಗೆ ಹೆಂಗಸರ ಕಲಕಲ, ಗೌಡರ ಮನೆಗೆ ಮದುವೆಯ ಕಳೆ ಬಂದಿತು. ಮಾವಿನ ಸೊಪ್ಪಿನ ಚಪ್ಪರ ಹಾಕಲಾಯಿತು. ಕಕ್ಕೆ ಹೂವಿನ ಗೊಂಚಲು, ವಾಟಂಗಿ ಹೂವಿನ ಗೊಂಚಲುಗಳ ಶೃಂಗಾರ, ಚಕ್ಕೋತದ ಅಲಂಕಾರದಿಂದ ಸುಂದರವಾದ ಚಪ್ಪರ ರೆಡಿಯಾಯಿತು.
ಹೆಂಗಳೆಯರೆಲ್ಲಾ ಸೇರಿ ಪರಮೇಶಿಗೆ ಹರಳೆಣ್ಣೆ ಬಟ್ಟಲಿಗೆ ಅರಿಶಿನ ಪುಡಿ ಹಾಕಿ ಕಲಸಿ, ಹಸೆಮಣೆ ಮೇಲೆ ಕೂರಿಸಿ ಎಣ್ಣೆ ಒತ್ತಿದರು. ಸೋಬಾನೆ ಸಣ್ಣಮ್ಮನ ಹಾಡುಗಳು ಅರಿಶಿನ ಶಾಸ್ತ್ರಕ್ಕೆ ಮತ್ತಷ್ಟು ರಂಗು ತಂದ. ನಂತರ ಪರಮೇಶಿಯನ್ನು ಸ್ನಾನಕ್ಕೆ ಕಳುಹಿಸಿ ಶಾಸ್ತ್ರ ಭತ್ತ ಕುಟ್ಟಲು ಹೆಂಗಳೆಯರೆಲ್ಲಾ ಸಿದ್ಧತೆ ಮಾಡಿಕೊಂಡರು. ಒರಳಿಗೆ ಭತ್ತ ಸುರಿದು, ಒನಕೆಗಳನ್ನು ತಂದು ನಿಲ್ಲಿಸಿ, ಕಂಕಣ ಕಟ್ಟಿ, ಎಲೆ, ಅಡಿಕೆ, ಅಕ್ಷತೆಗಳನ್ನು ಇಟ್ಟು ಪೂಜೆ ಮಾಡಿ ಭತ್ತ ಕುಟ್ಟಲು ಶುರು ಮಾಡಿದರು. ಶಾಸ್ತ್ರ ಮಾಡುವುದನ್ನು ಹೇಳಿಕೊಡುತ್ತಿದ್ದ ಸಣ್ಣಮ್ಮ ಸೋಬಾನೆ ಹಾಡನ್ನು ಹಾಡಲಾರಂಭಿಸಿದರು.
ಒಂದು ಒನಕೆಗೆ ಒಂದು ಕಂಕಣ ಕಟ್ಟಿ
ಸೋಬಾನ ಸೋಬಾನವೇ ಒಂದೂರ ಬಯಲ ಸಣ ಭತ್ತ ಸೋಬಾನ ಸೋಬಾನವೇ
ಒಂದೂರ ಬಯಲ ಸಣ ಭತ್ತ ಸಂಪಿಗೆ ತಾಳು ಸೋಬಾನ ಸೋಬಾನವೇ
ಎರಗ್ಯಾಲೆ ಮಗನ ಮರವಿಗೆ ಸೋಬಾನ ಸೋಬಾನವೇ
ಒಳಗೆ ಗೋಡೆಯ ಮೇಲೆ ಜಾಗರ ಬರೆದು, ನಡುಮನೆಯಲ್ಲಿ ಅಕ್ಕಿಯ ಹಸೆ ಬರೆದು, ಕೆಲವರು ಹಸೆ ಶಾಸ್ತ್ರಕ್ಕೆ ಸಿದ್ಧತೆ ನಡೆಸಿದರೆ, ಮತ್ತೆ ಕೆಲವರು ಅಡುಗೆ ತಯಾರಿಕೆಯಲ್ಲಿ ತೊಡಗಿದ್ದರು. ಮೈತೊಳೆದು ಹೊಸ ಬಟ್ಟೆ ಹಾಕಿ ಬಂದ ಪರಮೇಶಿಯನ್ನು ಮೊದಲು ಅಜ್ಜ ಅಜ್ಜಿಗೆ ನಮಸ್ಕಾರ ಮಾಡು, ಅಣ್ಣ ಅಕ್ಕನಿಗೆ ನಮಸ್ಕಾರ ಮಾಡು ಎಂದು ಸಣ್ಣಮ್ಮಕ್ಕ ಹೇಳಿದಾಗ ಎಲ್ಲರಿಗೂ ಪಾದ ಮುಟ್ಟಿ ಭಕ್ತಿಯಿಂದ ನಮಸ್ಕರಿಸಿ ಕೈ ತೊಳೆದು ಬಂದು, ಕೈ ಮುಗಿದು ಹಸೆಮಣೆ ಮೇಲೆ ಕುಳಿತ.
ಶಾಸ್ತ್ರ ಮಾಡುವವರಿಗೆ ಹೀಗೆ ಮಾಡಿ ಹಾಗೆ ಮಾಡಿ ಎಂದು ಹೇಳಿಕೊಡುತ್ತಲೇ ಸಣ್ಣಮ್ಮ ಹಸೆಯ ಹಾಡನ್ನು ಹಾಡಿದರು.
ಹಸೆಗೇಳೋ ಇಂದಿರನೇ ಹಸೆಗೇಳೋ ಚಂದಿರನೇ
ಹಸೆಗೇಳೋ ಗಂಭಿ/ಗರುಡನೇ ಹಸೆಗೇಳೋ ಗಂಭೀ ಗರುಡ ಪಾಲಿಕರ ಮಗನೇ ಎದ್ದು ಬಾರಸೆಯ ಜಗುಲಿಗೆ,
ಹಸೆಗೆದ್ದು ಬರುವಾಗ ಬಸಾನ ನೆನೆಕಂದ ಬಸವಾ ನಿಮ್ ಪಾದ ಗತಿ ಎಂದು ಬಸಾ ನಿಮ್ ಪಾದ ಗತಿ ಎಂದು/ಕಂದಯ್ಯ ಎದ್ದು ಬಾರಸೆಯ ಜಗುಲಿಗೆ ಹಸೆಮಣೆ ಏರಿದ ಪರಮೇಶಿಗೆ ಹೆಂಗಳೆಯರೆಲ್ಲ ಕಳಸ ಬೆಳಗಿ, ಅಕ್ಕಿ ಇಟ್ಟು, ಆರತಿ ಬೆಳಗಿ ಶಾಸ್ತ್ರ ಮಾಡಿದರು. ಮುಂಗೈಗೆ ಕಂಕಣ ಕಟ್ಟಿದರು. ಹಸೆಯಿಂದ ಏಳಿಸುವಾಗ ಅಕ್ಷತೆ ಹಾಕಲು ಸಣ್ಣಮ್ಮ ಮತ್ತೊಂದು ಹಾಡು ಹಾಡಿದರು.
ಒಂದಕ್ಕಿ ನಾವಿಟ್ಟು ಒಂದಕ್ಕಿ ನೀವಿಟ್ಟು ಗಂಧ ಕಸ್ತೂರಿ ಗಮನಾಗಲೆಂದು
ಎರಡಕ್ಕಿ ನಾವಿಟ್ಟು ಎರಡಕ್ಕಿ ನೀವಿಟ್ಟು ಎರಡೂರಿಗೆಲ್ಲಾ ಹೆಸರಾಗಲೆಂದು
ಮೂರಕ್ಕಿ ನಾವಿಟ್ಟು ಮೂರಕ್ಕಿ ನೀವಿಟ್ಟು ಮುತ್ತಿನ ಪಲ್ಲಕ್ಕಿ ನಿನಗಿರಲೆಂದು
ನಾಕಕ್ಕಿ ನಾವಿಟ್ಟು ನಾಕಕ್ಕಿ ನೀವಿಟ್ಟು ನಂದೀ ಈಶ್ವರಗೊಂದು ಹೆಸರಾಗಲೆಂದು
ತಕ್ಕೊಳಿರಕ್ಕಿಗಳಾ ಸಭೆಯೆಲ್ಲಾ ಇಕ್ಕಿರೆ ಸಾಸಿವೇಯ ಹಸೆ ಮುಗಿದ ನಂತರ ಎಲ್ಲರು ಊಟ ಮಾಡಿ ಬೆಳಗ್ಗೆ ಬೇಗ ಏಳಬೇಕೆಂದು ಮಲಗಿಕೊಂಡರು ವಯಸ್ಸಾದರು ಮಾತನಾಡುತ್ತಾ ಮಲಗಿದರು.
ಬೆಳಗಾಗುತ್ತಿದ್ದಂತೆ ಎಲ್ಲರೂ ಎದ್ದು ಸದ್ದು ಗದ್ದಲದೊಂದಿಗೆ ನಿತ್ಯ ಕರ್ಮಗಳನ್ನು ಮುಗಿಸಿ ಸ್ನಾನಾದಿಗಳನ್ನು ಮಾಡಿಕೊಂಡು ಅಲಂಕರಿಸಿಕೊಳ್ಳಲು ಆರಂಭಿಸಿದರು ಜಡೆ ಹೆಣೆದುಕೊಂಡು ಮನೆಯಲ್ಲಿಯೇ ಕೊಯ್ದು ಕಟ್ಟಿದ ಕಾಕಡ ಕನಕಾಂಬರ ಮಲ್ಲಿಗೆಯ ಹೂಗಳನ್ನು ಎಲ್ಲರೂ ಮುಡಿದುಕೊಂಡರು. `ಅಕ್ಕ ಸೆರಗಿಗೆ ಪಿನ್ನು ಹಾಕಿಕೊಡೆ,’ `ನೀನು ಹೂ ಮುಡಿದುಕೊಳ್ಳೆ,’ ಎಂದು ಒಬ್ಬರಿಗೊಬ್ಬರು ಸಿಂಗರಿಸಿಕೊಂಡರು. ಹುಡುಗಿಗೆ ಗೌಡರ ಮನೆಯಲ್ಲಿ ತಂದಿದ್ದ ಕಲಾಪತ್ತಿನ ಸೀರೆ ಉಡಿಸಿ, ತಲೆತುಂಬಾ ಹೂ ಮುಡಿಸಿ, ಸೊಂಟಕ್ಕೆ ಅಜ್ಜಿಯ ಬೆಳ್ಳಿ ಡಾಬನ್ನು ತೊಡಿಸಿ ಸಿಂಗಾರ ಮಾಡಿದರೆ, ಪರಮೇಶಿಗೆ ತುಂಬುತೋಳಿನ ಬಿಳಿ ಶರಟು, ಕಚ್ಚೆ ಪಂಚೆ ಉಡಿಸಿ ಹೆಗಲಿಗೆ ಶಲ್ಯ ಹಾಕಿದರು.
ಆಗಲೇ ಬಂದಿದ್ದ ಅಯ್ನೋರು ಮುಹೂರ್ತಕ್ಕೆ ಏನೆಲ್ಲಾ ಬೇಕೆಂದು ಕೇಳಿ ಜೋಡಿಸಿಕೊಳ್ಳುತ್ತಿದ್ದರು, “ನೀವೆಲ್ಲಾ ಹೋಗಿ ತಿಂಡಿ ಮುಗಿಸಿ ಬಂದು ಬಿಡಿ ಧಾರೆಗೆ ಹೊತ್ತಾಗುತ್ತದೆ,” ಎಂದಿದ್ದರಿಂದ ಎಲ್ಲರೂ ತಿಂಡಿಗೆ ಧಾವಿಸಿದರು. ಬಿಸಿ ಬಿಸಿ ಅಕ್ಕಿ ತರಿಯ ಉಪ್ಪಿಟ್ಟು, ಕೇಸರಿಬಾತು ತಿಂದು, ಕಾಫಿ ಕುಡಿದು ಎಲ್ಲರೂ ಧಾರೆ ಹಟ್ಟಿಗೆ ಬಂದರು.
ಹೆಣ್ಣಿನ ಕೈಯಲ್ಲಿ ಬಾಳೆಹಣ್ಣು ತುಂಬಿದ ತಟ್ಟೆ ಕೊಟ್ಟು ಧಾರೆ ಹಟ್ಟಿಗೆ ಕರೆತರಲಾಯಿತು. ಅಲ್ಲಿದ್ದ ಇಬ್ಬರು ದೊಡ್ಡ ಟವೆಲ್ಲೊಂದನ್ನು ಆ ಕಡೆ ಒಬ್ಬರು, ಈ ಕಡೆ ಒಬ್ಬರು ಹಿಡಿದುಕೊಂಡ ನಂತರ ಮದುಮಗನನ್ನು ತಂದು ನಿಲ್ಲಿಸಲಾಯಿತು. ಅಂತರಪಟ ಸರಿದು ಜೀರಿಗೆ ಹಾಕುವಾಗ ಪಾರ್ವತಿ ತಲೆ ತಗ್ಗಿಸಿ ಸಂಕೋಚದಿಂದ ನಿಂತುಕೊಂಡರೆ, ಪರಮೇಶಿ ತಲೆ ಎತ್ತಿ ಹುಡುಗಿಗೆ ಎಟುಕದ ಹಾಗೆ ಆಟ ಆಡಿಸುತ್ತಿದ್ದ. ಪಕ್ಕದಲ್ಲಿಯೇ ನಿಂತಿದ್ದ ಸುಬ್ಬಕ್ಕ, ಪಾರ್ವತಿಯನ್ನು ಅನಾಮತ್ತಾಗಿ ಎತ್ತಿ ಜೀರಿಗೆ ಹಾಕಿಸಿದಾಗ ಎಲ್ಲರು ಗೊಳ್ಳೆಂದು ನಕ್ಕರು.
ಜೋಡಿ ತೆಂಗಿನಕಾಯಿಗಳ ಮೇಲೆ ಅರಿಶಿನ ದಾರದಲ್ಲಿ ಪೋಣಿಸಿದ ಮಾಂಗಲ್ಯವನ್ನಿಟ್ಟು ಎಲ್ಲರಿಂದಲೂ ಮುಟ್ಟಿಸಿ ತಂದು ಅಯ್ನೋರ ಕೈಗೆ ಕೊಡಲಾಯಿತು. ಗಟ್ಟಿ ಮೇಳದೊಂದಿಗೆ ಮಾಂಗಲ್ಯಧಾರಣೆ ಮಾಡಿಸಿದಾಗ ಚಪ್ಪರದಲ್ಲಿ ನೆರೆದಿದ್ದವರೆಲ್ಲ ಅಕ್ಷತೆ ಹಾಕಿ ಹರಸಿ ಹಾರೈಸಿದರು. ಮೆಟ್ಟಕ್ಕಿ ಚಿಬ್ಬಲಿನಲ್ಲಿ ಒಂದೊಂದು ಕಾಲಿರಿಸಿ ಮಂಟಪದ ಸುತ್ತಲು ಸುತ್ತಿಸಿ ಸಪ್ತಪದಿಯನ್ನು ತುಳಿಸಿಯೂ ಆಯ್ತು. ಸೂರ್ಯನ ಕಂಡ್ಯ, ಚಂದ್ರನ ಕಂಡ್ಯ ಎಂದು ಅಯ್ನೋರು ಕೇಳ್ತಾಯಿದ್ರೆ ಮದುಮಕ್ಕಳ ಧ್ವನಿಯೇ ಕೇಳದಷ್ಟು ನಕ್ಕು ನಲಿಯುತ್ತಾ ಉಳಿದರೆಲ್ಲ ಗಲಾಟೆ ಎಬ್ಬಿಸಿದರು.
ಮುಹೂರ್ತ ಮುಗಿಯುವ ವೇಳೆಗೆ ಮಧ್ಯಾಹ್ನದ ಊಟ ತಯಾರಾಗಿತ್ತು. ಕಣದಲ್ಲಿ ಹುಲ್ಲನ್ನು ಹಾಸಿ, ಮುತ್ತುಗದ ಎಲೆಯನ್ನು ಹಾಕಿದರು. ಆಲೂರು ಸಣ್ಣಕ್ಕಿ ಅನ್ನ, ಬೇಳೆ ಸಾರು, ಅಕ್ಕಿ ಪಾಯಸ ಅದಕ್ಕೆ ಬೂಂದಿಕಾಳು, ಕಡ್ಲೆಕಾಳು ಬದನೆಕಾಯಿ ಪಲ್ಯ, ಮನೆಯಲ್ಲೇ ತಯಾರಿಸಿದ ಹಪ್ಪಳ, ಜೀರಿಗೆ ಮಾವಿನಕಾಯಿ ಉಪ್ಪಿನಕಾಯಿ, ಶುಂಠಿ ಕರಿಬೇವು ಹಾಕಿದ ಮಜ್ಜಿಗೆ, ರುಚಿಯಾದ ಊಟವನ್ನು ಎಲ್ಲರೂ ಸವಿದರು. ಊಟದ ನಂತರ ಬಾಳೆಹಣ್ಣು, ಎಲೆ ಅಡಿಕೆ ನೀಡಲಾಯಿತು.
ಊಟದ ನಂತರ ಹೆಣ್ಣೊಪ್ಪಿಸುವ ಶಾಸ್ತ್ರ ಗಂಡಿನ ಕಡೆಗೆ ಕೆಲವರು ಹೆಣ್ಣಿನ ಕಡೆಗೆ ಕೆಲವರು ನಿಂತುಕೊಂಡರು ಗೌಡರು ಹೆಣ್ಣಿನ ಕಡೆ ಹೆಣ್ಣೊಪ್ಪಿಸಿಕೊಳ್ಳಲು ಹೆಗಲ ಮೇಲಿದ್ದ ಟವಲನ್ನೇ ತೆಗೆದು ತಲೆಗೆ ಸುತ್ತಿಕೊಂಡು ರೆಡಿಯಾದರು. ಹೆಣ್ಣಿನ ಕಡೆಗೆ ಇನ್ನೊಬ್ಬ ಹಿರಿಯರು ಬಂದರು. ಪಾರ್ವತಿಯ ಕೈ ಹಿಡಿದ ಹಿರಿಯರು, `ಇನ್ನು ಇವಳು ನಮ್ಮ ಮಗಳಲ್ಲ, ನಿಮ್ಮ ಮಗಳು. ಇವಳ ಸುಖ ದುಃಖ ನಿಮ್ಮದು. ನಮ್ಮ ಹುಡುಗಿಯನ್ನು ಚೆನ್ನಾಗಿ ನೋಡಿಕೊಳ್ಳಿ,’ ಎಂದು ಹುಡುಗಿಯ ಎರಡು ಕೈಯನ್ನು ಗೌಡರ ಕೈಯಲ್ಲಿಟ್ಟಾಗ ಹುಡುಗಿಯ ಅಜ್ಜಿ ಕಣ್ಣೊರೆಸಿಕೊಂಡಿತು.
ಇಷ್ಟು ದಿನ ಪರಮೇಶಿ ಗೌಡರ ಮನೇಲಿದ್ದ. ಅವರಲ್ಲೊಬ್ಬನಾಗಿದ್ದ. ಆದರೆ ಈಗ ಅವನು ಸಂಸಾರಂದಿಗನಾಗ್ತಾ ಇದ್ದಾನೆಂದು ಒಂದು ಒಪ್ಪಾರವನ್ನೇ ಹೊರಗಡೆಯಿಂದ ಬಾಗಿಲು ಮಾಡಿಸಿ, ಗೋಡೆಗೆ ಒಂದೆರಡು ಹಲಗೆ ಹೊಡೆಸಿ, ಅಡುಗೆ ಮಾಡಲು ಒಲೆ ಹಾಕಿಸಿದ್ದರು. ಅಲ್ಲಿ ನಾಲ್ಕಾರು ಹೆಂಗಸರು ಮೊದಲೇ ಹೋಗಿ ಆರತಿ ತಟ್ಟೆ, ಕಾಲಿಗೆ ನೀರು, ಅಕ್ಕಿ ಬೆಲ್ಲ ತುಂಬಿದ ಸೇರು ಎಲ್ಲವನ್ನೂ ರೆಡಿ ಮಾಡಿಕೊಂಡಿದ್ದರು. ಮದುವೆ ಹೆಣ್ಣಿಗೆ ತಕ್ಷಣ ಕಾಲು ತೊಳೆದು, ಆರತಿ ಎತ್ತಿ, ಒಸಲಿನಲ್ಲಿಟ್ಟಿದ್ದ ಅಕ್ಕಿ ಬೆಲ್ಲದ ಸೇರನ್ನು ಒದೆಸಿ ಬರಮಾಡಿಕೊಂಡರು. ಆದರೆ ಬಾಗಿಲು ತಡೆಯಲು ಜಯಮ್ಮ ಹುಡುಗನ ಅಕ್ಕನಾಗಿ ಕರಿ ಕಂಬಳಿ ತಲೆ ಮೇಲೆ ಹೊದ್ದು ಕುಳಿತಿದ್ದಳು. ಸೋಬಾನೆ ಸಣ್ಣಮ್ಮನ ಬಾಯಿಂದ ಬಾಗಿಲು ತಡೆಯುವ ಪದ ಲೀಲಾಜಾಲವಾಗಿ ಹೊರಟಿತು.
ದ್ವಾರಾವತಿಯಿಂದ ಕೃಷ್ಣ ದೇವರು ಬಂದು ನಾರಿ ರುಕ್ಮಿಣಿಯ ಒಡಗೊಂಡು/ ಬರುವಾಗ ತಂಗಿ ಬಾಗೀಲ ತಡೆದಾಳು
ಯಾಕೆ ಸುಭದ್ರ ಯಾಕೆ ಬಾಗಿಲು ತಡೆದೆ ನೀ ತಡೆದ ಕದನ ಪರಿಯೇಳು
ಆನೆ ಆನೆಯ ಕೊಡುವೆ ಆನೆಯ ಮರಿ ಕೊಡುವೆ ಆನೆಯ ಹಿಂಡ ಹೊಡ ಕೊಡುವೆ/ ತಂಗ್ಯಮ್ಮ ತಡೆದ ಬಾಗೀಲ ಬಿಡು ನಮಗೆ
ಆನೆ ಆನೆ ಉಂಟು ಆನೆಯ ಮರಿ ಉಂಟು
ಆನೆಯ ಹಿಂಡು ನಮಗುಂಟು/ ಅಣ್ಣಯ್ಯ ಮತ್ತೇನು ಕೊಡುವಿರಿ ಕರುಣೀಸಿ ಶ್ರೀಗಿರಿ ಪರ್ತಕೆ ಹೋಗಿದ್ದುಂಟಾದರೆ ಶಿವನ ದಯದಿಂದ ಮಗಳಾದರೆ ಮಗನಿಗೆ ಮಗಳ ಕೊಡುತೀನಿ.
ನಾನು ಹೆಣ್ಣಡೆದಾಗ ನೀ ಗಂಡಡೆದಾಗ ಗಜನೂರು ಗದ್ದೆ ಬೆಳೆದಾಗ/ ಅತಿಗೆಮ್ಮ ಮಾಡಿಕೊಳ್ಳೋಣ ಮದುವೆಯ.
ಅಕ್ಕನ ಮಗನಿಗೆ ಹೆಣ್ಣು ಕೊಡಲು ಒಪ್ಪಿ ದಂಪತಿಗಳು ಒಳಹೋಗುತ್ತಾರೆ. ಒಳಬಂದ ಮದುಮಕ್ಕಳನ್ನು ಹರಿಣೆಯ ಮುಂದೆ ಕೂರಿಸಿ `ಬೂಮೆ ಇಕ್ಕುವ ಶಾಸ್ತ್ರ’ ಮಾಡಿಸುತ್ತಾರೆ. ಮಡಕೆಯ ಒಳಗೆ ಉಂಗುರ ಹಾಕಿ ಯಾರು ಉಂಗುರ ತೆಗೆಯುತ್ತಾರೊ ಅವರು ಸಂಸಾರದಲ್ಲಿ ಮೇಲುಗೈ ಸಾಧಿಸುತ್ತಾರೆಂದು ಇಬ್ಬರು ಒಟ್ಟಿಗೆ ಹೈ ಹಾಕಬೇಕೆಂದು ಹೇಳಿದರು ಸಣ್ಣಮ್ಮ. ಪರಮೇಶಿ ಹೆಂಡತಿಯ ಕೈಯನ್ನು ಚಿವುಟಿ ಅವಳ ಕೈಲಿದ್ದ ಉಂಗುರ ಕಿತ್ತುಕೊಂಡು ತಾನೇ ತೆಗೆದೆನೆಂದು ಬಾಗಿದಾಗ, ಅವನ ಪರ ಇದ್ದವರೆಲ್ಲಾ ಓ… ಎಂದು ಕೂಗಿದರು.
ಇದರಿಂದ ಪಾರ್ವತಿ ಸಂಕೋಚದ ಮುದ್ದೆಯಾದಳು. ಇದನ್ನು ನೋಡಿದ ಪರಿಮೇಶಿಗೆ ಪಿಚ್ಚೆನಿಸಿತು. ಎರಡನೆ ಬಾರಿಗೆ ಅವಳ ಕೈಗೆ ಉಂಗುರ ಕೊಟ್ಟು ಸುಮ್ಮನಾದ. ಮೂರನೇ ಬಾರಿಗೆ ಯಾರು ಉಂಗುರ ತೆಗೆಯುತ್ತಾರೊ ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದರು.
ಪರಮೇಶಿ, “ನೀನೇ ತಗೋ….” ಎಂದು ಕಣ್ಣ ಭಾಷೆಯಲ್ಲಿಯೇ ಹೇಳಿದ.
ಅವಳು ನಸುನಾಚಿ, “ನೀವೇ ತಗೊಳ್ಳಿ,” ಎಂದು ಅವನಿಗೆ ಕೊಟ್ಟಳು. ಇಬ್ಬರೂ ನೀರೊಳಗೆ ಹುಡುಕುವಂತೆ ಕೈಯಾಡಿಸುತ್ತಿದ್ದರು. ಒಳಗೆ ಏನು ನಡೆಯುತ್ತಿದೆ ಎಂದು ಯಾರಿಗೂ ತಿಳಿಯುತ್ತಿರಲಿಲ್ಲ. ಕೊನೆಗೆ ಪರಮೇಶಿ ಉಂಗುರ ಹೊರತೆಗೆದು ತೋರಿಸಿದಾಗ ಎಲ್ಲರೂ ನಕ್ಕರು.
ಮಾರನೇಯ ದಿನ ಬೀಗರೂಟ. ಬೀಗರ ಕಡೆಯವರು ಹೆಚ್ಚು ಇಲ್ಲದಿದ್ದರು ನೆಂಟರನ್ನೆಲ್ಲಾ ಗೌಡರು ಉಳಿಸಿಕೊಂಡಿದ್ದರು. ಮನೆಯಲ್ಲೇ ಸಾಕಿದ್ದ ದೊಡ್ಡ ಹೋತವೊಂದನ್ನು ಕೊಯ್ದು ಊರವರು ಹಾಗೂ ನೆಂಟರಲ್ಲಿ ಕೆಲವರು ಸೇರಿಕೊಂಡು ಮುದ್ದೆ, ಅನ್ನ, ಮಾಂಸ ಸಾರು, ಬೋಟಿ ಗೊಜ್ಜು ಮಾಡಿದ್ದರು. ಗಂಡಸರೆಲ್ಲಾ ಅಡುಗೆ ಮಾಡುವಲ್ಲಿ ಸೇರಿಕೊಂಡಿದ್ದರೆ, ಹೆಂಗಸರೆಲ್ಲಾ ಜಾಗರದ ಗೊಬ್ಬರವನ್ನೆಲ್ಲಾ ತುಂಬಿ ಹುಡುಗಿಯ ತಲೆಯ ಮೇಲೆ ಹೊರಿಸಿಕೊಂಡು ಹೋಗಿ ಸುರಿದು ಬಂದರು. ಹರಿಣೆ ಗಡಿಗೆಯ ನೀರನ್ನು ಮರದ ಬುಡಕ್ಕೆ ಸುರಿಸಿದರು.
ನಂತರ ಮದುಮಕ್ಕಳಿಗೆ ಹೂವಿನ ಚೆಂಡಾಡುವ ಪಂದ್ಯ. ಹೂಗಳನ್ನೆಲ್ಲಾ ಬಾಳೆ ಪಟ್ಟೆಗೆ ಸೇರಿಸಿ ಕಟ್ಟಿದರು. ಆ ಕಡೆ ಹೆಣ್ಣು ಈ ಕಡೆ ಗಂಡನ್ನು ನಿಲ್ಲಿಸಿದರು. ಗುಂಡು ಗುರಿ ಇಟ್ಟು ಸರಿಯಾಗಿ ಹೆಣ್ಣಿಗೆ ಹೊಡೆಯುತ್ತಿದ್ದ. ಎಲ್ಲರೂ ಓ…. ಎಂದು ಕಿರುಚಾಡುತ್ತಿದ್ದರು. ಇದರಿಂದ ನಾಚಿ ನೀರಾದ ಹೆಣ್ಣು ಗಂಡಿನ ಮುಖ ಸಹ ನೊಡದೆ ಎತ್ತೆತ್ತಲೋ ಎಸೆಯುತ್ತಿದ್ದಳು. ಇದನ್ನು ನೋಡಿ ಎಲ್ಲರೂ ಚಪ್ಪಾಳೆ ತಟ್ಟಿ ನಗುತ್ತಿದ್ದರು. ಆಟ ಮುಗಿಯುವ ವೇಳೆಗೆ ಊಟ ತಯಾರಾಗಿತ್ತು. ಮದುಮಕ್ಕಳು ಸ್ನಾನ ಮಾಡಿ ಊಟಕ್ಕೆ ಬಂದರು. ಭರ್ಜರಿ ಊಟದ ನಂತರ ನೆಂಟರಲ್ಲಿ ಕೆಲವರು ಹೊರಟರು, ಕೆಲವರು ಉಳಿದುಕೊಂಡರು.
ಮರುದಿನ ಪಾರ್ವತಿಯ ಅಜ್ಜಿ ಮೊಮ್ಮಗಳಿಗೆ ಗಂಡನಿಗೆ ತಿರುಗಿ ಮಾತನಾಡದೆ ಅವನ ಬೇಕು ಬೇಡಗಳನ್ನೆಲ್ಲಾ ನೋಡಿಕೊಂಡು ಗಂಡ ಹೆಂಡತಿ ಚೆನ್ನಾಗಿ ಸಂಸಾರ ಮಾಡಿಕೊಂಡು ಹೋಗಬೇಕೆಂದು ಹೇಳಿತು. ಅಣ್ಣ ಅಕ್ಕನ ಜೊತೆ ಚೆನ್ನಾಗಿದ್ದುಕೊಂಡು ಅವರು ಹೇಳಿದ ಹಾಗೆ ಕೇಳಬೇಕೆಂದು ಸಾಕಷ್ಟು ಬುದ್ಧಿ ಮಾತನ್ನು ಹೇಳಿ, ಗೌಡರಿಗೂ ನಮ್ಮ ಮಗಳನ್ನು ನಿಮ್ಮ ಕೈಗೆ ಹಾಕಿದ್ದೀನಿ ಇನ್ನು ಮುಂದೆ ಅವಳ ಕಷ್ಟ ಸುಖ ಎಲ್ಲಾ ನಿಮ್ಮದೆ ಎಂದು ಹೇಳಿ ಎತ್ತಿನ ಗಾಡಿಯಲ್ಲಿ ಕುಳಿತು ತನ್ನೊರಿಗೆ ಪ್ರಯಾಣ ಬೆಳೆಸಿತು. ಅಜ್ಜಿ ಹೊರಟಾಗ ಎಲ್ಲರೂ, “ನೀವು ಇಲ್ಲಿಯೇ ಇರಿ. ಅಲ್ಲಿ ಹೋಗಿ ಒಬ್ಬರೆ ಏನು ಮಾಡುವಿರಿ,” ಎಂದಿದ್ದಕ್ಕೆ “ಕೈಲಾಗುವವರೆಗೂ ಬೇಯಿಸಿಕೊಂಡು ತಿಂತೀನಿ. ಆಗದ ಕಾಲಕ್ಕೆ ಇಲ್ಲಿಗೆ ಬರ್ತೀನಿ. ಅವಳಿಗೂ ಒಂದು ತವರು ಮನೆ ಅನ್ನೋದು ಬ್ಯಾಡ್ವಾ…..” ಎಂದು ಅಜ್ಜಿ ಒಲ್ಲದ ಮನಸ್ಸಿನಿಂದ ಹೊರಟಿತು. ಅಜ್ಜಿಯನ್ನು ಕಳಿಸಿ ಬಂದ ಪಾರ್ವತಿ ಅಳುತ್ತಾ ಕುಳಿತಾಗ ಅಲ್ಲಿದ್ದ ಹಿರಿಯರೆಲ್ಲ ಸಮಾಧಾನಪಡಿಸಿದರು.
ಪಾರ್ವತಿ ಪರಮೇಶನ ಜೀವನ ನೌಕೆ ಏಳು ಬೀಳಿಲ್ಲದೆ ಸಾಗುತ್ತಿತ್ತು. ಒಂದು ದಿನ ಪರಮೇಶಿ, “ಲೇ… ಅಣ್ಣಾರ ಮನೇಲಿ ಶ್ಯಾಮಿಗೆ ಕಾಯಾಲು, ಶ್ಯಾವಿಗೆ ಕೋಳಿ ಸಾರು ಮಾಡ್ತಾವರೆ ಇವತ್ತು ನೀನು ಮಾಡು,” ಎಂದ.
“ನನಗೆ ಯಾವಾಗಲೂ ಮಾಡಿ ಗೊತ್ತಿಲ್ಲ,” ಎಂದಳು ಪಾರ್ವತಿ.
“ಗೌರಕ್ಕ, ಮಂಜಕ್ಕ, ಜಯಕ್ಕ, ರಾಧಕ್ಕ…. ಅವರುಗಳನ್ನು ಕೇಳ್ಕೊಂಡು ಮಾಡು. ಇವತ್ತು ಗದ್ದೆ ನಾಟಿ. ಮರ ಹೊಡೀಬೇಕು. ಅದಾದ ನಂತರ ಎಸೆ ಎಸೆದು ಕೊಡಬೇಕು. ಆಮೇಲೆ ಎತ್ತು ಮೇಯಿಸಿಕೊಂಡು ಬರಬೇಕು. ಹಾಗಾಗಿ ನಾನು ಬರುವುದು ತಡವಾಗುತ್ತದೆ. ತಿಂಡಿ ಅಣ್ಣಾರ ಮನೇಲೆ ತಂದುಕೊಡ್ತಾರೆ. ನಾನಿನ್ನು ಬರ್ತೀನಿ,” ಎಂದವನೆ ಆತುರಾತುರವಾಗಿ ಹೊರಟೇಬಿಟ್ಟ.
ಪಾರ್ವತಿಗೂ ಗಂಡ ಆಸೆ ಪಟ್ಟನ್ನೆ ನಾನು ಶ್ಯಾವಿಗೆ ಕಾಯಾಲು ಮಾಡಿ ಅವನನ್ನು ಸಂತೋಷ ಪಡಿಸಬೇಕು ಅನ್ನಿಸ್ತು. ಒಂದು ಸೇರು ಅಕ್ಕಿಗೆ ಎಷ್ಟು ನೀರು ಮತ್ತು ಉಪ್ಪು ಹಾಕಬೇಕೆಂದು ಗೌರಕ್ಕನನ್ನು ಕೇಳಿದ್ಲು. ಅವರು ಎರಡು ಚೊಂಬು ನೀರು ಒಂದು ಸ್ಯಾರೆ ಉಪ್ಪು ಹಾಕು ಅಂದ್ರು. ಆಮೇಲೆ ರಾಧಕ್ಕನನ್ನು ಕೇಳದ್ಲು ಅವರು ಎರಡು ಚೊಂಬು ನೀರು ಒಂದು ಸ್ಯಾರೆ ಉಪ್ಪು ಹಾಕು ಅಂದ್ರು. ಆಮೇಲೆ ಮಂಜಕ್ಕ ಜಯಕ್ಕನನ್ನೂ ಕೇಳಿದ್ಲು ಅವರೂ ಎರಡು ಚೊಂಬು ನೀರು ಒಂದು ಸ್ಯಾರೆ ಉಪ್ಪು ಹಾಕು ಅಂದ್ರು.
ನಾಲ್ಕು ಮಂದಿ ಹೇಳಿದ ಹಾಗೆ ಶ್ಯಾವಿಗೆ ಹಿಟ್ಟು ತಯಾರಿಸಲು ಇಟ್ಟಿದ್ದ ಮಡಕೆಗೆ ಎರಡೆರಡು ಚೊಂಬಿನಂತೆ ಎಂಟು ಚೊಂಬು ನೀರು, ನಾಲ್ಕು ಸ್ಯಾರೆ ಊಪ್ಪು ಹಾಕಿದ್ಲು. ನೀರು ಕುದಿ ಬಂದ ಮೇಲೆ ಹಿಟ್ಟು ಸುರಿದು ಮುದ್ದೆ ಕೋಲಲ್ಲಿ ತಿರುಗಿಸಲು ಹೋದ್ರೆ ಅದು ಅಂಟಂಟು ಗಂಟು ಗಂಟು ಅನ್ನೋ ಹಾಗಾಯ್ತು. ಏನಪ್ಪಾ ಮಾಡೋದು ಯಾರನ್ನಾದ್ರೂ ಕೇಳೋಣ ಅಂದ್ರೆ ಎಲ್ಲರೂ ಅಣ್ಣಾರ ಮನೆ ಗದ್ದೆ ನಾಟಿಗೆ ಹೋಗಿದ್ರು. ಅವಳಿಗೆ ಏನು ಮಾಡ್ಬೇಕೊ ಗೊತ್ತಾಗಲಿಲ್ಲ.
ಒಂದಷ್ಟು ಮುತ್ತುಗದೆಲೆ ತಂದು ಹಿಟ್ಟನ್ನೆಲ್ಲಾ ಮುತ್ತುಗದ ಎಲೆ ಮೇಲೆ ಹಾಕಿ ಮನೆ ತುಂಬಾ ಇಟ್ಳು. ಆರಿದ ಮೇಲೆ ಸರಿಯಾಗಬಹುದು ಎಂದುಕೊಂಡಳು. ಆ ವೇಳೆಗೆ ಅವಳಿಗೂ ಸಾಕಾಗಿಹೋಗಿತ್ತು. ಕತ್ತಲಾದರೂ ಗಂಡ ಬರಲೇ ಇಲ್ಲ. ಅವನು ಆರು ಬಿಟ್ಟು ಮೇಯಲು ಓಡ್ಸಿದ್ದ ಎತ್ತುಗಳನ್ನು ಹೊಡ್ಕೊಂಡು ಬಂದು, ಅವುಗಳನ್ನು ಕಟ್ಟಿ ಹಾಕಿ, ಹುಲ್ಲು ಹಾಕಿ ಮನೆಗೆ ಬಂದವನೆ, “ಸ್ನಾನ ಮಾಡಿ ಬರ್ತೀನಿ, ಬಟ್ಟೆ ಕೊಡು ಊಟಕ್ಕೆ ರೆಡಿ ಮಾಡಿರು,” ಎಂದು ಸೀದಾ ಬಚ್ಚಲುಮನೆಗ ಹೋದ.
ಬೆಳಗ್ಗೆಯಿಂದ ಉತ್ತ ಗದ್ದೆಗಳನ್ನು ನಾಟಿ ಮಾಡಲು ಮರ ಹೊಡೆದು ನಂತರ ಸಸಿ ಎಸೆದುಕೊಟ್ಟು, ಎತ್ತು ಮೇಯಿಸಿ ಮನೆಗೆ ಬಂದಿದ್ದ. ಅವನಿಗೋ ಎಷ್ಟೊತ್ತಿಗೆ ಊಟ ಮಾಡಿ, ದಿಂಬಿಗೆ ತಲೆ ಕೊಡ್ತೀನೊ ಅನ್ನುವಷ್ಟು ಸುಸ್ತಾಗಿತ್ತು. ಬಟ್ಟೆ ಟವಲ್ ತೆಗೆದುಕೊಂಡು ಹೋದ ಪಾರ್ವತಿ, ಗಂಡನಿಗೆ ಬೆನ್ನುಜ್ಜಿ ಕೊಟ್ಟು ಬಂದು ಅವನು ಬರುವುದನ್ನೆ ಕಾಯುತ್ತಾ ಕುಳಿತಳು.
ಸ್ನಾನ ಮುಗಿಸಿ ಬಂದ ಪರಮೇಶಿ ಎಲ್ಲಿ ಕಾಲಿಡಲು ಹೋದ್ರೂ, “ರೀ… ಅಲ್ಲಿ ಶ್ಯಾವಿಗೆ, ಇಲ್ಲಿ ಶ್ಯಾವಿಗೆ ಬರ್ಬೇಡಿ,” ಅಂದ್ಲು.
`ಇವ್ಳ ಮನೆ ಕಾಯ್ವಾಗ ಎಷ್ಟು ಶ್ಯಾವಿಗೆ ಮಾಡ್ಯಳೋ ಎಲ್ಲರನ್ನೂ ಊಟಕ್ಕೆ ಕರೋಣ,’ ಅಂದುಕೊಂಡು ನೋಡ್ತಾನೆ. ಮನೆ ತುಂಬಾ ಮುತ್ತುಗದೆಲೆಯ ಮೇಲೆ ರಾರಾಜಿಸುತ್ತಿದೆ ಶ್ಯಾವಿಗೆಯ ಹಿಟ್ಟು. ಶ್ಯಾವಿಗೇದು ನೀರು ಪಾಡಾದ್ರೆ ಪರಮೇಶೀದು ನಾಯಿ ಪಾಡು. ಕೆಲಸ ಮಾಡಿ ದೇಹ ದಣಿದಿದ್ದಕ್ಕೂ, ಹೊಟ್ಟೆ ಹಸಿದಿದ್ದಕ್ಕೂ, ಇವಳು ಮಾಡಿದ್ದ ಅವಾಂತರಕ್ಕೂ ಅವನಿಗೆ ಎಲ್ಲಿತ್ತೋ ಸಿಟ್ಟು ಅವಳನ್ನು ಹಿಡ್ಕೊಂಡು ನಾಲ್ಕು ತದುಕಿದ. ಆದರೂ ಸಮಾಧಾನವಾಗಲಿಲ್ಲ. ಸಿಟ್ಟು ಕಡಿಮೆಯಾಗಲಿಲ್ಲ. ಗೌಡರ ಮನೇಲಿ ಬಾಳೆ ಪಟ್ಟೇಲಿ ಹಿಡಿಯುತ್ತಿದ್ದ ಮೊಳದುದ್ದದ ಶ್ಯಾವಿಗೆ ನೆನಪಿಗೆ ಬಂತು. ಈ ಶ್ಯಾವಿಗೆಯ ಆಕಾರ ನೋಡಿದವನೆ ಮುತ್ತುಗದೆಲೆಯ ಸಮೇತ ಶ್ಯಾವಿಗೆ ಹಿಟ್ಟನ್ನು ಅವಳ ತಲೆಗೆಲ್ಲಾ ಒರೆಸಿದ. ಅವಳನ್ನು ಕತ್ತಲಲ್ಲಿಯೇ ಹೊರಗೆ ನೂಕಿ ಬಾಗಿಲು ಹಾಕಿಕೊಂಡುಬಿಟ್ಟ.
“ರೀ ದಮ್ಮಯ್ಯ ಬಾಗಿಲು ತೆಗೀರಿ ನೀವೇ ಹೇಳಿದ್ರಲ್ಲ ಗೌರಕ್ಕ, ಮಂಜಕ್ಕ, ಜಯಕ್ಕ, ರಾಧಕ್ಕರನ್ನು ಕೇಳು ಅಂತ ಅವರುಗಳು ಹೇಳಿದಂತೆ ಎರಡೆರಡು ಚೊಂಬು ನೀರು, ಒಂದೊಂದು ಸ್ಯಾರೆ ಉಪ್ಪು ಹಾಕಿದೆ. ಆದ್ರೂ ಹಿಂಗಾಯ್ತು ನಿಮ್ಮ ದಮ್ಮಯ್ಯ ಬಾಗ್ಲು ತೆಗೀರಿ,” ಅಂತ ಗೋಗರೆದಳು.
ಸ್ವಲ್ಪ ಹೊತ್ತು ಕತ್ಲೇಲಿ ನಿಂತಿರ್ಲಿ ಅವಳಿಗೆ ಬುದ್ಧಿ ಬರ್ಬೇಕು ಆಮೇಲೆ ಬಾಗಿಲು ತೆಗೆಯೋಣ ಅಂತ ಮುತ್ತುಗದೆಲೆಯನ್ನೆಲ್ಲಾ ಒಂದು ಕಡೆ ಸರಿಸಿ ಅಲ್ಲೆ ಇದ್ದ ಹಾಸಿಗೆ ಎಳೆದುಕೊಂಡು ಒರಗಿ ಕುಳಿತ. ದಣಿದ ದೇಹ, ಹಸಿದ ಹೊಟ್ಟೆ, ಬಿಸಿ ನೀರಿನ ಸ್ನಾನ ಮಾಡಿದ್ದ ಅವನಿಗೆ ಯಾವಾಗ ನಿದ್ದೆ ಬಂತೊ ಗೊತ್ತಾಗಲಿಲ್ಲ.
ಇತ್ತ ಪಾರ್ವತಿ ಗಂಡನಿಗೆ ಸಿಟ್ಟು ಬಂದೈತೆ. ಇನ್ನೂ ಬಾಗ್ಲು ತೆಗ್ಯಲ್ಲ ಅಂದ್ಕೊಂಡು ದಣಿದಿದ್ದ ಅವಳೂ ಜಗುಲಿ ಮೇಲೆ ಮಲಗಿಕೊಂಡಳು ಅವಳಿಗೂ ನಿದ್ದೆ ಬಂದಿತು. ತಲೆಗೆ ಮೆತ್ತಿಕೊಂಡಿದ್ದ ಶ್ಯಾವಿಗೆ ಹಿಟ್ಟನ್ನು ತಿನ್ನೋಕೆ ನಾಯಿಗಳು ಬಂದು ಅವಳ ಕೂದಲಿಗೆ ಬಾಯಿ ಹಾಕಿದವು. ನಿದೆಗಣ್ಣಲ್ಲಿದ್ದ ಅವಳು ಗಂಡನೇ ಬಂದು ಕರೀತಾ ಅವ್ನೆ ಅಂತ ತಿಳ್ಕೊಂಡು, “ಅಯ್ಯೋ ಬಿಡ್ರಿ ನಾ ಬರಲ್ಲ… ಬಿಡ್ರಿ ನಾ ಬರಲ್ಲ….” ಎಂದು ಜೋರಾಗಿ ಕಿರುಚುತ್ತಿದ್ದಳು.
ಇವಳ ಕೂಗಾಟಕ್ಕೆ ಪರಮೇಶಿಗೆ ಎಚ್ಚರವಾಗಿ ಯಾರನ್ನ ಹಿಂಗಂತಾವ್ಳೆ ಅಂತ ಬಾಗಿಲು ತೆಗೆದು ನೋಡಿದ್ರೆ, ಅಯ್ಯೋ ಎರಡು ನಾಯಿಗಳು ಶ್ಯಾವಿಗೆಯನ್ನು ತಿನ್ನಲು ತಲೆ ಕೂದಲಿಗೆ ಬಾಯಿ ಹಾಕಿ ಜಗ್ತಾ ಇವೆ. ಅಷ್ಟೊತ್ತಿಗೆ ಅವನ ಕೋಪವೆಲ್ಲಾ ಇಳಿದು ಹೋಗಿ ಪ್ರೀತಿ ಉಕ್ಕಿತು. ನಾಯಿಗಳನ್ನು ಓಡಿಸಿ, ಅವಳನ್ನು ಒಳಗೆ ಕರ್ಕೊಂಡು ಬಂದು ಸ್ನಾನ ಮಾಡಲು ಹೇಳಿದ. ನಂತರ ಬಿಸಿ ಮುದ್ದೆ ಮಾಡಿಕೊಂಡು ಇಬ್ಬರೂ ಊಟ ಮಾಡಿದರು. ಇದುವರೆಗೂ ಈ ವಿಷಯ ಯಾರಿಗೂ ಗೊತ್ತಾಗಿಲ್ಲ. ಹೀಗೆ ಪರಮೇಶಿಯ ಸಂಸಾರ ಬೇವು ಬೆಲ್ಲದಂತೆ ಹಿತವಾಗಿ ಸಾಗತೊಡಗಿತು.





