ಕಾಕೋರಿ ಕಬಾಬ್
ಸಾಮಗ್ರಿ : 1 ಕಿಲೋ ಮಟನ್ ಕೀಮಾ, 200 ಗ್ರಾಂ ಮಟನ್ ಕೊಬ್ಬು, 500 ಗ್ರಾಂ ಹೆಚ್ಚಿದ ಈರುಳ್ಳಿ, 100 ಗ್ರಾಂ ಗುಲಾಬಿ ದಳಗಳು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಏಲಕ್ಕಿ ಪುಡಿ, ಕಾಳುಮೆಣಸು, ಹಸಿಮೆಣಸು, ಬಿಳಿ ಮೆಣಸು, ಈರುಳ್ಳಿ ಪೇಸ್ಟ್, ಶುಂಠಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಗೋಡಂಬಿ ಪೇಸ್ಟ್, ಕೇದಗೆ ಎಸೆನ್ಸ್, 100 ಗ್ರಾಂ ಮೈದಾ.
ವಿಧಾನ : ಕೀಮಾಗೆ ಕೊಬ್ಬು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಸಣ್ಣಗೆ ಹೆಚ್ಚಿದ ಈರುಳ್ಳಿಗೆ ಹೆಚ್ಚಿದ ಗುಲಾಬಿ ದಳ, ತುಸು ಎಸೆನ್ಸ್, ಏಲಕ್ಕಿ, ಪುಡಿ ಮಾಡಿದ ಕಾಳುಮೆಣಸು, ಗೋಡಂಬಿ ಪೇಸ್ಟ್ ಸೇರಿಸಿ ಮಿಶ್ರ ಮಾಡಿ ಅದನ್ನು ಕೀಮಾಗೆ ಸೇರಿಸಿ ಬೆರೆಸಿಕೊಳ್ಳಿ. ನಂತರ ಜರಡಿಯಾಡಿದ ಮೈದಾ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಪೇಸ್ಟ್, ಉಪ್ಪು, ಖಾರ, ವೈಟ್ ಪೆಪ್ಪರ್ಪುಡಿ, ಉಳಿದ ಎಸೆನ್ಸ್ ಮಿಶ್ರ ಮಾಡಿ ಇದನ್ನು ಮತ್ತೆ ಕೀಮಾಗೆ ಬೆರೆಸಬೇಕು.
ಈ ಮಿಶ್ರಣವನ್ನು ಕಬಾಬ್ ರಾಡ್ಗೆ ಸಿಗಿಸಿ, ಚೆನ್ನಾಗಿ ಗ್ರಿಲ್ ಮಾಡಿ. ಚಿತ್ರದಲ್ಲಿರುವಂತೆ ಅಲಂಕರಿಸಿ. ಪರೋಟ ಜೊತೆ ಸವಿಯಲು ಕೊಡಿ.
ಗೋಟಿ ಕಬಾಬ್
ಸಾಮಗ್ರಿ : 1 ಕಿಲೋ ಮಟನ್ ಕೀಮಾ, 50 ಗ್ರಾಂ ಹಸಿ ಪರಂಗಿಕಾಯಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಬೆಳ್ಳುಳ್ಳಿ, ಹಸಿಮೆಣಸು, ಶುಂಠಿ ಪೇಸ್ಟ್, ಚಂದನದ ಪುಡಿ, ಗರಂಮಸಾಲ, ಚಾಟ್ ಮಸಾಲ, ಕೇದಗೆ ಎಸೆನ್ಸ್, ಸೆಂಟ್, ಕಡಲೆಬೀಜ (ಹುರಿದ ಪುಡಿ ಮಾಡಿದ್ದು), ಹೆಚ್ಚಿ ಬಾಡಿಸಿ ಪೇಸ್ಟ್ ಮಾಡಿದ ಈರುಳ್ಳಿ, ತುಸು ತುಪ್ಪ, ಕರಿಯಲು ಎಣ್ಣೆ.
ವಿಧಾನ : ಲವಂಗ ಬಿಟ್ಟು ಉಳಿದೆಲ್ಲ ಸಾಮಗ್ರಿ ಸೇರಿಸಿ ಕೀಮಾದ ಕಬಾಬ್ ಮಾಡಿಡಿ. ಲವಂಗವನ್ನು ತುಪ್ಪದಲ್ಲಿ ಹುರಿದು ಬೇರೆಯಾಗಿಡಿ. ನಂತರ ನಾನ್ಸ್ಟಿಕ್ ಪ್ಯಾನ್ನಲ್ಲಿ ಎಣ್ಣೆ ಬಿಸಿ ಮಾಡಿ, ಕಬಾಬ್ ಮಿಶ್ರಣವನ್ನು ಪಕೋಡ ತರಹ ಕರಿದು ತೆಗೆಯಿರಿ. ಚಿತ್ರದಲ್ಲಿರುವಂತೆ ಚಪಾತಿಯ ಸುರುಳಿಗೆ 1-1 ಕಬಾಬ್ ಇರಿಸಿ, ಮೇಲೆ ಲವಂಗ ಸಿಗಿಸಿ, ಮೆಂತ್ಯ ಸೊಪ್ಪಿನಿಂದ ಅಲಂಕರಿಸಿ ಸವಿಯಲು ಕೊಡಿ.
ಬ್ರೆಡ್ ಮಿಠಾಯಿ
ಸಾಮಗ್ರಿ : 1-2 ಬ್ರೆಡ್ ಸ್ಲೈಸ್, 1 ಲೀ. ಫುಲ್ ಕ್ರೀಂ ಗಟ್ಟಿ ಹಾಲು, ಹಾಲಲ್ಲಿ ನೆನೆಸಿದ ತುಸು ಕೇಸರಿ, 4-5 ಹನಿ ಕೇದಗೆ ಎಸೆನ್ಸ್ 2 ಹನಿ ಸೆಂಟ್, 200 ಗ್ರಾಂ ಖೋವಾ, 250 ಗ್ರಾಂ ಸಕ್ಕರೆ, 25 ಗ್ರಾಂ ಬಾದಾಮಿ, ಕರಿಯಲು ತುಪ್ಪ.
ವಿಧಾನ : ಬ್ರೆಡ್ ಸ್ಲೈಸ್ನ್ನು (ಸ್ಟೀಲ್ ಬಟ್ಟಲು ಬಳಸಿ) ಗುಂಡಗೆ ಕತ್ತರಿಸಿ, ಕಾದ ತುಪ್ಪದಲ್ಲಿ ಕರಿದು ಬೇರೆ ಇಡಿ. ಹಾಲು ಕಾಯಿಸಲು ಇಡಿ. ಅದು ಉಕ್ಕಿದಾಗ ಮಂದ ಉರಿ ಮಾಡಿ ಕೇಸರಿ, ಎಸೆನ್ಸ್, ಸೆಂಟ್ ಹಾಕಿ ಅರ್ಧದಷ್ಟು ಹಿಂಗಿಸಿ. ಇದರ ತುಸು ಭಾಗವನ್ನು ಬ್ರೆಡ್ ಮೇಲೆ ಹಾಕಿಡಿ. ಉಳಿದ ಭಾಗಕ್ಕೆ ಖೋವಾ, ಸಕ್ಕರೆ ಹಾಕಿ ಮತ್ತೆ ಕೈಯಾಡಿಸುತ್ತಾ ಕುದಿಸಬೇಕು. ಹೀಗೆ ಪರಿಪಕ್ವವಾದ ಕುದಿ ಹಾಲನ್ನು ಅದೇ ಬ್ರೆಡ್ ಮೇಲೆ ಹಾಕಿ ಅರ್ಧ ಗಂಟೆ ಹಾಗೇ ಬಿಡಿ. ಇದರ ಮೇಲೆ ಬಾದಾಮಿ ಚೂರು ಉದುರಿಸಿ, ತಣ್ಣಗಾದ ಮೇಲೆ ಸ್ವಲ್ಪ ಹೊತ್ತು ಫ್ರಿಜ್ನಲ್ಲಿರಿಸಿ ನಂತರ ಸವಿಯಲು ಕೊಡಿ.
ಸ್ಪೆಷಲ್ ಖೀರು
ಸಾಮಗ್ರಿ : 2 ಲೀ. ಫುಲ್ ಕ್ರೀಂ ಹಾಲು, 200 ಗ್ರಾಂ ತುಪ್ಪ, 400 ಗ್ರಾಂ ಸಿಹಿ ಖೋವಾ, 300 ಗ್ರಾಂ ಸಕ್ಕರೆ, ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ ಚೂರು (ತಲಾ 50 ಗ್ರಾಂ), 150 ಗ್ರಾಂ ಅಕ್ಕಿಹಿಟ್ಟು, ತುಸು ಏಲಕ್ಕಿ ಪುಡಿ.
ವಿಧಾನ : ದಪ್ಪ ತಳದ ಸ್ಟೀಲ್ ಪಾತ್ರೆಯಲ್ಲಿ ಹಾಲು ಕಾಯಿಸಿ. ಮಂದ ಉರಿಯಲ್ಲಿ ಇದನ್ನು ಸತತ ಕುದಿಸುತ್ತಾ ಅರ್ಧದಷ್ಟು ಹಿಂಗಿಸಿ. ನಂತರ ಇದಕ್ಕೆ ಅಕ್ಕಿಹಿಟ್ಟು ಹಾಕಿ ಮತ್ತೆ 5 ನಿಮಿಷ ಕದಡುತ್ತಿರಿ. ನಂತರ ಇದಕ್ಕೆ ಮಸೆದ ಖೋವಾ, ಸಕ್ಕರೆ ಹಾಕಿ ಕೆದಕಬೇಕು. ಮಧ್ಯೆ ಮಧ್ಯೆ ತುಪ್ಪ ಬೆರೆಸುತ್ತಿರಿ. ಏಲಕ್ಕಿ ಪುಡಿ ಸೇರಿಸಿ ಇನ್ನೂ 5 ನಿಮಿಷ ಕುದಿಸಿ. ಕೆಳಗಿಳಿಸುವ ಮೊದಲು ಗೋಡಂಬಿ, ದ್ರಾಕ್ಷಿ ತೇಲಿಬಿಡಿ. ಇಳಿಸಿದ ಮೇಲೆ ಚೆನ್ನಾಗಿ ಆರಲಿ. ಆಮೇಲೆ ಇದನ್ನು 1 ಗಂಟೆ ಕಾಲ ಫ್ರಿಜ್ನಲ್ಲಿರಿಸಿ ನಂತರ ಸವಿಯಲು ಕೊಡಿ.
ಶಾಮೀ ಕಬಾಬ್
ಸಾಮಗ್ರಿ : 500 ಗ್ರಾಂ ತುಂಡರಿಸಿದ ಮಟನ್, 50 ಗ್ರಾಂ ಕಡಲೆಬೇಳೆ, ತುಸು ಧನಿಯಾ, ಜೀರಿಗೆ, ಚಕ್ಕೆ, ಲವಂಗ, ಏಲಕ್ಕಿ, ಮೊಗ್ಗು, ಹೆಚ್ಚಿದ 2 ಈರುಳ್ಳಿ, 10 ಎಸಳು ಬೆಳ್ಳುಳ್ಳಿ, ಹಸಿಮೆಣಸು, ಕೊ.ಸೊಪ್ಪು, ಪುದೀನಾ, ಕರಿಬೇವು, ಶುಂಠಿ, ಬೇಯಿಸಿ ಮಸೆದ 100 ಗ್ರಾಂ ಆಲೂ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ವೈಟ್ ಪೆಪ್ಪರ್, ಕರಿಯಲು ಎಣ್ಣೆ.
ವಿಧಾನ : ಪ್ರೆಷರ್ ಪ್ಯಾನಿನಲ್ಲಿ ತುಸು ರೀಫೈಂಡ್ ಎಣ್ಣೆ ಬಿಸಿ ಮಾಡಿ. ಇದಕ್ಕೆ ಜೀರಿಗೆ, ಧನಿಯಾ, ಚಕ್ಕೆ, ಲವಂಗ, ಏಲಕ್ಕಿ, ಮೊಗ್ಗು, ಕರಿಬೇವು ಹಾಕಿ ಚಟಪಟಾಯಿಸಿ. ಕಡಲೆಬೇಳೆ ಹಾಕಿ ಕೆದಕಿ, ಮಟನ್ ಸೇರಿಸಿ, ತುಸು ನೀರು ಚಿಮುಕಿಸಿ 3-4 ಸೀಟಿ ಬರುವಂತೆ ಬೇಯಿಸಿ. ಆಮೇಲೆ ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಕೊ.ಸೊಪ್ಪು, ಪುದೀನಾ, ಮಸೆದ ಆಲೂ, ಉಪ್ಪು, ಖಾರ, ವೈಟ್ ಪೆಪ್ಪರ್ ಎಲ್ಲಾ ಸೇರಿಸಿ ಪಕೋಡ ಹದಕ್ಕೆ ಕಲಸಿಕೊಂಡು, ಚಿತ್ರದಲ್ಲಿರುವಂತೆ ಗುಂಡಗೆ ವಡೆ ತರಹ ತಟ್ಟಿಕೊಳ್ಳಿ. ಇದನ್ನು ಕಾದ ಎಣ್ಣೆಯಲ್ಲಿ ಕರಿದು, ಚಿತ್ರದಲ್ಲಿರುವಂತೆ ಅಲಂಕರಿಸಿ ಬಿಸಿಯಾಗಿ ಸವಿಯಲು ಕೊಡಿ.