ಒಂದು ಹುಚ್ಚಾಸ್ಪತ್ರೆಯ ಒಳರೋಗಿಗಳಾಗಿದ್ದ ಕೆಲವು ಹೆಂಗಸರು ಹುಚ್ಚುಚ್ಚಾಗಿ ಕುಣಿಯುತ್ತಿದ್ದರು. ಅವರಲ್ಲಿ ಒಬ್ಬಾಕೆ ಮಾತ್ರ ಸೈಲೆಂಟ್ ಆಗಿ ಬದಿಯಲ್ಲಿ ಕುಳಿತಿದ್ದಳು. ಬಹುಶಃ ಆಕೆಗೆ ವಾಸಿ ಆಗಿರಬೇಕೆಂದು ಅಲ್ಲಿಗೆ ಬಂದ ವಿಸಿಟರ್ ಒಬ್ಬರು ಪ್ರಶ್ನಿಸಿದರು, “ಏನಮ್ಮ, ನೀವೇಕೆ ಅವರ ಜೊತೆ ಡ್ಯಾನ್ಸ್ ಮಾಡುತ್ತಿಲ್ಲ…?”
ಆಗ ಆಕೆ, “ಏ ಗುಗ್ಗು, ಅಷ್ಟೂ ಗೊತ್ತಾಗೊಲ್ವೆ? ನಾನು ಮದುವೆ ಹೆಣ್ಣು!” ಎನ್ನುವುದೇ?
ಪತಿಪತ್ನಿಯರಲ್ಲಿ ಯದ್ವಾತದ್ವಾ ಜಗಳ ನಡೆಯುತ್ತಿತ್ತು.
ಪತ್ನಿ : ಛೇ….ಛೇ! ನಾನು ನಮ್ಮಮ್ಮನ ಮಾತು ಕೇಳಿದ್ದರೆ ಚೆನ್ನಾಗಿರುತ್ತಿತ್ತು, ನಿನ್ನನ್ನು ಮದುವೆ ಆಗುವ ಕರ್ಮ ಇರುತ್ತಿರಲಿಲ್ಲ.
ಪತಿ : ಅಂದರೆ…? ನಿಮ್ಮಮ್ಮ ನನ್ನನ್ನು ಮದುವೆ ಆಗಬೇಡ ಅಂತ ಹೇಳಿದ್ದರೆ?
ಪತ್ನಿ : ಹೌದು, ನೂರಲ್ಲ ಸಾವಿರ ಸಲ ಹೇಳಿದ್ದರು.
ಪತಿ : ಅಯ್ಯೋ (ಗೋಳಾಡುತ್ತಾ) ಎಂಥ ಕೆಲಸ ಆಗ್ಹೋಯ್ತು…. ಆ ಪುಣ್ಯಾತ್ಗಿತ್ತಿ ನನ್ನನ್ನು ಈ ನರಕದಿಂದ ಕಾಪಾಡಲು ಅಷ್ಟು ಒಳ್ಳೆಯ ಸಲಹೆ ಕೊಟ್ಟಿದ್ದರೆ? ಅನ್ಯಾಯವಾಗಿ ಅವರನ್ನು ಪಾಪಿಷ್ಟ ಹೆಂಗಸು ಅಂತ ಇಷ್ಟು ದಿನ ಬೈದುಕೊಳ್ಳುತ್ತಿದ್ದೆ.
ಗಂಡ ಆಫೀಸಿನಿಂದ ಹೆಂಡತಿಗೆ ಫೋನಿನಲ್ಲಿ ಹೇಳುತ್ತಿದ್ದ, “ಹಲೋ ಡಿಯರ್, ಹೇಗಿದ್ದೀ? ನಿನಗೆ ಬಹಳ ಬೋರ್ ಆಗಿರಬೇಕು. ಒಂದಿಷ್ಟು ಪ್ರೀತಿಯಿಂದ ವಿಚಾರಿಸಿಕೊಳ್ಳೋಣ ಅಂತ ಫೋನ್ ಮಾಡಿದೆ. ಹೌ ಆರ್ ಯೂ ಡಾರ್ಲಿಂಗ್.”
“ಓಹೋ… ಏನಿವತ್ತು ರಾಯರಿಗೆ ಒಳ್ಳೆಯ ಮೂಡ್ ಬಂದಂತಿದೆ. ಅಲ್ರಿ, ಬೆಳಗ್ಗೆ ನೋಡಿದ್ರೆ ನಾಯಿ ನರಿಗಳ ತರಹ ಕಚ್ಚಾಡಿಗೊಂಡು ಆಫೀಸಿಗೆ ಹೋದ್ರಿ, ಈಗ ಎಲ್ಲಿಂದ ಬಂತು ಈ ಲವ್?” ಹೆಂಡತಿ ಘಟ್ಟಿಸಿ ಕೇಳಿದಳು.
ಪತಿರಾಯ ಸ್ವಗತದಲ್ಲಿ, `ಅಯ್ಯೋ! ಲ್ಯಾಂಡ್ ಲೈನಿಗೆ ಮಾಡಿದ್ದೇ ತಪ್ಪಾಯ್ತು. ಹಾಳಾದ್ದು, ಅದು ನಮ್ಮ ಮನೆ ನಂಬರ್ರೇ ಆಗಿರಬೇಕಾ….?”
ಗುಂಡನ ಬಳಿ ವುಲ್ಲನ್ ಸಾಕ್ಸ್ ಇಲ್ಲದಿರುವುದನ್ನು ಗಮನಿಸಿ ಅವನ ಹೆಂಡತಿ ಪುಟ್ನಂಜಿ ಹೇಳಿದಳು, “ನಡೆಯಿರಿ, ಟಿಬೆಟ್‌ಮಾರ್ಕೆಟ್‌ಗೆ ಹೋಗಿ ನಿಮಗೆ ಆ ಸಾಕ್ಸ್ ಕೊಂಡುಕೊಳ್ಳೋಣ.”
ಅವರು ಅಲ್ಲಿಂದ ಶಾಪಿಂಗ್ ಮುಗಿಸಿ ಬರಲು 3 ತಾಸುಗಳಾಯಿತು. ಮನೆಗೆ ಬಂದು ಸೇರಿದಾಗ ಜೊತೆಯಲ್ಲಿ 3 ವುಲ್ಲನ್ ಕುರ್ತಿ, 2 ಶಾಲು, 1 ಸ್ಟೋಲ್, 4 ಲೆಗಿಂಗ್ಸ್ ಇದ್ದವು. ಮತ್ತೆ ಗುಂಡನ ಸಾಕ್ಸ್ ಅಂದಿರಾ?
“ಅಯ್ಯೋ…. ಬಡ್ಕೊಂಡ್ರು, ಇಲ್ಲಿರುವ ಸಾಕ್ಸ್ ಕಲರ್ ಒಂದೂ ಚೆನ್ನಾಗಿಲ್ಲ. ಮುಂದಿನ ಸಲ ಚೈನಾ ಬಜಾರ್ ಅಥವಾ ಬರ್ಮಾ ಬಜಾರ್‌ಗೆ ಹೋದಾಗ ನೋಡಿಕೊಳ್ಳೋಣ,” ಎನ್ನುವುದೇ ಪುಟ್ನಂಜಿ?
ಗಂಡ ತಪ್ಪು ಮಾಡುತ್ತಾನೆ. ಆಗ ಹೆಂಡತಿಗೆ ಕೆಟ್ಟ ಕೋಪ ಬರುತ್ತದೆ. ಆಗ ಗಂಡ ತಕ್ಷಣ ಹೇಳ್ತಾನೆ, “ಸಾರಿ!”
ಹೆಂಡತಿ ತಪ್ಪು ಮಾಡುತ್ತಾಳೆ. ಆಗ ಗಂಡನಿಗೆ ಕೆಟ್ಟ ಕೋಪ ಬರುತ್ತದೆ. ಇನ್ನೇನು? ಹೆಂಡತಿ ಗೊಳೋ ಎಂದು ಅಳುತ್ತಾಳೆ.
ಆಗ ಗಂಡ ತಕ್ಷಣ ಹೇಳ್ತಾನೆ, “ಸಾರಿ!”
ಒಬ್ಬ ಮಹಿಳೆ ಮಾಲ್‌ಗೆ ಹೋಗಿ ಬಿಸ್ಕತ್ತಿನ ಪ್ಯಾಕೆಟ್ ಕದಿಯುವಾಗ ಸಿಕ್ಕಿಬಿದ್ದಳು. ವಿಚಾರಣೆಗಾಗಿ ಆಕೆಯನ್ನು ಕೋರ್ಟಿನಲ್ಲಿ ಹಾಜರುಪಡಿಸಲಾಯಿತು.
ಜಡ್ಜ್ : ಏನಮ್ಮ, ನೀನು ಬಿಸ್ಕತ್ತು ಪ್ಯಾಕೆಟ್ ಕದ್ದಿದ್ದು ನಿಜ ತಾನೇ?
ಮಹಿಳೆ : ಹ್ಞೂಂ
ಜಡ್ಜ್ : ನೀನು ಕದ್ದ ಆ ಪ್ಯಾಕೆಟ್‌ನಲ್ಲಿ ಒಟ್ಟು 10 ಬಿಸ್ಕತ್ತುಗಳಿದ್ದವು. ಹೀಗಾಗಿ ನಿನಗೆ 10 ದಿನಗಳ ಸೆರೆವಾಸದ ಶಿಕ್ಷೆ ವಿಧಿಸಲಾಗಿದೆ.
ಅಷ್ಟರಲ್ಲಿ ಹಿಂದಿನ ಬೆಂಚಿನಿಂದ ಒಂದು ಗಂಡು ಧ್ವನಿ ಚೀರಿಟ್ಟಿತು, “ಅಷ್ಟು ಮಾತ್ರ ಅಲ್ಲ ಸ್ವಾಮಿ, ಅವಳು ಕಾಲು ಕೆ.ಜಿ. ಸಾಸುವೆ ಪ್ಯಾಕೆಟ್ ಸಹ ಕದ್ದಿದ್ದಳು…” ಆ ಧ್ವನಿ ಯಾರದೆಂದು ಎಲ್ಲರೂ ತಿರುಗಿ ನೋಡಿದರೆ, ಅದು ಅವಳ ಗಂಡನಾಗಿರಬೇಕೇ?
ಮದುವೆಗೆ ಮುಂಚೆ ಬಾಯ್‌ಫ್ರೆಂಡ್ ತನ್ನ ಗರ್ಲ್ ಫ್ರೆಂಡ್‌ಗೆ ಹೇಳುತ್ತಾನೆ, “ಚಿನ್ನ…. ರನ್ನ… ನೀನೇ ನನ್ನ ಪ್ರಾಣ!”
ಮದುವೆ ನಂತರ ಅದೇ ಬಾಯ್‌ಫ್ರೆಂಡ್ ಗಂಡ ಅಂತಾದಾಗ, ಹೆಂಡತಿಯಾಗಿರುವ ಹಳೇ ಗರ್ಲ್ ಫ್ರೆಂಡ್‌ಗೆ ಹೇಳುತ್ತಾನೆ, “ಚಿನ್ನ… ರನ್ನ…. ಅಂತ ತೆಗೀಬೇಡ ನನ್ನ ಪ್ರಾಣ!”
ಮದುವೆಗಳ ಸೀಝನ್ ಶುರುವಾಗಿತ್ತು…..ಒಬ್ಬ ವ್ಯಕ್ತಿ ಪಾರ್ಲರ್ ಹೊರಗಿನ ವರಾಂಡದಲ್ಲಿ ಕುಳಿತು ಪೇಪರ್ ಓದುತ್ತಿದ್ದರು. ಅಲ್ಲಿಂದ ನೇರ ಅವರು ರಿಸೆಪ್ಶನ್ ಹಾಲ್‌ಗೆ ಹೋಗಬೇಕಿತ್ತು. 2-3 ಗಂಟೆಗಳ ನಂತರ ಒಬ್ಬ ಮಹಿಳೆ ಒಳಗಿನಿಂದ ಹೊರಬಂದು, ಆತನ ಭುಜದ ಮೇಲೆ ಕೈ ಇರಿಸುತ್ತಾ, “ಬನ್ನಿ ಹೋಗೋಣ,” ಎಂದರು.
ಆತ ಗಾಬರಿಯಿಂದ ಬೆವರಿ, “ಅಯ್ಯೋ! ನೀವು ಯಾರೋ ನನಗೆ ಗೊತ್ತಿಲ್ಲ… ನನಗೆ ಈಗಾಗಲೇ ಮದುವೆ ಆಗಿದೆ. ನನ್ನ ಹೆಂಡತಿ ಮೇಕಪ್‌ಗಾಗಿ ಒಳಗೆ ಹೋಗಿದ್ದಾಳೆ….”
ಆಗ ಆ ಮಹಿಳೆ ಹೇಳಿದಳು, “ನಾನೇ ಕಣ್ರೀ, ಸರಿಯಾಗಿ ನೋಡಿ!” ಎನ್ನುವುದೇ?
ಪತ್ನಿ : ಆಗಿನಿಂದ ಗಂಟೆಗಟ್ಟಲೆ ಬಡ್ಕೊಳ್ತಿದ್ದೀನಿ. ನೀನು ಕೇಳಿಸಿಕೊಳ್ಳದೆ ಆಕಳಿಸುತ್ತಿದ್ದಿ. ಏನು ಬಂದಿರೋದು ಕೇಡು?
ಪತಿ : ಆಕಳಿಸೋದು ಏನು ಬಂತು? ನಿನ್ನ ಪ್ರಶ್ನೆಗೆ ಉತ್ತರ ಕೊಡಲು ಪ್ರಯತ್ನಿಸುತ್ತಿದ್ದೀನಿ, ನೀನು ನನ್ನನ್ನು ಮಾತನಾಡಲು ಬಿಟ್ಟರೆ ತಾನೇ?
ತಾತಾ : ಲೋ ರಾಜು ಮರಿ, ಒಳಗಡೆ ನನ್ನ ಹಲ್ಲು ಸೆಟ್ ಇದೆ, ಸ್ವಲ್ಪ ತೆಗೆದುಕೊಂಡು ಬಾ..
ರಾಜು : ಏ ತಾತಾ, ಇನ್ನೂ ಅಡುಗೆ ಅಗಿಲ್ಲವಂತೆ. ಏನಿಷ್ಟು ಅರ್ಜೆಂಟು?
ತಾತಾ : ಅಡುಗೆ ಮನೆ ಹಾಳಾಯ್ತು. ಎದುರಿನ ಮನೆಗೆ ಸಿಂಗಲ್ ಅಜ್ಜಿ ಒಬ್ಬರು ಹೊಸದಾಗಿ ಬಾಡಿಗೆಗೆ ಬಂದಿದ್ದಾರಂತೆ, ಸ್ವಲ್ಪ ಮಾತನಾಡಿಸಿಕೊಂಡು ಬರ್ತೀನಿ…..
ರಾಮಣ್ಣ ನೋಡುತ್ತಾರೆ, ಮಗ ಹೊಲಿಗೆ ಯಂತ್ರದ ಮುಂದೆ ಕುಳಿತು ಜೀನ್ಸ್ ಪ್ಯಾಂಟ್ ಹೊಲಿದುಕೊಳ್ಳುತ್ತಿದ್ದ.
ಅದನ್ನು ಕಂಡು ಅವರು, “ಯಾಕಪ್ಪ, ನಾನು ನಿನಗೆ ಅಷ್ಟು ಖರ್ಚು ಮಾಡಿ ಮದುವೆ ಮಾಡಿಸಿದೆ, ಮನೆಗೆ ಸೊಸೆ ಬಂದಿದ್ದಾಳೆ. ಹಾಗಿದ್ದೂ ನೀನೇ ನಿನ್ನ ಪ್ಯಾಂಟ್ ಹೊಲಿದುಕೊಳ್ಳಬೇಕೇ?” ಎಂದು ರೇಗಿದರು.
“ಅಪ್ಪ, ನೀವು ತಪ್ಪು ಲೆಕ್ಕ ಹಾಕಿದ್ರಿ. ಈ ಜೀನ್ಸ್ ಪ್ಯಾಂಟ್ ಕೂಡ ಅವಳದೇ!” ಎಂದ ಮಗರಾಯ.
ಒಂದು ಪಾರ್ಕಿನಲ್ಲಿ ಒಂದು ಸಣ್ಣ ಹುಡುಗಿ ಮೇಲಿಂದ ಮೇಲೆ ಚಾಕಲೇಟ್ ತಿನ್ನುತ್ತಲೇ ಇದ್ದಳು. ಅದನ್ನು ಗಮನಿಸಿದ ಒಬ್ಬ ಮಧ್ಯ ವಯಸ್ಸಿನ ಆಂಟಿ ಹೇಳಿದರು, “ಹೆಚ್ಚು ಸಿಹಿ ತಿನ್ನಬೇಡ. ಹಾಗೆ ಮಾಡುವವರು ಬೇಗನೆ ಸತ್ತುಹೋಗುತ್ತಾರಂತೆ. ಗೊತ್ತಾಯ್ತಾ?”
“ಆಂಟಿ, ನಮ್ಮ ಅಜ್ಜಿಗೆ 106 ವರ್ಷ. ನಿಮಗೆ ಗೊತ್ತೆ?”
“ಓ…. ಅವರು ಸಿಹಿ ತಿನ್ನೋದಿಲ್ಲ ಅಂತ ಕಾಣ್ಸುತ್ತೆ. ಅದಕ್ಕೆ ದೀರ್ಘಾಯುಷಿ ಆಗಿದ್ದಾರೆ.”
“ಹಾಗಲ್ಲ, ಅವರು ಇನ್ನೊಬ್ಬರ ಕೆಲಸಗಳಲ್ಲಿ ಎಂದೂ ಮೂಗು ತೂರಿಸೋದಿಲ್ಲ. ಅದಕ್ಕೇ!”
ಸೊಸೆ : ಅತ್ತೆ, ಇವತ್ತು ನೀವೇ ಅಡುಗೆ ಮಾಡಿಬಿಡಿ. ನನಗೆ ಬಹಳ ತಲೆ ನೋವು.
ಅತ್ತೆ : ಅಡುಗೆ ಏನೋ ಮಾಡಬಹುದು, ಆದರೆ ಸುಳ್ಳು ಹೇಳು ನಿನ್ನ ಈ ಚಾಳಿ ನನಗೆ ಹಿಡಿಸಲ್ಲ ನೋಡು.
ಸೊಸೆ : ಆದರೆ… ನಾನು ಸುಳ್ಳು ಹೇಳ್ತಿದ್ದೀನಿ ಅಂತ ನಿಮಗೆ ಹೇಗೆ ಗೊತ್ತಾಯ್ತು…..?
ಅತ್ತೆ : ಒಂದು ಕಾಲದಲ್ಲಿ ನಾನೂ ಸೊಸೆ ಆಗಿದ್ದೆ…..
ಪತಿ ಪತ್ನಿ ಶಾಪಿಂಗ್ ಹೊರಟಿದ್ದರು. ಎದುರಿಗೆ ಜವಳಿ, ಜ್ಯೂವೆಲರಿ ಅಂಗಡಿ ಕಾಣಿಸಿದವು.
“ನನ್ನ ಕೊರಳಿಗೆ ಒಪ್ಪುವಂಥದ್ದು ಏನಾದರೂ ಕೊಡಿಸಬಾರದೇ?”
ಕೂಡಲೇ ಅವಳ ಪತಿ ಸ್ಟ್ರೆಪ್ಸಿಲ್ಸ್ ಕೊಂಡು ತಂದು, “ನಿನ್ನ ಕೊರಳು ಚೆನ್ನಾಗೇ ಇದೆ. ಅದರೊಳಗಿನ ಗಂಟಲು ಸರಿ ಇಲ್ಲ ಅಷ್ಟೆ,” ಎನ್ನುವುದೇ?