ಕರ್ನಾಟಕ ರಾಜ್ಯದ ನಾಲ್ಕನೆಯ ದೊಡ್ಡ ಜಿಲ್ಲೆ ಎಂದು ಪರಿಗಣಿಸಲ್ಪಟ್ಟಿರುವ ಧಾರವಾಡ ಪಶ್ಚಿಮದಿಂದ ಪೂರ್ವಕ್ಕೆ ಇಳಿಜಾರಿನಂತಿರುವ ಜಿಲ್ಲೆ. ಅದರಲ್ಲೂ ಹುಬ್ಬಳ್ಳಿ ಎಂದ ತಕ್ಷಣ ವಾಣಿಜ್ಯೋದ್ಯಮದ ತಾಣ ಎಂದು ಎಲ್ಲರ ಮನದಲ್ಲೂ ಬೇರೂರಿಬಿಟ್ಟಿದೆ. ಹುಬ್ಬಳ್ಳಿಯಲ್ಲಿ ರೈಲು, ವಿಮಾನ ಮತ್ತು ರಸ್ತೆ ಸಾರಿಗೆ ಎಲ್ಲ ಸೌಕರ್ಯಗಳು ಇರುವುದರಿಂದ ಮುಖ್ಯ ಸಾರಿಗೆ ಕೇಂದ್ರವೆಂದೂ ಹುಬ್ಬಳ್ಳಿ ಪರಿಗಣಿಸಲ್ಪಟ್ಟಿದೆ. ಇಂತಹ ಹುಬ್ಬಳ್ಳಿಗೆ ಬಂದವರು ಇಲ್ಲಿನ ಉಣಕಲ್ ಕೆರೆಗೆ ಒಮ್ಮೆಯಾದರೂ ಭೇಟಿ ನೀಡಲಿಲ್ಲವೆಂದಾದರೆ ನೀವು ಏನನ್ನೋ ಕಳೆದುಕೊಂಡಂತೆ. ಅಷ್ಟೇ ಅಲ್ಲ, ಪರಿಸರ ಪ್ರಿಯರಿಗಂತೂ ಇದು ಸ್ವರ್ಗವಷ್ಟೇ ಅಲ್ಲ ಇಲ್ಲಿನ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳಲು ಎರಡು ಕಣ್ಣು ಸಾಲದೇನೋ ಎಂಬಂತಿದೆ.
ಇತ್ತೀಚಿನ ವರ್ಷಗಳಲ್ಲಿ ಕೆರೆಗಳು ಮಾಯವಾಗಿ ಎಲ್ಲೆಂದರಲ್ಲಿ ಅಪಾರ್ಟ್‌ಮೆಂಟ್ ತಲೆ ಎತ್ತಿ ಕೆರೆಗಳ ಅಸ್ತಿತ್ವವೇ ಇಲ್ಲದಂತೆ ತನ್ನದೇ ಆದ ಪರಿಸರ ನಿರ್ಮಾಣವಾಗುತ್ತಿರುವುದು ತುಂಬ ಕಳವಳಕಾರಿ ಸಂಗತಿ. ಬೆಂಗಳೂರಿನಲ್ಲಿ ಎಲ್ಲೆಲ್ಲಿ ಕೆರೆಗಳಿದ್ದವು, ಅವು ಎಷ್ಟು ಅತಿಕ್ರಮಣವಾಗಿವೆ ಎಂಬುದನ್ನು ತಿಳಿಯಲು ರಚಿತವಾದ ಸಮಿತಿಯೊಂದಕ್ಕೆ ಸಿಕ್ಕ ಸಂಗತಿಗಳು ತುಂಬ ಕಳವಳಕಾರಿಯಾಗಿದ್ದವು ಎಂಬುದನ್ನು ನಾವು ಕಳೆದ ಕೆಲವು ದಿನಗಳಿಂದ ದಿನಪತ್ರಿಕೆಗಳಲ್ಲಿ ಸುದ್ದಿ ವಾಹಿನಿಗಳಲ್ಲಿ ಕೇಳಿದ್ದೇವಲ್ಲವೇ? ಹಾಗಾದರೆ ಹುಬ್ಬಳ್ಳಿಯ ಉಣಕಲ್ ಕೆರೆಯನ್ನು ನೋಡ ಬಂದರೆ ಸಾಕು, ಅದರೊಳಗಿನ ಇತಿಹಾಸದೊಡನೆ ಇಂದಿಗೂ ತನ್ನ ಸೌಂದರ್ಯವನ್ನು ಒಡಲಲ್ಲಿ ಹುದುಗಿಸಿ ಪರಿಸರಪ್ರೇಮಿಗಳಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತ ಜೀವಸೆಲೆಯಾಗಿ ಕಂಗೊಳಿಸುತ್ತಿದೆ.
ಒಂದು ಕಾಲಕ್ಕೆ ಗ್ರಾಮ ಜೀವನದ ಕೇಂದ್ರಬಿಂದುವಾಗಿ ಈ ಕೆರೆಗಳಿದ್ದವು. ಪ್ರಾಚೀನ ಸಂಪ್ರದಾಯದ ಪ್ರಕಾರ ಮರಗಳನ್ನು ನೆಡುವುದು, ಶಾಲೆಗಳನ್ನು ತೆರೆಯುವುದು, ಬಾವಿಗಳನ್ನು ತೆಗೆಸುವುದು, ದೇವಾಲಯಗಳನ್ನು ನಿರ್ಮಿಸುವುದು, ಕೆರೆಯನ್ನು ನಿರ್ಮಿಸುವುದು ದಾನ ಪರಂಪರೆಯ ಅವಿಭಾಜ್ಯ ಅಂಗಗಳಾಗಿದ್ದವು. ಮನುಷ್ಯನಿಗೆ ಮಾತ್ರವಲ್ಲದೇ ಇತರ ಎಲ್ಲ ಜೀವಜಂತುಗಳಿಗೆ ನೀರುಣಿಸುವ ಜೊತೆಗೆ ಅದರ ಸುತ್ತಮುತ್ತ ಕೆಲವು ಹಳ್ಳಿಗಳು ಹುಟ್ಟಿಕೊಂಡು ತನ್ನದೇ ಆದ ಪ್ರಕೃತಿಯನ್ನು ಈ ಕೆರೆಗಳು ನೀಡುತ್ತಿದ್ದವು. ಇಂದಿಗೂ ಕೂಡ ದೇಶದ ಇತಿಹಾಸದಲ್ಲಿ ಅನೇಕ ಕೆರೆಗಳಿಗೆ ತನ್ನದೇ ಆದ ಇತಿಹಾಸವಿದೆ. ಅವುಗಳ ಸುತ್ತ ಹಲವು ಶಾಸನಗಳಿವೆ, ಮೋಕ್ಷ ಸಾಧಕರ ಕಥೆಗಳಿವೆ.
ಹುಬ್ಬಳ್ಳಿ-ಧಾರವಾಡ ನಡುವೆ ಅವಳಿನಗರಗಳಲ್ಲಿ ಸಂಚರಿಸುವ ನಗರ ಸಾರಿಗೆ ಬಸ್‌ಗಳಲ್ಲಿ ದಿನಕ್ಕೆ 55 ರೂ.ಗಳ ರಿಯಾಯಿತಿ ಪಾಸ್ ಸೌಲಭ್ಯವುಂಟು ಇದನ್ನು ಪಡೆದರೆ ಸಾಕು ಹುಬ್ಬಳ್ಳಿ-ಧಾರವಾಡವನ್ನು ಒಂದು ದಿನದ ಮಟ್ಟಿಗೆ ಎಲ್ಲೆಂದರಲ್ಲಿ ನಗರ ಸಾರಿಗೆ ಬಸ್ಸುಗಳಲ್ಲಿ ಸಂಚರಿಸಬಹುದಾಗಿದೆ. ಹುಬ್ಬಳ್ಳಿ ಬೆಂಗಳೂರಿನಿಂದ 400 ಕಿ.ಮೀ., ಧಾರವಾಡದಿಂದ 20 ಕಿ.ಮೀ., ಬೆಳಗಾವಿಯಿಂದ 85 ಕಿ.ಮೀ. ದೂರವಿದೆ. ಇದೊಂದು ವಾಣಿಜ್ಯ ಕೇಂದ್ರ. ಛೋಟಾ ಮುಂಬೈ ಎಂದೂ ಹುಬ್ಬಳ್ಳಿಯನ್ನು ಕರೆಯುತ್ತಾರೆ.
ಇದು ಬೆಂಗಳೂರು-ಪೂನಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4ರಲ್ಲಿ ಬರುತ್ತದೆ. ಅಷ್ಟೇ ಅಲ್ಲ ಕಾರವಾರ ಬಂದರು ಕೂಡ ಇಲ್ಲಿಂದ 165 ಕಿ.ಮೀ. ಅಂತರವಿದ್ದು ಒಂದೆಡೆ ನೈರುತ್ಯ ರೈಲ್ವೆ ವಲಯ. ಮತ್ತೊಂದೆಡೆ ವಿಮಾನ ನಿಲ್ದಾಣ. 46 ವಾರ್ಡ್ ಹೊಂದಿದ ಮಹಾನಗರ ಪಾಲಿಕೆ. 1997ರಿಂದ ವಾಯ್ಯವ್ಯ ಸಾರಿಗೆ ಸಂಸ್ಥೆಯನ್ನು ಹೊಂದುವ ಮೂಲಕ ರಾಜ್ಯದ ಎಲ್ಲ ಮಾರ್ಗಗಳಿಂದಲೂ ರಸ್ತೆ ಸಾರಿಗೆ ಸಂಪರ್ಕ ಹೊಂದಿದೆ.