ಮಹಿಳೆಯರಿಗೆ ಸಾಮಾನ್ಯವಾಗಿ ಬೆಳಗ್ಗೆ 6 ಗಂಟೆಯಿಂದ ದಿನ ಆರಂಭವಾಗುತ್ತದೆ. ಮಕ್ಕಳನ್ನು ಶಾಲೆಗೆ ಸಿದ್ಧಪಡಿಸುವುದು, ಗಂಡನನ್ನು ಆಫೀಸಿಗೆ ಕಳುಹಿಸುವುದು, ಒಂದು ವೇಳೆ ಸ್ವತಃ ಉದ್ಯೋಗಸ್ಥೆಯಾಗಿದ್ದರೆ ತಾನೂ ಸಿದ್ಧಳಾಗಿ ಆಫೀಸಿಗೆ ಹೋಗಿ ಕೆಲಸ ಮಾಡುತ್ತಾ ದಿನ ಹೇಗೆ ಕಳೆದುಹೋಗುತ್ತದೆಂದು ತಿಳಿಯುವುದೇ ಇಲ್ಲ.
ಅವರು ಸೂಪರವುಮನ್ ಆಗಿ ಖುಷಿಯಾಗಿರಲು ಸಾಧ್ಯವಿಲ್ಲ. ಏಕೆಂದರೆ ದಿನನಿತ್ಯದ ಒತ್ತಡಭರಿತ ದಿನಚರಿ ನಿಧಾನವಾಗಿ ಅವರ ಮುಗುಳ್ನಗುವನ್ನು ಕಿತ್ತುಕೊಳ್ಳುತ್ತದೆ. ಪ್ರತಿ ದಿನದ ನೀರಸ, ಒತ್ತಡಭರಿತ ಬದುಕಿನಿಂದ ಮಹಿಳೆಯರಿಗೆ ಬ್ರೇಕ್‌ಸಿಗಬಾರದೇ?
ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ (ಡಬ್ಲ್ಯೂಎಚ್‌ಓ)ನ ಇತ್ತೀಚಿನ ಒಂದು ವರದಿಯ ಪ್ರಕಾರ ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಒತ್ತಡ ಉಂಟಾಗುವ ಸಂಭಾವ್ಯತೆ ದ್ವಿಗುಣವಾಗಿರುತ್ತದೆ. ಈ ಒತ್ತಡಕ್ಕೆ ಮುಖ್ಯ ಕಾರಣ ಮೆದುಳಿನಲ್ಲಿ ಸಿರೋಟೋನಿನ್, ನೋರ್ ಎಡ್ರಿನಾಲಿನ್ ಮತ್ತು ನ್ಯೂರೋಟ್ರಾನ್ಸ್ ಮೀಟರ್‌ಗಳಂತಹ ಡೋಪಾಮೀನ್‌ಗಳ ಕೊರತೆ. ಆದರೂ ಮಹಿಳೆಯರು ತಮಗಾಗಿ ಕೊಂಚ ಸಮಯ ಮೀಸಲಿಟ್ಟು ಸಂತೋಷವಾಗಿದ್ದು, ಜೀವನದ ವಿಶೇಷ ಕ್ಷಣಗಳನ್ನು ಸೆಲೆಬ್ರೇಟ್‌ಮಾಡಿಕೊಂಡರೆ ಅವರು ಪ್ರಸನ್ನಚಿತ್ತರಾಗಿ ಹಾಗೂ ಆರೋಗ್ಯವಾಗಿ ಇರುತ್ತಾರೆ. ಇಷ್ಟೇ ಅಲ್ಲ, ಕುಟುಂಬದ ಪರಿಸ್ಥಿತಿ ಹಾಗೂ ಸಂಬಂಧಗಳೂ ಸಕಾರಾತ್ಮಕ ಉತ್ಸಾಹದಿಂದ ತುಂಬಿತುಳುಕುತ್ತದೆ.
ಬರ್ಥ್ಡೇ ಸ್ಮರಣೀಯವಾಗಿರಲಿ
ಬರ್ಥ್‌ಡೇ ಪ್ರತಿದಿನ ಬರುವುದಿಲ್ಲ. ವರ್ಷಕ್ಕೊಂದೇ ಬಾರಿ ಬರುತ್ತದೆ. ಈ ಬಾರಿ ಬರ್ಥ್‌ಡೇಯನ್ನು ವಿಶೇಷವಾಗಿ ಆಚರಿಸಿ.
ಎಲ್ಲಕ್ಕೂ ಮೊದಲು ಬರ್ಥ್‌ಡೇನಂದು ಬೆಳಗ್ಗೆ ಬೇಗನೆ ಎದ್ದು ಗಡಿಬಿಡಿಯಿಂದ ಓಡಾಡುವ ಬದಲು ನಿಮ್ಮ ಕಾಫಿ, ತಿಂಡಿಯನ್ನು ಬೆಡ್ ಮೇಲೇ ತೆಗೆದುಕೊಳ್ಳುತ್ತೇನೆಂದು ನಿರ್ಧರಿಸಿ. ವರ್ಷವಿಡೀ ನೀವು ಬೆಳಗ್ಗೆ ಬೇಗನೆ ಎದ್ದು ಗಂಡ ಮತ್ತು ಮಕ್ಕಳಿಗೆ ತಿಂಡಿ, ಕಾಫಿ ಮಾಡಿ ಕೊಟ್ಟಿದ್ದೀರಿ. ಇಂದು ಅದರ ಜವಾಬ್ದಾರಿಯನ್ನು ಗಂಡ ಮತ್ತು ಮಕ್ಕಳ ಮೇಲೆ ಹಾಕಿ.
ಅಂದು ಇತರರ ಬದಲು ನಿಮಗಾಗಿ ಸಮಯ ಮಾಡಿಕೊಳ್ಳಿ. ಶಾಪಿಂಗ್‌ಗೆ ಹೋಗಿ ಒಳ್ಳೆಯ ಡ್ರೆಸ್‌ಗಳನ್ನು ಖರೀದಿಸಿ. ಒಳ್ಳೆಯ ಪಾರ್ಲರ್‌ಗೆ ಹೋಗಿ ಸ್ಪಾ ಮತ್ತು ಫೇಶಿಯಲ್ ಮಾಡಿಸಿಕೊಳ್ಳಿ. ಶ್ರೀಗಂಧ ಹಾಗೂ ವಿಧವಿಧವಾದ ಹೂಗಳ ಸುವಾಸನೆಯಲ್ಲಿ ಸ್ನಾನ ಮಾಡಿದರೆ ಮೈಮನಗಳ ಆಯಾಸ ಪರಿಹಾರವಾಗುತ್ತದೆ. ಫೇಶಿಯಲ್, ಬ್ಲೀಚ್‌ನಂತಹ ಟ್ರೀಟ್‌ಮೆಂಟ್‌ನಿಂದ ಮುಖಕ್ಕೆ ಹೊಸ ತಾಜಾತನ ಬರುತ್ತದೆ.
ನಿಮಗೆ ಇಷ್ಟವಾದ ಅಡುಗೆ ಮಾಡಿ ನೀವು ತಿನ್ನಿ. ಮನೆಯವರಿಗೂ ತಿನ್ನಿಸಿ. ಆಕರ್ಷಕ ಉಡುಪುಗಳನ್ನು ಧರಿಸಿ. ಇಡೀ ಮನೆಯನ್ನು, ಮುಖ್ಯವಾಗಿ ನಿಮ್ಮ ಕೋಣೆಯನ್ನು ಕೊಂಚ ವಿಶೇಷವಾಗಿ ಅಲಂಕರಿಸಿ.
ನಿಮಗೆ ಯಾವುದು ಇಷ್ಟವೋ ಅದನ್ನೇ ದಿನವಿಡೀ ಮಾಡುತ್ತಿರಿ. ಒಳ್ಳೆಯ ಸಿನಿಮಾ ನೋಡಲು ಹೋಗಿ. ಸಂಜೆ ನಿಮ್ಮ ಗೆಳತಿಯರೊಂದಿಗೆ ಮೋಜು ಮಾಡಿ. ಕಾಲೇಜಿನ ದಿನಗಳನ್ನು ನೆನಪು ಮಾಡಿಕೊಳ್ಳಿ. ಸಣ್ಣಪುಟ್ಟ ಪಾರ್ಟಿಯನ್ನೂ ಮಾಡಬಹುದು. ಒಟ್ಟಿನಲ್ಲಿ ಆ ದಿನವನ್ನು ಮನಸಾರೆ ಎಂಜಾಯ್ ಮಾಡಿ.
ನಿಮ್ಮ ಪ್ರತಿ ಬರ್ಥ್‌ಡೇ ಫೋಟೋಗಳನ್ನು ರೆಕಾರ್ಡ್ ಮಾಡಿ ಇಡಿ. ಮುಂದೆ ಅವನ್ನು ನೋಡಿದಾಗ ನಿಮಗೆ ಸಂತೋಷವಾಗುತ್ತದೆ.
ಅಂದು ಎಲ್ಲಾದರೂ ಸುತ್ತಾಡಲು ಹೋಗುವ ಪ್ರೋಗ್ರಾಂ ಹಾಕಿಕೊಳ್ಳಬಹುದು. ಗಂಡನೊಂದಿಗೆ ಲಾಂಗ್ ಡ್ರೈವ್ ಕೂಡ ಹೋಗಬಹುದು.
ವಿವಾಹ ವಾರ್ಷಿಕೋತ್ಸವ
ಮದುವೆ ಒಮ್ಮೆ ಮಾತ್ರ ಆಗುತ್ತದೆ. ಆದರೆ ಮದುವೆಯ ವಾರ್ಷಿಕೋತ್ಸವ ಪ್ರತಿ ವರ್ಷ ಬರುತ್ತದೆ. ಆ ದಿನವನ್ನು ಕೊಂಚ ವಿಶೇಷ ಸ್ಟೈಲ್‌ನಿಂದ ಸೆಲೆಬ್ರೇಟ್ ಮಾಡಿ ನಿಮಗೆ ಸಂತಸ ಕೊಡುವ ಜೊತೆಗೆ ನಿಮ್ಮ ಸಂಬಂಧಗಳ ತಾಜಾತನವನ್ನು ವರ್ಷವಿಡೀ ಉಳಿಸಿಕೊಳ್ಳಬಹುದು. ಹಾಗಾದರೆ ನಿಮ್ಮ ಮ್ಯಾರೇಜ್ ಆ್ಯನಿವರ್ಸರಿಯನ್ನು ಹೀಗೆ ಆಚರಿಸಿ.