ಗಂಡಹೆಂಡತಿಯ ಮಧುರ ಸಂಬಂಧ ಕೇವಲ ದಾಂಪತ್ಯಕ್ಕಷ್ಟೇ ಅಗತ್ಯವಿಲ್ಲ, ಕುಟುಂಬದ ಹಿತಕ್ಕೂ ಅಗತ್ಯ. ಮಕ್ಕಳು ಮಾತು ಕಲಿಯುವುದು, ನಯವಿನಯ ರೂಢಿಸಿಕೊಳ್ಳುವುದು, ಸಮತೋಲನ ವ್ಯವಹಾರ, ಹೊಂದಾಣಿಕೆ ಇವನ್ನೆಲ್ಲ ಕಲಿತುಕೊಳ್ಳುವುದು ಮನೆ ಎಂಬ ಶಾಲೆಯಿಂದಲೇ. ಯಾವ ದಂಪತಿಗಳ ವೈವಾಹಿಕ ಜೀವನ ಖುಷಿಯಿಂದ ಕೂಡಿರುತ್ತದೋ, ಆ ಕುಟುಂಬದಲ್ಲಿ ಮಕ್ಕಳು ಒಳ್ಳೆಯ ಗುಣಗಳನ್ನು ರೂಢಿಸಿಕೊಳ್ಳುತ್ತಾರೆ. ನೀವು ನಿಮ್ಮ ಪರಂಪರೆಯನ್ನು ಮಕ್ಕಳಿಗೆ ಉಡುಗೊರೆಯಾಗಿ ಕೊಟ್ಟಿದ್ದೀರಾ? ನೀವೊಬ್ಬ ಗೃಹಿಣಿಯೇ? ಮುದ್ದು ಮಕ್ಕಳ ತಾಯಿ ಕೂಡ ಹೌದೆ? ಹಾಗಾದರೆ ನೀವು ಮಕ್ಕಳಿಗೆ ನೆಮ್ಮದಿಯ ಭವಿಷ್ಯ ಕಲ್ಪಿಸಬೇಕೆಂದು ಇಚ್ಛಿಸುತ್ತೀರಿ ಅಲ್ಲವೇ? ಇದರ ಸರಿಯಾದ ವಿಧಾನ ಯಾವುದು ಎಂದು ನಿಮಗೇನಾದರೂ ಗೊತ್ತೆ? ಮಕ್ಕಳ ಜೀವನ ಸುಖವಾಗಿರಬೇಕು ಎಂದರೆ ತಂದೆ ತಾಯಿಯ ಪರಸ್ಪರ ಸಂಬಂಧ ಅನ್ಯೋನ್ಯವಾಗಿರಬೇಕು.

ಗಂಡಹೆಂಡತಿ ನಡುವೆ ಎಷ್ಟು ಹೆಚ್ಚು ಪ್ರೀತಿ ಮತ್ತು ಗೌರವ ಇರುತ್ತದೋ, ನಿಮ್ಮ ವೈವಾಹಿಕ ಜೀವನ ಕೂಡ ಅಷ್ಟೇ ಸುಖಮಯವಾಗಿ ಕಳೆಯುತ್ತದೆ. ಅಂದಹಾಗೆ ಮಕ್ಕಳು ಎಲ್ಲವನ್ನೂ ಕಲಿಯುವುದು ನಿಮ್ಮಿಂದಲೇ ಅಲ್ಲವೇ? ದಾಂಪತ್ಯದಲ್ಲಿ ಮಾಧುರ್ಯ ಬೆರೆಸಲು ಇಲ್ಲಿವೆ ಕೆಲವು ಸುಲಭ ವಿಧಾನಗಳು……

ಮದುವೆಗೆ ಕೊಡಿ ಪ್ರಾಮುಖ್ಯತೆ

ದಾಂಪತ್ಯ ಜೀವನಕ್ಕೆ ಪ್ರಾಶಸ್ತ್ಯ ಕೊಡಬೇಕೆನ್ನುವುದು ಸದಾ ನಿಮ್ಮ ಗಮನದಲ್ಲಿರಬೇಕು. ಈ ನಿಟ್ಟಿನಲ್ಲಿ ಸಣ್ಣ ತಪ್ಪಾದರೂ ನಿಮ್ಮ ಪ್ರಯತ್ನ ವಿಫಲವಾಗುತ್ತದೆ. ಚಿಕ್ಕಪುಟ್ಟ ಸಮಸ್ಯೆಗಳಿದ್ದಾಗ ಪರಸ್ಪರರ ಪರ ವಹಿಸಿ, ಪ್ರೀತಿ ತೋರಿಸಿ. ಗಂಡ ಆಫೀಸ್‌ಗೆ ಹೊರಟು ನಿಂತಾಗ ಅವನು ಹೋಗುವ ತನಕ ಬೇರೆ ಕೆಲಸಗಳಲ್ಲಿ ಮಗ್ನರಾಗಬೇಡಿ. ಗಂಡ ಕೂಡ ಆಗಾಗ ಸಂದರ್ಭ ಇರಲಿ, ಬಿಡಲಿ ಹೆಂಡತಿಗೆ ಯಾವುದಾದರೊಂದು ಉಡುಗೊರೆ ಕೊಡಬೇಕು. ಇದರಿಂದ ಮಕ್ಕಳಿಗೆ ಗಂಡಹೆಂಡತಿ ಇರುವುದೇ ಪರಸ್ಪರರಿಗಾಗಿ ಎಂಬ ಸಂದೇಶ ಸಿಗುತ್ತದೆ.

ಖಾಸಗಿ ಕ್ಷಣಗಳಿಗೂ ಅವಕಾಶ

ಮಕ್ಕಳು ಹುಟ್ಟಿದ ಬಳಿಕ ಖಾಸಗಿ ಬದುಕು ಮುಗಿದೇ ಹೋಯಿತೆಂದು ಭಾವಿಸಬಾರದು. ಗಂಡ ಆಫೀಸ್‌ನಿಂದ ಮನೆಗೆ ಬಂದ ಬಳಿಕ ಮಕ್ಕಳ ಜೊತೆಗೆ ಸಮಯ ಕಳೆದ ಬಳಿಕ 10-15 ನಿಮಿಷ ನಿಮ್ಮಿಬ್ಬರಿಗಾಗಿಯೂ ಕಾಯ್ದಿರಿಸಿಕೊಳ್ಳಿ. ಮಕ್ಕಳಿಗೂ ಕೂಡ ಸ್ಪಷ್ಟವಾಗಿ ಇದು ಅಮ್ಮ ಅಪ್ಪನಿಗಾಗಿ ಮೀಸಲಾದ ಸಮಯ ಎನ್ನುವುದನ್ನು ಸ್ಪಷ್ಟಪಡಿಸಿ. ಆ ಸಮಯದಲ್ಲಿ ನಿಮ್ಮಿಬ್ಬರಿಗೆ ಸಂಬಂಧಪಟ್ಟ ವಿಷಯಗಳನ್ನಷ್ಟೇ ಮಾತನಾಡಿ. ಮಕ್ಕಳಿಗೂ ಕೂಡ ನಿಮ್ಮದೇ ಆದ ನಿಗದಿತ ಸಮಯದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ಆಗಾಗ ಹೊರಗೆ ಹೋಗಿ

ಗಂಡ ಹೆಂಡತಿ ಜೊತೆ ಜೊತೆಗೆ ಸಮಯ ಕಳೆಯುವುದು ವೈವಾಹಿಕ ಜೀವನಕ್ಕೆ ಹೊಸ ಸ್ಛೂರ್ತಿ ತಂದುಕೊಡುತ್ತದೆ. ಮಕ್ಕಳು ಬಂದ ಬಳಿಕ, ಜವಾಬ್ದಾರಿಗಳಡಿ ನಲುಗಿ ಖಾಸಗಿ ಕ್ಷಣಗಳನ್ನು ಮರೆಯಬೇಡಿ. ಮಕ್ಕಳ ಜವಾಬ್ದಾರಿಯನ್ನು ಆಗಾಗ ಬೇರೆಯವರಿಗೆ ವಹಿಸಿ ಹೊರಗೆ ಹೋಗಿ ಬನ್ನಿ.

ನಿಮಗೆ ಖರ್ಚಿನ ಹೊರೆ ಎನಿಸಿದರೆ ಹಾಗೆಯೇ ಸುಮ್ಮನೇ ಒಂದು ಕಡೆ ಹೋಗಿ ನಿಮಗೆ ಇಷ್ಟವಾದದ್ದನ್ನು ತಿಂದು ಬನ್ನಿ. ಬುಕ್‌ಸ್ಟೋರ್‌ಗೆ ಹೋಗಿ ನಿಮಗೆ ಇಷ್ಟವಾದ ಪುಸ್ತಕವನ್ನು ಆಯ್ಕೆ ಮಾಡಿಕೊಳ್ಳಿ. ತಿಂಗಳಿಗೆ ಅಥವಾ ಎರಡು ತಿಂಗಳಿಗೆ ಒಮ್ಮೆಯಾದರೂ ಒಂದು ಸಲ ಎಲ್ಲಿಯಾದರೂ ದೂರ ಒಂದು ರಾತ್ರಿ ಕಳೆದುಬನ್ನಿ. ಇದು ದಂಪತಿಗಳ ವೈವಾಹಿಕ ಜೀವನಕ್ಕೆ ಹೊಸ ವ್ಯಾಖ್ಯೆ  ನೀಡುತ್ತದೆ.

ಟಿ.ವಿ. ಸಂಗ ತೊರೆಯಿರಿ

ಸಂಜೆ ಆಗುತ್ತಿದ್ದಂತೆ ನೀವು ಟಿವಿಗೆ ಅಂಟಿಕೊಂಡು ಕುಳಿತುಕೊಳ್ಳುವವರಾಗಿದ್ದಲ್ಲಿ, ಈ ನಿಮ್ಮ ರೊಟೀನ್‌ ಬದಲಿಸಿಕೊಳ್ಳಿ. ನಿಮ್ಮ ಈ ಅಭ್ಯಾಸ ದಾಂಪತ್ಯ ಜೀವನದಲ್ಲಿ ನೀರಸತೆಯನ್ನು ತುಂಬುತ್ತದೆ. ಟಿ.ವಿ. ನೋಡುವುದಕ್ಕಿಂತ ಯಾವುದಾದರೂ ಹವ್ಯಾಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಒಳ್ಳೆಯ ಪುಸ್ತಕಗಳನ್ನು ಓದಿ, ಅವುಗಳ ಬಗ್ಗೆ ಚರ್ಚೆ ಮಾಡಿ. ಊಟದ ಬಳಿಕ ಒಂದಷ್ಟು ಹೊತ್ತು ಸುತ್ತಾಡಿ ಬನ್ನಿ. ಇದು ನಿಮ್ಮಲ್ಲಿ ಆತ್ಮೀಯತೆ ತುಂಬುತ್ತದೆ. ಮಕ್ಕಳಿಗೆ ಅಪ್ಪ ಅಮ್ಮ ಊಟದ ನಂತರ ಸುತ್ತಾಡಿ ಬರುತ್ತಾರೆ ಎಂಬ ಸಂದೇಶ ರವಾನೆಯಾಗುತ್ತದೆ. ಗಂಡ ದಿನಕ್ಕೊಮ್ಮೆಯಾದರೂ ಆಯಾ ದಿನದ ಚಟುವಟಿಕೆಗಳ ಬಗ್ಗೆ ಫೋನ್‌ನಲ್ಲಿ ಕೇಳಿ ತಿಳಿದುಕೊಳ್ಳುವುದು ಒಳ್ಳೆಯದು. ಪ್ರತಿಯೊಂದು ಕ್ಷಣ ನೆನಪಿಸಿಕೊಳ್ಳಿ ಪ್ರತಿದಿನ ಗಂಡಹೆಂಡತಿ ಜೊತೆ ಜೊತೆಗೆ ಕಳೆಯುವುದು ಸಾಧ್ಯವಿಲ್ಲ. ಆದರೆ ಎಡೆಬಿಡದ ಕೆಲಸಗಳ ನಡುವೆಯೂ ಪರಸ್ಪರರ ಬಗೆಗಿನ ಕಾಳಜಿಯನ್ನು ತೋರಿಸಿಕೊಳ್ಳಬಹುದು. ಗಂಡ ಯಾವುದೊ ಪ್ರಾಜೆಕ್ಟ್ ನಲ್ಲಿ ಮಗ್ನನಾಗಿದ್ದರೆ ಅವನು ಬಿಡುವಿರುವ ಸಮಯ ನೋಡಿಕೊಂಡು ಒಂದೆರಡು ನಿಮಿಷ ಫೋನ್‌ನಲ್ಲಿ ಮಾತನಾಡಬಹುದು. ಇದು ಪರಸ್ಪರರ ಬಗೆಗಿನ ಗೌರವವನ್ನು ಮಕ್ಕಳಲ್ಲಿ ಬಿಂಬಿಸುತ್ತದೆ.

ಒಳ್ಳೆಯದನ್ನು ಗುರುತಿಸಿ ಸ್ವಲ್ಪ ಯೋಚಿಸಿ. ನಿಮ್ಮ ಸಂಗಾತಿಯಲ್ಲಿ ಬೇರೆಯವರಿಗಿಂತ ಭಿನ್ನವಾದ ವಿಶೇಷಗಳಿವೆ. ಅವುಗಳಲ್ಲಿ ಯಾವ ವಿಶೇಷತೆಯು ನಿಮ್ಮ ಮನೆಯನ್ನು ಖುಷಿಯಿಂದಿಡಲು ಸಹಾಯಕವಾಗಿದೆ ಎಂಬುದನ್ನು ಅರಿತುಕೊಂಡು ಸಂಗಾತಿಗೆ ಥ್ಯಾಂಕ್ಸ್ ಹೇಳಿ. ಮಕ್ಕಳ ಎದುರಿಗೆ ಸಂಗಾತಿಯ ಒಳ್ಳೆಯತನದ ಚರ್ಚೆ ಮಾಡಿದರೆ ಮಕ್ಕಳಿಗೆ ಬಹಳ ಖುಷಿಯಾಗುತ್ತದೆ. ಸಂಗಾತಿಯ ಜೊತೆಗೆ ಕೇರಂ, ಚೆಸ್‌ ಮುಂತಾದ ಆಟಗಳನ್ನು ಆಡಬಹುದು. ಅದರಲ್ಲಿ ಮಕ್ಕಳನ್ನು ಸೇರಿಸಿಕೊಳ್ಳಬಹುದು. ಇವೆಲ್ಲ ಕುಟುಂಬದಲ್ಲಿ ಒಮ್ಮತ ಮೂಡಿಸಲು ನೆರವಾಗುತ್ತವೆ.

ಹೊಸತನ ನಿರಂತರವಾಗಿರಲಿ

ಪ್ರತಿಯೊಂದು ಹಳೆಯ ಸಂಗತಿಯಲ್ಲಿ ತಾಜಾತನ ಹೊರಟುಹೋದಂತೆ ಭಾಸವಾಗುತ್ತದೆ. ನಿಮ್ಮ ಪ್ರೀತಿಯಲ್ಲಿ ಸದಾ ತಾಜಾತನ ಇಣುಕುತ್ತಿರಲಿ. ನಿಮ್ಮ ವೈವಾಹಿಕ ಜೀವನ ಶುರುವಾದ ಜಾಗಕ್ಕೆ ಮತ್ತೊಮ್ಮೆ ಹೋಗಿ ಬನ್ನಿ. ಆ ಪಾರ್ಕ್‌ ಅಥವಾ ರೆಸ್ಟೋರೆಂಟ್‌ಗೆ ಹೋಗಿ ಒಂದಷ್ಟು ಹೊತ್ತು ಕಳೆದುಬಂದರೆ ನಿಮ್ಮ ಮಧುರ ನೆನಪುಗಳು ನಿಮ್ಮನ್ನು ಖುಷಿಯಲ್ಲಿ ತೇಲುವಂತೆ ಮಾಡುತ್ತವೆ.

ಮತ್ತೊಮ್ಮೆ ಹೊರಡಿ…..

ಮದುವೆಯಾಗಿ 5-6 ವರ್ಷಗಳಾದರೇನಾಯಿತು? ಮತ್ತೊಮ್ಮೆ ಹನಿಮೂನ್‌ಗೆ ಹೊರಡಿ. ಮಕ್ಕಳನ್ನು ಅಜ್ಜಿತಾತನ ಸುಪರ್ದಿಗೆ ಒಪ್ಪಿಸಿ. ಜವಾಬ್ದಾರಿಗಳನ್ನು ಮರೆತು ಒಂದಷ್ಟು ದಿನ ಖುಷಿಯಾಗಿ ಇದ್ದು ಬನ್ನಿ. ಒಮ್ಮೆಲೇ ಹಲವು ದಿನ ಹೋಗಲು ಸಾಧ್ಯ ಇಲ್ಲದಿದ್ದರೆ ವಾರಾಂತ್ಯದಲ್ಲಾದರೂ ಮನೆಯಿಂದ ಹೊರಗೆ ಇರಿ. ನೀವು ನಿಮ್ಮ ನಗರದಲ್ಲಿಯೇ ಇದ್ದರೂ ಬೇರೊಂದು ಕಡೆ ವಾಸ್ತವ್ಯ ಮಾಡಿ ಬನ್ನಿ. ಆ ರಾತ್ರಿ ಮನೆಯ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಲೇಬೇಡಿ. ಆಗ ನೋಡಿ ನಿಮ್ಮ ದಾಂಪತ್ಯ ಜೀವನ ಮತ್ತೆ ಚಿಗುರೊಡೆಯುತ್ತದೆ.

ಕನಸು ಗುರಿ ನಿರ್ಧರಿಸಿ

ವರ್ಷದಲ್ಲಿ ಒಂದು ಸಲ ನೀವು ಗಂಡ ಹೆಂಡತಿ ಎಲ್ಲಿಯಾದರೂ ಹೊರಗೆ ಹೋಗಿ ನಿಮ್ಮ ಕನಸು ಹಾಗೂ ಗುರಿಗಳ ಬಗ್ಗೆ ಚರ್ಚಿಸಿ. ಅದಕ್ಕಾಗಿ ಹೊಸ ವರ್ಷದ ಮೊದಲ ದಿನ, ನಿಮ್ಮ ವಿವಾಹ ವಾರ್ಷಿಕೋತ್ಸವದ ದಿನ ಅಥವಾ ಯಾವುದಾದರೂ ವಿಶೇಷ ದಿನದಂದು ನಿಮ್ಮ ಈ ಚರ್ಚೆ ನಡೆಯಲಿ. ಇಷ್ಟು ವರ್ಷ ಕಳೆದುಕೊಂಡದ್ದೇನು? ಪಡೆದುಕೊಂಡದ್ದೇನು? ಎಂಬುದರ ಬಗೆಗೂ ಚರ್ಚೆ ನಡೆಸಿ. ನಿಮ್ಮ ಭವ್ಯ ಭವಿಷ್ಯತ್ತಿಗಾಗಿ ಸುಂದರ ಕನಸನ್ನು ಹೆಣೆಯಿರಿ. ನಿಮ್ಮ ಈ ವಿಶಿಷ್ಟ ನಡೆಯ ಬಗ್ಗೆ ಮಕ್ಕಳೂ ಕೂಡ ತಿಳಿದುಕೊಳ್ಳುತ್ತಾರೆ.

ಯಾವುದು ಪ್ರೀತಿಯಿಂದ ಸಾಗುತ್ತದೋ ಅದೇ ಜೀವನ. ಇದೇ ತತ್ವದನ್ವಯ ಮಕ್ಕಳ ಮುಂದೆ ಆದರ್ಶ ಜೀವನ ರೂಪಿಸಿಕೊಳ್ಳಿ.

– ಪ್ರೇಮಲತಾ  

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ