ಮನೆವಾರ್ತೆಯಲ್ಲಿ ಸಾಮಾನ್ಯವಾಗಿ ನಾದಿನಿ ಹಸ್ತಕ್ಷೇಪ ಮಾಡುವುದರಿಂದ ಅತ್ತಿಗೆ ಸಾಕಷ್ಟು ತೊಂದರೆ ಕಿರುಕುಳವನ್ನು ಅನುಭವಿಸಬೇಕಾಗುತ್ತದೆ. ನಾದಿನಿ ತವರಿನಲ್ಲಿಯೇ ಇರಬಹುದು ಅಥವಾ ತನ್ನ ಗಂಡನ ಮನೆಯಲ್ಲಿಯೇ ಇರಬಹುದು. ಅವಳು ಅತ್ತಿಗೆಯ ವಿರುದ್ಧ ತನ್ನ ಅಮ್ಮನ ಕಿವಿ ಊದುತ್ತಿರುತ್ತಾಳೆ. ಅಷ್ಟೇ ಅಲ್ಲ ಅಣ್ಣ, ತಮ್ಮನನ್ನು ಕೂಡ ರೊಚ್ಚಿಗೆಬ್ಬಿಸುತ್ತಿರುತ್ತಾಳೆ. ಇದರ ಕಾರಣ ಇಷ್ಟೆ, ತಂಗಿಯು ತನ್ನ ಅಣ್ಣನ ಮೇಲೆ ತನ್ನದೇ ಸಂಪೂರ್ಣ ಹಕ್ಕು ಎಂದು ಭಾವಿಸುತ್ತಾಳೆ. ತನ್ನದೇ ಹಕ್ಕಿನಿಂದ ಅಣ್ಣನನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಬಯಸುತ್ತಾಳೆ. ಅಣ್ಣ ಏನಾದರೂ ದೂರದರ್ಶಿತ್ವ ಹೊಂದಿರದಿದ್ದರೆ ಅವನು ತನ್ನ ಅಕ್ಕ/ತಂಗಿಯ ಮಾತುಗಳಿಗೆ ಬಲಿಬಿದ್ದು ತನ್ನ ಹೆಂಡತಿಯ ಮೇಲೆ ಸಾಕಷ್ಟು ಅನ್ಯಾಯ ಎಸಗುತ್ತಾನೆ.
ಅತ್ತಿಗೆ ನಾದಿನಿಯ ವಿವಾದಕ್ಕೆ ಏನು ಕಾರಣವಿರಬಹುದು ಎಂದು ನೀವು ಯೋಚಿಸಿದ್ದೀರಾ? ನೀವು ಅದರ ಕಾರಣವನ್ನು ಹುಡುಕುತ್ತ ಹೋದರೆ, ಅದಕ್ಕೆ ಸಿಗುವ ಉತ್ತರ `ನಾನು ಎಂಬ ಅಹಂ!’ ಎಲ್ಲಿಯವರೆಗೆ ನಿಮ್ಮೊಳಗೆ ಅಹಂ ಇರುತ್ತದೊ, ಅಲ್ಲಿಯವರೆಗೆ ನಿಮ್ಮ ಸಂಬಂಧ ಎಂಬ ವಾಹನವನ್ನು ಬಹುದೂರದ ತನಕ ಕೊಂಡೊಯ್ಯಲು ಆಗುವುದಿಲ್ಲ.
ಇತ್ತೀಚೆಗೆ ನಡೆದ ಒಂದು ಘಟನೆಯನ್ನು ನೋಡಿ, ಬೆಂಗಳೂರಿನ ಒಂದು ಕುಟುಂಬದ ಅತ್ತಿಗೆ ಹಾಗೂ ನಾದಿನಿ ನಡುವೆ ಚಿಕ್ಕಪುಟ್ಟ ಜಗಳಗಳು ನಡೆಯುತ್ತಲೇ ಇದ್ದವು. ನಾದಿನಿಗೆ ಇದನ್ನು ಸಹಿಸಿಕೊಳ್ಳಲು ಆಗದೇ ಇದ್ದಾಗ ಆಕೆ ಅತ್ತಿಗೆಯ ವಿರುದ್ಧ ಒಂದು ರೀತಿಯ ಸಂಚು ಹೂಡಿದಳು.
ಆಕಸ್ಮಿಕ ಎಂಬಂತೆ ಆಕೆಯ ಅಣ್ಣನಿಗೆ ಅಪರಿಚಿತ ನಂಬರ್ವೊಂದರಿಂದ ಕರೆಗಳು ಬರಲು ಆರಂಭವಾದವು. ಫೋನ್ ಮಾಡಿದ ವ್ಯಕ್ತಿ `ನಾನು ನಿಮ್ಮ ಹೆಂಡತಿಯ ಪ್ರೇಮಿ. ನಾವು ಈಗಲೂ ಪ್ರೀತಿಸುತ್ತಿದ್ದೇವೆ. ಬೇಕಿದ್ದರೆ ನೀವು ಈಗಲೇ ನಿಮ್ಮ ಪತ್ನಿಯನ್ನು ಕೇಳಿ ನೋಡಿ,’ ಎಂದು ಆ ವ್ಯಕ್ತಿ ಹೇಳಿದ. ಆಕೆಯ ಅಣ್ಣ ಅದೆಷ್ಟು ಮುಂಗೋಪಿ ಹಾಗೂ ಸಂದೇಹದ ಸ್ವಭಾವದವನಾಗಿದ್ದನೆಂದರೆ, ಮದುವೆಯಾದ ನಾಲ್ಕೇ ತಿಂಗಳಲ್ಲಿ ಹೆಂಡತಿಗೆ ವಿಚ್ಛೇದನ ಕೊಡುವಂತಹ ಸ್ಥಿತಿ ಉದ್ಭವಿಸಿತು. ಆಕೆ ಈಗ ತನ್ನ ತವರಿನಲ್ಲಿದ್ದಾಳೆ. ಆಕೆ ತನಗಾದ ಅನ್ಯಾಯದ ವಿರುದ್ಧ ಈ ಮಹಿಳಾ ಹೆಲ್ಪ್ ಲೈನ್ಮೊರೆ ಹೋದಳು. ತನಿಖೆ ಆರಂಭವಾಗುತ್ತಿದ್ದಂತೆ ನಾದಿನಿಯ ಕರಾಮತ್ತು ಬಯಲಿಗೆ ಬಂತು.
ಚಿಕ್ಕ ಕಾರಣ ದೊಡ್ಡ ವಿವಾದ : ಅತ್ತಿಗೆ ಹಾಗೂ ನಾದಿನಿ ನಡುವೆ ನಡೆಯುವ ಜಗಳಗಳಿಗೆ ಕಾರಣ. ಅತ್ಯಂತ ಸಾಮಾನ್ಯವಾಗಿರುತ್ತದೆ. ಮದುವೆಗೂ ಮುಂಚೆ ಮನೆಯ ಪ್ರತಿಯೊಂದು ವಸ್ತುವಿನ ಮೇಲೂ ನಾದಿನಿಗೆ ಹಕ್ಕು ಇರುತ್ತದೆ. ಆದರೆ ಮದುವೆಯ ಬಳಿಕ ಪರಿಸ್ಥಿತಿ ಬದಲಾಗುತ್ತದೆ. ಈಗ ನಾದಿನಿ ಮನೆಯ ಅತಿಥಿಯಂತಾಗಿ ಬಿಡುತ್ತಾಳೆ. ಅತ್ತಿಗೆ ಮನೆಯ ಯಜಮಾನಿ ಆಗಿಬಿಡುತ್ತಾಳೆ. ಇಂತಹ ಸ್ಥಿತಿಯಲ್ಲಿ ಚಿಕ್ಕ ಚಿಕ್ಕ ವಿಷಯಗಳಿಗೆ ನಾದಿನಿಯ ಹಸ್ತಕ್ಷೇಪ ಅತ್ತಿಗೆಗೆ ಸಹಿಸಿಕೊಳ್ಳಲು ಆಗುವುದಿಲ್ಲ. ಇಲ್ಲಿಂದಲೇ ಸಣ್ಣಪುಟ್ಟ ಜಗಳಗಳು ಶುರುವಾಗುತ್ತವೆ.
ಒಂದು ಸಾರ್ವಕಾಲಿಕ ಸತ್ಯವೆಂದರೆ, ನಾವು ಒಮ್ಮಿಲ್ಲೊಮ್ಮೆ ಅಧಿಕಾರ ಹಸ್ತಾಂತರ ಮಾಡಲೇಬೇಕು. ನಾವು ಎಂದೆಂದಿಗೂ ಮಾಲೀಕರಾಗಿ ಕುಳಿತುಕೊಂಡರೆ ನಮಗೆ ಯಾರ ಪ್ರೀತಿವಿಶ್ವಾಸವೂ ದೊರೆಯುವುದಿಲ್ಲ.
ಆದ್ಯತೆಗಳು ಬದಲಾಗುತ್ತವೆ : ತಾನು ಸೋದರಿ ಆಗಿರುವ ಕಾರಣದಿಂದ ಮದುವೆಯ ಬಳಿಕ ತನ್ನ ಆದ್ಯತೆಗಳು ಬದಲಾಗುತ್ತವೆ ಎನ್ನುವುದನ್ನು ನಾದಿನಿ ತಿಳಿದುಕೊಳ್ಳಬೇಕು. ನಿಮ್ಮನ್ನು ನೀವು ಭಾವನಾತ್ಮಕವಾಗಿ ಯಾರ ಮೇಲೂ ಆಶ್ರಿತರನ್ನಾಗಿ ಮಾಡಿಕೊಳ್ಳಬೇಡಿ. ಅಣ್ಣ ಹಾಗೂ ಅತ್ತಿಗೆಯ ಸಂಬಂಧ ಮಧುರವಾಗಿರುವಂತೆ ನೋಡಿಕೊಳ್ಳಬೇಕಾದುದು ನಿಮ್ಮ ಕರ್ತವ್ಯ. ಅತ್ತಿಗೆ ಹಾಗೂ ನಾದಿನಿ ಇಬ್ಬರೂ ತಿಳಿದುಕೊಳ್ಳಬೇಕಾದ ಸಂಗತಿಯೆಂದರೆ, ಯಾವುದೇ ವ್ಯಕ್ತಿಗೆ ಹೆಂಡತಿ ಹಾಗೂ ಸೋದರಿ ಇಬ್ಬರ ಜೊತೆಗೆ ನಿಕಟತೆ ಅತ್ಯವಶ್ಯ. ಹೀಗಾಗಿ ಅಣ್ಣನ ಮೇಲೆ ಹೆಂಡತಿ ಅಥವಾ ತಂಗಿ ಯಾರನ್ನಾದರೂ ಆಯ್ಕೆ ಮಾಡಿಕೊಳ್ಳಬೇಕೆಂದು ನೀವು ಒತ್ತಡ ಹೇರಬೇಡಿ.
ಅಧಿಕಾರ : ಒಂದು ಸತ್ಯ ಸಂಗತಿಯೆಂದರೆ, ಪ್ರತಿಯೊಂದು ಮನೆಯಲ್ಲಿ ಅತ್ತಿಗೆ ತನಗೇ ಹೆಚ್ಚಿನ ಸ್ವಾತಂತ್ರ್ಯ ಇರಬೇಕು, ತನ್ನ ಇಚ್ಛೆಯ ಮೇರೆಗೆ ಎಲ್ಲ ಕೆಲಸ ಕಾರ್ಯಗಳೂ ನಡೆಯಬೇಕು ಎಂದು ಇಚ್ಛಿಸುವುದು ಸಹಜ. ನಾದಿನಿಗೆ ಅನಿಸುವುದೇನೆಂದರೆ, ಮೊದಲು ತನ್ನ ಮಾತಿಗೆ ಬೆಲೆ ಇರುತ್ತಿತ್ತು, ಈಗಲೂ ಹಾಗೆಯೇ ಮುಂದುವರಿಯಬೇಕು ಎಂದು ಆಕೆ ಬಯಸುತ್ತಾಳೆ. ಅತ್ತಿಗೆ ಹಾಗೂ ನಾದಿನಿ ಇಬ್ಬರೂ ತಿಳಿದುಕೊಳ್ಳಬೇಕಾದ ಒಂದು ಸಂಗತಿಯೆಂದರೆ, ಕಾಲಕ್ಕೆ ತಕ್ಕಂತೆ ಪರಿಸ್ಥಿತಿ ಬದಲಾಗುತ್ತದೆ.
ಸಮವಯಸ್ಕರಾಗಿರುವುದು : ಅತ್ತಿಗೆ ಹಾಗೂ ನಾದಿನಿ ಇಬ್ಬರೂ ಸಾಮಾನ್ಯವಾಗಿ ಸಮ ವಯಸ್ಸಿನವರಾಗಿರುತ್ತಾರೆ. ಇಬ್ಬರೂ ತಿಳಿದುಕೊಳ್ಳಬೇಕಾದ ಸಂಗತಿಯೆಂದರೆ, ತಮ್ಮಿಂದಾಗಿ ಅಣ್ಣ ಅಥವಾ ಗಂಡನಿಗೆ ಸಮಸ್ಯೆ ಆಗಬಾರದು. ಸಮವಯಸ್ಕರಾಗಿರುವ ಕಾರಣದಿಂದ ಇಬ್ಬರ ನಡುವೆ ಸಾಮಾನ್ಯವಾಗಿ ಜಗಳಗಳು ಆಗುತ್ತಿರುತ್ತದೆ. ಅತ್ತಿಗೆ ನಾದಿನಿಯ ಸಂಬಂಧವನ್ನು ಸ್ನೇಹ ಸಂಬಂಧವಾಗಿಸಲು ಪ್ರಯತ್ನಿಸಬೇಕು. ಸಂಬಂಧಗಳನ್ನು ಜೋಡಿಸುವ ಮುಂಚೆ ನಾವು ಅವುಗಳ ದೂರಗಾಮಿ ಪರಿಣಾಮಗಳ ಬಗ್ಗೆ ಯೋಚಿಸಬೇಕು. ಏಕೆಂದರೆ ಅದೇ ದಾರಿಯಲ್ಲಿ ನಾವು ಬಹುದೂರದ ತನಕ ಹೋಗಬೇಕಾಗುತ್ತದೆ. ಸಂಬಂಧಗಳು ಒಂದು ಸಲ ರೂಪುಗೊಂಡರೆ, ಅವು ಹದಗೆಡದಂತೆ ಎಚ್ಚರವಹಿಸಬೇಕು. ಅದನ್ನು ಜೀವನವಿಡೀ ನಿಭಾಯಿಸಬೇಕು. ಪ್ರೀತಿಯೆಂಬ ಅಮೃತದಿಂದ ವೈರತ್ವದ ವಿಷವನ್ನು ನಾವೇಕೆ ನಿವಾರಿಸಬಾರದು?
– ಮೋನಿಕಾ