ಹೊಸ ವರ್ಷದ ಮೊದಲ ಹಬ್ಬವಾದ ಯುಗಾದಿಗಾಗಿ ಇಲ್ಲಿವೆ ಬಾಯಿ ಚಪ್ಪರಿಸುವ ಬಗೆಬಗೆಯ ಭರ್ಜರಿ ಸಿಹಿ ಭಕ್ಷ್ಯಗಳು! ಇವನ್ನು ಮಾಡಿ ಸವಿದು, ಯುಗಾದಿಯನ್ನು ಸಡಗರ ಸಂಭ್ರಮದಿಂದ ಆಚರಿಸಿ!

ಜಹಾಂಗೀರ್

ಸಾಮಗ್ರಿ : 1 ಕಪ್‌ ಉದ್ದಿನಬೇಳೆ, 1 ಚಮಚ ಅಕ್ಕಿ ಹಿಟ್ಟು, 2 ಕಪ್‌ ಸಕ್ಕರೆ, ಸ್ವಲ್ಪ ಕೇಸರಿ ಫುಡ್‌ ಕಲರ್‌, 2 ಏಲಕ್ಕಿ, 1 ಚಮಚ ರೋಸ್‌ ಎಸೆನ್ಸ್, ಚಿಟಕಿ ಸೋಡಾ, ಕರಿಯಲು ಎಣ್ಣೆ.

ವಿಧಾನ :  ಉದ್ದಿನಬೇಳೆಯನ್ನು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ನಂತರ ಅದನ್ನು ಗಟ್ಟಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಅಕ್ಕಿಹಿಟ್ಟು ಸೇರಿಸಿ, ಫುಡ್‌ ಕಲರ್‌, ಸೋಡಾ ಹಾಕಿ ಕಲಸಿ. ಉದ್ದಿನ ಹಿಟ್ಟು ರೆಡಿ. ಪಾತ್ರೆಗೆ ಸಕ್ಕರೆ ಮತ್ತು ನೀರು ಹಾಕಿ ಒಲೆಯ ಮೇಲಿಡಿ. ಸಕ್ಕರೆ ಕರಗಿ ನಾರು ಪಾಕ ಮಾಡಿಕೊಳ್ಳಿ. ಇದಕ್ಕೆ ಒಂದು ಗಟ್ಟಿಯಾದ ಪ್ಲಾಸ್ಟಿಕ್‌ ಕವರ್‌ ಗೆ ಕೆಳಗಡೆ ಸಣ್ಣ ತೂತು ಮಾಡಿ, ಕವರ್‌ ಒಳಗೆ ಉದ್ದಿನ ಹಿಟ್ಟು ಹಾಕಿ ಮುಚ್ಚಿ ಸುರುಳಿ ಸುರುಳಿಯಾಗಿ ಎಣ್ಣೆಯಲ್ಲಿ ಬಿಟ್ಟು ಕರಿಯಿರಿ. ಹೊಂಬಣ್ಣ ಬಂದ ನಂತರ ತೆಗೆದು ಸಕ್ಕರೆ ಪಾಕಕ್ಕೆ ಹಾಕಿ. ಜಹಾಂಗೀರ್‌ ರೆಡಿ.

Screenshot_20260107-233149.Gmail

ರಸಗುಲ್ಲಾ

ಛೇನಾಗಾಗಿ ವಿಧಾನ : ಒಂದು ಲೀಟರ್‌ ಹಾಲನ್ನು ಪಾತ್ರೆಯಲ್ಲಿ ಚೆನ್ನಾಗಿ ಕುದಿಸಬೇಕು. ನಂತರ ಅದನ್ನು ಕೆಳಗಿಳಿಸಿ ತುಸುವೇ ನಿಂಬೆರಸ ಬೆರೆಸುತ್ತಾ ಸೌಟಿನಲ್ಲಿ ಚೆನ್ನಾಗಿ ಗೊಟಾಯಿಸಿ. ತುಸು ಹೊತ್ತಿನಲ್ಲಿ ಹಾಲು ಒಡೆದು ಬೇರೆಯಾಗುತ್ತದೆ. ಹಾಲನ್ನು ತಣ್ಣಗಾಗಲು ಬಿಡಿ. ನಂತರ ಒಂದು ಪಾತ್ರೆಯ ಮೇಲೆ ಬಿಸಿ ಮಸ್ಲಿನ್‌ ಬಟ್ಟೆ ಹರಡಿ, ಒಡೆದ ಹಾಲನ್ನು ಅದರಲ್ಲಿ ಹೊಯ್ದು ಬಟ್ಟೆಯನ್ನು ಗಂಟು ಕಟ್ಟಿ. ಗಂಟನ್ನು ಮೆಲ್ಲಗೆ ಹಿಂಡಿ ಸೋರಲು ಬಿಡಿ. ನೀರು ಸೋರಲು ಕೆಳಗೊಂದು ಪಾತ್ರೆ ಇಡಿ. ರಸಗುಲ್ಲಾ ಸಕ್ಕರೆ ಪಾಕಕ್ಕೆ ಇಳಿಯುವ ತನಕ ಈ ನೀರನ್ನು ಎಸೆಯಬೇಡಿ. ಅಗತ್ಯವಾದಾಗ ಬಳಸಿಕೊಳ್ಳಿ. ಸುಮಾರು ಒಂದು ಗಂಟೆಯ ನಂತರ ಗಂಟನ್ನು ಇಳಿಸಿದರೆ, ಬಟ್ಟೆಯೊಳಗೆ ಪುಡಿ ಪುಡಿಯಾಗಿರುವ ಪನೀರ್‌ ಸಿಗುತ್ತದೆ, ಇದೇ ಛೇನಾ. ರಸಗುಲ್ಲಾ, ರಸಮಲಾಯಿ, ಸಂದೇಶ್‌ ಎಲ್ಲ ತಿಂಡಿಗಳ ತಯಾರಿಕೆಗೆ ಆರಂಭ ಆಗೋದು ಇದರಿಂದ. ರಸಗುಲ್ಲಾ, ರಸಮಲಾಯಿ, ಸಂದೇಶ್ ಮುಂತಾದ ಬಂಗಾಳಿ ತಿಂಡಿಗಳನ್ನು ತಯಾರಿಸಲು ಛೇನಾ ಬೇಕು. ಹಾಲನ್ನು ಒಡೆದು ತಯಾರಿಸುವ ಸಾಮಗ್ರಿ ಇದು.

ಸಾಮಗ್ರಿ : 4 ಕಪ್‌ ಹಾಲು (ಕುದಿಸಿ ಫ್ರಿಜ್‌ ನಲ್ಲಿ ಎಂಟು ಗಂಟೆಗಳ ಕಾಲ ಇರಿಸಿ) ಅದರ ಮೇಲೆ ಕಟ್ಟಿರುವ ಕೆನೆ ತೆಗೆದು ಛೇನಾ ತಯಾರಿಸಿ. 3-5 ಕಪ್‌ ನೀರು, 2 ಕಪ್‌ ಸಕ್ಕರೆ, 2 ಚಮಚ ಆರಾರೂಟ್‌ ಅಥವಾ ಮೈದಾ, 3 ಚಮಚ ನಿಂಬೆರಸ, 5 ಏಲಕ್ಕಿ.

ವಿಧಾನ : ಹಾಲಿನಿಂದ ಛೇನಾ ತಯಾರಿಸಿ. ಇದನ್ನು ಒಂದು ತಟ್ಟೆಗೆ ಹಾಕಿ ಒಂದಿಷ್ಟೂ ಗಂಟು ಉಳಿಯದಂತೆ ಚೆನ್ನಾಗಿ ನಾದಿ. ನಾದುವಾಗ ಕೈ ಬೆರಳುಗಳನ್ನು ಮಾತ್ರ ಬಳಸಿ. ಇದು ಮೆತ್ತನೆಯ ಅಂಟಾದಾಗ, ಎಣ್ಣೆಯ ಪಸೆ ಬಿಡುತ್ತದೆ. ಇದಕ್ಕೆ ಆರಾರೂಟ್ ಅಥವಾ ಮೈದಾ ಸೇರಿಸಿ, ಇನ್ನಷ್ಟು ನಾದಿಕೊಳ್ಳಿ. ಈ ಮುದ್ದೆಯಿಂದ ಚಿಕ್ಕ ನಿಂಬೆಗಾತ್ರದ ಉಂಡೆ ಮಾಡಿಕೊಂಡು ಅಂಗೈಯಿಂದ ಉಂಡೆ ನುಣುಪಾಗುವಂತೆ ಗುಂಡಗೆ ಮಾಡಿ.

ಒಂದು ಪಾತ್ರೆಗೆ ನೀರು ಮತ್ತು ಸಕ್ಕರೆ ಹಾಕಿ ಕುದಿಸಿ. ಸಕ್ಕರೆ ಪೂರ್ತಿ ಕರಗಿದ ಬಳಿಕ ಏಲಕ್ಕಿ ಹಾಕಿ, ಈಗ ಸಕ್ಕರೆ ಸಿರಪ್‌ಸಿದ್ಧವಾಯಿತು. ಹದನಾದ ಉರಿಯಲ್ಲಿ ಕುದಿಯುವ ಸಕ್ಕರೆ ಸಿರಪ್‌ ಗೆ ಛೇನಾ ಉಂಡೆಗಳನ್ನು ಹಾಕಿ. ಅವು ಬೇಯುತ್ತಿರುವಾಗ ಪಾತ್ರೆಯ ಮುಚ್ಚಳ ಮುಚ್ಚಿ. ಸುಮಾರು ಹದಿನೈದು ನಿಮಿಷ ಬೇಯಿಸಿದಾಗ ಛೇನಾ ಉಂಡೆಗಳು ದುಪ್ಪಟ್ಟು ಗಾತ್ರಕ್ಕೆ ಹಿಗ್ಗುತ್ತವೆ. ಒಲೆಯಿಂದ ಕೆಳಗಿಳಿಸಿ ತಣ್ಣಗಾಗಲು ಬಿಡಿ. ನಂತರ ಫ್ರಿಜ್‌ ನಲ್ಲಿ ಇರಿಸಿ. ಪರಿಪೂರ್ಣ ರಸಗುಲ್ಲಾ ಉಂಡೆ ಸ್ಪಂಜಿನ ಮುದ್ದೆಯಂತೆ ಇರುತ್ತದೆ. ತಿನ್ನಲು ಬಲು ಸವಿಯಾಗಿರುತ್ತದೆ.

IMG_20210930_132314-(2)

ಪೇಠಾ

ಸಾಮಗ್ರಿ :  1 ಕಿಲೋ ಬಲಿತ ಬೂದುಗುಂಬಳಕಾಯಿ ತಿರುಳು, ಅರ್ಧ ಟೀ ಸ್ಪೂನ್‌ ಲೈಮ್ ಸ್ಟೋನ್‌/ಸುಣ್ಣ, ಒಂದೂವರೆ ಕಪ್ ಸಕ್ಕರೆ, 4 ಏಲಕ್ಕಿ, ಸ್ವಲ್ಪ ಕೇಸರಿ ಎಸಳು, ಚಿಟಕಿ ಕೇಸರಿ ಫುಡ್‌ ಕಲರ್‌, 3-4 ಹನಿ ಕೇದಗೆ ಎಸೆನ್ಸ್, 2 ಕಪ್‌ ನೀರು.

ವಿಧಾನ : ಸ್ಛಟಿಕದ ಪುಡಿಯನ್ನು ಅರ್ಧ ಕಪ್‌ ನೀರಿನಲ್ಲಿ ಕರಗಿಸಿ ಬದಿಯಲ್ಲಿರಿಸಿ. ಬೂದುಗುಂಬಳಕಾಯಿಯ ಸಿಪ್ಪೆ ಮತ್ತು ಬೀಜವನ್ನು ಸಂಪೂರ್ಣವಾಗಿ ತೆಗೆದುಹಾಕಿ. ಕ್ಯೂಬ್ಸ್ ನಂತೆ ಸ್ಲೈಸ್‌ ಮಾಡಿಕೊಳ್ಳಿ. ಸಿಪ್ಪೆಯನ್ನು ಸಂಪೂರ್ಣವಾಗಿ ತೆಗೆದುಹಾಕಿ. ಇಲ್ಲದಿದ್ದರೆ ಪೇಠಾ ಗಟ್ಟಿಯಾಗುವುದಿಲ್ಲ. ಬಳಿಕ ಆಯತಾಕೃತಿಯ ಹೋಳುಗಳನ್ನಾಗಿ ಕತ್ತರಿಸಿ. ಹೋಳುಗಳ ಮೇಲೆಲ್ಲ ಪೋರ್ಕ್‌ ನಿಂದ ಚುಚ್ಚಿ ಪಕ್ಕದಲ್ಲಿ ಇರಿಸಿ. ದೊಡ್ಡ ಬಟ್ಟಲಿನಲ್ಲಿ 4 ಕಪ್‌ ನೀರು ತೆಗೆದುಕೊಂಡು ಟೀ ಸ್ಪೂನ್‌ ಸುಣ್ಣವನ್ನು ಕರಗಿಸಿ. ಕತ್ತರಿಸಿದ ಬೂದುಗುಂಬಳವನ್ನು ಸೇರಿಸಿ, ಚೆನ್ನಾಗಿ ಬೆರೆಸಿ. 24 ಗಂಟೆಗಳ ಕಾಲ ನೆನೆಸಿ ಪ್ರತಿ ಮೂರು ಗಂಟೆಗೊಮ್ಮೆ ಮಿಶ್ರಣ ಮಾಡಿ. 24 ಗಂಟೆಯ ನಂತರ ಬೂದುಗುಂಬಳ ಬಿಳಿ ಮತ್ತು ಗಟ್ಟಿಯಾಗಿ ತಿರುಗುತ್ತವೆ. ಪ್ರತಿ ತುಣುಕುಗಳನ್ನು ಉಜ್ಜುವ ಮೂಲಕ ಕುಂಬಳಕಾಯಿ ಹೋಳುಗಳನ್ನು ಚೆನ್ನಾಗಿ ತೊಳೆಯಿರಿ. ಸುಣ್ಣದ ಎಲ್ಲ ಕುರುಹುಗಳನ್ನು ತೆಗೆದುಹಾಕಲು ಕನಿಷ್ಠ ಐದು ಬಾರಿ ಅವುಗಳನ್ನು ಶುಚಿಮಾಡಿ.

ಹೋಳುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಇವುಗಳ ಮೇಲೆ ಸ್ಛಟಿಕದ ಹುಡಿ ಎಲ್ಲಾ ಹೋಳುಗಳಿಗೂ ಸರಿಯಾಗಿ ತಾಗುವಂತೆ ಮಾಡಿ. ಈಗ ಪಾತ್ರೆಯಲ್ಲಿ 4 ಕಪ್‌ ನೀರನ್ನು ಕುದಿಸಿ. ತೊಳೆದ ಬೂದುಗುಂಬಳ ತುಣುಕುಗಳನ್ನು ಸೇರಿಸಿ ಕೈಯಾಡಿಸುತ್ತಾ ಬೇಯಿಸಿ. ತುಸು ಮೆತ್ತಗಾಗಿ, ನೀರು ಹೊರಗೆ ಬರುವ ತನಕ ಬೇಯಿಸಿ ಕೆಳಗಿಳಿಸಿ. ಅನಂತರ ಈ ಹೋಳುಗಳನ್ನು ತಣ್ಣನೆಯ ನೀರಿನಿಂದ ತೊಳೆಯಿರಿ. ಇನ್ನೊಂದು ಪಾತ್ರೆಯಲ್ಲಿ ಸಕ್ಕರೆಗೆ ನೀರು ಹಾಕಿ ಕಾಯಿಸಿ. ಸಕ್ಕರೆ ಕರಗಿ, ಮೂರು ಎಳೆ ನೂಲಿನ ಗಟ್ಟಿ ಸಿರಪ್‌ ತಯಾರಿಸಿ. ಈ ಸಿರಪ್‌ ಪಾತ್ರೆಯ ಮೇಲೆ ಜಾಲರಿಯಂಥ ಮುಚ್ಚಳ ಮುಚ್ಚಿ ರಾತ್ರಿಯಿಡೀ ಇರಿಸಿ. ಮರುದಿನ ಸಿರಪ್‌ ನ್ನು ಮತ್ತೊಮ್ಮೆ ಕುದಿಸಿ, ಇನ್ನಷ್ಟು ದಪ್ಪಗೆ ಮಾಡಿ. ಇದಕ್ಕೆ ಹೋಳುಗಳನ್ನು ಹಾಕಿ 3-4 ನಿಮಿಷ ಕುದಿಸಿ. ಹೋಳುಗಳು ಸಕ್ಕರೆ ಸಿರಪ್ ಹೀರಿಕೊಳ್ಳುತ್ತದೆ. ಹೆಚ್ಚಿನ ಸಿರಪ್‌ ತೆಗೆದು ಹಾಕಿ. ಹೋಳುಗಳ ಮೇಲೆ ಸುವಾಸನೆಗಾಗಿ ಏಲಕ್ಕಿ ಪುಡಿ, ಕೇಸರಿ ಬಣ್ಣ, ಎಸೆನ್ಸ್ ಮತ್ತು ಪನ್ನೀರು ಹಾಕಿ ಕೈಯಾಡಿಸಿ. ತಣ್ಣಗಾದಾಗ ಪೇಠಾ ತಯಾರು. ಇದನ್ನು ಫ್ರಿಜ್‌ ನಲ್ಲಿರಿಸಿ, ಬೇಕಾದಾಗ ಸವಿಯಿರಿ.

IMG_20210930_125744

ರಸಮಲಾಯಿ

ಸಾಮಗ್ರಿ : ಛೇನಾ 3 ಕಪ್‌, ಅರ್ಧ ಕಪ್‌ ಹಾಲು, 2 ಕಪ್‌ ಸಕ್ಕರೆ, ಕಾಲು ಚಮಚ ಏಲಕ್ಕಿ ಪುಡಿ, 8-10 ಕೇಸರಿ ದಳ, 3-3 ಚಮಚ ಕತ್ತರಿಸಿದ ಪಿಸ್ತಾ, ಬಾದಾಮಿ ಚೂರು.

ವಿಧಾನ : ಛೇನಾವನ್ನು ಚಿಕ್ಕ ಚಿಕ್ಕ ಉಂಡೆ ಮಾಡಿ, ಅವುಗಳನ್ನು ಅಂಗೈ ಮೇಲೆ ಇರಿಸಿಕೊಂಡು ಚಪ್ಪಟೆ ಬಿಲ್ಲೆಗಳ ಆಕೃತಿ ಆಗುವಂತೆ ಒತ್ತಿ. ಈ ಬಿಲ್ಲೆಗಳನ್ನು ಸಕ್ಕರೆ ನೀರಿನಲ್ಲಿ ಬೇಯಿಸಿ, ಇಳಿಸಿ. ಪಾತ್ರೆಗೆ ಹಾಲು ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಿ. ಅದು ತಳ ಹಿಡಿಯದಂತೆ ತಿರುವುತ್ತಿರಿ. ಕುದಿಯುತ್ತಿರುವಾಗ ಒಂದು ದೊಡ್ಡ ಚಮಚ ಸಕ್ಕರೆ, ಏಲಕ್ಕಿ ಪುಡಿ ಬೆರೆಸಿ. ಸಕ್ಕರೆ ಕರಗಿದ ಬಳಿಕ ಇಳಿಸಿ. ಪಿಸ್ತಾ, ಬಾದಾಮಿ, ಕೇಸರಿ ಸೇರಿಸಿ ತಿರುಗಿಸಿ. ರಸಗುಲ್ಲಾಗಳನ್ನು ಸಕ್ಕರೆ ಸಿರಪ್‌ ನಿಂದ ತೆಗೆದು ಮೆತ್ತಗೆ ಹಿಂಡಿ ಹಾಲಿಗೆ ಹಾಕಿ. ಇದೇ ರಸಮಲಾಯಿ. ಪೂರ್ತಿ ತಣ್ಣಗಾದ ನಂತರ ಇದನ್ನು ಫ್ರಿಜ್‌ ನಲ್ಲಿ ಇರಿಸಿ. ಸರ್ವ್ ‌ಮಾಡುವಾಗ ಅದರ ಮೇಲೆ ಬಾದಾಮಿ, ಪಿಸ್ತಾ ಚೂರು ಉದುರಿಸಿ ಅಲಂಕರಿಸಿ ಸವಿಯಲು ಕೊಡಿ.

Screenshot_20260107-223535.Gmail

ಗುಜಿಯಾ

ಸಾಮಗ್ರಿ : ಒಂದೂವರೆ ಕಪ್‌ ಮೈದಾ, 3 ಚಮಚ ತುಪ್ಪ, 4 ಚಿಕ್ಕ ಚಮಚ ಡಾಲ್ಡಾ, ಅರ್ಧ ಕಪ್‌ ನೀರು, ಕರಿಯಲು ಎಣ್ಣೆ ಅಥವಾ ತುಪ್ಪ. ಅಂಟಿಗೆ ಮೈದಾ ಒಂದು ಚಿಕ್ಕ ಚಮಚ, ನೀರು ಒಂದು ಚಮಚ. ಸಕ್ಕರೆ ಕಾಲು ಕಪ್‌, ನೀರು ಕಾಲು ಕಪ್‌, ಚಿಟಕಿ ಏಲಕ್ಕಿ ಪುಡಿ.

ಹೂರಣಕ್ಕೆ : ತುಪ್ಪ 3 ಚಮಚ, ತೆಂಗಿನ ಕಾಯಿಪುಡಿ ಕಾಲು ಕಪ್‌, ಬಾದಾಮಿ, ಗೋಡಂಬಿ ಚೂರು ಅರ್ಧ ಕಪ್‌, ಕುಂಬಳ ಬೀಜ 2 ಚಿಕ್ಕ ಚಮಚ, 10 ಒಣದ್ರಾಕ್ಷಿ, 125 ಗ್ರಾಂ ತುರಿದ ಖೋವಾ, ಅರ್ಧ ಚಮಚ ಏಲಕ್ಕಿ ಪುಡಿ, ಅರ್ಧ ಕಪ್‌ ಸಕ್ಕರೆ.

ವಿಧಾನ : ಮೊದಲು ಹೂರಣ ತಯಾರಿಸಿಕೊಳ್ಳಿ. ಒಂದು ದಪ್ಪ ತಳದ ಬಾಣಲೆಯಲ್ಲಿ 3 ಚಮಚ ತುಪ್ಪ ಬಿಸಿ ಮಾಡಿ. ಇದಕ್ಕೆ ದ್ರಾಕ್ಷಿ, ಬಾದಾಮಿ, ಗೋಡಂಬಿ ಚೂರುಗಳನ್ನು ಹದವಾಗಿ ಹುರಿದು ತೆಗೆದಿಡಿ. ನಂತರ ಖೋವಾ ತುರಿ ಹಾಕಿ ಹುರಿಯಿರಿ. ಖೋವಾ ಕರಗಿ ಮೆತ್ತನೆ ಮುದ್ದೆ ಆಗುತ್ತಾ ಬಂದಾಗ ತೆಗೆದಿಡಿ. ನಂತರ ಇದಕ್ಕೆ ತೆಂಗಿನಕಾಯಿ ಪುಡಿ ಸೇರಿಸಿ. ಅದು ಪರಿಮಳ ಬರುವ ತನಕ ಹದವಾಗಿ ಹುರಿಯಿರಿ. ನಂತರ ಮೆತ್ತನೆ ಖೋವಾ, ಸಕ್ಕರೆ ಮತ್ತು ಏಲಕ್ಕಿಪುಡಿ ಹಾಗೂ ದ್ರಾಕ್ಷಿ, ಬಾದಾಮಿ, ಗೋಡಂಬಿ ಚೂರುಗಳನ್ನು ಪಾತ್ರೆಗೆ ಸೇರಿಸಿ ಎಲ್ಲವನ್ನೂ ಬೆರೆಸಿ.

ಮೈದಾ, ತುಪ್ಪ  ಮತ್ತು ಡಾಲ್ಡಾ ಚೆನ್ನಾಗಿ ಬೆರೆಸಿ, ಅಗತ್ಯವಿದ್ದಷ್ಟು ನೀರು ಹಾಕಿ ಕಲಸಿ. ಗಟ್ಟಿಯಾಗಿ ಕಲಸಿ, ಬಳಿಕ ಚೆನ್ನಾಗಿ ನಾದಿ ಒಂದು ಒದ್ದೆ ಬಟ್ಟೆ ಮುಚ್ಚಿಡಿ. ಅರ್ಧ ಗಂಟೆ ಕಾಲ ಬದಿಯಲ್ಲಿ ಇರಿಸಿ. ಒಂದು ಪುಟ್ಟ ಬಟ್ಟಲಿನಲ್ಲಿ ಒಂದು ಚಮಚ ಮೈದಾ, ಒಂದು ಸ್ವಲ್ಪ ಬಿಸಿ ನೀರನ್ನು ಸೇರಿಸಿ ಬೆರೆಸಿ. ಇದು ಗುಜಿಯಾದ ಅಂಟು. ಮೈದಾ ಕಲಸಿದ ಹಿಟ್ಟನ್ನು ಸಣ್ಣ ಉಂಡೆ ಮಾಡಿ ಪೂರಿಯಂತೆ ಲಟ್ಟಿಸಿ. ಇದರ ಮಧ್ಯದಲ್ಲಿ ಹೂರಣವನ್ನು ಇಟ್ಟು, ತಯಾರಿಸಿದ ಅಂಟು ಹಾಕಿ ಮುಚ್ಚಿ. ಇದಕ್ಕೆ ಸುಂದರ ವಿನ್ಯಾಸದ ಮೋಲ್ಡ್ ‌ಗಳು ಸಿಗುತ್ತವೆ. ಅದರ ಮೇಲೆ ಈ ರೆಡಿ ಮಾಡಿದ ಮೈದಾ ಹೂರಣವನ್ನು ಇಟ್ಟು ಮುಚ್ಚಿ ಒತ್ತಿ. ನಂತರ ತೆಗೆದು ಪಕ್ಕದಲ್ಲಿಡಿ. ಇದೇ ಗುಜಿಯಾ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಈ ಗುಜಿಯಾಗಳನ್ನು ಬಂಗಾರದ ಬಣ್ಣ ಬರುವವರೆಗೆ ಕರಿಯಿರಿ. ಸಕ್ಕರೆಗೆ ನೀರು ಬೆರೆಸಿ, ಸಿರಪ್‌ ಮಾಡಿಕೊಳ್ಳಿ. ಇದಕ್ಕೆ ಏಲಕ್ಕಿ ಪುಡಿ ಹಾಕಿ ಕೈಯಾಡಿಸಿ. ಬಿಸಿಯಾಗಿರುವಾಗಲೇ ಇದನ್ನು ಗುಜಿಯಾದ ಮೇಲೆ ಹಾಕಿ. ತಣ್ಣಗಾದ ಮೇಲೆ ಸಕ್ಕರೆಯ ಲೇಪ ಇದರ ಮೇಲೆ ಇರುತ್ತದೆ. ಈ ಯುಗಾದಿ ಸ್ಪೆಷಲ್, ತಿನ್ನಲು ಬಲು ರುಚಿ.

IMG_20210930_130617-(1)-(1)

ರಾಜ್ಭೋಗ್

ಹೂರಣದ ಸಾಮಗ್ರಿ : ಬಾದಾಮಿ, ಪಿಸ್ತಾ, ಏಲಕ್ಕಿ ಪುಡಿ, 1-2 ಚಮಚ ಛೇನಾ, ಫುಡ ಕಲರ್‌.

ವಿಧಾನ : ಬಾದಾಮಿ, ಪಿಸ್ತಾಗಳನ್ನು ಸ್ವಲ್ಪ ಹೊತ್ತು ಬಿಸಿ ನೀರಿನಲ್ಲಿ ನೆನೆಸಿ, ಸಿಪ್ಪೆ ತೆಗೆಯಿರಿ. ಬಳಿಕ ಗೋಡಂಬಿ ಸೇರಿಸಿ ಸಣ್ಣಗೆ ಕತ್ತರಿಸಿ, ಇದಕ್ಕೆ ಏಲಕ್ಕಿ ಪುಡಿ, ಛೇನಾ, ಫುಡ್‌ ಕಲರ್‌ ಸೇರಿಸಿ ಚೆನ್ನಾಗಿ ಕಲಸಿಕೊಂಡು ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿ ಪಕ್ಕಕ್ಕಿಡಿ. ರಸಗುಲ್ಲಾದ ಛೇನಾ ಉಂಡೆಗಳನ್ನು ತಯಾರಿಸಿ. ರಾಜಭೋಗ್‌ ಗೆ ತುಸು ದೊಡ್ಡ ಉಂಡೆಗಳು ಬೇಕು. ಈ ಉಂಡೆಗಳನ್ನು ನಡುವೆ ಅಳ್ಳಕ ಮಾಡಿ ನಡುವೆ ಪಿಸ್ತಾ, ಬಾದಾಮಿ ಹೂರಣದ ಚಿಕ್ಕ ಉಂಡೆ ಇರಿಸಿ, ಮುಚ್ಚಿ ದೊಡ್ಡ ಉಂಡೆಗಳಾಗಿ ಮಾಡಿಕೊಳ್ಳಿ. ನಂತರ ಪಾತ್ರೆಯಲ್ಲಿ 4 ಕಪ್ ನೀರು, ಮೂರು ಕಪ್‌ ಸಕ್ಕರೆ ಸೇರಿಸಿ. ಸಕ್ಕರೆ ಸಿರಪ್‌ ಕುದಿಯುವಾಗ ರಾಜಭೋಗ್ ಉಂಡೆಗಳನ್ನು ಮೆಲ್ಲಗೆ ಹಾಕಿ, ಮುಚ್ಚಳ ಮುಚ್ಚಿ 20 ನಿಮಿಷ ಬೇಯಿಸಿ. ಕೆಳಗಿಳಿಸಿದ ನಂತರ ಈ ಮಿಶ್ರಣಕ್ಕೆ ಬಣ್ಣ ಬೆರೆಸಿದ ನೀರು ಸೇರಿಸಬಹುದು. ತಣ್ಣಗಾದ ಬಳಿಕ ಫ್ರಿಜ್‌ ನಲ್ಲಿ ಇರಿಸಿ, ಸವಿಯಲು ಕೊಡಿ.

Screenshot_20240912-130350-(3)

ದೊಧೋಳ್‌ (ಅಕ್ಕಿ ಹಲ್ವಾ)

ಸಾಮಗ್ರಿ : 1 ಕಪ್‌ ಅಕ್ಕಿ, 2 ತೆಂಗಿನಕಾಯಿ, 20-20 ಗೋಡಂಬಿ, ದ್ರಾಕ್ಷಿ, 5 ಅಚ್ಚು ಬೆಲ್ಲ, 2 ಚಮಚ ಸಕ್ಕರೆ, ಚಿಟಕಿ ಉಪ್ಪು.

ವಿಧಾನ : ಅಕ್ಕಿಯನ್ನು ಎರಡು ಗಂಟೆಗಳ ಕಾಲ ನೆನೆಸಿ, ನಂತರ ನೀರು ಬಸಿದು ಒಣಗಿಸಿ ಪುಡಿ ಮಾಡಿಕೊಳ್ಳಿ. ತೆಂಗಿನಕಾಯಿಯನ್ನು ತುರಿದುಕೊಂಡು, ಅದಕ್ಕೆ ಸ್ವಲ್ಪ ಬಿಸಿ ನೀರು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ತೆಳ್ಳಗಿನ ಬಟ್ಟೆಗೆ ಹಾಕಿ ಸೋಸಿಕೊಳ್ಳಿ. ತೆಂಗಿನಹಾಲು ಪಾತ್ರೆಯಲ್ಲಿ ಶೇಖರವಾಗುತ್ತದೆ. ಉಳಿಯುವ ತೆಂಗಿನ ಹಿಂಡಿಯನ್ನು ಗಿಡ ಅಥವಾ ಹಸುವಿಗೆ ಹಾಕಬಹುದು. ದಪ್ಪ ತಳದ ಪಾತ್ರೆಯಲ್ಲಿ ಅಕ್ಕಿಹಿಟ್ಟು, ತೆಂಗಿನಹಾಲನ್ನು ಗಂಟಿಲ್ಲದಂತೆ ಚೆನ್ನಾಗಿ ಕಲಸಿ, ಒಲೆಯ ಮೇಲಿಟ್ಟು ಮಂದ ಉರಿಯಲ್ಲಿ ಬೇಯಿಸಿ. ಮಿಶ್ರಣ ತಳ ಹಿಡಿಯದಂತೆ ಕೈಯಾಡಿಸುತ್ತಾ ಇರಿ. ಮಿಶ್ರಣ ಗಟ್ಟಿಯಾದಾಗ ಬೆಲ್ಲ ಸೇರಿಸಿ ಮತ್ತೆ ಕೈಯಾಡಿಸುತ್ತಿರಿ, ಬೆಲ್ಲ ಕರಗಿ ಮಿಶ್ರಣ ಚೆನ್ನಾಗಿ ಹೊಂದಿಕೊಂಡ ಬಳಿಕ ಗೋಡಂಬಿ ಚೂರು, ದ್ರಾಕ್ಷಿ, ಏಲಕ್ಕಿ ಪುಡಿ, ಚಿಟಕಿ ಉಪ್ಪು ಹಾಕಿ ಕೈಯಾಡಿಸಿ. ಮಿಶ್ರಣ ಗಟ್ಟಿ ಪಾತ್ರೆಯ ತಳ ಬಿಟ್ಟಾಗ ಒಲೆಯ ಮೇಲಿಂದ ಇಳಿಸಿ, ತುಪ್ಪ ಸವರಿದ ತಟ್ಟೆಗೆ ಮಿಶ್ರಣ ಸುರಿದು ಸಮತಟ್ಟಾಗಿ ಹರಡಿ, ತಣ್ಣಗಾದಾಗ ಚೌಕಾಕಾರದಲ್ಲಿ ಕತ್ತರಿಸಿ, ರುಚಿಯಾದ ಅಕ್ಕಿ ಹಲ್ವಾ ರೆಡಿ.

IMG_20210930_131051-(1)

ತೇಂಗಾ ಬರ್ಫಿ

ಸಾಮಗ್ರಿ : 1 ತೆಂಗಿನಕಾಯಿ, 1 ಕಪ್‌ ಸಕ್ಕರೆ, 2-3 ಏಲಕ್ಕಿ, ಕಾಲು ಕಪ್‌ ಹಾಲು, 2 ಚಮಚ ತುಪ್ಪ.

ವಿಧಾನ : ಮೊದಲು ತೆಂಗಿನಕಾಯಿಯನ್ನು ಸಣ್ಣಗೆ ತುರಿದುಕೊಳ್ಳಿ. ಬಾಣಲೆಗೆ ತುಪ್ಪ ಹಾಕಿ, ತೆಂಗಿನಕಾಯಿ ತುರಿ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. ಇನ್ನೊಂದು ಪಾತ್ರೆಗೆ ಸಕ್ಕರೆ ಮತ್ತು ನೀರು ಹಾಕಿ ಕರಗಿಸಿ, ಒಲೆ ಮೇಲಿಟ್ಟು ಕೈಯಾಡಿಸಿ. ಇದಕ್ಕೆ ಹಾಲು ಹಾಕಿ, ನೊರೆ ಬರುತ್ತದೆ. ಇದನ್ನು ಜಾಲರಿಯಲ್ಲಿ ಸೋಸಿ ನೊರೆ ತೆಗೆದುಬಿಡಿ. ನಾರು ಸಕ್ಕರೆ ಪಾಕ ಬಂದಾಗ ಹುರಿದ ತೆಂಗಿನ ತುರಿಗೆ ಹಾಕಿ ಚೆನ್ನಾಗಿ ಕೈಯಾಡಿಸುತ್ತಿರಿ. ಅದು ಗಟ್ಟಿಯಾಗಿ ಪಾತ್ರೆಯಿಂದ ತಳ ಬಿಟ್ಟಾಗ, ಏಲಕ್ಕಿ ಪುಡಿ ಹಾಕಿ ಕೈಯಾಡಿಸಿ. ಆನಂತರ ತುಪ್ಪ ಸವರಿದ ತಟ್ಟೆಗೆ ಹಾಕಿ ಸಮತಟ್ಟಾಗಿ ತಟ್ಟಿ. ಸ್ವಲ್ಪ ಆರಿದ ಮೇಲೆ ಚೌಕಾಕಾರವಾಗಿ ಕತ್ತರಿಸಿ, ಸವಿಯಲು ಕೊಡಿ.

IMG_20240906_230007614_HDR-(1)

ಸುನ್ನುಂದಾಲು

ಸಾಮಗ್ರಿ : 1 ಕಪ್‌ ಉದ್ದಿನ ಬೇಳೆ, 1 ಕಪ್‌ ಪುಡಿ ಸಕ್ಕರೆ, ಕಾಲು ಚಮಚ ಏಲಕ್ಕಿ ಪುಡಿ, ಅಗತ್ಯವಿದ್ದಷ್ಟು ಗೋಡಂಬಿ, ದ್ರಾಕ್ಷಿ, ತುಪ್ಪ.

ವಿಧಾನ : ಉದ್ದಿನ ಬೇಳೆಯನ್ನು ಬಾಣಲೆಗೆ ಹಾಕಿ ಕೆಂಪಗೆ ಹುರಿಯಿರಿ. ತಣ್ಣಗಾದ ಬಳಿಕ ಮಿಕ್ಸಿಯಲ್ಲಿ ಪುಡಿ ಮಾಡಿ. ಈ ಪುಡಿಗೆ ಸಕ್ಕರೆ ಪುಡಿ, ಏಲಕ್ಕಿ ಬೆರೆಸಿ, ತುಪ್ಪ ಬಿಸಿ ಮಾಡಿ ಅದನ್ನು ಉದ್ದಿನ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಬೆರೆಸಿ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಚೂರುಗಳನ್ನು ಹಾಕಿ, ಬಿಸಿಯಾಗಿರುವಾಗಲೇ ಉಂಡೆ ಕಟ್ಟಿ.

IMG_20210930_130924-(1)

ರವೆ ಲಡ್ಡು

ಸಾಮಗ್ರಿ : 1-1  ಕಪ್‌ ಚಿರೋಟಿ ರವೆ, ಸಕ್ಕರೆ, 4 ಏಲಕ್ಕಿ, ಅರ್ಧ ಕಪ್‌ ತುರಿದ ಕೊಬ್ಬರಿ. 10-15 ದ್ರಾಕ್ಷಿ, ಗೋಡಂಬಿ, 1 ಸಣ್ಣ ಕಪ್ ತುಪ್ಪ.

ವಿಧಾನ : ಮೊದಲು ಒಲೆಯ ಮೇಲೆ ಬಾಣಲೆಯಲ್ಲಿ ತುಪ್ಪ, ದ್ರಾಕ್ಷಿ, ಗೋಡಂಬಿ ಹಾಕಿ ಹುರಿದಿಟ್ಟುಕೊಳ್ಳಿ. ನಂತರ ಅದೇ ಬಾಣಲೆಯಲ್ಲಿ ರವೆಯನ್ನು ಹಾಕಿ ಘಮ್ಮೆನ್ನುವಂತೆ ಚೆನ್ನಾಗಿ ಹುರಿಯಿರಿ. ಅದಕ್ಕೆ ಕೊಬ್ಬರಿ ತುರಿ ಹಾಕಿ ಮತ್ತೆ ಸ್ವಲ್ಪ ಹುರಿಯಿರಿ. ಸಕ್ಕರೆಗೆ ಕಾಲು ಕಪ್‌ ನೀರು ಹಾಕಿ ಕರಗಿಸಿ. ಎಳೆ ಪಾಕ ಬರುವವರೆಗೂ ಕುದಿಸಿ. ಇದಕ್ಕೆ ಹುರಿದ ರವೆ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ಗಟ್ಟಿಯಾದಾಗ ಏಲಕ್ಕಿ ಪುಡಿ, ಕೊಬ್ಬರಿ ತುರಿ, ಗೋಡಂಬಿ, ದ್ರಾಕ್ಷಿ ಹಾಕಿ ಕೈಯಾಡಿಸಿ. ನಿಂಬೆ ಗಾತ್ರ ಉಂಡೆ ಕಟ್ಟಿ, ರುಚಿಯಾದ ರವೆ ಲಡ್ಡು ರೆಡಿ.

ಪಿನಾಕಾ

ಸಾಮಗ್ರಿ : ಒಂದೂವರೆ ಕಪ್‌ ಕುಸುಲಕ್ಕಿ, 1 ಕಪ್‌ ಕಾಯಿ ತುರಿ, 150 ಗ್ರಾಂ ಬೆಲ್ಲ,  ಸ್ವಲ್ಪ ನೀರು, ಚಿಕ್ಕ ಚಮಚ ಏಲಕ್ಕಿ ಪುಡಿ.

ವಿಧಾನ : ಅಕ್ಕಿಯನ್ನು ಬಾಣಲೆಯಲ್ಲಿ ಹುರಿಯಿರಿ, ಅದು ಅರಳುತ್ತದೆ. ತಣ್ಣಗಾದ ಮೇಲೆ ಪುಡಿ ಮಾಡಿಟ್ಟುಕೊಳ್ಳಿ. ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಒಲೆಯ ಮೇಲಿರಿಸಿ. ಬೆಲ್ಲ ಕರಗಿದಾಗ ಕಾಯಿತುರಿ ಹಾಕಿ ಕೈಯಾಡಿಸಿ. ಸ್ವಲ್ಪ ಗಟ್ಟಿಯಾದ ಮೇಲೆ ಕೆಳಗಿಳಿಸಿ, ತಣ್ಣಗಾದ ಮೇಲೆ ರುಬ್ಬಿಕೊಳ್ಳಿ. ಇದಕ್ಕೆ ಪುಡಿ ಮಾಡಿದ ಅಕ್ಕಿಹಿಟ್ಟು ಸೇರಿಸಿ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಿ ನಾದಿಕೊಳ್ಳಿ. ನಿಂಬೆ ಗಾತ್ರದ ಉಂಡೆ ಕಟ್ಟಿ ಒಂದು ಗಂಟೆ ಕಾಲ ಒಣಗಲು ಬಿಡಿ. ಇದು ಮಾಡಲು ಸುಲಭ, ತಿನ್ನಲು ರುಚಿ, ಆರೋಗ್ಯಕ್ಕೂ ಉತ್ತಮ.

Screenshot_20240218-093750-01-(1)

ಪೂರನ್ಪೋಳಿ

ಸಾಮಗ್ರಿ : 1-1 ಲೋಟ ಕಡಲೆಬೇಳೆ, ಪುಡಿ ಮಾಡಿದ ಬೆಲ್ಲ, ಮೈದಾಹಿಟ್ಟು, ಮುಕ್ಕಾಲು ಕಪ್‌ ಎಣ್ಣೆ, ಕಾಲು ಕಪ್‌ ತುಪ್ಪ, 5 ಏಲಕ್ಕಿ.

ವಿಧಾನ : ಕಡಲೆಬೇಳೆಯನ್ನು ನೀರಿನಲ್ಲಿ ಬೇಯಿಸಿ, ಬಸಿದುಕೊಂಡು ಬೆಂದ ಬೇಳೆಗೆ ಬೆಲ್ಲ ಸೇರಿಸಿ ರುಬ್ಬಿಕೊಳ್ಳಿ. ದಪ್ಪ ತಳದ ಪಾತ್ರೆಗೆ ರುಬ್ಬಿದ ಮಿಶ್ರಣಕ್ಕೆ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕೈಯಾಡಿಸಿ, ಕೆಳಗಿಳಿಸಿ. ಇದು ಕಡಲೆಬೇಳೆ ಹೂರಣ. ನಂತರ ಜರಡಿ ಮಾಡಿದ ಮೈದಾಹಿಟ್ಟಿಗೆ ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಕಲಸಿ, ಎಣ್ಣೆ ಬೆರೆಸುತ್ತಾ ಚೆನ್ನಾಗಿ ನಾದಿಕೊಳ್ಳಿ. ನಾದಿದ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಇಟ್ಟು, ಒದ್ದೆ ಬಟ್ಟೆಯಿಂದ ಮುಚ್ಚಿ ಎರಡು ಗಂಟೆಗಳ ಕಾಲ ಹಾಗೆ ಇಡಿ. ನಂತರ ಹೂರಣವನ್ನು ಪುಟ್ಟ ಪುಟ್ಟ ಉಂಡೆ ಮಾಡಿಡಿ. ಮೈದಾ ಹಿಟ್ಟನ್ನು ಸ್ವಲ್ಪ ತೆಗೆದುಕೊಂಡು ಅಂಗೈಯಲ್ಲಿ ತಟ್ಟಿಕೊಂಡು ಮಧ್ಯೆ ಕಡಲೆಬೇಳೆ ಹೂರಣವನ್ನು ಇಟ್ಟು ಮುಚ್ಚಿ ಚಪಾತಿ ರೀತಿಯಲ್ಲಿ ಲಟ್ಟಿಸಿ. ತವಾ ಮೇಲೆ ಹಾಕಿ ಎಣ್ಣೆ ಸವರಿ ಎರಡೂ ಬದಿ ಬೇಯಿಸಿ, ತುಪ್ಪ ಹಾಕಿ ಸವಿಯಲು ಕೊಡಿ.

IMG_20210930_125850

ಹಲ್ವಾ ಬೊಬ್ಬಟ್ಟು

ಸಾಮಗ್ರಿ : ಅರ್ಧ ಕಪ್‌ ಶ್ಯಾವಿಗೆ, ಅರ್ಧ ಕಪ್‌ ಸಕ್ಕರೆ, 2 ಕಪ್‌ ಹಾಲು, ಅರ್ಧ ಕಪ್‌ ಮೈದಾ, 1 ದೊಡ್ಡ ಚಮಚ ಗೋಡಂಬಿ ಚೂರು, 10 ಒಣದ್ರಾಕ್ಷಿ, ಅರ್ಧ ಚಮಚ ಏಲಕ್ಕಿ ಪುಡಿ, ಚಿಟಕಿ ಉಪ್ಪು.

ವಿಧಾನ : ಮೈದಾಗೆ ಉಪ್ಪು, 1 ಚಮಚ ತುಪ್ಪ ಸೇರಿಸಿ ನೀರು ಹಾಕಿ ಕಲಸಿ. ಒಂದು ಗಂಟೆ ಕಾಲ ಮುಚ್ಚಿಡಿ. ಇದಕ್ಕೆ ಕಣಕ ಎನ್ನುತ್ತಾರೆ. ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಬಿಸಿ ಮಾಡಿ, ಗೋಡಂಬಿ, ದ್ರಾಕ್ಷಿ ಹಾಕಿ ಕೆಂಪಗೆ ಹುರಿಯಿರಿ. ಇದರ ಮೇಲೆ ಶ್ಯಾವಿಗೆ ಹಾಕಿ ಸುವಾಸನೆ ಬರುವ ತನಕ ಹುರಿದು ತೆಗೆಯಿರಿ. ದಪ್ಪ ತಳದ ಪಾತ್ರೆಯಲ್ಲಿ ಹಾಲು ಕುದಿಸಿ. ಇದು ಕುದಿಯುವಾಗ ಶ್ಯಾವಿಗೆ ಮಿಶ್ರಣ ಹಾಕಿ ತಿರುಗಿಸಿ. ನಂತರ ಸಕ್ಕರೆ ಸೇರಿಸಿ, ಸಕ್ಕರೆ ಕರಗಿ ಮಿಶ್ರಣ ದಪ್ಪಗಾಗುತ್ತದೆ. ನಂತರ ಇದನ್ನು ಒಲೆಯಿಂದ ಇಳಿಸಿ. ಮೈದಾ ಹಿಟ್ಟಿನಿಂದ ಉಂಡೆಗಳನ್ನು ತಯಾರಿಸಿ, ಅಂಗೈ ಅಗಲಕ್ಕೆ ಲಟ್ಟಿಸಿ, ಒಳಗೆ ಶ್ಯಾವಿಗೆ ಹೂರಣ ಇಟ್ಟು ಮುಚ್ಚಿ ಚಪಾತಿ ರೀತಿ ಲಟ್ಟಿಸಿ. ಇದನ್ನು ಕಾವಲಿಯಲ್ಲಿ ಎರಡೂ ಬದಿ ತುಪ್ಪ ಸವರಿ ಬೇಯಿಸಿ. ಬಲು ರುಚಿಯಾದ ಬೊಬ್ಬಟ್ಟು ರೆಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ