ತವರಿನಲ್ಲಿ ಕುಟುಂಬದವರೆಲ್ಲರ ಅತ್ಯಂತ ಪ್ರೀತಿ ಪಾತ್ರ ಹಾಗೂ ತನ್ನದೇ ಆದ ರೀತಿಯಲ್ಲಿ ಜೀವನ ನಡೆಸುವ ಹುಡುಗಿ ಮದುವೆಯಾಗಿ ಗಂಡನ ಮನೆಗೆ ಹೋದಾಗ ಹೊಸ ಮನೆಯ ಜವಾಬ್ದಾರಿ ಆಕೆಯ ಹೆಗಲಿಗೆ ಬೀಳುತ್ತದೆ. ಅತ್ತೆ, ಮಾವ, ನಾದಿನಿ, ಮೈದುನರಂತಹ ಅನೇಕ ಸಂಬಂಧಗಳು ಆಕೆಯೊಂದಿಗೆ ಸೇರಿಕೊಳ್ಳುತ್ತವೆ. ಈ ಎಲ್ಲ ಸಂಬಂಧಗಳನ್ನು ನಿಭಾಯಿಸುವುದು ಹಾಗೂ ಅವುಗಳ ಹಿರಿಮೆ ಹೆಚ್ಚಿಸುವುದು ನವವಿವಾಹಿತೆಗೆ ಬಹುದೊಡ್ಡ ಸವಾಲಾಗಿ ಪರಿಣಮಿಸುತ್ತದೆ.
ನಾದಿನಿ ವಯಸ್ಸಿನಲ್ಲಿ ಚಿಕ್ಕವಳೇ ಆಗಿರಬಹುದು ಅಥವಾ ದೊಡ್ಡವಳು, ಅವಳು ಎಲ್ಲರಿಗೂ ಪ್ರಿಯಳಂತೂ ಆಗಿಯೇ ಆಗಿರುತ್ತಾಳೆ. ಇದರ ಜೊತೆ ಜೊತೆಗೆ ಆಕೆ ಕುಟುಂಬದಲ್ಲಿ ತನ್ನದೇ ಆದ ವಿಶಿಷ್ಟ ಹಾಗೂ ಮಹತ್ವದ ಸ್ಥಾನವನ್ನಂತೂ ಹೊಂದಿಯೇ ಇರುತ್ತಾಳೆ. ಯಾವ ಅಣ್ಣನ ಮೇಲೆ ಈವರೆಗೆ ಕೇವಲ ತಂಗಿಗಷ್ಟೇ ಹಕ್ಕು ಇರುತ್ತೊ, ಅತ್ತಿಗೆ ಬಂದ ಮೇಲೆ ಆ ಹಕ್ಕು ತನ್ನ ಕೈಯಿಂದ ಜಾರಿ ಹೋಗುತ್ತಿದೆ ಎಂದು ಆಕೆಗೆ ಅನಿಸಲಾರಂಭಿಸುತ್ತದೆ. ಏಕೆಂದರೆ ಅಣ್ಣನ ಜೀವನದಲ್ಲಿ ಅತ್ತಿಗೆಯ ಸ್ಥಾನ ಹೆಚ್ಚು ಮಹತ್ವಪೂರ್ಣ ಆಗಿಬಿಡುತ್ತದೆ.
ಕುಟುಂಬದಲ್ಲಿ ಹೊಸ ಸದಸ್ಯೆಯ ರೂಪದಲ್ಲಿ ಪ್ರವೇಶ ಪಡೆಯುವ ಅತ್ತಿಗೆಯು ನಾದಿನಿಯ ಕಣ್ಣಲ್ಲಿ ಚುಚ್ಚತೊಡಗುತ್ತಾಳೆ. ಎಷ್ಟೋ ಸಲ ನಾದಿನಿ ಅತ್ತಿಗೆಯನ್ನು ತನ್ನ ಪ್ರತಿಸ್ಪರ್ಧಿ ಎಂದು ಭಾವಿಸುತ್ತಾಳೆ ಹಾಗೂ ತನ್ನ ಕಠೋರ ವರ್ತನೆಯಿಂದ ಅಣ್ಣ ಅತ್ತಿಗೆಯ ಜೀವನವನ್ನು ನರಕವಾಗಿಸಿಬಿಡುತ್ತಾಳೆ.
ಅನವಶ್ಯಕ ಹಸ್ತಕ್ಷೇಪ
ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿ ಆಗಿರುವ ಲೀಲಾ ಗುಪ್ತಾ ಹೀಗೆ ಹೇಳುತ್ತಾರೆ, ``ನನ್ನ ಏಕೈಕ ನಾದಿನಿ ಕುಟುಂದವರೆಲ್ಲರ ಪ್ರೀತಿಪಾತ್ರಳಾಗಿದ್ದಳು. ಮದುವೆಯಾದ ಬಳಿಕ ಆಕೆ ಗಂಡನ ಮನೆಯಿಂದಲೇ ತವರು ಮನೆಯನ್ನು ನಿಯಂತ್ರಿಸುತ್ತಿದ್ದಳು. ಆಕೆ ತವರಿಗೆ ಬಂದರೆ, ಅತ್ತೆ ಮಾವ ಕೂಡ ಆಕೆ ಹೇಳಿದ್ದೇ ಸರಿ ಎನ್ನುತ್ತಿದ್ದರು. ನಾನು ನನಗೆಂದು ಇಷ್ಟಪಟ್ಟು ಯಾವುದಾದರೂ ಬಟ್ಟೆ, ಉಡುಗೊರೆ ತೆಗೆದುಕೊಂಡು ಬಂದರೆ ಅದು ಅವಳದ್ದೇ ಆಗಿಬಿಡುತ್ತಿತ್ತು. ನನ್ನ ಹುಟ್ಟುಹಬ್ಬದಂದು ಗಂಡ ನನಗೆಂದು ತಂದುಕೊಟ್ಟ ಉಡುಗೊರೆ ಅವಳಿಗೆ ಇಷ್ಟ ಆಗಿಬಿಟ್ಟರೆ, ಅದು ಅವಳ ಬ್ಯಾಗ್ ಸೇರುತ್ತಿತ್ತು.
``ನನ್ನ ಮಕ್ಕಳು ದೊಡ್ಡವರಾದ ಬಳಿಕ ಆ ತೆರನಾದ ವರ್ತನೆಯನ್ನು ವಿರೋಧಿಸತೊಡಗಿದರು. ಅದಕ್ಕೂ ಮುಂಚೆ ನಾನು ನನ್ನ ಇಚ್ಛೆಗಳ ಕತ್ತು ಹಿಸುಕಿಬಿಡುತ್ತಿದ್ದೆ. ಯಾವುದೇ ಪ್ರತೀಕಾರ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಏನಾದರೂ ಎದುರುತ್ತರ ಕೊಟ್ಟರೆ ಅತ್ತೆ ಮಾವನ ಜೊತೆಗೆ ಗಂಡ ಕೂಡ ಮುಖ ಊದಿಸಿಕೊಳ್ಳುತ್ತಿದ್ದರು.''
ಶುಷ್ಕ ವರ್ತನೆ
ತಮ್ಮ ವೈವಾಹಿಕ ಜೀವನದ 10 ವರ್ಷಗಳನ್ನು ನೆನಪಿಸಿಕೊಂಡು ಅರುಣಾ ಬಹಳ ದುಃಖಿತರಾಗುತ್ತಾರೆ. ಅವರು ಹೇಳುತ್ತಾರೆ, ``ನನಗಿಬ್ಬರು ನಾದಿನಿಯರು. ಒಬ್ಬಳು ಗಂಡನಿಗಿಂತ ದೊಡ್ಡವಳು, ಇನ್ನೊಬ್ಬಳು ಗಂಡನಿಗಿಂತ ಚಿಕ್ಕವಳು. ಹಿರಿಯ ನಾದಿನಿ ಶ್ರೀಮಂತ ಕುಟುಂಬದಲ್ಲಿದ್ದಾಳೆ. ಅತ್ತೆ ಮಾವನಿಗೆ ಅತ್ಯಂತ ಪ್ರೀತಿಪಾತ್ರಳು. ಅವಳು ಮನೆಗೆ ಬರಲಿದ್ದಾಳೆ ಎಂಬ ಸುದ್ದಿ ಕಿವಿಗೆ ಬಿದ್ದರೆ ಸಾಕು, ಮನೆಯಲ್ಲಿ ಬಿರುಗಾಳಿ ಏಳುತ್ತದೆ. ಅವಳು ಮನೆಯಲ್ಲಿರುತನಕ ಪ್ರತಿಯೊಂದು ಆಗುಹೋಗುಗಳ ಮೇಲೂ ಅವಳದೇ ನಿಯಂತ್ರಣವಿರುತ್ತದೆ.
``ಚಿಕ್ಕ ನಾದಿನಿಯ ಮನೆ ಪರಿಸ್ಥಿತಿ ಅಷ್ಟು ಸರಿಯಿಲ್ಲ. ಅವಳು ಮನೆಗೆ ಬಂದಾಗೆಲ್ಲ ಆಕೆಗೆ ಬೇಕಾಗುವ ವಸ್ತುಗಳನ್ನೆಲ್ಲ ತೆಗೆದುಕೊಂಡು ಹೋಗುತ್ತಾಳೆ. ಆಗ ನನ್ನ ಹಾಗೂ ನನ್ನ ಮಕ್ಕಳ ಅವಶ್ಯಕತೆಗಳ ಬಗ್ಗೆ ಯಾರೂ ಗಮನವನ್ನೇ ಕೊಡುವುದಿಲ್ಲ. ಅವಳು ಬಂದಾಗ ನನ್ನ ಸ್ಥಿತಿ ಮನೆಗೆಲಸದವಳ ರೀತಿ ಆಗಿಬಿಟ್ಟಿರುತ್ತದೆ. ಗಂಡ ಕೂಡ ಆಗ ನನ್ನ ಜೊತೆ ಅಪರಿಚಿತರಂತೆ ಉಳಿದುಬಿಡುತ್ತಾರೆ.''