ಅವು ಯಾವುವು ಮತ್ತು ಅವುಗಳಿಂದ ತಪ್ಪಿಸಿಕೊಳ್ಳುವುದು ಹೇಗೆಂದು ತಿಳಿಯೋಣ ಬನ್ನಿ :
ಸನ್ಬರ್ನ್ : ಇದು ಈ ಸೀಸನ್ನಲ್ಲಿನ ಸಾಮಾನ್ಯ ಸಮಸ್ಯೆಯಾಗಿದೆ. ಬಿಸಿಲಿನಲ್ಲಿ ಹೆಚ್ಚು ಸಮಯ ಇದ್ದಾಗ, ಸೂರ್ಯನ ಅಲ್ಟ್ರಾವಯ್ಲೆಟ್ ಕಿರಣಗಳ ಸಂಪರ್ಕದಿಂದಾಗಿ ಚರ್ಮದ ಟಿಶ್ಶೂಗಳು ಸುಟ್ಟು ಹೋಗುತ್ತವೆ. ಸನ್ಬರ್ನ್ನ ಕೆಲವು ಲಕ್ಷಣಗಳೆಂದರೆ ಚರ್ಮ ಕೆಂಪಾಗುವುದು, ತಲೆ ಸುತ್ತಿದಂತಾಗುವುದು ಮತ್ತು ಆಯಾಸ ಉಂಟಾಗುವುದು. ಸನ್ಬರ್ನ್ ಯುವಿ ಕಿರಣಗಳ ಕಾರಣವಾದರೆ, ಇದು ಸ್ಕಿನ್ ಕ್ಯಾನ್ಸರ್ನ ಕಾರಣ ಆಗಬಹುದು.
ರಕ್ಷಣೆ : ಸನ್ಬರ್ನ್ನಿಂದ ರಕ್ಷಣೆ ಪಡೆಯಲು, ಹೊರಗೆ ಹೋಗುವ 20 ನಿಮಿಷಗಳ ಮೊದಲು ಶರೀರದ ತೆರೆದ ಭಾಗಗಳಿಗೆ ಸನ್ಸ್ಕ್ರೀನ್ ಲೋಶನ್ ಹಚ್ಚಿಕೊಳ್ಳಿ.
ಹೀಟ್ ಸ್ಟ್ರೋಕ್ : ಇದು ಹೈಪರ್ ಡರ್ಮಿಯಾದ ಗಂಭೀರ ಸ್ವರೂಪವಾಗಿದೆ. ಶರೀರಕ್ಕೆ ಅತಿಯಾದ ಬಿಸಿಲಿನ ಝಳ ತಗುಲಿದಾಗ ಹೀಗೆ ಆಗುತ್ತದೆ. ಇದಕ್ಕೆ ಚಿಕಿತ್ಸೆ ಪಡೆಯದಿದ್ದರೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಇದರ ಕೆಲವು ಲಕ್ಷಣಗಳೆಂದರೆ ಉಸಿರಾಟದ ತೊಂದರೆ, ನಾಡಿ ಬಡಿತದ ಹೆಚ್ಚಳ, ಶರೀರದ ಉಷ್ಣತೆಯ ಹೆಚ್ಚಳ, ಭ್ರಮಾವಸ್ಥೆ ಇತ್ಯಾದಿ.
ರಕ್ಷಣೆ : ಹಗಲು 11 ಗಂಟೆಯಿಂದ 4 ಗಂಟೆಯವರೆಗೆ ಮನೆಯೊಳಗೇ ಇರಲು ಪ್ರಯತ್ನಿಸಿ. ಹೊರಗೆ ಹೋಗಲೇಬೇಕಾದ ಸಂದರ್ಭ ಬಂದರೆ, ಮುಖ ಮತ್ತು ಶರೀರವನ್ನು ಸ್ಟೋಲ್ ನಿಂದ ಚೆನ್ನಾಗಿ ಮುಚ್ಚಿಕೊಳ್ಳಿ.
ಬೆವರುಸಾಲೆ : ಅತಿ ಹೆಚ್ಚು ಉಷ್ಣತೆಯಿಂದಾಗಿ ಚರ್ಮದ ಮೇಲೆ ಕಾಣಿಸಿಕೊಳ್ಳುವ ಕೆಂಪು ರಾಶೆಸ್ನಿಂದ ಬೆವರುಸಾಲೆ ಉಂಟಾಗುತ್ತದೆ. ಬೆವರಿನ ರಂಧ್ರಗಳು ಮುಚ್ಚಿಕೊಳ್ಳುವುದರಿಂದಲೂ ಹೀಗಾಗಬಹುದು.
ರಕ್ಷಣೆ : ಶರೀರದಲ್ಲಿ ಹೆಚ್ಚು ಬೆವರುವ ಜಾಗಕ್ಕೆಲ್ಲ ಪ್ರಿಕ್ಲೀಹೀಟ್ ಪೌಡರ್ ಬಳಸಿ. ಗುಣ ಕಾಣದಿದ್ದರೆ ವೈದ್ಯರನ್ನು ಸಂಪರ್ಕಿಸಿ.
ಫುಡ್ ಪಾಯಿಸನಿಂಗ್ : ಬೇಸಿಗೆಯ ಕಾಲದಲ್ಲಿ ಹೆಚ್ಚು ಬಿಸಿಲಿನಿಂದಾಗಿ ಅಡುಗೆಯು ಬೇಗನೆ ಹಾಳಾಗುತ್ತದೆ. ಆದ್ದರಿಂದ ಯಾವಾಗಲೂ ತಾಜಾ ಆಹಾರ ಪಾನೀಯಗಳನ್ನು ಸೇವಿಸಿ. ಹಳಸಿದ ಆಹಾರ ಅಥವಾ ಅಶುದ್ಧ ನೀರಿನ ಸೇವನೆಯಿಂದ ಫುಡ್ಪಾಯಿಸನಿಂಗ್ ಉಂಟಾಗುತ್ತದೆ. ಆದ್ದರಿಂದ ಅನಗತ್ಯ ಆಹಾರ, ರಸ್ತೆಯಲ್ಲಿ ಮಾರುವ ತಿಂಡಿ ತಿನಿಸುಗಳನ್ನು ಸೇವಿಸಬೇಡಿ. ಏಕೆಂದರೆ ಇವು ಬೇಗನೆ ಹಾಳಾಗುವ ಸಂಭವಿರುತ್ತದೆ.
ರಕ್ಷಣೆ : ಆಹಾರವನ್ನು ಚೆನ್ನಾಗಿ ಬೇಯಿಸಿ ಉಳಿದ ಆಹಾರವನ್ನು ಫ್ರಿಜ್ನಲ್ಲಿರಿಸಿ. ತಿನ್ನುವ ಮೊದಲು ಅದು ಹಾಳಾಗಿಲ್ಲವೇ ಎಂದು ಪರೀಕ್ಷಿಸಿ. ಹಣ್ಣು, ತರಕಾರಿಗಳನ್ನು ಕೊಳ್ಳುವಾಗ ಅವು ಚೆನ್ನಾಗಿವೆಯೇ ಎಂದು ನೋಡಿ.
ಭೇದಿ : ಬೇಸಿಗೆ ಕಾಲದಲ್ಲಿ ಆಹಾರ ಬೇಗನೆ ಕೆಡುವುದರಿಂದ ಭೇದಿ ಉಂಟಾಗುವ ಸಂಭವ ಹೆಚ್ಚಾಗಿರುತ್ತದೆ.
ರಕ್ಷಣೆ : ಕುದಿಸಿದ ನೀರನ್ನೇ ಕುಡಿಯಿರಿ. ಹಣ್ಣು, ತರಕಾರಿಗಳನ್ನು ಚೆನ್ನಾಗಿ ತೊಳೆದು ಬಳಸಿ. ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಿ.
ನೀರಿನಿಂದ ಹರಡು ಕಾಯಿಲೆಗಳು : ಬೇಸಿಗೆಯಲ್ಲಿ ನಾವು ನೀರಿನಲ್ಲಿ ಕಾಲ ಕಳೆಯಲು ಇಷ್ಟಪಡುತ್ತೇವೆ. ಇದರಿಂದ ಬ್ಯಾಕ್ಟೀರಿಯಲ್ ಇನ್ಫೆಕ್ಷನ್ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ನದಿ ಈಜುಕೊಳ ಮುಂತಾದವುಗಳ ಮೂಲಕ ಜೀರ್ಣಕ್ರಿಯೆಗೆ ಸಂಬಂಧಿಸಿದ ಕಾಯಿಲೆಗಳು ಹರಡಬಹುದು. ಇದಲ್ಲದೆ ಚರ್ಮ, ಕಣ್ಣು, ಕಿವಿಗಳಿಗೆ ಸಾಂಕ್ರಾಮಿಕ ರೋಗಗಳು, ನ್ಯೂರೊಲಾಜಿಕಲ್ ಮತ್ತು ವೈರಲ್ ರೋಗಗಳೂ ಹರಡಬಹುದು.
ರಕ್ಷಣೆ : ಶುದ್ಧ ನೀರನ್ನೇ ಕುಡಿಯಿರಿ. ನೀವು ಹೋಗುವ ಸ್ವಿಮಿಂಗ್ ಪೂಲ್ನಲ್ಲಿ ಸರಿಯಾದ ಕ್ಲೋರಿನ್ ಪ್ರಮಾಣ ಹಾಕಿದ್ದಾರೆಯೇ ಎಂದು ಗಮನಿಸಿ.
ಸಮ್ಮರ್ ಕೋಲ್ಡ್ : ಆಂಟ್ರೊವೈರಸ್ಎಂಬ ವೈರಸ್ನಿಂದ ಬೇಸಿಗೆಯಲ್ಲೂ ಶೀತವಾಗಿರುವ ಲಕ್ಷಣಗಳು ಕಂಡುಬರುವುದುಂಟು. ಇದರ ಲಕ್ಷಣವೆಂದರೆ ತಲೆನೋವು, ಗಂಟಲು ಕೆರೆತ, ಮುಖದ ಊತ, ರಾಶೆಸ್, ಇತ್ಯಾದಿ.
ರಕ್ಷಣೆ : ಲಕ್ಷಣಗಳಿಗೆ ತಕ್ಕಂತೆ ಚಿಕಿತ್ಸೆ ನೀಡಲಾಗುವುದು. ಹಾಗಾದಾಗ ವೈದ್ಯರನ್ನು ಸಂಪರ್ಕಿಸಿ.
ಆಹಾರ : ಪೌಷ್ಟಿಕ ಆಹಾರ ಸೇವಿಸಿ. ಬೇಸಿಗೆಯಲ್ಲಿ ದೊರೆಯುವ ಕೆಲವು ಹಣ್ಣು ತರಕಾರಿಗಳು ಆರೋಗ್ಯಕ್ಕೆ ಬಹಳ ಉತ್ತಮವಾಗಿರುತ್ತವೆ. ಸಿಟ್ರಸ್ ಫಲಗಳು, ಕರ್ಬೂಜ, ಯೋಗರ್ಟ್, ಮೀನು, ಮೊಟ್ಟೆ ಇತ್ಯಾದಿ ತಿನಿಸುಗಳನ್ನು ಚೆನ್ನಾಗಿ ಸೇವಿಸಿ. ಕೆಫೀನ್, ಆಲ್ಕೋಹಾಲ್ ಮತ್ತು ಕಾರ್ಬೊನೇಟೆಡ್ ಪಾನೀಯಗಳನ್ನು ವರ್ಜಿಸಿ.
ಹೆಚ್ಚು ನೀರು ಕುಡಿಯಿರಿ : ನೀರು ಶರೀರಕ್ಕೆ ತಂಪು ನೀಡುತ್ತದೆ. ಹವೆಯಲ್ಲಿ ಆರ್ದ್ರತೆ ಇರುವುದರಿಂದ ಬೆವರು ಬೇಗನೆ ಆರುವುದಿಲ್ಲ. ಆದ್ದರಿಂದ ಬಾಯಾರಿಕೆ ಇಲ್ಲದಿದ್ದಾಗಲೂ ಆಗಾಗ ನೀರು ಕುಡಿಯುತ್ತಿರಿ.
ಫೈಬರ್ ಯುಕ್ತ ಆಹಾರ ಸೇವಿಸಿ. ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸಿ. ಅತಿ ಬಿಸಿಯಾದ, ಕರಿದ, ಮಸಾಲೆಯುಕ್ತ ಆಹಾರ ತಿನ್ನಬೇಡಿ.
– ಡಾ. ನಿರ್ಮಲಾ