ಇಡೀ ದಿನ ಆಫೀಸಿನಲ್ಲಿ ದುಡಿದು ದಣಿದು ಸಾಕಾಗಿ ಮನೆಗೆ ಬಂದಾಗ ಸಾಕಪ್ಪ ಎಂದು ಸುಸ್ತಾಗಿ ಕಾಲು ಚಾಚಿ ಕೂರೋಣ ಎನಿಸುತ್ತದೆ. ಆದರೆ ಕಂಪನಿಯಲ್ಲಿ ಕೆಲಸ ಮಾಡುವ ಸ್ಮಿತಾ ಸುಸ್ತಾಗಿ ಮನೆಗೆ ಬಂದಾಗ ಎಲ್ಲೆಲ್ಲೂ ಸಾಮಾನು ಹರಡಿರುವ ಮನೆ, ಅವ್ಯವಸ್ಥಿತ ಫರ್ನೀಚರ್, ಮಂದ ಬೆಳಕು, ಗೋಡೆಗಳಿಗೆ ಬಳಿದ ಗಾಢ ಬಣ್ಣ…. ಅವಳಿಗೆ ಸಾಕಪ್ಪ ಸಾಕು ಎನಿಸಿಬಿಡುತ್ತದೆ. ಇದೇ ತರಹ ಮೋನಿಕಾಳಿಗೂ ತನ್ನ ಬೆಡ್ರೂಮಿನಲ್ಲಿ ಹರಡಿದ ಸಾಮಗ್ರಿ, ಬಟ್ಟೆಬರೆ, ಗೋಡೆಗೆ ಒತ್ತರಿಸಿದ ಭಾರಿ ಫರ್ನೀಚರ್
ಕಂಡಾಗ ಅನಿಸುತ್ತದೆ. ಸ್ಮಿತಾ ಹಾಗೂ ಮೋನಿಕಾರಂತೆಯೇ ಅನೇಕ ಮಹಿಳೆಯರು ತಮ್ಮ ಮನೆಯಲ್ಲಿ ಬೇಕಾದ ನೆಮ್ಮದಿ ಸಿಗದಿದ್ದಾಗ, ದೈಹಿಕ ಹಾಗೂ ಮಾನಸಿಕವಾಗಿ ಅಸ್ತವ್ಯಸ್ತಗೊಳ್ಳುತ್ತಾರೆ. ನರತಜ್ಞರ ಪ್ರಕಾರ ಮನೆಯ ಗೃಹಾಲಂಕಾರ ಆ ಕುಟುಂಬದ ಸದಸ್ಯರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಮನೆಯ ಒಳಾಲಂಕಾರ ಸಮರ್ಪಕವಾಗಿ ಇಲ್ಲದಿದ್ದರೆ ಟೆನ್ಶನ್, ಉದ್ವಿಗ್ನತೆ, ಚಡಪಡಿಕೆ ಹೆಚ್ಚಿ ಅನಾರೋಗ್ಯಕ್ಕೆ ದಾರಿಯಾಗುತ್ತದೆ.
ಪ್ರತಿ ಬಣ್ಣ ವಿಭಿನ್ನ
ಗೋಡೆಗಳಿಗೆ ಹಚ್ಚಿರುವ ಬಣ್ಣ ಹೆಚ್ಚಿನ ಮಹತ್ವ ಹೊಂದಿವೆ. ಒಳಾಲಂಕರಣ ತಜ್ಞರ ಪ್ರಕಾರ, ಯಾವ ರೀತಿ ಮಾನವರ ಮುಖ ಅವರ ವ್ಯಕ್ತಿತ್ವದ ಪರಿಚಯ ನೀಡುತ್ತದೋ, ಅದೇ ತರಹ ಗೋಡೆಗಳಿಗೆ ಬಳಿಯಲಾದ ಬಣ್ಣ ಮನೆಯ ಸೌಂದರ್ಯದ ಹೆಗ್ಗುರುತಾಗಿದೆ.
ಬಣ್ಣಗಳಿಗಂತೂ ತಮ್ಮದೇ ಆದ ವಿಭಿನ್ನ ಗುಣವಿದೆ. ಅದು ವ್ಯಕ್ತಿಯ ಮನದ ಭಾವನೆಗಳನ್ನು ಪ್ರತಿಬಿಂಬಿಸುತ್ತದೆ. ತಜ್ಞರ ಪ್ರಕಾರ, ಬಣ್ಣಗಳ ಪ್ರತಿಬಿಂಬ ವ್ಯಕ್ತಿಯನ್ನು ಒತ್ತಡ ಮುಕ್ತನನ್ನಾಗಿಸುತ್ತದೆ, ಕೂಲ್ ಆಗಿರಿಸುತ್ತದೆ. ಆದ್ದರಿಂದ ಇವನ್ನು ಆರಿಸುವಾಗ ಆದಷ್ಟೂ ಎಚ್ಚರಿಕೆ ವಹಿಸಬೇಕು.
ಯಾವ ಬಣ್ಣ ಯಾವ ಭಾವ ಬಿಂಬಿಸುತ್ತದೆ?
ಈ ವಿಚಾರವನ್ನು ವಿಶ್ಲೇಷಿಸುವಾಗ, ಗಾಢ ಬಣ್ಣಗಳಾದ ಕೆಂಪು, ನೀಲಿ, ಹಸಿರು ತಾಪಮಾನ ಹೆಚ್ಚಾಗಿರುವಂತೆ ತೋರಿಸುತ್ತದೆ. ಅದರಲ್ಲೂ ಮುಖ್ಯವಾಗಿ ಬೆಡ್ ರೂಮಿನ ಗೋಡೆಗಳಿಗೆ ಆರೋಗ್ಯದ ದೃಷ್ಟಿಯಿಂದ ಹಿತಕರ ಲೈಟ್ ಕಲರ್ಸ್ನ್ನೇ ಆರಿಸಬೇಕು. ಒಂದು ಅಧ್ಯಯನದ ಪ್ರಕಾರ ಕೆಂಪು ಬಣ್ಣ ಬಿ.ಪಿ., ಹೃದ್ರೋಗ ಹೆಚ್ಚಿಸಿದರೆ, ಗಾಢ ಹಸಿರು ಒತ್ತಡ ಹೆಚ್ಚಿಸುತ್ತದೆ. ಗಾಢ ಹಳದಿ ಬಣ್ಣ ವ್ಯಕ್ತಿಯನ್ನು ಸಿಡಿಗುಟ್ಟುವಂತೆ ಮಾಡುತ್ತದೆ. ಈ ಬಣ್ಣ ಮಕ್ಕಳಿಗೂ ಮಾನಸಿಕ ಒತ್ತಡ ಹೆಚ್ಚಿಸಬಲ್ಲದು. ಅವು ಹೆಚ್ಚು ಹಠಮಾರಿಗಳಾಗಿ ಎಲ್ಲಕ್ಕೂ ರಂಪ ಮಾಡುತ್ತವೆ.
ಆದರೆ ಜನ ತಮ್ಮ ಷೋಕಿಗೆ ತಕ್ಕಂತೆ ಇಂಥ ಬಣ್ಣಗಳನ್ನೇ ಆರಿಸುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ. ಪ್ರತಿ ವ್ಯಕ್ತಿಯ ಅಭಿರುಚಿ, ಆಯ್ಕೆ ವಿಭಿನ್ನವಾಗಿಯೇ ಇರುತ್ತದೆ. ಹೀಗಾಗಿ ಬಣ್ಣಗಳ ಮಧ್ಯೆ ಹೊಂದಾಣಿಕೆ ಮೂಡಿಸಲು ಗಾಢ ಬಣ್ಣಗಳ ನಡುವೆ ತೆಳು ಬಣ್ಣ ಬೆರೆಸಿ ಒಂದು ಉತ್ತಮ ಥೀಂ ಮಾಡಬಹುದು. ಟ್ರೆಂಡ್ ಪ್ರಕಾರ ಈಗ ಕಪ್ಪು, ಮೆರೂನ್, ಗಾಢ ಬೂದು ಬಣ್ಣಗಳು ಚಾಲ್ತಿಯಲ್ಲಿವೆ. ಇದರ ಜೊತೆ ಗೋಲ್ಡನ್, ಸಿಲ್ವರ್ ಕಾಂಬಿನೇಶನ್ ಬಲು ರಿಚ್ ಲುಕ್ಸ್ ಕೊಡುತ್ತವೆ.
ಸೂಕ್ತ ಲೈಟಿಂಗ್ ಅತ್ಯಗತ್ಯ
ಬಣ್ಣಗಳ ಜೊತೆ ಇಂಟೀರಿಯರ್ಸ್ನ ಮತ್ತೊಂದು ಪ್ರಮುಖ ಅಂಶವೆಂದರೆ ಬೆಳಕಿನ ವ್ಯವಸ್ಥೆ. ಇದರಲ್ಲಿ ಎಂದೂ ಜಿಪುಣತನ ಬೇಡ. ವಿಶೇಷವಾಗಿ ಗೃಹಿಣಿಯರು ಮನೆಯಲ್ಲಿ ಆದಷ್ಟೂ ವಿದ್ಯುತ್ ಖರ್ಚು ಉಳಿಸಬೇಕೆಂಬ ಧಾವಂತದಲ್ಲಿ ಅತಿ ಜಿಪುಣತನ ತೋರಿಸಿ, ಮನೆಯೊಳಗೆ ಬೆಳಕಿನ ವ್ಯವಸ್ಥೆ ಮಂಕಾಗಿಸಿ, ಒಳಾಲಂಕಾರದ ಅಂದ ಕೆಡಿಸುತ್ತಾರೆ. ಇತ್ತೀಚೆಗೆ ಬೆಂಗಳೂರಿನಂಥ ಮಹಾನಗರಗಳಲ್ಲಿ ಹೆಚ್ಚು ನೈಸರ್ಗಿಕ ಬೆಳಕು ನೀಡುವಂಥ ಗವಾಕ್ಷಿ, ಓಪನ್ ಬಾಲ್ಕನಿ ಒದಗಿಸುವ ಅಪಾರ್ಟ್ಮೆಂಟ್ಗಳೇ ಅಪರೂಪವಾಗುತ್ತಿವೆ. ನ್ಯಾಚುರಲ್ ಲೈಟ್ ಕಡಿಮೆ ಆದಾಗ ವಿದ್ಯುತ್ ಬೆಳಕು ಬೇಕೇಬೇಕಷ್ಟೆ? ವಿಶೇಷವಾಗಿ ಲಿವಿಂಗ್ ರೂಂ ಮತ್ತು ಅಡುಗೆಮನೆಯಲ್ಲಿ ಲೈಟಿಂಗ್ ವ್ಯವಸ್ಥೆ ಸಮರ್ಪಕವಾಗಿರಬೇಕು. ಇಲ್ಲಿ ಮನೆಯ ಇತರ ಕೋಣೆಗಳಿಗಿಂತ ಗೃಹಿಣಿ ಮತ್ತು ಕೌಟುಂಬಿಕ ಸದಸ್ಯರು ಇಲ್ಲಿ ಹೆಚ್ಚು ಕ್ರಿಯೇಟಿವ್ ಆಗಿರುತ್ತಾರೆ.
ಈ ಲೈಟಿಂಗ್ ವ್ಯವಸ್ಥೆ ಮನೆಯ ಒಳಾಲಂಕಾರವನ್ನು ಮತ್ತಷ್ಟು ಉತ್ತಮವಾಗಿ ತೋರ್ಪಡಿಸುವ ಕೆಲಸ ಮಾಡುತ್ತದೆ, ಮೂಡ್
ರಿಫ್ರೆಶ್ ಆಗುತ್ತದೆ. ಆದರೆ LED ಲೈಟ್ಸ್ ಉಳಿತಾಯದ ದೃಷ್ಟಿಯಿಂದ ಈಗೆಲ್ಲ ಹೆಚ್ಚು ಪ್ರಚಲಿತಗೊಂಡಿದೆ. ಜನರಿಗೆ ಇದೇ ಇಷ್ಟವಾಗಿದೆ. ಹಾಗಾಗಿ ಅದು ಮಂದಬೆಳಕು ಇಂಟೀರಿಯರ್ಸ್ ಮತ್ತು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದರೆ ಅವರು ಒಪ್ಪುವುದಿಲ್ಲ.
ಆದರೆ ಮನೆಯಲ್ಲಿ ಅಧಿಕ ಎಲೆಕ್ಟ್ರಿಕ್ ಲೈಟಿಂಗ್ ಇದ್ದರೂ ನಷ್ಟವೇ ಸರಿ. ಚರ್ಮ ತಜ್ಞರ ಪ್ರಕಾರ ಮನೆಯಲ್ಲಿ ಬಳಕೆಯಾಗುವ ಬಲ್ಬು ಮತ್ತು ಟ್ಯೂಬ್ ಲೈಟ್ಸ್ ಹೊರಹೊಮ್ಮಿಸುವ UV ಕಿರಣಗಳು, ಚರ್ಮಕ್ಕೆ ಹಾನಿ ಮಾಡದೆ ಬಿಡುವುದಿಲ್ಲ.ಮನೆಯಲ್ಲಿ ನಾವು ಎಲ್ಲಿ ನಿಂತಿದ್ದೇವೋ ಆ ಜಾಗದಿಂದ ಕೋಣೆಯ ಎಲ್ಲಾ ವಸ್ತುಗಳೂ ಸ್ಪಷ್ಟ ಕಾಣಿಸುವಂತಿರಬೇಕು. ಆಗ ಯಾವ ತರಹದ ಲೈಟಿಂಗ್ಬಳಸಿದ್ದಾರೆ ಎಂಬುದು ಮುಖ್ಯವಾಗುವುದಿಲ್ಲ. ಅದು ಅಕಸ್ಮಾತ್ LED ಲೈಟ್ಸ್ ಆಗಿದ್ದರೆ, ಇದರ ಸೆಟ್ಟಿಂಗ್ಸ್ ಕಡೆ ಹೆಚ್ಚಿನ ಗಮನ ಕೊಡಬೇಕು. ಇದರಿಂದ ಇಂಟೀರಿಯರ್ ಮತ್ತು ಆರೋಗ್ಯ ಎರಡೂ ಕಡ ಸಮಸ್ಯೆ ಆಗದಿರುವಂತೆ ನೋಡಿಕೊಳ್ಳಬೇಕು.
ಹೊಸ ಟ್ರೆಂಡ್ ಪ್ರಕಾರ ಇತ್ತೀಚೆಗೆ ಓವರ್ ಹೆಡ್ ಲೈಟ್ಸ್ ಫ್ಲವರ್ ಲ್ಯಾಂಪ್ಸ್ ಹಾಗೂ ಶ್ಯಾಡೋ ಲೈಟಿಂಗ್ಸ್ ನ ಹೆಚ್ಚು ಕ್ರೇಝ್ ಇದೆ. ಈ ಎಲ್ಲದರಲ್ಲೂ LED ಲೈಟ್ಸನ್ನೇ ಬಳಸಲಾಗುತ್ತದೆ. ಈ ತರಹದ ಲೈಟುಗಳು ಆಯಾ ವಿಶೇಷ ಜಾಗಗಳ ಮೇಲೆ ಫೋಕಸ್
ಮಾಡುತ್ತವೆ ಹಾಗೂ ಅವಶ್ಯಕ ಬೆಳಕಿನ ಪೂರೈಕೆಯನ್ನೂ ಮಾಡುತ್ತವೆ. ಒಂದು ಕಡೆ ಇದರಿಂದ ಇಂಟೀರಿಯರ್ಗೆ ಹೊಸ ಸ್ವರೂಪ ಕೊಡಬಹುದು, ಇನ್ನೊಂದು ಕಡೆ ಲೈಟಿಂಗ್ನ ಸಮರ್ಪಕ ಸೆಟಿಂಗ್ ಕಂಗಳಿಗೆ ಹಿಂಸೆಯನ್ನೂ ಮಾಡುವುದಿಲ್ಲ.
ಫರ್ನೀಚರ್ನ ಸೂಕ್ತ ಆಯ್ಕೆ
ಮನೆಯಲ್ಲಿರುವ ಫರ್ನೀಚರ್ನಿಂದ ಎಲ್ಲರ ಆರೋಗ್ಯದ ಮೇಲೆ ಒಳ್ಳೆಯ ಹಾಗೂ ಕೆಟ್ಟ ಪರಿಣಾಮ ಆಗುತ್ತದೆ. ಬ್ಯೂಟಿಫುಲ್ ಫರ್ನೀಚರ್ನ ಉಪಸ್ಥಿತಿ ಮನೆಯ ಇಂಟೀರಿಯರ್ ಮೇಲೂ ಉತ್ತಮ ಪರಿಣಾಮ ಬೀರುತ್ತದೆ. ಫರ್ನೀಚರ್ ಇಂಟೀರಿಯರ್ನ್ನು ಅಂದಗೊಳಿಸುವುದು ಮಾತ್ರವಲ್ಲದೆ, ಅದನ್ನು ವ್ಯವಸ್ಥಿತವಾಗಿಡುವುದಕ್ಕೂ ನೆರವಾಗುತ್ತದೆ. ಆದರೆ ಇವನ್ನು ಸಮರ್ಪಕ ಜಾಗದಲ್ಲಿ ಇಡದಿದ್ದರೆ, ಇದು ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಲ್ಲದು. ಉದಾ : ನಮ್ಮ ತಲೆ ಇಟ್ಟುಕೊಳ್ಳುವ ಭಾಗದಲ್ಲಿ ಮಂಚಕ್ಕೆ ಹತ್ತಿರ ಭಾರಿ ತೂಕದ ವುಡನ್ ವರ್ಕ್ ಇದ್ದರೆ ತಲೆ ಸದಾ `ಭಾರ’ ಎನಿಸುತ್ತದೆ. ಆದ್ದರಿಂದ ತಲೆ ಕಡೆಯ ದಿಕ್ಕಿನಲ್ಲಿ ಖಾಲಿ ಜಾಗವೇ ಇರಲಿ.
ಬೆಡ್ರೂಮಿನಲ್ಲಿ ಭಾರಿ ವುಡನ್ ವರ್ಕ್ ಇರಲೇಬಾರದು. ಆದರೆ ಸ್ಟೋರೇಜ್ ವ್ಯವಸ್ಥೆ ಸರಿ ಇರಬೇಕು. ಇಡೀ ಗೋಡೆಯನ್ನು ಪೂರ್ತಿ ವುಡನ್ ಸ್ಟೋರೇಜ್ನಿಂದ ಕವರ್ ಮಾಡುವುದು ಹಳೆಯ ಫ್ಯಾಷನ್. ಈಗಿನ ಟ್ರೆಂಡ್ನಲ್ಲಿ ಫರ್ನೀಚರ್ಗಳಿಗೆ ಸಾಕಷ್ಟು ಸ್ಟೋರೇಜ್ ಜಾಗವಿರುತ್ತದೆ.
ಮನೆ ಚಿಕ್ಕದಾಗಿದ್ದರೆ ಫರ್ನೀಚರ್ ಆಯ್ಕೆಯಲ್ಲಿ ಇನ್ನಷ್ಟು ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಏಕೆಂದರೆ ಸಣ್ಣ ಮನೆಯಲ್ಲಿ ಅಧಿಕ ಫರ್ನೀಚರ್ ನಡೆದಾಡಲು ಅಡ್ಡಿ ಎನಿಸುತ್ತದೆ. ಬೆಡ್ರೂಮಿನಲ್ಲಿ ಡ್ರೆಸಿಂಗ್ ಟೇಬಲ್ ಇರಲೇಬೇಕು ಎಂದೇನಿಲ್ಲ. ಒಂದು ಡಿಸೈನರ್
ಸಿಂಗಲ್ ಮಿರರ್ ಸಹ ನಮ್ಮ ಅಗತ್ಯ ಪೂರೈಸಬಲ್ಲದು. ಇದು ಹೆಚ್ಚು ರೋಚಕವೆನಿಸುತ್ತದೆ. ಹಾಗೆಯೇ ಲಿವಿಂಗ್ ರೂಮಿನಲ್ಲಿ ಸೋಫಾ ಸೆಟ್ ಇರಿಸಲೇಬೇಕೆಂಬುದು ಅನಿವಾರ್ಯವಲ್ಲ. ತ್ರೀ ಸೀಟರ್ ಸೋಫಾ ಜೊತೆ 2 ಹೈ ಬ್ಯಾಕ್ ಚೇರ್ಸ್ ಸಹ ಸಿಟ್ಟಿಂಗ್ ಅರೇಂಜ್ಮೆಂಟ್ಗೆ ಎಷ್ಟೋ ಪೂರಕ.
ಮಹಿಳೆಯರ ದೃಷ್ಟಿಯಿಂದ ನೋಡಿದಾಗ ಅವರು ಮನೆಯಲ್ಲೆಲ್ಲಾ ಓಡಾಡಿಕೊಂಡು ಎಷ್ಟೋ ಕೆಲಸ ಮಾಡಬೇಕಾಗುತ್ತದೆ. ಹೀಗೆ ಓಡಾಡುವುದರಿಂದ ಆರೋಗ್ಯಕ್ಕೂ ಸಹ ಹೆಚ್ಚಿನ ಲಾಭವಿದೆ. ಹೀಗಾಗಿ ಮನೆಯಲ್ಲಿ ಫರ್ನೀಚರ್ ತುಂಬಿಸಿಕೊಂಡು ರಾಶಿ ಹಾಕುವ ಬದಲು, ಅಗತ್ಯಕ್ಕೆ ತಕ್ಕಷ್ಟೇ ಸ್ಟೈಲಿಶ್ ಫರ್ನೀಚರ್ ಬಳಸುವುದು ಲೇಸು. ಈ ರೀತಿ ಗೃಹಾಲಂಕಾರದ ಕುರಿತು ಎಚ್ಚರಿಕೆ ವಹಿಸಿದರೆ, ಹೊರಗೆ ದುಡಿದು ದಣಿದು ಬಂದವರಿಗೆ ಹಾನಿಯೆನಿಸುತ್ತದೆ.
– ಪ್ರೇಮಲತಾ