ಶ್ರಿಂಪ್‌ ಚಾಮಿನ್‌

ಸಾಮಗ್ರಿ : 500 ಗ್ರಾಂ ಶ್ರಿಂಪ್‌, 2 ಕಪ್‌ ಬೆಂದ ಚಾಮಿನ್‌ ನೂಡಲ್ಸ್, ಅರ್ಧ ಕಪ್‌ ಹೆಚ್ಚಿದ ಈರುಳ್ಳಿ ತೆನೆ, 1-2 ಈರುಳ್ಳಿ, ಕ್ಯಾಪ್ಸಿಕಂ, ಎಲೆಕೋಸು, ತುಸು ಸೆಲೆರಿ, ಹಸಿಶುಂಠಿ, ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಸೋಯಾ ಸಾಸ್‌, ಚಿಲೀ ಸಾಸ್‌, ಜೇನುತುಪ್ಪ, ತುಸು ಎಳ್ಳೆಣ್ಣೆ.

ವಿಧಾನ : ಮೊದಲು ಬಾಣಲೆಯಲ್ಲಿ ಎಳ್ಳೆಣ್ಣೆ ಬಿಸಿ ಮಾಡಿ ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ ಹಾಕಿ ಬಾಡಿಸಿ. ನಂತರ  ಕ್ಯಾಪ್ಸಿಕಂ, ಆಮೇಲೆ ಸೆಲೆರಿ ಹಾಕಿ ಬಾಡಿಸಿ. ನಂತರ ಎಲೆಕೋಸು ಹಾಕಿ ಬಾಡಿಸಿ. ತುಸು ನೀರು ಚಿಮುಕಿಸಿ ಬೇಯಲು ಬಿಡಿ. ಹೀಗೆ ಎಲ್ಲಾ ಬೆಂದ ನಂತರ ‌ಉಪ್ಪು, ಮೆಣಸು ಹಾಕಿ ಕೆದಕಿ ಕೆಳಗಿಳಿಸಿ. ಇದನ್ನು ಒಂದು ಬಟ್ಟಲಿಗೆ ಹಾಕಿಡಿ. ಇದೇ ಬಾಣಲೆಯಲ್ಲಿ ಮತ್ತಷ್ಟು ಎಣ್ಣೆ ಬಿಸಿ ಮಾಡಿ ಸೀಗಡಿ (ಶ್ರಿಂಪ್‌), ಉಪ್ಪು, ಮೆಣಸು ಹಾಕಿ ಬಾಡಿಸಿ. ನಂತರ ಇದಕ್ಕೆ ಬೆಂದ ತರಕಾರಿ, ಹೆಚ್ಚಿದ ಈರುಳ್ಳಿ ತೆನೆ, ನೂಡಲ್ಸ್ ಬೆರೆಸಿ ಬಾಡಿಸಿ. ಫಿನಿಶಿಂಗ್‌ ಹೊತ್ತಲ್ಲಿ ಸೋಯಾ/ಚಿಲೀ ಸಾಸ್‌, ಜೇನುತುಪ್ಪ, ಶುಂಠಿ, ತುಸು ಎಳ್ಳೆಣ್ಣೆ ಬೆರೆಸಿ ಮತ್ತಷ್ಟು ಕೈಯಾಡಿಸಿ. ಕೊನೆಯಲ್ಲಿ ಈರುಳ್ಳಿ ತೆನೆಯಿಂದ ಅಲಂಕರಿಸಿ ಸವಿಯಲು ಕೊಡಿ.

ಥಾಯ್‌ ಕಾರ್ನ್‌ ಫ್ರೀಟರ್ಸ್‌

ಸಾಮಗ್ರಿ : 2 ಕಪ್‌ ಬೆಂದ ಸ್ವೀಟ್‌ ಕಾರ್ನ್‌, 1 ಕಪ್‌ ಬೇಯಿಸಿ ಮಸೆದ ಸಿಹಿಗೆಣಸು, 2-3 ಚಮಚ ಥಾಯ್‌ ರೆಡ್‌ ಪೇಸ್ಟ್ (ರೆಡಿಮೇಡ್‌ಲಭ್ಯ), 1-1 ಚಮಚ ಸಣ್ಣಗೆ ಹೆಚ್ಚಿದ ನಿಂಬೆ ಎಲೆ, ಬೆಳ್ಳುಳ್ಳಿ ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಪುಡಿಮೆಣಸು, ತುಸು ಆಲಿವ್ ‌ಎಣ್ಣೆ.

ವಿಧಾನ : ಒಂದು ಬಟ್ಟಲಿಗೆ ಎಣ್ಣೆ ಬಿಟ್ಟು ಉಳಿದೆಲ್ಲ ಸಾಮಗ್ರಿ ಬೆರೆಸಿಕೊಳ್ಳಿ. ಇದರಿಂದ ಸಣ್ಣ ಉಂಡೆ ಮಾಡಿ, ವಡೆ ತರಹ ತಟ್ಟಿಕೊಂಡು, ಅಳ್ಳಕ ಪ್ಯಾನಲ್ಲಿ ಶ್ಯಾಲೋ ಫ್ರೈ ಮಾಡಿ. ಇದನ್ನು ಟೋಮೇಟೋ ಸಾಸ್‌ ಜೊತೆ ಸವಿಯಲು ಕೊಡಿ.

ಅಮೃತಸರೀ ಫ್ರೆಶ್‌ ಫ್ರೈಸ್‌

ಸಾಮಗ್ರಿ : 600 ಗ್ರಾಂ ಕಿಂಗ್‌ ಫಿಶ್‌ ತುಂಡುಗಳು, ಅರ್ಧ ಸಣ್ಣ ಚಮಚ ಓಮ, 1 ದೊಡ್ಡ ಚಮಚ ಬೆಳ್ಳುಳ್ಳಿ ಶುಂಠಿ ಪೇಸ್ಟ್, ಒಂದು ಕಪ್‌ ಕಡಲೆಹಿಟ್ಟು. ತುಸು ರೀಫೈಂಡ್‌ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು ಮೆಣಸು, ನಿಂಬೆ ರಸ.

ವಿಧಾನ : ಫಿಶ್‌ ತುಂಡಿಗೆ ಉಪ್ಪು, ಮೆಣಸು, ನಿಂಬೆರಸ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಅರ್ಧ ಗಂಟೆ ಮ್ಯಾರಿನೇಟ್‌ಗೊಳಿಸಿ. ಒಂದು ಬಟ್ಟಲಿಗೆ ಕಡಲೆಹಿಟ್ಟು, ಉಪ್ಪು, ಮೆಣಸು, ಓಮ, ತುಸು ನೀರು ಬೆರೆಸಿ ಬೋಂಡ ಹಿಟ್ಟಿನ ಹದಕ್ಕೆ ಕಲಸಿಡಿ. ಈಗ ಒಂದು ಕುಕೀ ಶೀಟ್‌ನ್ನು ಎಣ್ಣೆಯಿಂದ ಗ್ರೀಸ್‌ ಮಾಡಿ, ಇದರ ಮೇಲೆ ಫಿಶ್‌ ತುಂಡುಗಳನ್ನು ಕಡಲೆಹಿಟ್ಟಿನಲ್ಲಿ ಅದ್ದಿಕೊಂಡು, ತುಸು ಬ್ರೆಡ್‌ ಕ್ರಂಬ್ಸ್ ನಲ್ಲಿ ಹೊರಳಿಸಿ ಇಡಿ. ಇದರ ಮೇಲೆ ತುಸು ಎಣ್ಣೆ ಸ್ಪ್ರೇ ಮಾಡಿ. ಇದನ್ನು ಮೊದಲೇ ಬಿಸಿ ಮಾಡಿದ ಓವನ್ನಿನಲ್ಲಿ 220 ಡಿಗ್ರಿ ಶಾಖದಲ್ಲಿ 15 ನಿಮಿಷ ಬೇಕ್‌ ಮಾಡಿ. ಇದನ್ನು ಬಿಸಿಯಾಗಿ ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.

ಮಸಾಲಾ ಪನೀರ್‌ ಟಿಕ್ಕಾ

ಸಾಮಗ್ರಿ : 500 ಗ್ರಾಂ ಪನೀರ್‌ ಕ್ಯೂಬ್ಸ್, 4-5 ಚಮಚ ನಿಂಬೆ ಉಪ್ಪಿನಕಾಯಿ ಮಸಾಲೆ, 10-12 ಟೊಮೇಟೊ, 1 ಕ್ಯಾಪ್ಸಿಕಂ, ತುಸು ಹೆಚ್ಚಿದ ಕೊ.ಸೊಪ್ಪು, 2 ಚಮಚ ಎಣ್ಣೆ, 10-12 ಬ್ಯಾಂಬೂ ಸ್ಕೀವರ್ಸ್‌.

ವಿಧಾನ : ಪನೀರ್‌ ಮತ್ತು ಕ್ಯಾಪ್ಸಿಕಂ ಎರಡನ್ನೂ ಚೌಕಾಕಾರದ ತುಂಡುಗಳಾಗಿಸಿ. ಇವನ್ನು ಮಸಾಲೆಯಲ್ಲಿ ಚೆನ್ನಾಗಿ ಮ್ಯಾರಿನೇಟ್‌ಗೊಳಿಸಿ. ನಂತರ ಇವನ್ನು ಸ್ಕೀವರ್ಸ್‌ನಲ್ಲಿ ಟೊಮೇಟೊ ಜೊತೆ ಸಿಗಿಸಿಡಿ. ಗ್ರಿಲ್ ‌ಪ್ಯಾನಿನಲ್ಲಿ ತುಸು ಎಣ್ಣೆ ಬಿಸಿ ಮಾಡಿ, ಮಧ್ಯಮ ಉರಿಯಲ್ಲಿ  ಗ್ರಿಲ್ ‌ಮಾಡಿ. ಇದರ ಮೇಲೆ ಕೊ.ಸೊಪ್ಪು ಉದುರಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

ಚಿಕನ್‌ ಆಲಿವ್ ‌ಸಮೋಸಾ

ಮೂಲ ಸಾಮಗ್ರಿ : 500 ಗ್ರಾಂ ಮೈದಾ, ಅರ್ಧರ್ಧ ಚಮಚ ಜೀರಿಗೆ ಸೋಂಪು, 4-5 ಚಮಚ ಆಲಿವ್ ‌ಎಣ್ಣೆ, ತುಸು ಉಪ್ಪು.

ಹೂರಣದ ಸಾಮಗ್ರಿ : ಹೆಚ್ಚಿದ 8 ಬ್ಲ್ಯಾಕ್‌ ಆಲಿವ್‌, 500 ಗ್ರಾಂ ಚಿಕನ್‌ ಕೀಮಾ, ಒಗ್ಗರಣೆಗೆ ಜೀರಿಗೆ, ಸಾಸುವೆ, ಓಮ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ, ಶುಂಠಿ ಬೆಳ್ಳುಳ್ಳಿ ಪೇಸ್ಟ್. 1-2 ಹಸಿಮೆಣಸು, 1 ಕಪ್‌ ಬೆಂದ ಹಸಿ ಬಟಾಣಿ, 10-12 ತುಂಡರಿಸಿದ ಗೋಡಂಬಿ, ಕರಿಯಲು ರೀಫೈಂಡ್‌ಎಣ್ಣೆ.

ವಿಧಾನ : ಮೂಲ ಸಾಮಗ್ರಿಗಳನ್ನು ಪೂರ್ತಿ ಬೆರೆಸಿ, ನೀರು ಚಿಮುಕಿಸಿ ಮೃದುವಾದ ಹಿಟ್ಟು ಕಲಸಿ. ಎಣ್ಣೆಯಿಂದ ನಾದಿಕೊಂಡು ನೆನೆಯಲು ಬಿಡಿ. ಒಂದು ಬಾಣಲೆಯಲ್ಲಿ  ತುಸು ಎಣ್ಣೆ ಬಿಸಿ ಮಾಡಿ ಜೀರಿಗೆಯ ಒಗ್ಗರಣೆ ಕೊಡಿ. ನಂತರ ಈರುಳ್ಳಿ, ಹಸಿ ಮೆಣಸು ಹಾಕಿ ಬಾಡಿಸಿ. ಆಮೇಲೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆದಕಬೇಕು. ಆಮೇಲೆ ಚಿಕನ್‌ ಪೀಸ್‌, ಆಲಿವ್ ‌ತುಂಡು ಹಾಕಿ ಕೈಯಾಡಿಸಿ. ನೀರು ಚಿಮುಕಿಸಿ ಬೇಯಿಸಿ. ನಂತರ ಉಳಿದೆಲ್ಲ ಮಸಾಲೆ, ಉಪ್ಪು ಹಾಕಿ ಬೆರೆತುಕೊಳ್ಳುವಂತೆ ಮಾಡಿ ಕೆಳಗಿಳಿಸಿ. ನಿಂಬೆಹಣ್ಣು ಹಿಂಡಿಕೊಳ್ಳಿ ನೆನೆದ ಹಿಟ್ಟಿನಿಂದ ಉಂಡೆ ಮಾಡಿ, ಲಟ್ಟಿಸಿ ಅರ್ಧಕ್ಕೆ ಕತ್ತರಿಸಿ. ತ್ರಿಕೋನಾಕಾರವಾಗಿ ಮಡಿಚಿ, ಅದರಲ್ಲಿ 2-3 ಚಮಚ ಹೂರಣ ತುಂಬಿಸಿ, ಅಂಚು ಬಿಟ್ಟುಕೊಳ್ಳದಂತೆ ಒದ್ದೆ ಕೈಯಿಂದ ಅಂಟಿಸಿ. ಈ ರೀತಿ ಎಲ್ಲವನ್ನೂ ಸಿದ್ಧಪಡಿಸಿಕೊಂಡು ಕಾದ ಎಣ್ಣೆಯಲ್ಲಿ ಕರಿಯಿರಿ, ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ