ಯಾವುದೇ ಮಹಿಳೆಯ ಜೀವನದಲ್ಲಿ ಗರ್ಭಪಾತ ಎನ್ನುವುದು ಭಾವನಾತ್ಮಕವಗಿ ಅತ್ಯಂತ ದುಃಖವನ್ನುಂಟು ಮಾಡುವ ಸಂಗತಿಯಾಗಿದೆ. ಒಂದು ಕಡೆ ಇದು ಮಾನಸಿಕ ರೂಪದಲ್ಲಿ ಬಹಳ ಹಿಂಸೆಯನ್ನುಂಟು ಮಾಡುತ್ತದೆ. ಮತ್ತೊಂದೆಡೆ ದೈಹಿಕವಾಗಿಯೂ ಸಾಕಷ್ಟು ಕಷ್ಟ ಅನುಭವಿಸಬೇಕಾಗಿ ಬರುತ್ತದೆ. ಎರಡೂ ಸ್ಥಿತಿಗಳು ಚಿಂತಾಜನಕವೇ ಸರಿ. ಅಸುರಕ್ಷಿತ ರೀತಿಯಲ್ಲಿ ಗರ್ಭಪಾತ ಮಾಡಿಸಿದಾಗ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗುತ್ತದೆ.

ಬಹಳಷ್ಟು ಮಹಿಳೆಯರಿಗೆ ಅಸುರಕ್ಷಿತ ಗರ್ಭಪಾತದ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಅಷ್ಟೇ ಏಕೆ, ಗರ್ಭಪಾತದ ಬಳಿಕ ಉಂಟಾಗುವ ತೊಂದರೆ ತಾಪತ್ರಯಗಳ ಬಗೆಗೂ, ಹೆರಿಗೆಯ ಬಳಿಕ ಆಗುವ ತೊಂದರೆಗಳಿಗಿಂತ ಕಡಿಮೆ ಏನೂ ಆಗಿರುವುದಿಲ್ಲ. ಹಾಗೊಮ್ಮೆ ಗರ್ಭಪಾತವನ್ನು ಯಾರಾದರೂ ತಜ್ಞರಲ್ಲದ ವೈದ್ಯರ ಬಳಿ ಮಾಡಿಸಿಕೊಂಡಿದ್ದರೆ, ಆಗ ಅಪಾಯ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಅಸುರಕ್ಷಿತ ಗರ್ಭಪಾತ ಯಾವುದು ಎಂದರೆ, ಸೂಕ್ತ ತರಬೇತಿ ಪಡೆಯದೆ ಇರುವ ವ್ಯಕ್ತಿಯಿಂದ ಗರ್ಭಪಾತ ಮಾಡಿಸಿಕೊಳ್ಳುವುದಾಗಿ ಇರುತ್ತದೆ. ಆ ವ್ಯಕ್ತಿಯ ಬಳಿ ಯಾವುದೇ ಡಿಗ್ರಿ ಇರುವುದಿಲ್ಲ. ಅನುಭವವಂತೂ ಇರುವುದಿಲ್ಲ. ಕಾನೂನಿನ ಪ್ರಕಾರ, ಅಂತಹ ವ್ಯಕ್ತಿಗೆ ಗರ್ಭಪಾತ ಮಾಡುವ ಅಧಿಕಾರ ಇರುವುದಿಲ್ಲ. ಅಸುರಕ್ಷಿತ ಗರ್ಭಪಾತದಿಂದ ನೋವು, ಸೋಂಕು, ಸಂತಾನಹೀನತೆ ಮುಂತಾದ ಸಮಸ್ಯೆಗಳು ಉದ್ಭವಿಸಬಹುದು. ಅಷ್ಟೇ ಅಲ್ಲ, ಕೆಲವೊಮ್ಮೆ ಸಾವು ಕೂಡ ಸಂಭವಿಸಬಹುದು.

1971ರಲ್ಲಿ ಎನ್‌ಟಿಪಿ ಆ್ಯಕ್ಟ್ (ಗರ್ಭ ಸಮಾಪ್ತಿಗೊಳಿಸುವ ಕಾನೂನು 1971)ಗೆ ಕೆಲವು ವಿಶೇಷ ಸಂದರ್ಭಗಳಲ್ಲಿ ಮಾನ್ಯತೆ ನೀಡಲಾಗಿದೆ. ಅದೂ ಕೂಡ ಮಹಿಳೆ ಅಥವಾ ಮಗುವಿನ ಪ್ರಾಣಕ್ಕೆ ಆಪತ್ತು ಇದೆ ಎಂದಾದರೆ ಈ ನಿಯಮದ ನೆರವು ಪಡೆದುಕೊಳ್ಳಬಹುದು. ಕುಟುಂಬ ಯೋಜನೆಯ ವೈಫಲ್ಯ ಇಲ್ಲವೆ ಬಲಾತ್ಕಾರದ ಕಾರಣದಿಂದ ಗರ್ಭ ಧರಿಸಿದಲ್ಲಿ ಆಗಲೂ ಕೂಡ ಗರ್ಭಪಾತ ಮಾಡುವ ಕಾನೂನು ನೆರವಿಗೆ ಬರುತ್ತದೆ. ಈ ಎಲ್ಲ ನಿರ್ಧಾರಿತ ಸಂದರ್ಭಗಳನ್ನು ಹೊರತುಪಡಿಸಿ ಗರ್ಭಪಾತ ಮಾಡಿದರೆ ಅದನ್ನು ಅಕ್ರಮ ಎಂದು ಪರಿಗಣಿಸಲಾಗುತ್ತದೆ. ಅಸುರಕ್ಷಿತ ಗರ್ಭಪಾತ ಮಹಿಳೆಯ ಆರೋಗ್ಯದ ಮೇಲೆ ಭಾರಿ ದುಷ್ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ, 2 ವಾರಗಳ ಬಳಿಕ ಹೊಟ್ಟೆಯಲ್ಲಿ ಅಸಹನೀಯ ನೋವು, ಜ್ವರ, ಯೋನಿ ರಕ್ತಸ್ರಾವ ಅಥವಾ ದುರ್ಗಂಧಯುಕ್ತ ಸ್ರಾವ ಮುಂದುವರಿಯುವ ಸಾಧ್ಯತೆ ಇರುತ್ತದೆ.

ಗರ್ಭಪಾತಕ್ಕೆ ಕಾರಣಗಳು

ಸಾಮಾನ್ಯವಾಗಿ ಕೆಲವು ಕಾರಣಗಳಿಂದಾಗಿ ಗರ್ಭಪಾತದ ಸ್ಥಿತಿ ಉಂಟಾಗುತ್ತದೆ. ಮಹಿಳೆಯ ಜೀವ ರಕ್ಷಿಸಲು ಗರ್ಭಪಾತದ ನಿರ್ಧಾರ ಕೈಗೊಳ್ಳಲಾಗುತ್ತದೆ. ಇಲ್ಲಿ ಗರ್ಭದಲ್ಲಿರುವ ಭ್ರೂಣ ಯಾವುದೊ ಭೀಕರ ರೋಗಕ್ಕೆ ತುತ್ತಾಗಿರುವ ಸಂದರ್ಭದಲ್ಲೂ ಗರ್ಭಪಾತ ಮಾಡಬೇಕಾಗಿ ಬರುತ್ತದೆ.

ಇಂತಹ ಸ್ಥಿತಿಯಲ್ಲಿ ಗರ್ಭಪಾತವೇ ಅಂತಿಮ ಪರ್ಯಾಯ ಉಪಾಯವಾಗುತ್ತದೆ. ಸಾಮಾನ್ಯವಾಗಿ ಪುತ್ರ ಅಪೇಕ್ಷೆ ಕೂಡ ಗರ್ಭಪಾತದ ಕಾರಣವಾಗಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಅನಕ್ಷರಸ್ಥರ ವಲಯದಲ್ಲಿ ಸಂಕೋಚದ ಕಾರಣದಿಂದ ಅಥವಾ ಕಡಿಮೆ ಹಣದಲ್ಲಿ ಮುಗಿದು ಹೋಗುತ್ತದೆಂಬ ಕಾರಣದಿಂದಲೂ ಅಸುರಕ್ಷಿತ ಗರ್ಭಪಾತದ ನೆರವು ಪಡೆದುಕೊಳ್ಳುವ ಮಹಿಳೆ ಇಲ್ಲವೆ ದುರಾಸೆ ಪ್ರವೃತ್ತಿಯ ವೈದ್ಯ ಕಡಿಮೆ ಮೊತ್ತದಲ್ಲಿ ಮನೆಯಲ್ಲೇ ಗರ್ಭಪಾತ ಮಾಡಬಹುದು.

ಹಿಂದುಳಿದ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಆಸ್ಪತ್ರೆಯಲ್ಲಿ ಕಾಂಪೌಂಡರ್‌ ಆಗಿರುವವರು, ರೋಗಿಗಳನ್ನು ನೋಡಿಕೊಳ್ಳುವ  ನರ್ಸ್‌ಗಳೇ ಈ ರೀತಿಯ ಅಸುರಕ್ಷಿತ ಗರ್ಭಪಾತ ಮಾಡುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ ಗರ್ಭಪಾತದ ಪ್ರಕರಣಗಳು ಹೆಚ್ಚುತ್ತಲೇ ಇವೆ.

ಶೇ.15ರಷ್ಟು ಗರ್ಭಿಣಿಯರಲ್ಲಿ ಯಾವುದಾದರೊಂದು ಸಮಸ್ಯೆ ತಲೆದೋರುವ ಸಾಧ್ಯತೆ ಇರುತ್ತದೆ. ಝಾರ್ಖಂಡ್‌, ಒಡಿಸಾ, ಮಧ್ಯಪ್ರದೇಶ, ಉತ್ತರಾಖಂಡ, ಉತ್ತರಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಹೆರಿಗೆ ಇಲ್ಲವೇ ಗರ್ಭಪಾತದ ಸಮಯದಲ್ಲಿ ತಾಯಂದಿರ ಸಾವಿನ ಸಂಖ್ಯೆ ಹೆಚ್ಚಿಗೆ ಇರುವುದು ಕಂಡುಬರುತ್ತದೆ.

ಚಕಿತಗೊಳಿಸುವ ಒಂದು ಸಂಗತಿಯೆಂದರೆ, ದೇಶದಲ್ಲಿ ರಕ್ತಹೀನತೆ ಹಾಗೂ ಅಪೌಷ್ಟಿಕತೆಯ ಬಳಿಕ ಮಹಿಳೆಯರ ಸಾವಿಗೆ ಅಸುರಕ್ಷಿತ ಗರ್ಭಪಾತ ಒಂದು ಮುಖ್ಯ ಕಾರಣವಾಗಿದೆ.

ಗಂಭೀರ ಪರಿಸ್ಥಿತಿ

ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳ ಪ್ರಕಾರ, ಹಳ್ಳಿಗಳಲ್ಲಿ ಶೇ.60ರಷ್ಟು ಮಹಿಳೆಯರು ನರ್ಸ್‌ಗಳನ್ನೇ ಅವಲಂಬಿಸಿದ್ದಾರೆ. ಆರೋಗ್ಯ ಸೌಲಭ್ಯಗಳ ಕೊರತೆಯಿಂದ ಪ್ರತಿವರ್ಷ ದೇಶದಲ್ಲಿ 78,000ದಷ್ಟು ಮಹಿಳೆಯರು ಹೆರಿಗೆ ಸಮಯದಲ್ಲಿ ಸಾವನ್ನಪ್ಪುತ್ತಿದ್ದಾರೆ.

ಸೂಕ್ತ ತರಬೇತಿ ಇಲ್ಲದ, ಅನುಭವ ಇಲ್ಲದ ವೈದ್ಯರ ಬಳಿ ಅಥವಾ ಮಾನ್ಯತೆ ಪಡೆಯದೆ ಇರುವ ನರ್ಸಿಂಗ್‌ ಹೋಮ್ ಗಳಲ್ಲಿ ಗರ್ಭಪಾತ ಮಾಡಿಸಿಕೊಳ್ಳುವುದು ಜೀವಕ್ಕೆ ಅಪಾಯವನ್ನುಂಟು ಮಾಡಬಹುದು.

ಒಂದು ವೇಳೆ ಬೆಳಕು ಹಾಗೂ ಗಾಳಿಯ ಕೊರತೆ ಇದ್ದರೆ, ಕೀಟಾಣುರಹಿತ ಉಪಕರಣಗಳನ್ನು ಬಳಸದೆ ಇದ್ದರೆ ಅದು ಜೀವಕ್ಕೆ ಅಪಾಯ ತರಬಹುದು.

12 ವಾರಗಳೊಳಗೆ ಗರ್ಭಪಾತ ಮಾಡಿಸಿರದಿದ್ದರೆ ಆಗಲೂ ಅಪಾಯ ಕಾದಿಟ್ಟ ಬುತ್ತಿ.

ಈ ಎಲ್ಲ ಕಾರಣಗಳ ಹೊರತಾಗಿ ಕೆಲವು ಮನೆ ಉಪಾಯಗಳ ಮೂಲಕ ಗರ್ಭವನ್ನು ಕೊನೆಗೊಳಿಸಲು ಪ್ರಯತ್ನಿಸಿದರೆ, ಅಂದರೆ ಕೆಲವು ನಾಟಿ ಔಷಧಗಳನ್ನು, ಗಿಡಮೂಲಿಕೆಗಳ ರಸವನ್ನು ಯೋನಿ ದ್ವಾರದಲ್ಲಿ ಹಾಕುವುದರಿಂದ ಗರ್ಭಿಣಿಯ ಜೀವಕ್ಕೆ ಕುತ್ತು ಬರುತ್ತದೆ.

ಅಸುರಕ್ಷಿತ ಗರ್ಭಪಾತ ಮಾಡಿದಾಗ 2 ವಾರಗಳ ಬಳಿಕ ಹೊಟ್ಟೆಯಲ್ಲಿ ವಿಪರೀತ ನೋವು, ಜ್ವರ, ಯೋನಿಯಿಂದ ದುರ್ಗಂಧಯುಕ್ತ ಸ್ರಾವ ಮುಂದುವರಿದಿದ್ದರೆ ಅದು ಅಪಾಯಕಾರಿ ಸ್ಥಿತಿಯೇ ಹೌದು. ಗರ್ಭಪಾತ ಪರಿಪೂರ್ಣವಾಗಿ ಆಗಿಲ್ಲ, ಗರ್ಭಕೋಶದಲ್ಲಿ ಭ್ರೂಣದ ಅಂಶ ಇನ್ನು ಸ್ವಲ್ಪ ಉಳಿದಿದೆ ಎನ್ನುವುದನ್ನು ಇದು ಬಿಂಬಿಸುತ್ತದೆ.

ಸುರಕ್ಷಿತ ಗರ್ಭಪಾತ

1 ತಿಂಗಳವರೆಗಿನ ಗರ್ಭವನ್ನು ಔಷಧಿಯ ಮೂಲಕ ಕೊನೆಗೊಳಿಸಬಹುದಾಗಿದೆ. ಏಕೆಂದರೆ ಇದು ಭ್ರೂಣದ ಆರಂಭಿಕ ಹಂತವಾಗಿರುತ್ತದೆ. ಆದರೆ ಅದಕ್ಕೂ ಹೆಚ್ಚು ಅವಧಿಯ ಗರ್ಭವನ್ನು ಅಬಾರ್ಷನ್‌ ಮೂಲಕವೇ ಕೊನೆಗೊಳಿಸಬಹುದು.

ಸುರಕ್ಷಿತ ಗರ್ಭಪಾತ ವ್ಯಾಕ್ಯೂಮ್ ಆಸ್ಪಿರೇಶನ್‌ ವಿಧಾನದ ಮೂಲಕ ನೆರವೇರಿಸಲ್ಪಡುತ್ತದೆ. ಈ ವಿಧಾನದಲ್ಲಿ ನುರಿತ ವೈದ್ಯ, ವಿಶೇಷ ಟ್ಯೂಬ್‌ನ್ನು ಯೋನಿ ಮುಖಾಂತರ ಗರ್ಭಕೋಶದೊಳಗೆ ತೂರಿಸಿ ಭ್ರೂಣವನ್ನು ಹೊರಗೆಳೆದುಕೊಳ್ಳಲಾಗುತ್ತದೆ. ಇದೊಂದು ಸರಳ ಮತ್ತು ಸುರಕ್ಷಿತ ವಿಧಾನವಾಗಿದೆ. ಡೈಲೇಶನ್‌ ಮತ್ತು ಕ್ಯೂರೇಟಾಸ್‌ ಗರ್ಭಪಾತದಲ್ಲಿ ಕೇಳಿಬರುವ ಹೆಸರಾಗಿದೆ. ಗರ್ಭದಲ್ಲಿ ಉಳಿದಿರುವ ಭಾಗವನ್ನು ಕ್ಯೂರೇಟರ್‌ ಮುಖಾಂತರ ನಿವಾರಿಸಲಾಗುತ್ತದೆ. ಕ್ಯೂರೇಟರ್‌ ಎನ್ನುವುದು ಚಮಚದಂತಹ ಒಂದು ಉಪಕರಣವಾಗಿದೆ.

ದೆಹಲಿಯ ಆಸ್ಮಾ ತಾನು ವಾಸಿಸುವ ಭಾಗದಲ್ಲಿ ಗರ್ಭಪಾತ ಮಾಡುತ್ತಾಳೆ. 10 ವರ್ಷಗಳಿಂದ ಆಕೆ ಈ ಕ್ಷೇತ್ರದಲ್ಲಿದ್ದಾಳೆ. ಮೊದಲು  ಆಕೆ ಮೆಟರ್ನಿಟಿ ಹೋಮ್ ಒಂದರಲ್ಲಿ ರೋಗಿಗಳಿಗೆ ಇಂಜೆಕ್ಷನ್‌ ಹಾಕುವ ಕೆಲಸ ಮಾಡುತ್ತಿದ್ದಳು. ಕೆಲಸ ಬಿಟ್ಟ ನಂತರ ಆಕೆ ಮನೆಯಲ್ಲೇ ಗರ್ಭಪಾತ ಮಾಡುವ ಆದಾಯದ ಮೂಲವೊಂದನ್ನು ಕಂಡುಕೊಂಡಳು.

ಅಸುರಕ್ಷಿತ ಗರ್ಭಪಾತಕ್ಕೆ ಒಳಗಾಗಿದ್ದ ನೀಲಾ ಹೀಗೆ ಹೇಳುತ್ತಾರೆ, “ನಾನು ಒಬ್ಬ ನರ್ಸ್‌ ಬಳಿ ಗರ್ಭಪಾತ ಮಾಡಿಸಿಕೊಂಡಿದ್ದೆ. ಆ ಬಳಿಕ ಹಲವು ದಿನಗಳ ಕಾಲ ನನಗೆ ರಕ್ತಸ್ರಾವ ಆಗುತ್ತಿತ್ತು, ಹೊಟ್ಟೆನೋವು ಬರುತ್ತಿತ್ತು. 1 ವರ್ಷದ ತನಕ ನೋವಿನ ಸಮಸ್ಯೆ ಇದ್ದೇ ಇತ್ತು. ನಾನು ಯಾಕಾದರೂ ಆ ಮಹಿಳೆಯ ಬಳಿ ಹೋಗಿದ್ದೆನೋ ಎಂದೆನಿಸಿದೆ.”

ಡಾ. ಅನುರಾಧಾ ಈ ಕುರಿತು ಹೀಗೆ ಹೇಳುತ್ತಾರೆ, “ಅನುಭವಿ ವೈದ್ಯರು ಹಲವು ವರ್ಷಗಳ ಕಾಲ ಅಧ್ಯಯನ ಮಾಡಿರುತ್ತಾರೆ. ಇತರರ ಮಾರ್ಗ ದರ್ಶನದಲ್ಲಿ ಶಸ್ತ್ರಚಿಕಿತ್ಸೆಗಳ ಪ್ರ್ಯಾಕ್ಟೀಸ್‌ ಮಾಡಿರುತ್ತಾರೆ. ಅವರು ಮಹಿಳೆಗೆ ಯಾವಾಗ ಏನು ಸಮಸ್ಯೆ ಎದುರಾಗಬಹುದು? ಅದನ್ನು ಹೇಗೆ ನಿಭಾಯಿಸಬೇಕು ಎನ್ನುವುದು ಚೆನ್ನಾಗಿ ಗೊತ್ತಿರುತ್ತದೆ. ಅದೇ ಅನಧಿಕೃತವಾಗಿ ಗರ್ಭಪಾತ ಮಾಡುವವರಿಗೆ ಸೂಕ್ತ ವಿದ್ಯಾರ್ಹತೆಯಾಗಲಿ, ಅನುಭವವಾಗಲಿ ಇರುವುದಿಲ್ಲ. ಜೊತೆಗೆ ಸೂಕ್ತ ಉಪಕರಣಗಳಾಗಲಿ ಇರುವುದಿಲ್ಲ. ಹೀಗಾಗಿ ಅಂಥವರ ಬಳಿ ಗರ್ಭಪಾತ ಮಾಡಿಸಿಕೊಳ್ಳುವುದು ಅಪಾಯಕ್ಕೆ ಆಹ್ವಾನ ಕೊಟ್ಟಂತೆಯೇ ಸರಿ.”

– ಡಾ. ನೀರಜಾ

ಹೆಚ್ಚುತ್ತಿರುವ ಗರ್ಭಪಾತದ ಪ್ರಕರಣಗಳು

ಆಧುನಿಕತೆಯ ಕಣ್ಕುಕ್ಕುವ ಬೆಳಕಿನಲ್ಲಿ ಅಥವಾ ಸಂಬಂಧಗಳ ಬಗ್ಗೆ ಗೊತ್ತು ಗುರಿಯಿಲ್ಲದೆ ಹುಡುಗ ಹುಡುಗಿಯರು ತಮ್ಮ ಗಡಿಯನ್ನು ಮೀರುತ್ತಿದ್ದಾರೆ. ಇಂತಹದರಲ್ಲಿ ಗರ್ಭವೇನಾದರೂ ನಿಂತರೆ ಮರ್ಯಾದೆಗೆ ಅಂಜಿ ಅಸುರಕ್ಷಿತ ಗರ್ಭಪಾತದ ನಿರ್ಧಾರಕ್ಕೆ ಬರುತ್ತಾರೆ. ದೇಶದಲ್ಲಿ ಪ್ರತಿವರ್ಷ 60 ಲಕ್ಷ ಗರ್ಭಪಾತ ನಡೆಸಲಾಗುತ್ತಿದೆ. 2000 ಇಸವಿಯಲ್ಲಿ 65 ಲಕ್ಷ ಗರ್ಭಪಾತದ ಪ್ರಕರಣಗಳು ವರದಿಯಾಗಿದ್ದವು. ಅದರಲ್ಲಿ ಶೇ.66ರಷ್ಟು ಗರ್ಭಪಾತಗಳು ಅಸುರಕ್ಷಿತಾಗಿದ್ದವು. 2014-15ರಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರ ಗರ್ಭಪಾತದ ಪ್ರಕರಣಗಳ ಸಂಖ್ಯೆ ಶೇ.67ರಷ್ಟು ಹೆಚ್ಚಾಗಿರುವುದು ಕಂಡುಬಂತು. ಅದರಲ್ಲಿ ದೆಹಲಿ, ಬೆಂಗಳೂರು, ಚೆನೈ, ಮುಂಬೈ ಮಹಾನಗರಗಳ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ