ರಾಘವೇಂದ್ರ ಅಡಿಗ ಎಚ್ಚೆನ್.

ನಾಳೆಯಿಂದ ಬಸ್ ಇರುತ್ತೋ, ಇಲ್ವೋ ಎಂಬ ಆತಂಕದಲ್ಲಿದ್ದ ರಾಜ್ಯದ ಪ್ರಯಾಣಿಕರಿಗೆ ಸಾರಿಗೆ ನೌಕರರು ಸಿಹಿ ಸುದ್ದಿ ನೀಡಿದ್ದಾರೆ. ನಾಳೆ (ಶುಕ್ರವಾರ) ಯಾವುದೇ ಸಾರಿಗೆ ಮುಷ್ಕರ ನಡೆಸದಿರಲು ನೌಕರರ ಕೂಟ ತೀರ್ಮಾನಿಸಿದೆ. ಹೀಗಾಗಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ.
ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯ  ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸರ್ಕಾರದ ಭರವಸೆಗಳು ಮತ್ತು ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು. ಅಂತಿಮವಾಗಿ, ಸಾರ್ವಜನಿಕರಿಗೆ ತೊಂದರೆ ಕೊಡುವುದು ಬೇಡ ಎಂಬ ಉದ್ದೇಶದಿಂದ ಸದ್ಯಕ್ಕೆ ಬಸ್ ಸಂಚಾರ ಬಂದ್ ಮಾಡದಿರಲು ನಿರ್ಧರಿಸಲಾಗಿದೆ.
ಮಾರ್ಚ್ 2 ರಿಂದ ಉಪವಾಸ ಸತ್ಯಾಗ್ರಹ
ಬಸ್ ಬಂದ್ ಮಾಡದಿದ್ದರೂ, ಹೋರಾಟವನ್ನು ಕೈಬಿಡದಿರಲು ನೌಕರರು ನಿರ್ಧರಿಸಿದ್ದಾರೆ. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮಾರ್ಚ್ 2 ರಂದು ರಾಜ್ಯಾದ್ಯಂತ ‘ಉಪವಾಸ ಸತ್ಯಾಗ್ರಹ’ ನಡೆಸಲು ತೀರ್ಮಾನಿಸಲಾಗಿದೆ.
ಬೆಂಗಳೂರು, ಹಾಸನ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ನೌಕರರು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಸರ್ಕಾರದ ಭರವಸೆಗಳ ಬಗ್ಗೆ ಮತ್ತೊಮ್ಮೆ ಚರ್ಚಿಸಿ, ಮುಂದಿನ ದಿನಗಳಲ್ಲಿ ಅಂತಿಮ ಹಂತದ ಹೋರಾಟದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಒಕ್ಕೂಟದ ಮುಖಂಡರು ತಿಳಿಸಿದ್ದಾರೆ. ಒಟ್ಟಿನಲ್ಲಿ ನಾಳೆ ಎಂದಿನಂತೆ ಬಸ್ ಸಂಚಾರ ಇರಲಿದ್ದು, ಪ್ರಯಾಣಿಕರು ಆತಂಕ ಪಡುವ ಅಗತ್ಯವಿಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ