ಜಗನ್ನಾಥ ರಾಯರು ಮತ್ತು ವಿಮಲಮ್ಮನಿಗೆ ನಾಲ್ವರು ಹೆಣ್ಣುಮಕ್ಕಳು ಲೀಲಾ, ಶೀಲಾ, ವೇದಾ, ಮೇಧಾ. ಮಧ್ಯಮ ವರ್ಗದ ಈ ಕುಟುಂಬಕ್ಕೆ ಹೆಣ್ಣುಮಕ್ಕಳ ಮದುವೆ ನಿಜಕ್ಕೂ ಒಂದು ಸವಾಲಾಗಿತ್ತು. ಹಿರಿ ಮಗಳು ಲೀಲಾಳ ಮದುವೆ ದೂರದ ಊರಿನ ವರನೊಂದಿಗೆ ಗೊತ್ತಾಯಿತು. ಅದೇ ಮದುವೆಯಲ್ಲಿ ಮುಂಬೈ ಹುಡುಗ ದೀಪಕ್ ಎರಡನೇ ಮಗಳಾದ ಶೀಲಾಳನ್ನು ಮೆಚ್ಚಿ ಮದುವೆ ಆಗ ಬಯಸಿದ. ಅವರಿಬ್ಬರ ಮದುವೆಯೂ ಸುಸೂತ್ರವಾಗಿ ನಡೆಯಿತು. ಆಕಸ್ಮಿಕವಾಗಿ ವಿಮಲಮ್ಮ ತೀರಿಕೊಂಡಾಗ, ಅನಿವಾರ್ಯವಾಗಿ ಮೂರನೇ ಮಗಳು ವೇದಾಳನ್ನು ಶೀಲಾಳ ಬಾಣಂತಕ್ಕೆ ಮುಂಬೈಗೆ ಕಳುಹಿಸಬೇಕಾಗಿ ಬಂತು. ಮುಂದೆ ನಡೆದದ್ದೇನು......?
ಮುಂದೆ ಓದಿ.....
ಅತೀ ಚಂಚಲ ಸ್ವಭಾವದ ವೇದಾ, ಮೊದಲಿನಿಂದಲೂ ಮುಂಬೈನ ಗ್ಲಾಮರಸ್ ಜೀವನ ಬಯಸಿ, ಅಕ್ಕನ ಬಾಣಂತನಕ್ಕೆಂದು ಬಂದ ನೆಪದಲ್ಲಿ ಕಿರಿ ಭಾವ ದೀಪಕ್ ನನ್ನು ತನ್ನ ಕೈವಶ ಮಾಡಿಕೊಂಡಳು. ಈ ವಿಷಯ ಆಕಸ್ಮಿಕವಾಗಿ ಶೀಲಾಳಿಗೆ ತಿಳಿಯಿತು. ತನ್ನ ಸಂಸಾರ ಉಳಿಸಿಕೊಳ್ಳಲೆಂದು ಊರಿನಲ್ಲಿದ್ದ ತಂದೆಯನ್ನು ಮುಂಬೈಗೆ ಕರೆಸಿಕೊಂಡಳು. ನಂತರ ನಡೆದದ್ದು ಏನು.....?
``ಸರಿ ಹೋಗಿ ಸ್ನಾನ ಮಾಡಿ ಬಾ ವೇದಾ,'' ಎಂದ ಶೀಲಾಳನ್ನೇ ನೋಡಿದಳು. ಎಂಟು ತಿಂಗಳ ಬಸುರಿ. ಧರಿಸಿದ ಕಾಟನ್ ಚೂಡಿಧಾರ್ ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಳು. ಅವಳ ಕಟ್ ಮಾಡಿದ್ದ ಕೂದಲು, ಕತ್ತಿನಲ್ಲಿದ್ದ ಸಣ್ಣ ಮಂಗಳಸೂತ್ರ ಅವಳಿಗೆ ವಿಶೇಷ ಕಳೆ ಕೊಟ್ಟಿತ್ತು. ದೀಪಕ್ ನನ್ನು ತನ್ನೆಡೆಗೆ ಸೆಳೆಯುವುದು ಅಷ್ಟು ಸುಲಭವಲ್ಲ ಎನಿಸಿತು. ಸ್ನಾನ ಮಾಡಿ ಬಂದವಳು ಟ್ರಾಕ್ ಪ್ಯಾಂಟ್, ಸ್ಲೀವ್ ಲೆಸ್ ಶರ್ಟ್ ಧರಿಸಿ ಬಂದವಳನ್ನು ಒಮ್ಮೆ ನೋಡಿದ ಶೀಲಾ, `ಪರವಾಗಿಲ್ಲ ವೇದಾ ಬಹಳ ಬದಲಾಗಿದ್ದಾಳೆ. ಅಮ್ಮ ಇದ್ದಾಗಿನ ವೇದಾಳಿಗೂ ಇವಳಿಗೂ ಬಹಳ ವ್ಯತ್ಯಾಸವಿದೆ,' ಎಂದುಕೊಂಡಳು.
ಅಕ್ಕನ ಅಭಿರುಚಿ ವೇದಾಗೆ ಬಹಳ ಇಷ್ಟವಾಗಿತ್ತು. ಮನೆಯನ್ನು ಬಹಳ ಚೆನ್ನಾಗಿ ಅಲಂಕರಿಸಿದ್ದಳು. ಅಡುಗೆ ಮನೆಯಂತೂ ಬಹಳವೇ ನೀಟಾಗಿತ್ತು. ಅಷ್ಟರಲ್ಲಿ ದೀಪಕ್ ಫ್ರೆಶ್ ಆಗಿ ಬಂದ. ತೊಟ್ಟಿದ್ದ ಬರ್ಮುಡಾ ಮೇಲೆ ಬನಿಯನ್ ಧರಿಸಿದ್ದು ಬಹಳ ಫ್ರೆಶ್ ಆಗಿ ಕಾಣುತ್ತಿದ್ದ.
ಡೈನಿಂಗ್ ಟೇಬಲ್ ಮೇಲೆ ಎಲ್ಲಾ ಪದಾರ್ಥಗಳನ್ನು ಪಿಂಗಾಣಿ ಪಾತ್ರೆಗಳಲ್ಲಿ ನೀಟಾಗಿ ಜೋಡಿಸಿ, ಮೂರು ಪ್ಲೇಟ್ ಗಳನ್ನು ಬೋರಲು ಹಾಕಿದ್ದಳು. ಭಾವ ಕುರ್ಚಿಯಲ್ಲಿ ಕುಳಿತು ಪ್ಲೇಟ್ ತಿರುಗಿಸಿಕೊಂಡಾಗ, ತಾನೂ ಹಾಗೆ ಮಾಡಿದಳು ವೇದಾ. ತಾನು ಕುರ್ಚಿಯಲ್ಲಿ ಕುಳಿತ ಶೀಲಾ, ``ನಿನಗೇನು ಬೇಕೋ ಬಡಿಸಿಕೊ ವೇದಾ,'' ಎನ್ನುತ್ತಾ ದೀಪಕ್ ತಟ್ಟೆಗೆ ಚಪಾತಿ, ಪಲ್ಯ ಬಡಿಸಿ ತನ್ನ ತಟ್ಟೆಗೆ ಎರಡು ಚಪಾತಿ, ಪಲ್ಯ, ದಾಲ್ ಬಡಿಸಿಕೊಂಡಳು ಶೀಲಾ. ವೇದಾ ತಾನೂ ತನ್ನ ತಟ್ಟೆಗೆ ಚಪಾತಿ, ಪಲ್ಯ ಬಡಿಸಿಕೊಂಡಳು.
``ಸಲಾಡ್ ತಗೋಳೇ....'' ಎನ್ನುತ್ತಾ ಶೀಲಾ ನೀಟಾಗಿ ಹೆಚ್ಚಿದ್ದ ಸೌತೇಕಾಯಿ, ಕ್ಯಾರೆಟ್ ಬಡಿಸಿದಳು. ಶೀಲಾ ಹಾಗೂ ದೀಪಕ್ ಮಾತನಾಡುತ್ತಾ ಊಟ ಮಾಡುವಾಗ ವೇದಾ ಬರೇ ಪ್ರೇಕ್ಷಕಳಾಗಿದ್ದಳು.
ಊಟ ಮುಗಿಸಿ ಗಂಡ ಹೆಂಡತಿ ಸೇರಿಯೇ ಅಡುಗೆ ಮನೆಯನ್ನು ಸ್ವಚ್ಛಗೊಳಿಸಿದರು. ವೇದಾಳಿಗೆ ಏನು ಮಾಡಬೇಕು ಎಂದು ತಿಳಿಯದಾಗಿತ್ತು.