ಕಾಶ್ಮೀರಿ ದಮ್ ಆಲೂ

ಸಾಮಗ್ರಿ : 500 ಗ್ರಾಂ ಸಣ್ಣ ಗಾತ್ರದ ಆಲೂಗಡ್ಡೆ, 1 ಬಟ್ಟಲು ಹುಳಿ ಮೊಸರು, 2-2 ಚಮಚ ಸಾಸುವೆ/ಎಳ್ಳಿನ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು ಖಾರ, ಧನಿಯಾಪುಡಿ, ಹುರಿದು ಪುಡಿ ಮಾಡಿದ ಜೀರಿಗೆ, ಸೋಂಪು, ಗರಂಮಸಾಲ, ಏಲಕ್ಕಿ, ಕಾಶ್ಮೀರಿ ರೆಡ್‌ ಚಿಲೀ ಪೌಡರ್‌, ಶುಂಠಿ/ಬೆಳ್ಳುಳ್ಳಿ ಪೇಸ್ಟ್, ಟೊಮೇಟೊ ಪ್ಯೂರಿ, ಹೆಚ್ಚಿದ ಕೊ.ಸೊಪ್ಪು, ಕರಿಬೇವು, ಹಸಿಮೆಣಸು, 2-3 ಹೆಚ್ಚಿದ ಈರುಳ್ಳಿ.

ವಿಧಾನ : ಆಲೂ ತೊಳೆದು ಕುಕ್ಕರ್‌ನಲ್ಲಿ ಉಪ್ಪು, ನೀರು ಹಾಕಿ ಬೇಯಿಸಿಕೊಳ್ಳಿ. ನಂತರ ಸಿಪ್ಪೆ ಬೇರ್ಪಡಿಸಿ ಇಡಿಯಾಗಿ ಹಾಗೇ ಇಟ್ಟುಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆಯ ಒಗ್ಗರಣೆ ಕೊಡಿ. ನಂತರ ಇದಕ್ಕೆ ಕರಿಬೇವು, ಹಸಿಮೆಣಸು, ಶುಂಠಿ/ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಕೆದಕಬೇಕು. ಆಮೇಲೆ ಈರುಳ್ಳಿ ಹಾಕಿ ಬಾಡಿಸಿ. ನಂತರ ಮೊಸರು ಬೆರೆಸಿ ಲಘುವಾಗಿ ಕುದಿಸಬೇಕು. ನಂತರ ಇದಕ್ಕೆ ಉಪ್ಪು, ಖಾರ, ಉಳಿದೆಲ್ಲ ಮಸಾಲೆ ಸೇರಿಸಿ ನಿಧಾನವಾಗಿ ಕೆದಕಬೇಕು. 5 ನಿಮಿಷ ಕುದಿಸಿ ಕೆಳಗಿಳಿಸಿದ ಮೇಲೆ ಕೊ.ಸೊಪ್ಪು ಉದುರಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಚಪಾತಿ, ಬಿಸಿ ಅನ್ನದ ಜೊತೆ ಸವಿಯಿರಿ.

ಶುಂಠಿ ಸ್ಪೆಷಲ್

ಸಾಮಗ್ರಿ : 100 ಗ್ರಾಂ ಹಸಿ ಶುಂಠಿ, 5-6 ಎಸಳು ಬೆಳ್ಳುಳ್ಳಿ. 1 ಈರುಳ್ಳಿ, 1 ಟೊಮೇಟೊ, ತುಸು ಹಾಲುತುಪ್ಪ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಓಮ, ಒಗ್ಗರಣೆಗೆ ಎಣ್ಣೆ, ಜೀರಿಗೆ, ಸೋಂಪು, ಅಲಂಕರಿಸಲು ಒಂದಿಷ್ಟು ತುರಿದ ಶುಂಠಿ, ಹೆಚ್ಚಿದ ಕೊ.ಸೊಪ್ಪು.

ವಿಧಾನ : ಟೊಮೇಟೊ ಈರುಳ್ಳಿ ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ ತುಸು ರೀಫೈಂಡ್‌ ಎಣ್ಣೆ ಬಿಸಿ ಮಾಡಿ ಜೀರಿಗೆ, ಸೋಂಪು ಹಾಕಿ ಚಟಪಟಾಯಿಸಿ. ಆಮೇಲೆ ಇದಕ್ಕೆ ಸಿಪ್ಪೆ ಹೆರೆದು ಹೆಚ್ಚಿದ ಶುಂಠಿ, ಬೆಳ್ಳುಳ್ಳಿ ಹಾಕಿ ಬಾಡಿಸಿ. ಆಮೇಲೆ ಹೆಚ್ಚಿದ ಈರುಳ್ಳಿ, ಟೊಮೇಟೊ ಸೇರಿಸಿ ಬಾಡಿಸಿ. ಆಮೇಲೆ ಉಪ್ಪು, ಖಾರ, ಅರಿಶಿನ ಹಾಕಿ ಕೆದಕಬೇಕು. ಆಮೇಲೆ ತುಸು ನೀರು ಬೆರೆಸಿ, ಎಲ್ಲ ಚೆನ್ನಾಗಿ ಕುದಿಯುವಂತೆ ಮಾಡಿ. ಇದಕ್ಕೆ ಹಾಲು ಬೆರೆಸಿ ಇನ್ನಷ್ಟು ಕುದಿಸಿ. ಕೆಳಗಿಳಿಸಿದ ಮೇಲೆ ಚಿತ್ರದಲ್ಲಿರುವಂತೆ ಕೊ.ಸೊಪ್ಪು, ತುರಿದ ಶುಂಠಿ ಉದುರಿಸಿ ಅಲಂಕರಿಸಿ ಬಿಸಿ ಬಿಸಿಯಾಗಿ ಇಡ್ಲಿ, ದೋಸೆ ಜೊತೆ ಸವಿಯಲು ಕೊಡಿ.

ಮೂಲಂಗಿ ಮಲಾಯಿ ಕೋಫ್ತಾ

ಮೂಲ ಸಾಮಗ್ರಿ : 500 ಗ್ರಾಂ ಮೂಲಂಗಿ, 200 ಗ್ರಾಂ ಬೇಯಿಸಿ ಮಸೆದ ಆಲೂ, 2-3 ಈರುಳ್ಳಿ ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಓಮ, ಅರ್ಧ ಕಪ್‌ ಗೋದಿಹಿಟ್ಟು, ತುಸು ಮೈದಾ, ಕರಿಯಲು ಎಣ್ಣೆ.

ಗ್ರೇವಿಯ  ಸಾಮಗ್ರಿ : 2-3 ಎಸಳು ಬೆಳ್ಳುಳ್ಳಿ, 1 ಸಣ್ಣ ತುಂಡು ಶುಂಠಿ, 2-3 ಈರುಳ್ಳಿ, 50 ಗ್ರಾಂ ಟೊಮೇಟೊ ಪ್ಯೂರಿ, 2 ಅಖರೋಟ್, 5-6 ಗೋಡಂಬಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಏಲಕ್ಕಿಪುಡಿ, ಜೀರಿಗೆ ಪುಡಿ, ಅರ್ಧ ಸೌಟು ಎಣ್ಣೆ, ತುಸು ಹಾಲಿನ ಕೆನೆ, 2 ಲವಂಗದೆಲೆ, ಒಂದಿಷ್ಟು ಮೊಸರು, ಹೆಚ್ಚಿದ ಕೊ.ಸೊಪ್ಪು, 2 ಚಿಟಕಿ ಗಸಗಸೆ.

ವಿಧಾನ : ಈರುಳ್ಳಿ ಸಣ್ಣಗೆ ಹೆಚ್ಚಿಟ್ಟು, ಮೂಲಂಗಿ ನೀಟಾಗಿ ತುರಿದಿಡಿ. ಇವೆರಡನ್ನೂ ಒಂದು ಬೇಸನ್ನಿಗೆ ಹಾಕಿಕೊಂಡು ಮೇಲೆ ಮಸೆದ ಆಲೂ, ಆಟಾ, ಮೈದಾ, ಉಪ್ಪು, ಖಾರ, ಓಮ, ಗರಂಮಸಾಲೆ ಬೆರೆಸಿ ಚೆನ್ನಾಗಿ ಕಲಸಿಕೊಳ್ಳಿ. ಇದರಿಂದ ಸಣ್ಣ ಸಣ್ಣ ಉಂಡೆ ಮಾಡಿಕೊಂಡು ಕಾದ ಎಣ್ಣೆಯಲ್ಲಿ (ಮಂದ ಉರಿ ಇರಲಿ) ಕೆಂಪಗೆ ಕರಿಯಿರಿ. ಅಖರೋಟ್‌, ಗೋಡಂಬಿಗಳನ್ನು ತುಸು ಹಾಲಲ್ಲಿ ನೆನೆಹಾಕಿ. ಇದನ್ನು ಮಿಕ್ಸಿಗೆ ಹಾಕಿ. ಜೊತೆಗೆ ಬೆಳ್ಳುಳ್ಳಿ, ಶುಂಠಿ, ಈರುಳ್ಳಿ, ಗಸಗಸೆ ಸೇರಿಸಿ ನುಣ್ಣಗೆ ತಿರುವಿಕೊಳ್ಳಿ. ಒಂದು ಬಾಣಲೆಯಲ್ಲಿ 2 ಚಮಚ ತುಪ್ಪು ಬಿಸಿ ಮಾಡಿ ಅದಕ್ಕೆ ಈ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ನಂತರ ಟೊಮೇಟೊ ಪ್ಯೂರಿ, ಉಪ್ಪು, ಖಾರ, ಉಳಿದೆಲ್ಲ ಮಸಾಲೆ ಸೇರಿಸಿ ಕೈಯಾಡಿಸಿ. ಇದಕ್ಕೆ ತುಸು ನೀರು ಬೆರೆಸಿ ಕುದಿಸಬೇಕು. ಕೊನೆ ಹಂತದಲ್ಲಿ ಕರಿದ ಕೋಫ್ತಾ ತೇಲಿಬಿಟ್ಟು, 2 ನಿಮಿಷ ಕುದಿಸಿ ಕೆಳಗಿಳಿಸಿ. ಬಿಸಿಯಾಗಿ ಚಪಾತಿ, ಪೂರಿಗಳೊಂದಿಗೆ ಸವಿಯಲು ಕೊಡಿ.

ಬೇಕ್ಡ್ ಮಸಾಲಾ ಗೋಭಿ

ಸಾಮಗ್ರಿ : 1 ಸಣ್ಣ ಹೂಕೋಸು, 4 ಈರುಳ್ಳಿ, 2-3 ಟೊಮೇಟೊ, 1 ತುಂಡು ಶುಂಠಿ, 8-10 ಎಸಳು ಬೆಳ್ಳುಳ್ಳಿ, 2 ಚಿಟಕಿ ಅರಿಶಿನ, 2 ಲವಂಗದೆಲೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಗರಂಮಸಾಲ, ಜೀರಿಗೆ ಪುಡಿ, 2 ಹಸಿಮೆಣಸು, ತುಸು ಎಣ್ಣೆ, ಪಿಜ್ಜಾ ಚೀಸ್‌, ಒಂದಿಷ್ಟು ಕೊ.ಸೊಪ್ಪು.

ವಿಧಾನ : ಹೂಕೋಸಿನ ತಳಭಾಗ ಬೇರ್ಪಡಿಸಿ, ಬಾಕಿ ಉಳಿದ ಭಾಗವನ್ನು 5-6 ನಿಮಿಷ ಉಪ್ಪು ಬೆರೆಸಿದ ಬಿಸಿ ನೀರಲ್ಲಿ ನೆನೆಹಾಕಿಡಿ. ನಂತರ ಇದನ್ನು ಹೊರತೆಗೆದು ಒಣಗಿಸಿ. ಈರುಳ್ಳಿ, ಟೊಮೇಟೊ, ಜೀರಿಗೆ, ಅರಿಶಿನ, ಗರಂಮಸಾಲ, ತುಸು ಉಪ್ಪು, ಖಾರ ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿ. ಈ ಪೇಸ್ಟ್ ನ್ನು ಹೂಕೋಸಿಗೆ ಸವರಿ, 30 ನಿಮಿಷ ಹಾಗೇ ಬಿಡಿ. ಈಗ ಬೇಕಿಂಗ್‌ ಟ್ರೇಗೆ ಜಿಡ್ಡು ಸವರಿ, ಹೂಕೋಸಿನ ಮೇಲೆ ಫಾಯಿಲ್ ‌ಪೇಪರ್‌ ಸುತ್ತಿ ಇದರಲ್ಲಿ 15 ನಿಮಿಷ ಬೇಕ್‌ ಮಾಡಿ. ಆಮೇಲೆ ಪಿಜ್ಜಾ ಚೀಸ್‌ ಹಾಕಿ, ಅದು ಕರುಗುವವರೆಗೂ ಬೇಕ್‌ ಮಾಡಿ. ನಂತರ ಈ ಚಿತ್ರದಲ್ಲಿರುವಂತೆ ಕೊ.ಸೊಪ್ಪು ಉದುರಿಸಿ ಸವಿಯಲು ಕೊಡಿ.

ಖರ್ಜೂರದ ಕೋಫ್ತಾ

ಮೂಲ ಸಾಮಗ್ರಿ : 10-12 ಹಸಿ ಖರ್ಜೂರ, 50 ಗ್ರಾಂ ಖೋವಾ, 100 ಗ್ರಾಂ ಮಸೆದ ಪನೀರ್‌, 2 ಚಿಟಿಕಿ ಏಲಕ್ಕಿಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಒಂದಿಷ್ಟು ಬ್ರೆಡ್‌ ಕ್ರಂಬ್ಸ್, ಕರಿಯಲು ಎಣ್ಣೆ.

ಗ್ರೇವಿಗಾಗಿ ಸಾಮಗ್ರಿ : 2-3 ಎಸಳು ಬೆಳ್ಳುಳ್ಳಿ, 1 ಸಣ್ಣ ತುಂಡು ಶುಂಠಿ, 2 ಈರುಳ್ಳಿ, 15 ಗೋಡಂಬಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಏಲಕ್ಕಿಪುಡಿ, ಜೀರಿಗೆ ಪುಡಿ, ಸೋಂಪು ಪುಡಿ, ಕ್ರೀಂ, ಟೊಮೇಟೊ ಪ್ಯೂರಿ, 2 ಲವಂಗದೆಲೆ.

ವಿಧಾನ : ಹಸಿ ಖರ್ಜೂರ ತುಂಡರಿಸಿ. ಇದಕ್ಕೆ ಖೋವಾ, ತುಸು ಉಪ್ಪು, ಖಾರ, ಏಲಕ್ಕಿ, ಗರಂಮಸಾಲ ಹಾಕಿ ಚೆನ್ನಾಗಿ ಮಸೆದು, ತುಸು ಮೈದಾ ಸೇರಿಸಿ ಸಣ್ಣ ಸಣ್ಣ ಉಂಡೆ ಮಾಡಿ. ಈಗ ಪನೀರ್‌ ಮಸೆದು ಅದಕ್ಕೆ ಉಪ್ಪು, ಖಾರ, ಬ್ರೆಡ್‌ ಕ್ರಂಬ್ಸ್ ಬೆರೆಸಿ ಕಲಸಿಡಿ. ಇದನ್ನು ತುಸು ದೊಡ್ಡ ಉಂಡೆ ಮಾಡಿ ಟೊಳ್ಳಾಗಿಸಿ, ಅದರಲ್ಲಿ ಖರ್ಜೂರದ 1-1 ಸಣ್ಣ ಉಂಡೆ ಇರಿಸಿ ರೋಲ್ ಮಾಡಿ. ನಂತರ ಇದನ್ನು ಕಾದ ಎಣ್ಣೆಯಲ್ಲಿ ಕರಿಯಿರಿ.

ಈಗ ಗ್ರೇವಿಗಾಗಿ ಗೋಡಂಬಿ ಹಾಲಲ್ಲಿ ನೆನೆಹಾಕಿ. ನಂತರ ಇದಕ್ಕೆ ಬೆಳ್ಳುಳ್ಳಿ, ಶುಂಠಿ, ಈರುಳ್ಳಿ ಸೇರಿಸಿ ಪೇಸ್ಟ್ ಮಾಡಿ. ಒಂದು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ, ಇದನ್ನು ಹಾಕಿ ಬಾಡಿಸಿ. ನಂತರ ಇದಕ್ಕೆ ಉಪ್ಪು ಖಾರ, ಉಳಿದ ಮಸಾಲೆ ಬೆರೆಸಿ ಕೆದಕಬೇಕು. ಇದಕ್ಕೆ ತುಸು ಗ್ರೇವಿ ಬೆರೆಸಿ ಕುದಿಸಿ. ಕೊನೆಯಲ್ಲಿ ಕರಿದ ಕೋಫ್ತಾ ತೇಲಿಬಿಟ್ಟು, ಮತ್ತೆ 2 ನಿಮಿಷ ಕುದಿಸಿ ಕೆಳಗಿಳಿಸಿ. ಪೂರಿ, ಚಪಾತಿಗೆ ಇದು ಸೊಗಸಾಗಿ ಹೊಂದುತ್ತದೆ.

ಬಟಾಣಿ ಮೆಂತೆಸೊಪ್ಪಿನ ಗ್ರೇವಿ

ಸಾಮಗ್ರಿ : 2 ಕಂತೆ ಮೆಂತೆಸೊಪ್ಪು, 250 ಗ್ರಾಂ ಹಸಿ ಬಟಾಣಿ ಕಾಳು (ಬೇಯಿಸಿದ್ದು), 100 ಗ್ರಾಂ ಫ್ರೆಶ್‌ ಕ್ರೀಂ ಅಥವಾ ಹಾಲಿನ ಕೆನೆ, ರುಚಿಗೆ ತಕ್ಕಷ್ಟು ಉಪ್ಪು, ಹಸಿಮೆಣಸಿನ ಪೇಸ್ಟ್, ಕರಿಮೆಣಸು, ಬೆಳ್ಳುಳ್ಳಿ ಶುಂಠಿ ಪೇಸ್ಟ್, ಗೋಡಂಬಿ ಪೇಸ್ಟ್, ಗರಂಮಸಾಲ, ಅರಿಶಿನ, ತುಸು ರೀಫೈಂಡ್‌ ಎಣ್ಣೆ.

ವಿಧಾನ : ಮೆಂತೆಸೊಪ್ಪನ್ನು ಶುಚಿಗೊಳಿಸಿ, ಹೆಚ್ಚಿ, ಬಿಸಿ ನೀರಲ್ಲಿ ಲಘು ಬೇಯಿಸಿ (ಬ್ಲ್ಯಾಂಚ್‌). ಹಸಿ ಮೆಣಸಿನ ಪೇಸ್ಟ್ ಹಾಕಿ ರುಬ್ಬಿಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಗೋಡಂಬಿ ಪೇಸ್ಟ್, ಅರಿಶಿನ, ಉಪ್ಪು, ಖಾರ, ಮೆಣಸು ಹಾಕಿ ಕೆದಕಿ. ಆಮೇಲೆ ಮೆಂತೆಸೊಪ್ಪಿನ ಪೇಸ್ಟ್ ಹಾಕಿ ಕೈಯಾಡಿಸಿ. ತುಸು ನೀರು ಬೆರೆಸಿ ಕುದಿಸಬೇಕು. ಆಮೇಲೆ ಬೆಂದ ಬಟಾಣಿ, ಗರಂಮಸಾಲ, ಕ್ರೀಂ, ಹಾಲಿನ ಕೆನೆ ಹಾಕಿ ಮತ್ತಷ್ಟು ಕುದಿಸಿ ಕೆಳಗಿಳಿಸಿ. ಇದನ್ನು ರೊಟ್ಟಿ, ದೋಸೆ, ಬಿಸಿ ಅನ್ನದ ಜೊತೆ ಸವಿಯಲು ಕೊಡಿ.

ಟೇಸ್ಟಿ ತಾವರೆ ಬೀಜದ ಗ್ರೇವಿ

ಸಾಮಗ್ರಿ : 100 ಗ್ರಾಂ ತಾವರೆ ಬೀಜ, 8-10 ಗೋಡಂಬಿ, 25 ಗ್ರಾಂ ದ್ರಾಕ್ಷಿ, 50 ಗ್ರಾಂ ಖೋವಾ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಮಸೆದ ಪನೀರ್‌, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಸಕ್ಕರೆ, ಗರಂಮಸಾಲ, ಏಲಕ್ಕಿ ಪುಡಿ, ಜೀರಿಗೆ, ಸೋಂಪು, ತುಸು ಹೆಚ್ಚಿದ ಅಣಬೆ, 2-3 ಲವಂಗದೆಲೆ, ತುಸು ಬೆಂದ ಬಟಾಣಿ, ಗಾರ್ನಿಶ್‌ ಮಾಡಲು ಸಿಲ್ವರ್‌ ಫಾಯಿಲ್.

ವಿಧಾನ : ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ, ಇದರಲ್ಲಿ ತಾವರೆ ಬೀಜಗಳನ್ನು ಕರಿದು ತೆಗೆಯಿರಿ. ಎಣ್ಣೆ ಉಳಿಸಿಕೊಂಡು ಜೀರಿಗೆ, ಸೋಂಪು, ಲವಂಗದೆಲೆ ಹಾಕಿ ಚಟಪಟಾಯಿಸಿ. ಹೆಚ್ಚಿದ ಅಣಬೆ ಹಾಕಿ ಬಾಡಿಸಿ. ಆಮೇಲೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆದಕಿ. ಖೋವಾ ಹಾಕಿ ಬಾಡಿಸಿ. ನಂತರ ಉಪ್ಪು, ಖಾರ, ಉಳಿದ ಮಸಾಲೆ ಪೂರ್ತಿ ಹಾಕಿ ಕೆದಕಿ ತುಸು ನೀರು ಬೆರೆಸಿ ಗ್ರೇವಿ ಕುದಿಯುವಂತೆ ಮಾಡಿ. ನಂತರ ಮಸೆದ ಪನೀರ್‌, ಸಕ್ಕರೆ ಹಾಕಿಡಿ. ಕೊನೆಯಲ್ಲಿ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ತಾವರೆಬೀಜ, ಬಟಾಣಿ ಸೇರಿಸಿ. ಹಲ್ವಾ ಹದಕ್ಕೆ ಬಂದಾಗ ಕೆಳಗಿಳಿಸಿ ಬಟ್ಟಲಿಗೆ ಹಾಕಿಡಿ. ಇದರ ಮೇಲೆ ಸಿಲ್ವರ್‌ ಫಾಯಿಲ್ ‌ಹೊದಿಸಿ ಬಿಸಿಯಾಗಿ ಕುಲ್ಚಾ, ಚಪಾತಿ, ನಾನ್‌ ಜೊತೆ ಕೊಡಿ.

ಟರ್ನಿಪ್ಸ್ಪೆಷಲ್ ಗ್ರೇವಿ

ಸಾಮಗ್ರಿ : 500 ಗ್ರಾಂ ಟರ್ನಿಪ್‌ (ಕೆಂಪು ಮೂಲಂಗಿ), 2-3 ಈರುಳ್ಳಿ, 2-3 ಟೊಮೇಟೊ, 1 ಸಣ್ಣ ತುಂಡು ಶುಂಠಿ, 7-8 ಎಸಳು ಬೆಳ್ಳುಳ್ಳಿ, 2 ಚಿಟಕಿ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಗರಂಮಸಾಲ, ಸಕ್ಕರೆ, ಅರ್ಧ ಸೌಟು ತುಪ್ಪ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು.

ವಿಧಾನ : ಬಿಸಿ ನೀರಿಗೆ ತುಂಡರಿಸಿದ ಟರ್ನಿಪ್‌ ಹಾಕಿ ಬೆಂದದ್ದನ್ನು ಮಸೆದು ಒಂದು ಬದಿಗಿಡಿ. ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಟೊಮೇಟೊ ಸೇರಿಸಿ ಪೇಸ್ಟ್ ಮಾಡಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ರುಬ್ಬಿದ ಪೇಸ್ಟ್ ಹಾಕಿ ಕೆದಕಿರಿ. ಆಮೇಲೆ ಇದಕ್ಕೆ ಉಪ್ಪು, ಖಾರ, ಉಳಿದ ಮಸಾಲೆ ಹಾಕಿ ಕೈಯಾಡಿಸಿ. ಅನಂತರ ಮಸೆದ ಟರ್ನಿಪ್‌ ಹಾಕಿ ಕೆದಕಬೇಕು. ತುಸು ಸಕ್ಕರೆ ಹಾಕಿ ನೀರು ಬೆರೆಸಿ ಕುದಿಸಿರಿ. ಕೆಗಿಳಿಸಿದ ಮೇಲೆ ಕೊ.ಸೊಪ್ಪು ಉದುರಿಸಿ, ನಿಂಬೆಹಣ್ಣು ಹಿಂಡಿಕೊಂಡು ಚಪಾತಿ ಜೊತೆ ಸವಿಯಿರಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ