ತವರಿನಲ್ಲಿ ಕುಟುಂಬದವರೆಲ್ಲರ ಅತ್ಯಂತ ಪ್ರೀತಿ ಪಾತ್ರ ಹಾಗೂ ತನ್ನದೇ ಆದ ರೀತಿಯಲ್ಲಿ ಜೀವನ ನಡೆಸುವ ಹುಡುಗಿ ಮದುವೆಯಾಗಿ ಗಂಡನ ಮನೆಗೆ ಹೋದಾಗ ಹೊಸ ಮನೆಯ ಜವಾಬ್ದಾರಿ ಆಕೆಯ ಹೆಗಲಿಗೆ ಬೀಳುತ್ತದೆ. ಅತ್ತೆ, ಮಾವ, ನಾದಿನಿ, ಮೈದುನರಂತಹ ಅನೇಕ ಸಂಬಂಧಗಳು ಆಕೆಯೊಂದಿಗೆ ಸೇರಿಕೊಳ್ಳುತ್ತವೆ. ಈ ಎಲ್ಲ ಸಂಬಂಧಗಳನ್ನು ನಿಭಾಯಿಸುವುದು ಹಾಗೂ ಅವುಗಳ ಹಿರಿಮೆ ಹೆಚ್ಚಿಸುವುದು ನವವಿವಾಹಿತೆಗೆ ಬಹುದೊಡ್ಡ ಸವಾಲಾಗಿ ಪರಿಣಮಿಸುತ್ತದೆ.
ನಾದಿನಿ ವಯಸ್ಸಿನಲ್ಲಿ ಚಿಕ್ಕವಳೇ ಆಗಿರಬಹುದು ಅಥವಾ ದೊಡ್ಡವಳು, ಅವಳು ಎಲ್ಲರಿಗೂ ಪ್ರಿಯಳಂತೂ ಆಗಿಯೇ ಆಗಿರುತ್ತಾಳೆ. ಇದರ ಜೊತೆ ಜೊತೆಗೆ ಆಕೆ ಕುಟುಂಬದಲ್ಲಿ ತನ್ನದೇ ಆದ ವಿಶಿಷ್ಟ ಹಾಗೂ ಮಹತ್ವದ ಸ್ಥಾನವನ್ನಂತೂ ಹೊಂದಿಯೇ ಇರುತ್ತಾಳೆ. ಯಾವ ಅಣ್ಣನ ಮೇಲೆ ಈವರೆಗೆ ಕೇವಲ ತಂಗಿಗಷ್ಟೇ ಹಕ್ಕು ಇರುತ್ತೊ, ಅತ್ತಿಗೆ ಬಂದ ಮೇಲೆ ಆ ಹಕ್ಕು ತನ್ನ ಕೈಯಿಂದ ಜಾರಿ ಹೋಗುತ್ತಿದೆ ಎಂದು ಆಕೆಗೆ ಅನಿಸಲಾರಂಭಿಸುತ್ತದೆ. ಏಕೆಂದರೆ ಅಣ್ಣನ ಜೀವನದಲ್ಲಿ ಅತ್ತಿಗೆಯ ಸ್ಥಾನ ಹೆಚ್ಚು ಮಹತ್ವಪೂರ್ಣ ಆಗಿಬಿಡುತ್ತದೆ.
ಕುಟುಂಬದಲ್ಲಿ ಹೊಸ ಸದಸ್ಯೆಯ ರೂಪದಲ್ಲಿ ಪ್ರವೇಶ ಪಡೆಯುವ ಅತ್ತಿಗೆಯು ನಾದಿನಿಯ ಕಣ್ಣಲ್ಲಿ ಚುಚ್ಚತೊಡಗುತ್ತಾಳೆ. ಎಷ್ಟೋ ಸಲ ನಾದಿನಿ ಅತ್ತಿಗೆಯನ್ನು ತನ್ನ ಪ್ರತಿಸ್ಪರ್ಧಿ ಎಂದು ಭಾವಿಸುತ್ತಾಳೆ ಹಾಗೂ ತನ್ನ ಕಠೋರ ವರ್ತನೆಯಿಂದ ಅಣ್ಣ ಅತ್ತಿಗೆಯ ಜೀವನವನ್ನು ನರಕವಾಗಿಸಿಬಿಡುತ್ತಾಳೆ.
ಅನವಶ್ಯಕ ಹಸ್ತಕ್ಷೇಪ
ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿ ಆಗಿರುವ ಲೀಲಾ ಗುಪ್ತಾ ಹೀಗೆ ಹೇಳುತ್ತಾರೆ, “ನನ್ನ ಏಕೈಕ ನಾದಿನಿ ಕುಟುಂದವರೆಲ್ಲರ ಪ್ರೀತಿಪಾತ್ರಳಾಗಿದ್ದಳು. ಮದುವೆಯಾದ ಬಳಿಕ ಆಕೆ ಗಂಡನ ಮನೆಯಿಂದಲೇ ತವರು ಮನೆಯನ್ನು ನಿಯಂತ್ರಿಸುತ್ತಿದ್ದಳು. ಆಕೆ ತವರಿಗೆ ಬಂದರೆ, ಅತ್ತೆ ಮಾವ ಕೂಡ ಆಕೆ ಹೇಳಿದ್ದೇ ಸರಿ ಎನ್ನುತ್ತಿದ್ದರು. ನಾನು ನನಗೆಂದು ಇಷ್ಟಪಟ್ಟು ಯಾವುದಾದರೂ ಬಟ್ಟೆ, ಉಡುಗೊರೆ ತೆಗೆದುಕೊಂಡು ಬಂದರೆ ಅದು ಅವಳದ್ದೇ ಆಗಿಬಿಡುತ್ತಿತ್ತು. ನನ್ನ ಹುಟ್ಟುಹಬ್ಬದಂದು ಗಂಡ ನನಗೆಂದು ತಂದುಕೊಟ್ಟ ಉಡುಗೊರೆ ಅವಳಿಗೆ ಇಷ್ಟ ಆಗಿಬಿಟ್ಟರೆ, ಅದು ಅವಳ ಬ್ಯಾಗ್ ಸೇರುತ್ತಿತ್ತು.
“ನನ್ನ ಮಕ್ಕಳು ದೊಡ್ಡವರಾದ ಬಳಿಕ ಆ ತೆರನಾದ ವರ್ತನೆಯನ್ನು ವಿರೋಧಿಸತೊಡಗಿದರು. ಅದಕ್ಕೂ ಮುಂಚೆ ನಾನು ನನ್ನ ಇಚ್ಛೆಗಳ ಕತ್ತು ಹಿಸುಕಿಬಿಡುತ್ತಿದ್ದೆ. ಯಾವುದೇ ಪ್ರತೀಕಾರ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಏನಾದರೂ ಎದುರುತ್ತರ ಕೊಟ್ಟರೆ ಅತ್ತೆ ಮಾವನ ಜೊತೆಗೆ ಗಂಡ ಕೂಡ ಮುಖ ಊದಿಸಿಕೊಳ್ಳುತ್ತಿದ್ದರು.”
ಶುಷ್ಕ ವರ್ತನೆ
ತಮ್ಮ ವೈವಾಹಿಕ ಜೀವನದ 10 ವರ್ಷಗಳನ್ನು ನೆನಪಿಸಿಕೊಂಡು ಅರುಣಾ ಬಹಳ ದುಃಖಿತರಾಗುತ್ತಾರೆ. ಅವರು ಹೇಳುತ್ತಾರೆ, “ನನಗಿಬ್ಬರು ನಾದಿನಿಯರು. ಒಬ್ಬಳು ಗಂಡನಿಗಿಂತ ದೊಡ್ಡವಳು, ಇನ್ನೊಬ್ಬಳು ಗಂಡನಿಗಿಂತ ಚಿಕ್ಕವಳು. ಹಿರಿಯ ನಾದಿನಿ ಶ್ರೀಮಂತ ಕುಟುಂಬದಲ್ಲಿದ್ದಾಳೆ. ಅತ್ತೆ ಮಾವನಿಗೆ ಅತ್ಯಂತ ಪ್ರೀತಿಪಾತ್ರಳು. ಅವಳು ಮನೆಗೆ ಬರಲಿದ್ದಾಳೆ ಎಂಬ ಸುದ್ದಿ ಕಿವಿಗೆ ಬಿದ್ದರೆ ಸಾಕು, ಮನೆಯಲ್ಲಿ ಬಿರುಗಾಳಿ ಏಳುತ್ತದೆ. ಅವಳು ಮನೆಯಲ್ಲಿರುತನಕ ಪ್ರತಿಯೊಂದು ಆಗುಹೋಗುಗಳ ಮೇಲೂ ಅವಳದೇ ನಿಯಂತ್ರಣವಿರುತ್ತದೆ.
“ಚಿಕ್ಕ ನಾದಿನಿಯ ಮನೆ ಪರಿಸ್ಥಿತಿ ಅಷ್ಟು ಸರಿಯಿಲ್ಲ. ಅವಳು ಮನೆಗೆ ಬಂದಾಗೆಲ್ಲ ಆಕೆಗೆ ಬೇಕಾಗುವ ವಸ್ತುಗಳನ್ನೆಲ್ಲ ತೆಗೆದುಕೊಂಡು ಹೋಗುತ್ತಾಳೆ. ಆಗ ನನ್ನ ಹಾಗೂ ನನ್ನ ಮಕ್ಕಳ ಅವಶ್ಯಕತೆಗಳ ಬಗ್ಗೆ ಯಾರೂ ಗಮನವನ್ನೇ ಕೊಡುವುದಿಲ್ಲ. ಅವಳು ಬಂದಾಗ ನನ್ನ ಸ್ಥಿತಿ ಮನೆಗೆಲಸದವಳ ರೀತಿ ಆಗಿಬಿಟ್ಟಿರುತ್ತದೆ. ಗಂಡ ಕೂಡ ಆಗ ನನ್ನ ಜೊತೆ ಅಪರಿಚಿತರಂತೆ ಉಳಿದುಬಿಡುತ್ತಾರೆ.”
ಜೀವನವಿಡಿಯ ಕಷ್ಟ
ಅನಿತಾಳಿಗೆ ಇದು ಎರಡನೇ ಮದುವೆ. ಗಂಡನ ಮನೆಯಲ್ಲಿ ಗಂಡ ಅತ್ತೆಯ ಜೊತೆ ಅವಿವಾಹಿತ ನಾದಿನಿಯೊಬ್ಬಳು ಇದ್ದಾಳೆ. “ಆಕೆ ಒಂದು ಕಂಪನಿಯಲ್ಲಿ ಮ್ಯಾನೇಜರ್. ನಾದಿನಿಯ ಎದುರು ಅತ್ತೆಗೆ ಏನೊಂದೂ ಹೊಳೆಯುವುದಿಲ್ಲ. ಮನೆ ಆಗುಹೋಗುಗಳು ಆಕೆಯ ಆಣತಿಯಂತೆ ನಡೆಯುತ್ತವೆ. ಆಕೆಗೆ ಮದುವೆಯಾಗದ ಕಾರಣ ನಮ್ಮ ಸುಖವನ್ನು ಆಕೆಗೆ ನೋಡಲು ಆಗುವುದಿಲ್ಲ. ಆಕೆ ನನ್ನ ವಿರುದ್ಧ ಸದಾ ಚಿತಾವಣೆ ಮಾಡುತ್ತಿರುತ್ತಾಳೆ. ಮದುವೆಯಾಗಿ 8 ವರ್ಷಗಳಾದರೂ ಅತ್ತೆ ಹಾಗೂ ಗಂಡನ ಜೊತೆಗಿನ ನನ್ನ ಸಂಬಂಧ ಇನ್ನೂ ಸಾಮಾನ್ಯವಾಗಿಲ್ಲ. ಆಕೆಯಿಂದಾಗಿಯೇ ನಾವು ಹನಿಮೂನ್ ಕೂಡ ಹೋಗಲು ಆಗಲಿಲ್ಲ. ಆ ಖೇದ ನನ್ನ ಮನಸ್ಸಿನಲ್ಲಿ ಇನ್ನೂ ಹಾಗೆಯೇ ಉಳಿದಿದೆ.”
ಸುಂದರ ಸಂಬಂಧ
ಅತ್ತಿಗೆ ಹಾಗೂ ನಾದಿನಿಯ ಸಂಬಂಧ ಅತ್ಯಂತ ಸುಂದರವಾಗಿರುತ್ತದೆ. ಒಂದು ವೇಳೆ ಆ ಸಂಬಂಧವನ್ನು ಅತ್ಯಂತ ನಿಷ್ಠೆಯಿಂದ ಪಾಲಿಸಿದ್ದೇ ಆದರೆ, ಅದಕ್ಕಿಂತ ಒಳ್ಳೆಯ ಸಂಬಂಧ ಮತ್ತೊಂದು ಇರಲು ಸಾಧ್ಯವಿಲ್ಲ. ಏಕೆಂದರೆ ಹುಡುಗಿಯೊಬ್ಬಳು ಯಾರೊಬ್ಬರ ನಾದಿನಿ ಅಥವಾ ಅತ್ತಿಗೆ ಆಗಿರುತ್ತಾಳೆ. ಸಾಮಾನ್ಯವಾಗಿ ಕಂಡುಬರುವ ಸಂಗತಿಯೆಂದರೆ, ನಾದಿನಿಯರು ಅಣ್ಣನ ಬಗ್ಗೆ ಪ್ರೀತಿ ಹೊಂದಿರುತ್ತಾರೆ. ಆದರೆ ಅತ್ತಿಗೆಯ ಬಗ್ಗೆ ದ್ವೇಷ ಅಸೂಯೆಯ ಭಾವನೆ ಇಟ್ಟುಕೊಂಡಿರುತ್ತಾರೆ. ವಿವಾಹಿತ ನಾದಿನಿಯರು ಗಂಡನ ಮನೆಯಲ್ಲಿದ್ದುಕೊಂಡೇ ತಮ್ಮ ತಂದೆತಾಯಿಯರನ್ನು ಅತ್ತಿಗೆಯ ವಿರುದ್ಧ ಸಿಡಿದೇಳುವಂತೆ ಮಾಡುತ್ತಿರುತ್ತಾರೆ.
ಅತ್ತಿಗೆನಾದಿನಿಯ ಸಂಬಂಧ ಎಂದೂ ಸುಮಧರವಾಗಿರುವುದಿಲ್ಲ ಎಂಬ ಮಾತು ಸುಳ್ಳು. ಅದಕ್ಕೆ ತದ್ವಿರುದ್ಧ ಎಂಬಂತಹ ಉದಾಹರಣೆಗಳು ಕಣ್ಮುಂದೆ ಗೋಚರಿಸುತ್ತವೆ. ತಂಗಿಯೊಬ್ಬಳು ಕೇವಲ ತನ್ನ ಅಣ್ಣನ ಮುಳುಗುತ್ತಿದ್ದ ಕುಟುಂಬವನ್ನಷ್ಟೇ ಉಳಿಸಲಿಲ್ಲ. ತನ್ನ ತಂದೆ ತಾಯಿಯರಿಂದ ಅತ್ತಿಗೆಗೆ ಸಿಗಬೇಕಾದ ಗೌರವವನ್ನೂ ದೊರಕಿಸಿಕೊಟ್ಟಳು.
ನೀಲಾ ಶ್ರೀನಿವಾಸ್ ಇಬ್ಬರು ಸೋದರರ ಮುದ್ದಿನ ತಂಗಿ. “ಎರಡನೇ ಅಣ್ಣ ತನ್ನಿಚ್ಛೆಯ ಮೇರೆಗೆ ಮದುವೆ ಮಾಡಿಕೊಂಡಿದ್ದ. ಹೀಗಾಗಿ ಅಲ್ಲಿ ಅಮ್ಮ ಸೊಸೆಯ ಜೊತೆ ಅತ್ಯಂತ ಕಟುವಾಗಿ ನಡೆದುಕೊಳ್ಳುತ್ತಿದ್ದರು. ಅತ್ತಿಗೆ ಆ ಕೋಪವನ್ನು ಅಣ್ಣನ ಮೇಲೆ ತೀರಿಸಿಕೊಳ್ಳುತ್ತಿದ್ದಳು. ಹೀಗಾಗಿ ಅಣ್ಣ ಅತ್ತಿಗೆ ಸಹ ಜಗಳ ಆಡುತ್ತಿದ್ದರು. ಆ ಜಗಳ ಮದುವೆ ಮುರಿದುಬೀಳುವ ಹಂತಕ್ಕೂ ಹೋಯಿತು. ನನ್ನ ತವರು ಮನೆಯ ಈ ಕೆಲಸ ನನಗೆ ನೋಡಲು ಆಗಲಿಲ್ಲ. ಆ ಸಮಯದಲ್ಲಿ ನನ್ನ ಗಂಡ ನನಗೆ ಬೆಂಬಲ ನೀಡಿದರು. ನಾವಿಬ್ಬರೂ ನಾಲ್ವರನ್ನೂ ಕೂರಿಸಿಕೊಂಡು ಮಾತನಾಡಿಸಿದೆವು. ಒಬ್ಬ ಕೌನ್ಸೆಲರ್‌ನ ಸಹಾಯದಿಂದ ಅವರ ಸಂಬಂಧವನ್ನು ಪುನಃ ಸರಿದಾರಿಗೆ ತಂದೆವು.”
ನೀಲಾಳ ಅಣ್ಣ ಸುನೀಲ್ ಹೇಳುತ್ತಾರೆ, “ನನ್ನ ತಂಗಿಯಂಥವರು ಎಲ್ಲರಿಗೂ ಸಿಗಲಿ. ಆಕೆ ನನ್ನ ವೈವಾಹಿಕ ಜೀವನಕ್ಕೆ ಜೀವದಾನ ನೀಡಿದವಳು.”
ಅತ್ತಿಗೆ ಅಂಜಲಿ ಕೂಡ ತನ್ನ ನಾದಿನಿಯ ಬಗ್ಗೆ ಹೊಗಳದೇ ಇರುವುದಿಲ್ಲ, “ನಮ್ಮ ಸಂಬಂಧ ಮುರಿದುಬೀಳುವ ಹಂತದಲ್ಲಿ ನಾದಿನಿ ಬಂದು ಕಾಪಾಡಿದಳು. ಆಕೆಗೆ ನಾನೆಷ್ಟು ಕೃತಜ್ಞತೆ ಹೇಳಿದರೂ ಕಡಿಮೆಯೇ.”
ಜೀವನದಲ್ಲಿ ಪ್ರತಿಯೊಂದು ಸಂಬಂಧಕ್ಕೂ ತನ್ನದೇ ಆದ ಮಹತ್ವವಿರುತ್ತದೆ. ಪ್ರತಿಯೊಂದು ಸಂಬಂಧಕ್ಕೂ ತನ್ನದೇ ಆದ ಇತಿಮಿತಿಗಳಿರುತ್ತವೆ. ಅದನ್ನು ಅದರದ್ದೇ ಆದ ರೀತಿಯಲ್ಲಿ ನಿಭಾಯಿಸಿದರೆ ಅದು ಮತ್ತಷ್ಟು ಸುಂದರವಾಗುತ್ತದೆ.
ನಾದಿನಿಯರು ಏನು ಮಾಡಬೇಕು?
– ಅತ್ತಿಗೆ ಎಂತಹ ವ್ಯಕ್ತಿಯೆಂದರೆ, ಆಕೆಯನ್ನು ನಿಮ್ಮ ಅಣ್ಣ ಮದುವೆ ಮಾಡಿಕೊಂಡು ಬಂದಿದ್ದಾನೆ. ಆಕೆ ಅಣ್ಣನ ಜೀವನದಲ್ಲಿ ಮಹತ್ವದ ಸ್ಥಾನ ಹೊಂದಿದ್ದಾಳೆ. ಹೀಗಾಗಿ ತಂಗಿಯಾಗಿ ಅಣ್ಣನಿಂದ ನಿಮಗೆಷ್ಟು ಗೌರವ ಸಿಗುತ್ತೊ, ಅಷ್ಟೇ ಗೌರವ ಅತ್ತಿಗೆಗೂ ದೊರೆಯಬೇಕು. ನೀವು ಖಳನಾಯಕಿಯಾಗಿ ಅಣ್ಣನ ದಾಂಪತ್ಯ ಜೀವನದಲ್ಲಿ ವಿಷ ಬೆರೆಸುವ ಬದಲು, ಪ್ರೀತಿ ಬೆರೆಸುವ ಪ್ರಯತ್ನ ಮಾಡಿ.
– ಸ್ಮಿತಾಳ ಮದುವೆಯಾದಾಗ ಆಕೆಯ ನಾದಿನಿಯ ವಯಸ್ಸು 27 ಆಗಿತ್ತು. ಆಕೆ ಅವಿವಾಹಿತೆ. 2 ತಿಂಗಳ ಬಳಿಕ ಆಕೆ ಒಂದು ದಿನ ತನಗೆ ಬೇರೆ ರೂಮಿನಲ್ಲಿ ಭಯ ಆಗುತ್ತಿದೆಯೆಂದು ಹೇಳಿ ಅತ್ತಿಗೆಯ ರೂಮಿನಲ್ಲಿ ಹಾಸಿಗೆ ಹಾಸಿದಳು. ನೀವು ತಂದೆತಾಯಿಗೆ ಹಾಗೂ ಅಣ್ಣನಿಗೆ ಎಷ್ಟೇ ಪ್ರೀತಿ ಪಾತ್ರರಾಗಿರಿ, ಅವರ ವೈಯಕ್ತಿಕ ಜೀವನದಲ್ಲಿ ಮಾತ್ರ ಹಸ್ತಕ್ಷೇಪ ಮಾಡಲು ಹೋಗಬೇಡಿ.
– ನೀವು ನಿಮ್ಮ ಅತ್ತೆಯ ಮನೆಯಲ್ಲಿ ನಿಮಗೆ ಎಷ್ಟು ಗೌರವ ಸಿಗಬೇಕೆಂದು ಅಪೇಕ್ಷಿಸುವಿರೊ, ಅಷ್ಟೇ ಗೌರವವನ್ನು ನಿಮ್ಮ ಅತ್ತಿಗೆಗೂ ಕೊಡಿ. ಅತ್ತಿಗೆಯನ್ನು ಗೆಳತಿಯಂತೆ ಭಾವಿಸಿ ಹಾಗೂ ನಿಮ್ಮ ಮನೆಯಲ್ಲಿ ಹೊಂದಿಕೊಳ್ಳಲು ಅವಕಾಶ ಮಾಡಿಕೊಡಿ.
– ಮದುವೆಯ ಬಳಿಕ ನೀವು ನಿಮ್ಮ ಕುಟುಂಬ ನಡೆಸಲು ಹೇಗೆ ಅಪೇಕ್ಷಿಸುವಿರೊ, ಅದೇ ರೀತಿ ಅತ್ತಿಗೆಗೂ ಅವಕಾಶ ಕೊಡಿ. ಅನವಶ್ಯಕ ಹಸ್ತಕ್ಷೇಪ ಮಾಡಬೇಡಿ.
– ಹೆಣ್ಣು ಮಕ್ಕಳು ತಮ್ಮ ತಂದೆತಾಯಿಗೆ ಗೌರವ ಕೊಡದೇ ಇದ್ದರೂ, ಅತ್ತಿಗೆಯಿಂದ ಮಾತ್ರ ಅದನ್ನು ಅಪೇಕ್ಷಿಸುತ್ತಾರೆ. ಅತ್ತಿಗೆಗೆ ಅನಾವಶ್ಯಕ ತಿಳಿವಳಿಕೆ ಕೊಡಲು ಹೋಗಬೇಡಿ.
– ಮದುವೆಗೂ ಮುಂಚೆ ನೀವು ಅಣ್ಣನ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿದ್ದಿರಿ. ಈಗ ಆ ಜವಾಬ್ದಾರಿಯನ್ನು ಅತ್ತಿಗೆಗೆ ಬಿಟ್ಟುಕೊಡಿ. ಅವರ ಮಧ್ಯೆ ಪ್ರವೇಶ ಮಾಡಬೇಡಿ.
– ನೀವು ಅವಿವಾಹಿತೆ ಹಾಗೂ ಸೋದರನಿಗಿಂತಲೂ ದೊಡ್ಡವರಾಗಿರಬಹುದು. ನೀವು ಅವರ ಜೀವನದಲ್ಲಿ ಕಾರಣವಿಲ್ಲದೆ ಹಸ್ತಕ್ಷೇಪ ಮಾಡಲು ಹೋಗಬೇಡಿ. ನಿಮ್ಮ ತಮ್ಮನಿಗೆ ತನ್ನದೇ ಆದ ಜೀವನವಿದೆ ಎಂಬುದು ನಿಮಗೆ ನೆನಪಿರಲಿ.
– ಪಿ. ಮುಕ್ತ