ನೀರೇ ಜೀವನ! ಏಕೆಂದರೆ ನೀರು ಕೇವಲ ನಮ್ಮ ದಾಹವನ್ನಷ್ಟೇ ನೀಗಿಸುವುದಿಲ್ಲ, ಅದು ಪಚನ ವ್ಯವಸ್ಥೆಯಿಂದ ಹಿಡಿದು ಮೆದುಳಿನ ಬೆಳವಣಿಗೆಯ ತನಕ ಪ್ರಮುಖ ಪಾತ್ರ ವಹಿಸುತ್ತದೆ.
ನೀರು ಆರೋಗ್ಯದೊಂದಿಗೆ ನಿಕಟ ಸಂಬಂಧ ಹೊಂದಿದೆ. ಹೀಗಾಗಿ ನೀರು ಕುಡಿಯುವುದಷ್ಟೇ ಮುಖ್ಯವಲ್ಲ, ಶುದ್ಧ ನೀರು ಕುಡಿಯುವುದು ಇನ್ನೂ ಮುಖ್ಯ. ಒಂದುವೇಳೆ ನೀರು ಕುಡಿಯುವುದರ ಕುರಿತಂತೆ ಯಾವುದಾದರೂ ಅಜಾಗರೂಕತೆ ವಹಿಸಿದಲ್ಲಿ ಹಲವು ಬಗೆಯ ರೋಗಗಳು ದೇಹವನ್ನು ವ್ಯಾಪಿಸಿಕೊಳ್ಳುತ್ತವೆ.
ತಜ್ಞ ವೈದ್ಯರ ಪ್ರಕಾರ, ನಮ್ಮ ಇಂದಿನ ಧಾವಂತದ ಜೀವನದಲ್ಲಿ ನಿಯಮಿತವಾಗಿ ಶುದ್ಧ ನೀರನ್ನು ಕುಡಿಯುತ್ತಿದ್ದರೆ ನಾವು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದಾಗಿದೆ. ನೀರನ್ನು ಶುದ್ಧಗೊಳಿಸುವಲ್ಲಿ ನಮಗೆ ಪ್ಯೂರಿಫೈರ್‌ಗಳು ನೆರವಾಗುತ್ತವೆ.
ಪ್ರತಿಯೊಂದು ಅಡುಗೆಮನೆಯಲ್ಲೂ ವಾಟರ್ ಪ್ಯೂರಿಫೈರ್ ಅಳವಡಿಸಿರುವುದು ಕಂಡುಬರುತ್ತದೆ. ಮಾರುಕಟ್ಟೆಯಲ್ಲಿ ಹಲವು ಬಗೆಯ ವಾಟರ್ ಪ್ಯೂರಿಫೈರ್‌ಗಳು ಲಭ್ಯವಿವೆ. ಯಾವ ತಂತ್ರಜ್ಞಾನದ ವಾಟರ್ ಪ್ಯೂರಿಫೈರ್‌ಗಳಿಂದ ಏನು ಲಾಭ ಎಂಬುದು ನಿಮಗೆ ಗೊತ್ತೆ? ಇವುಗಳ ಸ್ವಚ್ಛತೆ, ನಿರ್ವಹಣೆ ಹೇಗೆ ಮಾಡಬೇಕು ಎಂಬುದು ನಿಮಗೆ ತಿಳಿದಿದೆಯೇ?
ಭಾರತೀಯ ಮಾರುಕಟ್ಟೆಯಲ್ಲಿ 5 ಬಗೆಯ ಪ್ಯೂರಿಫೈರ್‌ಗಳು ಲಭಿಸುತ್ತವೆ.
ಕ್ಯಾಂಡಲ್ ಫಿಲ್ಟರ್
ಈ ರೀತಿಯ ಫಿಲ್ಟರ್‌ಗಳಲ್ಲಿ ನೀರು ಕ್ಯಾಂಡಲ್‌ನಂತಿರುವ ಒಂದು ವಸ್ತುವಿನ ಮುಖಾಂತರ ಹಾಯ್ದು ಹೋಗಬೇಕಾಗುತ್ತದೆ. ಈ ಕ್ಯಾಂಡಲ್ ನೀರನ್ನು ಫಿಲ್ಟರ್ ಮಾಡುವ ಕೆಲಸ ಮಾಡುತ್ತದೆ. ಕ್ಯಾಂಡಲ್‌ನಲ್ಲಿ ಒಂದು ಜಾಲರಿ ಕೂಡ ಇರುತ್ತದೆ, ಅದು ನೀರಿನಲ್ಲಿರುವ ಕಲ್ಮಷಗಳನ್ನು ಒಂದೆಡೆ ತಡೆಹಿಡಿದು ನೀರನ್ನು ಶುದ್ಧಗೊಳಿಸುತ್ತದೆ.
ಕೆಲವ ಕ್ಯಾಂಡಲ್ ಫಿಲ್ಟರ್ಸ್ ಗಳಲ್ಲಿ ಆ್ಯಕ್ಟಿವೇಟೆಡ್ ಕಾರ್ಬನ್‌ನ ಸೌಲಭ್ಯ ಕೂಡ ಇರುತ್ತದೆ. ಈ ತಂತ್ರಜ್ಞಾನದಲ್ಲಿ ನೀರಿನಿಂದ ಕ್ಲೋರಿನ್‌ನ್ನು ನಿವಾರಿಸುತ್ತದೆ. ಕ್ಯಾಂಡಲ್ ಫಿಲ್ಟರ್‌ನ್ನು ವಾರದಲ್ಲಿ ಒಂದು ಸಲ ಅವಶ್ಯವಾಗಿ ಸ್ವಚ್ಛಗೊಳಿಸಬೇಕು.
ಆ್ಯಕ್ಟಿವೇಟೆಡ್ ಕಾರ್ಬನ್ ಫಿಲ್ಟರ್
ಆ್ಯಕ್ಟಿವೇಟೆಡ್ ಕಾರ್ಬನ್ ಕ್ಯಾಂಡಲ್ ಫಿಲ್ಟರ್‌ಗಿಂತ ಸ್ವಲ್ಪ ಅಡ್ವಾನ್ಸ್ ಆಗಿರುತ್ತವೆ. ಇದು ನೀರಿನಿಂದ ಕಾರ್ಬನ್‌ನಂತಹ ಅಂಶಗಳನ್ನು ನಿವಾರಿಸುತ್ತದೆ. ಜೊತೆಗೆ ನೀರಿನಿಂದ ಆರ್ಗ್ಯಾನಿಕ್ ಕಾಂಪೌಂಡ್ ಮತ್ತು ಕ್ಲೋರಿನ್‌ನಂತಹ ರಾಸಾಯನಿಕಗಳನ್ನು ನಿವಾರಿಸುತ್ತದೆ.
ಅಲ್ಟ್ರಾಯಿಟ್ ಟೆಕ್ನಾಲಜಿ
ಈ ಪ್ಯೂರಿಫೈರ್ ನೀರಿನ ರುಚಿಯನ್ನು ಕಾಯ್ದುಕೊಂಡು ಅಲ್ಟ್ರಾಯಿಟ್ ಕಿರಣಗಳ ಮುಖಾಂತರ 99.99% ಹಾನಿಯನ್ನುಂಟು ಮಾಡುವ ಆರ್ಗ್ಯಾನಿಸಂನ್ನು ನಿವಾರಿಸುತ್ತದೆ.
ಈ ಫಿಲ್ಟರ್‌ನಿಂದ ನೀರಿನಲ್ಲಿರುವ ಪಿ.ಎಚ್. ಬ್ಯಾಲೆನ್ಸ್ ಕೂಡ ಹಾಗೆಯೇ ಕಾಯ್ದುಕೊಂಡು ಹೋಗುತ್ತದೆ. ಜೊತೆಗೆ ನೀರಿನಲ್ಲಿರುವ ಎಲ್ಲ ರೋಗಕಾರಕ ಸಂಗತಿಗಳನ್ನು ನಿವಾರಿಸಿ ಸೆಲ್ ಸ್ಟ್ರಕ್ಚರ್‌ನ್ನು ಬದಲಿಸಿಬಿಡುತ್ತದೆ. ಇದರಿಂದ ನೀರಿನ ರುಚಿಯೂ ಹಾಗೆಯೇ ಉಳಿದಿರುತ್ತದೆ ಹಾಗೂ ಅಶುದ್ಧವಾದುದನ್ನು ಶುದ್ಧಗೊಳಿಸುತ್ತದೆ.
ಕೆಮಿಕಲ್ ಬೇಸ್ಡ್ ಪ್ಯೂರಿಫೈರ್
ಈ ಫಿಲ್ಟರ್‌ನಲ್ಲಿ ಕ್ಲೋರಿನ್ ಟ್ಯಾಬ್ಲೆಟ್‌ನ ನೆರವಿನಿಂದ ನೀರನ್ನು ಫಿಲ್ಟರ್ ಮಾಡಲಾಗುತ್ತದೆ.
ರಿವರ್ಸ್ ಆಸ್ಮಾಸಿಸ್
ಈ ಫಿಲ್ಟರ್ ನೀರಿನಿಂದ ಮೈಕ್ರೋಬೇಸ್ ಮತ್ತು ಹಾನಿಯನ್ನುಂಟು ಮಾಡುವ ಕೆಮಿಕಲ್ಸ್ ನ್ನು ನಿವಾರಿಸಿ ರುಚಿಯನ್ನು ಹಾಗೆಯೇ ಕಾಯ್ದಿಡುತ್ತದೆ.
ಫಿಲ್ಟರ್‌ನ್ನು ಮನೆಗೆ ತಂದ ಬಳಿಕ ಅದರ ನಿರ್ವಹಣೆಯ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ನೀರನ್ನು ಫಿಲ್ಟರ್‌ಮಾಡುವ ಯಾವುದೇ ಅರ್ಥ ಇರುವುದಿಲ್ಲ. ಹೀಗಾಗಿ ಕೆಳಕಂಡ ಸಂಗತಿಗಳ ಬಗ್ಗೆ ಗಮನವಿರಲಿ.
ಸ್ಥಳದ ಆಯ್ಕೆ ವಾಟರ್ ಪ್ಯೂರಿಫೈರ್‌ನ್ನು ನೀರಿನ ಉಪಯೋಗ ಹೆಚ್ಚಿಗೆ ಆಗದಂತಹ ಜಾಗದಲ್ಲಿ ಇಡಬೇಕು.
ನೀರನ್ನು ತುಂಬುವ ವಿಧಾನ : ಫಿಲ್ಟರ್‌ನಲ್ಲಿ ನೀರನ್ನು ಎಷ್ಟು ನಿಧಾನವಾಗಿ ತುಂಬುತ್ತೀರೊ ಅಷ್ಟೇ ಒಳ್ಳೆಯ ರೀತಿಯಲ್ಲಿ ನೀರಿನಲ್ಲಿರುವ ಹಾನಿಕಾರಕ ಅಂಶಗಳು ಫಿಲ್ಟರ್ ಆಗುತ್ತವೆ. ವೇಗವಾಗಿ ನೀರನ್ನು ತುಂಬುವುದರಿಂದ ಫಿಲ್ಟರ್‌ನಲ್ಲಿ ಅಳವಡಿಸಲಾಗಿರುವ ಜಾಲರಿಗೆ ಹಾನಿಯುಂಟಾಗುವ ಸಾಧ್ಯತೆ ಇರುತ್ತದೆ.
ಫಿಲ್ಟರ್‌ನ ಸ್ವಚ್ಛತೆ : ಫಿಲ್ಟರ್‌ನ ಸ್ವಚ್ಛತೆ ಅತ್ಯವಶ್ಯ. ಅದಕ್ಕಾಗಿ ಅದರಲ್ಲಿರುವ ನೀರನ್ನು ಮೇಲಿಂದ ಮೇಲೆ ಬದಲಾಯಿಸಿ. ಡಿಶ್ ವಾಶರ್‌ನಿಂದ ಅದನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಏಕೆಂದರೆ ಸದಾ ನೀರು ತುಂಬಿರುವುದರಿಂದ ಫಿಲ್ಟರ್‌ನ ಒಳಭಾಗದಲ್ಲಿ ಜಿಗುಟು ಜಿಗುಟಾಗುತ್ತದೆ.
ಬೇರೆ ಅಗತ್ಯ ಸಂಗತಿಗಳು : ಕೆಲವೊಂದು ಫಿಲ್ಟರ್‌ಗಳಲ್ಲಿ ಕ್ಯಾಂಡಲ್‌ಗಳು, ಇನ್ನು ಕೆಲವು ಫಿಲ್ಟರ್‌ಗಳಲ್ಲಿ ಕ್ಲೋರಿನ್ ಟ್ಯಾಬ್ಲೆಟ್‌ಗಳನ್ನು ಉಪಯೋಗಿಸಲಾಗುತ್ತದೆ. ಮೇಲಿಂದ ಮೇಲೆ ಇವನ್ನು ಬದಲಿಸದೇ ಇದ್ದರೆ ನೀರನ್ನು ಫಿಲ್ಟರ್ ಮಾಡುವುದನ್ನು ನಿಲ್ಲಿಸಿಬಿಡುತ್ತದೆ.
ಎಚ್ಚರಿಕೆ : ಒಂದುವೇಳೆ ಫಿಲ್ಟರ್‌ನಲ್ಲಿ ನೀರನ್ನು ಮುಚ್ಚಲು ಕ್ಯಾಪ್ ಅಳವಡಿಸಲಾಗಿದ್ದರೆ, ಅದನ್ನು ಯಾವಾಗಲೂ ಮುಚ್ಚಿಯೇ ಇಡಿ. ಒಂದುವೇಳೆ ಅದು ಮುಕ್ತವಾಗಿದ್ದಲ್ಲಿ ಫಿಲ್ಟರ್ ಹಾಳಾಗುವ ಸಾಧ್ಯತೆ ಇರುತ್ತದೆ.
– ಪಿ. ನೀರಜಾ