ಅರವಿಂದಮ್ಮ ಏದುಸಿರು ಬಿಡುತ್ತಾ ಕೈಯಲ್ಲೊಂದು ಸುತ್ತಿಗೆ ಹಿಡಿದು ಹೈಸ್ಕೂಲ್ ಕಲಿಯುತ್ತಿದ್ದ ತಮ್ಮ ಮಗನ ಶಾಲೆ ತಲುಪಿದರು. ಅಲ್ಲಿ ಶಾಲೆ ಮುಂದಿದ್ದ ಜವಾನ ಸಿದ್ದನನ್ನು ಕೇಳಿದರು, ``ಏನಪ್ಪ.... ಇಲ್ಲಿ ಶಾಂತಮೂರ್ತಿಗಳ ಕ್ಲಾಸ್ ಯಾವುದು?''
``ಅದೇಕೆ ಕೇಳ್ತಿದ್ದೀರಿ ತಾಯಿ?'' ಆಕೆಯ ಕೈಯಲ್ಲಿದ್ದ ಭಾರಿ ಸುತ್ತಿಗೆ ಕಂಡು ಗಾಬರಿಗೊಂಡ ಸಿದ್ದ ಪ್ರಶ್ನಿಸಿದ.
``ಏ..... ಅವರು ನನ್ನ ಮಗನ ಕ್ಲಾಸ್ ಟೀಚರ್ ಕಣಪ್ಪ.....'' ಸುತ್ತಿಗೆ ಝಳಪಿಸುತ್ತಾ ಆಕೆ ಹೇಳಿದರು.
ಅದನ್ನು ಕೇಳಿ ಎದ್ದೆನೋ ಬಿದ್ದೆನೋ ಎಂದು ಸಿದ್ದ ಓಡೋಡಿ ಶಾಂತಮೂರ್ತಿಗಳ ಕ್ಲಾಸಿಗೆ ಹೋಗಿ, ``ಸಾರ್..... ನಿಮ್ಮನ್ನು ಹುಡುಕಿಕೊಂಡು ಯಾರೋ ಒಬ್ಬ ಭಾರಿ ಹೆಂಗಸು ಮಾರಿಮುತ್ತು ತರಹ ಸುತ್ತಿಗೆ ಸಮೇತ ಬಂದಿದ್ದಾರೆ. ಯಾವುದಕ್ಕೂ ಹುಷಾರಾಗಿರಿ!'' ಎಂದ.
ಅದನ್ನು ಕೇಳಿ ಅವರಿಗೆ ಚಳಿ ಜ್ವರ ಬಂತು. ತಕ್ಷಣ ಪ್ರಿನ್ಸಿಪಾಲರ ಚೇಂಬರ್ ಗೆ ಓಡಿಹೋದರು. ವಿಷಯ ತಿಳಿದ ಅವರು ಯಾರಿರಬಹುದು ಈ ಮಾರಿಮುತ್ತು ಅಂತ ಹುಡುಕುತ್ತಾ ಶಾಲೆ ಮುಂಭಾಗಕ್ಕೆ ಬಂದರು.
ಈಕೆಯನ್ನು ಕಂಡವರೇ, ``ದಯವಿಟ್ಟು ಶಾಂತರಾಗಿ ತಾಯಿ..... ಏನು ವಿಷಯ ಹೇಳಿ.....''
``ನಾನು ಶಾಂತವಾಗಿಯೇ ಇದ್ದೇನೆ. ಶಾಂತಮೂರ್ತಿಗಳ ಕ್ಲಾಸ್ ಹುಡುಕುತ್ತಿದ್ದೇನೆ, ಅಷ್ಟೆ!''
``ಅದೇ..... ಯಾಕೆ ಅಂತ?''
``ಅಂದ್ರೆ.... ಅಲ್ಲಿ ನನ್ನ ಮಗ ಕೂರುವ ಬೆಂಚಿನಲ್ಲಿ 1 ತಿಂಗಳಿನಿಂದ ಯಾವುದೋ ಮೊಳೆ ಎದ್ದುಬಿಟ್ಟಿದೆ, ಅದನ್ನು ಸರಿ ಮಾಡಬೇಕು. ಮೊನ್ನೆ ಮೂರನೇ ಪ್ಯಾಂಟು ಹರಿದುಕೊಂಡು ಬಂದಿದ್ದಾನೆ ಆ ಬಡವಾ!'' ಎಂದು ಶಾಂತವಾಗಿ ವಿವರಿಸಿದರು.
ಆಗ ಶಾಂತಮೂರ್ತಿಗಳು ನೆಮ್ಮದಿಯ ನಿಟ್ಟುಸಿರಿಟ್ಟು ಆ ತಾಯಿಯನ್ನು ತಮ್ಮ ಕ್ಲಾಸಿಗೆ ಕರೆದೊಯ್ದರು.
ಮಹೇಶ : ಜೋಕ್ ಮಾಡುವವರೆಲ್ಲ ಹೆಂಡತಿ ಬಲು ಶೋಷಣೆ ಮಾಡುತ್ತಾಳೆ ಅಂತ ಅವಳನ್ನು ವ್ಯಂಗ್ಯವಾಗಿ ಚಿತ್ರಿಸುತ್ತಾರೆ. ನೀನೇನೇ ಹೇಳು, ನನ್ನ ಹೆಂಡತಿ ಮಾತ್ರ ನನ್ನನ್ನು ಅಪಾರವಾಗಿ ಪ್ರೀತಿಸುತ್ತಾಳೆ, ಎಂದೂ ಕೋಪ ಮಾಡಿಕೊಳ್ಳೋಲ್ಲ.... ಗೊತ್ತಾ....?
ಸುರೇಶ : ಹೌದೇನು? ಹಾಗಾದರೆ ಆಕೆ ಮನೆ ಒರೆಸುತ್ತಿರುವಾಗ ಧಡಧಡ ಅಂತ ಅಲ್ಲಿಂದ ಇಲ್ಲಿಗೆ ಒಮ್ಮೆ ನಡೆದುಕೊಂಡು ಬಾ ನೋಡೋಣ....!
ಸಂದರ್ಶಕ : ಅಲ್ಲಯ್ಯ, ಈ ಇಂಡಸ್ಟ್ರಿ ಬಗ್ಗೆ ಹೆಚ್ಚಿಗೇನೂ ಗೊತ್ತಿಲ್ಲ ಅಂತೀಯ. ಆಗಿನಿಂದ ಕೇಳಿದ ಪ್ರಶ್ನೆಗಳಿಗೆಲ್ಲ ತಪ್ಪು ತಪ್ಪಾಗಿ ಉತ್ತರಿಸಿದ್ದೀಯ. ಮತ್ತೆ 4 ವರ್ಷದ ಅನುಭವ ಇದೆ ಅಂತ ಹೇಗಯ್ಯ ಬರೆದೆ?
ಅಭ್ಯರ್ಥಿ : ಓ.... ಅದಾ? ಅದು ನನ್ನ ಮಗ `ಅನುಭವ್,' ಅವನಿಗೆ 4 ವರ್ಷ ಅಂತ.
ಸಂದರ್ಶಕ : ತಾವಿನ್ನು ಹೊರಡಬಹುದು... ಬಾಗಿಲು ಆ ಕಡೆ ಇದೆ!
ಸಂಜೆ ಗುಂಡು ಪಾರ್ಟಿಯಲ್ಲಿ ಮೂವರು ಗೆಳೆಯರು ಮದುವೆ ಬಗ್ಗೆ ಚರ್ಚಿಸುತ್ತಿದ್ದರು.
ಗಿರೀಶ : ಮದುವೆಯ ಅರ್ಥ.... `ಎಲ್ಲಿಗೆ ಹೋಗಿದ್ರಿ'ಯಿಂದ ಹಿಡಿದು `ಎಲ್ಲಿಗೆ ಸಾಯಕ್ಕೆ ಹೋಗಿದ್ರಿ?' ವರೆಗೂ ಇದೆ.
ಸುರೇಶ : ಅಷ್ಟೇ ಅಲ್ಲ... `ಏನೂಂದ್ರೆ...'ಯಿಂದ ಹಿಡಿದು `ಇದೇನು ಕಿವಿ ಕೆಪ್ಪಾಯ್ತೆ?'ವರೆಗೂ!
ಮಹೇಶ : ಅಷ್ಟು ಮಾತ್ರ ಅಲ್ಲ, `ನೀನು ಸಿಕ್ಕಿದ್ದು ನನ್ನ ಅದೃಷ್ಟ,` ಹೋಗಿ `ಯಾವ ಪಾಪ ಮಾಡಿದ್ನೋ, ನಿನ್ನಂಥ ಕರ್ಮ ಗಂಟು ಬಿತ್ತು,' ಅನ್ನುವವರೆಗೆ!