ಕಥೆ - ಸುಗುಣಾ ರವೀಂದ್ರ
``ಈ ಭಾವನಾ ಬಹಳ ತಿಳಿವಳಿಕೆ ಇರುವ ಹುಡುಗಿ. ಇವಳ ಆಸರೆಯಲ್ಲಿ ನೀನು ಈ ದುಃಖದಿಂದ ಇನ್ನೂ ಶಕ್ತಿವಂತಳೂ, ತಿಳಿವಳಿಕೆಯುಳ್ಳವಳೂ ಆಗಿ ಹೊರಬರುತ್ತೀಯ!'' ಸ್ನೇಹಾಳ ಮಾಮನ ಮಗಳು ಭಾವನಾ ಬಂದು ಹಾಸ್ಟೆಲ್‌ನಲ್ಲಿ ಅವಳ ರೂಮ್ ಪಾರ್ಟ್‌ನರ್ ಆಗಿ ಇರಲು ಆರಂಭ ಮಾಡಿದ ದಿನದಿಂದ ಅವಳ ಜೀವನ ಅಸ್ತವ್ಯಸ್ತವಾಯಿತು. ದೌರ್ಭಾಗ್ಯವೆಂದರೆ ಭಾವನಾ ಹಾಸ್ಟೆಲ್‌ಗೆ ಬಂದ ವೇಳೆಯಲ್ಲಿ ಸ್ನೇಹಾ ಹಾಸ್ಟೆಲ್‌ನ ಕಾಮನ್ ರೂಮಿನಲ್ಲಿ ನಿಲುವಿಗೆ ಅಂಟಿಕೊಂಡಂತೆ ಕುಳಿತಿದ್ದಳು. ಭಾವನಾ ಮೇಲೆ ಏನೂ ಭಾವನೆ ತೋರಿಸಿಕೊಳ್ಳದೆ ನಿಖಿಲನ ಪರಿಚಯ ಮಾಡಿಕೊಂಡಳು. ಆದರೆ ಸ್ನೇಹಾ ಅಪರಾಧೀ ಭಾವದಿಂದ ಮನದೊಳಗೆ ಅಶಾಂತಿಯಿಂದ ಚಡಪಡಿಸಿದಳು.
ಸ್ನೇಹಾ ಭಾವನಾ ಅಕ್ಕನಿಗೆ ಹೆದರಿಕೊಳ್ಳಲು ಯಾವ ಕಾರಣ ಇರಲಿಲ್ಲ. ಅವಳು ಯಾವಾಗಲೂ ಅವಳ ಜೊತೆ ಸುಖದುಃಖಗಳನ್ನು ಹೇಳಿಕೊಳ್ಳುತ್ತಾ ಬಂದಿದ್ದಾಳೆ.
``ನಿನ್ನ ತಂಗಿಯ ಕಡೆ ಗಮನ ಇಡು ಭಾವನಾ, ನಾನು ಸತ್ತ ನಂತರ ನೀನೇ ಅವಳ ತಾಯಿಯ ಸ್ಥಾನ ತೆಗೆದುಕೊಳ್ಳಬೇಕು'' ಸ್ನೇಹಾಳ ತಾಯಿ ಸಾಯುವುದಕ್ಕೆ ಕೆಲವು ದಿನಗಳ ಮೊದಲು ಭಾವನಾಳ ಮೇಲೆ ಈ ಜವಾಬ್ಧಾರಿ ಹೊರಿಸಿದ್ದರು. ಆಕೆಗೆ ಕ್ಯಾನ್ಸರ್ ಆಗಿತ್ತು. ಭಾವನಾ ಈ ಜವಾಬ್ದಾರಿಯನ್ನು ಬಹಳ ಪ್ರಾಮಾಣಿಕತೆಯಿಂದ ನಿಭಾಯಿಸುತ್ತಿದ್ದಳು. ಭಾವನಾ ತೋರಿಸುತ್ತಿದ್ದ ಪ್ರೀತಿಗೆ ಪ್ರತಿಯಾಗಿ ಸ್ನೇಹಾ ಅವಳಿಗೆ ಬಹಳ ಗೌರವ ತೋರಿಸುತ್ತಿದ್ದಳು.
ರಾತ್ರಿ ಭಾವನಾ ನಿಖಿಲನ ವಿಷಯ ಎತ್ತಿದಳು. ಆಗ ಸ್ನೇಹಾಳ ಆಪ್ತ ಗೆಳತಿ ಕವಿತಾ ಕೂಡ ಕೋಣೆಯಲ್ಲಿದ್ದಳು.``ನಿಖಿಲ್ ಯಾವಾಗಿನಿಂದ ಗೊತ್ತು ಸ್ನೇಹಾ?'' ಭಾವನಾ ಸ್ನೇಹಾಳ ಕೈಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಪ್ರೀತಿಯಿಂದ ಕೇಳಿದಳು.
ಭಾವನಾಳ ಸೀದಾ, ಸರಳ ಪ್ರಭಾಶಾಲಿ ವ್ಯಕ್ತಿತ್ವದ ಎದುರು ಸ್ನೇಹಾಳಿಗೆ ಉತ್ತರ ಕೊಡದಿರಲು ಸಾಧ್ಯವಾಗಲಿಲ್ಲ.``ಸುಮಾರು 4-5 ತಿಂಗಳಿಂದ'' ಚುಟುಕಾಗಿ ಉತ್ತರಿಸಿದಳು.
``ನೀವಿಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸ್ತೀರಾ?'' ಭಾವನಾ ಕೇಳಿದಳು.
``ನಾವಿಬ್ಬರೂ ಒಳ್ಳೆಯ ಸ್ನೇಹಿತರು ಅಕ್ಕಾ,'' ಸ್ನೇಹಾ ಹೇಳಿದಳು.
``ಅರೆ, ಒಳ್ಳೆ ಸ್ನೇಹಿತ ಅಂದರೆ ಯಾರಾದರೂ ಹುಡುಗಿ ಪ್ರೇಮಿಯ ಹಾಗೆ ಅವನಿಗೆ ಅಂಟಿಕೊಂಡು ಕುಳಿತುಕೊಳ್ಳುತ್ತಾಳೇನೂ? ಎಲ್ಲಾ ವಿಷಯ ಹೇಳು. ನೀವಿಬ್ಬರೂ ತುಂಬಾ ಪ್ರೀತಿಸ್ತೀರಾ?'' ಭಾವನಾ ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮುಗುಳ್ನಕ್ಕಳು.
ಸ್ನೇಹಾಳ ಮುಖದ ಮೇಲೆ ಅಸಹನೆಯ ಭಾವ ಸುಳಿಯಿತು. ಕವಿತಾ ಮಧ್ಯದಲ್ಲಿ ಬಾಯಿ ಹಾಕಿದಳು, ``ಅಕ್ಕಾ, ನಿಖಿಲ್ ಎಲ್ಲಾ ರೀತಿಯಿಂದಲೂ ನಮ್ಮ ಸ್ನೇಹಾಗೆ ತಕ್ಕ ಜೀವನ ಸಂಗಾತಿಯಾಗ್ತಾನೆ. ಅವನು ಚೆನ್ನಾಗಿದ್ದಾನೆ, ಸ್ಮಾರ್ಟ್ ಮತ್ತು ಶ್ರೀಮಂತ ಮನೆತನದವನು. ಅವನು ಸ್ನೇಹಾಳನ್ನು ಮದುವೆಯಾಗ್ತಾನೆ ಅಂತ ನನಗೆ ಪೂರ್ಣ ನಂಬಿಕೆ ಇದೆ.''
``ಹಾಗಾದರೆ ಇದುವರೆಗೂ ಸ್ನೇಹಾಳನ್ನು ಮದುವೆಯಾಗೋದಿಕ್ಕೆ ಅವನ ಒಪ್ಪಿಗೆ ಪಡೆದಿಲ್ಲವೇ?'' ಭಾವನಾಳ ಹಣೆಯಲ್ಲಿ ನೆರಿಗೆಗಳು ಎದ್ದವು.
``ಅಕ್ಕಾ, ಈ ಕಾಲದ ಹುಡುಗರು ಬೇಗ ಮದುವೆ ಆಗಬೇಕೆನ್ನುವ ಮಾತು ಎಲ್ಲಿ ಆಡ್ತಾರೆ? ಅವರು ಮೊದಲು ಪರಸ್ಪರ ಅರ್ಥ ಮಾಡಿಕೊಳ್ಳುವುದಕ್ಕೆ ಒತ್ತು ಕೊಡುತ್ತಾರೆ,'' ಕವಿತಾ ನುಡಿದಳು.
ಭಾವನಾ ತಕ್ಷಣ ಗಂಭೀರಳಾದಳು, ``ನೋಡು, ಮದುವೆ ಮಾಡಿಕೊಂಡು ಸರಿಯಾದ ಸಮಯದಲ್ಲಿ ಮನೆ ಸಂಸಾರ ಶುರು ಮಾಡುವುದು ಹೆಣ್ಣುಮಕ್ಕಳಿಗೆ ತುಂಬಾ ಅಗತ್ಯ. ನಾನೇನಾದರೂ ತಪ್ಪು ಹೇಳ್ತಿದೀನಾ ಸ್ನೇಹಾ?''