ಶಾಸ್ತ್ರೀಯ ಸಂಗೀತದ ನಂತರ ನಮ್ಮ ದೇಶದಲ್ಲಿ ಅತೀ ಪ್ರಸಿದ್ಧವಾದ ಶಾಸ್ತ್ರೀಯ ನೃತ್ಯಕಲೆ ಎಂದರೆ ಭರತನಾಟ್ಯ. ಈ ಅಮೋಘ ಕಲೆಯ ಬಗ್ಗೆ ಒಂದು ಇಣುಕು ನೋಟ ಇಲ್ಲಿದೆ.......!
ಇಂದ್ರಾದಿ ದೇವತೆಗಳು ತಮ್ಮ ಬಿಡುವಿನ ವೇಳೆ ಕಳೆಯಲು ಯಾವುದಾದರೂ ಒಂದು ವಿಧಾನ ಹೇಳಿಕೊಡಬೇಕೆಂದು ಬ್ರಹ್ಮನನ್ನು ಪ್ರಾರ್ಥಿಸಿದರು. ಆಗ ನಾಟ್ಯವೇದನೆಂಬ ವೇದ ರಚಿಸಿ ಭರತ ಮುನಿಗೆ ಹೇಳಿದನೆಂದು ಆತ ಗಂಧರ್ವ ಅಪ್ಸರೆಯರಿಗೆ ಹೇಳಿಕೊಟ್ಟನೆಂದು, ಇವರೆಲ್ಲಾ ಸೇರಿ ಶಿವನ ಎದುರಿಗೆ ನರ್ತಿಸಿದಾಗ ಶಿವ ತೃಪ್ತನಾಗಿ ತನ್ನ ಗಣಗಳಿಗೂ ಬೋಧಿಸುವಂತೆ ಹೇಳಿದನಂತೆ. ಶಿವನ ತಾಂಡವ ಗಂಡು ನೃತ್ಯ, ಪಾರ್ವತಿಯ ಲಾಸ್ಯ ಹೆಣ್ಣು ನೃತ್ಯ. ಹೀಗೆ ದಂತ ಕಥೆ ನಮ್ಮ ದೇಶದ ಉದ್ದ ಅಗಲಕ್ಕೂ ಪಸರಿಸಿ ಭರತನಾಟ್ಯ ಎನಿಸಿದೆ.
ಭರತನಾಟ್ಯ ದಕ್ಷಿಣ ಭಾರತದ ಒಂದು ಪಾರಪಂರಿಕ ನೃತ್ಯ ಕಲೆ. ಭರತ ಮುನಿಯಿಂದ ರಚಿಸಲ್ಪಟ್ಟಿರುವುದರಿಂದ `ಭರತನಾಟ್ಯ' ಎಂದು ಕರೆಯಲ್ಪಟ್ಟಿತು. ಇದು ಒಂದು ಶಾಸ್ತ್ರೀಯ ನೃತ್ಯ ಪ್ರಕಾರವಾಗಿದ್ದು, ದಕ್ಷಿಣ ಭಾರತದಲ್ಲಿ ತಮಿಳುನಾಡು ಕರ್ನಾಟಕದಲ್ಲಿ ಹೆಚ್ಚು ಪ್ರಚಲಿತವಾಗಿದೆ. ಇದು ಹೆಚ್ಚು ಮಹಿಳೆಯರಿಂದ ಮಾಡುವ ನೃತ್ಯವಾಗಿದೆ.
ಈ ನೃತ್ಯಕ್ಕೆ ಪ್ರಾಚೀನ ಚಿದಂಬರ ದೇಗುಲದ ಶಿಲ್ಪಗಳೇ ಸ್ಛೂರ್ತಿ. ಇದಕ್ಕೆ ಶಾಸ್ತ್ರೀಯ ನೆಲೆಗಟ್ಟನ್ನು ಒದಗಿಸಿದವರು ತಂಜಾವೂರಿನ ನಾಲ್ಕು ಸಹೋದರರು.
ಬೆಳೆದು ಬಂದ ಪರಿ
ಭರತನಾಟ್ಯ ಎಂದರೆ ಭಾವ ರಾಗ ತಾಳವನ್ನು ವ್ಯಕ್ತಪಡಿಸುವ ನೃತ್ಯ ಎಂದರ್ಥ. ಧಾರ್ಮಿಕ ಅನುಭವ ಆಳಗೊಳಿಸುವ ಉದ್ದೇಶದಿಂದ ದೇವಾಲಯಗಳಲ್ಲಿ ಬೇರುಬಿಟ್ಟಿತು. ದಕ್ಷಿಣ ಭಾರತದ ದೇವಾಲಯಗಳಲ್ಲಿ ಭಗವಂತನಿಗೆ ಸೇವೆ ಮಾಡಲು ಮೀಸಲಾಗಿರುವ ನೃತ್ಯ ಮಾಡುವ ಮಹಿಳೆಯರು ದೇವದಾಸಿಗಳೆಂದು ಕರೆಯಲ್ಪಟ್ಟರು. ರಾಜ ಮಹಾರಾಜರ ಕಾಲದಲ್ಲೂ ನೃತ್ಯ ಮಾಡುವ ಮಹಿಳೆಯರಿಗೆ ವಿಶೇಷ ಗೌರವವಿತ್ತು. ಅವರು ಹೆಚ್ಚಿನ ಪ್ರೋತ್ಸಾಹ ಕೊಟ್ಟರು.
ಹೊಯ್ಸಳರ ದೊರೆ ವಿಷ್ಣುವರ್ಧನನ ರಾಣಿ ಶಾಂತಲೆ ನಾಟ್ಯ ಪ್ರವೀಣೆಯಾಗಿದ್ದಳೆಂದು ಬೇಲೂರಿನ ಶಿಲ್ಪಕಲೆಗೆ ಅವಳೇ ಸ್ಛೂರ್ತಿ. 23ನೇ ಶತಮಾನದ ದೇವಾಲಯಗಳ ಶಿಲ್ಪ ವಿನ್ಯಾಸದಲ್ಲಿ ಈ ಕಲೆಯನ್ನು ಗುರುತಿಸಬಹುದು. ತಂಜಾವೂರಿನ ರಾಜ ರಾಜ ಚೋಳ, ಬೃಹದೇಶ್ವರ ದೇವಾಲಯದ ಸಭಾಂಗಣದಲ್ಲಿ ಪೂಜಾ ಸಮಯದ ನರ್ತನಕ್ಕಾಗಿ 400 ನರ್ತಕಿಯರನ್ನು ನೇಮಿಸಿದ್ದನಂತೆ!

ಬೇಲೂರಿನ ಶಿಲಾ ವೈಭವ
ಚಿದಂಬರದ ತಾಂಡವ ಭಂಗಿಗಳು ಬೇಲೂರಿನ ಮದನಿಕೆ ವಿಗ್ರಹಗಳು ಈ ನಾಟ್ಯದ ಬಗ್ಗೆ ಸೂಚಿಸುತ್ತವೆ. ಭರತನಾಟ್ಯಕ್ಕೆ ಇಂದು ತಮಿಳುನಾಡಿನ ತಂಜಾವೂರು ಮತ್ತು ಕಾಂಚಿಪುರಗಳು ಕೇಂದ್ರವಾಗಿವೆ.
ಈ ಕಲೆಯನ್ನು ಕರಗತ ಮಾಡಿಕೊಳ್ಳಬೇಕಾದರೆ ಕಲಾವಿದನ ದೇಹ ಹಾಗೂ ಇಂದ್ರಿಯಗಳು ಹತೋಟಿಯಲ್ಲಿ ಇರಬೇಕು. ಭರತನಾಟ್ಯ ಅಭ್ಯಾಸದಲ್ಲಿ ತಾಳ, ಹೆಜ್ಜೆ, ಹಸ್ತ ಮುದ್ರೆ, ಮುಖಭಾವಗಳಿಗೆ ಹೆಚ್ಚಿನ ಗಮನ ಕೊಡಬೇಕು. ಮುದ್ರೆ ಮತ್ತು ಮುಖಚಲನೆಯಿಂದ ಒಂದು ವಿಷಯದ ಬಗ್ಗೆ ಅಭಿನಯದ ರೂಪವಾಗಿ ನರ್ತಿಸಿದರೆ ನೃತ್ಯವಾಗುತ್ತದೆ. ಉಡುಪು ಸರಳಾಗಿರಬೇಕು.
ಆಂಗಿಕ ಅಭಿವ್ಯಕ್ತಿ
ದೇಹದ ಆಕೃತಿಗೆ ಹಾಗೂ ಮುಖ ಲಕ್ಷಣದ ಅಂದಕ್ಕೆ ಮೆರಗು ಕೊಡುವಂತಿರಬೇಕು. ಭರತನಾಟ್ಯದಲ್ಲಿ ಎಂಟು ರಸಗಳನ್ನು ಗುರುತಿಸಲಾಗಿದೆ. ಪ್ರತಿಯೊಂದು ಸ್ಥಾಯಿಭಾವದಿಂದ ಒಂದೊಂದು ರಸ ಉತ್ಪನ್ನವಾಗುತ್ತದೆ. ಒಂದೊಂದು ರಸಕ್ಕೆ ಒಂದೊಂದು ಅಧಿದೇವತೆ ಹಾಗೂ ಒಂದೊಂದು ಬಣ್ಣ ಸೂಚಿಸಲಾಗಿದೆ. ಶೃಂಗಾರಕ್ಕೆ ಹಸಿರು, ಹಾಸ್ಯಕ್ಕೆ ಬಿಳಿ, ಕರುಣಕ್ಕೆ ಬೂದು, ರೌದ್ರಕ್ಕೆ ಕೆಂಪು, ಉತ್ಸಾಹಕ್ಕೆ ಕಿತ್ತಳೆ, ಭಯಕ್ಕೆ ಕಪ್ಪು, ಜಿಗುಪ್ಸೆಗೆ ನೀಲಿ, ವಿಸ್ಮಯಕ್ಕೆ ಹಳದಿ. ಇಂದಿನ ನಾಟ್ಯ ಪದ್ಧತಿಯಲ್ಲಿ ಶಾಂತ ರಸವನ್ನು ಸೇರಿಸಿ ನವರಸ ಎಂದು ಪ್ರದರ್ಶಿಸುತ್ತಾರೆ.





