ಗೃಹಿಣಿಯಾಗುವುದು ಒಂದು ಶಿಕ್ಷೆ ಎನ್ನುವಿರಾ? ಬದಲಾಗುತ್ತಿರುವ ಕಾಲದೊಂದಿಗೆ ಗೃಹಿಣಿಯ ಪಾತ್ರ ಬದಲಾಗುತ್ತಿದೆ. ಆದರೆ ಅವಳ ಜವಾಬ್ದಾರಿಗಳು ಕಡಿಮೆಯಾಗುವುದರ ಬದಲು ಹೆಚ್ಚುತ್ತಲಿವೆ. ಆಧುನಿಕ ಯುಗದಲ್ಲಿ ಮನೆಯ ಕೆಲಸ ಕಾರ್ಯಗಳಿಗೆ ಮಶೀನ್‌ಗಳು ಬಂದಿವೆ. ಆದರೆ ಮಶೀನ್‌ಗಳು ಸ್ವತಃ ಕೆಲಸ ಮಾಡಬಲ್ಲವೇ? ಅವುಗಳನ್ನು ಚಾಲನೆ ಮಾಡಲು ಗೃಹಿಣಿ ಅಲ್ಲಿ ಹಾಜರಿರಲೇಬೇಕು.
ಜವಾಬ್ದಾರಿ ಹಿಂದೆಯೂ ಇದ್ದಿತು. ಆದರೆ ಪರಿಧಿ ಸೀಮಿತವಾಗಿತ್ತು. ಆದರೆ ಇಂದು ಪರಿಧಿ ಎಲ್ಲೇ ಮೀರಿದೆ. ಇಂದು ಮಹಿಳೆಯು ಮನೆಯ ಒಳ ಮತ್ತು ಹೊರಗಿನ ಜವಾಬ್ದಾರಿಯ ಜೊತೆಗೆ ಮಕ್ಕಳ ವಿದ್ಯಾಭ್ಯಾಸ, ಭವಿಷ್ಯ ಹಾಗೂ ಉಳಿತಾಯ ಯೋಜನೆಗಳಲ್ಲಿ ಪೂರ್ಣ ಮನಸ್ಸಿನಿಂದ ತೊಡಗಿರುತ್ತಾಳೆ.
ಬೆಳಗ್ಗೆ ಪ್ರಾರಂಭವಾಗುವ ಗೃಹಿಣಿಯ ಕೆಲಸ ಕಾರ್ಯಗಳು ಅಂತ್ಯವಾಗುವುದು ರಾತ್ರಿಯೇ. ಪತಿ, ಮಕ್ಕಳು ಮತ್ತು ಮನೆಯ ಇತರೆ ಸದಸ್ಯರ ಅಗತ್ಯಗಳನ್ನು ಪೂರೈಸುವುದರಲ್ಲಿಯೇ ದಿನ ಕಳೆಯುವ ಗೃಹಿಣಿಯು ತನ್ನ ಬೇಕು ಬೇಡಗಳಿಗೆ ಲಕ್ಷ್ಯ ನೀಡುವುದಿಲ್ಲ. ಇತರರ ಸುಖ ಸೌಲಭ್ಯಗಳಿಗೇ ಸದಾ ಆದ್ಯತೆ ನೀಡುತ್ತಾ ಬದುಕುವ ಅವಳು, ತನ್ನ ಯಾವುದಾದರೊಂದು ಕೆಲಸದಲ್ಲಿ ಕೊರತೆ ಕಂಡು ಬಂದಾಗ ಅಪರಾಧೀ ಭಾವದಿಂದ ಕುಗ್ಗುತ್ತಾಳೆ. ಇಷ್ಟೊಂದು ಜತನದಿಂದ ದುಡಿಯುತ್ತಿದ್ದರೂ ಎಂದೂ ಅವಳ ಕೆಲಸಕ್ಕೆ ಮೆಚ್ಚುಗೆಯಾಗಲಿ, ಗೌರವವಾಗಲಿ ದೊರೆಯುವುದಿಲ್ಲ.
ಗೌರವದ ಅಪೇಕ್ಷೆ
ಗೃಹಿಣಿ ಮನೆಯ ಪ್ರತಿಯೊಬ್ಬ ಸದಸ್ಯರಲ್ಲಿಯೂ ಉತ್ಸಾಹ ತುಂಬುವ ಒಂದು ಸಪೋರ್ಟ್ ಸಿಸ್ಟಮ್ ಆಗಿರುತ್ತಾಳೆ. ಮಹಿಳೆಯು ಮನೆಯೊಳಗೆ ಕಾರ್ಯ ನಿರ್ವಹಿಸುತ್ತಲಿರಲಿ ಅಥವಾ ಹೊರಗೆ ಉದ್ಯೋಗದಲ್ಲಿರಲಿ, ಕೆಲಸವನ್ನಂತೂ ಮಾಡುತ್ತಲೇ ಇರುತ್ತಾಳೆ. ಆದರೆ ಸಮಾಜ ಗೃಹಿಣಿಯಾದವಳನ್ನು ಪ್ರಯೋಜನವಿಲ್ಲದವಳೆಂದು ಪರಿಗಣಿಸುತ್ತದೆ. ಅವಳಿಗೆ ರಜೆಯೂ ಇಲ್ಲ, ವೇತನವೂ ಇಲ್ಲ. ವಾಸ್ತವವಾಗಿ ಗೃಹಿಣಿಯು ವೇತನವನ್ನು ಬಯಸುವುದೂ ಇಲ್ಲ. ಅವಳು ತನ್ನವರಿಗಾಗಿ ಮಾಡುವ ಸೇವೆಗೆ ಬದಲಾಗಿ ಗೌರವವನ್ನು ಅಪೇಕ್ಷಿಸುತ್ತಾಳೆ ಮತ್ತು ಅದು ಅವಳ ಮಾನವೀಯ ಹಕ್ಕು ಸಹ ಆಗಿರುತ್ತದೆ.
ಒಂದು ರಾಷ್ಟ್ರೀಯ ಸರ್ವೆಯ ಪ್ರಕಾರ, 15 ವರ್ಷ ವಯಸ್ಸಿಗಿಂತ ಹೆಚ್ಚಿನ 40% ಗ್ರಾಮೀಣ ಮತ್ತು 65% ನಗರವಾಸಿ ಮಹಿಳೆಯರು ಸಂಪೂರ್ಣವಾಗಿ ಮನೆಯ ಕೆಲಸ ಕಾರ್ಯಗಳಲ್ಲಿ ತೊಡಗಿರುತ್ತಾರೆ. ಅಂಕಿಅಂಶಗಳ ಪ್ರಕಾರ ಇವರಲ್ಲಿ 60 ವರ್ಷ ವಯಸ್ಸನ್ನು ಮೀರಿರುವ ಕಾಲು ಭಾಗ ಮಹಿಳೆಯರು ಈ ವಯಸ್ಸಿನಲ್ಲಿಯೂ ಮನೆಗೆಲಸ ಮಾಡುತ್ತಾ ದಿನ ಕಳೆಯುತ್ತಾರೆಂದು ತಿಳಿದು ಬಂದಿದೆ.
ವರ್ಲ್ಡ್ ಎಕಾನಾಮಿಕ್ ಫೇವರ್ ನ ವರದಿಯ ಪ್ರಕಾರ, ಭಾರತದಲ್ಲಿ ಹೆಚ್ಚಿನ ಮಹಿಳೆಯರು ವೇತನರಹಿತ ಗೃಹಕೃತ್ಯಗಳಲ್ಲಿ ತೊಡಗಿರುತ್ತಾರೆ. ಆದರೆ ಪಾಶ್ಚಿಮಾತ್ಯ ದೇಶಗಳಲ್ಲಿ ಮನೆಯ ಜವಾಬ್ದಾರಿ ಕೇವಲ ಮಹಿಳೆಯರ ಪಾಲಿನದಾಗಿರುವುದಿಲ್ಲ.
ದಣಿವಿಗೆ ಬಲಿ
ನಮ್ಮ ಸಮಾಜದ ರೀತಿನೀತಿ. ನಡವಳಿಕೆಗೆ ಅನುಸಾರವಾಗಿ ಮನೆಯಲ್ಲಿರುವ ಮಹಿಳೆಯರಿಗೆ ಸೌಲಭ್ಯಗಳು ಕಡಿಮೆಯೆಂದೇ ಹೇಳಬಹುದು. ಮತ್ತೊಂದು ವಿಷಯವೆಂದರೆ ಗೃಹಕೃತ್ಯಗಳ ಸಂಪೂರ್ಣ ಜವಾಬ್ದಾರಿ ಮಹಿಳೆಯದ್ದಾಗಿರುತ್ತದೆ. ಒಬ್ಬ ಕಲಾವಿದನು ತನ್ನ ಚಿತ್ರಗಳಿಗೆ ಬಣ್ಣ ತುಂಬುವಂತೆ ಗೃಹಿಣಿಯು ಮನೆಯ ಸದಸ್ಯರ ಬಾಳಿಗೆ ಬಣ್ಣ ತುಂಬಿ ತಾನು ನೇಪಥ್ಯದಲ್ಲಿ ಉಳಿಯುತ್ತಾಳೆ.
ಮಹಿಳೆಯು ತನ್ನ ಕೆಲಸಗಳನ್ನು ಮೌನವಾಗಿ ಮಾಡಿ ಮರೆಯಲ್ಲೇ ಉಳಿಯುವುದರಿಂದ ಅವಳ ಕೆಲಸ ಕಾರ್ಯಗಳು ಗಮನಕ್ಕೆ ಬಾರದೇ ಹೋಗುತ್ತವೆ. ಹೀಗಾಗಿ ಅವಳು ಇಡೀ ದಿನ ಮನೆಯಲ್ಲಿ ಕುಳಿತು ಏನು ಮಾಡುತ್ತಾಳೆಯೋ? ಎನ್ನುವಂತಹ ಮಾತನ್ನು ಕೇಳಬೇಕಾಗುತ್ತದೆ. ಆಗ ಅವಳಿಗೆ ಬೇಸರ ಮತ್ತು ಒಂಟಿತನ ಉಂಟಾಗುವುದರಿಂದ ದಣಿವು, ಒತ್ತಡಗಳಿಗೆ ಬಲಿಯಾಗುತ್ತಾಳೆ. ಅಪರಾಧೀ ಭಾವದಿಂದ ಕೂಡಿದವಳಾಗಿ ಸಂಸಾರವನ್ನು ಸಂಭಾಳಿಸುವಲ್ಲಿ ಹಿಂದೆ ಬೀಳುತ್ತಾಳೆ.