ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಗೋಕಾಕ್ ನಿವಾಸ ಸೇರಿದಂತೆ, ಬೆಂಗಳೂರಿನ ಡಾಲರ್ಸ್ ಕಾಲೋನಿಯ ಆರ್‌ಎಮ್‌ವಿ ಎಕ್ಸ್‌ಟೆನ್ಷನ್‌ ನಲ್ಲಿರುವ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿ, ಪರಿಶೀಲನೆ ನಡೆಸಿದ್ದಾರೆ.

ಬುಧವಾರ ಮುಂಜಾನೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.

2 ಕಾರುಗಳಲ್ಲಿ ಬಂದ ಅಧಿಕಾರಿಗಳು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಮನೆ ಮೇಲೆ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಇದೇ ಸಮಯದಲ್ಲಿ ಸತೀಶ್ ಜಾರಕಿಹೊಳಿಯವರಿಗೆ ಸೇರಿದ ಗೋಕಾಕ್ ಮನೆಯಲ್ಲಿಯೂ ದಾಳಿಯಾಗಿದೆ. ಅಲ್ಲದೆ ಅವರ ಪುತ್ರಿ , ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಾಂಕ ಜಾರಕಿಹೊಳಿ ಮನೆಯಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಈ ಹಿಂದೆಯೂ ಸತೀಶ್ ಸಹೋದರಿಯ ಪತಿಯಾದ ಮಂಜುನಾಥ್ ಅವರ (ಭಾಮೈದ) ಮನೆ ಮೇಲೆ ಬೆಂಗಳೂರು, ಬೆಳಗಾವಿಯಲ್ಲಿ ದಾಳಿ ನಡೆಸಿ 13 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ನಗದು, ಚಿನ್ನಾಭರಣ ವಶಪಡಿಸಿಕೊಂಡಿದ್ದರು.

ಜೂನ್ 24 ರಂದು ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದ ಭಾಮೈದ ಮನೆ ಮೇಲೆ ದಾಳಿಯಾಗಿತ್ತು. ಅಕ್ರಮ ಆಸ್ತಿ ಸಂಪಾದನೆ , ಲಂಚದ ಆರೋಪಗಳೂ ಕೇಳಿ ಬಂದಿದ್ದವು. ಅನಧಿಕೃತವಾಗಿ ಲೈಸೆನ್ಸ್ ಹಂಚಿಕೆ ಮಾಡಲಾಗಿದ್ದರಿಂದ ಸಾಕಷ್ಟು ದೂರು ಕೇಳಿಬಂದಿದ್ದವು. ಮಹತ್ವದ ದಾಖಲೆ ಇರುವ ಪ್ರಮುಖ ಡೈರಿ ಕೂಡಾ ಲಭ್ಯವಾಗಿತ್ತು.

ಬೆಳಗಾವಿ-ಗೋವಾದಲ್ಲೂ ದಾಳಿ: ಜಾರಿ ನಿರ್ದೇಶನಾಲಯ ಅಧಿಕಾರಿಗಳ ತಂಡ ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ನಿವಾಸಗಳು ಹಾಗೂ ಆಪ್ತರ ಮನೆಗಳ ಮೇಲೂ ದಾಳಿ ನಡೆಸಿದೆ.

ಇಲ್ಲಿನ ವೈ. ಮಂಜುನಾಥ ಅವರ ನಿವಾಸ ಹಾಗೂ ಗೋಕಾಕ್‌ನಲ್ಲಿರುವ ಸತೀಶ್ ಜಾರಕಿಹೊಳಿ ಅವರ ಹಿಲ್ ಗಾರ್ಡನ್ ನಿವಾಸ ಹಾಗೂ ಸತೀಶ್ ಜಾರಕಿಹೊಳಿ ಆಪ್ತರಾದ ಡಾ. ಗಿರೀಶ್ ಸೋನ್ವಾಲಕರ್ ಅವರ ಲಕ್ಷ್ಮೀ ಟಕಡಿಯಲ್ಲಿರುವ ನಿವಾಸದ ಮೇಲೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕರ್ನಾಟಕ ಹಾಗೂ ಗೋವಾ ಇಡಿ ಅಧಿಕಾರಿಗಳ ತಂಡಗಳು ರಾಜ್ಯದ ವಿವಿಧೆಡೆ ಸುಮಾರು 15 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿರುವ ಮಾಹಿತಿ ಲಭ್ಯವಾಗಿದೆ.

ವೈ.ಮಂಜುನಾಥ ಅವರು ಕೆಲವು ವರ್ಷಗಳ ಹಿಂದೆ ಆಫ್ರಿಕಾ ಖಂಡದಲ್ಲಿ ತಮ್ಮ ಪತ್ನಿ ಹೆಸರಿನಲ್ಲಿ ಮೈನಿಂಗ್ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದರು ಎನ್ನಲಾಗಿದ್ದು, ಈ ಹೂಡಿಕೆಗೆ ಸಂಬಂಧಿಸಿದ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಆರೋಪದಡಿ ತನಿಖೆ ನಡೆಯುತ್ತಿದೆ.

ಈ ವ್ಯವಹಾರದಲ್ಲಿ ಮಂಜುನಾಥ ಅವರ ಪತ್ನಿ ಹಾಗೂ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ಪಾಲುದಾರರಾಗಿದ್ದಾರೆ ಎನ್ನಲಾಗುತ್ತಿದೆ. ರಾಹುಲ್ ಜಾರಕಿಹೊಳಿ ಹಾಗೂ ಮಂಜುನಾಥ ಕುಟುಂಬ ಹಲವು ಉದ್ಯಮಗಳಲ್ಲಿ ಪಾಲುದಾರಿಕೆ ಹೊಂದಿರುವ ಹಿನ್ನೆಲೆಯಲ್ಲಿ ಇಡಿ ದಾಳಿ ನಡೆದಿದೆ ಎನ್ನಲಾಗಿದೆ. ಸತೀಶ್ ಜಾರಕಿಹೊಳಿಯವರ ಆಪ್ತರಾದ ಡಾ.ಗಿರೀಶ್ ಸೋನ್ವಾಲಕರ್, ರಾಜು ಧರಗಶೆಟ್ಟಿ, ವಿಠ್ಠಲ ಪರಸನ್ನವರ ಅವರ ನಿವಾಸದಲ್ಲಿಯೂ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ