ಪ್ರಸ್ತುತವಾಗಿ ಜಗತ್ತಿನಲ್ಲಿ ಸುಮಾರು 7,000 ಪ್ರಮುಖ ಭಾಷೆಗಳಿದ್ದು ಲೆಖ್ಖವಿಲ್ಲದಷ್ಟು ಉಪಭಾಷೆಗಳಿದ್ದು ಅವರುಗಳ ಸಂಖ್ಯೆ ನಿಖರವಾಗಿ ತಿಳಿಯದಾಗಿದೆ. ಮ್ಯಾಂಡರಿನ್ ಚೈನೀಸ್, ಇಂಗ್ಲಿಷ್, ಸ್ಪ್ಯಾನಿಷ್, ಹಿಂದಿ, ಅರೇಬಿಕ್, ಬೆಂಗಾಲಿ, ರಷ್ಯನ್, ಪೋರ್ಚುಗೀಸ್, ಜಪಾನೀಸ್, ಜರ್ಮನ್ ಮತ್ತು ಫ್ರೆಂಚ್ ಮುಂತಾದ ಭಾಷೆಗಳು ಹೆಚ್ಚು ವ್ಯಾಪಕವಾಗಿ ಮಾತನಾಡುವ ಭಾಷೆಗಳಾಗಿದ್ದರೆ, ಜಗತ್ತಿನ 90% ಭಾಷೆಗಳನ್ನು 100,000 ಕ್ಕಿಂತಲೂ ಕಡಿಮೆ ಜನರು ಮಾತನಾಡುವವರಿದ್ದರೆ, ಸುಮಾರು 46 ಭಾಷೆಗಳನ್ನು ಒಬ್ಬರೋ ಇಲ್ಲವೇ ಬೆರಳೆಣಿಕೆಯಷ್ಟು ಜನರು ಮಾತನಾಡುವವರು ಇದ್ದಾರೆ ಎಂದರೆ ನಿಜಕ್ಕೂ ಅಚ್ಚರಿಯಾಗುತ್ತದೆ,
ಇನ್ನು ಭಾರತದಲ್ಲಿ 2001ರ ಭಾರತದ ಜನಗಣತಿಯ ಪ್ರಕಾರ 122 ಪ್ರಮುಖ ಭಾಷೆಗಳು ಮತ್ತು 1599 ಇತರ ಭಾಷೆಗಳನ್ನು ಆಡುವ ಜನರು ಇದ್ದಾರೆ ಎನ್ನಲಾದರೆ, ಮತ್ತೊಂದು ಜನಗಣತಿಯ ವಿಶ್ಲೇಷಣೆಯ ಪ್ರಕಾರ ಭಾರತದಲ್ಲೇ 19,500 ಕ್ಕೂ ಹೆಚ್ಚು ಭಾಷೆಗಳು ಅಥವಾ ಉಪಭಾಷೆಗಳನ್ನು ಮಾತೃಭಾಷೆಯಾಗಿ ಬಳಸುತ್ತಾರೆ ಎನ್ನಲಾಗಿದ್ದರೂ, ಭಾರತೀಯ ಸಂವಿಧಾನದ 8 ನೇ ಅನುಸೂಚಿಯ ಪ್ರಕಾರ 22 ಭಾಷೆಗಳನ್ನು ದೇಶದ ಅಧಿಕೃತ ಭಾಷೆಯನ್ನಾಗಿ ಗುರುತಿಸಲಾಗಿದ್ದು ಅವುಗಳಲ್ಲಿ ೧೫ ಭಾಷೆಗಳನ್ನು ನಮ್ಮ ದೇಶದ ನೋಟುಗಳ ಮೇಲೆ ಮುದ್ರಿಸಲಾಗಿದ್ದು ಭಾರತ ಅನೇಕ ಸಂಸ್ಕೃತಿ, ಪರಂಪರೆ, ಸಂಪ್ರದಾಯ ಹಾಗೂ ಬಹು ಭಾಷೆಯನ್ನು ಹೊಂದಿರುವ ವಿದಿಧತೆಯಲ್ಲಿಯೂ ವೈವಿಧ್ಯತೆಯ ಏಕತೆಯನ್ನು ಹೊಂದಿರುವಂತನ ಶ್ರೀಮಂತ ಸಂಸ್ಕೃತಿಯ ತವರಾಗಿದ್ದರೂ, ಇಂದು ಪಾಶ್ಚತ್ಯ ಅಂಧಾನುಕರಣೆ ಮತ್ತು ಬ್ರಿಟೀಷರ್ ಭಾರತವನ್ನು ವಸಹಾಹತು ಮಾಡಿಕೊಂಡು ಭಾರತದ ಸನಾತನ ಗುರುಕುಲ ಪದ್ದತಿಯನ್ನು ನಾಶ ಪಡಿಸಿ ಮೆಕಾಲೆ ಶಿಕ್ಷಣ ಪದ್ದತಿಯನ್ನು ಜಾರಿಗೆ ತಂದ ಪರಿಣಾಮ ಭಾರತೀಯರು ತಮ್ಮ ಮಾತೃ ಭಾಷೆಯ ಬದಲಾಗಿ ಅನವಶ್ಯಕ ಮತ್ತು ಅನಗತ್ಯವಾಗಿ ಇಂಗ್ಲೀಷ್ ಭಾಷೆಯನ್ನು ಎಗ್ಗಿಲ್ಲದೇ ಬಳಸುತ್ತಿರುವ ಪರಿಣಾಮ ಅದೆಷ್ಟೋ ಭಾಷೆಗಳು ಇಂದು ಅಳಿವಿನಂಚಿನಲ್ಲಿದೆ. ಭಾಷೆಗಳು ಆಯಾಯಾ ಪ್ರಾಂತ್ಯ ಇಲ್ಲವೇ ಆಯಾಯಾ ದೇಶಗಳ ಸಂಸ್ಕೃತಿಯ ಪ್ರತೀಕವಾಗಿರುವ ಕಾರಣವನ್ನು ಮನಗಂಡು ಪ್ರತೀವರ್ಶ ಫೆಬ್ರವರಿ 21 ರಂದು ವಿಶ್ವ ಮಾತೃ ಭಾಷಾ ದಿನವನ್ನಾಗಿ ಆಚರಿಸಲಾಗುತ್ತಿದೆ.

ಹೀಗೆ ಫೆಬ್ರವರಿ 21 ನ್ನು ಪ್ರಪಂಚಾದ್ಯಂತ ವಿಶ್ವ ಮಾತೃ ಭಾಷೆ ದಿನವಾಗಿ ಆಚರಿಸುವ ಮೂಲಕ ಬಹುಭಾಷೆ ಮತ್ತು ಬಹುಸಂಸ್ಕೃತಿಯನ್ನು ಪ್ರತಿಬಿಂಬಿಸಲು ಮತ್ತು ಪ್ರೋತ್ಸಾಹಿಸಿ ಉಳಿಸುವ ಸಲುವಾಗಿ 1999 ರಲ್ಲಿ ಮೊದಲ ಬಾರಿಗೆ ಯುನೆಸ್ಕೋ ಘೋಷಿಸಿತು. ಇದರ ಮುಂದುವರೆದ ಭಾಗವಾಗಿ ವಿಶ್ವಸಂಸ್ಥೆಯು 2008 ನ್ನು ವಿಶ್ವ ಭಾಷೆಗಳ ವರ್ಷ ಎಂದು ಆಚರಿಸಿದ್ದಲದೇ, ಅಂದಿನಿಂದ ಪ್ರತಿ ವರ್ಷ ವಿಶ್ವ ಮಾತೃ ಭಾಷೆ ದಿವಸವನ್ನು ಆಚರಿಸಲು ನಿರ್ಧರಿಸಲಾಯಿತು. ಈ ರೀತಿ ವಿಶ್ವ ಮಾತೃ ಭಾಷಾ ದಿನವನ್ನು ಅಚರಿಸುವ ಹಿಂದೆ ನಮ್ಮ ಭಾರತದ ಉಪಖಂಡ ಮತ್ತು ಬಂಗಾಲಿ ಭಾಷೆಯ ಪ್ರಭಾವವಿದೆ ಎಂದರೆ ಬಹುತೇಕರು ಅಚ್ಚರಿ ಪಟ್ಟರೂ ಅದೇ ಸತ್ಯವಾದ ವಿಷಯವಾಗಿದೆ.
ನಮಗೆಲ್ಲರಿಗೂ ತಿಳಿದಿರುವಂತೆ 1947 ರಲ್ಲಿ ಬ್ರೀಟೀಷರು ಭಾರತವನ್ನು ಬಿಟ್ಟು ಹೋಗುವ ಮುನ್ನಾ ಭಾರತದೇಶವನ್ನು ಮೂರು ಭಾಗಗಳಾಗಿ ತುಂಡರಿಸಿ ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನ ಎಂಬ ಎರಡು ಮುಸಲ್ಮನ ಬಾಹುಳ್ಯದ ಪ್ರದೇಶಗಳನ್ನು ಭಾರತದ ಅಕ್ಕ ಪಕ್ಕದಲ್ಲಿರಿಸಿ ಹೋದರು. ಅಂದಿನ ಪೂರ್ವ ಪಾಕಿಸ್ತಾನವೇ ಇಂದಿನ ಬಾಂಗ್ಲಾದೇಶವಾಗಿದ್ದು, ಪಶ್ಚಿಮ ಪಾಕಿಸ್ತಾನವೆಂದರೆ ಈಗಿರುವ ಪಾಕಿಸ್ತಾನವಾಗಿತ್ತು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಬ್ರಿಟೀಷರ ಒಡೆದು ಆಳುವ ನೀತಿಯಿಂದಾಗಿ ಅಕ್ಟೋಬರ್ 16, 1905 ರಂದು ಬಂಗಾಳಿ ಭಾಷಿಕರೇ ಇದ್ದ ಬಂಗಾಳವನ್ನು ಪೂರ್ವ ಬಂಗಾಳ ಮತ್ತು ಪಶ್ಚಿಮ ಬಂಗಾಳ ಎಂದು ವಿಭಜಿಸಲಾದರೂ ಎರಡೂ ಪ್ರದೇಶದ ಮಾತೃಭಾಷೆ ಬಂಗಾಳಿಯೇ ಆಗಿತ್ತು. ಸ್ವಾತಂತ್ರ್ಯಾ ನಂತರ ಹಿಂದೂ ಬಹುಸಂಖ್ಯಾತ ಪಶ್ಚಿಮ ಬಂಗಾಳ ಭಾರತದಲ್ಲೇ ಉಳಿದುಕೊಂಡರೆ, ಮುಸಲ್ಮಾನರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಪೂರ್ವ ಬಂಗಾಳ ಪೂರ್ವ ಪಾಕಿಸ್ತಾನವಾಗಿ ಪಾಕೀಸ್ಥಾನದ ಭಾಗವಾಯಿತು.






