ಪುಟ್ಟ ಜ್ಯೋತಿ ಉದಾಸಳಾಗಿ ಕುಳಿತಿದ್ದಳು. ಅಂದು ಶಾಲೆಯ ಓಟದ ಸ್ಪರ್ಧೆಯಲ್ಲಿ ಓಡುವಾಗ ಅವಳು ಬಿದ್ದುಬಿಟ್ಟಳು. ಅದರಿಂದಾಗಿ ಅವಳು ಆ ಸ್ಪರ್ಧೆಯಿಂದ ಹೊರಗುಳಿಯಬೇಕಾಯಿತು. ಅವಳ ಸಹಪಾಠಿಗಳು ಅವಳನ್ನು ತಮಾಷೆ ಮಾಡಿ ನಕ್ಕಿದ್ದರು.

ಅಷ್ಟರಲ್ಲಿ ಅಮ್ಮ ಬಂದು, “ಜ್ಯೋತಿ, ಬಿದ್ದುಬಿಟ್ಟೆಯಾ…? ಇರಲಿ ಬಿಡು. ಆದರೆ ಹೀಗೆ ಸೋತವರಂತೆ ಕೊರಗುತ್ತಾ ಕೂರಬಾರದು. ನೀನು ಧೈರ್ಯಶಾಲಿ ಮುಂದಿನ ಸಲ ಗೆದ್ದೇ ಗೆಲ್ತೀಯಾ….” ಎಂದರು. ಈ ಮಾತುಗಳು ಅವಳಲ್ಲಿ ಹೊಸ ಉತ್ಸಾಹವನ್ನು ತುಂಬಿದವು. ಆ ಬಳಿಕ ಅವಳು ತನ್ನ ಅಭ್ಯಾಸವನ್ನು ಪುನರಾರಂಭಿಸಿದಳು.

ಎಸ್‌.ಎಸ್‌.ಎಲ್.ಸಿ. ಪರೀಕ್ಷೆ ಫಲಿತಾಂಶ ಬಂದಾಗ ಮಹೇಶ್‌ ಬಹಳ ದುಃಖಿತನಾಗಿದ್ದ. ಶೇ.90ಕ್ಕಿಂತ ಹೆಚ್ಚು ಅಂಕಗಳು ಬರಬಹುದು ಎಂದು ಅವನು ನಿರೀಕ್ಷಿಸಿದ್ದ. ಆದರೆ ಅದಕ್ಕೂ ಕಡಿಮೆ ಅಂಕಗಳು ಬಂದು ಅವನು ನಿರಾಶೆಯಲ್ಲಿ ಮುಳುಗುವಂತೆ ಮಾಡಿತು. ಅಪ್ಪ ಅಮ್ಮನ ಆಸೆ ಆಕಾಂಕ್ಷೆಗಳನ್ನು ಈಡೇರಿಸದಿರುವ ಖೇದ ಅವನನ್ನು ಕಾಡುತ್ತಿತ್ತು. ಅವನು ಹತಾಶೆಯ ಸುಳಿಯಲ್ಲಿ ಸಿಲುಕಿದ್ದ.

ಅಷ್ಟರಲ್ಲಿ ಅವನ ತಾತ ಮನೆಗೆ ಬಂದರು. ತನ್ನ ಕೋಣೆಯಲ್ಲಿ ಉದಾಸನಾಗಿ ಕುಳಿತಿದ್ದ ಮಹೇಶನ ಭುಜದ ಮೇಲೆ ಕೈ ಇಟ್ಟು ಹೀಗೆ ಏಕಾಂತದಲ್ಲಿ ದುಃಖಿಸುತ್ತಾ ಕುಳಿತಿರಲು ಕಾರಣವೇನೆಂದು ಕೇಳಿದಾಗ, ತನಗೆ ನಿರೀಕ್ಷಿಸಿದಷ್ಟು ಅಂಕಗಳು ಬರದೇ ಇರುವ ಕಾರಣ ಹೇಳಿ ತಾತನನ್ನು ಬಾಚಿ ತಬ್ಬಿಕೊಂಡ. ಅಷ್ಟೇ ಅಲ್ಲ, ತನಗೀಗ ಬದುಕುವ ಆಸೆಯೇ ಉಳಿದಿಲ್ಲ ಎಂದು ಹೇಳಿದ.

ಮಹೇಶನ ಮಾತು ಕೇಳಿ ತಾತನಿಗೆ ಆಶ್ಚರ್ಯವಾಯಿತು. ನಂತರ ಅವರು, “ನಿನಗೆ ಶೇ.82 ಮಾರ್ಕ್ಸ್ ಬಂದಿದೆ ಎಂದು ತಿಳಿದು ನಿನ್ನನ್ನು ಅಭಿನಂದಿಸಲೆಂದೇ ನಾನು ಫೋನ್‌ ಮಾಡದೆಯೇ ಬಂದುಬಿಟ್ಟೆ. ಆದರೆ ನೀನು ಈ ರೀತಿ ಕುಳಿತಿರುವುದು ನನಗೆ ಆಶ್ಚರ್ಯವನ್ನುಂಟು ಮಾಡುತ್ತಿದೆ. ಮಗು, ನೀನು ಒಳ್ಳೆಯ ಮಾರ್ಕ್ಸ್ ಪಡೆದಿರುವೆ. ನಮಗೆಲ್ಲರಿಗೂ ನಿನ್ನ ಬಗ್ಗೆ ಹೆಮ್ಮೆ ಇದೆ. ಇನ್ನೆಂದೂ ಈ ರೀತಿಯ ವಿಚಾರವನ್ನು ಮನದಲ್ಲೂ ತರಬೇಡ,” ಎಂದು ಹೇಳಿದರು.

ತಾತನ ಸ್ಛೂರ್ತಿ ತುಂಬಿದ ಹೊಗಳಿಕೆಯ ಮಾತುಗಳು ಅವನಲ್ಲಿ ಹೊಸ ಉತ್ಸಾಹವನ್ನೇ ತುಂಬಿದವು. ಆ ಬಳಿಕ ಅವನು ಸಕಾರಾತ್ಮಕ ದೃಷ್ಟಿಕೋನದಿಂದ ಮುನ್ನಡೆಯತೊಡಗಿದ. ಒಂದು ವೇಳೆ ಅವನ ಆ ಸಂಕಷ್ಟದ ಸಮಯದಲ್ಲಿ ತಾತ ಬರದೇ ಹೋಗಿದ್ದರೆ, ಮಹೇಶ ಅದೆಷ್ಟು ನಿರಾಶೆ ಹತಾಶೆಯಲ್ಲಿ ಮುಳುಗಿರುತ್ತಿದ್ದನೋ ಏನೋ? ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಯೂ ಇತ್ತು.

“ಅಮ್ಮಾ, ಅತ್ತಿಗೆಯ ಮಾತನ್ನು ಕೇಳಿ ನೀನೇಕೆ ನೊಂದುಕೊಳ್ತೀಯಾ? ಅವರು ಬೇರೆ ಮನೆಯಿಂದ ಬಂದವರು. ಅವರಿಗೆ ನಿನ್ನ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಕ್ರಮೇಣ ಅವರಿಗೆ ನೀನು ಎಲ್ಲವನ್ನೂ ಕಲಿಸಬಹುದು. ನನ್ನ ಅಮ್ಮ ಎಲ್ಲರ ಜೊತೆಗೂ ಹೊಂದಾಣಿಕೆ ಮಾಡಿಕೊಂಡು ಹೋಗಬಲ್ಲಳು,” ಸ್ನೇಹಾಳ ಈ ಮಾತುಗಳು ಅವಳ ತಾಯಿಯ ಕಳೆದುಹೋದ ಆತ್ಮವಿಶ್ವಾಸವನ್ನು ಮತ್ತೆ ಮರಳಿ ತಂದುಕೊಟ್ಟವು. ಈ ಎಲ್ಲ ಸ್ಥಿತಿಗಳಲ್ಲಿ ಒಂದಿಷ್ಟು ಪ್ರಶಂಸೆ ಭರಿತ ಮಾತುಗಳು ವ್ಯಕ್ತಿಯೊಬ್ಬನಲ್ಲಿ ಸಕಾರಾತ್ಮಕ ಬದಲಾವಣೆ ತಂದುಕೊಡಬಲ್ಲವು. ವಯಸ್ಸು ಬಾಲ್ಯವೋ, ತಾರುಣ್ಯವೋ, 50 ಮೀರಿದ್ದಾಗಿದ್ದರೂ ಎಲ್ಲರಿಗೂ ಪ್ರೋತ್ಸಾಹದ ಮಾತುಗಳು ಬೇಕೇಬೇಕು. ತಮ್ಮವರ ಸ್ನೇಹಭರಿತ ನಾಲ್ಕು ಮಾತುಗಳು ವ್ಯಕ್ತಿಯೊಬ್ಬನಲ್ಲಿ ಚಮತ್ಕಾರಿ ಪ್ರಭಾವ ಬೀರುತ್ತವೆ.

ಇಂದಿನ ಆಧುನಿಕ ಸುಖ ಸೌಲಭ್ಯಗಳು ಮತ್ತು ತಂತ್ರಜ್ಞಾನದಿಂದ ಕೂಡಿದ ನಮ್ಮ ಜೀವನ ವ್ಯಸ್ತ ಮತ್ತು ಸ್ಪರ್ಧಾತ್ಮಕತೆಯಿಂದ ಕೂಡಿದೆ. ಈ ಕಾರಣದಿಂದ ನಾವು ಹೆಚ್ಚೆಚ್ಚು ಒತ್ತಡದಲ್ಲಿ ಜೀವನ ನಡೆಸುತ್ತಿದ್ದೇವೆ ಮತ್ತು ಅತಿಯದ ನಿರಾಶಾವಾದಿಗಳಾಗುತ್ತಿದ್ದೇವೆ. ನಮ್ಮ ಅಭಿಲಾಷೆಗೆ ತಕ್ಕಂತೆ ಆಗದೇ ಇರುವುದು, ಯಾವುದೊ ಒಂದು ಕೆಲಸದಲ್ಲಿ ನಾವು ಸಾಕಷ್ಟು ಶ್ರಮಪಟ್ಟರೂ ಅಂದುಕೊಂಡ ಮಟ್ಟದಲ್ಲಿ ಯಶ ದೊರಕದೇ ಇದ್ದಾಗ ನಾವು ಜೀವನದ ಬಗ್ಗೆ ಉದಾಸೀನತೆ ತಾಳುತ್ತೇವೆ. ಅದೇ ಉದಾಸೀನತೆ ಮುಂದೆ ವಿಕಾರ ರೂಪ ಪಡೆದುಕೊಳ್ಳುತ್ತದೆ.

ನಮ್ಮ ಮೆದುಳಿನ ಮೇಲೆ ನಕಾರಾತ್ಮಕದ ಪ್ರಭಾವ ಪರಿಪೂರ್ಣವಾಗಿ ಆವರಿಸಿಕೊಂಡಾಗ ಜೀವನದ ಬಗೆಗಿನ ನಮ್ಮ ಯೋಚನೆ ಹಾಗೂ ದೃಷ್ಟಿಕೋನ ಪರಿಪೂರ್ಣವಾಗಿ ಬದಲಾಗಿಬಿಡುತ್ತದೆ. ಜೀವನದ ಖುಷಿಗಳೆಲ್ಲ ಒಮ್ಮಿಂದೊಮ್ಮೆಲೆ ಮಾಯವಾಗಿಬಿಡುತ್ತವೆ. ಎಲ್ಲೆಡೆ ನಿರಾಶೆಯ ಮೋಡಗಳು ಕವಿದಂತೆ ಭಾಸವಾಗುತ್ತದೆ. ದುಃಖಭರಿತ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳ ಪ್ರವಾಹವೇ ಉಕ್ಕಿ ಬರುತ್ತದೆ. ಈ ನಕಾರಾತ್ಮಕ ವಿಚಾರಗಳು ನಮ್ಮ ಆಸುಪಾಸಿನಲ್ಲಿ ನಿರಾಶೆಯ ಹೊದಿಕೆಯನ್ನು ಆವರಿಸಿಬಿಡುತ್ತವೆ. ಅದು ನಮ್ಮಲ್ಲಿ ಒಂದು ಅಪರಿಚಿತ ಭಯವನ್ನು ಸೃಷ್ಟಿ ಮಾಡಿಬಿಡುತ್ತವೆ. ಆಗ ಯಾವುದೇ ಕೆಲಸ ಮಾಡಲು ನಮ್ಮನ್ನು ನಾವು ಅಸಮರ್ಥರೆಂದು ಭಾವಿಸಿಕೊಳ್ಳುತ್ತೇವೆ.

ನಮ್ಮೆಲ್ಲರ ಜೀವನದಲ್ಲಿ ಇಂತಹ ಒಂದು ಕ್ಷಣ ಅವಶ್ಯ ಬಂದೇ ಬರುತ್ತದೆ. ಆಗ ನಮ್ಮನ್ನು ನಾವು ಏಕಾಂಗಿ ಎಂದು ಭಾವಿಸುತ್ತೇವೆ. ನಮ್ಮನ್ನು ನಾವು ಜಗತ್ತಿನ ಅತ್ಯಂತ ನಿರರ್ಥಕ ವ್ಯಕ್ತಿ ಎಂದು ಭಾವಿಸುತ್ತೇವೆ. ಆ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ನೀಡುವ ಸಾಂತ್ವನ, ಪ್ರೋತ್ಸಾಹದ ನಾಲ್ಕು ಮಾತುಗಳು ನಮ್ಮೊಳಗೆ ಹೊಸ ಉತ್ಸಾಹ ತುಂಬುತ್ತವೆ. ಅದರಿಂದಾಗಿ ನಮ್ಮೊಳಗಿನ ಭಯ ನಿವಾರಣೆಯಾಗಿ ಭರವಸೆಯ ಕಿರಣಗಳು ಮೂಡುತ್ತವೆ.

ನಮ್ಮವರ ಒಂದಿಷ್ಟು ಪ್ರಶಂಸೆಯ ಮಾತುಗಳು ನಮ್ಮನ್ನು ಖಿನ್ನತೆಗೆ ದೂಡುವುದನ್ನು ತಪ್ಪಿಸುತ್ತವೆ. ಜೀವನ ಅಮೂಲ್ಯ. ಆದರೆ ಖಿನ್ನತೆಗೆ ತುತ್ತಾದ ವ್ಯಕ್ತಿ ಎಷ್ಟೊಂದು ದುಃಖಿತನಾಗಿರುತ್ತಾನೆಂದರೆ, ಆ ವ್ಯಕ್ತಿಗೆ ಜೀವನದ ಸಕಾರಾತ್ಮಕ ಅಂಶಗಳು ಗೋಚರಿಸುವುದೇ ಇಲ್ಲ. ಆ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಯೋಚನೆ ಜೀವಿತನಾಗಿದ್ದು, ಏನಾದರೂ ಹೋರಾಟ ಮಾಡುವುದಕ್ಕಿಂತ, ನಾನಿದ್ದು ಏನು ಪ್ರಯೋಜನ ಎಂದು ಯೋಚಿಸಲು ಆರಂಭಿಸುತ್ತಾನೆ. ಕೇವಲ ಚಿಕ್ಕ ಮಕ್ಕಳಿಗೆ ಮಾತ್ರ ಪ್ರಶಂಸೆಯ ಅಗತ್ಯವಿದೆ ಎಂದು ಕೆಲವರು ಭಾವಿಸುತ್ತಾರೆ. ಆದರೆ ವಾಸ್ತವ ಸಂಗತಿಯೇನೆಂದರೆ, ಪ್ರಶಂಸೆ ಮತ್ತು ಪ್ರೋತ್ಸಾಹ ಯಾವುದೇ ಒಂದು ವಯಸ್ಸಿಗೆ ಸಂಬಂಧಿಸಿದ್ದಲ್ಲ. ಪ್ರತಿಯೊಬ್ಬ ವಯಸ್ಸಿನ ಮನುಷ್ಯನಿಗೂ ಅದರ ಅವಶ್ಯಕತೆ ಇರುತ್ತದೆ. ಇದರ ಸ್ಪಷ್ಟ ಕಾರಣ ಇಷ್ಟೇ, ವಯಸ್ಸಿನಲ್ಲಿ ನಾವು ಎಷ್ಟೇ ದೊಡ್ಡವರಾದರೂ, ಮನಸ್ಸಿನ ಭಾವನೆಗಳು ಹೇಗಿರುತ್ತವೆಯೋ ಹಾಗೆಯೇ ಇರುತ್ತವೆ. ದೊಡ್ಡವರಾದ ಬಳಿಕ ನಾವು ನಮ್ಮ ಭಾವನೆಗಳ ಮೇಲೆ ಸ್ವಲ್ಪ ಮಟ್ಟಿಗೆ ಹಿಡಿತವಿಟ್ಟುಕೊಳ್ಳಲು ಕಲಿತುಕೊಳ್ಳುತ್ತೇವೆ ನಿಜ. ಆದರೆ ಕೆಲವು ವಿಶೇಷ ಪರಿಸ್ಥಿತಿಗಳಲ್ಲಿ ನಮ್ಮನ್ನು ನಾವು ಏಕಾಂಗಿ ಮತ್ತು ದುರ್ಬಲ ಎಂದು ಭಾವಿಸುತ್ತೇವೆ. ಆ ಸಂದರ್ಭದಲ್ಲಿ ನಮ್ಮ ಪ್ರಶಂಸೆಯ ಕೆಲವು ಶಬ್ದಗಳು ನಮ್ಮ ತೊಂದರೆ ಮತ್ತು ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತವೆ. ಅದರಿಂದಾಗಿ ಖಿನ್ನತೆಯ ಸ್ಥಿತಿ ನಿರ್ಮಾಣವಾಗುವುದಿಲ್ಲ. ಭಯಂಕರ ಒತ್ತಡದ ನಡುವೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಮನಸ್ಸು ಮಾಡಿದ ವ್ಯಕ್ತಿ ಕೂಡ ಬೇರೊಬ್ಬ ವ್ಯಕ್ತಿಯ ಸಂಪರ್ಕಕ್ಕೆ ಬಂದು, ಸಕಾರಾತ್ಮಕ ಶಕ್ತಿ ತುಂಬಿದರೆ ಬಹು ಸುಲಭವಾಗಿ ಆತ ಆ ವಿಚಾರದಿಂದ ಹೊರಬರುತ್ತಾನೆ.

ಸಂಧ್ಯಾಳ ಪ್ರಕರಣದಲ್ಲಿ ಹೀಗೆಯೇ ಆಯಿತು. 17 ವರ್ಷದ ಸಂಧ್ಯಾ ಆಧುನಿಕ ವಿಚಾರಧಾರೆಯ ಬಿಂದಾಸ್‌ ಹುಡುಗಿ. ಅವಳ ಮುಕ್ತವರ್ತನೆಯ ಲಾಭ ಪಡೆದು ಅವಳ ಕ್ಲಾಸ್‌ಮೇಟ್‌ ಅಂಕಿತ್‌ ಅವಳ ಸ್ನೇಹ ಮಾಡಿದ. ನಂತರ ಪ್ರೀತಿಯ ನಾಟಕವಾಡಿ, ದೇಹ ಸಂಪರ್ಕ ಮಾಡಿದ. ಅಷ್ಟೇ ಅಲ್ಲ, ಅದರ ವಿಡಿಯೋ ಮಾಡಿ ಅವಳನ್ನು ಬ್ಲಾಕ್‌ಮೇಲ್‌ ಮಾಡತೊಡಗಿದ. ಅಲ್ಲಿಯವರೆಗೆ ನಗುನಗುತ್ತಾ ಇರುತ್ತಿದ್ದ ಸಂಧ್ಯಾ ಒಮ್ಮಿಂದೊಮ್ಮೆಲೆ ಉದಾಸಳಾಗಿ ಇರತೊಡಗಿದಳು.

ಸಂಧ್ಯಾಳ ಸ್ವಭಾವದಲ್ಲಾದ ಈ ಆಕಸ್ಮಿಕ ಪರಿವರ್ತನೆಯನ್ನು ಅವಳ ತಾಯಿಯ ಅನುಭವಿ ಕಣ್ಣುಗಳಿಂದ ಬಚ್ಚಿಡಲಾಗಲಿಲ್ಲ. ತಾಯಿ ಬಹಳಷ್ಟು ಕೇಳಿದರೂ ಅವಳು ಆ ಕಹಿ ಘಟನೆಯ ಬಗ್ಗೆ ಬಾಯಿ ಬಿಡಲು ಧೈರ್ಯ ಮಾಡಲಿಲ್ಲ. ತಾಯಿ ಅವಳ ಪ್ರಶಂಸೆಯನ್ನಷ್ಟೇ ಮಾಡದೆ, ಅವಳ ಧೈರ್ಯವನ್ನು ಹೆಚ್ಚಿಸುವ ಪ್ರಯತ್ನ ಮಾಡಿದರು. ನಿನ್ನ ಜೀವನದ ಪ್ರತಿ ಹೆಜ್ಜೆಯಲ್ಲೂ, ಎಂಥದೇ ತೊಂದರೆಯಲ್ಲೂ ನಾನು ನಿನ್ನ ಜೊತೆಗೆ ಇರ್ತೀನಿ ಎಂದು ಹೇಳಿ ಅವಳಲ್ಲಿ ವಿಶ್ವಾಸ ಮೂಡಿಸಿದರು.

ತಾಯಿಯ ಪ್ರೀತಿ ತುಂಬಿದ, ಸ್ನೇಹಭರಿತ ಅಪ್ಪುಗೆಯಲ್ಲಿ ಸಂಧ್ಯಾ ಮಗುವಿನ ಹಾಗೆ ಅತ್ತು ತನ್ನೆಲ್ಲಾ ವೃತ್ತಾಂತವನ್ನು ತಿಳಿಸಿದಳು. ಯಾವುದೇ ದಾರಿ ಕಾಣದೇ ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಿರುವುದಾಗಿಯೂ ಅವಳು ಹೇಳಿದಳು.

ಸಂಧ್ಯಾಳ ತಾಯಿಯನ್ನು ನಾವು ಪ್ರಶಂಸಿಸಲೇಬೇಕು. ಏಕೆಂದರೆ ಅವರು ಮಗಳನ್ನು ಆತ್ಮಹತ್ಯೆ ಮಾಡಿಕೊಳ್ಳುವಂಥ ವಿಷಮ ವಾತಾವರಣದಿಂದ ಹೊರತಂದರು. ಬಳಿಕ ಅವರು ದಿಟ್ಟ ಹೆಜ್ಜೆ ಇಟ್ಟು ಅಂಕಿತ್‌ ವಿರುದ್ಧ ಕ್ರಮ ಕೈಗೊಳ್ಳುವಲ್ಲೂ ಯಶಸ್ವಿಯಾದರು ಅದರಿಂದ ಸಂಧ್ಯಾಳ ಕಳೆದುಹೋದ ಆತ್ಮವಿಶ್ವಾಸ ಮರಳಿತು.

ಹೆಸರಾಂತ ಮನೋತಜ್ಞ ಗೋಪಾಲ್ ರಾವ್ ‌ಹೇಳುತ್ತಾರೆ, “ನಮ್ಮ ದೇಶದಲ್ಲಿ ಖಿನ್ನತೆ ಎಷ್ಟೊಂದು ಸಾಮಾನ್ಯವಾಗಿಬಿಟ್ಟಿದೆ ಎಂದರೆ, ಅದನ್ನು ಯಾರೊಬ್ಬರೂ ರೋಗವೆಂದು ಪರಿಗಣಿಸುವುದಿಲ್ಲ. ಒಂದು ವೇಳೆ ಸಮಸ್ಯೆ ಗಂಭೀರವಾಗಿದ್ದರೆ, ಆ ಸಮಸ್ಯೆಗೆ ಸಿಲುಕಿದವರನ್ನು ಕೌನ್ಸಿಲರ್‌ ಬಳಿ ಕರೆದೊಯ್ಯಬೇಕಾಗುತ್ತದೆ. ಇಲ್ಲದಿದ್ದರೆ ಪರಿಣಾಮ ಅಪಾಯದ ಮಿತಿ ದಾಟಿ ಹೋಗುತ್ತದೆ.”

ಈ ಕುರಿತಂತೆ ಮನೋತಜ್ಞ ಡಾ. ಸಮೀರ್‌ ಹೇಳುವುದೇನೆಂದರೆ, ಇಂದಿನ ಆಧುನಿಕ ಜೀವನ ಜಟಿಲತೆಗಳು ಮತ್ತು ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳ ಕಾರಣಗಳಿಂದ ಖಿನ್ನತೆಯ ಪರಿಸ್ಥಿತಿಯಲ್ಲಿ ಏರಿಕೆ ಉಂಟಾಗಿದೆ. ಹೀಗಾಗಿ ನಮ್ಮವರ ಸಮಸ್ಯೆಗಳನ್ನು ಅರಿತುಕೊಳ್ಳುವುದು ಮತ್ತು ದೃಷ್ಟಿಕೋನದಲ್ಲಿ ಬದಲಾವಣೆಯನ್ನು ತರುವುದಾಗಿದೆ. ಅವರ ಕುರಿತು ಒಂದೆರಡು ಪ್ರಶಂಸೆಯ ಸುರಿಮಳೆ ಮಾಡುತ್ತಾರೆ. ಅಷ್ಟೇ ಅಲ್ಲ, ಆಫೀಸುಗಳಲ್ಲೂ ಅಂತಹ ಕಾರ್ಯಕ್ರಮ ಆಯೋಜಿಸಲಾಗಿರುತ್ತದೆ.

ಏಕೆಂದರೆ ಅಧಿಕಾರಿ ಹಾಗೂ ಸಿಬ್ಬಂದಿ ನಡುವೆ ಸಂವಾದ ಇನ್ನಷ್ಟು ಗಟ್ಟಿಗೊಳ್ಳಬೇಕು. ಹೀಗಾಗಿ ಇನ್ನೊಬ್ಬರ ಅದರಲ್ಲೂ ನಿಮ್ಮ ಹತ್ತಿರದವರ ಪ್ರಶಂಸೆ ಮಾಡುವುದರಲ್ಲಿ ಜಿಪುಣತನವೇಕೆ? ಹೊಗಳಿಕೆಯ ಅನುಪಮ ಉಡುಗೊರೆ ಸಂಬಂಧದಲ್ಲಿ ಮಾಧುರ್ಯ ತರುತ್ತದೆ.

– ಎಸ್‌. ಅಂಜನಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ