ತಡ ಮಾಡಿದರೆ ಲೈಂಗಿಕ ರೋಗದ ಚಿಕಿತ್ಸೆ ದುಬಾರಿಯೂ ಆಗಬಹುದು ಕಷ್ಟಕರವಾಗಿಯೂ ಪರಿಣಮಿಸಬಹುದು.
ಮದುವೆಯಾದ ಕೆಲವು ತಿಂಗಳುಗಳಲ್ಲಿ ರೇಖಾಳ ಗುಪ್ತಾಂಗದಿಂದ ಆಗಾಗ ದ್ರವ ಪದಾರ್ಥ ಹೊರಸೂಸತೊಡಗಿತು. ಆದರೆ ಆಕೆ ಈ ಬಗ್ಗೆ ಗಮನ ಕೊಡಲಿಲ್ಲ. ಆದರೆ ಕೆಲವು ದಿನಗಳ ಬಳಿಕ ಆ ದ್ರವ ಪದಾರ್ಥದಿಂದ ದುರ್ವಾಸನೆ ಬರತೊಡಗಿತು. ಅಕ್ಕಪಕ್ಕದಲ್ಲಿ ತುರಿಕೆಯ ಅನುಭವ ಕೂಡ ಉಂಟಾಯಿತು. ಆಕೆ ತಕ್ಷಣವೇ ವೈದ್ಯರ ಬಳಿ ಹೋದಳು. ವೈದ್ಯರು ಪರೀಕ್ಷಿಸಿ ಇದು ಲೈಂಗಿಕ ರೋಗ ಎಂದು ಹೇಳಿದರಲ್ಲದೆ, ನೀವು ಸಕಾಲಕ್ಕೆ ಬಂದಿದ್ದರಿಂದ ಕಡಿಮೆ ಖರ್ಚಿನಲ್ಲಿ ಇದಕ್ಕೆ ಚಿಕಿತ್ಸೆ ಮಾಡಬಹುದು ಎಂದು ಹೇಳಿದರು.
ಸೀಮಾ ತನ್ನ ಗಂಡನೊಂದಿಗೆ ದೈಹಿಕ ಸಂಬಂಧ ಹೊಂದಿದಾಗೆಲ್ಲ ಆಕೆಗೆ ವಿಪರೀತ ನೋವಾಗುತ್ತದೆ. ಆಕೆ ಈ ಕುರಿತಂತೆ ವೈದ್ಯರ ಮುಂದೆ ಹೇಳಿಕೊಂಡಾಗ, ವೈದ್ಯರು ಆಕೆಗೆ ಲೈಂಗಿಕ ಸೋಂಕು ಉಂಟಾಗಿದೆ ಎಂದರು. ಸಕಾಲಕ್ಕೆ ಚಿಕಿತ್ಸೆ ಕೊಡಿಸಿದ್ದರಿಂದ ಆಕೆಯ ಆ ತೊಂದರೆ ನಿವಾರಣೆಯಾಯಿತು.
ಲೈಂಗಿಕ ರೋಗ ಗಂಡ ಹೆಂಡತಿಯ ಸಂಬಂಧದಲ್ಲಿ ಬಾಧಕವಾಗಿ ಪರಿಣಮಿಸುತ್ತದೆ. ಅದೇ ಕಾರಣದಿಂದ ಸಂಬಂಧ ಬೆಳೆಸಲು ಅವರಿಗೆ ಹೆದರಿಕೆಯಾಗುತ್ತದೆ. ಎಷ್ಟೋ ಸಲ ಲೈಂಗಿಕ ರೋಗದ ಕಾರಣದಿಂದ ಗುಪ್ತಾಂಗದಿಂದ ದುರ್ವಾಸನೆ ಬರುತ್ತದೆ. ಹೀಗಾಗಿ ಗಂಡ ಹೆಂಡತಿ ಲೈಂಗಿಕ ಸಂಬಂಧದ ಬಗ್ಗೆ ನಿರಾಸಕ್ತಿ ತೋರಿಸುತ್ತಾರೆ. ಇದೇ ನೆಪವೊಡ್ಡಿ ಕೆಲವು ಪುರುಷರು ಬಾಹ್ಯ ಸಂಬಂಧ ಬೆಳೆಸುತ್ತಾರೆ.
ಏನಿದು ಲೈಂಗಿಕ ರೋಗ?
ಗುಪ್ತಾಂಗದಲ್ಲಿ ಉಂಟಾಗುವ ರೋಗಗಳನ್ನು ಲೈಂಗಿಕ ರೋಗ ಎಂದು ಹೇಳಲಾಗುತ್ತದೆ. ಇದು ಒಬ್ಬ ಪುರುಷ ಮತ್ತು ಮಹಿಳೆಯ ದೈಹಿಕ ಸಂಪರ್ಕದಿಂದ ಉಂಟಾಗಬಹುದು ಅಥವಾ ಬಹಳಷ್ಟು ಜನರೊಂದಿಗೆ ಸಂಬಂಧ ಇಟ್ಟುಕೊಳ್ಳುವುದರಿಂದಲೂ ಇದು ಆಗಬಹುದು. ಲೈಂಗಿಕ ರೋಗಗ್ರಸ್ತ ತಾಯಿಗೆ ಹುಟ್ಟುವ ಮಗುವಿಗೂ ಅದು ತಗುಲಬಹುದು. ತಾಯಿಗೆ ಯಾವುದಾದರೂ ಲೈಂಗಿಕ ರೋಗವಿದ್ದರೆ, ವೈದ್ಯರ ಸಲಹೆಯ ಮೇರೆಗೆ ಶಸ್ತ್ರಚಿಕಿತ್ಸೆ ಮಾಡಿಸಿಯೇ ಹೆರಿಗೆ ಮಾಡಿಸಬೇಕಾಗುತ್ತದೆ. ಇದರಿಂದ ಮಗು ಯೋನಿಯ ಸಂಪರ್ಕಕ್ಕೆ ಬರದೆ ಲೈಂಗಿಕ ರೋಗದಿಂದ ರಕ್ಷಿಸಲ್ಪಡುತ್ತದೆ.
ಒಮ್ಮೊಮ್ಮೆ ಲೈಂಗಿಕ ರೋಗದ ಲಕ್ಷಣಗಳು ಗೋಚರಿಸುವುದೇ ಇಲ್ಲ. ಆದರೂ ಆ ಬಳಿಕ ಅದರ ಪರಿಣಾಮಗಳು ಮಾತ್ರ ಭೀಕರವಾಗಿರುತ್ತವೆ. ಹೀಗಾಗಿ ಲೈಂಗಿಕ ರೋಗದ ಲಕ್ಷಣಗಳು ಅಷ್ಟೇನೂ ಇಲ್ಲ ಎಂದು ನಿರ್ಲಕ್ಷಿಸದೆ ಅದಕ್ಕೆ ಚಿಕಿತ್ಸೆ ಕೊಡಿಸಿ.
ಲೈಂಗಿಕ ರೋಗ ಸಾಧಾರಣ ಲಕ್ಷಣಗಳನ್ನು ಹೊಂದಿದ್ದರೆ, ಅದು ತಂತಾನೇ ವಾಸಿಯಾಗುತ್ತದೆ. ಆದರೆ ಅದರ ಬ್ಯಾಕ್ಟೀರಿಯಾಗಳು ದೇಹದಲ್ಲಿ ಹಾಗೆಯೇ ಉಳಿದಿರುತ್ತವೆ. ಅವೇ ಒಮ್ಮೊಮ್ಮೆ ಜೋರಾಗಿ ದಾಳಿ ನಡೆಸಬಹುದು.
ಲೈಂಗಿಕ ರೋಗದ ಗಾಯಗಳು ಎಷ್ಟೊಂದು ಸೂಕ್ಷ್ಮವಾಗಿರುತ್ತದೆಂದರೆ, ಅವನ್ನು ಪತ್ತೆಹಚ್ಚಲು ಕೂಡ ಆಗುವುದಿಲ್ಲ. ಲೈಂಗಿಕ ರೋಗದ ಪ್ರಭಾವ 2-20 ವಾರಗಳ ಮಧ್ಯದಲ್ಲಿ ಯಾವಾಗ ಬೇಕಾದರೂ ಪ್ರತ್ಯಕ್ಷವಾಗಬಹುದು. ಇದರ ದುಷ್ಪರಿಣಾಮವೆಂಬಂತೆ ಮಹಿಳೆಯರಿಗೆ ಮುಟ್ಟಿನ ಮಧ್ಯಭಾಗದಲ್ಲಿಯೇ ಬರಬಹುದು. ಲೈಂಗಿಕ ರೋಗಗಳಲ್ಲಿ ಹಲವು ಪ್ರಕಾರಗಳಿವೆ. ಅವುಗಳ ಬಗ್ಗೆ ಮೊದಲೇ ಗೊತ್ತಿದ್ದರೆ ಚಿಕಿತ್ಸೆ ಸುಲಭವಾಗುತ್ತದೆ.
ಹರ್ಪಿಸ್ : ಇದೊಂದು ಸಾಮಾನ್ಯ ಲೈಂಗಿಕ ರೋಗ. ಈ ರೋಗ ಉಂಟಾದಾಗ ಮೂತ್ರ ಮಾಡುವಾಗ ಅತಿ ಉರಿ ಉಂಟಾಗುತ್ತದೆ. ಮೂತ್ರದ ಜೊತೆಗೆ ಒಮ್ಮೊಮ್ಮೆ ಕೀವು ಕೂಡ ಬರುತ್ತದೆ. ಜ್ವರ ಕೂಡ ಬರುತ್ತದೆ. ಹರ್ಪಿಸ್ ಉಂಟಾದವರಿಗೆ ಬಾಯಿ ಹಾಗೂ ಯೋನಿ ಭಾಗದಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳು ಏಳುತ್ತವೆ. ಆರಂಭದಲ್ಲಿ ಅವು ತಂತಾನೇ ಗುಣವಾಗುತ್ತವೆ. ಮತ್ತೊಮ್ಮೆ ಅವು ಕಾಣಿಸಿಕೊಂಡರೆ ಚಿಕಿತ್ಸೆ ಅತ್ಯವಶ್ಯ.
ವಾರ್ಟ್ಸ್ : ಈ ಸ್ಥಿತಿಯಲ್ಲಿ ದೇಹದ ಬೇರೆ ಬೇರೆ ಕಡೆ ಚಿಕ್ಕ ಚಿಕ್ಕ ಗಂಟುಗಳು ಉಂಟಾಗುತ್ತವೆ. ಎಚ್‌ಪಿವಿ ಅಂದರೆ ಹ್ಯೂಮನ್ ಪ್ಯಾಪಿಲೋಮಾ ವೈರಸ್ ದಾಳಿಯ ಸಂದರ್ಭದಲ್ಲಿ ಈ ರೋಗ ಉಂಟಾಗುತ್ತದೆ. ಇದು 70 ಪ್ರಕಾರಗಳದ್ದಾಗಿದ್ದು, 10 ಮಿ.ಮೀ.ಗಿಂತ ಕಡಿಮೆ ಗಾತ್ರದಲ್ಲಿದ್ದರೆ, ಅವನ್ನು ದಹಿಸಲಾಗುತ್ತದೆ. 10 ಮಿ.ಮೀ.ಗಿಂತ ದೊಡ್ಡದಿದ್ದರೆ ಅವನ್ನು ಶಸ್ತ್ರಚಿಕಿತ್ಸೆಯ ಮುಖಾಂತರ ನಿವಾರಿಸಬಹುದು.
ಯೋನಿಯಲ್ಲಿ ಪಸರಿಸುವ ವೈರಸ್‌ನ್ನು `ಜನರೇಟರ್ ವಾರ್ಟ್ಸ್’ ಎಂದು ಕರೆಯಲಾಗುತ್ತದೆ. ಅದು ಯೋನಿಯ ಗರ್ಭಕಂಠದಲ್ಲಿ ಆರಿಸಿಕೊಂಡಿರುತ್ತದೆ. ಸಕಾಲದಲ್ಲಿ ಇದಕ್ಕೆ ಚಿಕಿತ್ಸೆ ಪಡೆಯದಿದ್ದರೆ, ಆ ಗಾಯ ಕ್ಯಾನ್ಸರ್ ರೂಪ ಪಡೆದುಕೊಳ್ಳಬಹುದು. 35 ವಯಸ್ಸಿನ ಬಳಿಕ ಈ ರೋಗದ ಲಕ್ಷಣಗಳು ಕಂಡುಬಂದರೆ ಎಚ್‌ಪಿವಿ ಕಲ್ಚರ್ ಮಾಡಿಸಿಕೊಳ್ಳಿ. ಅದರಿಂದ ಗಾಯದ ಬಗ್ಗೆ ಪರಿಪೂರ್ಣ ಮಾಹಿತಿ ದೊರೆಯುತ್ತದೆ.
ಗನೊರಿಯಾ : ಈ ರೋಗದಲ್ಲಿ ಮೂತ್ರನಾಳದಲ್ಲಿ ಗಾಯ ಉಂಟಾಗುತ್ತದೆ. ಅದರಿಂದಾಗಿ ಮೂತ್ರ ಮಾಡುವಾಗ ಉರಿ ಹೆಚ್ಚೆನಿಸುತ್ತದೆ. ಎಷ್ಟೋ ಸಲ ರಕ್ತ ಮತ್ತು ಕೀವು ಕೂಡ ಬರುತ್ತದೆ. ಆ್ಯಂಟಿಬಯಾಟಿಕ್ ಔಷಧಿ ಸೇವನೆಯ ಮೂಲಕ ಈ ರೋಗದ ಚಿಕಿತ್ಸೆ ಪಡೆಯಬಹುದು. ಈ ಸ್ಥಿತಿ ಮೇಲಿಂದ ಮೇಲೆ ಉಂಟಾದರೆ ಮೂತ್ರನಾಳ ಮುಚ್ಚಿಕೊಂಡುಬಿಡುತ್ತದೆ. ಆಗ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಗನೊರಿಯಾ ಉಂಟಾದಾಗ ತೀವ್ರ ಜ್ವರ ಕಾಣಿಸಿಕೊಳ್ಳುತ್ತದೆ. ಆಗ ಬ್ಯಾಕ್ಟೀರಿಯಾದ ಪರೀಕ್ಷೆಗಾಗಿ ಶಿಫಾರಸು ಮಾಡಲಾಗುತ್ತದೆ.
ಸಿಫಲಿಸ್ : ಇದು ಕೂಡ ಬ್ಯಾಕ್ಟೀರಿಯಾದಿಂದ ಹರಡುವಂತಹ ರೋಗ. ಲೈಂಗಿಕ ಸಂಪರ್ಕದಿಂದ ಇದು ಉಂಟಾಗುತ್ತದೆ. ಇಂತಹ ಸ್ಥಿತಿಯಲ್ಲಿ ಪುರುಷನ ಗುಪ್ತಾಂಗದಲ್ಲಿ ಚಿಕ್ಕ ಚಿಕ್ಕ ಗಂಟು ಕಂಡುಬರುತ್ತವೆ. ಎರಡನೇ ಹಂತದಲ್ಲಿ ಈ ರೋಗ ಬೇರೆ ಅಂಗಗಳಿಗೆ ಪಸರಿಸುತ್ತದೆ. ಮೂರನೇ ಹಂತದ ಬಳಿಕ ಇದರ ಚಿಕಿತ್ಸೆ ಅಸಾಧ್ಯವಾಗಿ ಪರಿಣಮಿಸುತ್ತದೆ. ಆಗ ಇದು ರಕ್ತನಾಳಗಳ ಮೇಲೆ ಪ್ರಭಾವ ಬೀರುತ್ತವೆ. ಆಗ ರಕ್ತನಾಳಗಳು ಒಡೆಯುತ್ತವೆ. ಈ ರೋಗ ಮಹಿಳೆ ಪುರುಷ ಇಬ್ಬರಿಗೂ ಉಂಟಾಗಬಹುದು.
ಕ್ಲೈಮಿಡಿಯಾ : ಈ ರೋಗದ ಸ್ಥಿತಿಯಲ್ಲಿ ಯೋನಿಯಲ್ಲಿ ಸಾಧಾರಣ ಸೋಂಕು ಉಂಟಾಗುತ್ತದೆ. ಯೋನಿಯ ಮುಖಾಂತರ ಇದು ಗರ್ಭಕೋಶಕ್ಕೂ ಪಸರಿಸಬಹುದು. ಇದು ಬಂಜೆತನಕ್ಕೆ ಒಂದು ಮುಖ್ಯ ಕಾರಣವಾಗುತ್ತದೆ. ಆರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದರೆ ಸರಿ. ಇಲ್ಲದಿದ್ದರೆ ಮೂತ್ರ ಸಮಯದಲ್ಲಿ ಉರಿ, ಹೊಟ್ಟೆನೋವು, ಮುಟ್ಟಿನ ಸಂದರ್ಭದಲ್ಲಿ ನೋವು, ಜ್ವರ ಹೀಗೆ ಸಾಕಷ್ಟು ತೊಂದರೆ ಕಾಣಿಸುತ್ತದೆ.
– ಡಾ. ಶೈಲಜಾ ರಾವ್
ಲೈಂಗಿಕ ರೋಗಗಳಿಂದ ಹೇಗೆ ರಕ್ಷಣೆ?
ಗುಪ್ತಾಂಗದಲ್ಲಿ ಗುಳ್ಳೆ, ತುರಿಕೆ, ಚರ್ಮದಲ್ಲಿ ಕತ್ತರಿಸಿದಂತೆ ಆಗಿರುವುದು, ತ್ವಚೆಯ ಬಣ್ಣದಲ್ಲಿ ಬದಲಾವಣೆ ಉಂಟಾದರೆ ಅದರ ಬಗ್ಗೆ ನಿರ್ಲಕ್ಷ್ಯ ತೋರಿಸಬೇಡಿ.
ಸಮಾಗಮದ ಸಮಯದಲ್ಲಿ ಕಾಂಡೋಮ್ ಬಳಸಿ. ಅದು ಲೈಂಗಿಕ ರೋಗಗಳಿಂದ ರಕ್ಷಣೆ ನೀಡುತ್ತದೆ. ಆದರೆ ಅದನ್ನು ಸರಿಯಾಗಿ ಬಳಸದಿದ್ದರೆ ಅದೂ ಕೂಡ ಲೈಂಗಿಕ ರೋಗಕ್ಕೆ ಕಾರಣವಾಗುತ್ತದೆ.
ಓರಲ್ ಸೆಕ್ಸ್ ನಲ್ಲಿ ತಮ್ಮ ಅಂಗಗಳ ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕು. ಯಾವುದೇ ತೆರನಾದ ಅಸ್ವಸ್ಥತೆ ಕೂಡ ರೋಗಕ್ಕೆ ಆಹ್ವಾನ ಕೊಡುತ್ತದೆ.
ಲೈಂಗಿಕ ರೋಗಗಳಿಗೆ ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಅದು ಅಗ್ಗ ಹಾಗೂ ಸುಲಭವಾಗಿ ನಿವಾರಣೆ ಆಗುತ್ತದೆ. ಅದರಿಂದ ದೇಹದ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗದು.
ಗರ್ಭಿಣಿಯರು ಕೂಡ ಪರೀಕ್ಷೆ ಮಾಡಿಸಬೇಕು. ಏಕೆಂದರೆ ಮಗುವಿಗೆ ರೋಗ ತಗುಲಬಾರದು.
– ಡಾ. ನೀರಜಾ