ಬ್ರಿಟನ್ನಿನ ಕು ಲುಕೆನ್‌ ವಿಶ್ವವಿದ್ಯಾಲಯದ ಡಾ. ಯಾರ್ಟೆನ್‌ ಲಾರ್‌ಸುವೋಯಿ ನಡೆಸಿದ ಅಧ್ಯಯನದಲ್ಲಿ ಕಂಡುಬಂದ ಸಂಗತಿಯೆಂದರೆ, ಬ್ರಿಟನ್ನಿನ ಶೇ.2ರಷ್ಟು ಸಂತಾನಗಳು ತಂದೆಯೇತರರಿಂದ ಜನಿಸಿವೆ. ಇಲ್ಲಿ ಏಳುವ ಪ್ರಶ್ನೆಯೆಂದರೆ, ಇಷ್ಟೊಂದು ಭಾರಿ ಪ್ರಮಾಣದಲ್ಲಿ ಜನರು ದಾಂಪತ್ಯ ದ್ರೋಹ ಏಕೆ ಎಸಗುತ್ತಿದ್ದಾರೆ?

ಬೇರೆ ಬೇರೆ ಪತ್ರಿಕೆಗಳು ಬೇರೆ  ಬೇರೆ ರೀತಿಯಲ್ಲಿ ನಡೆಸಿದ ಸಮೀಕ್ಷೆಗಳಿಂದ ತಿಳಿದುಬರುವ ಸಂಗತಿಯೆಂದರೆ, ಭಾರತದಲ್ಲೂ ಅನೇಕ ವಿವಾಹಿತ ಸ್ತ್ರೀಯರು ತಮ್ಮ ಗಂಡಂದಿರ ಹೊರತಾಗಿ ಪರ ಪುರುಷರಿಂದ ತಮ್ಮ ಲೈಂಗಿಕ ತೃಷೆ ತಣಿಸಿಕೊಳ್ಳುತ್ತಿದ್ದಾರೆ. ಇದು ಅತಿಶಯೋಕ್ತಿಯ ಸಂಗತಿ ಎನಿಸಬಹುದು. ಆದರೆ ಕಟು ಸತ್ಯವನ್ನು ನಿರಾಕರಿಸಲಾಗದು.

ಎಷ್ಟೋ ಪುರುಷರಿಗೆ ತಮ್ಮ ಪತ್ನಿಯರು ತಮಗೆ ನಂಬಿಕೆ ದ್ರೋಹ ಮಾಡುತ್ತಿದ್ದಾರೆ ಎಂಬ ವಿಷಯ ಗೊತ್ತಿರುತ್ತದೆ. ಆದರೆ ಯಾರೊಬ್ಬರೂ ಈ ಬಗ್ಗೆ ಬಹಿರಂಗವಾಗಿ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಎಷ್ಟೋ ಪುರುಷರು ಸತ್ಯ ಗೊತ್ತಿದ್ದೂ ಕೂಡ ತನ್ನ ಪತ್ನಿ ತನಗೆ ನಂಬಿಕಸ್ಥಳಾಗಿದ್ದಾಳೆ ಎನ್ನುವುದನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಾರೆ.

1950ರ ಆರಂಭದಲ್ಲಿ ಕಿಸೆ ಎಂಬಾತ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ, ವಿವಾಹಕ್ಕೂ ಮುಂಚಿನ ದೈಹಿಕ ಸಂಬಂಧಕ್ಕಿಂತ ವಿವಾಹ ನಂತರದ ಅನೈತಿಕ ಸಂಬಂಧಗಳೇ ಹೆಚ್ಚು. ಕಿಸೆ ಒಂದು ಕಡೆ ಹೀಗೆ ಬರೆದಿದ್ದ, ಅವನು ಕೇಳಿದ ಒಂದು ಪ್ರಶ್ನೆಗೆ ಉತ್ತರ ಕೊಡುವವರ ಪೈಕಿ ಶೇ.50ರಷ್ಟು ವಿವಾಹಿತ ಪುರುಷರು ಹಾಗೂ ಶೇ.25ರಷ್ಟು ಮಹಿಳೆಯರು ಅನೈತಿಕ ಸಂಬಂಧ ಹೊಂದಿದ್ದರು.

ಅದೇ ರೀತಿ ಅಮೆರಿಕದಲ್ಲಿ ಲೈಂಗಿಕ ವರ್ತನೆಯ ಬಗ್ಗೆ ಜೆನ್ಸ್ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ, ಮೂವರಲ್ಲಿ ಒಬ್ಬ ಪುರುಷ ಹಾಗೂ ನಾಲ್ವರಲ್ಲಿ ಒಬ್ಬ ಮಹಿಳೆ ಅನೈತಿಕ ಸಂಬಂಧದಲ್ಲಿ ಭಾಗಿಯಾಗಿರುವುದು ಕಂಡುಬಂದಿತು. ದಾಂಪತ್ಯ ದ್ರೋಹದ ಬಗ್ಗೆ ಅತ್ಯಂತ ನಿಖರ ಮಾಹಿತಿಯನ್ನು ಶಿಕಾಗೋ ವಿವಿ 1972ರಲ್ಲಿ ನೆಡಸಿದ ಒಂದು ಅಧ್ಯಯನ ನೀಡಿತ್ತು. ಅದರಲ್ಲಿ ಶೇ.12ರಷ್ಟು ಪುರುಷರು ಹಾಗೂ ಶೇ.7ರಷ್ಟು ಮಹಿಳೆಯರು ತಾವು ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಒಪ್ಪಿಕೊಂಡಿದ್ದರು.

ಮನೋತಜ್ಞರ ಪ್ರಕಾರ, ಮನುಷ್ಯ ಪರಿಪೂರ್ಣವಾಗಿ ಏಕವ್ಯಕ್ತಿ ನಿಷ್ಠನೂ ಅಲ್ಲ, ಬಹು ವಿವಾಹಿತನೂ ಅಲ್ಲ. ಮಾನವ ವಿಜ್ಞಾನಿ ಹೆಲನ್‌ ಫಿಶರ್‌ರ ಪ್ರಕಾರ, ಅನೈತಿಕ ಸಂಬಂದಕ್ಕೆ ಹಲವು ಮನೋವೈಜ್ಞಾನಿಕ ಕಾರಣಗಳಿವೆ.

ಕೆಲವರಿಗೆ ಮದುವೆಯ ಬಳಿಕ ಲೈಂಗಿಕ ತೃಪ್ತಿ ಪಡೆದುಕೊಳ್ಳಲು ಆಗುವುದಿಲ್ಲ. ಆಗ ಅವರು ಅನೈತಿಕ ಸಂಬಂಧ ಹೊಂದುತ್ತಾರೆ. ಕೆಲವರು ತಮ್ಮ ಲೈಂಗಿಕ ಸಮಸ್ಯೆಯ ಪರಿಹಾರಕ್ಕಾಗಿ, ಮತ್ತೆ ಕೆಲವರು ಬೇರೆಯವರ ಗಮನ ಸೆಳೆಯಲು ಅನೈತಿಕ ಸಂಬಂಧ ಮಾಡುತ್ತಾರೆ. ಕೆಲವರು ಸೇಡಿಗಾಗಿ ಮತ್ತು ವಿವಾಹ ಸಂಬಂಧವನ್ನು ಮತ್ತಷ್ಟು ರೋಚಕಗೊಳಿಸಲು ಕೂಡ ಅನೈತಿಕ ಸಂಬಂಧ ಮಾಡುತ್ತಾರೆ.

ಹೆಲನ್‌ ಫಿಶನ್‌ ತಮ್ಮ ಸಮೀಕ್ಷೆಯಲ್ಲಿ ಕಂಡುಕೊಂಡ ಪ್ರಕಾರ, ಅನೈತಿಕ ಸಂಬಂಧಕ್ಕೆ ಕೆಲವು ಜೈವಿಕ ಕಾರಣಗಳನ್ನೂ ಉಲ್ಲೇಖಿಸಿದ್ದಾರೆ. ಅವರು ಹೇಳಿರುವಂತೆ ಮನುಷ್ಯನ ಮೆದುಳು 2 ಭಾಗದ್ದಾಗಿದೆ. ಮೊದಲನೇ ಭಾಗ ಪ್ರೇಮಾಲಾಪ ಹಾಗೂ ನಿಕಟತೆಯನ್ನು ಹೊಂದಿದೆ. ಎರಡನೆಯ ಭಾಗ ಪೂರ್ಣವಾಗಿ ಲೈಂಗಿಕ ವರ್ತನೆಯ ಬಗ್ಗೆ. ಆ ಕಾರಣದಿಂದಾಗಿ ಯಾವುದೇ ಭಾವನಾತ್ಮಕ ನಿಕಟತೆಯಿಲ್ಲದೆ ವ್ಯಕ್ತಿ ಲೈಂಗಿಕ ಸಂತೃಪ್ತಿ ಹೊಂದಲು ಸಾಧ್ಯವಾಗುವುದಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಸುಮಾರು 18 ಲಕ್ಷ ಜನರು ಕೇವಲ ಸೆಕ್ಸ್ ಬಗ್ಗೆ ಚರ್ಚೆ ಮಾಡುತ್ತಾರೆ. ಅನೈತಿಕ ಸಂಬಂಧದ ಪ್ರತಿಯೊಂದು ಪ್ರಕರಣದಲ್ಲೂ ಪ್ರತಿಯೊಬ್ಬ ವ್ಯಕ್ತಿಯ ಉದ್ದೇಶ ಬೇರೆ ಬೇರೆಯೇ ಆಗಿರುತ್ತದೆ. ಆದರೆ ಅನೈತಿಕತೆಯನ್ನು 5 ರೀತಿಯಲ್ಲಿ ವಿಂಗಡಿಸಬಹುದು.

ತರಾತುರಿಯ ಅನೈತಿಕತೆ : ಆತುರದ ಅನೈತಿಕತೆಯಲ್ಲಿ ವ್ಯಕ್ತಿ ತನ್ನ ಸಂಗಾತಿಯ ಜೊತೆಗೆ ನಿಷ್ಠೆಯನ್ನೇನೊ ಹೊಂದಿರುತ್ತಾನೆ. ಆದರೆ ತನ್ನ ಲೈಂಗಿಕ ಸಂತೃಪ್ತಿಗಾಗಿ ಬೇರೆಯವರ ಜೊತೆ ಸಂಬಂಧ ಇಟ್ಟುಕೊಳ್ಳುತ್ತಾನೆ.

ಅನಿವಾರ್ಯತೆಯ ದಾಂಪತ್ಯ ದ್ರೋಹ : ಈ ಸ್ಥಿತಿ ಯಾವಾಗ ಉತ್ಪನ್ನವಾಗುತ್ತದೆ ಎಂದರೆ ಮೋಸಗಾರ ಸಂಗಾತಿಯ ವರ್ತನೆಯಿಂದ ಬೇಸತ್ತು ಪರಿಪೂರ್ಣವಾಗಿ ಬೇರೆಯವರ ಸಂಗದಲ್ಲಿ ತನ್ನ ಲೈಂಗಿಕ ತೃಷೆ ನೀಗಿಸಿಕೊಳ್ಳಲು ನೋಡುತ್ತಾನೆ.

ವಿರೋಧಾಭಾಸದ ದಾಂಪತ್ಯ ದ್ರೋಹ : ಇದೊಂದು ವಿಚಿತ್ರ ಸನ್ನಿವೇಶ. ಪತಿ ತನ್ನ ಹೆಂಡತಿಯೊಂದಿಗೆ ಪರಿಪೂರ್ಣ ನಿಷ್ಠೆ ಹೊಂದಿರುತ್ತಾನೆ. ಆದರೆ ತನ್ನ ಅತೀ ಲೈಂಗಿಕಾಸಕ್ತಿಯಿಂದ ಆಗಾಗ ಬೇರೊಬ್ಬರ ಜೊತೆ ಸಂಬಂಧ ಹೊಂದುತ್ತಾನೆ.

ಸಂಬಂಧನಿಷ್ಠ ದಾಂಪತ್ಯ ದ್ರೋಹ : ಇದು ಕೂಡ ಒಂದು ವಿಚಿತ್ರ ಸನ್ನಿವೇಶವೇ. ಒಬ್ಬ ವ್ಯಕ್ತಿ ತನ್ನ ವೈವಾಹಿಕ ಜೀವನದ ಬಗ್ಗೆ ಸಂಪೂರ್ಣ ನಿಷ್ಠೆ ಇಟ್ಟುಕೊಂಡಿರುತ್ತಾನೆ. ಆದರೆ ಸಂಗಾತಿಯಿಂದ ಸಾಕಷ್ಟು ಒಳ್ಳೆಯ ಸ್ಪಂದನೆ ಸಿಗದೇ ಇದ್ದಾಗ ಅವನು ಇನ್ನೊಬ್ಬ ಹೆಣ್ಣಿನ ಸಂಗ ಬಯಸುತ್ತಾನೆ.

ರೊಮ್ಯಾಂಟಿಕ್‌ ದಾಂಪತ್ಯ ದ್ರೋಹ : ಈ ಸ್ಥಿತಿ ಯಾವಾಗ ಉದ್ಭವಿಸುತ್ತದೆ ಎಂದರೆ, ಒಬ್ಬ ವ್ಯಕ್ತಿ ತನ್ನ ಪತ್ನಿಯೊಂದಿಗೆ ನಿಷ್ಠೆಯಿಂದಿದ್ದೂ ಕೂಡ ಇನ್ನೊಬ್ಬ ಹೆಣ್ಣಿನ ಜೊತೆ ರೊಮಾನ್ಸ್ ಮಾಡುತ್ತಿರುತ್ತಾನೆ.

ಆದರೆ ಈ ಎಲ್ಲ ದಾಂಪತ್ಯ ದ್ರೋಹಗಳು ಎಂಥದೇ ಸ್ಥಿತಿಯಲ್ಲೂ ದುಷ್ಪರಿಣಾಮ ಬೀರುತ್ತವೆ. ಅವೇನಾದರೂ ಬಹಿರಂಗಗೊಂಡರೆ ಅವಮಾನ, ಮಾನ ಹರಾಜಿನಂತಹ ಘಟನೆಗಳು ನಡೆಯುತ್ತವೆ. ಮನಸ್ತಾಪ, ಕುಟುಂಬ ಕಲಹ, ಮಾನಸಿಕ ಒತ್ತಡ, ಕೌಟುಂಬಿಕ ಸಂಬಂಧದಲ್ಲಿ ಬಿರುಕು ಹೀಗೆ ಏನೆಲ್ಲ ನಡೆಯುತ್ತವೆ.

ದಾಂಪತ್ಯ ದ್ರೋಹ ಎಲ್ಲ ಕಾಲದಲ್ಲೂ ಇದ್ದದ್ದೇ. ಆದರೆ ಈಗ ಮಹಿಳೆಯರಿಗೆ ಇರುವ ಹಕ್ಕುಗಳು ಜಾಸ್ತಿ. ಹೀಗಾಗಿ ಅವರು ಹೆಚ್ಚು ರಿಸ್ಕ್ ತೆಗೆದುಕೊಳ್ಳುತ್ತಾರೆ. ನಂಬಿಕೆ ದ್ರೋಹ ಮಾಡುವ ಸಂಗಾತಿಯನ್ನು ಬಿಟ್ಟು ಹೋಗುವುದಿಲ್ಲ.

ನಿಮಗೆ ಕೊಡುವ ಸೂಕ್ತ ಸಲಹೆ ಎಂದರೆ, ನೀವು ನಿಮ್ಮ ಸಂಗಾತಿಯ ಬಗ್ಗೆ ನಿಷ್ಠೆಯಿಂದಿರಿ. ಏನಾದರೂ ಸಮಸ್ಯೆ ಇದ್ದರೆ ಅದನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ದಾಂಪತ್ಯ ದ್ರೋಹವನ್ನು ಜೀವನದ ಅಂತ್ಯ ಎಂದು ಭಾವಿಸಬಾರದು. ಮ್ಯಾರೇಜ್‌ ಕೌನ್ಸೆಲರ್‌ಗಳ ಜೊತೆ ಸಮಾಲೋಚನೆ ನಡೆಸಿ. ಸಂಗಾತಿ ದಾಂಪತ್ಯ ದ್ರೋಹವನ್ನು ನಿರಂತರವಾಗಿ ಮುಂದುವರಿಸಿದ  ಸಂದರ್ಭದಲ್ಲಿ ಮಾತ್ರ ವಿಚ್ಛೇದನದ ಬಗ್ಗೆ ಯೋಚಿಸಿ, ಅಲ್ಲಿಯವರೆಗೆ ಕಠೋರ ನಿರ್ಧಾರ ಬೇಡವೇ ಬೇಡ.

– ವತ್ಸಲಾ ವಿಶ್ವನಾಥ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ