ಕಥೆ - ವಿದ್ಯಾ ಶೇಖರ್
ಕಬ್ಬನ್‌ಪಾರ್ಕಿಗೆ ತನ್ನ ಮನೆಯವರ ಜೊತೆ ಬಂದಿದ್ದ ಸತೀಶ್‌ಗೆ ನೀತಾಳನ್ನು ಪುಟ್ಟ ರಾಹುಲ್ ಪರಿಚಯ ಮಾಡಿಸಿದ. ರಾಹುಲ್‌ನ ಜೊತೆ ಫುಟ್‌ಬಾಲ್ ಆಡುತ್ತಾ ಇಬ್ಬರೂ ಗೆಳೆಯರಾಗಿದ್ದರು. ಸ್ವಲ್ಪ ಹೊತ್ತಿನ ನಂತರ ಸತೀಶನ ಇಬ್ಬರು ಮಕ್ಕಳು ಸುರಭಿ ಮತ್ತು ಶಿಲ್ಪಾ ಕೂಡಾ ಆಟದಲ್ಲಿ ಸೇರಿಕೊಂಡರು.
ರಾಹುಲ್ ಅವರನ್ನು ತನ್ನ ತಾಯಿ ನೀತಾ ಮತ್ತು ಅಜ್ಜಿ ಸುಮಿತ್ರಾರಿಗೆ ಪರಿಚಯ ಮಾಡಿಸಲು ಕರೆದುಕೊಂಡು ಹೋದ. ಶಿಲ್ಪಾ ತನ್ನ ತಾಯಿ ಮೀನಾಳನ್ನು ತಮ್ಮ ಬಳಿ ಬರುವಂತೆ ಕರೆದಳು. ಮೂವರು ಮಕ್ಕಳು ಹಣ್ಣು ತಿಂದು ಮತ್ತೆ ಆಟವಾಡಲು ಓಡಿದರು. ದೊಡ್ಡವರು ತಿಂಡಿ ತಿನ್ನುತ್ತಾ ತಮ್ಮ ಪರಿಚಯವನ್ನು ಹೆಚ್ಚಿಸಿಕೊಳ್ಳುತ್ತಾ ಮಾತಿನಲ್ಲಿ ಮಗ್ನರಾದರು.
ಆ ದಿನದ ಈ ಪ್ರಥಮ ಭೇಟಿಯು 30 ವರ್ಷದ ವಿಧವೆ ನೀತಾ ಮತ್ತು 38 ವರ್ಷದ ಸತೀಶನ ನಡುವೆ ಭದ್ರವಾದ ಪ್ರೇಮ ಸಂಬಂಧಕ್ಕೆ ಕಾರಣವಾಗುತ್ತದೆಂದು ಯಾರಿಗೂ ತಿಳಿದಿರಲಿಲ್ಲ.
ಇದು ಮೊದಲ ನೋಟದಲ್ಲಿ ಪ್ರೇಮ ಉಂಟಾಗುವ ವಿಷಯವಾಗಿರಲಿಲ್ಲ. ಪರಸ್ಪರ ಇಷ್ಟವಾಗಲು ಸ್ನೇಹದಲ್ಲಿ ಬದಲಾಗಲು ಬಹಳ ಸಮಯ ತೆಗೆದುಕೊಂಡಿತು.
ರಾಹುಲ್‌ನಿಗೆ ಧೂಳಿನ ಅಲರ್ಜಿ ಆಗಾಗ ಕಾಡುತ್ತಿತ್ತು. ಅವನಿಗೆ ತನ್ನ ಬಾಲ್ಯದ ಗೆಳೆಯ ಡಾ. ಅರುಣನ ಬಳಿ ಚಿಕಿತ್ಸೆ ಕೊಡಿಸುವ ಜವಾಬ್ಧಾರಿಯನ್ನು ಸತೀಶ ಅಂದೇ ವಹಿಸಿಕೊಂಡಿದ್ದ. ನೀತಾ ಮತ್ತು ಸತೀಶ್ ಭೇಟಿಯಾಗುವುದು ಈ ರೀತಿ ಆರಂಭವಾಯಿತು.
ಮೂರು ವರ್ಷಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಪತಿ ಸಾವಿಗೀಡಾದ ನಂತರ ನೀತಾ ಮರುಮದುವೆಯಾಗುವುದಿಲ್ಲವೆಂದು ನಿರ್ಧರಿಸಿದ್ದಳು. ಆದರೆ ಒಳ್ಳೆ ಮನಸ್ಸಿನ ನಂಬಿಕೆಗೆ ಅರ್ಹನಾದ ಪುರುಷ ಮಿತ್ರನ ಅಗತ್ಯವನ್ನು ಅವಳ ಮನಸ್ಸು ಕಂಡುಕೊಂಡಿತ್ತು. ಈಗ ಸತೀಶನ ಸ್ನೇಹವಾದ ಮೇಲೆ ಪ್ರತಿ ಭೇಟಿಯಲ್ಲೂ, ಅವಳು ಮನಸ್ಸು ಬಿಚ್ಚಿ ಮಾತನಾಡತೊಡಗಿದಳು.
ಸತೀಶ ಕುಟುಂಬದ ಜವಾಬ್ದಾರಿಗಳನ್ನು ಹೊರುತ್ತಾ ಯಾಂತ್ರಿಕ ಜೀವನ ನಡೆಸುತ್ತಿದ್ದ. ಆಫೀಸಿನಲ್ಲೂ ಒಂದಲ್ಲ ಒಂದು ಸಮಸ್ಯೆ ಬಾಯ್ದೆರೆದುಕೊಂಡು ನಿಲ್ಲುತ್ತಿತ್ತು. ಸಹಾನುಭೂತಿ ತೋರುವವರೂ ಇರಲಿಲ್ಲ. ಧನ್ಯವಾದಗಳನ್ನು ಹೇಳುವವರೂ ಇರಲಿಲ್ಲ. ಎಲ್ಲಾ ಆಸೆಗಳು ಮನದಾಳದಲ್ಲಿ ಹೂತು ಹೋಗಿದ್ದವು. ಎಷ್ಟೊ ಸಲ ಮೀನಾ ಪಕ್ಕದಲ್ಲಿದ್ದರೂ ತಾನು ಒಂಟಿ ಎಂಬ ಭಾವನೆಯಿಂದ ಅವನು ಉದಾಸನಾಗುತ್ತಿದ್ದ.
ನೀತಾ ಮತ್ತು ಸತೀಶ್ ಭೇಟಿಯಾಗುತ್ತಿದ್ದಂತೆ ಉತ್ಸಾಹ, ಉಲ್ಲಾಸದಿಂದ ನಗುತ್ತಾ ಮಾತನಾಡತೊಡಗುತ್ತಿದ್ದರು.``ನೀನು ಬಹಳ ತಿಳಿವಳಿಕೆಯುಳ್ಳ ಧೈರ್ಯವಂತ ಮಹಿಳೆ,'' ಸತೀಶ್ ಆಗಾಗ ನೀತಾಳನ್ನು ಹೊಗಳುತ್ತಿದ್ದ.
``ನಿಮ್ಮ ಮನಸ್ಸಲ್ಲಿ ನನ್ನ ಬಗ್ಗೆ ಎಷ್ಟು ಆತ್ಮೀಯತೆ ಇದೆ! ನೀವು ನಮ್ಮ ಜೊತೆ ನಿಂತಿದ್ದಕ್ಕೆ ನಿಮಗೆ ಅನಂತ ಅನಂತ ಧನ್ಯವಾದಗಳು,'' ನೀತಾಳ ಇಂತಹ ಮಾತುಗಳು ಅವನಲ್ಲಿ ಆತ್ಮವಿಶ್ವಾಸ ಹುಟ್ಟಿಸುತಿದ್ದವು. ಭೇಟಿಯಾದ 6 ತಿಂಗಳಲ್ಲಿ ಇಬ್ಬರೂ ಸ್ನೇಹದ ಎಲ್ಲೆ ದಾಟಿ ಪ್ರೇಮಿಗಳಾದರು. ಅಂದು ರಾಹುಲ್‌ನನ್ನು ಕರೆದುಕೊಂಡು ಅವನ ಅಜ್ಜಿ ಸುಮಿತ್ರಾ ತನ್ನ ಗೆಳತಿಯ ಮನೆಗೆ ಹೋಗಿದ್ದಳು. ಅವರಿಬ್ಬರೂ ಇಲ್ಲದಿದ್ದುದರಿಂದ ಮೊದಲ ಸಲ ನೀತಾ ಮತ್ತು ಸತೀಶ್ ವಿಚಿತ್ರ ಅಶಾಂತಿಯ ಭಾವ ಅನುಭವಿಸಿದರು.
ಸಂಬಂಧದಲ್ಲಿ ಹೊಸ ತಿರುವು ಮೂಡಲು ಮೊದಲು ಕಾರಣನಾದವನು ಸತೀಶ್. ಹತ್ತಿರದಲ್ಲಿ ಕುಳಿತಿದ್ದ ನೀತಾಳ ಕೈಯನ್ನು ತನ್ನ ಕೈಗಳಲ್ಲಿ ತೆಗೆದುಕೊಂಡು ಭಾವುಕನಾಗಿ, ``ನೀತಾ, ನಾನೀಗ ನಿನಗೆ ಏನು ಹೇಳಲು ಹೊರಟಿದ್ದೀನೋ ಅದು ತಪ್ಪು ಅಂತ ನನ್ನ ಮನಸ್ಸಿನ ಒಂದು ಭಾಗ ಹೇಳುತ್ತಿದೆ. ಅದರೆ ನನ್ನ ಮನದ ಮಾತನ್ನು ಹೇಳಬೇಕು. ನಾನು ನಿನ್ನನ್ನು ಬಹಳ ಪ್ರೀತಿಸುತ್ತಿದ್ದೇನೆ..''