ಕಥೆ – ಸುಗುಣಾ ರವೀಂದ್ರ
“ಈ ಭಾವನಾ ಬಹಳ ತಿಳಿವಳಿಕೆ ಇರುವ ಹುಡುಗಿ. ಇವಳ ಆಸರೆಯಲ್ಲಿ ನೀನು ಈ ದುಃಖದಿಂದ ಇನ್ನೂ ಶಕ್ತಿವಂತಳೂ, ತಿಳಿವಳಿಕೆಯುಳ್ಳವಳೂ ಆಗಿ ಹೊರಬರುತ್ತೀಯ!” ಸ್ನೇಹಾಳ ಮಾಮನ ಮಗಳು ಭಾವನಾ ಬಂದು ಹಾಸ್ಟೆಲ್‌ನಲ್ಲಿ ಅವಳ ರೂಮ್ ಪಾರ್ಟ್‌ನರ್ ಆಗಿ ಇರಲು ಆರಂಭ ಮಾಡಿದ ದಿನದಿಂದ ಅವಳ ಜೀವನ ಅಸ್ತವ್ಯಸ್ತವಾಯಿತು. ದೌರ್ಭಾಗ್ಯವೆಂದರೆ ಭಾವನಾ ಹಾಸ್ಟೆಲ್‌ಗೆ ಬಂದ ವೇಳೆಯಲ್ಲಿ ಸ್ನೇಹಾ ಹಾಸ್ಟೆಲ್‌ನ ಕಾಮನ್ ರೂಮಿನಲ್ಲಿ ನಿಲುವಿಗೆ ಅಂಟಿಕೊಂಡಂತೆ ಕುಳಿತಿದ್ದಳು. ಭಾವನಾ ಮೇಲೆ ಏನೂ ಭಾವನೆ ತೋರಿಸಿಕೊಳ್ಳದೆ ನಿಖಿಲನ ಪರಿಚಯ ಮಾಡಿಕೊಂಡಳು. ಆದರೆ ಸ್ನೇಹಾ ಅಪರಾಧೀ ಭಾವದಿಂದ ಮನದೊಳಗೆ ಅಶಾಂತಿಯಿಂದ ಚಡಪಡಿಸಿದಳು.
ಸ್ನೇಹಾ ಭಾವನಾ ಅಕ್ಕನಿಗೆ ಹೆದರಿಕೊಳ್ಳಲು ಯಾವ ಕಾರಣ ಇರಲಿಲ್ಲ. ಅವಳು ಯಾವಾಗಲೂ ಅವಳ ಜೊತೆ ಸುಖದುಃಖಗಳನ್ನು ಹೇಳಿಕೊಳ್ಳುತ್ತಾ ಬಂದಿದ್ದಾಳೆ.
“ನಿನ್ನ ತಂಗಿಯ ಕಡೆ ಗಮನ ಇಡು ಭಾವನಾ, ನಾನು ಸತ್ತ ನಂತರ ನೀನೇ ಅವಳ ತಾಯಿಯ ಸ್ಥಾನ ತೆಗೆದುಕೊಳ್ಳಬೇಕು” ಸ್ನೇಹಾಳ ತಾಯಿ ಸಾಯುವುದಕ್ಕೆ ಕೆಲವು ದಿನಗಳ ಮೊದಲು ಭಾವನಾಳ ಮೇಲೆ ಈ ಜವಾಬ್ಧಾರಿ ಹೊರಿಸಿದ್ದರು. ಆಕೆಗೆ ಕ್ಯಾನ್ಸರ್ ಆಗಿತ್ತು. ಭಾವನಾ ಈ ಜವಾಬ್ದಾರಿಯನ್ನು ಬಹಳ ಪ್ರಾಮಾಣಿಕತೆಯಿಂದ ನಿಭಾಯಿಸುತ್ತಿದ್ದಳು. ಭಾವನಾ ತೋರಿಸುತ್ತಿದ್ದ ಪ್ರೀತಿಗೆ ಪ್ರತಿಯಾಗಿ ಸ್ನೇಹಾ ಅವಳಿಗೆ ಬಹಳ ಗೌರವ ತೋರಿಸುತ್ತಿದ್ದಳು.
ರಾತ್ರಿ ಭಾವನಾ ನಿಖಿಲನ ವಿಷಯ ಎತ್ತಿದಳು. ಆಗ ಸ್ನೇಹಾಳ ಆಪ್ತ ಗೆಳತಿ ಕವಿತಾ ಕೂಡ ಕೋಣೆಯಲ್ಲಿದ್ದಳು.“ನಿಖಿಲ್ ಯಾವಾಗಿನಿಂದ ಗೊತ್ತು ಸ್ನೇಹಾ?” ಭಾವನಾ ಸ್ನೇಹಾಳ ಕೈಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಪ್ರೀತಿಯಿಂದ ಕೇಳಿದಳು.
ಭಾವನಾಳ ಸೀದಾ, ಸರಳ ಪ್ರಭಾಶಾಲಿ ವ್ಯಕ್ತಿತ್ವದ ಎದುರು ಸ್ನೇಹಾಳಿಗೆ ಉತ್ತರ ಕೊಡದಿರಲು ಸಾಧ್ಯವಾಗಲಿಲ್ಲ.“ಸುಮಾರು 4-5 ತಿಂಗಳಿಂದ” ಚುಟುಕಾಗಿ ಉತ್ತರಿಸಿದಳು.
“ನೀವಿಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸ್ತೀರಾ?” ಭಾವನಾ ಕೇಳಿದಳು.
“ನಾವಿಬ್ಬರೂ ಒಳ್ಳೆಯ ಸ್ನೇಹಿತರು ಅಕ್ಕಾ,” ಸ್ನೇಹಾ ಹೇಳಿದಳು.
“ಅರೆ, ಒಳ್ಳೆ ಸ್ನೇಹಿತ ಅಂದರೆ ಯಾರಾದರೂ ಹುಡುಗಿ ಪ್ರೇಮಿಯ ಹಾಗೆ ಅವನಿಗೆ ಅಂಟಿಕೊಂಡು ಕುಳಿತುಕೊಳ್ಳುತ್ತಾಳೇನೂ? ಎಲ್ಲಾ ವಿಷಯ ಹೇಳು. ನೀವಿಬ್ಬರೂ ತುಂಬಾ ಪ್ರೀತಿಸ್ತೀರಾ?” ಭಾವನಾ ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮುಗುಳ್ನಕ್ಕಳು.
ಸ್ನೇಹಾಳ ಮುಖದ ಮೇಲೆ ಅಸಹನೆಯ ಭಾವ ಸುಳಿಯಿತು. ಕವಿತಾ ಮಧ್ಯದಲ್ಲಿ ಬಾಯಿ ಹಾಕಿದಳು, “ಅಕ್ಕಾ, ನಿಖಿಲ್ ಎಲ್ಲಾ ರೀತಿಯಿಂದಲೂ ನಮ್ಮ ಸ್ನೇಹಾಗೆ ತಕ್ಕ ಜೀವನ ಸಂಗಾತಿಯಾಗ್ತಾನೆ. ಅವನು ಚೆನ್ನಾಗಿದ್ದಾನೆ, ಸ್ಮಾರ್ಟ್ ಮತ್ತು ಶ್ರೀಮಂತ ಮನೆತನದವನು. ಅವನು ಸ್ನೇಹಾಳನ್ನು ಮದುವೆಯಾಗ್ತಾನೆ ಅಂತ ನನಗೆ ಪೂರ್ಣ ನಂಬಿಕೆ ಇದೆ.”
“ಹಾಗಾದರೆ ಇದುವರೆಗೂ ಸ್ನೇಹಾಳನ್ನು ಮದುವೆಯಾಗೋದಿಕ್ಕೆ ಅವನ ಒಪ್ಪಿಗೆ ಪಡೆದಿಲ್ಲವೇ?” ಭಾವನಾಳ ಹಣೆಯಲ್ಲಿ ನೆರಿಗೆಗಳು ಎದ್ದವು.
“ಅಕ್ಕಾ, ಈ ಕಾಲದ ಹುಡುಗರು ಬೇಗ ಮದುವೆ ಆಗಬೇಕೆನ್ನುವ ಮಾತು ಎಲ್ಲಿ ಆಡ್ತಾರೆ? ಅವರು ಮೊದಲು ಪರಸ್ಪರ ಅರ್ಥ ಮಾಡಿಕೊಳ್ಳುವುದಕ್ಕೆ ಒತ್ತು ಕೊಡುತ್ತಾರೆ,” ಕವಿತಾ ನುಡಿದಳು.
ಭಾವನಾ ತಕ್ಷಣ ಗಂಭೀರಳಾದಳು, “ನೋಡು, ಮದುವೆ ಮಾಡಿಕೊಂಡು ಸರಿಯಾದ ಸಮಯದಲ್ಲಿ ಮನೆ ಸಂಸಾರ ಶುರು ಮಾಡುವುದು ಹೆಣ್ಣುಮಕ್ಕಳಿಗೆ ತುಂಬಾ ಅಗತ್ಯ. ನಾನೇನಾದರೂ ತಪ್ಪು ಹೇಳ್ತಿದೀನಾ ಸ್ನೇಹಾ?”
“ಅಕ್ಕಾ, ನನಗೆ ಈ ಮಾತುಗಳು ಅರ್ಥವಾಗ್ತವೆ. ಆದರೆ ನಿಖಿಲನಿಗೆ ಮದುವೆ ಮಾಡಿಕೊಳ್ಳುವ ಬಗ್ಗೆ ಬಲವಂತ ಮಾಡಲು ಸಾಧ್ಯವಿಲ್ಲ,” ಸ್ನೇಹಾ ಮುನಿದು ಹೇಳಿದಳು.
ಕೋಪ ಮಾಡಿಕೊಂಡು ಭಾವನಾಳನ್ನು ಸುಮ್ಮನಾಗಿಸುವುದು ಸಾಧ್ಯವಿರಲಿಲ್ಲ. ಅವಳು ಭಾವುಕಳಾಗಿ, “ಸ್ನೇಹಾ, ಜೀವನ ಸಂಗಾತಿಯಾಗಲು ಇಷ್ಟವಿಲ್ಲದವನ ಜೊತೆ ಸಲಿಗೆಯಿಂದಿರುವುದು ಸರಿಯಲ್ಲ. ಆಮೇಲೆ ಮೋಸ ಹೋಗಿ ದುಃಖ ಪಡುವುದರ ಬದಲು ಕಾಲ ಮಿಂಚುವ ಮೊದಲೇ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ಈ ವಿಷಯ ನಾನು ನಿಖಿಲ್ ಜೊತೆ ಮಾತಾಡ್ತೀನಿ.”
“ಬೇಡ, ಬೇಡ, ನಿಖಿಲನಿಗೆ ಏನೂ ಹೇಳಬೇಡಿ,” ಸ್ನೇಹಾಳಿಗೆ ಗಾಬರಿಯಾಗಿತ್ತು.
“ಹಾಗಾದರೆ ಅವನ ಮನಸ್ಸಿನಲ್ಲಿ ಏನಿದೆ ಅಂತ ಹೇಗೆ ಗೊತ್ತಾಗುತ್ತೆ?” ಭಾವನಾ ಕೇಳಿದಳು.
“ಅಕ್ಕಾ ನೀವು ಈ ವಿಷಯದಲ್ಲಿ ಮಧ್ಯೆ ಬರಬೇಡಿ, ಪ್ಲೀಸ್,” ಕೋಪ ಬಂದಿತ್ತು ಸ್ನೇಹಾಗೆ.
ಮದುವೆಗೆ ಹೌದು ಅಥವಾ ಇಲ್ಲ ಎಂದು ಯಾವುದನ್ನಾದರೂ ಖಂಡಿತವಾಗಿ ಹೇಳದಿರುವುದು ಸ್ನೇಹಾಗೂ ಚಿಂತೆಯ ವಿಷಯವಾಗಿತ್ತು. ಭಾವನಾ ಕೂಡಾ ಇದೇ ವಿಷಯವನ್ನು ಈಗ ಬೆರಳು ಮಾಡಿ ತೋರಿಸುತ್ತಿದ್ದಾಳೆ. ತನ್ನ ಮೇಲೇ ತಾನು ಅತೃಪ್ತಳಾಗಿದ್ದ ಸ್ನೇಹಾಳಿಗೆ ಸಹಜವಾಗಿ ಭಾವನಾ ಮೇಲೆ ಸಿಟ್ಟು ಬಂದಿತ್ತು.
ಬಾತ್‌ರೂಮಿನಿಂದ ಬಂದ ಸ್ನೇಹಾ ಮಂಚದ ಮೇಲೆ ಒರಗಿ ಕಣ್ಣು ಮುಚ್ಚಿಕೊಂಡಳು. ಭಾವನಾ ಬಹಳ ಹೊತ್ತು ಕವಿತಾಳ ಹತ್ತಿರ ಮೆಲುದನಿಯಲ್ಲಿ ಮಾತನಾಡುತ್ತಾ ನಿಖಿಲನ ವಿಷಯ ತಿಳಿದುಕೊಳ್ಳುತ್ತಿದ್ದಳು. ಮರುದಿನ ಭಾವನಾ ಸ್ನೇಹಾಳ ಜೊತೆ ನಿಖಿಲನ ಬಗ್ಗೆ ಏನೂ ಮಾತನಾಡಲಿಲ್ಲ. ಅದರಿಂದ ಸ್ನೇಹಾಗೂ ಮನಸ್ಸು ನಿರಾಳವೆನಿಸಿತು. ಶನಿವಾರ ಸಂಜೆ ನಿಖಿಲ್ ಸ್ನೇಹಾಳನ್ನು ಭೇಟಿಯಾಗಲು ಹಾಸ್ಟೆಲಿಗೆ ಬಂದ. ಸ್ವಲ್ಪ ಹೊತ್ತಿಗೆ ಅಲ್ಲಿಗೆ ಭಾವನಾ ಬಂದಳು. ಸ್ವಲ್ಪ ಹೊತ್ತು ಅದೂ ಇದೂ ಮಾತನಾಡಿದ ಭಾವನಾ ತನ್ನದೇ ಆದ ವಿಶೇಷ ಧಾಟಿಯಲ್ಲಿ ನಿಖಿಲನನ್ನು ನೇರವಾಗಿ ಕೇಳಿದಳು.
“ನಿನಗೆ ನನ್ನ ಪುಟ್ಟ ತಂಗಿ ಹೇಗನ್ನಿಸುತ್ತಾಳೆ?”
“ಸ್ನೇಹಾ ತುಂಬಾ ಒಳ್ಳೆ ಹುಡುಗಿ,” ನಿಖಿಲ್ ಉತ್ತರಿಸಿದ.
“ನಿನಗೆ ತುಂಬ ಇಷ್ಟ ಅಲ್ವಾ?” ಭಾವನಾ `ನಿನಗೆ’ ಶಬ್ದಕ್ಕೆ ಹೆಚ್ಚು ಒತ್ತು ಕೊಟ್ಟಳು.
“ಬಹಳ,” ನಿಖಿಲ್ ಸ್ವಲ್ಪ ಅಶಾಂತನಾಗಿ ಕಂಡ.
“ಸ್ನೇಹಾ ನಿನ್ನನ್ನು ಬಹಳ ಹೊಗಳ್ತಾಳೆ. ನನಗೂ ನೀನು ತುಂಬಾ ತಿಳಿವಳಿಕೆಯುಳ್ಳ ಯುವಕ ಅನ್ನಿಸುತ್ತೆ.”
“ಥ್ಯಾಂಕ್ ಯೂ ಅಕ್ಕಾ,” ನಿಖಿಲ್ ಮುಗುಳ್ನಕ್ಕು ಹೇಳಿದ.
ಭಾವನಾ ಸ್ನೇಹಾಳ ಕೈ ಹಿಡಿದು, “ನಾನು ಸ್ನೇಹಾಳಿಗಿಂತ ಎರಡು ವರ್ಷ ದೊಡ್ಡವಳು. ಮದುವೆ ಮಾಡಿಕೋ ಅಂತ ಮನೇಲಿ ಬಹಳ ಬಲವಂತ ಮಾಡ್ತಿದ್ದಾರೆ. ಅದರೆ ನಾನು ನನ್ನ ಮದುವೇನಾ ಮುಂದಕ್ಕೆ ಹಾಕ್ತಾ ಇದೀನಿ.”
“ಅದ್ಯಾತಕ್ಕೆ ಅಕ್ಕಾ?” ನಿಖಿಲ್ ಕೇಳಿದ.
“ಯಾಕೆಂದರೆ ಸ್ನೇಹಾಳ ಮದುವೆಯಾದ ಮೇಲೇ ನಾನು ಮದುವೆ ಮಾಡಿಕೊಳ್ಳೋದು. ನನ್ನ ಪುಟ್ಟ ತಂಗಿ ಆದಷ್ಟು ಬೇಗ ಸಂಸಾರಿಯಾಗಲಿ ಅಂತ ನಾನು ಆಸೆ ಪಡ್ತೀನಿ,” ಭಾವನಾ ಉತ್ತರಿಸಿದಳು.
ಸ್ವಲ್ಪ ಹೊತ್ತು ಸುಮ್ಮನಿದ್ದ ನಂತರ ನಿಖಿಲ್ ನಿರ್ಲಕ್ಷ್ಯದ ಧಾಟಿಯಲ್ಲಿ ಹೇಳಿದ. “ಅಕ್ಕಾ, ನನಗೆ ನಿಮ್ಮ ಮನಸ್ಸಲ್ಲಿ ಏನಿದೆ ಅಂತ ಗೊತ್ತಾಗ್ತಿದೆ. ಆದರೆ ನಾನು ಅವಸರದಲ್ಲಿ ಮದುವೆ ಆಗಲು ಇಷ್ಟಪಡುವುದಿಲ್ಲ.”
“ನಿನ್ನ ಮನಸ್ಸಿನಲ್ಲಿರುವುದನ್ನು ಸ್ವಲ್ಪ ವಿವರವಾಗಿ ಹೇಳು ನಿಖಿಲ್,” ಕೋಪದ ದೃಷ್ಟಿ ತಪ್ಪಿಸಿ ಭಾವನಾ ಪೂರಾ ಗಮನವಿಟ್ಟು ನಿಖಿಲನ ಮುಖ ನೋಡತೊಡಗಿದಳು.
“ಅಕ್ಕಾ, ನಾನು ಈಗ ನನ್ನ ಕೆರಿಯರ್‌ನ್ನು ಉತ್ತಮಗೊಳಿಸುವ ಬಗ್ಗೆ ಚಿಂತಿಸಬೇಕಾಗಿದೆ,” ನಿಖಿಲನ ಮೂಡ್ ಹಾಳಾಗಿತ್ತು.
“ನಿನ್ನ ಕೆಲಸ ಈಗಲೂ ಚೆನ್ನಾಗಿದೆ. ಅಲ್ಲದೆ, ನೀನು ಸಿರಿವಂತ ಮನೆತನದವನು. ಏನಾದರೂ ಕಷ್ಟ ಬಂದರೆ ನಿನ್ನ ತಂದೆ ನಿನಗೆ ಸಹಾಯ ಮಾಡ್ತಾರೆ.”
“ಅಕ್ಕಾ, ಇನ್ನೂ ಒಂದೆರಡು ವರ್ಷ ಸ್ನೇಹಾ ಮತ್ತು ನಾನು ಪ್ರೇಮಿಗಳ ಹಾಗೆ ಜೀವನದ ಆನಂದ ಅನುಭವಿಸಲು ಬಿಡಿ. ಆಮೇಲೆ ಮದುವೆ ಮಾಡಿಕೊಳ್ತೇನೆ. ಅಂದರೆ ಅಷ್ಟು ಹೊತ್ತಿಗೆ ಸ್ನೇಹಾ ಬೇರೆ ಯಾರಾದರೂ ಹೊಸ ಸಂಗಾತಿಯನ್ನು ಹುಡುಕಿಕೊಳ್ಳದಿದ್ದರೆ…” ನಿಖಿಲ್ ನಕ್ಕ.
“ನೀನು ಮನಸ್ಸು ಬದಲಾಯಿಸಿದರೆ?” ಭಾವನಾ ಕೇಳಿದಳು.
“ಹಾಗಾಗೋದಿಲ್ಲ ಅಕ್ಕಾ, ನೀವು ಚಿಂತೆ ಮಾಡಬೇಡಿ,” ನಿಖಿಲ್ ಸ್ನೇಹಾಳ ಕಡೆ ನೋಡುತ್ತಾ ಅವಳಿಗೆ ವಿಶ್ವಾಸ ಮೂಡಿಸುವ ಹಾಗೆ ನಕ್ಕ. ಅವನು ನಗುತ್ತಿದ್ದರೂ ಕಣ್ಣುಗಳಲ್ಲಿ ಕೋಪದ ಭಾವನೆ ಸ್ನೇಹಾಳಿಗೆ ಕಂಡಿತು. ಅವಳಿಗೆ ತನ್ನ ಪ್ರಿಯತಮ ಕೋಪಮಾಡಿಕೊಳ್ಳುವುದು ಇಷ್ಟವಿರಲಿಲ್ಲ.
“ಅಕ್ಕಾ, ಇನ್ನು ಏನೂ ಮಾತನಾಡಬೇಡಿ,” ಭಾವನಾಳನ್ನು ಅವಳು ಕೇಳಿಕೊಂಡಳು. ಭಾವನಾ ವಿಷಯ ಬದಲಾಯಿಸಿದಳು. ಸ್ವಲ್ಪ ಹೊತ್ತಿನ ನಂತರ ಭಾವನಾ ಅವರಿಬ್ಬರನ್ನೇ ಬಿಟ್ಟು ಕೋಣೆಯೊಳಗೆ ಹೋದಳು. ರಾತ್ರಿ ಬಹಳ ಹೊತ್ತಾದ ಮೇಲೆ ಅವಳಿಗೆ ಸ್ನೇಹಾಳ ಜೊತೆ ಮಾತನಾಡುವ ಅವಕಾಶ ಬಂತು.
“ಅಕ್ಕಾ, ಇನ್ನು ಮುಂದೆ ನೀವು ನಿಖಿಲನ ಜೊತೆ ಮದುವೆ ಬಗ್ಗೆ ಎಂದೂ ಯಾವುದೇ ಮಾತಾಡಬೇಡಿ ಪ್ಲೀಸ್,” ಸ್ನೇಹಾ ಚಿಂತಿತಳಾಗಿದ್ದಳು.
“ಯಾಕೆ?”
“ನಾವು ಜಗಳ ಆಡಲಿಲ್ಲ. ಆದರೆ ನಿಮ್ಮ ಪ್ರಶ್ನೆಗಳಿಂದ ಅವನಿಗೆ ಕೋಪ ಬಂದಿದೆ.”
“ಅವನು ಕೋಪ ಮಾಡ್ಕೋಬಾರದು. ಏಕೆಂದರೆ ನಿನ್ನ ಅಕ್ಕನಾಗಿ ನಾನು ಅವನನ್ನು ಎಲ್ಲಾ ರೀತಿ ಪ್ರಶ್ನೆಗಳನ್ನು ಕೇಳಬಹುದು. ನನಗೆ ಆ ಹಕ್ಕಿದೆ.”
“ಆದರೆ ಅಕ್ಕಾ, ಅವನಿಗೆ ಕೋಪ ಬರೋದು ನನಗಿಷ್ಟವಿಲ್ಲ. ನನ್ನ ಮಾತುಗಳ ಬಗ್ಗೆ ಗಮನವಿಡಿ. ನಾನು ಅವನನ್ನು ಸಂಭಾಳಿಸುತ್ತೇನೆ. ಸರಿ ಗುಡ್ ನೈಟ್,” ಸ್ನೇಹಾ ಅತ್ತ ಹೊರಳಿದಳು.
ನಂತರ ಇಬ್ಬರೂ ಮಾತಾಡಲಿಲ್ಲ. ಆದರೆ ತಂತಮ್ಮ ವಿಚಾರಗಳಲ್ಲಿ ಮುಳುಗಿ ಇಬ್ಬರೂ ಬಹಳ ಹೊತ್ತು ಎಚ್ಚರವಾಗಿದ್ದರು. ಮುಂದಿನ ವಾರ ಬೇರೆ ರೀತಿಯಲ್ಲಿ ಕಳೆಯಿತು. ಇಬ್ಬರೂ ಪರಸ್ಪರ ಕಡಿಮೆ ಮಾತನಾಡುತ್ತಿದ್ದರು. ನಿಖಿಲನ ಬಗ್ಗೆ ಭಾವನಾ ಯಾವುದೇ ಪ್ರಶ್ನೆ ಕೇಳಲಿಲ್ಲ. ಅವಳು ಕೋಪ ಮಾಡಿಕೊಳ್ಳುವುದಕ್ಕಿಂತ ತನ್ನದೇ ವಿಚಾರಗಳಲ್ಲಿ ಹೆಚ್ಚು ಮುಳುಗಿರುವಂತೆ ಕಾಣಿಸುತ್ತಿತ್ತು. ಭಾವನಾ ಕವಿತಾಳಿಂದ ಸಾಕಷ್ಟು ವಿಷಯ ಸಂಗ್ರಹಿಸಿದ್ದಳು. ಕವಿತಾಳ ಭಾವಿ ಪತಿ ರಾಹುಲನಿಂದ, ನಿಖಿಲನಿಗೆ ಮೊದಲು ಇಬ್ಬರು ಸುಂದರ ಯುವತಿಯರ ಜೊತೆ ಗಾಢ ಸ್ನೇಹವಿದ್ದ ವಿಷಯ ಭಾವನಾಳಿಗೆ ತಿಳಿಯಿತು.
ಸ್ನೇಹಾ ತನ್ನ ಒಳ್ಳೆ ಸ್ನೇಹಿತೆ ಎಂದು ನಿಖಿಲ್ ಹೇಳುತ್ತಾನೆ. ನಾಳೆ ಅವನು ಆ ಯುವತಿಯರನ್ನು ಮರೆತಂತೆ ಸ್ನೇಹಾಳನ್ನೂ ಮರೆತು ಬೇರೊಬ್ಬ ಹುಡುಗಿಯ ಸ್ನೇಹ ಮಾಡುವುದಿಲ್ಲವೇ? ಈ ಪ್ರಶ್ನೆ ಭಾವನಾಳ ನಿದ್ರೆಯನ್ನು ಹಾಳು ಮಾಡಿತು.
ನಿಖಿಲನ ತಂದೆ ನಗರದ ಅತ್ಯಂತ ಶ್ರೀಮಂತ ವ್ಯಕ್ತಿಯರಲ್ಲಿ ಒಬ್ಬರು. ಅವರು ಸ್ನೇಹಾಳಂತಹ ಮಧ್ಯಮ ವರ್ಗದ ಹುಡುಗಿಯನ್ನು ತಮ್ಮ ಸೊಸೆ ಮಾಡಿಕೊಳ್ಳಲು ಇಷ್ಟಪಡುತ್ತಾರೆಯೇ? ಈ ಪ್ರಶ್ನೆಗೆ ಉತ್ತರ ಪಡೆಯಲು ಭಾವನಾ ಕಾತುರಳಾಗಿದ್ದಳು. ಶನಿವಾರ ಭಾವನಾ ನಿಖಿಲನ ತಂದೆ ತಾಯಿಯರನ್ನು ಭೇಟಿ ಮಾಡಲು ಹೋದಳು. ಇದರ ಬಗ್ಗೆ ಸ್ನೇಹಾ ನಿಖಿಲ್‌ರಿಗೆ ಗೊತ್ತಿರಲಿಲ್ಲ. ಭಾವನಾಳ ಸಾದಾ, ಸರಳ ವ್ಯಕ್ತಿತ್ವ ಮತ್ತು ಆತ್ಮ ವಿಶ್ವಾಸದಿಂದ ಪ್ರಭಾವಿತರಾದ ನಿಖಿಲನ ತಂದೆ ತಾಯಿ ಅವಳ ಮಾತುಗಳನ್ನು ಗಮನವಿಟ್ಟು ಕೇಳಿದರು. ನಿಖಿಲ್ ಮತ್ತು ಸ್ನೇಹಾ ಬಹಳ ಆಪ್ತ ಸ್ನೇಹಿತರಾಗಿದ್ದಾರೆಂಬ ವಿಷಯ ತಿಳಿದು ಇಬ್ಬರ ಮುಖದ ಮೇಲೆ ಚಿಂತೆ ಮತ್ತು ಆತಂಕಗಳು ಕಾಣಿಸಿದವು.
“ಸ್ನೇಹಾಳ ತಂದೆ ಏನು ಮಾಡ್ತಿದಾರೆ?” ನಿಖಿಲನ ತಂದೆ ರಾಜೇಂದ್ರ ಗಂಭೀರವಾಗಿ ಕೇಳಿದರು.
“ಸರ್, ಅವರು ಸರ್ಕಾರಿ ನೌಕರಿಯಲ್ಲಿದ್ದಾರೆ.”
“ಏನು ದೊಡ್ಡ ಅಧಿಕಾರಿಯೇ?” ರಾಜೇಂದ್ರ ಕೇಳಿದರು.
“ಇಲ್ಲ, ಸಹಾಯಕರಾಗಿ ಕೆಲಸ ಮಾಡಿ ವರ್ಷದ ಹಿಂದೆ ಆಫೀಸರ್ ಆಗಿ ಬಡ್ತಿ ಪಡೆದಿದ್ದಾರೆ.”
“ನನ್ನ ಮಗನಿಗೆ ಇಂತಹ ಸಾಧಾರಣ ಮನೆಯ ಸಂಬಂಧ ಬೆಳಸೋಲ್ಲ,” ನಿಖಿಲನ ತಾಯಿ ಗಾಯತ್ರಿ ತಮ್ಮ ಕೋಪ ಮುಚ್ಚಿಡುತ್ತಾ ಹೇಳಿದರು.
ರಾಜೇಂದ್ರ ಮೃದುವಾಗಿ ಭಾವನಾಗೆ ಹೇಳಿದರು, “ನನ್ನಿಬ್ಬರು ಹೆಣ್ಣುಮಕ್ಕಳನ್ನು ಕೋಟ್ಯಧಿಪತಿಗಳ ಕುಟುಂಬದ ವರಗಳಿಗೆ ಮದುವೆ ಮಾಡಿಕೊಟ್ಟಿದ್ದೇವೆ. ನಿಖಿಲನ ಮದುವೆ ಕೂಡ ನಮ್ಮ ಯೋಗ್ಯತೆಗೆ ತಕ್ಕಂತೆ ಸರಿಸಮನವಾದ ಮನೆತನದ ಹುಡುಗಿ ಜೊತೆ ಮಾಡಲು ಇಷ್ಟ ಪಡುತ್ತೇವೆ. ನೀನು ನಿನ್ನ ತಂಗಿಗೆ ನಮ್ಮ ಮನೆಯ ಸೊಸೆ ಆಗಬೇಕೆನ್ನುವ ಆಸೆ ಬಿಟ್ಟುಬಿಡಲು ಹೇಳು.”
“ಅಂಕಲ್, ಸ್ನೇಹಾ ಬಹಳ ಒಳ್ಳೆಯ ಹುಡುಗಿ. ನಿಖಿಲ್ ಕೂಡಾ ಅವಳನ್ನು ಬಹಳ ಇಷ್ಟಪಡ್ತಾನೆ. ಇಬ್ಬರೂ ಸುಖವಾಗಿ ಇರ್ತಾರೆ. ಈ ವಿಷಯ ನಾವು ಕೋಟ್ಯಧೀಶರಾಗಿರುವುದಕ್ಕಿಂತ ಹೆಚ್ಚು ಮುಖ್ಯ ಅಂತ ಅನ್ನಿಸುದಿಲ್ಲವೇ?” ಭಾವನಾ ಭಾವುಕಳಾದಳು.
“ನಾವು ನಮ್ಮ ಮಗನಿಗೆ ಆರಿಸುವ ಹುಡುಗಿಯೂ ಒಳ್ಳೆಯವಳೇ ಆಗಿರುತ್ತಾಳೆ. ಯಾವುದೋ ಸಾಮಾನ್ಯ ಮನೆತನದ ಹುಡುಗಿಯನ್ನು ತಂದುಕೊಂಡು ಸಮಾಜದಲ್ಲಿ ನಮ್ಮ ಗೌರವ ಕಡಿಮೆ ಮಾಡಿಕೊಳ್ಳುವ ಇಷ್ಟವಿಲ್ಲ.” ಗಾಯತ್ರಿಯ ಮುಖ ಕೋಪದಿಂದ ಕೆಂಪಗಾಗಿತ್ತು. ಪತ್ನಿಯ ಮಾತಿನಿಂದ ಭಾವನಾಳ ಕಣ್ಣಲ್ಲಿ ನೀರು ಬಂದಿದ್ದನ್ನು ಕಂಡ ರಾಜೇಂದ್ರ ಪತ್ನಿಗೆ ಸುಮ್ಮನಿರುವಂತೆ ಸನ್ನೆ ಮಾಡಿದರು.
ಸ್ವಲ್ಪ ಹೊತ್ತು ವಿಚಾರದಲ್ಲಿ ಮುಳುಗಿದ ನಂತರ ಅವರು ಭಾವನಾಳನ್ನು ಕೇಳಿದರು, “ಭಾವನಾ, ನಿನ್ನ ಮನಸ್ಸಲ್ಲಿ ಯಾವುದೋ ಆಸೆ ಇಟ್ಟುಕೊಂಡು ನಮ್ಮನ್ನು ಭೇಟಿಯಾಗಲು ಬಂದಿದೀಯ ಅನ್ನುವುದು ನನಗೆ ಅರ್ಥವಾಗ್ತಿದೆ.”
“ಅಂಕಲ್, ನನಗೆ ಸ್ನೇಹಾಳನ್ನು ದುಃಖಿಯಾಗಿ ನೋಡಲು ಇಷ್ಟವಿಲ್ಲ. ನಿಖಿಲನ ಜೊತೆ ಮದುವೆಯಾಗದಿದ್ದರೆ ಅವಳಿಗೆ ದೊಡ್ಡ ಆಘಾತವಾಗುತ್ತೆ,” ಭಾವನಾ ಕಣ್ಣೊರೆಸಿಕೊಂಡಳು.
“ಹಾಗಾಗುವುದು ನಮಗೂ ಇಷ್ಟವಿಲ್ಲ,” ರಾಜೇಂದ್ರ ನುಡಿದರು.
“ಅಂಕಲ್ ನಿಖಿಲ್ ಪ್ರೇಮದ ಹುಚ್ಚಿನಲ್ಲಿ ಸ್ನೇಹಾಳನ್ನೇ ಮದುವೆಯಾಗ್ತೀನಿ ಅಂತ ಹಟ ಹಿಡಿದರೆ ನಿಮ್ಮ ನಿರ್ಧಾರ ಏನಾಗುತ್ತದೆ?”
“ನಮ್ಮ ಇಷ್ಟಕ್ಕೆ ವಿರುದ್ಧವಾಗಿ ನಿಖಿಲ್ ಎಂದೂ ಏನೂ ಮಾಡುವುದಿಲ್ಲ,” ಗಾಯತ್ರಿ ಮುಖ ಕೆಡಿಸಿಕೊಂಡು ಹೇಳಿದರು.
ಅವರ ಕಡೆ ಗಮನ ಕೊಡದೆ ಭಾವನಾ ರಾಜೇಂದ್ರರ ಉತ್ತರ ನಿರೀಕ್ಷಿಸುತ್ತಿದ್ದಳು. ಸ್ವಲ್ಪಹೊತ್ತು ಯೋಚಿಸಿ ರಾಜೇಂದ್ರ, “ನಿಖಿಲನನ್ನು ನಾವು ಪ್ರೀತಿಸುತ್ತೇವೆ. ಅವನಿಗೆ ಸಂತೋಷ ಕೊಡುವಂಥ ನಿರ್ಧಾರವನ್ನೇ ತೆಗೆದುಕೊಳ್ತೇವೆ.” ಎಂದರು.
“ಅಂದರೆ ಸ್ನೇಹಾ ಜೊತೆ ಅವನ ಮದುವೆ ಮಾಡ್ತೀರಾ?” ಭಾವನಾ ತಕ್ಷಣ ಕೇಳಿದಳು.
“ಎಂದಿಗೂ ಇಲ್ಲ!” ಗಾಯತ್ರಿ ಮತ್ತೆ ಮಧ್ಯೆ ಬಾಯಿ ಹಾಕಿದಳು. “ನಿಖಿಲನನ್ನು ತನ್ನ ರೂಪದಿಂದ ಮರಳು ಮಾಡಿ ನಮ್ಮ ಹಣದಿಂದ ಮಜಾ ಮಾಡಬೇಕೆಂಬ ಆಸೆ ಹೊತ್ತಿರುವ ದುರಾಸೆ ಹುಡುಗಿ ನಮ್ಮ ಮನೆ ಸೊಸೆಯಾಗಿ ಬರುವುದಿಲ್ಲ.”
ಭಾವನಾ ತನ್ನ ದನಿ ಎತ್ತರಿಸಿ, ಅವರಿಗೆ ಉತ್ತರ ಕೊಟ್ಟಳು.
“ಆಂಟಿ, ನಿಮ್ಮ ಹೆಣ್ಣುಮಕ್ಕಳ ಮದುವೆ ನಿಶ್ಚಯಿಸುವ ಮೊದಲು ಹುಡುಗ ಮತ್ತು ಅವನ ಮನೆತನದ ಬಗ್ಗೆ ಹೇಗೆ ವಿಚಾರಿಸಿದಿರೋ ಅದೇ ಕೆಲಸ ನಾನು ನನ್ನ ತಂಗಿಗಾಗಿ ಮಾಡ್ತಿದೀನಿ. ದಯವಿಟ್ಟು ನನಗೆ ಅಪಮಾನ ಮಾಡಬೇಡಿ.”
“ನೀನು ಸ್ವಲ್ಪ ಹೊತ್ತು ಸುಮ್ಮನಿರು ಗಾಯತ್ರಿ,” ಪತಿಯ ಆದೇಶ ಪಡೆದು ಬಹಳ ಕಷ್ಟದಿಂದಲೇ ಗಾಯತ್ರಿ ಸುಮ್ಮನಾದರು.
ಭಾವನಾ ಕೇಳಿದಳು, “ಅಂಕಲ್, ನಿಖಿಲನ ಮನಸ್ಸಿನಲ್ಲೇನಿದೆ ಅಂತ ತಿಳಿದುಕೊಳ್ಳುವುದು ನಮ್ಮಿಬ್ಬರಿಗೂ ಮುಖ್ಯ ಅಲ್ಲವೇ?”
“ಹೌದು ಖಂಡಿತಾ,” ರಾಜೇಂದ್ರ ಒಪ್ಪಿದರು.
“ನಾನು ನನ್ನ, ಒಂದು ಇಚ್ಛೆಯನ್ನು ನಿಮ್ಮ ಮುಂದೆ ಇಡಲು ಇಷ್ಟ ಪಡುತ್ತೇನೆ.
“ಇವತ್ತು ಸಂಜೆಯೇ ನಾವು ನಿಖಿಲನ ಮನದ ಭಾವನೆಗಳನ್ನು ತಿಳಿದುಕೊಳ್ಳಲು ಸಾಧ್ಯವಾದರೆ ಹೇಗಿರುತ್ತೆ?”
“ಅದು ಹೇಗೆ ಸಾಧ್ಯವಾಗುತ್ತದೆ?” ರಾಜೇಂದ್ರ ಕೇಳಿದರು.
“ಅಂಕಲ್, ನೀವು ನಿಖಿಲನನ್ನು ಎದುರು ಕೂರಿಸಿಕೊಂಡು ಅವನನ್ನು ಕೇಳಿ. ಸ್ನೇಹಾಳ ಜೊತೆ ಪ್ರೀತಿ ಎಷ್ಟು ಆಳವಾಗಿದೆ ಅನ್ನುವುದರ ಬಗ್ಗೆ ಪ್ರಶ್ನಿಸಿ. ಇಬ್ಬರ ಮದುವೆ ಮಾಡುವ ಯೋಜನೆ ಬಗ್ಗೆ ತಿಳಿದುಕೊಳ್ಳಿ.”
“ನೀನು ಇದೆಲ್ಲಾ ಹೇಳದಿದ್ದರೂ ಇವತ್ತು ಸಂಜೆ ನಿಖಿಲನ ಜೊತೆ ಎಲ್ಲಾ ವಿಷಯ ಕೇಳಿಬಿಡುವುದು ಎಂದು ಮನಸ್ಸು ಮಾಡಿದ್ದೆ.”
“ಹಾಗಾದರೆ ನಾನು ಬಚ್ಚಿಟ್ಟುಕೊಂಡು ನಿಮ್ಮ ಮಾತುಗಳನ್ನು ಕೇಳಲು ಒಪ್ಪಿಗೆ ಕೊಡಿ ಎಂದು ಕೈ ಮುಗಿದು ಪ್ರಾರ್ಥಿಸುತ್ತೇನೆ,” ಭಾವನಾ ಕೈ ಜೋಡಿಸಿದಳು.
“ಆದರೆ…”
ರಾಜೇಂದ್ರರ ಮನದ ಹೊಯ್ದಾಟವನ್ನು ಊಹಿಸಿದ ಭಾವನಾ ಬೇಗ ಹೇಳಿದಳು, “ಅಂಕಲ್ ನಿಖಿಲ್ ಸ್ನೇಹಾಳ ಜೊತೆಗಿನ ತನ್ನ ಪ್ರೀತಿಯ ಬಗ್ಗೆ ಎಷ್ಟು ಪ್ರಾಮಾಣಿಕನಾಗಿದ್ದಾನೆಂದು ತಿಳಿದುಕೊಳ್ಳುವುದು ನನ್ನ ತಂಗಿಯ ಸುಖಮಯ ಭವಿಷ್ಯಕ್ಕೆ ಬಹಳ ಅವಶ್ಯಕ.”
“ಭಾವನಾ, ನಿಖಿಲ್ ಸ್ನೇಹಾಳನ್ನು ಮದುವೆಯಾಗುತ್ತೇನೆಂದು ಹೇಳಿದರೂ ನಾವು ತಕ್ಷಣ ಈ ಸಂಬಂಧಕ್ಕೆ ಒಪ್ಪಿಕೊಳ್ಳಲಾರೆವು. ಈ ವಿಷಯ ನೀನು ಚೆನ್ನಾಗಿ ತಿಳಿದುಕೊ. ಅವನೇನಾದರೂ ಸ್ನೇಹಾಳನ್ನು ಮದುವೆಯಾಗಲು ಒಪ್ಪದಿದ್ದರೆ ಆಗ ನೀನು ಏನು ಮಾಡ್ತೀಯ?” ರಾಜೇಂದ್ರ ಮತ್ತೆ ಗಂಭೀರವಾಗಿ ಕೇಳಿದರು.
“ಆಗ ಸ್ನೇಹಾ ನಿಖಿಲನಿಂದ ದೂರ ಇರುವಂತೆ ನೋಡಿಕೋತೀನಿ. ಚಿಂತೆ, ದುಃಖ, ಬೇಸರಗಳಿಂದ ಅವಳನ್ನು ರಕ್ಷಿಸುವುದು ನನ್ನ ಜವಾಬ್ದಾರಿ ಅಂಕಲ್,” ಭಾವನಾಳ ಗಂಟಲು ಕಟ್ಟಿತು.
“ಹಾಗಾದರೆ ನೀನು ನಮ್ಮ ಮಾತು ಕದ್ದು ಕೇಳಲು ಒಪ್ಪಿದೀನಿ. ಏನೇ ಆದರೂ ನೀನು ನಮ್ಮೆದುರು ಬರಬಾರದು ನೆನಪಿರಲಿ.”
“ನಿಮ್ಮ ಷರತ್ತು ನನಗೆ ಒಪ್ಪಿಗೆ,” ಎಂದಳು ಭಾವನಾ.
“ರಾತ್ರಿ 8 ಗಂಟೆ ಹೊತ್ತಿಗೆ ಬರ್ತಾನೆ… ನೀನು ಸ್ವಲ್ಪ ಹೊತ್ತು ಮುಂಚಿತವಾಗಿ ಇಲ್ಲಿಗೆ ಬಾ.”
“ಥ್ಯಾಂಕ್ಸ್ ಅಂಕಲ್, ನಿಮ್ಮ ಈ ಉಪಕಾರಕ್ಕಾಗಿ ನಾನು ಜೀವನಪರ್ಯಂತ ನಿಮಗೆ ಕೃತಜ್ಞಳಾಗಿರ್ತೀನಿ,” ಭಾವನಾ ಹೊರಡಲು ಎದ್ದು ನಿಂತಳು.
ಭಾವನಾಳ ವ್ಯಕ್ತಿತ್ವ ರಾಜೇಂದ್ರರ ಮೇಲೆ ಪ್ರಭಾವ ಬೀರಿತ್ತು. ಅವರಿಗೆ ಅವಳ ತಲೆಯ ಮೇಲೆ ಕೈಯಿಟ್ಟು ಆಶೀರ್ವಾದ ಮಾಡದೆ ಇರಲಾಗಲಿಲ್ಲ. ಭಾವನಾಳ ನಮಸ್ಕಾರಕ್ಕೆ ಗಾಯತ್ರಿ ಬಹಳ ಒಣಸ್ವರದಲ್ಲಿ ಉತ್ತರಿಸಿದರು.
ಸಂಜೆ 7 ಗಂಟೆಗೆ ಭಾವನಾ ಸ್ನೇಹಾಳ ಜೊತೆ ರಾಜೇಂದ್ರರ ಮನೆಗೆ ಬಂದಳು. ಅವಳು ಸ್ನೇಹಾಳನ್ನು ಕವಿತಾ ಎಂದು ಪರಿಚಯಿಸಿದಳು. ಸ್ನೇಹಾಳನ್ನು ಜೊತೆಗೆ ಬರುವಂತೆ ಒಪ್ಪಿಸಲು ಭಾವನಾ ಬಹಳ ಕಷ್ಟಪಡಬೇಕಾಯಿತು. ಭಾವಿ ಅತ್ತೆ ಮಾವಂದಿರಾಗಬಹುದಾದವರ ಎದುರು ತಪ್ಪು ಪರಿಚಯ ಹೇಳಿಕೊಂಡು ಹೋಗುವುದು ಅವಳಿಗೆ ಭಯವೆನಿಸುತ್ತಿತ್ತು. ನಿಖಿಲನ ಕಾರು 8 ಗಂಟೆ ಹೊತ್ತಿಗೆ ಬಂಗಲೆಯ ಗೇಟಿನೊಳಗೆ ಬಂತು.
ಭಾವನಾ ಮತ್ತು ಸ್ನೇಹಾ ಎದ್ದು ಪಕ್ಕದಲ್ಲಿದ್ದ ರೂಮಿಗೆ ಹೋದರು. ರಾಜೇಂದ್ರ ಪತ್ನಿಗೆ ತಮ್ಮ ಮಾತಿನ ಮಧ್ಯೆ ಬಾಯಿ ಹಾಕಬಾರದೆಂದು ಮತ್ತೆ ಮತ್ತೆ ಕಠಿಣ ಸ್ವರದಲ್ಲಿ ಹೇಳಿದರು. ಹಾಲ್‌ನಲ್ಲಿ ವಾತಾವರಣ ಗಂಭೀರವಾಗಿತ್ತು. ತನ್ನ ರೂಮಿಗೆ ಹೋಗುತ್ತಿದ್ದ ಮಗನನ್ನು ರಾಜೇಂದ್ರ ಕರೆದು ತಮ್ಮ ಎದುರು ಕುಳಿತುಕೊಳ್ಳುವಂತೆ ಸೂಚಿಸಿದರು.
“ ಅಪ್ಪಾ, ನೀವೇಕೋ ಚಿಂತೆಯಲ್ಲಿರೋ ಹಾಗಿದೆ?” ತಂದೆಯ ಗಂಭೀರ ಮುಖ ಮುದ್ರೆಯನ್ನು ನೋಡಿ ನಿಖಿಲನಿಗೆ ಆತಂಕವಾಗಿತ್ತು.
“ಇಂದು ಭಾವನಾ ಅನ್ನುವ ಹುಡುಗಿ ನನ್ನನ್ನು ಭೇಟಿಯಾಗಲು ಇಲ್ಲಿಗೆ ಬಂದಿದ್ದಳು,” ರಾಜೇಂದ್ರ ಜೋರಾಗಿ ಮಾತನಾಡುತ್ತಿದ್ದರು.
“ಅವಳು ತಾನು ಸ್ನೇಹಾ ಅನ್ನುವವಳ ಮಾಮನ ಮಗಳು ಎಂದು ಹೇಳಿದಳು. ನಿನಗೇನಾದರೂ ಅವಳು ಗೊತ್ತಾ?”
“ಭಾವನಾ ಏನು ಹೇಳಿದಳು?” ನಿಖಿಲ್ ಕೋಪದ ದನಿಯಲ್ಲಿ ಪ್ರಶ್ನಿಸಿದ.
“ಅದೇ ನೀನು ಸ್ನೇಹಾಳನ್ನು ಪ್ರೀತಿಸುತ್ತೀಯ ಮತ್ತು ಅವಳನ್ನೇ ಮದುವೆಯಾಗಬೇಕು ಅಂತಿದೀಯ ಅಂತ. ಇದೇನು ಆಟ ಆಡ್ತೀದೀಯ… ಒಬ್ಬ ಮಾಮೂಲಿ ಮನೆತನದ ಹುಡುಗಿ ಜೊತೆ?” ರಾಜೇಂದ್ರ ಕೋಪದಿಂದ ಪ್ರಶ್ನಿಸಿದರು.
“ಅಪ್ಪಾ, ಭಾವನಾ ಸ್ವಲ್ಪ ತಲೆಹರಟೆ ಹುಡುಗಿ. ಅವಳು ಹೇಳಿದ ಮಾತುಗಳ ಕಡೆ ಗಮನ ಕೊಡಬಾರದು.”
“ಮಗು, ಸ್ನೇಹಾಳ ಜೊತೆ ನಿನ್ನ ಮದುವೆ ಸಾಧ್ಯವಿಲ್ಲ. ಏಕೆಂದರೆ ಅವಳ ಕುಟುಂಬ ನಮ್ಮ ಅಂತಸ್ತಿಗೆ ಸರಿಯಾಗುವುದಿಲ್ಲ. ಒಬ್ಬಳು ಸಾಧಾರಣ ಹುಡುಗಿಗೆ ನಾನು ನಿನ್ನ ಮದುವೆಯಾಗ್ತೀನಿ ಅಂತ ಮಾತು ಕೊಡಬಾರದಿತ್ತು. ನಾವು ಇದಕ್ಕೆ ಎಂದೂ ಒಪ್ಪಿಗೆ ಕೊಡುವುದಿಲ್ಲ.”
“ರಿಲ್ಯಾಕ್ಸ್ ಅಪ್ಪಾ, ನನಗೆ ಸ್ನೇಹಾಳನ್ನು ಮದುವೆಯಾಗುವ ಉದ್ದೇಶ ಖಂಡಿತಾ ಇಲ್ಲ. ಅವಳು ನನ್ನ ಒಳ್ಳೆ ಸ್ನೇಹಿತೆ ಅಷ್ಟೇ. ಅದಕ್ಕಿಂತ ಹೆಚ್ಚೇನೂ ಇಲ್ಲ,” ಅಪ್ಪನನ್ನು ಶಾಂತಗೊಳಿಸುವ ಉದ್ದೇಶದಿಂದ ನಿಖಿಲ್ ನಕ್ಕ.
“ಹಾಗಾದರೆ ಭಾವನಾ ಹೇಳಿದ್ದೆಲ್ಲ ನಿಜ ಅಲ್ಲ ಅಂತ ತಿಳಿದುಕೊಳ್ಳಲೇ?”
“ಅಪ್ಪಾ, ಆ ಹುಡುಗಿಗೆ ಇನ್ನೊಬ್ಬರ ವಿಷಯದಲ್ಲಿ ಮೂಗು ತೂರಿಸುವ ಕೆಟ್ಟ ಅಭ್ಯಾಸ ಇದೆ. ಸ್ನೇಹಾಗೇ ಅವಳನ್ನು ಕಂಡರೆ ಇಷ್ಟವಿಲ್ಲ,” ನಿಖಿಲ್ ಹೇಳಿದ.
“ನೀನು ನಿಜ ಹೇಳ್ತಿದೀಯ ತಾನೆ. ನಿನ್ನ ಮನಸ್ಸನಲ್ಲಿರುವ ಮಾತು ತಾನೇ ಇದು?”
“ನಿಜವಾಗಲೂ ಅಪ್ಪಾ, ನಾನು ನನ್ನ ಇಷ್ಟದ ಹಾಗೆ ಮದುವೆ ಮಾಡಿಕೊಳ್ಳಲಿ ಅಥವಾ ನೀವು ನನಗೆ ಹುಡುಗಿ ಹುಡುಕಿ ಮಾಡಲಿ, ಸಮಾಜದಲ್ಲಿ ನಮ್ಮ ಘನತೆ ಮತ್ತು ಮರ್ಯಾದೆ ಬಗ್ಗೆ ನಾವೆಲ್ಲರೂ ಗಮನ ಇಡಬೇಕು. ಸ್ನೇಹದ ಮಾತು ಬೇರೆ, ಮದುವೆ ಮಾತು ಬೇರೆ.”
“ನಾನು ಹೇಳ್ತಿರಲಿಲ್ವಾ, ಆ ಹುಡುಗಿ ತಪ್ಪು ತಿಳಿದುಕೊಂಡಿದ್ದಾಳೆ ಅಂತ,” ತನ್ನ ಪತಿಯ ಕಡೆ ಗೆದ್ದ ಭಾವದಿಂದ ನೋಡಿ ಗಾಯತ್ರಿ ಎದ್ದು ಮಗನ ಹಣೆ ಚುಂಬಿಸಿದರು.
“ಭಾವನಾಳ ಮಾತುಗಳಿಂದ ಉಂಟಾಗಿರುವ ಚಿಂತೆಗಳನ್ನು ನೀವಿಬ್ಬರೂ ದೂರ ಮಾಡಿ,” ಅವರಿಗೆ ಆಶ್ವಾಸನೆ ಕೊಟ್ಟು ನಿಖಿಲ್ ಎದ್ದು ತನ್ನ ಕೊಣೆಗೆ ಹೋದ.
ಗಾಯತ್ರಿ ಮಗನ ಹಿಂದೆ ಹಿಂದೆ ಮನೆಯ ಒಳಗೆ ಹೋದರು, ರಾಜೇಂದ್ರ ಎದ್ದು ಭಾವನಾ ಮತ್ತು ಸ್ನೇಹಾ ಇದ್ದ ಕೋಣೆಗೆ ಬಂದರು. ಅವರು ಏನು ಹೇಳಬೇಕೆಂದು ಬಯಸಿದ್ದರೋ ಅದೇ ಮಾತುಗಳನ್ನು ಮಗ ನುಡಿದಿದ್ದ. ಅಂದರೂ ಅವರಿಗೆ ಮನಸ್ಸು ಭಾರವಾಗಿದೆ ಎನಿಸಿತು.
ಸ್ನೇಹಾ ಬಿಕ್ಕುತ್ತಿದ್ದಳು. ಭಾವನಾಳ ಕಣ್ಣುಗಳಲ್ಲಿ ನೀರು ತುಂಬಿತ್ತು. ರಾಜೇಂದ್ರರ ಕಣ್ಣೆವೆಗಳೂ ಅವರಿಗೇ ಅರಿಯದಂತೆ ಒದ್ದೆಯಾಗಿದ್ದವು.
“ನಿನ್ನ ತಂಗಿ ನಿಖಿಲನ ಬಗ್ಗೆ ತಪ್ಪಾಗಿ ಕನಸ್ಸುಗಳನ್ನು ಕಂಡಿದ್ದಾಳೆ ಭಾವನಾ. ಅವಳಿಗೆ ಬಹಳ ದುಃಖವಾಗುತ್ತದೆ. ನನಗೂ ಬೇಸರವಾಗಿದೆ,” ಮುಂಬಾಗಿಲ ಕಡೆಗೆ ಅವರ ಜೊತೆ ಹೆಜ್ಜೆ ಹಾಕುತ್ತಾ ರಾಜೇಂದ್ರ ಹೇಳಿದರು.
“ಇವಳು ಕವಿತಾ ಅಲ್ಲ, ಸ್ನೇಹಾ ಅಂಕಲ್,” ಭಾವನಾ ನುಡಿದಳು.
ಸ್ನೇಹಾಳ ತಲೆ ಮೇಲೆ ಪ್ರೀತಿಯಿಂದ ಕೈಯಿಟ್ಟು ರಾಜೇಂದ್ರ ಅವಳಿಗೆ ಮೃದುಸ್ವರದಲ್ಲಿ ಹೇಳಿದರು, “ಮಗು, ನಿಖಿಲ್ ಜೊತೆ ಈಗ ಪೂರ್ಣವಾಗಿ ಸಂಬಂಧ ಕಡಿದುಕೋ. ಸತ್ಯ ಎಷ್ಟು ಕಹಿ ಇದ್ದರೂ ನಾವು ಅದನ್ನು ಧೈರ್ಯದಿಂದ ಎದುರಿಸಬೇಕು. ನನ್ನ ಮಗನಿಂದಾಗಿ ನೀನೀಗ ಅನುಭವಿಸುತ್ತಿರುವ ನೋವಿಗಾಗಿ ನಾನು ನಿನ್ನ ಕ್ಷಮೆ ಕೇಳುತ್ತೇನೆ.”
“ಹೀಗೆ ಕೈ ಜೋಡಿಸಿ ನೀವು ನನ್ನನ್ನು ನಾಚಿಕೆಗೀಡು ಮಾಡಬೇಡಿ ಅಂಕಲ್, ಇವತ್ತು ಏನು ನಡೀತೋ ಅದರಿಂದ ನನಗೆ ಒಳ್ಳೆಯದೇ ಆಗುತ್ತೆ,” ಅಳುವ ಧ್ವನಿಯಲ್ಲಿ ಹೇಳಿದಳು ಸ್ನೇಹಾ.
“ಈ ಭಾವನಾ ಬಹಳ ತಿಳಿವಳಿಕೆ ಇರುವ ಹುಡುಗಿ. ಇವಳ ಆಸರೆಯಲ್ಲಿ ನೀನು ಈ ದುಃಖದಿಂದ ಇನ್ನೂ ಶಕ್ತಿವಂತಳೂ, ತಿಳಿವಳಿಕೆಯುಳ್ಳವಳೂ ಆಗಿ ಹೊರಬರುತ್ತೀಯ ಅನ್ನುವ ನಂಬಿಕೆ ನನಗಿದೆ. ಸುಖಮಯ ಭವಿಷ್ಯ ನಿಮ್ಮದಾಗಲಿ. ನಿಮ್ಮಿಬ್ಬರಿಗೂ ನನ್ನ ಆಶೀರ್ವಾದಗಳು,” ರಾಜೇಂದ್ರ ಭಾವಾವೇಶದಿಂದ ಇಬ್ಬರ ತಲೆಯ ಮೇಲೂ ಕೈಯಿಟ್ಟರು. ಅವರ ಸದ್ವರ್ತನೆಯಿಂದ ಸ್ನೇಹಾ ಮತ್ತು ಭಾವನಾರಿಗೆ ಕೃತಜ್ಞತೆ ಉಕ್ಕಿತು. ಇದರಿಂದ ಅವರನ್ನು ಬೀಳ್ಕೊಡುವಾಗ ರಾಜೇಂದ್ರರ ಮನಸ್ಸಿಗೆ ನೆಮ್ಮದಿಯಾಯಿತು. ಅವರಿಗೆ ಸ್ನೇಹಾಳ ಭವಿಷ್ಯದ ಬಗ್ಗೆ ಬಹಳ ಭರವಸೆ ಉಂಟಾಯಿತು.
`ಸ್ನೇಹಾ ತನ್ನ ಒಳ್ಳೆ ಸ್ನೇಹಿತೆ ಎಂದು ನಿಖಿಲ್ ಹೇಳುತ್ತಾನೆ. ನಾಳೆ ಅವನು ಆ ಯುವತಿಯರನ್ನು ಮರೆತಂತೆ ಸ್ನೇಹಾಳನ್ನೂ ಮರೆತು ಬೇರೊಬ್ಬ ಹುಡುಗಿಯ ಸ್ನೇಹ ಮಾಡುವುದಿಲ್ಲವೇ?’ ಈ ಪ್ರಶ್ನೆ ಭಾವನಾಳ ನಿದ್ರೆಯನ್ನು ಹಾಳು ಮಾಡಿತು.