ಜೀವವಿಮೆ ಎಂತಹ ಒಂದು ವ್ಯವಸ್ಥೆಯೆಂದರೆ, ಅದರ ಮೂಲಕ ವ್ಯಕ್ತಿ ತನ್ನ ಮರಣಾನಂತರ ಕುಟುಂಬಕ್ಕೆ ಆರ್ಥಿಕ ಸುರಕ್ಷತೆ ದೊರಕಿಸಿಕೊಡುತ್ತಾರೆ. ಬಹಳಷ್ಟು ಜನ ವಿಮೆಯ ಏಜೆಂಟ್ ಹೇಳಿದ ಹಾಗೆ ತೆರಿಗೆ ಉಳಿಸಲು ಅಥವಾ ಹೂಡಿಕೆಯ ರೂಪದಲ್ಲಿ ವಿಮೆ ಮಾಡಿಸುತ್ತಾರೆ. ವಿಮೆಯು ವ್ಯಕ್ತಿಯೊಬ್ಬನ ಭವಿಷ್ಯದ ಆರ್ಥಿಕ ವ್ಯವಸ್ಥೆಯಾಗಿದೆ. ಅದಕ್ಕಾಗಿ ವಿಮೆ ಪಾಲಿಸಿ ಖರೀದಿಸುವಾಗ ಪರಿಪೂರ್ಣ ಎಚ್ಚರ ವಹಿಸಬೇಕು.
ಎಲ್ಲಕ್ಕೂ ಮುಂಚೆ ನೀವು ವಿಮೆ ಮಾಡಿಸಲು ಏಕೆ ಯೋಚಿಸುತ್ತಿದ್ದೀರಿ ಎನ್ನುವುದನ್ನು ನಿರ್ಧರಿಸಿ. ವಿಮೆಯು ಮುಖ್ಯವಾಗಿ ವಿಮೆ ಮಾಡಿಸಲ್ಪಟ್ಟ ವ್ಯಕ್ತಿಯ ನಿಧನಾನಂತರ ಅವನನ್ನು ಆಶ್ರಯಿಸಿದವರಿಗೆ ಆರ್ಥಿಕ ಸುರಕ್ಷತೆ ದೊರಕಿಸಿಕೊಡುತ್ತದೆ. ಈ ಉದ್ದೇಶಕ್ಕಾಗಿ ವಿಮೆ ಪಾಲಿಸಿ ತೆಗೆದುಕೊಳ್ಳುವುದಿದ್ದರೆ, ಎಲ್ಲಕ್ಕೂ ಅತ್ಯುತ್ತಮ ಆಜೀವ ವಿಮೆ ಮಾಡಿಸಿದ ವ್ಯಕ್ತಿ ಒಂದು ಅವಧಿಯ ತನಕ ಪ್ರೀಮಿಯಂ ಜಮೆ ಮಾಡುವುದಾಗಿರುತ್ತದೆ. ಆ ಮೊತ್ತ ಅತ್ಯಂತ ಕಡಿಮೆ ಇರುತ್ತದೆ. ಅದಕ್ಕೆ ಬದಲಿಗೆ ದೊಡ್ಡ ಮೊತ್ತದ ಸುರಕ್ಷೆ ದೊರೆಯುತ್ತದೆ.
ಸೂಕ್ತ ವಿಮಾ ಕಂಪನಿಯ ಆಯ್ಕೆ
ವ್ಯಕ್ತಿಯೊಬ್ಬನ ಭವಿಷ್ಯದ ಯೋಜನೆ ರೂಪಿಸುತ್ತಿರುವ ಸಂದರ್ಭದಲ್ಲಿ ಕುಟುಂಬದ ಸುರಕ್ಷತೆಗಾಗಿ ಈ ರೀತಿಯ ವಿಮೆಯನ್ನು ಅಗತ್ಯವಾಗಿ ತೆಗೆದುಕೊಳ್ಳಬೇಕು. ವಿಮೆಯ ಪ್ರೀಮಿಯಂ ರೂಪದಲ್ಲಿ ಪಾವತಿ ಮಾಡಿದ ಮೊತ್ತಕ್ಕೆ ಆದಾಯಕರ ಅಧಿನಿಯಮದ 80 `ಸಿ’ ಅನ್ವಯ 1.50 ಲಕ್ಷ ರೂ. ಮೊತ್ತದ ತನಕ ರಿಯಾಯಿತಿ ದೊರೆಯುತ್ತದೆ. ಸಾಮಾನ್ಯವಾಗಿ ಜನರು ತೆರಿಗೆ ಉಳಿಸುವ ನಿಟ್ಟಿನಲ್ಲಿ ಏಜೆಂಟ್ ಹೇಳಿದಂತೆ ವಿಮೆ ಮಾಡಿಸುತ್ತಾರೆ. ಒಂದುವೇಳೆ ತೆರಿಗೆ ಉಳಿಸಿದಷ್ಟೇ ವಿಮೆ ತೆಗೆದುಕೊಳ್ಳುವುದಿದ್ದರೆ ಅದು ಒಳ್ಳೆಯ ಉಪಾಯವಲ್ಲ. ಏಕೆಂದರೆ ಈ ಅನುಬಂಧದನ್ವಯ ವಿಮಾ ಹೊರತಾಗಿ ಬೇರೆ ಕೆಲವು ಪರ್ಯಾಯಗಳಿವೆ. ಅದರಿಂದ ತೆರಿಗೆ ರಿಯಾಯಿತಿ ದೊರೆಯುವುದಲ್ಲದೆ, ನೀವು ಜಮೆ ಮಾಡಿದ ಮೊತ್ತಕ್ಕೆ ಒಳ್ಳೆಯ ರಿಟರ್ನ್ಸ್ ಕೂಡ ದೊರೆಯುತ್ತದೆ.
ಕುಟುಂಬದ ಅಗತ್ಯ ಹಾಗೂ ಭವಿಷ್ಯತ್ತಿನ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ವಿಮೆಯ ಕವರ್ ಮಾಡಲಾಗುತ್ತದೆ. ಅದೆಷ್ಟೋ ವಿಮೆ ಯೋಜನೆಗಳು ಹೇಗಿರುತ್ತವೆಯೆಂದರೆ, ಒಂದು ನಿಶ್ಚಿತ ಅವಧಿಯ ಬಳಿಕ ಕಾಲಕಾಲಕ್ಕೆ ಮೊತ್ತ ಸಿಗುತ್ತಿರುತ್ತವೆ. ನಡುನಡುವೆ ಮೊತ್ತ ಕೈಗೆ ಬರುವುದರಿಂದ ಕೊನೆಯಲ್ಲಿ ಸಿಗುವ ಮೊತ್ತ ಬಹಳ ಕಡಿಮೆಯಾಗಿರುತ್ತದೆ. ಅದು ಸುರಕ್ಷತೆಯ ದೃಷ್ಟಿಯಿಂದ ಅಷ್ಟು ಸರಿಯಾದುದಲ್ಲ. ಇಂತಹ ಪಾಲಿಸಿಗಳ ಪ್ರೀಮಿಯಂ ಕೂಡ ಸ್ವಲ್ಪ ಹೆಚ್ಚಿಗೆ ಇರುತ್ತದೆ.
ವಿಮೆ ಮಾಡಿಸುವಾಗ ಸೂಕ್ತ ವಿಮಾ ಕಂಪನಿಯ ಆಯ್ಕೆ ಕೂಡ ಮಹತ್ವದ್ದಾಗಿರುತ್ತದೆ. ಮೊದಲು ಭಾರತ್ ಜೀವ ವಿಮಾ ನಿಗಮ ಮಾತ್ರ ವಿಮೆ ಮಾಡಿಸುತ್ತಿತ್ತು. ಆದರೆ ಈಗ ಬಹಳಷ್ಟು ಖಾಸಗಿ ವಿಮೆ ಕಂಪನಿಗಳು ಬಂದಿವೆ. ಅದರಲ್ಲಿ ವಿದೇಶಿ ವಿಮಾ ಕಂಪನಿಗಳು ಕೂಡ ಸೇರಿವೆ. ಹೀಗಾಗಿ ವಿಮೆ ಮಾಡಿಸುವಾಗ ವಿಮಾ ಕಂಪನಿಯ ವಿಶ್ವಾಸಾರ್ಹತೆಯ ಬಗ್ಗೆ ಗಮನಹರಿಸಬೇಕು. ವಿಮೆ ಎನ್ನುವುದು ದೀರ್ಘಾವಧಿಯದ್ದು. ಹೀಗಾಗಿ ಕಂಪನಿ ಆಯ್ಕೆ ಮಾಡುವಾಗ ಇವತ್ತಿನಿಂದ 25-30 ವರ್ಷಗಳ ಬಳಿಕ ಅಥವಾ ಅದಕ್ಕೂ ನಂತರ ನಮ್ಮ ಹಣ ವಾಪಸ್ ಸಿಗಬಹುದೇ ಎಂಬುದನ್ನು ಪರಿಶೀಲಿಸಿ ನೋಡಬೇಕು. ಕಂಪನಿಯ ಭವಿಷ್ಯ ಉಜ್ವಲವಾಗಿರಬೇಕು, ಅದು ಸಕಾಲಕ್ಕೆ ಮರುಪಾವತಿ ಮಾಡುವಂತಿರಬೇಕು.
ಏಜೆಂಟರ ಮೋಸದಿಂದ ಎಚ್ಚರವಿರಿ!
ಕಂಪನಿಯು ಹೇಳುವ ವಿಮೆ ಹಣದ ಪಾವತಿ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳುವುದು ಅವಶ್ಯ. ಯಾವ ಕಂಪನಿಯ ಪಾವತಿ ಪ್ರಕ್ರಿಯೆ ದೀರ್ಘವಾಗಿರುತ್ತದೊ, ಹಾಗೂ ಅದನ್ನು ಕೊಡಲು ವಿಳಂಬ ಧೋರಣೆ ಅನುಸರಿಸುತ್ತೋ, ಅಂತಹ ವಿಮಾ ಕಂಪನಿಯಲ್ಲಿ ವಿಮೆ ತೆಗೆದುಕೊಳ್ಳದೇ ಇರುವುದೇ ಒಳ್ಳೆಯದು. ಯಾವ ವಿಮಾ ಕಂಪನಿಯಿಂದ ಒಳ್ಳೆಯ ಕಮೀಷನ್ ದೊರೆಯುತ್ತೋ, ಅಂತಹ ವಿಮಾ ಕಂಪನಿಗಳ ವಿಮೆ ಪಾಲಿಸಿಗಳನ್ನೇ ಏಜೆಂಟರು ಮಾರಲು ಪ್ರಯತ್ನಿಸುತ್ತಾರೆ. ಯಾವ ಕಂಪನಿಯು ತನ್ನ ಏಜೆಂಟರಿಗೆ ಹೆಚ್ಚಿನ ಕಮೀಷನ್ಕೊಡುತ್ತೊ, ಆ ಕಂಪನಿಯ ಹೂಡಿಕೆಗೆ ಹೆಚ್ಚಿನ ಮೊತ್ತ ದೊರೆಯದು. ಕಂಪನಿಯು ಕಡಿಮೆ ಹೂಡಿಕೆ ಮಾಡಿದಾಗ ಕೊನೆಯಲ್ಲಿ ದೊರೆಯುವ ಮೊತ್ತ ಕೂಡ ಕಡಿಮೆಯಾಗುತ್ತದೆ. ಹಲವು ಕಂಪನಿಗಳು ಮಾರುಕಟ್ಟೆ ಆಧಾರಿತ ಪಾಲಿಸಿಗಳನ್ನೇ ಜಾರಿಗೊಳಿಸುತ್ತಿವೆ. ಅವು ಸಂದಾಯವಾದ ವಿಮೆಯ ಪ್ರೀಮಿಯಮ್ ನಿಂದ ತಮ್ಮ ಖರ್ಚು ತೆಗೆದು ಉಳಿದ ಮೊತ್ತವನ್ನು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತವೆ.
ಆರಂಭದ ಕೆಲವು ವರ್ಷಗಳಲ್ಲಿ ಖರ್ಚು ತೆಗೆದು ಹೂಡಿಕೆ ಮೊತ್ತ ಅರ್ಧದಷ್ಟು ಉಳಿಯುವುದಿಲ್ಲ. ಅಷ್ಟೊಂದು ಕಡಿಮೆ ಮೊತ್ತ ಹೂಡಿಕೆಯಾಗುವುದು ಮತ್ತು ಅದೂ ಕೂಡ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದಾಗ ಅದು ಮೂಲ ಮೊತ್ತಕ್ಕೆ ತಲುಪಲು ಸಾಕಷ್ಟು ಸಮಯ ತಗಲುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಈ ತೆರನಾದ ಪಾಲಿಸಿ ತೆಗೆದುಕೊಳ್ಳುವ ಲಕ್ಷಾಂತರ ಜನರು ತಮ್ಮ ಜಮೆ ಮೊತ್ತದ ಅರ್ಧದಷ್ಟು ಭಾಗ ಅಥವಾ ನಾಲ್ಕನೇ ಒಂದು ಭಾಗದಷ್ಟು ಕೂಡ ಕೈಗೆ ಸಿಗದ ಕಾರಣ ಭಾರಿ ಹಾನಿ ಅನುಭವಿಸಬೇಕಾಯಿತು.
ಯೋಜನೆಗಳ ಮಾಹಿತಿ ಪಡೆಯಿರಿ
ವಿಮಾ ಕಂಪನಿಗಳು ಸಿಂಗಲ್ ಪ್ರೀಮಿಯಂನ ಪಾಲಿಸಿಗಳನ್ನು ಜಾರಿಗೊಳಿಸುತ್ತವೆ. ಯಾರಿಗೆ ನಿಶ್ಚಿತ ಆದಾಯ ಇರುವುದಿಲ್ಲ, ಅವರಿಗೆ ಇಂಥ ಪಾಲಿಸಿ ಉಪಯುಕ್ತ. ಒಂದು ವೇಳೆ ಯಾವುದಾದರೂ ದೊಡ್ಡ ಮೊತ್ತ ಬಂದಾಗ ಇಂತಹ ಪಾಲಿಸಿಗಳನ್ನು ಖರೀದಿಸಬಹುದು. ವಿಮೆಯ ಮುಖಾಂತರ ನೀವು ಪೆನ್ಶನ್ ತೆಗೆದುಕೊಳ್ಳಲು ಇಷ್ಟಪಡುವಿರಾದರೆ, ವಿಮಾ ಕಂಪನಿಗಳು ಅವರಿಗೆ ಪೆನ್ಶನ್ ಪ್ಲಾನ್ಗಳನ್ನು ಮಾಡಿಕೊಡುತ್ತವೆ. ಕೆಲವು ವರ್ಷಗಳ ತನಕ ನಿಯಮಿತ ಪ್ರೀಮಿಯಂ ತುಂಬಿದ ಬಳಿಕ ಜೀವಿತಾಧಿತನಕ ಪೆನ್ಶನ್ಹಾಗೂ ಉತ್ತರಾಧಿಕಾರಿಗೆ ಒಂದೇ ಕಂತಿನಲ್ಲಿ ಮೊತ್ತವನ್ನು ನೀಡುತ್ತವೆ. ಪೆನ್ಶನ್ನ ಪ್ರೀಮಿಯಂನ್ನು ಒಂದೇ ಕಂತಿನಲ್ಲಿ ಕಟ್ಟಿ ಕೂಡ ನೀವು ಜೀವಿತಾವಧಿಯ ಪೆನ್ಶನ್ ಕೂಡ ಪಡೆಯುತ್ತ ಇರಬಹುದು.
ಒಟ್ಟಾರೆ ಹೇಳಬೇಕೆಂದರೆ, ವಿಮೆಯ ಬಹಳಷ್ಟು ಯೋಜನೆಗಳಿವೆ. ಅವುಗಳಿಗೆ ಸಂಬಂಧಪಟ್ಟ ಲಾಭಗಳು ಮತ್ತು ಸೌಲಭ್ಯಗಳು ಕೂಡ ಬೇರೆ ಬೇರೆ ಆಗಿರುತ್ತವೆ. ಹೀಗಾಗಿ ವಿಮೆ ಮಾಡಿಸುವಾಗ ಎಲ್ಲ ಯೋಜನೆಗಳ ಲಾಭ ಪಡೆದುಕೊಳ್ಳಿ ಮತ್ತು ನಿಮ್ಮ ಮುಂಬರುವ ಅಗತ್ಯಗಳನ್ನು ಗಮನಿಸಿಯೇ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಿ. ಅದನ್ನು ಬಿಟ್ಟು ಏಜೆಂಟ್ ಹೇಳಿದನೆಂದು ಅಥವಾ ಯಾರಾದರೂ ಏನೋ ಹೇಳಿದರೆಂದು ವಿಮೆ ತೆಗೆದುಕೊಳ್ಳಲು ಹೋಗಬೇಡಿ.
ಎಚ್ಚರಿಕೆ ಅಗತ್ಯ
ಕೆಲವು ವಿಮಾ ಏಜೆಂಟರು ಫೋನ್ ಮಾಡಿ, ನೀವು ಯಾವ ಜೀವ ವಿಮೆ ಪಡೆದಿದ್ದೀರೊ, ಅದರಲ್ಲಿ ಏನಾದರೂ ಸಮಸ್ಯೆ ಇರಬಹುದೆ ಎಂದು ಕೇಳುತ್ತಾರೆ. ನಾವು ಸರ್ಕಾರಿ ವಿಮಾ ಸೇವಾ ಕೇಂದ್ರ ಅಥವಾ ಅದೇ ಬಗೆಯ ಯಾವುದಾದರೂ ಹೆಸರು ಪ್ರಸ್ತಾಪಿಸಿ ನಿಮ್ಮಿಂದ ಮಾಹಿತಿ ಪಡೆದುಕೊಳ್ಳುತ್ತಾರೆ. ನಂತರ ಚಾಲ್ತಿಯಲ್ಲಿರುವ ಪಾಲಿಸಿ ನಿಲ್ಲಿಸಿ ಬೇರೆ ಯಾವುದೊ ಒಂದು ಪಾಲಿಸಿ ತೆಗೆದುಕೊಳ್ಳಲು ಹೇಳುತ್ತಾರೆ. ಅದರಲ್ಲಿ ಅಧಿಕ ಲಾಭ ಬರುತ್ತದೆ ಎಂದು ಆಮಿಷ ತೋರಿಸುತ್ತಾರೆ. ಎಷ್ಟೋ ಸಲ ಅವರು ಫೋನ್ನಲ್ಲಿ ನಿಮ್ಮ ವಿಮೆಯ ಪಾಲಿಸಿಗೆ ಬೋನಸ್ ಬಂದಿದೆ ಎಂದು ಹೇಳುತ್ತಾರೆ. ಅದನ್ನು ದೊರಕಿಸಿಕೊಳ್ಳಲು ಹೊಸ ಯೋಜನೆಯಲ್ಲಿ ಮೊತ್ತವನ್ನು ಜಮೆ ಮಾಡಬೇಕು ಎಂದು ಹೇಳುತ್ತಾರೆ. ಇವೆಲ್ಲ ನಕಲಿ ಫೋನ್ ಕರೆಗಳು.
ಭಾರತೀಯ ವಿಮಾ ನಿಯಂತ್ರಣ ಆಯೋಗ ಕಾಲಕಾಲಕ್ಕೆ ಇಂಥವರಿಂದ ದೂರ ಇರಲು ಜಾಹೀರಾತು ಕೊಡುತ್ತಿರುತ್ತದೆ. ಆದರೂ ಅಂತಹ ಫೋನ್ ಕರೆಗಳು ಬರುತ್ತಿರುತ್ತವೆ. ವಿಮಾ ನಿಯಂತ್ರಣಾ ಮಂಡಳಿ ಇಂತಹ ಫೋನ್ ಕರೆಗಳು ಬಂದಾಗ ಪೊಲೀಸರಿಗೆ ದೂರು ಕೊಡಲು ಹೇಳುತ್ತಿರುತ್ತದೆ. ಸಂದರ್ಭ ಬಂದಾಗ ದೂರು ಕೊಡಲು ಹಿಂದೇಟು ಹಾಕಬೇಡಿ.
ವಿಮೆ ಪಾಲಿಸಿಯನ್ನು ಆಯ್ಕೆ ಮಾಡುವಾಗ ನಿಮಗೆ ಯಾರಾದರೂ ವಿಶ್ವಾಸಾರ್ಹ ಸಲಹೆಗಾರರು ಗೊತ್ತಿದ್ದರೆ ಅವರ ಬಳಿ ಈ ಬಗ್ಗೆ ಕೇಳಿ ಸಲಹೆ ಪಡೆದುಕೊಳ್ಳಬಹುದು. ನೀವು ಗಮನಕೊಟ್ಟು ಪಾಲಿಸಿಯನ್ನು ಆಯ್ಕೆ ಮಾಡಿಕೊಂಡರೆ ನೀವು ಯಾವ ಉದ್ದೇಶಕ್ಕಾಗಿ ಪಾಲಿಸಿಯನ್ನು ತೆಗೆದುಕೊಳ್ಳುತ್ತಿದ್ದೀರೊ, ಆ ಉದ್ದೇಶ ಈಡೇರುತ್ತದೆ ಮತ್ತು ನೀವು ಮೋಸ ಹೋಗಲಾರಿರಿ.
– ಡಾ. ಸುಜಯಾ ಜೋಶಿ