ನೀಳ್ಗಥೆ  –  ಡಾ. ಸುರೇಖಾ ಶರ್ಮ 

ಆಫೀಸಿನಿಂದ 2 ಬಸ್ಸು ಹಿಡಿದು ಮನೆ ತಲುಪುವಷ್ಟರಲ್ಲಿ 8 ಗಂಟೆ ದಾಟಿ ಚಿತ್ರಾಳಿಗೆ ಸಾಕು ಸಾಕಾಗಿತ್ತು. ಕಿರಣ್‌ ಬರುವಷ್ಟರಲ್ಲಿ 9 ದಾಟಿತ್ತು. ನಸುನಗುತ್ತಾ ಲವಲವಿಕೆಯಿಂದ ಇರುತ್ತಿದ್ದ ಪತ್ನಿ ಕಿರಣ್‌ನನ್ನು ಹಸನ್ಮುಖಳಾಗಿ ಸ್ವಾಗತಿಸುತ್ತಿದ್ದಳು. ಆದರೆ ಈ ದಿನ ಅದೇನೂ ಇರದೆ ದುಮುದುಮುಗುಡುತ್ತಾ ಬಾಗಿಲು ತೆರೆದವಳೇ, ಕಿರಣ್‌ ಒಳಬಂದಾಗ ಸಿಡಾರನೆ ಬಾಗಿಲು ಹಾಕಿದಳು. ಯಾಕೋ ಹವಾಮಾನ ಸರಿಯಿಲ್ಲ ಎಂದುಕೊಂಡ ಕಿರಣ್‌. ಇಡೀ ದಿನ ಆ ಕಾಲೋನಿಯಲ್ಲಿ ಏನೇನು ನಡೆಯಿತು, ಆಫೀಸ್‌ನಲ್ಲಿ ನಡೆದ ಜೋಕ್ಸ್ ಏನು ಎಂಬುದನ್ನೆಲ್ಲ ಹೇಳಿಕೊಳ್ಳದಿದ್ದರೆ ಅವಳಿಗೆ ಸಮಾಧಾನ ಇರುತ್ತಿರಲಿಲ್ಲ. ಕಾಫಿ ಮುಗಿಯುವಷ್ಟರಲ್ಲಿ ಹಲವು ಸ್ವಾರಸ್ಯಕರ ವಿಷಯಗಳು ಹೊರಬರುತ್ತಿದ್ದವು. ಅಂದಿನ ಪೇಪರ್‌ನ ಮುಖ್ಯಾಂಶಗಳಿಂದ ಹಲವು ಸುದ್ದಿಗಳು ತಿಳಿಯುತ್ತಿದ್ದವು. ಚಿತ್ರಾಳಿಗಿಂತ ತಾನು ತಡವಾಗಿ ಬಂದದ್ದರಿಂದಲೇ ಅವಳು ಮೂಡ್‌ ಕೆಡಿಸಿಕೊಂಡಿದ್ದಾಳೆ ಎಂದುಕೊಂಡ.

ಚಿತ್ರಾಳ ಕ್ಷಮೆ ಯಾಚಿಸುತ್ತಾ ಕಿರಣ್‌, “ಸಾರಿ…. ನಾನು ಇವತ್ತು ನಿನಗೆ ಫೋನ್‌ ಮಾಡಲು ಆಗಲೇ ಇಲ್ಲ. ತಿಂಗಳ ಕೊನೆ, ಹೀಗಾಗಿ ನಮ್ಮ ಬ್ಯಾಂಕಿನಲ್ಲಿ ಇವತ್ತು ಕೆಲಸ ಜಾಸ್ತಿ ಇತ್ತು.”

“ನಿಮ್ಮ ಕೆಲಸದ ಒತ್ತಡ ಗೊತ್ತಿರುವ ವಿಷಯ ಬಿಡಿ. ಅದಕ್ಕಲ್ಲ ನನಗೆ ಬೇಜಾರಾಗಿರುವುದು….. ನನ್ನ ಚಿಂತೆಗೆ ಕಾರಣವೇ ಬೇರೆ ಇದೆ….”

“ಏನಪ್ಪ ಅದು ನಮ್ಮ ರಾಣಿ ಸಾಹೇಬರನ್ನು ಕಾಡಿಸುತ್ತಿರುವ ಚಿಂತೆ….?”

“ಮಧ್ಯಾಹ್ನ ಅಮೆರಿಕಾದಿಂದ ಲಲಿತಕ್ಕಾ ಫೋನ್‌ ಮಾಡಿದ್ದರು….. ಅತ್ತೆ ನಮ್ಮ ಮನೆಗೆ ಬರ್ತಿದ್ದಾರಂತೆ….”

“ಇದರಲ್ಲಿ ಚಿಂತೆಯ ಮಾತು ಎಲ್ಲಿ ಬಂತು? ಇದು ಅಮ್ಮನಿಗೂ ಮನೆಯೇ ಅಲ್ಲವೇ, ಲಹರಿ ಬಂದಾಗ ಅವರು ಈ ಕಡೆ ಬರ್ತಾರೆ,” ಕಿರಣ್‌ಹೇಳಿದ.

“ಅಯ್ಯೋ… ನಾನು ಹೇಳಿದ್ದು ನಿಮಗೆ ಅರ್ಥ ಆಗಲಿಲ್ಲ….. ಅತ್ತೆಗೆ ಅಮೆರಿಕಾದ ಸಹವಾಸ ಸಾಕಾಗಿದೆಯಂತೆ, ಹೀಗಾಗಿ ನಮ್ಮಲ್ಲಿಯೇ ಬಂದು ಉಳಿದುಕೊಳ್ಳುತ್ತಾರಂತೆ.”

“ಅರೆ ಮಾರಾಯ್ತಿ….. ಒಳ್ಳೇದೇ ಆಯ್ತಲ್ಲ! ಮನೆಯಲ್ಲಿ ಒಬ್ಬರು ಹಿರಿಯರು ಇದ್ದರೆ ಎಷ್ಟು ಶ್ರೇಯಸ್ಸು ಅಲ್ಲವೇ? ದಿನನಿತ್ಯ ಬರೋ ಅತ್ತೆ ಸೊಸೆ ಧಾರಾವಾಹಿಗಳ ಬಗ್ಗೆ ನೀವಿಬ್ಬರೂ ಅತ್ತೆಸೊಸೆಯರು ಬೇಕಾದಷ್ಟು ಚರ್ಚಿಸಬಹುದಲ್ವಾ? ಅತ್ತೆಸೊಸೆಯರು ಪರಸ್ಪರ ಮಾತನಾಡಿ ಕೊಳ್ಳುತ್ತಾ ಬೇಕಾದ ಸಹಾಯ ಪಡೆಯಬಹುದಲ್ವಾ?” ಕಿರಣ್‌ ತಮಾಷೆ ಮಾಡುತ್ತಾ ಹೇಳಿದ.

“ಬೆಕ್ಕಿಗೆ ಚೆಲ್ಲಾಟವಾದರೆ ಇಲಿಗೆ ಪ್ರಾಣಸಂಕಟ ಅಂತ ಆಗಿದೆ ನನ್ನ ಸ್ಥಿತಿ….. ನಿಮಗಿದರಲ್ಲಿ ತಮಾಷೆ ಬೇರೆ……”

“ಹಾಗಲ್ಲ ಚಿತ್ರಾ…. ಅತ್ತೆ ಸೊಸೆಯರ ಶೀತಲ ಯುದ್ಧದಲ್ಲಿ ನಾನು ಯಾರ ಪಕ್ಷ ವಹಿಸಲಪ್ಪ ಅಂತ ಚಿಂತೆ ಪಡಬೇಕಾದವನು ನಾನು, ಮತ್ತೆ ನೀನೇಕೆ ಈಗ ಅನಗತ್ಯ ಟೆನ್ಶನ್‌ ಪಡಬೇಕು? ನಾನು ಯಾರ ಪಕ್ಷ ವಹಿಸಿದರೂ ಇನ್ನೊಬ್ಬರಿಗೆ ದುಃಖ ಅನ್ನೋದು ಗೊತ್ತಿರೋದೇ ತಾನೇ?” ಸ್ವಲ್ಪ ಹೊತ್ತು ಯೋಚಿಸಿ ಕಿರಣ್‌ ಮತ್ತೆ ನುಡಿದ, “ನಾನು ನಿನಗೆ ಕೆಲವೊಂದು ಸಲಹೆ ಕೊಡಲು ಬಯಸುತ್ತೇನೆ. ಅದನ್ನು ನೀನು ಪರಿಪಾಲಿಸಿದರೆ ನಿನ್ನ ಎಲ್ಲಾ ಚಿಂತೆಗಳೂ ಒಂದು ಕ್ಷಣದಲ್ಲಿ ಮಾಯಾಗುತ್ತವೆ.”

“ನೀವು ಹೇಳಿದ್ದು ನಿಜ ಆಗುವುದಾದರೆ ಖಂಡಿತಾ ಹಾಗೇ ಮಾಡ್ತೀನಿ. ನನಗಂತೂ ಅತ್ತೆ ಮುನಿಸಿಕೊಳ್ಳದೆ ನಗುನಗುತ್ತಾ ಸಮಾಧಾನವಾಗಿದ್ದರೆ ಅಷ್ಟೇ ಸಾಕು. ನಿಮಗೆ ಗೊತ್ತೇ ಇದೆಯಲ್ಲ….. ಕಳೆದ ಸಲ ಬಂದವರು ಸಣ್ಣ ವಿಷಯ ದೊಡ್ಡದು ಮಾಡಿ ಕೋಪದಿಂದ ಊರಿಗೆ ಹೊರಟೇಹೋದರು.”

“ನೋಡು ಚಿತ್ರಾ, ಅಪ್ಪಾಜಿ ಇರುವವರೆಗೂ ನಾವು ಯಾರೂ ಅಮ್ಮನ ಬಗ್ಗೆ ತಲೆ ಕೆಡಿಸಿಕೊಂಡವರೇ ಅಲ್ಲ. ಅಪ್ಪಾಜಿ ಹೋದ ನಂತರ ಅವರು ಸ್ವಭಾವತಃ ಬಹಳ ಒಂಟಿಯಾದರು. ಅವರಲ್ಲಿ ಅಸುರಕ್ಷತೆಯ ಭಾವನೆ ತುಂಬಿಕೊಂಡಿತ್ತು. ಈಗ ನೀನೇ ಹೇಳು, ಇಡೀ ಮನೆಯಲ್ಲಿ ಅವರ ಮಾತೇ ಶಾಸನವಾಗಿ ನಡೆಯುತ್ತಿತ್ತು. ಈಗ ಅದೆಲ್ಲ ಏನೂ ಇಲ್ಲದೆ ಅವರು ಒಬ್ಬಂಟಿ ಆಗಿದ್ದಾರೆ. ಗಂಡು ಮಕ್ಕಳು ಮದುವೆಯಾಗಿ ಸೊಸೆಯರ ಪಾಲಾದರು. ಅಮ್ಮ ಅಷ್ಟು ಪ್ರೀತಿಯಿಂದ ತಮ್ಮದಾಗಿ ಮಾಡಿಕೊಂಡು ಬಾಳಿ ಬದುಕಿದ ಮನೆಯನ್ನು ಅಪ್ಪಾಜಿ ಹೋದ ಮೇಲೆ ಬೀಗ ಹಾಕಿ ಬರಬೇಕಾಯಿತು.

“ಹಿರಿ ಸೊಸೆ ಜೊತೆ ಅಮೆರಿಕಾದಲ್ಲಿ ಹೊಂದಾಣಿಕೆ ಆಗಲೇ ಇಲ್ಲ. ಹೀಗಾಗಿ ನೆನೆದಾಗ ತಂಗಿ ಮನೆಗೆಂದು ಲಂಡನ್‌ಗೆ ಹೊರಡುತ್ತಿದ್ದರು. ನೆಂಟರ ಮನೆ ಮಗನ ಮನೆ ಆದೀತೇ? ಹೀಗಾಗಿ ಎರಡನೆ ಮಗನ ಬಳಿಯೇ ಇರೋಣ ಎಂದು ನಿಶ್ಚಯಿಸಿದ್ದಾರೇನೋ…. ಆದ್ದರಿಂದ ಈ ಮನೆಯು ಅವರದೇ ಮನೆ ಎಂಬ ಭಾವನೆ ಬರುವಂತೆ ನಡೆದುಕೊಳ್ಳೋಣ. ಅವರಿಗೆ ನಮ್ಮಿಂದ ಹಣವೇನೂ ಬೇಕಾಗಿಲ್ಲ. ಅಪ್ಪಾಜಿ ಪೆನ್ಶನ್‌ ಹಣ ಅವರಿಗೆ ಧಾರಾಳ ಸಾಕು ಎನಿಸುತ್ತದೆ. ಅವರು ಸಂತೋಷವಾಗಿರಲು ನೀನು ಸ್ವಲ್ಪ ಅಡ್ಜಸ್ಟ್ ಮಾಡಿಕೊಂಡು ಮನಸ್ತಾಪ ಮೂಡದಂತೆ ಎಚ್ಚರಿಕೆ ವಹಿಸಿದರೆ ಸಾಕು. ಅದು ತುಸು ನಾಟಕೀಯ ಅನಿಸಿದರೂ ಚಿಂತೆಯಿಲ್ಲ,” ಎಂದು ವಿವರಿಸಿದ.

“ನೀವು ಹೇಳಿದಂತೆಯೇ ಮಾಡುತ್ತೇನೆ ಬಿಡಿ,” ಚಿತ್ರಾ ಆಶ್ವಾಸನೆ ನೀಡಿದಳು.

“ಚಿತ್ರಾ, ಸ್ವಲ್ಪ ಸಹನೆಯಿಂದ ಕೇಳಿಸಿಕೊ. ನಮ್ಮ ಹಿರಿಯರಲ್ಲಿ ತಮ್ಮ ಮಾತೇ ನಡೆಯಬೇಕು ಎಂಬ ತುಸು `ಅಹಂ’  ಇರುತ್ತದೆ. ಅದಕ್ಕೆ ಸ್ವಲ್ಪ ಪೆಟ್ಟು ತಗುಲಿದರೂ ಅವರು ಸಹಿಸುವುದಿಲ್ಲ. ಆಗ ಕೌಟುಂಬಿಕ ಕಲಹ ಸಹಜವಾಗಿ ಹೆಚ್ಚುತ್ತದೆ. ಆದ್ದರಿಂದ ಆಕೆಯ ಅಹಂಗೆ ಪೆಟ್ಟಾಗದಂತೆ ನಡೆದುಕೊಂಡರೆ ಸರಿ….. ಮತ್ತೆ ನೋಡು, ಯಾವ ತಂಟೆಯೂ ಇರುವುದಿಲ್ಲ,” ಎಂದು ಹೇಳಿದ ಕಿರಣ್.

“ಸರಿ ಅದಕ್ಕೇನು ಉಪಾಯ ಅಂತಲೂ ಹೇಳಿಬಿಡಿ,” ಚಿತ್ರಾ ಕೇಳಿದಳು.

“ಹ್ಞೂಂ….ಹ್ಞೂಂ….. ಅಷ್ಟೇ ತಾನೇ, ಎಲ್ಲಕ್ಕೂ ಮೊದಲು ಅಮ್ಮ ಬಂದ ತಕ್ಷಣ ಅವರಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆದುಕೊ. ರಾತ್ರಿ ಮಲಗುವಾಗ ಅವರಿಗೆ ಹಾಲು ಅಥವಾ ಮಜ್ಜಿಗೆ ಕೊಟ್ಟು, ಮಾತ್ರೆ ತಗೊಂಡಿರಾ ಎಂದು ವಿಚಾರಿಸಿ, ಕಾಲು ನೋವಿದ್ದರೆ ಸ್ವಲ್ಪ ಒತ್ತಿಬಿಡು. ಬೆಳಗ್ಗೆ ಅವರು ಎದ್ದ ಮೇಲೆ ವಿಷ್‌ ಮಾಡಿ, ಬಿಸಿ ಬಿಸಿ ಕಾಫಿ ಕೊಡು. ನೀನು ಆಫೀಸಿಗೆ ಹೊರಡುವ ಮುಂಚೆ ತಿಂಡಿ, ಅಡುಗೆ ರೆಡಿ ಮಾಡಿಬಿಡು. ಬೇಕಾದಾಗ ಅವರೇ ಬಡಿಸಿಕೊಳ್ಳಲಿ. ಆಗ ನೋಡು…… ಅವರ ಮೂಡ್‌ ಸದಾ ಸರಿ ಇರುತ್ತದೆ.”

“ಅಷ್ಟೇ ತಾನೇ…… ಅವರು ಬಂದ 4 ದಿನ ರಜಾ ಹಾಕಿಬಿಡುತ್ತೇನೆ. ಮನೆ ಉಸ್ತುವಾರಿ ಅವರಿಗೆ ತೋರಿಸಿಕೊಟ್ಟು, ನಂತರ ನಾನು ಹೊರಡುತ್ತೇನೆ. ಇಷ್ಟರಿಂದ ಅವರನ್ನು ಸಂತೋಷವಾಗಿ ಇರಿಸಿಕೊಳ್ಳುವುದು ಕಷ್ಟವೇನಲ್ಲ,” ಎಂದಳು.

“ಎಲ್ಲಕ್ಕೂ ಮುಖ್ಯ ವಿಷಯ, ನೀನು ಏನೇ ಕೆಲಸ ಮಾಡುವುದಿದ್ದರೂ ಅವರನ್ನು ಒಮ್ಮೆ ಕೇಳಿಬಿಡು. ಈ ಸಣ್ಣಪುಟ್ಟದರಲ್ಲಿ ಅವರಿಗೆ ಆಸಕ್ತಿ ಇಲ್ಲ. ಸೊಸೆ ತನ್ನನ್ನು ಕೇಳಿ ನಡೆದುಕೊಳ್ಳುತ್ತಾಳೆ ಎಂಬುದೇ ಆಕೆಗೆ ದೊಡ್ಡ ಹೆಮ್ಮೆಯ ವಿಷಯ. ಅದಕ್ಕೆಲ್ಲ ಅವರು ಇಲ್ಲ ಅನ್ನೋದಿಲ್ಲ. ಮತ್ತೆ…. ನಿನಗೆ ಯಾವ ಕೆಲಸ ಆಗಬೇಕೋ ಅದಕ್ಕೆ ವಿರುದ್ಧವಾಗಿ ಹೇಳು. ತುಸು ಚಂಡಿ ಸ್ವಭಾವ, ಆದ್ದರಿಂದ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಏಕೆಂದರೆ ತಮ್ಮ ಮಾತೇ ನಡೆಯಲಿ ಎಂದು ಕಿರಿಯರು ಕೇಳಿದ್ದಕ್ಕೆ ವಿರುದ್ಧವಾಗಿಯೇ ನಿರ್ಣಯ ತೆಗೆದುಕೊಳ್ಳುತ್ತಾರೆ. ಎಲ್ಲಾ ಮಾತಿಗೂ `ಆಯ್ತಮ್ಮಾ…. ಹಾಗೇ ಆಗಲಿ,’ ಅಂತಿರು. ಆಗ ನೋಡು, ನೀನು ಅಮ್ಮನ ಮೆಚ್ಚಿನ ಸೊಸೆ ಆಗುವುದರಲ್ಲಿ 2 ಮಾತಿಲ್ಲ!”

“ನೀವು ನೋಡ್ತಾ ಇರಿ, ಈ ಸಲ ಅತ್ತೆ ಬೇಸರ ಮಾಡಿಕೊಳ್ಳುವುದಕ್ಕೆ ನಾನು ಅವಕಾಶ ಕೊಡುವುದೇ ಇಲ್ಲ.”

“ಮನೆಯಲ್ಲಿ ಸದಾ ಅವರ ಆಡಳಿತವೇ ನಡೆಯುತ್ತಿದೆ ಎಂಬ ಭಾವನೆ ಅವರಿಗೆ ಬರಬೇಕು, ಅದು ಮುಖ್ಯ. ನಾನು ಹೇಳಿದ್ದು ಅರ್ಥವಾಯಿತಲ್ಲವೇ? ನಿನಗೆ ಬೇಕಾದಂತೆ ಮನೆವಾರ್ತೆ ನಡೆಸು, ಅವರು ಹ್ಞೂಂ ಎಂದು ಒಪ್ಪಿಕೊಳ್ಳುವಂತೆ ನಡೆಸು, ಅಷ್ಟೆ. ಅಮ್ಮನ ಸ್ವಭಾವ ನನಗೆ ಚೆನ್ನಾಗಿ ಗೊತ್ತು. ಸ್ವಲ್ಪ ನಚ್ಚು ಅಷ್ಟೆ, ಯಾರನ್ನೂ ಅನಾದರ ಮಾಡುವವರಲ್ಲ.”

ಮಾರನೇ ದಿನ ಅತ್ತೆ ಬರಲಿದ್ದಾರೆ ಎಂದು ಚಿತ್ರಾ ಅವರಿಗಾಗಿ ಇದ್ದ ಕೋಣೆಯನ್ನು ಚೆನ್ನಾಗಿ ಶುಚಿಗೊಳಿಸಿ, ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನೂ ಮಾಡಿಟ್ಟಳು.

ದಂಪತಿಗಳು ಸಮಯಕ್ಕೆ ಸರಿಯಾಗಿ ಏರ್‌ಪೋರ್ಟ್‌ ಸೇರಿ ಅತ್ತೆ ಕಮಲಮ್ಮನನ್ನು ಬರ ಮಾಡಿಕೊಂಡರು. ಅವರನ್ನು ಕಂಡೊಡನೆ ಪಾದಮುಟ್ಟಿ ನಮಸ್ಕರಿಸಿದರು. ಇಬ್ಬರಿಗೂ ಮನಃಪೂರ್ವಕವಾಗಿ ಆಶೀರ್ವದಿಸಿದ ಅತ್ತೆ ನಸುನಗುತ್ತಾ ಮಾತನಾಡಿದರು. ಕುಶಲೋಪರಿ ವಿಚಾರಣೆ ಮುಗಿದ ಮೇಲೆ ಅತ್ತೆ ಕೇಳಿದರು, “ಎಲ್ಲಿ ನಮ್ಮ ಪುಟ್ಟು…… ಅವನನ್ನು ಕರೆತರಲಿಲ್ಲವೇ?” ಎಂದು ಅಕ್ಕರೆಯಿಂದ ವಿಚಾರಿಸಿಕೊಂಡರು.

“ಇಲ್ಲ ಅತ್ತೆ, ಅವನು ಮಲಗಿದ್ದ,” ಚಿತ್ರಾ ಹೇಳಿದಳು.

“ಚಿತ್ರಾ, ಹಾಗೆಲ್ಲ ಮಕ್ಕಳನ್ನು ಕೆಲಸದವರ ವಶಕ್ಕೆ ಒಪ್ಪಿಸಿ ಮನೆ ಬಿಟ್ಟು ಬರಬಾರದಮ್ಮ. ಇತ್ತೀಚೆಗೆಂತೂ ಈ ಮನೆಗೆಲಸದವರ ಹಾವಳಿ ಬಗ್ಗೆ ಪೇಪರ್‌ನಲ್ಲಿ ಅದೇನೇನೋ ಬರುತ್ತಿರುತ್ತವೆ,” ಅತ್ತೆ ವಿವರಿಸಿದರು.

“ಆಯ್ತಮ್ಮ….. ಮುಂದೆ ಎಚ್ಚರಿಕೆಯಿಂದ ಇರ್ತೀನಿ,” ಎಂದು ಚಿತ್ರಾ ಆಶ್ವಾಸನೆ ನೀಡಿದಳು.

ದಾರಿ ಮಧ್ಯೆ ಅಮೆರಿಕಾದ ವಿಚಾರ, ಅಣ್ಣ ಶೇಖರ್‌, ಅತ್ತಿಗೆ ಲಲಿತಾ, ಮೊಮ್ಮಕ್ಕಳ ಬಗ್ಗೆ ಮಾತುಕಥೆ ಆಯ್ತು.

ಮನೆ ತಲುಪಿದ ಮೇಲೆ ಅತ್ತೆ ತಮ್ಮ ಕೋಣೆಗೆ ಹೋಗಿ ನೋಡಿದರು. ಅದು ಬಹಳ ಅಚ್ಚುಕಟ್ಟಾಗಿ, ಅವರಿಗೆ ಬೇಕಾದ ಅನುಕೂಲಗಳೆಲ್ಲ ಇದ್ದವು. ಅಷ್ಟರಲ್ಲಿ 4 ವರ್ಷದ ಮೊಮ್ಮಗ ಪುಟ್ಟು ಓಡಿ ಬಂದು ಅಜ್ಜಿಯನ್ನು ಅಪ್ಪಿಕೊಂಡ. ಅಜ್ಜಿಗೆ ಮೊಮ್ಮಗನನ್ನು ಎಷ್ಟು ಮುದ್ದಾಡಿದರೂ ಸಾಲದೆನಿಸಿತು.

ಅಷ್ಟರಲ್ಲಿ ಚಿತ್ರಾ ಅಲ್ಲಿಗೆ ಬಂದವಳೇ, “ಅತ್ತೆ, ಮೊದಲು ನೀವು ಮುಖ ತೊಳೆದುಕೊಂಡು ಫ್ರೆಶ್‌ ಆಗಿ ಬನ್ನಿ. ಸ್ವಲ್ಪ ಕಾಫಿ, ತಿಂಡಿ ತೆಗೆದುಕೊಂಡು ಆಮೇಲೆ ಸ್ನಾನ ಮಾಡಿಬಿಡಿ. 1 ಗಂಟೆ ಬಿಟ್ಟು ಊಟ ಮಾಡಿ ವಿಶ್ರಾಂತಿ ಪಡೆದರೆ, ಸಂಜೆ ನಿಮ್ಮ ಮಗ ಬರುವ ಹೊತ್ತಿಗೆ ಆರಾಮವಾಗಿ ಮಾತನಾಡಬಹುದು,” ಎಂದು ಅಡುಗೆಮನೆಯತ್ತ ನಡೆದಳು ಚಿತ್ರಾ.

ತಮ್ಮತ್ತ ಮಗ, ಸೊಸೆ ವಹಿಸುತ್ತಿರುವ ಕಾಳಜಿ ಕಂಡು ಆ ಹಿರಿಜೀವಕ್ಕೆ ಸಂತಸವೆನಿಸಿತು. ಮೊಮ್ಮಗನಿಗಾಗಿ ತಂದಿದ್ದ ತಿಂಡಿ ತಿನಿಸು, ಆಟಿಕೆಗಳನ್ನು ನೀಡಿ ಕಾಫಿಗಾಗಿ ಸೊಸೆಯನ್ನು ಹುಡುಕಿಕೊಂಡು ಬಂದರು. ಮಗ ಆಫೀಸಿಗೆ ಹೊರಟಾಗಿತ್ತು. ಮೊಮ್ಮಗ ಅಜ್ಜಿಗೆ ಕೈ ಬೀಸಿ ಸ್ಕೂಲ್ ವ್ಯಾನ್‌ ಹತ್ತಿದ.

ಅಂದು ರಾತ್ರಿ ಅತ್ತೆಯನ್ನು ಕೇಳಿಯೇ ಚಿತ್ರಾ ಅನ್ನ, ತಿಳಿಸಾರು, ಪಲ್ಯ ಮಾಡಿದಳು. ಎಲ್ಲರೂ ಹಿತವಾಗಿ ಮಾತನಾಡುತ್ತಾ ಊಟ ಮಾಡಿದರು.

ಊಟ ಮಾಡುವಾಗ ಕಿರಣ್‌ ತಾನಾಗಿಯೇ ಹೇಳಿದ, “ಅಮ್ಮನ್ನ ಕೇಳಿ ಅಡೆದೋಸೆಗೆ ನೆನೆಸಿಡು ಚಿತ್ರಾ. ಹೋದ ಸಲ ನೀನು ಮಾಡಿದಾಗ ಯಾಕೋ ಒರಟಾಯಿತು ಅಂತ ಹೇಳಿದ್ದೆ,” ಚಿತ್ರಾಳ ಕಣ್ಣಲ್ಲಿ ಕಣ್ಣಿಟ್ಟು, ಗೊತ್ತಾಯ್ತು ತಾನೇ, ಎನ್ನುವಂತೆ ಕಣ್ಣು ಮಿಟುಕಿಸಿದ.

“ಆಗ್ಲಿ ಬಿಡಿ. ಕಳೆದ ಸಲದ ಅಳತೆಯಲ್ಲಿ ಏನೋ ತಪ್ಪಾಯ್ತು ಅನ್ಸುತ್ತೆ. ಅತ್ತೆಯನ್ನು ಕೇಳಿಯೇ ನೆನೆಸುತ್ತೇನೆ,” ಎಂದು ಚಿತ್ರಾ ಹೇಳಿದಳು.

ಆಫೀಸಿಗೆ ರಜೆ ಇದ್ದುದರಿಂದ ಚಿತ್ರಾ ಅತ್ತೆಯ ಕೋಣೆಯ ಕ್ಲೀನಿಂಗ್‌ ಜವಾಬ್ದಾರಿ, ಅವರಿಗೆ ಹಾಸಿಗೆ ಸರಿಪಡಿಸಿ ಕೊಡುವುದು ಎಲ್ಲಾ ತಾನೇ ಮಾಡುತ್ತಿದ್ದಳು. ಹಿಂದೊಮ್ಮೆ ಕೆಲಸದವಳು ಅವರ ಕೋಣೆಯನ್ನು ಒರೆಸುವಾಗ, ನೀರು ಚಿಮುಕಿಸಿ ಅವರು ಜಾರಿ ಬೀಳುವಂತಾಗಿತ್ತು. ಆಗ ಇಡೀ ಮನೆಗೆ ಕೇಳಿಸುವ ಹಾಗೆ ಗಲಾಟೆ ಮಾಡಿ ಕೋಪದಲ್ಲಿ ಮಾರನೇ ದಿನ ಊರಿಗೆ ಹೊರಟುಬಿಟ್ಟಿದ್ದರು.

ಮತ್ತೊಂದು ದಿನ ಚಿತ್ರಾ ಅತ್ತೆ ಕೋಣೆಯಲ್ಲಿ ಬಟ್ಟೆ ಮಡಿಸಿಡುತ್ತಿದ್ದಳು. ಆಫೀಸಿಗೆ ಹೊರಟಿದ್ದ ಕಿರಣ್‌ ಯಾವುದೋ ಫೈಲ್ ‌ಸಿಗಲಿಲ್ಲವೆಂದು ಚಿತ್ರಾಳನ್ನು ಕೂಗಿ ಕರೆದ. ಆದರೂ ಕೇಳಿಸದಂತೆ ಚಿತ್ರಾ ತನ್ನ ಕೆಲಸ ಮುಂದುವರಿಸಿದಳು. ಆಗ ಅತ್ತೆ ತಾವಾಗಿಯೇ, “ಹೋಗಮ್ಮ, ಕಿರಣ್‌ ಏನೋ ಕೇಳ್ತಿದ್ದಾನೆ,” ಎಂದರು.

“ಬಂದೆ ಅತ್ತೆ,” ಎನ್ನುತ್ತಾ ಚಿತ್ರಾ ಹೊರಟಳು.

ಸಂಜೆ ಅತ್ತೆ ಬಿಡುವಾಗಿ ಮನೆ ಮುಂದಿನ ಜಗುಲಿಯಲ್ಲಿ ಕುಳಿತು ತಲೆಗೆ ಎಣ್ಣೆ ಹಚ್ಚಲೆಂದು ಬಾಟಲ್ ತೆಗೆದುಕೊಂಡರು. ಚಿತ್ರಾ ಅವರಿಂದ ಆ ಬಾಟಲ್ ಪಡೆಯುತ್ತಾ, “ಇರಿ ಅತ್ತೆ, ನಾನೇ ನಿಮಗೆ ತಲೆ ಬಾಚುತ್ತೇನೆ,” ಎಂದಳು.

“ಬಿಡಮ್ಮ ಚಿತ್ರಾ, ನಿನಗೆ ಮನೆಯಲ್ಲಿ ಬೇಕಾದಷ್ಟು ಕೆಲಸ ಇರುತ್ತೆ. ಎಷ್ಟು ಅಂತ ಈ ಮುದುಕಿ ಒಬ್ಬಳನ್ನೇ ಗಮನಿಸಿಕೊಳ್ತೀಯಾ?”

“ಇರಲಿ ಬಿಡಿ ಅತ್ತೆ, ಮನೆಗೆಲಸ ಇದ್ದೇ ಇರುತ್ತೆ. 10 ನಿಮಿಷ ನಿಮ್ಮೊಂದಿಗೆ ಮಾತನಾಡಿದ ಹಾಗೆ ಆಯ್ತು. ನಾಳೆಯಿಂದ ಆಫೀಸಿಗೆ ಹೊರಡಬೇಕು, ಎಲ್ಲರೂ ಹೊರಟ ಮೇಲೆ ಒಬ್ಬರೇ ಆಗಿಬಿಡ್ತೀರಿ. ಕೆಲಸದ ರತ್ನಾ ಇರುತ್ತಾಳೆ, ನಿಮಗೇನಾದರೂ ಬೇಕಾದರೆ ಸಹಾಯ ಮಾಡಲು, ಅಂಗಡಿಯಿಂದ ತಂದುಕೊಡಲು ನೆರವಾಗುತ್ತಾಳೆ,” ಎನ್ನುತ್ತಾ ಅತ್ತೆ ತಲೆಗೆ ಎಣ್ಣೆ ಸವರಿ ನಿಧಾನವಾಗಿ ಮಸಾಜ್‌ ಮಾಡತೊಡಗಿದಳು.

“ಹೌದಮ್ಮ…. ಪಾಪ ನೀನೂ 4 ದಿನ ರಜೆ ಹಾಕಿ ನನಗಾಗಿ ಮನೆಯಲ್ಲೇ ಉಳಿದುಬಿಟ್ಟೆ. ಏನೂ ತೊಂದರೆ ಇಲ್ಲ ಬಿಡು, ನನಗೆ ಅಭ್ಯಾಸ ಇದೆ. ಇವರು ಹೋದ ಮೇಲೆ ಮಕ್ಕಳು ಕಾಲೇಜು, ಆಫೀಸಿಗೆ ಅಂತ ಹೊರಟುಬಿಡ್ತಿದ್ರ್ಲಾ, ನಾನು ಮಾಡ್ಕೋತೀನಿ,” ಎಂದು ಅಕ್ಕರೆಯಿಂದ ಹೇಳಿದರು.

“ಅತ್ತೆ, ನಿಮ್ಮ ಕೂದಲು ನಿಜಕ್ಕೂ ಸೊಂಪಾಗಿದೆ. ಹಿಂದೆ ನೀವು ಮದುವೆ ವಯಸ್ಸಿನಲ್ಲಿ ಇನ್ನೆಷ್ಟು ಚೆನ್ನಾಗಿ ಮೇಂಟೇನ್‌ಮಾಡ್ತಿರಬಹುದು…. ಅಲ್ವಾ?”

“ಅಯ್ಯೋ ಹೋಗಮ್ಮ….. ನನ್ನ ಮೇಲಿನ ಅಭಿಮಾನಕ್ಕೆ ನೀನು ಏನೇನೋ ಹೊಗಳುತ್ತಿ, ಈ ವಯಸ್ಸಿನಲ್ಲಿ ನನಗೇಕೆ ಬೇಕು ಈ ಆರೈಕೆ? ಇರಲಿ, ನೀನು ನನಗೆ ತಲೆ ಬಾಚಿಬಿಡು. ಅಳ್ಳಕವಾಗಿ ಒಂದು ಗಂಟು ಹಾಕಿಕೊಂಡರೆ ಸಾಕು. ನಾನು ನಿನಗೆ ನೀಟಾಗಿ ಬಾಚಿ ಜಡೆ ಹೆಣೆಯುತ್ತೇನೆ,” ಎಂದರು.

ಅತ್ತೆ ತಮ್ಮದು ಮುಗಿದ ತಕ್ಷಣ ಸೊಸೆಗೆ ಎಣ್ಣೆ ಸವರಿ, ತಲೆ ಬಾಚಿ, ಸಿಕ್ಕು ಬಿಡಿಸಿ, ನೀಟಾಗಿ ಜಡೆ ಹೆಣೆದರು. ಮಲ್ಲಿಗೆ ಚಪ್ಪರದಿಂದ ಒಂದಿಷ್ಟು ಹೂ ಬಿಡಿಸಿ, ಕಟ್ಟಿಕೊಂಡು, ರಾತ್ರಿ ಚಪಾತಿಗೆಂದು ಹಿಟ್ಟು ಕಲಸುತ್ತಿದ್ದ ಸೊಸೆಯ ತಲೆಗೆ ಮುಡಿಸಿದರು.

ಆಗ ನಿಜಕ್ಕೂ ಚಿತ್ರಾಳಿಗೆ ಹೃದಯ ತುಂಬಿ ಬಂದಿತು. ತಾನು ಗಂಡನ ಮಾತಿನಂತೆ ನಡೆದುಕೊಳ್ಳಲು ಆರಂಭಿಸಿ, ಇಷ್ಟು ಬೇಗ ಅತ್ತೆ ಮನ ಗೆದ್ದೆ ಎಂದು ಸಂಭ್ರಮಿಸಿದಳು.

“ನಾನು ನಿನಗೆ ಕೆಲವೊಂದು ಸಲಹೆ ಕೊಡಲು ಬಯಸುತ್ತೇನೆ. ಅದನ್ನು ನೀನು ಪರಿಪಾಲಿಸಿದರೆ ನಿನ್ನ ಎಲ್ಲಾ ಚಿಂತೆಗಳೂ ಒಂದು ಕ್ಷಣದಲ್ಲಿ ಮಾಯವಾಗುತ್ತವೆ.”

“ಹಾಲ್‌ಗೆ ಕರೆದಿದ್ರೆ ನಾನೇ ಬರ್ತಿದ್ದೆ ಅತ್ತೆ…”

“ಪರವಾಗಿಲ್ಲಮ್ಮ….. ಸೋಫಾದಲ್ಲಿ ಕೂತು ಕೂತೂ ಏನು ಮಾಡಲಿ?”

ಅಲ್ಲಿದ್ದ ಸಾಮಗ್ರಿಗಳನ್ನು ಓರಣವಾಗಿ ಎತ್ತಿಡುತ್ತಾ, “ಅಂದಹಾಗೆ, ಚಪಾತಿ ಜೊತೆಗೆ ಏನು ಮಾಡ್ತಿದ್ದಿ ಈಗ?” ಎಂದು ಕೇಳಿದರು.

“ಇದೋ…. ಎಲೆಕೋಸು ಹೆಚ್ಚಿಟ್ಟಿದ್ದೇನೆ. ಈಗ ಪಲ್ಯಕ್ಕೆ ರೆಡಿ ಮಾಡಬೇಕು. ಮಧ್ಯಾಹ್ನದ ಹುಳಿ ಸ್ವಲ್ಪ ಕಡಿಮೆ ಇದೆ. ತೆಂಗಿನ ತುರಿ ತುರಿದುಕೊಂಡು, ಪಲ್ಯ ಮಾಡಿ, ಅವರು ಬರುವಷ್ಟರಲ್ಲಿ ಬಿಸಿ ಬಿಸಿ ಚಪಾತಿ ಮಾಡಿಬಿಡ್ತೀನಿ.”

“ಹಿಟ್ಟು ಕಲಸಿದ ಮೇಲೆ, ನೀನು ತೆಂಗಿನಕಾಯಿ ತುರಿದುಕೋ. ನಾನು ಒಗ್ಗರಣೆ ಹಾಕಿ, ಕೋಸು ಬಾಡಿಸ್ತೀನಿ,” ಎಂದು ಬಾಣಲೆ ಒಲೆ ಮೇಲಿಟ್ಟು ಕೆಲಸ ಶುರು ಮಾಡಿದರು.

“ಇರ್ಲಿ ಬಿಡಿ ಅತ್ತೆ, ನೀವು ಇಲ್ಲಿ ಒಂದು ಘಳಿಗೆ ಕಾಲು ಚಾಚಿ ಕುಳಿತುಕೊಳ್ಳಿ. 2 ನಿಮಿಷದಲ್ಲಿ ನಾನು ಮಾಡಿಬಿಡ್ತೀನಿ,” ಎಂದಳು ಚಿತ್ರಾ.

“ಏನೂ ತೊಂದರೆ ಇಲ್ಲಮ್ಮ. ಬೇಗ ಕೆಲಸ ಮುಗಿಸಿದರೆ ಇಬ್ಬರೂ ಕುಳಿತು ಹಾಯಾಗಿ ಟಿವಿ ನೋಡಬಹುದು. ಅದೇ ಬೇಸರವಾದ್ರೆ, ನನ್ನ ಬಳಿ ಹಲವು ಧಾರ್ಮಿಕ ಪುಸ್ತಕಗಳಿವೆ. ಅಪೂರ್ಣ ಆದದ್ದನ್ನು ನಿಧಾನವಾಗಿ ಮುಗಿಸಬಹುದು,” ಎಂದು ಅನುಭವಸ್ಥೆ ಅತ್ತೆ ಸರ ಸರ ಕೈ ಆಡಿಸತೊಡಗಿದರು.

ಅವರಿಗೆ ತೆಂಗಿನ ತುರಿ ಕೊಟ್ಟು, ಚಿತ್ರಾ ಚಪಾತಿಗೆ ಲಟ್ಟಿಸ ತೊಡಗಿದಳು. ಪಲ್ಯ  ಬದಿಗಿರಿಸಿದ ಅತ್ತೆ,, ಈಗ ಕಾವಲಿ ಹಾಕಿ ಚಪಾತಿ ಮಾಡತೊಡಗಿದರು. 30 ನಿಮಿಷದಲ್ಲಿ ಎಲ್ಲಾ ಮುಗಿಸಿ, ಹೊರಗೆ ಬಂದು ಟಿವಿ ನೋಡಲು ಕುಳಿತರು. ಅಷ್ಟರಲ್ಲಿ ಚಿತ್ರಾ ಮಗನ ಹೋಂವರ್ಕ್‌ ಗಮನಿಸಿ, ಹೊಸ ಲೆಕ್ಕ ಮಾಡಲು ತಿದ್ದಿಕೊಟ್ಟಳು.ಕಿರಣ್‌ ಬರುವಷ್ಟರಲ್ಲಿ ಅತ್ತೆಸೊಸೆ ಧಾರಾವಾಹಿ ನೋಡುವುದರಲ್ಲಿ ತಲ್ಲೀನರಾಗಿದ್ದರು. ಮನೆಯಲ್ಲಿದ್ದ ಸಂತಸದ ವಾತಾವರಣ ಕಿರಣನ ಮುಖದಲ್ಲಿ ಮಂದಹಾಸ ತರಿಸಿತು. ಅವನು ಕೈಕಾಲು ತೊಳೆದು ಬಂದು ಕೂರುವಷ್ಟರಲ್ಲಿ ಓದು ಮುಗಿಸಿದ್ದ ಮಗರಾಯ ಓಡಿಹೋಗಿ ಅಪ್ಪನ ಕೊರಳಿಗೆ ಜೋತುಬಿದ್ದ. ಮಗನನ್ನು ಮುದ್ದಾಡಿ ಅವನ ಅಂದಿನ ಕಲಿಕೆ ಬಗ್ಗೆ ವಿಚಾರಿಸಿಕೊಂಡ ಕಿರಣ್‌. ಅಷ್ಟರಲ್ಲಿ ಮಡದಿ ಹಬೆಯಾಡುವ ಕಾಫಿ ತಂದುಕೊಟ್ಟಳು.

ಅತ್ತೆಗೂ ಅರ್ಧ ಲೋಟ ಕೊಟ್ಟು ತಾನೂ ಚಿಕ್ಕ ಕಪ್‌ ಹಿಡಿದು ಕುಳಿತಳು.

“ನನ್ನ ಸೊಸೆ ಬಹಳ ಉಪಚಾರ ಮಾಡ್ತಾಳಪ್ಪ. ಸಂಜೆ  ಒಂದು ರೌಂಡು ಕಾಫಿ ಆಯ್ತು. ಇದೋ ಈಗ ನೀನು ಬಂದೆ, ಈ ಮುದುಕಿಗೂ ಮತ್ತೆ ಕೊಡಬೇಕೇ?”

“ಮಹಾ ನಾನು ಮಾಡಿದ್ದು ಅತ್ತೆ…. ಕಿರಣ್‌, ಇವತ್ತು  ಅಮ್ಮಂದೇ ಪಲ್ಯ, ಚಪಾತಿ ಎಲ್ಲಾ…. ನಾನು ಬರೀ ಲಟ್ಟಿಸಿಕೊಟ್ಟಿದ್ದಷ್ಟೇ!” ಎಂದು ಹೆಮ್ಮೆಯಿಂದ ಅತ್ತೆ ಕಡೆ ತಿರುಗಿದಳು.

“ಹೋಗಮ್ಮ…. ನಿನ್ನ ಪ್ರೀತಿ ವಿಶ್ವಾಸದ ಮುಂದೆ ಇದೆಲ್ಲ ಏನು ಮಹಾ,”  ಎಂದು ಮಾರನೇ ದಿನಕ್ಕಾಗಿ ಅವರೇಕಾಯಿ ಬಿಡಿಸತೊಡಗಿದರು. ಕಾಫಿ ಲೋಟ ಜೋಡಿಸಿಕೊಂಡು ಒಳಗಿಟ್ಟು ಬಂದ ಚಿತ್ರಾ, ಸೋಫಾದಲ್ಲಿ ಗಂಡನ ಬಳಿ ಕೂರದೆ ಅತ್ತೆ ಪಕ್ಕ ಕುಳಿತು ತಾನೂ ಸುಲಿಯತೊಡಗಿದಳು.

“ಅಜ್ಜಿ, ನಾನೂ ಅವರೆಕಾಯಿ ಸುಲೀತೇನೆ,” ಎಂದು ಮೊಮ್ಮಗ ಓಡಿಬಂದು ಅಜ್ಜಿ ಮಡಿಲೇರಿದ. ಅವನನ್ನು ಎದೆಗಾನಿಸಿಕೊಂಡು ತಟ್ಟುತ್ತಾ, “ನೀನು ಈ ಸಿಪ್ಪೆ ಎಲ್ಲಾ ಸೇರಿಸಿ ಡಸ್ಟ್ ಬಿನ್‌ಗೆ ತುಂಬು ಮಗು,” ಎಂದು ಅಜ್ಜಿ  ಮಗುವಿಗೆ ಹೇಳಿದರು.

ತಾನು ಎಣಿಸಿದಂತೆ ಯಾವ ರಾದ್ಧಾಂತ ಇಲ್ಲದೆ, 4 ದಿನಗಳಲ್ಲಿ ಅತ್ತೆ ಸೊಸೆ ಅನ್ಯೋನ್ಯವಾಗಿ ಹೊಂದಿಕೊಂಡು, ಮನೆ ನಂದಗೋಕುಲವಾಗಿರುವುದನ್ನು ಕಂಡು ಕಿರಣನಿಗೆ ಬಹಳ ತೃಪ್ತಿ ಎನಿಸಿತು.

“ಏನಮ್ಮ….. ಮತ್ತೆ ಅಣ್ಣನ ಬಳಿ ಅಮೆರಿಕಾಗೆ ಹೋಗಬೇಕು ಅಂತೀಯೇನೋ?” ಎಂದು ಕೀಟಲೆ ಮಾಡಿದ ಕಿರಣ್‌.

“ಅಯ್ಯೋ, ಹೋಗೋ…. ಇಂಥ ಮುದ್ದಾದ  ಮೊಮ್ಮಗ, ಪ್ರೀತಿಯ ಸೊಸೆಯನ್ನು ಬಿಟ್ಟು ನಾನೇಕೆ ವಿಮಾನ ಹತ್ತಿಕೊಂಡು ಆ ಪರದೇಶಕ್ಕೆ ಮತ್ತೆ ಹೋಗಲಿ? ಈ ಅಮ್ಮನ್ನ ನೋಡಬೇಕು ಅನ್ನಿಸಿದಾಗ ಆ ಹಿರಿ ಮಗ ತಾನಾಗಿ ಬರ್ತಾನೇಳು,” ಎಂದರು.

ಗಂಡನ ಪ್ರೇಮದ ಕುಡಿ ನೋಟ ಎದುರಿಸುತ್ತಾ, ಚಿತ್ರಾ ನಸುನಗುತ್ತಾ, ಸುಲಿದ ಅವರೆಕಾಯಿ ಎತ್ತಿಡಲು ಒಳಗೆ ಹೊರಟಳು. ತಾಯಿಮಗ ಉಳಿದ ವಿಷಯ ಹರಟತೊಡಗಿದರು.

ಹುಳಿ ಬಿಸಿ ಮಾಡಿ, ಎಲ್ಲರಿಗೂ ಕಲಸಿ ತಟ್ಟೆಗೆ ಹಾಕಿ, ಚಪಾತಿ ಪಲ್ಯ ಜೋಡಿಸಿ ಚಿತ್ರಾ ಡೈನಿಂಗ್‌ ಟೇಬಲ್ ಸಜ್ಜುಗೊಳಿಸಿದಳು. ಎಲ್ಲರೂ ಹಾಯಾಗಿ ಹರಟುತ್ತಾ ಊಟ ಮುಗಿಸಿದರು.

ಅತ್ತೆ ಮಲಗಲು ಹೊರಟಾಗ, ಅವರಿಗೆ ಮಾತ್ರೆ ಕೊಟ್ಟು, ಸೊಳ್ಳೆ ಪರದೆ ಇಳಿಬಿಟ್ಟು, ನೀರಿನ ಚೊಂಬು ಮಂಚದ ಬದಿ ಇರಿಸಿ ಹೊರಟಳು ಚಿತ್ರಾ. ತನ್ನ ಕೋಣೆಗೆ ಹೋಗಿ ಮಾರನೇ ದಿನ ಆಫೀಸ್‌ಗೆ ಬೇಕಾಗುವ ಸೀರೆ ಸೆಟ್‌ ತೆಗೆದಿರಿಸಿಕೊಂಡಳು. ಸಂತೃಪ್ತಿಯಿಂದ ಮಾತನಾಡುತ್ತಿದ್ದ ದಂಪತಿಗಳು ಮಲಗಿ ಏಳುವಷ್ಟರಲ್ಲಿ ಬೆಳಗ್ಗೆ 5 ಗಂಟೆ ಅಲಾರಂ ಹೊಡೆದಿತ್ತು.

ಚಿತ್ರಾ ಎದ್ದು ಬೆಳಗಿನ ಕೆಲಸ ಶುರು ಮಾಡಿದಳು. 5.30ರ ಹೊತ್ತಿಗೆ ಕಿರಣ್‌ ಜಾಗಿಂಗ್‌ ಹೊರಡುತ್ತಿದ್ದ. ಅವನು 6.30 ಹೊತ್ತಿಗೆ ಮರಳುವಷ್ಟರಲ್ಲಿ ಚಿತ್ರಾ ಕಾಫಿ ಕೆಲಸ ಮುಗಿಸಿ, ಉಪ್ಪಿಟ್ಟಿನ ತಯಾರಿಗೆ ತೊಡಗಿದ್ದಳು. ಅತ್ತೆ ಎದ್ದು ಮುಖ ತೊಳೆದು ಬರುವಷ್ಟರಲ್ಲಿ ಚಿತ್ರಾ ಮೂವರಿಗೂ ಕಾಫಿ ಸಿದ್ಧಪಡಿಸಿದ್ದಳು. ಇವರ ಕಾಫಿ ಪೇಪರ್‌ ಓದುವಿಕೆ ಆಗುತ್ತಿದ್ದಂತೆ ಮಗರಾಯ ಎದ್ದು ಬಂದ. ಅವನನ್ನು ಶಾಲೆಗೆ ಸಿದ್ಧಪಡಿಸಬೇಕು ಎಂದು, ಹಾಲು ಬೆರೆಸಿಕೊಟ್ಟು ಸ್ನಾನಕ್ಕೆ ರೆಡಿಯಾಗಲು ಹೇಳಿದಳು.

ಕುಕ್ಕರ್‌ನಲ್ಲಿ ಅವರೇಕಾಯಿ ಬಿಸಿಬೇಳೆ ಭಾತ್‌ಗೆ ರೆಡಿ ಮಾಡಿ, ಬೇಗನೇ ಉಪ್ಪಿಟ್ಟಿನ ಕೆಲಸ ಮುಗಿಸಿದಳು. ಮಗನನ್ನು ಸಿದ್ಧಪಡಿಸಿ, ಬಾಕ್ಸ್ಗೆ ಹಾಕಿಕೊಟ್ಟು ವ್ಯಾನ್‌ ಬಂದಾಗ ಶಾಲೆಗೆ ಹೊರಡಿಸಿದ್ದಳು. ತನ್ನ ಸ್ನಾನ ಮುಗಿಸಿ, ಸಿದ್ಧಳಾಗಿ ಇಬ್ಬರಿಗೂ ಕ್ಯಾರಿಯರ್ ಸಿದ್ಧಪಡಿಸಿದಳು. ಅದೇ ಹೊತ್ತಿಗೆ ಅತ್ತೆ ಸ್ನಾನ, ತಮ್ಮ ಪೂಜೆ ಮುಗಿಸಿ ಬಂದರು. ಎಲ್ಲರೂ ಒಟ್ಟಿಗೆ ತಿಂಡಿ ಮುಗಿಸಿದರು.

“ಅತ್ತೆ, ಬಿಸಿಬೇಳೆ ಭಾತ್‌ ಮಾಡಿದ್ದೇನೆ. ಮಧ್ನಾಹ್ನ ನೀವೇ ಬಡಿಸಿಕೊಳ್ಳಬೇಕು.”

“ಆಯ್ತಮ್ಮ, ಪಾಪು ಬರುವಷ್ಟರಲ್ಲಿ ಸ್ವಲ್ಪ ಬಿಸಿ ಅನ್ನ, ತಿಳಿ ಸಾರು ಮಾಡಿರುತ್ತೇನೆ. ನಾವಿಬ್ಬರೂ ಒಟ್ಟಿಗೆ ಊಟ ಮಾಡುತ್ತೇವೆ. ನೀವಿಬ್ಬರೂ ಹೋಗಿ ಬನ್ನಿ,” ಎಂದಾಗ ತೃಪ್ತರಾಗಿ ಈ ದಂಪತಿಗಳು ಆಫೀಸಿಗೆ ಹೊರಟರು.

ಮನೆಗೆಲಸಕ್ಕೆ ನೆರವಾಗಲು ರತ್ನಾ ಬರುತ್ತಿದ್ದಳು. ಸಂಜೆ ಚಿತ್ರಾ ಆಫೀಸಿನಿಂದ ಹಿಂದಿರುಗಿದ ನಂತರವೇ ಹೊರಡುತ್ತಿದ್ದಳು. ಮಧ್ನಾಹ್ನ 3 ಗಂಟೆಗೆ ಪಾಪು ಶಾಲೆಯಿಂದ ಮರಳಿದ ಮೇಲೆ ಅವನಿಗೆ ಊಟ ಕೊಟ್ಟು, ತನ್ನ ಕೆಲಸ ಮುಂದುವರಿಸುತ್ತಿದ್ದಳು. ಈಗ  ಅತ್ತೆ ಕಮಲಮ್ಮ ಬಂದ ಮೇಲೆ ಆರೋಗ್ಯವಾಗಿ ಸಕ್ರಿಯವಾಗಿದ್ದ ಅವರು, ಹೊತ್ತು ಹೋಗದೆಂದು ಒಂದೊಂದೇ ಕೆಲಸ ಅಂಟಿಸಿಕೊಂಡರು. ಪಾಪುವಿನ ಸ್ನಾನ, ತಿಂಡಿ, ರೆಡಿ ಮಾಡಿ ಶಾಲೆಗೆ ಕಳುಹಿಸುವುದು ಅವರ ಕೆಲಸವಾಯಿತು. ಚಿತ್ರಾ ಹೊರಟ ನಂತರ ಅಪೂರ್ಣವಾಗಿದ್ದ ಅಡುಗೆ ಕೆಲಸ ಮುಗಿಸಿ, ಉಳಿದ ಸಣ್ಣ ಪುಟ್ಟ ಕೆಲಸ ಮಾಡುವರು. ಬಿಡುವಿದ್ದಾಗ ಹೂಬತ್ತಿ, ದೇವರಮನೆ ಕೆಲಸಗಳನ್ನೆಲ್ಲ ಮಾಡುವರು.

ರತ್ನಾಳಿಗೆ ಯಾವಾಗ ಏನೇನು ಕೆಲಸ ಮಾಡಬೇಕೆಂದು ನಿರ್ದೇಶಿಸಿ, ತಮ್ಮ ಧರ್ಮಗ್ರಂಥ ಹಿಡಿದು ಓದಲು ಕೂರುವರು. ಮಗು ಬಂದ ಮೇಲೆ ಅವನೊಡನೆ ಒಟ್ಟಿಗೆ ಊಟ ಮಾಡಿ, ಇಬ್ಬರೂ ವಿಶ್ರಾಂತಿ ಪಡೆದರು. ಸಂಜೆ ಆಶ್ರಮ, ಮಠದ ಕಡೆಗೆ ಹೋಗಿ ಬಂದು ಮಗ, ಸೊಸೆ ಬರುವಷ್ಟರಲ್ಲಿ ಕಾಫಿ ಸಿದ್ಧಪಡಿಸಿ ರೆಡಿ ಇರುತ್ತಿದ್ದರು.

ಅಮ್ಮನ ಜೊತೆ ತುಸು ಹರಟೆ ಹೊಡೆದು ಅವರು ಏನಾದರೂ ಶಾಪಿಂಗ್‌ಗೆಂದು ಒಂದು ರೌಂಡ್‌ ಹೋಗಿ ಬರುತ್ತಿದ್ದರು. ಅತ್ತೆಸೊಸೆ ಕೂಡಿ ರಾತ್ರಿ ಅಡುಗೆ ಪೂರೈಸುತ್ತಿದ್ದರು. ಮನೆಯ ವಾತಾವರಣ ಸಂಪೂರ್ಣ ಕೂಲ್ ಕೂಲ್ ಆಗಿ ಬದಲಾಗಿರುವುದು ಕಿರಣನಿಗಂತೂ ಅಪಾರ ಸಂತೋಷ ತರಿಸಿತ್ತು. ಚಿತ್ರಾಳಿಗಂತೂ ಮನೆಗೆಲಸ ಈಗ ಸಲೀಸಾಗಿತ್ತು.

ಒಂದು ದಿನ ಸಿನಿಮಾಗೆ ಹೊರಡುವುದೆಂದು ಭಾನುವಾರದ ಸಂಜೆ ಶೋ ಟಿಕೆಟ್‌ ಬುಕ್‌ ಮಾಡಿಕೊಂಡೇ ಕಿರಣ್‌ ಮನೆಗೆ ಬಂದ.

“ಚಿತ್ರಾ, ನಾಳೆ ಸಿನಿಮಾ ಪ್ರೋಗ್ರಾಂ ಇದೆ, ಮರೆಯಬೇಡ,” ಎಂದ.

“ಅತ್ತೆ ಬರದಿದ್ದರೆ ನಾನಂತೂ ಬರಲ್ಲಪ್ಪ,” ಚಿತ್ರಾ ಬೇಕೆಂದೇ ಜೋರಾಗಿ ಹೇಳಿದಳು. ಅತ್ತೆಗೆ ಸಿನಿಮಾದಲ್ಲಿ ಆಸಕ್ತಿ ಇಲ್ಲ ಎಂದು ಅವಳಿಗೆ ಚೆನ್ನಾಗಿಯೇ ಗೊತ್ತಿತ್ತು.

ಇವರಿಬ್ಬರ ವಾದ ಆಲಿಸಿ ಅತ್ತೆ ಹೇಳಿದರು, “ಯಾಕಮ್ಮ ಈ ವಯಸ್ಸಿನಲ್ಲಿ ನನಗೆ ಈ ಸಿನಿಮಾ, ಡ್ರಾಮಾ? ಹಾಯಾಗಿ ನೀವಿಬ್ಬರೂ ಹೋಗಿ ಬನ್ನಿ. ಪಾಪು ನನ್ನ ಜೊತೆಗೆ ಇರ್ತಾನೆ. ನಾವು ಹಾಯಾಗಿ ಮನೆಯಲ್ಲೇ ಟಿವಿ ನೋಡ್ತೇವೆ.”

ರೋಗಿ ಬಯಸಿದ್ದು…. ವೈದ್ಯ ಹೇಳಿದ್ದು, ಎಂಬಂತೆ ದಂಪತಿ ಹಾಯಾಗಿ ಸಿನಿಮಾ ಮುಗಿಸಿಕೊಂಡು ಬಂದರು. ಅತ್ತೆ ಬಿಸಿ ಬಿಸಿ ಅಡುಗೆ ಮಾಡಿ ಅವರಿಗಾಗಿ ಕಾದಿದ್ದರು. ಮಗನಿಗೆ, ಸೊಸೆಗೆ ಇಷ್ಟವಾಗುವಂಥ ಬಟಾಣಿ ಪಲಾವ್, ಗಸಗಸೆ ಪಾಯಸ ಮಾಡಿದ್ದರು.

ಬರುವಾಗ ಚಿತ್ರಾ ಅತ್ತೆಗಾಗಿ ಒಂದು ಸುಂದರ ನೀಲಿ ಬಣ್ಣದ ಶಾಲು ಖರೀದಿಸಿ ತಂದಿದ್ದಳು. ಚಳಿಗೆ ಬೆಚ್ಚಗೆ ಹೊದೆಯಲು ಅದು ಹಿತಕರವಾಗಿತ್ತು. ಮಗ, ಸೊಸೆ ಬಂದು ಆ ಶಾಲು ಹೊದಿಸಿದಾಗ, ಅವರಿಗೂ ಬಹಳ ಹೆಮ್ಮೆ ಎನಿಸಿತು.

ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವಾಗ ಅತ್ತೆಗೆ ಕಣ್ಣಲ್ಲಿ ಆನಂದಬಾಷ್ಪ ಉಕ್ಕಿತು. “ಯಾಕಮ್ಮ…. ಏನಾಯಿತು?” ಎಂದು ಮಗ ವಿಚಾರಿಸಿದ.

“ಇಷ್ಟೆಲ್ಲ ಸುಖ, ಸಂತೋಷ ನೋಡಲಿಕ್ಕೆ ನಿಮ್ಮ ತಂದೆ ಇರಬೇಕಾಗಿತ್ತು ಕಣಪ್ಪ. ಬಹಳ ಕಷ್ಟಪಡುತ್ತಿದ್ದರು ಸುಖದ ದಿನಗಳನ್ನು ಕಾಣದೆ ಹೋಗಿಬಿಟ್ಟರು…. ಅವರ ಕಣ್ಣಂಚಲ್ಲಿ ನೀರಿತ್ತು.

ವಾತಾವರಣ ತುಸು ಗಂಭೀರವಾಗಿದ್ದನ್ನು ಗಮನಿಸಿ ಕಿರಣ್‌,  “ಅಮ್ಮ…. ಯೋಚಿಸಬೇಡಮ್ಮ. ಮುಂದೆ ನಮಗೆ ಎಲ್ಲಾ ಒಳ್ಳೆಯ ದಿನಗಳೇ ಬರಲಿವೆ,” ಎಂದು ಅಮ್ಮನನ್ನು ಸಮಾಧಾನಪಡಿಸಿದ.

“ಆಹಾ….. ಅಮ್ಮನ ಕೈಲಿ ಗಸಗಸೆ ಪಾಯಸ ಕುಡಿದು ಎಷ್ಟು ದಿನ  ಆಯಿತು….. ಇನ್ನೊಂದು ಲೋಟ ಕೊಡಮ್ಮ,”  ಎಂದು ಕೇಳಿ ಸವಿದ ಕಿರಣ್‌.

“ಅತ್ತೆ, ಒಂದಂತೂ ನಿಜ. ನಿಮ್ಮ ಪಳಗಿದ ಕೈ ರುಚಿ ನನಗಿನ್ನೂ ಬರಲೇ ಇಲ್ಲ…..” ಎಂದು ಮಾತು ಬದಲಿಸಿದಳು ಚಿತ್ರಾ.

“ಹಾಗೇನಿಲ್ಲಮ್ಮ….. ನೀನು ಮಾಡುವ ಅಡುಗೆಯೂ ಅಷ್ಟೇ ಚೆನ್ನಾಗಿರುತ್ತದೆ,” ಸೊಸೆಯನ್ನು ಬಿಟ್ಟುಕೊಡದೆ ಅಭಿಮಾನದಿಂದ ಹೇಳಿದರು ಅತ್ತೆ.

`ನೋಡಿದ್ರಾ…..?’ ಎನ್ನುವಂತೆ ಚಿತ್ರಾ ಗಂಡನನ್ನು ಕಣ್ಣಲ್ಲೇ ವಿಚಾರಿಸಿಕೊಂಡಳು.

ದೀಪಾವಳಿ ಹಬ್ಬ ಸಮೀಪಿಸಿತು. ಕಿರಣ್‌ ತನಗೆ ಬಂದ ದೊಡ್ಡ  ಮೊತ್ತದ ಬೋನಸ್‌ ಹಣವನ್ನು ಕವರ್‌ ಸಮೇತ ತಂದು ಚಿತ್ರಾಳ ಕೈಗೆ ಕೊಟ್ಟ.

“ಇದೇನಿದು…? ಅತ್ತೆ ಕೈಲಿ ಕೊಟ್ಟು ನಮಸ್ಕಾರ ಮಾಡಿ,” ಎಂದು ಗಂಡನಿಗೆ ತಾಕೀತು ಮಾಡಿದಳು. ಅಮ್ಮನ ಕೈಲಿ ಕವರ್ ಕೊಟ್ಟ ಮಗ, ಹೆಚ್ಚಿನ ಸೌಲಭ್ಯ ಸಿಗಲಿ ಎಂದು ಆಶೀರ್ವಾದ ಬೇಡಿದ. ತುಂಬು ಮನದಿಂದ ಹಾಗೇ ಆಗಲೆಂದು ಹಾರೈಸಿದರು ತಾಯಿ. ಇಂದು ತಾವು ಇಡೀ ಮನೆಗೆ ಹಿರಿಯರಾಗಿ ಎಂಥ ಉನ್ನತ ಗೌರವಾದರಕ್ಕೆ ಪಾತ್ರರಾಗಿದ್ದೇವೆ, ಸೊಸೆ ಎಂಥ ಸೂಕ್ಷ್ಮ ವಿಷಯವನ್ನು ಗಂಡನಿಗೆ ನೆನಪಿಸಿ ತಮ್ಮ ಹಿರಿಮೆ ಎತ್ತಿಹಿಡಿದಿದ್ದಾಳೆ ಎಂದು ಅವರಿಗೆ ಸಂತೋಷವಾಯಿತು.

ಆ ಹಣ ಇಟ್ಟುಕೊಂಡು ಅವರು ಏನೂ ಮಾಡಬೇಕಿರಲಿಲ್ಲ. ಹೀಗಾಗಿ ಸೊಸೆಯನ್ನು ಕರೆದು ಹೇಳಿದರು, “ನೋಡಮ್ಮ, ನೀನು ಈ ಮನೆಯ ಗೃಹಲಕ್ಷ್ಮಿ. ದೀಪಾವಳಿ ಹಬ್ಬಕ್ಕೆ ಹೇಗೆ ಖರ್ಚು ಮಾಡಬೇಕೆಂದು ನಿನಗೆ ಗೊತ್ತಿದೆ. ಈ ಹಣ ಎತ್ತಿರಿಸಿಕೊಂಡು ಎಲ್ಲರಿಗೂ ಸಂತೋಷವಾಗುವಂತೆ ಹಬ್ಬ ಆಚರಿಸಮ್ಮ,” ಎಂದು ಅವರಿಬ್ಬರನ್ನೂ ಅಲ್ಲೇ ಬಿಟ್ಟು, ಮೊಮ್ಮಗನನ್ನು ಪಾರ್ಕಿಗೆ ಕರೆದೊಯ್ಯಲು ಹೊರಗೆ ಹೊರಟರು ಅಜ್ಜಿ. ಅತ್ತೆಸೊಸೆಯರ ವರ್ತನೆಯಿಂದ ಸಂತೃಪ್ತನಾದ ಮಗ, ಸಂತಸದಿಂದ ಅಂದು ರಾತ್ರಿ ಎಲ್ಲರೂ ಡಿನ್ನರ್‌ಗೆ ಹೊರಗೆ ಹೋಗೋಣ ಎಂದಾಗ ಎಲ್ಲೆಡೆ ಖುಷಿ ಹರಡಿತು.

ಹಬ್ಬದ ತಯಾರಿಗಾಗಿ ಎಲ್ಲೆಡೆ ಶುಚಿ ಮಾಡಿಸುತ್ತಿದ್ದ ಚಿತ್ರಾ, ಒಮ್ಮೆ ಸ್ಟೂಲ್ ‌ಎಡವಿ ಬಿದ್ದುಬಿಟ್ಟಳು. ಅವಳ ಕಾಲಿಗೆ ಮಂಚದ ಅಂಚು ತಗುಲಿ ರಕ್ತ ಒಸರಿತು. ಚಿತ್ರಾಳನ್ನು ಓಡಿ ಬಂದು ಹಿಡಿದುಕೊಂಡ ಅತ್ತೆ, ತಾವೇ ನಿಧಾನವಾಗಿ ನಡೆಸಿಕೊಂಡು ಬಂದು ಮಂಚದ ಮೇಲೆ ಕೂರಿಸಿ, ನೆಲದ ಮೇಲೆ ಕುಳಿತು, ಸೊಸೆಯ ಕಾಲಿಗೆ ಬ್ಯಾಂಡೇಜ್‌ ಹಾಕಿದರು,

“ನೋಡಮ್ಮ, ಇವತ್ತಿನ ರಾತ್ರಿ ಅಡುಗೆ ಕೆಲಸ ನಂದು. ನೀನು ಸಂಪೂರ್ಣ ವಿಶ್ರಾಂತಿ ಪಡೆದುಕೊ,” ಎಂದು ಬಲವಂತವಾಗಿ ಮಲಗಿಸಿದರು. ಚಿತ್ರಾಳಿಗೆ ಅಮ್ಮನೇ ನೆರವಾದಂತೆ ಕಣ್ತುಂಬಿ ಬಂದಿತು.

ಸಂಜೆ 7 ಗಂಟೆಗೆ ಮನೆಗೆ ಬಂದ ಕಿರಣ್‌, ಹಾಲ್‌ನಲ್ಲಿ ಬ್ಯಾಂಡೇಜ್‌ ಸಮೇತ ಒರಗಿದ್ದ ಹೆಂಡತಿ ಮಗನಿಗೆ ಪಾಠದಲ್ಲಿ ಸಹಾಯ ಮಾಡುತ್ತಿದ್ದರೆ, ಅಮ್ಮ ಕಾಫಿ, ತಿಂಡಿ ತಂದದ್ದು ಕಂಡು ಬೆರಗಾದ.

“ಏನಮ್ಮ ಇದು? ಸೊಸೆ ಅತ್ತೆಗೆ ಸೇವೆ ಮಾಡಬೇಕು ಅಂತ  ಕೇಳಿದ್ದೀನಿ. ಇಲ್ಲಿ ನೀನು ನೋಡಿದರೆ ಟೊಂಕ ಕಟ್ಟಿ ಸೊಸೆಯ ಸೇವೆ ಮಾಡ್ತಿದ್ದೀ!” ಚಿತ್ರಾಳತ್ತ ತುಂಟನಗು ಬೀರುತ್ತಾ ಹೇಳಿದ.

ಎಲ್ಲರಿಗೂ ಕಾಫಿ ಕೊಟ್ಟು ತಾವು ಕಾಫಿ ಹೀರುತ್ತಾ ಹೇಳಿದರು ಅತ್ತೆ, “ಏ ಹೋಗೋ! ಏನೇನೋ ಹೇಳ್ತೀಯಾ ನೀನು. ಚಿತ್ರಾ ಸೊಸೆ ಅಲ್ಲ, ನನ್ನ ಮಗಳ ಸಮಾನ, ತಿಳೀತಾ? ನಾನು ಇವಳನ್ನು ಗಮನಸಿಕೊಂಡರೆ ತಪ್ಪೇನು?”

“ಅತ್ತೆ, ಮಗಳ ತರಹ ಅಂತ ಯಾಕಂತೀರಿ? ಮಗಳು ಅಂತಲೇ ಹೇಳಿ! ನಾನಂತೂ ನಿಮ್ಮನ್ನು ಅಮ್ಮ ಅಂತ್ಲೇ ಅಂದ್ಕೊಂಡಿದ್ದೀನಿ,” ಚಿತ್ರಾ ಹೇಳಿದಳು.

“ಹೌದಮ್ಮ, ನನಗೆ ಬರೀ ಇಬ್ಬರು ಗಂಡುಮಕ್ಕಳು, ಹೆಣ್ಣು ಮಕ್ಕಳಿಲ್ಲ ಅಂದುಕೊಳ್ತಿದ್ದೆ. ಇನ್ನು ಮುಂದೆ ನೀನೇ ನನ್ನ ಮಗಳು!” ಎಂದು ಅವಳ ತಲೆ ಮೇಲೆ ಕೈ ಇರಿಸಿ ಆಶೀರ್ವದಿಸಿದರು.

ಮನೆಯಲ್ಲಿ ಗಂಡಹೆಂಡತಿ ತಮಗೆ ಬೇಕಾದ್ದನ್ನೇ ಮಾಡುತ್ತಿದ್ದರು, ಆದರೆ ಅಮ್ಮನ ಅನುಮತಿ ಇಲ್ಲದೆ ಒಂದು ಹೆಜ್ಜೆ ಇಡುತ್ತಿರಲಿಲ್ಲ. ಎಲ್ಲದಕ್ಕೂ ಅಮ್ಮನಿಗೆ ಒಂದು ಮಾತು ಹೇಳಿ, ಅವರು `ಹ್ಞೂಂ’ ಎಂದ ಮೇಲೆಯೇ ಕೆಲಸ ಮುಂದುವರಿಯುತ್ತಿತ್ತು. ಇದರಿಂದ ಎಲ್ಲರಿಗೂ ತೃಪ್ತಿಯಾಗಿತ್ತು.

ಅತ್ತೆಯನ್ನು ಅಮ್ಮನಂತೆ ಆದರಿಸಿದ್ದರ ಪ್ರತಿಫಲವನ್ನು ಚಿತ್ರಾ ಕಣ್ಣಾರೆ ಕಂಡಳು. ಕಮಲಮ್ಮ ಎಂದೂ ಸೊಸೆ ಪಕ್ಷ ಬಿಟ್ಟುಕೊಡುತ್ತಿರಲಿಲ್ಲ. ಚಿತ್ರಾ ಸಹಜವಾಗಿಯೇ ಅತ್ತೆ ಪರ ವಾಲುತ್ತಿದ್ದಳು. ಒಟ್ಟಿನಲ್ಲಿ ಆ ಮನೆ ನೆಮ್ಮದಿಯ ಗೂಡಾಯಿತು.

ಹಬ್ಬದ ಹಿಂದಿನ ದಿನದಿಂದಲೇ ಅತ್ತೆ ಸೊಸೆ ಕೂಡಿ 4-5 ಬಗೆಯ ಭಕ್ಷ್ಯಗಳನ್ನು ತಯಾರಿಸಿದರು. ಈ ಬಾರಿಯ ದೀಪಾವಳಿಯಲ್ಲಿ ಏನೋ ವಿಶೇಷ ಇರಲಿದೆ ಎಂದು ದಂಪತಿಗಳು ಅಂದುಕೊಳ್ಳುತ್ತಿದ್ದರು. ಅದರ  ಹಿಂದಿನ ದಿನವಷ್ಟೇ ಮನೆ ಮಂದಿಗೆಲ್ಲ ಹೊಸ ಬಟ್ಟೆ, ಸಿಹಿ ಪ್ಯಾಕೆಟ್‌, ಪಟಾಕಿ ಎಲ್ಲಾ ತಂದಿದ್ದಾಯಿತು. ಅಣ್ಣ ಅತ್ತಿಗೆಗೆ ಕಳುಹಿಸಿ ಕೊಡಲೆಂದು ಸಹ ಕಿರಣ್‌ ಒಂದು ಜೊತೆ ಡ್ರೆಸ್‌ಹೆಚ್ಚಿಗೆ ಕೊಂಡಿದ್ದ.

ಇದರ ಕುರಿತಾಗಿಯೇ ಯೋಚಿಸುತ್ತಾ, ಮಗನ ಜೊತೆಗೂಡಿ ಸ್ಟಾರ್‌ ತಯಾರಿಸಿ, ಮನೆ ಮುಂದೆ ತೂಗುಬಿಟ್ಟ ಕಿರಣ್‌. ಅದರಲ್ಲಿ ವಿಶೇಷ ಬಗೆಯ ಬಣ್ಣದ ಬಲ್ಬ್ ಉರಿಯಲು, ಮಹಡಿಯಿಂದ ಇಳಿಬಿಟ್ಟ ಸೀರಿಯಲ್ ಸೆಟ್‌ ಬಲ್ಬ್ ಬೆಳಗಲು, ಇಡೀ ಮನೆಗೆ ಒಂದು ಅಪರೂಪದ ಕಳೆ ಬಂದಿತ್ತು. ನೀರು ತುಂಬುವ ಹಬ್ಬ ಸಂಭ್ರಮದಿಂದ ನಡೆಯಿತು. ಚಿತ್ರಾ ಮನೆ ಮುಂದೆ, ಚಂದದ ರಂಗೋಲಿ ಬಿಡಿಸಿ ಬಣ್ಣ ತುಂಬಿದ್ದಳು.

ಅಷ್ಟರಲ್ಲಿ ಕಿರಣನಿಗೆ ಕಾಲ್ ‌ಬಂತು. ಅಣ್ಣ ವರುಣ್‌ ಅಲ್ಲಿಂದ ಮಾತನಾಡುತ್ತಿದ್ದ. ಅಮ್ಮ ಈ ಬಾರಿ ಮಗಸೊಸೆಯರ ಮೇಲೆ ಮುನಿಸಿಕೊಂಡು ಬೆಂಗಳೂರಿಗೆ ಹೊರಟು ಬಿಟ್ಟಿದ್ದಾರೆಂದು ತಿಳಿಸಿದ. ಆ ಕುರಿತಾಗಿಯೇ ಚಿಂತಿಸುತ್ತಿದ್ದರು ಎಲ್ಲರಿಗೂ ಗೊತ್ತು, ಅತ್ತೆ ತಮ್ಮ ಹಿರಿಯ ಸೊಸೆ ಲಲಿತಾ ಬಳಿ ಮೊದಲಿನಿಂದಲೂ ಹಾರ್ದಿಕವಾಗಿ ಹೊಂದಿಕೊಂಡಿರಲಿಲ್ಲ. ಇದಕ್ಕೆ ಲಲಿತಾಳ ಸಿಡುಕು ಧೋರಣೆಯೇ ಮುಖ್ಯ ಕಾರಣ. ಹೇಗಾದರೂ ಅಮ್ಮನ ಬಳಿ ಬಂದು ಅವರ ಕ್ಷಮಾಪಣೆ ಕೇಳಬೇಕೆಂದು ವರುಣ್‌ ಬಯಸಿದ.

ಈಗಾಗಲೇ ಅವರು ಅಲ್ಲಿಂದ ಹೊರಟು ಮುಂಬೈಗೆ ಬಂದಿಳಿದಿದ್ದರು. ಮಾರನೇ ಬೆಳಗ್ಗೆ ಬೆಂಗಳೂರಿಗೆ ಬರುವವರಿದ್ದರು. ವಿಷಯ ತಿಳಿದು ಕಿರಣನಿಗೆ ಬಹಳ ಸಂತೋಷವಾಯಿತು.

ಸಂಭ್ರಮದಿಂದ ರಂಗೋಲಿಗೆ ಬಣ್ಣ ತುಂಬಿಸುತ್ತಿದ್ದ ಮಡದಿ ಬಳಿ ಬಂದು ನಿಂತ ಕಿರಣ್‌. “ಏನು….. ಬಹಳ ಖುಷಿಯಾಗಿದ್ದೀರಲ್ಲ?” ಕೇಳಿದಳು ಚಿತ್ರಾ.

ಅಸಲಿ ವಿಷಯ ಮುಚ್ಚಿರಿಸುತ್ತಾ ಕಿರಣ್‌ಹೇಳಿದ, “ಅತ್ತೆ ಸೊಸೆಯರ ಈ ಒಡನಾಟ ಕಂಡು ನನಗೆ ಬಹಳ ತೃಪ್ತಿ ಆಯ್ತು. ಇದಲ್ಲವೇ ನಿಜವಾದ ದೀಪಾವಳಿ ಆಚರಣೆ?”

“ಅದು ನಿಜ. ತುಂಬಾ ಹೊಗಳಬೇಡಿ. ನಮ್ಮಿಬ್ಬರ ಪ್ರೀತಿಗೆ ನಿಮ್ಮ ದೃಷ್ಟಿ ತಾಕೀತು,” ಎಂದು ಹಾಸ್ಯ ಮಾಡಿದಳು ಚಿತ್ರಾ.

ಮಾರನೇ ದಿನ ದೀಪಾವಳಿ ಹಬ್ಬಕ್ಕೆ ಎಲ್ಲರ ಅಭ್ಯಂಜನ ಮುಗಿದಿತ್ತು. ದೇವರಿಗೆ ತುಪ್ಪದ ದೀಪ ಹಚ್ಚಿ, ಎಲ್ಲರೂ ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಅತ್ತೆ ಸೊಸೆಯ ಕೈಗೆ ಒಂದು ಬಾಕ್ಸ್ ಕೊಡುತ್ತಾ, “ಇದನ್ನು ದೇವರ ಬಳಿ ಇಟ್ಟು ನಮಸ್ಕರಿಸಿ ಹಾಕ್ಕೋಳಮ್ಮ,” ಎಂದರು.

ಚಿತ್ರಾ ಅದನ್ನು ತೆರೆದು ನೋಡಿದರೆ ಅದು ವಜ್ರಖಚಿತ ರತ್ನಹಾರ! ಡಿಸೈನ್‌ ಬಹಳ ಅಪರೂಪದ್ದು. ಚಿತ್ರಾಳಿಗಂತೂ ಬಹಳ ಖುಷಿಯಾಯಿತು…..

“ಅತ್ತೆ…. ಇಷ್ಟೊಂದು ದುಬಾರಿ ಉಡುಗೊರೆಯೇ?” ಎಂದಳು.

“ಇದು ನಮ್ಮ ಮನೆತನದ ಒಡವೆ ಕಣಮ್ಮ. ನಮ್ಮತ್ತೆ ಇದನ್ನು ನನಗೆ ಕೊಟ್ಟಿದ್ದರು. ಇದು ನಿನಗೆ ನನ್ನ ಬಳುವಳಿ,” ಎಂದರು.

ಚಿತ್ರಾ ಸಂತಸದಿಂದ ಅದನ್ನು ಧರಿಸಿ ಎಲ್ಲರಿಗೂ ತೋರಿಸಿದಳು. ಅತ್ತೆಗೆಂದು ತಂದಿದ್ದ ಹಬ್ಬದ ಸೀರೆ ಕೊಟ್ಟಿದ್ದಾಯಿತು. ಆಗ ಹೊರಗಡೆ ಟ್ಯಾಕ್ಸಿ ಬಂದು ನಿಂತಂತೆ ಆಯಿತು. ಪಾಪು ಸಮೇತ ದಂಪತಿ ಹೊರಬಂದರು. ವರುಣ್‌, ಲಲಿತಾ ಅವರ ಮಗಳು ದೀಪಾ ಬಂದಿದ್ದರು! ಎಲ್ಲರ ಮುಖದಲ್ಲೂ ಸಂತೋಷದ ಅಲೆಗಳು!

“ಹ್ಯಾಪಿ ದೀಪಾವಳಿ!” ಎನ್ನುತ್ತಾ ಎಲ್ಲರೂ ಶುಭಾಶಯ ವಿನಿಮಯ ಮಾಡಿಕೊಂಡರು. ಒಳಗೆ ಬಂದು ನೋಡಿದರೆ ಅತ್ತೆ ಸೋಫಾ ಬಳಿ ಹೊಸ ಸೀರೆಯುಟ್ಟು ಕುಳಿತ್ತಿದ್ದರು.

ಹಿರಿಯ ಮಗ ಸೊಸೆ ಬಂದು ಮಗಳ ಸಮೇತ ಅತ್ತೆಯ ಕಾಲಿಗೆ ನಮಸ್ಕರಿಸಿ, ಶುಭಾಶಯ ಕೋರಿದರು. ಮಗ ಸೊಸೆಯರ ಕಂಗಳಲ್ಲಿದ್ದ ಪಶ್ಚಾತ್ತಾಪ ಗುರುತಿಸಿದ ಅತ್ತೆ, ಹೆಚ್ಚಿಗೇನೂ ಹೇಳದೆ ತುಂಬು ಹೃದಯದಿಂದ ಎಲ್ಲರನ್ನೂ ಆಶೀರ್ವದಿಸಿದರು.

ಹಿರಿಯ ಸೊಸೆಗೆ 2 ಜೊತೆ ಬಂಗಾರದ ಬಳೆ, ಮೊಮ್ಮಗಳ ಕುತ್ತಿಗೆಗೆ ಚೇನ್‌ ಹಾಕಿ ಸಂಭ್ರಮಿಸಿದರು. ಬಂದವರು ಎಲ್ಲರಿಗೂ ವಿದೇಶೀ ಸಿಹಿ ಹಂಚಿ, ಉಡುಗೊರೆಗಳನ್ನು ಕೊಟ್ಟರು. ಊರಿಗೆ ಕಳುಹಿಸಬೇಕಿದ್ದ ಉಡುಗೊರೆಗಳನ್ನು ಚಿತ್ರಾ ತಂದು ಅಲ್ಲೇ ಹಂಚಿದಳು.

ಸಂಭ್ರಮದ ಸಿಹಿಯೂಟ ಮುಗಿಸಿ ಎಲ್ಲರೂ ಮಧ್ಯಾಹ್ನ ವಿಶ್ರಾಂತಿ ಪಡೆದರು. ಸಂಜೆ ಅತ್ತೆಯ ನೇತೃತ್ವದಲ್ಲಿ ಸೊಸೆಯರಿಬ್ಬರೂ ಮನೆ ತುಂಬಾ ಹಣತೆ ಹಚ್ಚಿಟ್ಟು, ನಂದಾದೀಪ ಬೆಳಗಿದರು. ಮೊಮ್ಮಕ್ಕಳು ಖುಷಿಯಿಂದ ಹೂಕುಂಡ ಹಚ್ಚುತ್ತಿದ್ದರೆ, ಅಜ್ಜಿ ಅವರ ಜೊತೆ ಸಡಗರ ಸಂಭ್ರಮದಿಂದ ನಲಿಯುತ್ತಿದ್ದರು. ತುಂಬಿದ ಮನೆಯ ಈ ಹಬ್ಬದ ಆಚರಣೆ ಅಣ್ಣತಮ್ಮಂದಿರಿಗೆ ಅಪೂರ್ವವೆನಿಸಿತು. ಸೊಸೆಯರು ಅತ್ತೆ ಜೊತೆ ಫೋಟೋ ತೆಗೆಸಿದಾಗ, ಎಲ್ಲರೂ ಜೊತೆಗೂಡಿ ನಲಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ