“ರಶ್ಮಿ , ಮನೆಯ ಎಲ್ಲ ಕೆಲಸಗಳನ್ನೂ ಮಾಡಲು ಕಲಿತುಕೊ. ಇಲ್ಲದಿದ್ದರೆ ಮದುವೆಯ ಬಳಿಕ ಅತ್ತೆ ಮನೆಯವರು ಇವಳಿಗೆ ಅಮ್ಮ ಏನೂ ಕಲಿಸಿಯೇ ಇಲ್ಲ ಎಂದುಕೊಳ್ಳುತ್ತಾರೆ.”

“ಶಿಲ್ಪಾ, ಇನ್ನೂ ಎಷ್ಟು ವರ್ಷ ಓದಬೇಕು ಅಂತಿದೀಯಾ? ನಿನಗೆ ತಕ್ಕ ವರನನ್ನು ಎಲ್ಲಿಂದ ಹುಡುಕೋದು? ಎಷ್ಟು ಹೆಚ್ಚು ಓದುತ್ತೀಯೋ ಅಷ್ಟು ಹೆಚ್ಚು ವರದಕ್ಷಿಣೆ ಕೊಡಬೇಕು.”

“ಶ್ರೇಯಾಗೆ ಇನ್ನು 10 ವರ್ಷ. ಆದರೆ ಅವಳು ಎಷ್ಟು ನೀಟಾಗಿ ಮನೆ ಸ್ವಚ್ಛಗೊಳಿಸ್ತಿದಾಳೆ ನೋಡು, ಮುಂದೆ ಅವಳು ಒಳ್ಳೆಯ ಗೃಹಿಣಿಯಾಗಿ ನಮ್ಮ ಹೆಸರು ಬೆಳಗಿಸ್ತಾಳೆ.”

“ಮಧು, ನಿನಗೆ 12 ವರ್ಷ ಆಯ್ತು. ಸದಾ `ಕ್ಕಿ….ಕ್ಕಿ….’ ಅಂತ ನಗ್ತಾ ಇರಬೇಡ. ಅಷ್ಟಿಷ್ಟು ಓದ್ತಾ ಇರು. ಇಲ್ಲದಿದ್ದರೆ ನಿನ್ನಂತಹ ಪೆದ್ದು ಹುಡುಗಿಯನ್ನು ಯಾರು ಮದುವೆ ಆಗ್ತಾರೆ?”

ಈ ಮೇಲ್ಕಂಡ ಹೇಳಿಕೆಗಳನ್ನು ಹೋಲುವ ಮಾತುಗಳನ್ನು ಪ್ರತಿಯೊಬ್ಬ ಹುಡುಗಿ ತನ್ನ ಬಾಲ್ಯದಲ್ಲಿ ಅದೆಷ್ಟೊ ಬಾರಿ ಕೇಳಿರುತ್ತಾಳೆ. ಆ ಮಾತುಗಳನ್ನು ಕೇಳಿ ಕೇಳಿಯೇ ಅವರು ದೊಡ್ಡವರಾಗುತ್ತಾರೆ. ಹುಡುಗಿ ಒಂದಿಷ್ಟು ಕಪ್ಪಗಿದ್ದರೆ… ಡಬಲ್ ಎಂ.ಎ ಮಾಡು. ಏಕೆಂದರೆ ನಿನ್ನ ನೌಕರಿ ನೋಡಿಯಾದರೂ ಯಾರಾದರೂ ಮದುವೆಯಾಗಬಹುದು. ದೈಹಿಕವಾಗಿ ಊನವಿದ್ದರೆ ಹೆಚ್ಚು ವರದಕ್ಷಿಣೆ ಕೊಟ್ಟು ಗಂಡನ ಮನೆಯವರ ಬಾಯಿ ಮುಚ್ಚಿಸಬೇಕು…… ಇತ್ಯಾದಿ, ಇತ್ಯಾದಿ.

ಬಾಲ್ಯದಲ್ಲಿಯೇ ಈ ರೀತಿಯ ಮಾತುಗಳನ್ನಾಡಿ ತಂದೆತಾಯಿ ಹೆಣ್ಣುಮಕ್ಕಳ ಆತ್ಮವಿಶ್ವಾಸವನ್ನು ಕುಗ್ಗಿಸಿಬಿಡುತ್ತಾರೆ. ಹುಡುಗಿ ಹುಟ್ಟಿರುವುದೇ ಮದುವೆಯಾಗಲು ಎಂಬಂತೆ ಅವರು ಮಾತಾಡುತ್ತಿರುತ್ತಾರೆ. ತಂದೆತಾಯಿಯ ಮಾತು ಕೇಳಿ ಕೇಳಿ ಹುಡುಗಿಯರು ಮದುವೆಯೇ ತಮ್ಮ ಅಂತಿಮ ಗುರಿ ಎಂಬಂತೆ ಕನಸು ಹೆಣೆಯತೊಡಗುತ್ತಾರೆ.  ಮದುವೆಗಾಗಿ ಅವರು ಏನೆಲ್ಲ ಮಾಡಲು ಸಿದ್ಧರಾಗುತ್ತಾರೆ, ಎಂತೆಂಥದೊ ಕೋರ್ಸ್‌ ಮಾಡುತ್ತಾರೆ. ಆದರೆ ಮದುವೆಯ ಬಳಿಕ?

ಮರೆತು ಹೋಗುವ ತಮ್ಮತನ

ಮದುವೆಯ ಬಳಿಕ ಅವಳು ಗಂಡ, ಮಕ್ಕಳು, ಕುಟುಂಬಕ್ಕಾಗಿ ಸಂಪೂರ್ಣ ಸಮರ್ಪಿತಳಾಗುತ್ತಾಳೆ. ಏಕೆಂದರೆ ಅವಳಿಗೆ ಮೊದಲಿನಿಂದಲೂ ಇದನ್ನೇ ಕಲಿಸಲಾಗಿದೆ. ತನ್ನ ತಾಯಿಯನ್ನು ಕೂಡ ಅವಳು ಆ ಸ್ಥಿತಿಯಲ್ಲಿಯೇ ನೋಡಿರುತ್ತಾಳೆ. ಆದರೆ ಅದೊಂದು ಸಮಯ ಬರುತ್ತದೆ. ಏಕತಾನತೆಯಲ್ಲಿ ಸಾಗಿ ತಾನೆಲ್ಲಿ ಬಂದು ನಿಂತಿದ್ದೇನೆ, ತಾನೇಕೆ ಜೀವಿಸುತ್ತಿದ್ದೇನೆ? ತನ್ನ ಗುರುತು ಪರಿಚಯ ಏನು ಎಂದು ಯೋಚಿಸುವುದು ಅನಿವಾರ್ಯವಾಗುತ್ತದೆ.

ಶಶಿಕಲಾ ಒಳ್ಳೆಯ ಮನೆತನದ, ಸಾಕಷ್ಟು ಉನ್ನತ ಶಿಕ್ಷಣ ಪಡೆದ ಯುವತಿ. ಅವರ ಕುಟುಂಬಕ್ಕೆ ಸರಿಸಮಾನ ಎಂಬಂತಹ ಕುಟುಂಬದ ಯುವಕನೊಂದಿಗೆ ಅವಳ ಮದುವೆಯಾಯಿತು. ಗಂಡ ಕೂಡ ಒಳ್ಳೆಯನೇ. ಆದರೆ ಕುಟುಂಬದ ಸದಸ್ಯರು ಮದುವೆಯ ಬಳಿಕ ನೌಕರಿ ಮಾಡಲು ಒಪ್ಪಲಿಲ್ಲ. ನಮ್ಮ ಕುಟುಂಬದಲ್ಲಿ ನಿನಗೇನು ಕೊರತೆಯಾಗಿದೆ? ನೀನ್ಯಾಕೆ ನೌಕರಿ ಮಾಡಬೇಕು? ನೀನು ನೌಕರಿಗೆ ಹೋಗುವುದರಿಂದ ಸಮಾಜ ನಮ್ಮ ಬಗ್ಗೆ ಏನೇನು ಮಾತಾಡಿಕೊಳ್ಳಬಹುದು ಎಂದು ನೀನು ಯೋಚಿಸಿದ್ದೀಯಾ? ಎಂದು ಅವಳನ್ನು ಪ್ರಶ್ನೆ ಮಾಡಿದರು. ಶಶಿಕಲಾರ ತಂದೆತಾಯಿ ಕೂಡ ಅವರ ಮಾತೇ ಸರಿ ಎಂದರು. ಶಶಿಕಲಾ ಮನಸ್ಸಿನಲ್ಲಿಯೇ ನೊಂದುಕೊಂಡು ಅಡುಗೆ ಮನೆಗೆ ಸೀಮಿತಳಾಗುಳಿದಳು. ಕಾಲೇಜಿನಲ್ಲಿ ಅದೆಷ್ಟೋ ವಿದ್ಯಾರ್ಥಿಗಳು ಅವಳು ಒಳ್ಳೆಯ ಜಾಬ್‌ಮಾಡಬೇಕೆಂದುಕೊಂಡಿದ್ದರು. ಆದರೆ ಅವಳು ಗೃಹಿಣಿಯಾಗಿ ಉಳಿಯಬೇಕಾಯಿತು.

ಮಹಿಳೆಯರು ಗಮನಿಸಬೇಕಾದ ಒಂದು ಸಂಗತಿಯೆಂದರೆ, ನಾವು ಯಾವುದೇ ಕೆಲಸವನ್ನು ಯಾವುದೊ ಒಂದು ವಿಷಯದ ಕೊರತೆ ತುಂಬಲು ಮಾಡುವುದಿಲ್ಲ. ಅದನ್ನು ನಾವು ಮಾಡುವುದು ನಮ್ಮ ಸಂತೃಪ್ತಿಗಾಗಿ. ಶಶಿಕಲಾರಂತಹ ಹುಡುಗಿಯರು ನಮಗೆ ಪ್ರತಿ ಮನೆ ಮನೆಯಲ್ಲೂ ಸಿಗುತ್ತಾರೆ. ಅವರ ಅಂತರಂಗದಲ್ಲಿ ಪ್ರತಿಭೆ ಹುದುಗಿರುತ್ತದೆ. ಆದರೆ ಬೆಳಕು ತೋರಿಸೋಣ ಎಂದು ಯಾರೊಬ್ಬರೂ ಯೋಚನೆ ಕೂಡ ಮಾಡುವುದಿಲ್ಲ. ಬೇರೊಬ್ಬರು ಕೆಲಸ ಮಾಡುವುದನ್ನು ನೋಡಿ, “ಇಲ್ಲ…. ಇಲ್ಲ….. ನಾನು ಖಂಡಿತ ಕೆಲಸ ಮಾಡುವುದಿಲ್ಲ. ಗಂಡ ಮತ್ತು ಮಗುವಿನ ಯೋಗಕ್ಷೇಮದಲ್ಲಿಯೇ ನಾನು ತೃಪ್ತಿ ಕಂಡುಕೊಳ್ಳುತ್ತೇನೆ.”

ಇದು ಪ್ರತಿಯೊಬ್ಬರ ಜೀವನದಲ್ಲಿ ಬರುತ್ತದೆ. ಕೆಲವರಿಗೆ ಬೇಗ ಬಂದರೆ ಮತ್ತೆ ಕೆಲವರಿಗೆ ತಡವಾಗಿ ಬರುತ್ತದೆ.

ಮನೋರಮಾಳ ಮದುವೆಯಾಗಿ 3 ವರ್ಷವಷ್ಟೇ ಆಗಿತ್ತು. ಅವಳ ಹಾಗೂ ಅವಳ ಪತಿಯ ನಡುವೆ ವೈಚಾರಿಕ ಮತಭೇದ ಇತ್ತು. ಯಾವುದೋ ಪ್ರಬಲ ಕಾರಣ ಇದ್ದುದರಿಂದ ಅಪ್ಪ ಅಮ್ಮ ಅವಳಿಗೆ ವಿಚ್ಛೇದನ ಪಡೆಯಲು ಅವಕಾಶ ಕೊಡಲಿಲ್ಲ. ಉಸಿರುಗಟ್ಟುವ ವಾತಾವರಣದಿಂದ ಹೊರಬರಲು ಅವಳು ಯಾವುದಾದರೂ ಕೆಲಸ ಮಾಡಬೇಕೆಂದು ಯೋಚಿಸಿದಳು. ಆದರೆ ಅತ್ತೆಮನೆಯವರು  ತವರು ಮನೆಯವರು ಅದಕ್ಕೆ ಅವಕಾಶ ಕೊಡಲಿಲ್ಲ.

ಆದರೆ ಮನೋರಮಾ ಧೈರ್ಯ ಕಳೆದುಕೊಳ್ಳಲಿಲ್ಲ. ಅವಳು ತನ್ನ ಗೆಳತಿಯ ಸಹಾಯದಿಂದ ಹುಡುಗಿಯರಿಗೆ ಅವರದೇ ಮನೆಗೆ ಹೋಗಿ ಟ್ಯೂಶನ್‌ಮಾಡಲು ಶುರು ಮಾಡಿದಳು. ಬಳಿಕ ತನ್ನ ಮನೆಯಲ್ಲಿ ಟ್ಯೂಶನ್‌ಶುರು ಮಾಡಿದಳು. ಈಗ ಅವಳು ತಿಂಗಳಿಗೆ 20-25 ಸಾವಿರ ರೂ. ಗಳಿಸುತ್ತಾಳೆ. ಆರಂಭದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಯಿತು. ಆದರೆ ಅವಳು ಗಟ್ಟಿ ನಿರ್ಧಾರ ಮಾಡಿಬಿಟ್ಟಿದ್ದಳು. ಕೊನೆಗೆ ಅವರೆಲ್ಲ ಸುಮ್ಮನಾಗಿಬಿಟ್ಟರು. ಮನೋರಮಾಳನ್ನು ಆ ಏರಿಯಾದವರೆಲ್ಲರೂ ಈಗ ಚೆನ್ನಾಗಿ ಬಲ್ಲರು. ಜನರು ಅವಳನ್ನು ಗೌರವಿಸುತ್ತಾರೆ. ಆರ್ಥಿಕವಾಗಿ ಸಬಲಳಾದ ಕಾರಣದಿಂದ ಅವಳಲ್ಲಿ ಈಗ ಸಾಕಷ್ಟು ಆತ್ಮವಿಶ್ವಾಸ ಬಂದಿದೆ.

ಅಸ್ತಿತ್ವ ಗುರುತಿಸಿ

ನಿಮ್ಮಲ್ಲಿರುವ ವಿಶೇಷತೆ ಗುರುತಿಸುವುದು ಅತ್ಯವಶ್ಯ. ಸೃಷ್ಟಿ ಪ್ರತಿಯೊಬ್ಬರಿಗೂ ಒಂದಿಲ್ಲೊಂದು ವಿಶೇಷತೆಯನ್ನು ಕೊಟ್ಟಿರುತ್ತದೆ. ಅದನ್ನು ಗುರುತಿಸುವುದು ಹಾಗೂ ಆ ದಾರಿಯಲ್ಲಿ ಮುನ್ನಡೆಯುವುದು ಅತ್ಯವಶ್ಯ. ಮಹಿಳೆಯರಿಗೆ ಆ ದಾರಿ ಅಷ್ಟು ಸುಲಭವಾಗಿರುವುದಿಲ್ಲ. ಆದರೆ ದೃಢ ನಿರ್ಧಾರದಿಂದ ಆ ದಾರಿ ತೆರೆದುಕೊಳ್ಳುತ್ತದೆ. ಎಷ್ಟೋ ಮಹಿಳೆಯರಿಗೆ ತಮಗೇನೂ ಬರುವುದಿಲ್ಲ ಎಂದೆನಿಸುತ್ತದೆ. ಆ ರೀತಿಯಲ್ಲಿ ಎಂದೂ ಯೋಚಿಸಬೇಡಿ. ನೀವೊಂದು ಮನೆಯನ್ನು ಸಂಭಾಳಿಸುತ್ತಿರುವಿರಿ. ಒಂದು ಮನೆಯ `ಕೇರ್‌ ಟೇಕರ್‌’ ಆಗುವುದು ಅಂದರೆ 10-20 ಕೆಲಸಗಳಲ್ಲಿ ನಿಮಗೆ ಯಾರೂ ಸರಿಸಾಟಿ ಇಲ್ಲ. ಯಾವುದರಲ್ಲಿ ನಿಮಗೆ ಅಸ್ತಿತ್ವ ದೊರೆತಿದೆಯೊ, ಅದೇ ಕೆಲಸವನ್ನು ನೀವು ಮಾಡಲು ಪ್ರಯತ್ನಿಸಿ. ನೀವು ಸ್ವಚ್ಛತೆಯ ಬಗ್ಗೆ ಹೆಚ್ಚು ಜಾಗರೂಕರಾಗಿದ್ದರೆ, ಅದೇ ಜಾಗರೂಕತೆಯನ್ನು ಹಣ ಗಳಿಸಲು ಬಳಸಿಕೊಳ್ಳಿ. ಇಂದಿನ ಧಾವಂತದ ಜೀವನದಲ್ಲಿ ಜನರಿಗೆ ತಮ್ಮ ಮನೆ ಸ್ವಚ್ಛತೆ ಮಾಡಲು ಕೂಡ ಸಮಯ ಸಿಗುವುದಿಲ್ಲ. ಅಂಥವರು ಸ್ವಚ್ಛತೆ ಕೆಲಸಕ್ಕಾಗಿ ಕಂಪನಿಗಳ ನೆರವು ಪಡೆಯುತ್ತಾರೆ. ನೀವು 5-6 ಜನರನ್ನು ನಿಮ್ಮ ಬಳಿ ಇಟ್ಟುಕೊಂಡು ಈ ಕೆಲಸ ಪೂರೈಸಿ ಕೊಡಬಹುದು, ಮಾರುಕಟ್ಟೆಯ ದರಕ್ಕಿಂತ ನೀವು ಕಡಿಮೆ ದರ ಕೊಟ್ಟರೆ ಯಾರು ಬೇಕಾದರೂ ನಿಮ್ಮನ್ನು ಸಂಪರ್ಕಿಸಬಹುದು.

ನಿಮಗೆ ವಿಶಿಷ್ಟ ಅಡುಗೆ ಮಾಡುವ ಹವ್ಯಾಸವಿದ್ದರೆ, ನೀವು ಬಗೆ ಬಗೆಯ ಅಡುಗೆ ಸಿದ್ಧಪಡಿಸಿ ಪಾರ್ಟಿಗಳಿಗೆ ಡೆಲಿವರಿ ಕೊಡಬಹುದು. ಇತ್ತೀಚೆಗೆ ಜನರಲ್ಲಿ ತಿನ್ನುವ ಬಗ್ಗೆ ಸಾಕಷ್ಟು ಕ್ರೇಜ್‌ ಇದೆ. ಹೀಗಾಗಿ ನೀವು ಮನೆಯಲ್ಲಿ ಬಗೆಬಗೆಯ ಡಿಶೆಸ್‌ಕಲಿಸಿಕೊಡುವ ಕ್ಲಾಸ್‌ ನಡೆಸಬಹುದು.

ನಿಮಗೆ ಬರೆಯುವ ಹವ್ಯಾಸವಿದ್ದರೆ ಪತ್ರಿಕೆಗಳಿಗೆ, ನಿಯತಕಾಲಿಕೆಗಳಿಗೆ ಬರೆದು ಒಳ್ಳೆಯ ಹೆಸರಿನ ಜೊತೆಗೆ ಒಂದಿಷ್ಟು ಹಣವನ್ನು ಗಳಿಸಬಹುದು. ಇತ್ತೀಚೆಗೆ ಆನ್‌ಲೈನ್‌ ಕೆಲಸಗಳಿಗೆ ಹೆಚ್ಚು ಮಹತ್ವ ಬಂದಿದೆ. ಇದಕ್ಕಾಗಿ ನೀವು ಮನೆಯಿಂದ ಹೊರಗೆ ಹೋಗಬೇಕಾದ ಅವಶ್ಯಕತೆ ಇಲ್ಲ. ಯಶಸ್ಸು ಒಂದೇ ಸಲಕ್ಕೆ ಸಿಗುವುದಿಲ್ಲ ಎನ್ನುವುದು ನೆನಪಿರಲಿ. ಕಠಿಣ ಪರಿಶ್ರಮ, ಶ್ರದ್ಧೆ ಹಾಗೂ ಹಲವು ಅಡೆತಡೆಗಳ ನಡುವೆಯೇ ನಿಮ್ಮ ಗುರಿಯನ್ನು ತಲುಪಬಹುದು.

ನಿಮ್ಮಲ್ಲಿರುವ ವಿಶೇಷತೆ ಗುರುತಿಸಿ. ಅದಕ್ಕಾಗಿ ಮೊದಲು ಸಮಯ ನಿಗದಿಪಡಿಸಿ. ಸಿದ್ಧತೆ ಮಾಡಿಕೊಳ್ಳಿ. ಬಳಿಕ ಕಾರ್ಯ ಪ್ರವೃತ್ತರಾಗಿ, ಕ್ರಮೇಣ ಯಶಸ್ಸು ನಿಮ್ಮತ್ತ ಕೈಚಾಚುತ್ತದೆ.

ಎಲ್ಲಕ್ಕೂ ಮಹತ್ವದ ಸಂಗತಿಯೆಂದರೆ, ವಿವಾಹವೇ ಅಂತಿಮ ಅಧ್ಯಾಯವಲ್ಲ! ಮದುವೆ ಯಶಸ್ವಿಯಾಗಲಿ, ಬಿಡಲಿ ಅದೊಂದು ಅಧ್ಯಾಯ ಅಷ್ಟೇ. ಹೊಸದೊಂದು ಅಧ್ಯಾಯ ನಿಮಗಾಗಿ ನಿರೀಕ್ಷಿಸುತ್ತಿದೆ, ಅದರತ್ತ ತಿರುಗಿ ನೋಡಿ.

– ಮಂಗಳಾ ಮೂರ್ತಿ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ