ಕ್ಷೀರಾನ್ನ
ಸಾಮಗ್ರಿ : 2 ಕಪ್ ಅಕ್ಕಿ, 2 ಕಪ್ ಸಕ್ಕರೆ, 1 ಲೀ. ಗಟ್ಟಿ ಹಾಲು. ಹಾಲಲ್ಲಿ ನೆನೆಸಿದ 2-3 ಎಸಳು ಕೇಸರಿ, ತುಸು ಏಲಕ್ಕಿ ಪುಡಿ, 1 ಕಪ್ ತುಪ್ಪ, 1 ಕಪ್ ತೆಂಗಿನಹಾಲು, ದ್ರಾಕಿ, ಗೋಡಂಬಿ, ಬಾದಾಮಿ ಚೂರು (ಒಟ್ಟಾಗಿ ಅರ್ಧ ಕಪ್).
ವಿಧಾನ : ಮೊದಲು ಪ್ರೆಷರ್ ಪ್ಯಾನ್ನಲ್ಲಿ ತುಸು ತುಪ್ಪ ಬಿಸಿ ಮಾಡಿ ಗೋಡಂಬಿ ದ್ರಾಕ್ಷಿ ಹುರಿದು ತೆಗೆಯಿರಿ. ಇದಕ್ಕೆ ಅಕ್ಕಿ ಹಾಕಿ 2 ನಿಮಿಷ ಘಮ್ಮೆನ್ನುವಂತೆ ಕೆದಕಬೇಕು. ಪಕ್ಕದ ಒಲೆಯಲ್ಲಿ ಹಾಲು ಕಾಯಿಸಿ ಅರ್ಧದಷ್ಟು ಹಿಂಗುವಂತೆ ಕುದಿಸಿ ಗಟ್ಟಿ ಮಾಡಿ. ಈಗ ಅಕ್ಕಿಗೆ ಸಕ್ಕರೆ, ಕುದಿಸಿದ ಹಾಲು, ತೆಂಗಿನ ಹಾಲು, ಕೇಸರಿ, ಏಲಕ್ಕಿಪುಡಿ ಹಾಕಿ ಚೆನ್ನಾಗಿ ಬೆರೆಸಿ, 2 ಸೀಟಿ ಬರುವಂತೆ ಬೇಯಿಸಿ ಆಮೇಲೆ ವೆಯ್ಟ್ ತೆಗೆದ ನಂತರ ದ್ರಾಕ್ಷಿ, ಗೋಡಂಬಿ, ಉಳಿದ ತುಪ್ಪ ಚೆನ್ನಾಗಿ ಬೆರೆಸಿ ಸರ್ವಿಂಗ್ ಪ್ಲೇಟ್ಗೆ ಹಾಕಿ, ಬಿಸಿ ಬಿಸಿಯಾಗಿ ಸವಿಯಲು ಕೊಡಿ.
ರೈಸ್ ಕ್ರಾಕರ್ಸ್
ಸಾಮಗ್ರಿ : 2 ಬಟ್ಟಲು ಅನ್ನ, ಅರ್ಧ ಕಪ್ಹುರಿದು ತರಿ ಮಾಡಿದ ಕಡಲೆಬೀಜ, 2-3 ಹಸಿಮೆಣಸು. 1-2 ಬೆಂದ ಆಲೂ, 2 ಚಮಚ ಆರಾರೂಟ್, 2 ಚಿಟಕಿ ಸೋಡ, ಒಂದಿಷ್ಟು ಹೆಚ್ಚಿದ ಕರಿಬೇವು, ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಇಂಗು, ಕರಿಯಲು ಎಣ್ಣೆ.
ವಿಧಾನ : ಮಸೆದ ಆಲೂವಿಗೆ ಮೇಲಿನ ಎಲ್ಲಾ ಸಾಮಗ್ರಿ ಹಾಕಿ ಪಕೋಡ ಮಿಶ್ರಣದಂತೆ ಕಲಸಿಡಿ. ಇದರಿಂದ ಚಿತ್ರದಲ್ಲಿರುವಂತೆ ಮಿಶ್ರಣಕ್ಕೆ ಕ್ರಾಕರ್ಸ್ ತರಹ ಆಕಾರ ನೀಡಿ. ಆರಾರೋಟ್ಗೆ ತುಸು ನೀರು ಬೆರೆಸಿ ಅದರಲ್ಲಿ ಇದನ್ನು ಒಂದೊಂದಾಗಿ ಅದ್ದಿಕೊಂಡು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಬಿಸಿ ಇರುವಾಗಲೇ ಇದನ್ನು ಟೊಮೇಟೊ ಸಾಸ್ ಜೊತೆ ಸವಿಯಲು ಕೊಡಿ.
ಪೌಷ್ಟಿಕ ಸೌತೆ ಇಡ್ಲಿ
ಸಾಮಗ್ರಿ : 3 ಕಪ್ ಕುಸುಬಲಕ್ಕಿ, 2 ಕಪ್ ಉದ್ದಿನಬೇಳೆ, 1 ದೊಡ್ಡ ಎಳೇ ಸೌತೇಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ, ಹಾಲಲ್ಲಿ ನೆನೆಸಿದ ಒಂದಿಷ್ಟು ಬಾದಾಮಿ, ತುಸು ಎಣ್ಣೆ.
ವಿಧಾನ : 2-3 ತಾಸು ಅಕ್ಕಿ, ಬೇಳೆ, ಬೇರೆಯಾಗಿ ನೆನೆಹಾಕಿ. ನಂತರ ರುಬ್ಬಿಕೊಂಡು ಚಿಟಕಿ ಸೋಡ, ಮೆಂತ್ಯಪುಡಿ ಹಾಕಿ ಒಟ್ಟಿಗೆ ಬೆರೆಸಿಡಿ. ಇದಕ್ಕೆ ಸಿಪ್ಪೆ ಹೆರೆದು ನೀಟಾಗಿ ತುರಿದ ಸೌತೆ, ಉಪ್ಪು, ಸಕ್ಕರೆ ಸೇರಿಸಿ ಚೆನ್ನಾಗಿ ಗೊಟಾಯಿಸಿ. ಇಡೀ ರಾತ್ರಿ ನೆನೆಯಲು ಬಿಡಿ. ಹಾಲಲ್ಲಿ ಬಾದಾಮಿ ನೆನೆಸಿಡಿ. ಮಾರನೇ ದಿನ ಎಂದಿನಂತೆ ಇಡ್ಲಿ ತಟ್ಟೆಗಳಿಗೆ ಎಣ್ಣೆ ಸವರಿ, 1-1 ಸೌಟು ಹಿಟ್ಟು ತುಂಬಿಸಿ, ಮೇಲೆ 1-1 ಬಾದಾಮಿ ಸಿಗಿಸಿ, ಹಬೆಯಲ್ಲಿ ಹದನಾಗಿ ಬೇಯಿಸಿ. ಬಿಸಿ ಬಿಸಿಯಾದ ಪೌಷ್ಟಿಕ ಸೌತೆ ಇಡ್ಲಿಗೆ ತುಪ್ಪ ಹಾಕಿ, ಕಾಯಿಚಟ್ನಿ ಅಥವಾ ಟೊಮೇಟೊ ಚಟ್ನಿ ಜೊತೆ ಸವಿಯಲು ಕೊಡಿ.
ಸ್ಪೆಷಲ್ ರೈಸ್ ಪಿಜ್ಜಾ
ಸಾಮಗ್ರಿ : 2 ಕಪ್ ಅನ್ನ, 2 ಬೆಂದ ಆಲೂ, 2, ಈರುಳ್ಳಿ, 7-8 ಎಸಳು ಬೆಳ್ಳುಳ್ಳಿ, ಅರ್ಧ ಕಪ್ ತುರಿದ ಮೋಜೆರೆಲಾ ಚೀಸ್, ಬಿಲ್ಲೆಗಳಾಗಿ ಕತ್ತರಿಸಿದ 1 ಕ್ಯಾಪ್ಸಿಕಂ, ಹೆಚ್ಚಿದ ಬೀನ್ಸ್, ಕ್ಯಾರೆಟ್, ಹೂಕೋಸು, ಎಲೆಕೋಸು, (ಒಟ್ಟಾಗಿ 1 ಕಪ್), ಒಂದು ಸೌಟು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಟೊಮೇಟೊ ಪೇಸ್ಟ್, ಓರಿಗೆನೋ, ಚಿಲೀ ಫ್ಲೇಕ್ಸ್, ಸಾಲ್ಸಾ ಸಾಸ್.
ವಿಧಾನ : ಬೇಯಿಸಿ ಮಸೆದ ಆಲೂವಿಗೆ ಅನ್ನ ಹಾಕಿ ಕಿವುಚಿರಿ. ಇವುಗಳಿಂದ ಸಣ್ಣ ಉಂಡೆ ಮಾಡಿ ಓವಲ್ ಶೇಪ್ ಬರುವಂತೆ ಚಪ್ಪಟೆ ಆಕಾರ ನೀಡಿ. ಇದನ್ನು ಒಂದು ಬಾಣಲೆಯಲ್ಲಿ ಎರಡೂ ಬದಿ ಬೇಯುವಂತೆ ಶ್ಯಾಲೋ ಫ್ರೈ ಮಾಡಿ. ಮತ್ತೆ ಇದಕ್ಕೆ ತುಸು ಎಣ್ಣೆ ಬೆರೆಸಿ ಬಿಸಿ ಮಾಡಿ. ಇದಕ್ಕೆ ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ ಹಾಕಿ ಬಾಡಿಸಿ. ಆಮೇಲೆ ಟೊಮೇಟೊ ಪೇಸ್ಚ್, ಉಪ್ಪು, ಓರಿಗೆನೋ ಸೇರಿಸಿ, ಕೆದಕಿ ಕೆಳಗಿಳಿಸಿ. ಬೀನ್ಸ್, ಕ್ಯಾರೆಟ್, ಹೂಕೋಸು, ಎಲೆಕೋಸನ್ನು ಹಬೆಯಲ್ಲಿ ಲಘು ಬೇಯಿಸಿ, ಅದೇ ಬಾಣಲೆಯಲ್ಲಿ ಇನ್ನಷ್ಟು ಎಣ್ಣೆ ಬಿಸಿ ಮಾಡಿ ಕ್ಯಾಪ್ಸಿಕಂ ಹಾಕಿ ಬಾಡಿಸಿ. ನಂತರ ಬೆಂದ ತರಕಾರಿ ಹಾಕಿ ಬಾಡಿಸಿ. ಉಪ್ಪು, ಖಾರ ಹಾಕಿ ಕೆದಕಿ ಕೆಳಗಿಳಿಸಿ. ಒಂದು ಓವನ್ ಪ್ರೂಫ್ ಡಿಶ್ನಲ್ಲಿ ಮೊದಲು ಫ್ರೈ ಮಾಡಿದ ಅನ್ನದ ಪದರ ಬರಲಿ. ಇದರ ಮೇಲೆ ಈರುಳ್ಳಿ ಟೋಮೇಟೊ ಪದರ ಬರಲಿ. ಇದರ ಮೇಲೆ ಬಾಡಿಸಿದ ತರಕಾರಿ ಪದರ ಬರಲಿ. ಎಲ್ಲಕ್ಕೂ ಮೇಲೆ ತುರಿದ ಚೀಸ್ ಉದುರಿಸಿ, ಅದರ ಮೇಲೆ ಓರಿಗೆನೋ, ಚಿಲೀ ಫ್ಲೇಕ್ಸ್ ಹರಡಿರಿ. ಇದನ್ನು ಪ್ರೀಹೀಟೆಡ್ ಓವನ್ನಲ್ಲಿರಿಸಿ, ಚೀಸ್ ಕರಗುವವರೆಗೂ ಹದನಾಗಿ ಬೇಕ್ ಮಾಡಿ, ಬಿಸಿ ಬಿಸಿಯಾಗಿ ಟೊಮೇಟೊ ಸಾಸ್ ಜೊತೆ ಸವಿಯಲು ಕೊಡಿ.