ದೆಹಲಿಯ ಢೋಂಗಿ ಬಾಬಾ ವೀರೇಂದ್ರ ದೇವ್‌ ದೀಕ್ಷಿತ್‌ನ ರಹಸ್ಯ ಬಯಲಾದ ಬಳಿಕ ಪ್ರತಿಯೊಂದು ನ್ಯೂಸ್‌ ಚಾನೆಲ್‌ಗಳೂ `ಬಾಬಾನ ಐಷಾರಾಮಿ ಅಡ್ಡಾ,’ `ಗುಹೆಯ ರಹಸ್ಯ,’ `ದತ್ತು ಪುತ್ರಿಯ ನೈಜತೆ’ ಮುಂತಾದ ಕಾರ್ಯಕ್ರಮಗಳನ್ನು ತೋರಿಸಿದವು. ಇಂತಹ ಅದೆಷ್ಟೋ ಕಥೆಗಳು ಹಾಗೂ ಗುಹೆಗಳನ್ನು ತೋರಿಸಿ ಜನರನ್ನು ಭ್ರಮಾಲೋಕದಲ್ಲಿ ತೇಲಾಡುವಂತೆ ಮಾಡುತ್ತಿವೆ. ಇಲ್ಲಿ ಉದ್ಭವಿಸುವ ಒಂದು ಪ್ರಶ್ನೆ ಎಂದರೆ, ಇಷ್ಟೊಂದು ಸಂಶೋಧನಾ ಪ್ರವೃತ್ತಿಯ ಮೀಡಿಯಾ ಚಾನೆಲ್‌ಗಳು ಇಷ್ಟು ವರ್ಷಗಳ ಕಾಲ ಎಲ್ಲಿದ್ದವು? ಇಲ್ಲಿ ಬಾಬಾ ಹೊಸಬನೇನಲ್ಲ. ಆತ ನಿರ್ಮಿಸಿದ ಗುಹೆಗಳು ಒಂದೇ ರಾತ್ರಿಯಲ್ಲಿ ಹುಟ್ಟಿಕೊಂಡದ್ದೇನಲ್ಲ. ಇದೆಂಥ ನಯಂಚಕತನ…. ಮೋಸಗಾರಿಕೆ? ಇವರೆಲ್ಲ ಇಲ್ಲಿಯವರೆಗೆ ಮಲಗಿ ನಿದ್ರಿಸುತ್ತಿದ್ದರಾ? ಬಾಬಾ ಜೈಲಿಗೆ ಹೋಗುತ್ತಿದ್ದಂತೆ ಚಾನೆಲ್ಸ್ ಎಚ್ಚರವಾಗಿಬಿಟ್ಟವಾ?

ಈ ಸ್ವಾರ್ಥಿ ಹಾಗೂ ಅವಕಾಶವಾದಿ ಚಾನೆಲ್‌ಗಳ ಮೇಲೂ ಉದ್ದೇಶಪೂರ್ವಕವಾಗಿ ಅಪರಾಧ ಮುಚ್ಚಿಟ್ಟ ಆರೋಪ ಹೊರಿಸಬೇಕು. ಏಕೆಂದರೆ ಈ ಎಲ್ಲ ನ್ಯೂಸ್‌ಚಾನೆಲ್‌ಗಳು `ದೇಶ ಜಗತ್ತಿನ ಸುದ್ದಿ ನೀಡುವುದರಲ್ಲಿ ನಾವೇ ಮುಂದು’ ಎಂದು ಬೊಗಳೆ  ಕೊಚ್ಚಿಕೊಳ್ಳುತ್ತಿರುತ್ತವೆ.

ಈ ಮೀಡಿಯಾಗಳು ಹೀಗೆ ಪ್ರಶ್ನಿಸುತ್ತವೆ, “ಜನರು ಇಷ್ಟೊಂದು ಮೂಢರಾದದ್ದು ಹೇಗೆ?” ಅವು ಜನರನ್ನೇ ತಪ್ಪಿತಸ್ಥರನ್ನಾಗಿಸುತ್ತಿವೆ. ಈಗ ನೀವೇ ಹೇಳಿ, ಮುಂಜಾನೆ ರಾಶಿ ಫಲ, ಬಾಬಾಗಳ ಪ್ರವಚನ, ತಮ್ಮನ್ನು ತಾವು ದೇವಮಾನವ, ದೇವಿ ಎಂದು ಹೇಳಿಕೊಳ್ಳುವುರಿಂದ ಬಣ್ಣ ಬಣ್ಣದ ಶೋಗಳು, ಮಾಟಗಾತಿ ಮಹಿಳೆ, ನಾಗಿಣಿಯ ಸೇಡು, ಸ್ವರ್ಗನರಕ ಹೀಗೆ ಜನರಲ್ಲಿ ಮೂಢನಂಬಿಕೆ ತುಂಬುವವರು ಯಾರು? ಯಾವುದೋ ಧಾರ್ಮಿಕ ಕೇಂದ್ರದಲ್ಲಿ ಏನಾದರೂ ಘಟಿಸಿದರೆ ಅದರ ಬಗ್ಗೆ ದಿನವಿಡೀ ಚಾನೆಲ್ ಚರ್ಚೆ ನಡೆಸುತ್ತವೆ. ಯಾವುದಾದರೂ ಹೊಸ  ವಿಷಯ ಸಿಗುವವರೆಗೆ ಅದನ್ನೇ ರಬ್ಬರಿನ ಹಾಗೆ ಎಳೆಯುತ್ತಿರುತ್ತವೆ.

ಮೂಢನಂಬಿಕೆಯ ವ್ಯಾಪಾರ

ಸರ್ಕಾರಗಳು ಮೌನ ಮತ್ತು ಮಾಧ್ಯಮಗಳು ಇಂತಹವರ ಪ್ರಚಾರದಲ್ಲಿ ಜೊತೆ ನೀಡುತ್ತವೆ. ಇದರ ಪರಿಣಾಮ ಎಂಬಂತೆ ಮೂಢನಂಬಿಕೆ ಪಸರಿಸುವವರ ದೊಡ್ಡ ನೆಟ್‌ವರ್ಕ್‌ ಇಂಟರ್‌ನೆಟ್‌ನಲ್ಲಿ ಆವರಿಸಿಕೊಂಡಿದೆ. ಜನರು ವೈದ್ಯರಿಗಿಂತ ಹೆಚ್ಚಾಗಿ ಈ ಮೂಢ ಸ್ವಾಮಿಗಳ ಮೇಲೆ ನಂಬಿಕೆ ಇಟ್ಟಿದ್ದಾರೆ. ಈ ಸ್ವಾಮಿಗಳಿಗೆ ಹೆಚ್ಚೆಚ್ಚು ಮಹಿಳೆಯರೇ ಬಲಿ ಬೀಳುತ್ತಿದ್ದಾರೆ. ಮಹಿಳೆಯರ ಮುಖಾಂತರ ಪುರುಷರು ಕೂಡ ಸ್ವಾಮಿಗಳ ಜಾಲಕ್ಕೆ ಸಿಲುಕುತ್ತಿದ್ದಾರೆ.

ಒಂದು ವಿಡಂಬನೆಯ ಸಂಗತಿಯೆಂದರೆ ಯಾವ ಮಾಟಮಂತ್ರ, ಜ್ಯೋತಿಷ್ಯವನ್ನು ವಿಜ್ಞಾನ ನಂಬುವುದಿಲ್ಲವೋ, ಅದೇ ಮಾಟಮಂತ್ರ, ಜ್ಯೋತಿಷ್ಯದ ಜಾಲ ಇಂದು ಎಲ್ಲೆಡೆ ಪಸರಿಸುತ್ತಿದೆ. ಇಂದು ಎಲ್ಲರ ಕೈಗಳಲ್ಲೂ ಫೋನ್‌ ಇದೆ. ಇಂಟರ್‌ನೆಟ್‌ಸಂಪರ್ಕವಿದೆ. ಅದರ ಮುಖಾಂತರ ಮೂಢನಂಬಿಕೆಯ ಉದ್ಯೋಗ ವೇಗವಾಗಿ ಪ್ರಸಾರವಾಗುತ್ತಿದೆ. ಎಲ್ಲೆಲ್ಲೂ ಅದರ ಜಾಹೀರಾತುಗಳು, ವೆಬ್‌ಸೈಟ್‌ಗಳು ಕಂಡುಬರುತ್ತಿವೆ.

`ಒಂದೇ ಕ್ಲಿಕ್‌ನಲ್ಲಿ ನಿಮ್ಮ ಜೀವನವನ್ನು ಖುಷಿಯಿಂದ ತುಂಬಿಸಿಬಿಡುತ್ತೇವೆ,’ ಎಂದು ಅವು ಬಡಾಯಿ ಕೊಚ್ಚಿಕೊಳ್ಳುತ್ತವೆ.

ಅಪರಾಧಕ್ಕೆ ಕುಮ್ಮಕ್ಕು

ಮೂಢನಂಬಿಕೆಯ ಭಯಾನಕ ಪರಿಣಾಮ ಕೊಲೆಗಳಲ್ಲಿ ಅಂತ್ಯವಾಗುತ್ತದೆ. ವಿಶ್ವಸಂಸ್ಥೆ ಕೆಲವು ವರ್ಷಗಳ ಹಿಂದೆ ಒಂದು ವರದಿ ಸಲ್ಲಿಸಿತ್ತು. ಅದರಲ್ಲಿ 1897ರಿಂದ 2003ರ ಅವಧಿಯಲ್ಲಿ 2,556 ಮಹಿಳೆಯರನ್ನು ಮಾಟಗಾತಿಯರೆಂದು ಹೇಳಿ ಅವರನ್ನು ಸಾಯಿಸಲಾಗಿತ್ತು. ಆ ಪಟ್ಟಿಯಲ್ಲಿ ಜಾರ್ಖಂಡ್‌, ಒಡಿಶಾ, ತಮಿಳುನಾಡು ಮೊದಲ 3 ಸ್ಥಾನದಲ್ಲಿ.ಮಾಟಗಾತಿ ದುಷ್ಟ ಪ್ರವೃತ್ತಿಗೆ ವಿರುದ್ಧವಾಗಿ ಕಾನೂನೇನೊ ಇದೆ. ಆದರೆ ಅದರಿಂದ ಏನೇನೂ ಪರಿಣಾಮ ಆಗುತ್ತಿಲ್ಲ. ಅದರಲ್ಲಿ ಮಹಿಳೆಗೆ ಹೊಡೆಯುವುದು, ಹಿಂಸೆ ನೀಡುವುದರ ಜೊತೆ ಮಾಟಗಾತಿ ಎಂದು ಘೋಷಿಸಲ್ಪಟ್ಟ ಮಹಿಳೆಗೆ ಮೂತ್ರ ಕುಡಿಸುವುದು, ಅರೆ ಬೆತ್ತಲೆ ಸುತ್ತಾಡಿಸುವುದು, ಮೂಲ ಸೌಕರ್ಯಗಳಿಂದ ಅವಳನ್ನು ವಂಚಿತಳನ್ನಾಗಿ ಮಾಡಲಾಗುತ್ತದೆ. ರಾಷ್ಟ್ರೀಯ ಮಹಿಳಾ ಆಯೋಗ ಕಾಲಕಾಲಕ್ಕೆ ವಿಚಾರ ಸಂಕಿರಣಗಳ ಮೂಲಕ ಜನರಲ್ಲಿ ಜಾಗೃತಿ ತರಲು ಪ್ರಯತ್ನಿಸುತ್ತಿದೆ. ಆದರೆ ಈ ಮೂಢನಂಬಿಕೆ ಕೊಲೆ ಮಾಡುವಷ್ಟು ಮುಂದೆ ಹೋಗಿರುವಾಗ, ಆಯೋಗ ಈ ತೆರನಾದ ಚಿಕ್ಕಪುಟ್ಟ ಕಾರ್ಯಕ್ರಮಗಳಿಗೆ ಸೀಮಿತಗೊಳಿಸುವುದು ಎಷ್ಟರ ಮಟ್ಟಿಗೆ ಸರಿ?

ಹಣ, ಆಸ್ತಿ ಗಳಿಕೆಯ ಉದ್ದೇಶ

ತಂತ್ರಮಂತ್ರ, ಜ್ಯೋತಿಷಿಗಳ ಮೂಲಕ ಶುರುವಾಗುವ ಮೂಢನಂಬಿಕೆ ಜನರಿಗೆ ಹಿಂಸೆ ನೀಡುವ, ಕೊಲೆಗೆ ಕಾರಣವಾಗುತ್ತಿದೆ. ಈ ಸ್ವಯಂಘೋಷಿತ ಬಾಬಾಗಳ ಕರ್ಮಕಾಂಡಗಳ ರಹಸ್ಯ ಬಯಲಾದ ಬಳಿಕ ಯಾರಾದರೂ ತಮ್ಮ ಕಣ್ಣಿಗೆ ಮೂಢನಂಬಿಕೆಯ ಪಟ್ಟಿ ಕಟ್ಟಿಕೊಂಡಿದ್ದಾರೆಂದರೆ, ಆ ಬಗ್ಗೆ ಯಾರು ಏನು ಮಾಡಲು ಸಾಧ್ಯ? ಈಗ ಬಾಬಾಗಳ ಮೇಲಲ್ಲ, ಅವರ ಅನುಯಾಯಿಗಳ ಬಗ್ಗೆ ಕೋಪ ಉಕ್ಕುತ್ತದೆ. ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಮುಖಂಡರು, ಸಿನಿಮಾ ನಟರು, ಶಿಕ್ಷಕರು, ವೈದ್ಯರು, ವ್ಯಾಪಾರಿಗಳು, ಉದ್ಯಮಿಗಳು ಇಂತಹ ಬಾಬಾಗಳ, ಕಪಟ ಮಾತೆಯರ ಜಾಲದಲ್ಲಿ ಸಿಲುಕುತ್ತಿದ್ದಾರೆ. ಜನಸಾಮಾನ್ಯರಿಗೆ ಅದರಲ್ಲೂ ಮಹಿಳೆಯರಿಗೆ ದಾರಿ ತೋರಿಸುವವರಾರು?

ಧರ್ಮದ ವಿರುದ್ಧ ಹೋಗುವವರಾರು?

ಇಲ್ಲಿ ಉದ್ಭವಿಸುವ ಪ್ರಶ್ನೆಯೆಂದರೆ ಇಷ್ಟೊಂದು ಸ್ವಾಮಿಗಳು, ಬಾಬಾಗಳು ಎಲ್ಲಿಂದ ಬರುತ್ತಾರೆ? ಬಾಬಾಗಳಿಗೆ ಅಷ್ಟೊಂದು ಅನುಯಾಯಿಗಳು ಎಲ್ಲಿಂದ ಹುಟ್ಟಿಕೊಳ್ಳುತ್ತಾರೆ? ಇದಕ್ಕೆ ಉತ್ತರವೆಂದರೆ, ಅಂಧಶ್ರದ್ಧೆಯ ಬಿರುಗಾಳಿಯಲ್ಲಿ ತರ್ಕದ ಬಾಣಗಳು ಗಾಳಿಯಲ್ಲಿ ವಿಲೀನವಾಗುತ್ತವೆ. ಮೂಢನಂಬಿಕೆಯಲ್ಲಿ ಮುಳುಗಿದವರೇ ಈ ಬಾಬಾಗಳ ಅನುಯಾಯಿಗಳು. ಅವರು ಅನಕ್ಷರಸ್ಥರಾಗಿರಬಹುದು ಅಥವಾ ಹೆಚ್ಚು ಓದಿದವರೇ ಆಗಿರಬಹುದು. ಇದರಲ್ಲಿರುವ ತೊಂದರೆ ಏನೆಂದರೆ, ಯಾರು ಮೂಢನಂಬಿಕೆ ವಿರೋಧಿಸುವವಾಗಿರುತ್ತಾರೋ, ಅವರು ಹೆದರಿಕೆಯಿಂದಾಗಿ ಧರ್ಮದ ಹೆಸರಿನಲ್ಲಿ ವ್ಯಾಪಾರ ಮಾಡಿಕೊಳ್ಳುವವರ ವಿರುದ್ಧ ಧ್ವನಿ ಎತ್ತಲು ಆಗುವುದಿಲ್ಲ.

ಢೋಂಗಿ ಬಾಬಾಗಳು ಮೊದಲು ಮುಗ್ಧ ಜನರ ವಿವಶತೆಯ ಲಾಭ ಪಡೆದುಕೊಂಡು ಅವರನ್ನು ತಮ್ಮ ಅನುಯಾಯಿ ಆಗಿಸಿಕೊಳ್ಳುತ್ತಾರೆ. ಅನುಯಾಯಿಗಳ ಸಂಖ್ಯೆ ಲಕ್ಷ ದಾಟಿದಾಗ ಕಾನೂನು ಅಷ್ಟೇ ಏಕೆ ರಾಜಕೀಯ ಹಾಗೂ ಇಡೀ ಸಾಮಾಜಿಕ ವ್ಯವಸ್ಥೆಯೇ ಅವರ ಗುಲಾಮರಾಗುತ್ತದೆ.

ಕೆಲವು ಹಳೆಯ ಹೊಸ ಉದಾಹರಣೆಗಳು

ಮೊದಲನೆಯದು : ಇಂದಿರಾಗಾಂಧಿ ಕಾಲದಲ್ಲಿ ಯೋಗ ಗುರು ಸ್ವಾಮಿ ಧೀರೇಂದ್ರ ಬ್ರಹ್ಮಚಾರಿಯ ಹವಾ ಬಹಳ ಜೋರಾಗಿತ್ತು. ಬ್ರಹ್ಮಚಾರಿಯ ಪ್ರಭಾವ ಎಷ್ಟರಮಟ್ಟಿಗೆ ಇತ್ತೆಂದರೆ ಅಧಿಕಾರಿಯ ನೇಮಕ ವರ್ಗಾವಣೆ, ಮಂತ್ರಿಗಳ ಕುರ್ಚಿ ನಿರ್ಧರಿಸುವ ತನಕ ಆತ ಹಸ್ತಕ್ಷೇಪ ಮಾಡುತ್ತಿದ್ದ. ಅದೇ ಕಾರಣದಿಂದ ಹಳೆಯ ಮುಖಂಡರು, ಅಧಿಕಾರಿಗಳು ಸ್ವಾಮಿಯ ಭಕ್ತಾದಿಗಳೆನಿಸಿಕೊಳ್ಳಲು ಹೆಮ್ಮೆಪಟ್ಟುಕೊಳ್ಳುತ್ತಿದ್ದರು. ಇವರೆಲ್ಲರ ಕೈವಾಡದಿಂದಾಗಿ ಆ ಸ್ವಯಂಘೋಷಿತ ದೇವಮಾನವ ಕೋಟ್ಯಧಿಪತಿಯಾದ, ಅವನು ಜಮ್ಮುವಿನಲ್ಲಿ ಗನ್‌ ಫ್ಯಾಕ್ಟರಿ ಕೂಡ ಸ್ಥಾಪನೆ ಮಾಡಿದ್ದ. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿಕೆಯ ಬಳಿಕ ಅಧಿಕಾರದಿಂದ ಕೆಳಗಿಳಿದಾಗ ಸ್ವಾಮಿ ಬ್ರಹ್ಮಚಾರಿ ಹಲವು ಅಪರಾಧ ಪ್ರಕರಣಗಳನ್ನು ಎದುರಿಸಬೇಕಾಗಿ ಬಂತು. ತನ್ನ ಆಸ್ತಿಪಾಸ್ತಿ ರಕ್ಷಿಸಿಕೊಳ್ಳಲು ಹಲವು ಹೋರಾಟಗಳನ್ನು ನಡೆಸಬೇಕಾಯಿತು. ಈ ಮಧ್ಯೆ ಆತ ಹಡಗು ದುರಂತವೊಂದರಲ್ಲಿ ಅಸುನೀಗಿದ.

ಎರಡನೇ ಪ್ರಕರಣ : ಭಾಜಪಾದ ಸಮರ್ಥನೆಯಲ್ಲಿ ಆಸಾರಾಮ್ ಗುಜರಾತ್‌ನಲ್ಲಿ ಪ್ರಚಾರ ಅಭಿಯಾನದಲ್ಲಿ ಶಾಮೀಲಾಗಿದ್ದ ಹತ್ಯೆಯೊಂದರ ಪ್ರಕರಣದಲ್ಲಿ ತನ್ನ ಹೆಸರು ಕೇಳಿ ಬರುತ್ತಿದ್ದಂತೆ ಪ್ರಚಾರದಿಂದ ಹಿಂದೆ ಸರಿದ. ಪ್ರಸ್ತುತ ಆಸಾರಾಮ ಬಲಾತ್ಕಾರದಂತಹ ಗಂಭೀರ ಆರೋಪದಡಿ ಜೈಲಿನಲ್ಲಿ ಬಂಧಿಯಾಗಿದ್ದಾನೆ. ಸಾಕ್ಷಿಗಳನ್ನು ಹೆದರಿಸಿ ಬೆದರಿಸಿ ಸಾಯಿಸುವ ಹಲವು ಆರೋಪಗಳು ಕೂಡ ದಾಖಲಾಗಿವೆ.

ಮೂರನೆಯದು : ಸ್ವಾಮಿ ಚಿನ್ಮಯಾನಂದ ವಿರುದ್ಧ ಅವರ ಶಿಷ್ಯೆಯೊಬ್ಬಳೇ ಬಲಾತ್ಕಾರದ ಆರೋಪ ಮಾಡಿದ್ದಾಳೆ.

ನಾಲ್ಕನೆಯದು : ದೆಹಲಿಯಲ್ಲಿ ಬಂಧಿಸಲ್ಪಟ್ಟ ಇಚ್ಛಾಧಾರಿ ಬಾಬಾ ಪ್ರವಚನದ ಹೆಸರಿನಲ್ಲಿ ಸೆಕ್ಸ್ ರಾಕೆಟ್‌ ನಡೆಸುತ್ತಿದ್ದ.

ಶಿವ್ ಮಾರತ್‌ ದ್ವಿವೇದಿಯ ಹೊರತಾಗಿ ಸ್ವಾಮಿ ಭೀಮಾನಂದಜಿ ಮಹಾರಾಜ ಎಂಬ ಹೆಸರಿನಿಂದಲೂ ಆತ ಕರೆಯಲ್ಪಡುತ್ತಿದ್ದ. ದೇಹ ವ್ಯಾಪಾರ ನಡೆಸುವ ಆರೋಪದ ಮೇರೆಗೆ ಮಹಾರಾಷ್ಟ್ರ `ಕೋಕಾ’ ಕಾಯ್ದೆಯಡಿ ಬಂಧಿಸಲ್ಪಟ್ಟ.

ಐದನೆಯದು : ಸಾರಥಿ ಬಾಬಾನ ಕುರಿತಂತೆ ನ್ಯೂಸ್‌ ಚಾನೆಲ್ಲೊಂದು ಹೀಗೆ ಹೇಳಿತ್ತು, “ಈ ಸ್ವಾಮಿ ಮಹಿಳೆಯೊಬ್ಬಳ ಜೊತೆ 3 ದಿನಗಳ ಕಾಲ ಪಂಚತಾರಾ ಹೋಟೆಲೊಂದರಲ್ಲಿ ಉಳಿದುಕೊಂಡಿದ್ದ.”

ಆರನೆಯದು : ಹರಿಯಾಣದಲ್ಲಿ ರಾಮ ರಹಿಮ್ ಪ್ರಕರಣ ವರದಿಯಾಗಿತ್ತು. ಅಷ್ಟರಲ್ಲಿಯೇ ದೆಹಲಿಯಲ್ಲಿ ಮತ್ತೊಬ್ಬ ಸ್ವಯಂ ಘೋಷಿತ ಬಾಬಾ ವೀರೇಂದ್ರ ದೇವ್ ದೀಕ್ಷಿತ್‌ ಪ್ರಕಟವಾಗಿದ್ದ. ಈ ಬಾಬಾನ ವಿರುದ್ಧ ಎಂತಹ ಕೆಲವು ಪ್ರಕರಣಗಳು ವರದಿಯಾದವೆಂದರೆ, ಅದು ನಾಗರಿಕ ಸಮಾಜಕ್ಕೆ ಕಳಂಕವನ್ನು ಉಂಟು ಮಾಡುವಂಥವಾಗಿವೆ. ಇಲ್ಲಿನ ಎಲ್ಲಕ್ಕೂ ಮಹತ್ವದ ಪ್ರಶ್ನೆಯೆಂದರೆ, ಈ ಬಾಬಾಗಳ ಕಪಿಮುಷ್ಟಿಗೆ ಜನರು ಅದ್ಹೇಗೆ ಸಿಲುಕುತ್ತಾರೆ? ಅವರನ್ನು ದೇವರೆಂದು ಏಕೆ ಭಾವಿಸುತ್ತಾರೆ? ಅವರ ಹಿಂದೆ ಹುಚ್ಚರ ಹಾಗೆ ಏಕೆ ಓಡುತ್ತಾರೆ?

ಅವರ ಕೆಲವು ಚಮತ್ಕಾರಿಕ ಗುಣಗಳಿಂದ ಜನರು ಅವರ ಢೋಂಗಿತನಕ್ಕೆ ಮರುಳಾಗುತ್ತಾರೆ. ಆ ಬಳಿಕ ಸ್ವಾಮಿಗಳು ಅವರನ್ನು ಶೋಷಣೆ ಮಾಡಲು ಶುರು ಮಾಡುತ್ತಾರೆ.

ಚಾರಿತ್ರ್ಯದ ಸೋಗಲಾಡಿತನ : ಸಂತ ಆಸಾರಾಮನಿಂದ ಹಿಡಿದು ರಾಧೇಮಾ ತನಕ ಹಲವು ಸ್ವಯಂ ಘೋಷಿತ ಸಂತರ ಎಲ್ಲಕ್ಕೂ ದೊಡ್ಡ ಕಲೆಯೆಂದರೆ, ವೇಷಧಾರಿ ನಾಟಕ ಆಡುವುದು. ಒಂದು ಚಾರಿತ್ರ್ಯವನ್ನು ಇನ್ನೊಂದರಲ್ಲಿ ಬೆರೆಸಿ ಸೋಗಲಾಡಿತನದ ನಾಟಕ ಆಡುವುದು. ಆಸಾರಾಮ್ ಹಾಗೂ ರಾಧೇಮಾ ಇವರ ದೇಹಭಾಷೆಯ ಮೇಲೆ ಒಮ್ಮೆ ಕಣ್ಣು ಹಾಯಿಸಿದರೆ ಅದು ಸ್ಪಷ್ಟವಾಗಿ ಗೋಚರಿಸುತ್ತದೆ. ವೇಷಧಾರಿ ಸಂತ ತನ್ನನ್ನು ತಾನು ದೇವರ ರೂಪದಲ್ಲಿ ಪ್ರದರ್ಶಿಸಿಕೊಳ್ಳುತ್ತಾನೆ. ದೇವರ ಕಾಲ್ಪನಿಕ ಮುದ್ರೆ ಹಾಗೂ ಭಾವಭಂಗಿಗಳನ್ನು ತೋರಿಸಲು ಪ್ರಯತ್ನಿಸುತ್ತಾನೆ. ಈ ಢೋಂಗಿ ಬಾಬಾ ದೇವರ ಹಾಗೆ ವರ್ತಿಸಲಾರಂಭಿಸಿದಾಗ ಭಕ್ತರು ಆತನತ್ತ ಆಕರ್ಷಿತರಾಗುತ್ತ ಹೋಗುತ್ತಾರೆ. ದೇವರ ಹಾಗೆ ಆ ವ್ಯಕ್ತಿಯನ್ನು ಆರಾಧಿಸತೊಡಗುತ್ತಾರೆ. ಬಹಳಷ್ಟು ಮಹಿಳೆಯರೇ ಅವರಿಗೆ ಬಲಿಪಶುಗಳಾಗುತ್ತಾರೆ.

ಸ್ಟೈಲ್‌ ಸ್ವಾಮಿಗಳು : ಢೋಂಗಿ ಬಾಬಾಗಳನ್ನು ನೋಡಿದಾಗ ಸಾಮಾನ್ಯವಾಗಿ ಕಂಡುಬರುವ ಒಂದು ಸಂಗತಿಯೆಂದರೆ, ಅವರು ಅತ್ಯಂತ ಟಿಪ್‌ಟಾಪ್‌ ಆಗಿ ಇರುತ್ತಾರೆ. ಅವರೆಲ್ಲರ ವೇಷ ಅತ್ಯಂತ ಭಿನ್ನವಾಗಿರುತ್ತದೆ. ಅವರು ಕುಳಿತುಕೊಳ್ಳುವ ಆಸನ, ಬಟ್ಟೆಗಳ ಸ್ಟೈಲ್, ಕುಳಿತುಕೊಳ್ಳುವ ಭಂಗಿ, ಕುಳಿತುಕೊಳ್ಳುವ ಜಾಗದ ಅಲಂಕಾರ ಎಲ್ಲ ಜನರನ್ನು ಆಕರ್ಷಿತಗೊಳಿಸುತ್ತದೆ.

ಸಮ್ಮೋಹನದ ಸಾಮರ್ಥ್ಯ : ರಾಮಪಾಲ್ ಹಾಗೂ ಆಸಾರಾಮ್ ರಂತಹ ಸ್ವಯಂಘೋಷಿತ ಸ್ವಾಮಿಗಳ ವಾಕ್‌ಪಟುತ್ವ ಜನ ಸಾಮಾನ್ಯರನ್ನು ಚಕಿತಗೊಳಿಸುತ್ತದೆ. ಆ ಬಳಿಕ ಅವರ ಪ್ರತಿಯೊಂದು ಮಾತುಗಳೂ ಸರಿ ಎನಿಸುತ್ತವೆ. ಆ ನಂತರ ಜನರಿಂದ ಹಣ ಸುಲಿಗೆ ಮಾಡುತ್ತಿರುತ್ತಾರೆ.

ಬಾಬಾಗಳು ಸೃಷ್ಟಿಸಲ್ಪಡುತ್ತಾರೆ

ಮತ್ತೊಂದು ಕಹಿ ಸತ್ಯವೆಂದರೆ, ಈ ಬಾಬಾಗಳು ತಾವಾಗಿಯೇ ಸೃಷ್ಟಿಯಾಗುವುದಿಲ್ಲ, ಅವರನ್ನು ಯಾರೋ ಸೃಷ್ಟಿ ಮಾಡುತ್ತಾರೆ. `ಓ ಮೈ ಗಾಡ್‌’ ಚಿತ್ರ ಇದೇ ರೀತಿಯ ಕಥೆ ಆಧರಿಸಿತ್ತು. 1965ರಲ್ಲಿ ತಯಾರಾಗಿದ್ದ `ಗೈಡ್‌’ ಸಿನಿಮಾದ ಮುಖ್ಯ ಪಾತ್ರಧಾರಿ ರಾಜು (ದೇವ್ ಆನಂದ್‌) ಜೈಲಿನಿಂದ ಬಿಡುಗಡೆಯ ಬಳಿಕ ಅಲ್ಲಿ ಇಲ್ಲಿ ಸುತ್ತಾಡುತ್ತಿರುತ್ತಾನೆ. ಅದೊಂದು ದಿನ ಆತ ಸಾಧುಗಳ ಗುಂಪಿನಲ್ಲಿ ಒಂದು ಗ್ರಾಮದ ದೇವಾಲಯದ ಕಟ್ಟೆಯ ಮೇಲೆ ಮಲಗುತ್ತಾನೆ. ಅಲ್ಲಿಂದ ಹೊರಡುವ ಮುನ್ನ ಸಾಧುಗಳ ಗುಂಪಿನಲ್ಲಿದ್ದ ಒಬ್ಬ, ಮಲಗಿದ್ದ ರಾಜುವಿನ ಮೈಮೇಲೆ ಕೇಸರಿ ಶಾಲು ಹೊದಿಸಿ ಹೊರಟುಬಿಡುತ್ತಾನೆ. ರೈತನೊಬ್ಬ ಮಲಗಿದ್ದ ರಾಜುವನ್ನು ಸಾಧು ಎಂದು ಭಾವಿಸಿ ಊರಿನಲ್ಲೆಲ್ಲ ಪ್ರಚಾರ ಮಾಡಿದ. ಊರಿನ ಜನರು ಆಹಾರ ಮತ್ತು ಉಡುಗೊರೆ ಜೊತೆಗೆ ರಾಜುವಿನ ಬಳಿ ಬಂದು ಸ್ವಾಮೀಜಿಗೆ ತಮ್ಮ ಸಮಸ್ಯೆ ಅರುಹಿದರು. ರಾಜುವನ್ನು ಅವರು ಸ್ವಾಮೀಜಿ ಎಂದೇ ಕರೆಯತೊಡಗುತ್ತಾರೆ.

ಮತ್ತಿನಲ್ಲಿ ಸೆಕ್ಸ್

ಇದು ವಾರಾಣಸಿಯ ಲಲಿತಾ ಘಾಟ್‌ನಲ್ಲಿ ನಡೆದ ಘಟನೆ. ರಾಮಾಯಣ್ ಬಾಬಾನ ಒಬ್ಬ ಚೇಲಾ ಲಲಿತಾ ಘಾಟ್‌ನಲ್ಲಿ ದಕ್ಷಿಣ ಭಾರತ ಹಾಗೂ ಮಹಾರಾಷ್ಟ್ರದಿಂದ ಬಂದ ಭಕ್ತರಿಗೆ ಬಾಬಾಗಳು ದುಃಖದ ಸಂದರ್ಭದಲ್ಲಿ ಭಕ್ತಾದಿಗಳ ದುಃಖ ಹೇಗೆ ನಿವಾರಿಸುತ್ತಾರೆ ಎಂದು ಹೇಳುತ್ತಾ, ಸ್ವಾಮಿ ಪ್ರಸನ್ನರಾಗಿಬಿಟ್ಟರೆ ಕೈಬಿಟ್ಟು ಹೋದ ಕೆಲಸಗಳು ಕೂಡ ಆಗಿಬಿಡುತ್ತವೆ ಎಂದು ಹೇಳಿದ. ಆ ಮಾತಿಗೆ ಪ್ರಸನ್ನರಾದ ಭಕ್ತರು ಒಬ್ಬರ ನಂತರ ಒಬ್ಬರು ಆತನ ಕಾಲಿಗೆ ಬೀಳತೊಡಗಿದರು. ಆ ಬಾಬಾ ಆಶೀರ್ವಾದದ ರೂಪದಲ್ಲಿ ಕೆಲವರ ಕೂದಲನ್ನು ನೇವರಿಸುತ್ತಿದ್ದ ಇಲ್ಲವೇ ಅವರ ಬೆನ್ನು ಸವರುತ್ತಿದ್ದ. ಜೊತೆಗೆ ದೇಣಿಗೆ ಪೆಟ್ಟಿಗೆ ಕೂಡ ಭರ್ತಿಯಾಯಿತು. ಕೆಲವರಿಗೆ ಬಾಬಾನ ವರ್ತನೆ ಸರಿ ಎನಿಸುತ್ತಿರಲಿಲ್ಲ. ಆದರೆ ಅವರು ಮೂಢನಂಬಿಕೆಯಲ್ಲಿ ಸುಮ್ಮನೇ ಇದ್ದರು.

ರಾಮಾಯಣ್ ಬಾಬಾರಂಥ ಎರಡು ಡಜನ್‌ನಷ್ಟು ಬಾಬಾಗಳು ಯೋಗಿಗಳ ವೇಷದಲ್ಲಿ ಗಂಗಾತಟದಲ್ಲಿ ಅಶ್ಲೀಲತೆಯನ್ನು ಪಸರಿಸುತ್ತಿದ್ದಾರೆ. ಅವರು ನಶೆಯ ಅಮಲಿನಲ್ಲಿ ಸೆಕ್ಸ್ ದಂಧೆ ನಡೆಸುತ್ತಿದ್ದಾರೆ.

ವಿದೇಶಿ ಪ್ರವಾಸಿಗರೇ ಗುರಿ

ಅಂದಹಾಗೆ ಹೆಚ್ಚಿನ ವಿದೇಶೀಯರು ಮಾದಕದ್ರವ್ಯಗಳ ಶೋಧ ಮಾಡುತ್ತಾ ವಾರಾಣಸಿಗೆ ಕಾಲಿಡುತ್ತಾರೆ. ಕೆಲವು ಗೈಡ್‌ ಹಾಗೂ ನಾವಿಕರು ಭೋಗಿ ಬಾಬಾಗಳ ಕಡೆ ಕರೆದುಕೊಂಡು ಹೋಗುತ್ತಾರೆ. ಹೀಗೆ ಅಮಲು ಮತ್ತು ದೇಹ ದಂಧೆಯ ಆಟ ಶುರುವಾಗುತ್ತದೆ. ಅಮಲಿನಲ್ಲಿ ವಿದೇಶಿಗರು ಹೇಗೆ ಮೈಮರೆತು ಬಿಡುತ್ತಾರೆಂದರೆ, ತಮ್ಮೊಂದಿಗೆ ಏನು ಘಟಿಸುತ್ತಿದೆ ಎಂಬುದು ಕೂಡ ಅವರಿಗೆ ಗೊತ್ತಾಗುವುದಿಲ್ಲ. ವಿದೇಶಿ ಯುವತಿಯರನ್ನು ಈ ರೀತಿ ಬಾಬಾಗಳು ಉಪಯೋಗಿಸಿಕೊಳ್ಳುತ್ತಾರೆ.

ಭೋಗಿ ಬಾಬಾಗಳ ಸೂಚನೆಯ ಮೇರೆಗೆ ಅವರ ಚೇಲಾಗಳು ಸಂಭೋಗದ ದೃಶ್ಯವನ್ನು ವಿಡಿಯೋ ಮಾಡಿ ಪೋರ್ನ್‌ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಬಾಬಾಗಳ ಪೋರ್ನ್‌ ವಿಡಿಯೋಗೆ ಭಾರಿ ಮೊತ್ತ ಸಿಗುತ್ತದೆ.

ಜಾಗೃತಿ ಮೂಡುವುದೆಂದು?

ಕೆಲವು ಸಾಧುಗಳು ಧರ್ಮ ಧ್ವಜ ಹಿಡಿದು ವಿಧಾನಸಭೆ ಲೋಕಸಭೆಗೂ ಪ್ರವೇಶ ಪಡೆದರು. ರಾಮಮಂದಿರ ಆಂದೋಲನದಲ್ಲಿ ಹಲವು ಹೊಸ ಸ್ವಾಮಿಗಳು ಭಾಜಪಾ ರಥ ನೀತಿಯಲ್ಲಿ ಸವಾರರಾಗಿ 1991ರಲ್ಲಿ ಸಂಸತ್ತಿನ ಅಂಗಳಕ್ಕೂ ಪ್ರವೇಶಿಸಿದರು.

ಈ ಅಂಧಶ್ರದ್ಧೆ ದೊಡ್ಡ ದೊಡ್ಡವರನ್ನೇ ಢೋಂಗಿಗಳಿಗೆ ಶರಣಾಗುವಂತೆ ಮಾಡುತ್ತದೆ. ದುರಾಶೆಯೇ ಸಮಸ್ತ ಕೆಡುಕಿಗೆ ಕಾರಣ ಎಂಬುದನ್ನು ನಾವೆಲ್ಲ ಅರಿತುಕೊಳ್ಳಬೇಕು. ದುರಾಸೆ ಪ್ರವೃತ್ತಿಯ ವ್ಯಕ್ತಿಗೆ ಸರಿತಪ್ಪಿನ ವ್ಯತ್ಯಾಸ ಗುರುತಿಸಲು ಆಗದು. ಇದೇ ಸುಳಿಯಲ್ಲಿ ಸಿಲುಕಿ ಕೆಲವರು ಬಾಬಾಗಳಿಗೆ ಶರಣಾಗುತ್ತಾರೆ ಹಾಗೂ ಅವರ ಆಟದಲ್ಲಿ ತಮ್ಮದನ್ನೆಲ್ಲ ಕಳೆದುಕೊಳ್ಳುತ್ತಾರೆ.

– ಮೋನಿಕಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ