ಸಾಮಾನ್ಯವಾಗಿ ಮದುವೆಯ ನಂತರ, ಹುಡುಗಿಗೆ ನಿನ್ನ ಕೆಲಸ ಬಿಟ್ಟುಬಿಡು, ಅಪ್ಪಟ ಗೃಹಿಣಿಯಾಗಿ ನಿನ್ನ ಅತ್ತೆಮನೆಯಲ್ಲಿ ಆದರ್ಶ ಸೊಸೆಯಾಗಿರು ಎಂದೇ ಹೇಳಲಾಗುತ್ತದೆ. ಹಾಗೆಂದರೆ ಅವಳು ತನ್ನೆಲ್ಲ ಆಸೆ, ಆಕಾಂಕ್ಷೆ, ಕನಸುಗಳನ್ನೂ ತ್ಯಾಗ ಮಾಡಬೇಕೇ…..?
ಮದುವೆಯ ನಂತರ ಪ್ರತಿ ಹುಡುಗಿಗೂ ಹೇಳುವ ಮಾತು ಎಂದರೆ, ಅವಳು ತಕ್ಷಣ ತನ್ನ ಕೆಲಸ ಬಿಟ್ಟು ಬಿಡಬೇಕು. ಮನೆಯಲ್ಲಿದ್ದುಕೊಂಡು ಗಂಡ, ಮನೆ, ಮಕ್ಕಳು ಎಂದು ಅಪ್ಪಟ ಗೃಹಿಣಿಯಾಗಿರುವ ಹೆಣ್ಣನ್ನೇ ಈ ಸಮಾಜ ಆದರ್ಶ ಸೊಸೆ ಎಂದು ನಂಬುತ್ತದೆ. ಖಂಡಿತಾ ಇದು ಸರಿಯಲ್ಲ! ಅಸಲಿಗೆ ಈ ಸಮಾಜ ಹೆಣ್ಣನ್ನು ಸದಾ 4 ಗೋಡೆಗಳ ಮಧ್ಯೆ ಬಂಧಿಸಿಡಬೇಕು ಎಂಬ ಷಡ್ಯಂತ್ರ ರಚಿಸಿ, ಹೀಗೆ ಮಾಡಿಟ್ಟಿದೆ. ಹೀಗಾಗಿ ಯಾವ ಸ್ವಾಭಿಮಾನಿ ಹೆಣ್ಣೇ ಆದರೂ, ತಾನು ಮಾಡುತ್ತಿರುವ ನೌಕರಿ ಬಿಟ್ಟು, 4 ಗೋಡೆಗಳ ಮಧ್ಯೆ ಮಾಡಿದ್ದನ್ನೇ ಮಾಡುತ್ತಾ ಕೂರುವ ಬದಲು, ಪ್ರಗತಿಪರ ಧೋರಣೆಯಿಂದ ಸ್ವತಂತ್ರ ವಿಚಾರವಾದಿಯಾಗಿ ಮುನ್ನೇರುವುದೇ ಸರಿ.
ನಮ್ಮ ಸಮಾಜ ಮದುವೆ ನಂತರ ಹೆಣ್ಣನ್ನು ಸದಾ ಮನೆಗೆಲಸಗಳಿಗಷ್ಟೇ ಸೀಮಿತ ಎಂದು ಕಟ್ಟಿ ಹಾಕಲು ಯತ್ನಿಸುತ್ತದೆ. ನಮ್ಮ ಧಾರ್ಮಿಕ ಪರಂಪರೆ, ಸಂಸ್ಕೃತಿಯ ಹಣೆಪಟ್ಟಿಯೂ ಇದನ್ನೇ ಧ್ವನಿಸುತ್ತದೆ. ಹೆಣ್ಣು ಹೊರಗೆ ಹೋಗಿ ತನ್ನ ಹಕ್ಕುಗಳ ಬಗ್ಗೆ ಎಲ್ಲಾ ವಿವರ ತಿಳಿದುಕೊಂಡುಬಿಟ್ಟರೆ ಎಂದು ಸಮಾಜಕ್ಕೆ ಭಯ! ಅನಾದಿ ಕಾಲದಿಂದಲೂ ನಡೆದು ಬರುತ್ತಿರುವ ಈ ಅನೂಚಾನ ಪದ್ಧತಿಗಳನ್ನು ಧಿಕ್ಕರಿಸಿದರೆ ಎಂದರೆ ಅದಕ್ಕೆ ಅಳುಕು. ಒಂದಲ್ಲ ಒಂದು ವಿಧದಲ್ಲಿ ಈ ಬಹುಮುಖೀ ಸಮಾಜ ಹೆಣ್ಣನ್ನು ಶೋಷಿಸುತ್ತಲೇ ಬಂದಿದೆ. ಹೀಗಾಗಿ ಇಂದಿನ ಕ್ರಾಂತಿಕಾರಿ ಆಧುನಿಕ ಹೆಣ್ಣು ಇಂಥ ಶೋಷಣೆಗಳ ವಿರುದ್ಧ ಸಿಡಿದೆದ್ದು ನಿಲ್ಲಬೇಕು.
ಈ ನಿಟ್ಟಿನಲ್ಲಿ ಮೊದಲ ಶೋಷಣೆ ಎಂದರೆ ಮದುವೆಯ ನಂತರ ಹೆಣ್ಣನ್ನು ಕೆಲಸಕ್ಕೆ ಹೋಗದಂತೆ ಕಟ್ಟಿಹಾಕುವುದು. ವಿವಾಹಿತ ಹೆಣ್ಣು ಸದಾ ತನ್ನ ಭವಿಷ್ಯದ ಬಗ್ಗೆ ಯೋಚಿಸಬೇಕು. ನೌಕರಿ ಎಂಬುದು ಈ ತುಟ್ಟಿಯ ಕಾಲದಲ್ಲಿ ಎಷ್ಟು ಮುಖ್ಯ ಎಂಬುದನ್ನು ಅವಳು ಸದಾ ಗುರುತಿಸಬೇಕು. ಇದು ಮನೆಯಿಂದ ಹೊರಗೆ ಹೋಗಿ, ಹೊರ ಪ್ರಪಂಚವನ್ನು ಅರಿಯಲು ಅವಳಿಗೆ ಒಂದು ಸದವಕಾಶ ಮಾತ್ರವಲ್ಲದೆ, ಅದು ಅವಳನ್ನು ಹೆಚ್ಚು ಸ್ವಾವಲಂಬಿಯನ್ನಾಗಿಯೂ ರೂಪಿಸುತ್ತದೆ. ಇಲ್ಲಿ ಅವಳು ತನ್ನ ಯೋಗ್ಯತೆಯ ಬಗ್ಗೆ ತಿಳಿದಿರಬೇಕು. ಇಷ್ಟು ವರ್ಷಗಳ ಕಾಲ ತಾನು ತವರಿನಲ್ಲಿ ಕಲಿತ ಓದು, ಏತಕ್ಕೂ ಪ್ರಯೋಜನಕ್ಕೆ ಬಾರದಂತೆ ಹೋಗಲು ಅವಳು ಬಿಡಬಾರದು. ಅದರ ಸದುಪಯೋಗವಾಗಿ ಅವಳು ಹಣ ಗಳಿಸುವಂತಾಗಬೇಕು, ಅವಳಿಂದ ಸಮಾಜಕ್ಕೂ ಏನಾದರೂ ಉಪಕಾರ ಆಗಬೇಕು.
ಮೂಲ ಕಾರಣವೇನು?
ಈ ಸಮಾಜ ಮೊದಲಿನಿಂದಲೂ ಹೆಣ್ಣು ಮನೆಗಷ್ಟೇ ಸೀಮಿತಳಾಗಿರಲಿ ಎಂದು ಬಯಸುತ್ತದೆ. ಹೀಗಾಗಿಯೇ ಅಡುಗೆಮನೆಗಳು ಬಲು ಇಕ್ಕಟ್ಟಾಗಿರುವಂತೆ ರೂಪಿಸಿ, ಅಲ್ಲಿ ಒಬ್ಬೊಬ್ಬ ಹೆಂಗಸರು ಇತರ ಸಾಮಗ್ರಿ ಹರಡಿಕೊಂಡು, ಸದಾ ಅಲ್ಲೇ ಕೆಲಸ ಮಾಡುತ್ತಾ ಕೂರುವಂತೆ ಮಾಡಿಟ್ಟಿದೆ. ಇಂದಿನ ಆಧುನಿಕ ವಿದ್ಯಾವಂತೆಯರು ಸಮಾಜದ ಈ ಅನಧಿಕೃತ ಕಾನೂನನ್ನು ಮುರಿದು ಮುನ್ನಗ್ಗಬೇಕು. ಕೇವಲ ಅಡುಗೆಮನೆ ಅಷ್ಟೇ ಅವಳ ಪ್ರಪಂಚವಲ್ಲ ಎಂಬುದನ್ನು ಸಮಾಜ ಗುರುತಿಸುವಂತಾಗಬೇಕು. ಹೀಗಾಗಿಯೇ ಓಪನ್ ಕಿಚನ್ ಕಾನ್ಸೆಪ್ಸ್ ದಿನೇ ದಿನೇ ಹೆಚ್ಚು ಜನಪ್ರಿಯ ಆಗುತ್ತಿದೆ. ಇಲ್ಲಿ ಇಬ್ಬರು ಮಾತ್ರವಲ್ಲದೆ, ಹಲವರು ಕೆಲಸ ಮಾಡಲು ಅನುಕೂಲ ಆಗುವಂತೆ ಸುಧಾರಣೆ ಆಗಬೇಕಿದೆ.
ಹುಡುಗಿ ತವರಿನಲ್ಲಿದ್ದಷ್ಟು ದಿನ ಹಾಯಾಗಿ ಜಾಬ್ ಮುಂದುವರಿಸುತ್ತಾಳೆ. ಹಾಗಿರುವಾಗ ಮದುವೆ ಆದಮೇಲೆ ಅವಳೇಕೆ ತನ್ನ ಜಾಬ್ ತೊರೆಯಬೇಕು? ಇದಕ್ಕೆ ಕಾರಣ ಅವಳ ಪತಿ ಅಥವಾ ಅತ್ತೆ ಮನೆಯವರು ಅವಳು ಹೊರಗೆ ಹೋಗಿ ದುಡಿಯುವುದನ್ನು ಬಯಸುವುದಿಲ್ಲ, ಅವಳು ಸಂಪಾದಿಸುವುದನ್ನು ಪ್ರೋತ್ಸಾಹಿಸುವುದಿಲ್ಲ. ಮತ್ತೊಂದು ಮುಖ್ಯ ಕಾರಣ ಎಂದರೆ ಮದುವೆಯಾದ 1-2 ವರ್ಷಗಳಲ್ಲೇ ಬೇಗ ಬೇಗ ಮಗು ಆಗಿಬಿಡುವುದು. ಆ ಎಳೆ ಕೂಸನ್ನು ನೋಡಿಕೊಳ್ಳಲು ಅನಿವಾರ್ಯವಾಗಿ ಅವಳು ಮನೆಯಲ್ಲಿ ಉಳಿಯಲೇ ಬೇಕಾಗುತ್ತದೆ. ಪ್ರೆಗ್ನೆನ್ಸಿಯ ಕೊನೆ 4-5 ತಿಂಗಳು, ನಂತರ ಮಗುವಿಗೆ ಕನಿಷ್ಠ 2-3 ವರ್ಷ ಆಗುವವರೆಗೂ ಅವಳು ಜಾಬ್ ಮಾಡಲು ಆಗುವುದೇ ಇಲ್ಲ.
ಹೀಗಾಗಿ ಅವಳು ಆ ಎಳೆ ಮಗುವಿನ ಪ್ರೀತಿ ವಾತ್ಸಲ್ಯಕ್ಕೆ ಹಾಗೇ ಕಟ್ಟುಬೀಳುತ್ತಾಳೆ. ಆದ್ದರಿಂದ ಮದುವೆಗೆ ಮೊದಲೇ ಹೆಣ್ಣುಮಕ್ಕಳು ಭಾವಿ ಪತಿ ಜೊತೆ ಫ್ಯಾಮಿಲಿ ಪ್ಲಾನಿಂಗ್ ಕುರಿತು ವಿವರವಾಗಿ ಮಾತನಾಡಲು ಹಿಂಜರಿಯಬಾರದು. ಆತನಿಗೆ ತಾನು ಮದುವೆ ನಂತರ, ಖಂಡಿತಾ ಜಾಬ್ ಮುಂದುವರಿಸುವುದಾಗಿ ಖಚಿತಪಡಿಸಬೇಕು.
ಮನೆಯವರೊಂದಿಗೆ ಮುಕ್ತ ಮಾತುಕಥೆ
ಎಷ್ಟೋ ಹೆಣ್ಣುಮಕ್ಕಳು ಮದುವೆ ಫಿಕ್ಸ್ ಆದ ತಕ್ಷಣ ತಮ್ಮೆಲ್ಲ ಆಸೆ ಆಕಾಂಕ್ಷೆಗಳನ್ನೂ ಮೂಲೆಗೊತ್ತರಿಸಿ, ಗಂಡನ ಮನೆಯಲ್ಲಿ ಹೊಸ ಸಂಸಾರಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ. ಅವರು ತಮ್ಮ ಉನ್ನತ ಕೆರಿಯರ್ ಕಡೆಗೂ ಗಮನ ಹರಿಸುವುದಿಲ್ಲ. ಆದ್ದರಿಂದ ಹೆಣ್ಣುಮಕ್ಕಳು ತಾವು ಈಗಲೇ ಮದುವೆಯಾಗಬೇಕೇ, ಕೆರಿಯರ್ ಉತ್ತಮಗೊಂಡ ನಂತರವೇ ಎಂದು ವಿಚಾರಿಸಿ, ಉತ್ತಮ ನಿರ್ಣಯ ಕೈಗೊಳ್ಳಬೇಕು. ನಿಮ್ಮ ಜೀವನ ಸಂಗಾತಿ, ನಿಮ್ಮ ಮುಂದಿನ ಕೆರಿಯರ್ ಗೆ ಸಪೋರ್ಟಿವ್ ಆಗಿರುವಂತೆ ಆರಿಸಿಕೊಳ್ಳಿ.
ಯಾವ ಹುಡುಗಿಯರು ಕೆರಿಯರ್ ಓರಿಯೆಂಟೆಡ್ ಆಗಿರುತ್ತಾರೋ, ಮದುವೆ ನಂತರ ಜಾಬ್ ಬಿಡಲು ಇಚ್ಛಿಸುವುದಿಲ್ಲವೋ, ಅಂಥವರು ಈ ಬಗ್ಗೆ ತಮ್ಮ ಮನೆಯವರು, ಭಾವಿ ಪತಿ ಬಳಿ ಈ ವಿಷಯವನ್ನು ಕೂಲಂಕಷವಾಗಿ ಮಾತನಾಡಬೇಕು. ಇವರೆಲ್ಲರ ಉತ್ತರ ತಿಳಿದ ನಂತರವೇ ಹುಡುಗಿ ಸರಿಯಾದ ನಿರ್ಣಯ ಕೈಗೊಳ್ಳಬೇಕು.
ಹುಡುಗಿ ತನ್ನ ಭಾವಿ ಪತಿ ಬಳಿ, ತನ್ನ ಕೆರಿಯರ್ ಗಾಗಿ ಆತ ಯಾವ ರೀತಿ ಸಪೋರ್ಟ್ ಮಾಡುತ್ತಾನೆಂದು ಕೇಳಿ ತಿಳಿಯಬಹುದು. ಕೌಟುಂಬಿಕ ಕೆಲಸಗಳಲ್ಲಿ, ಜವಾಬ್ದಾರಿ ಹೊರುವಲ್ಲಿ ಆತ ಸಹಾಯ ಮಾಡುತ್ತಾನಾ? ಮಕ್ಕಳಾದ ಮೇಲೆ ಅವರನ್ನು ನೋಡಿಕೊಳ್ಳಲು ಸಹಾಯ, ನಂತರದ ತನ್ನ ಕೆರಿಯರ್ ನ್ನು ಗಂಭೀರವಾಗಿ ಸ್ವೀಕರಿಸುವನೇ? ಅತ್ತೆ ಮನೆಯವರು ಕೆಲಸ ಬಿಡು ಎಂದು ಒತ್ತಾಯಿಸಿದರೆ ಅವರನ್ನು ಎದುರಿಸಲು ಸಿದ್ಧವೇ? ಇಂಥದ್ದೇ ಹಲವಾರು ಪ್ರಶ್ನೆಗಳಿಂದ ಖಚಿತಪಡಿಸಿಕೊಂಡು, ಹೆಣ್ಣು ನಂತರವೇ ಮದುವೆಗೆ ಸಿದ್ಧಳಾಗಬೇಕು.
ವಿವಾಹಿತ ಮಹಿಳೆ/ಸಮಯ ಪರಿಪಾಲನೆ
ವಿವಾಹಿತ ಮಹಿಳೆ ಮನೆ ನಿರ್ವಹಣೆ ಹಾಗೂ ಆಫೀಸ್ ನಿರ್ವಹಣೆಯಲ್ಲಿ ಸಮಯದ ಪರಿಪಾಲನೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕು. ಮಾರನೇ ದಿನದ ತಿಂಡಿ/ಅಡುಗೆಯ ಪೂರ್ವ ತಯಾರಿಯನ್ನು ಹಿಂದಿನ ರಾತ್ರಿಯೇ ಮಾಡಿಟ್ಟುಕೊಳ್ಳಬೇಕು. ತರಕಾರಿ ಹೆಚ್ಚಿಟ್ಟುಕೊಳ್ಳುವುದು, ರಾತ್ರಿಯೇ ಬೇಕಾದ ಡ್ರೆಸ್ ಇಸ್ತ್ರೀ ಮಾಡಿಡುವುದು, ಹ್ಯಾಂಡ್ ಬ್ಯಾಗ್ ರೆಡಿ ಮಾಡಿಕೊಳ್ಳುವುದು…. ಈ ರೀತಿ ಎಲ್ಲಾ ಮೊದಲೇ ಪ್ಲಾನ್ ಮಾಡಿ ಉದ್ಯೋಗಸ್ಥ ವನಿತೆಯರು ಸಮಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕು. ಬೆಂಗಳೂರಿನ 28 ವರ್ಷದ ಅನುಪ್ರಭಾ ಹೇಳುತ್ತಾರೆ, ಮದುವೆಯಾಗಿ 2 ವರ್ಷ ಆಯ್ತು. ಆರಂಭದಲ್ಲಿ ಜಾಬ್ ಮಾಡಲು ಬಹಳ ಕಷ್ಟಗಳು ಎದುರಾಯ್ತು. ನಂತರ ಅನಿವಾರ್ಯ ಎನಿಸಿ ಕೆಲಸದವಳನ್ನು ನಿಯಮಿಸಿಕೊಂಡಿದ್ದಾಯಿತು. ಈಗ ಆಕೆ ಮನೆ ಆಫೀಸಿನ ಕೆಲಸಗಳನ್ನು ಸುಲಭವಾಗಿ ನಿಭಾಯಿಸುವಂತಾಗಿದೆ. ತನ್ನ ಸಂಬಳದ 40% ಭಾಗ ಇತರ ಖರ್ಚುಗಳಿಗೆ ಹೋದರೂ, ಜಾಬ್‌ಮಾತ್ರ ಬಿಡಲಾರೆ ಎಂದು ದೃಢ ಮನಸ್ಸಿನಿಂದ ಹೇಳುತ್ತಾಳೆ. ಕೆಲಸಕ್ಕೆ ಸೇರಿದ ಪ್ರತಿ ಹೆಣ್ಣೂ, ಅದನ್ನು ಉಳಿಸಿಕೊಳ್ಳಬೇಕು, ಮದುವೆ ಆಯ್ತು ಎಂದು ಬಿಟ್ಟುಬಾರದು. ಉದ್ಯೋಗಸ್ಥ ವನಿತೆಯರು ಆಫೀಸಿನ ಹಾಗೂ ಮನೆಗೆಲಸಗಳ ಎರಡರ ಜವಾಬ್ದಾರಿಯನ್ನು ಸಮಾನವಾಗಿ ಹೊರಬೇಕಾಗುತ್ತದೆ. ಹೀಗಾಗಿ ತನ್ನ ಕೆಲಸವನ್ನು ಆಕೆ ಸಣ್ಣ ಸಣ್ಣ ಭಾಗಗಳಾಗಿ ವಿಂಗಡಿಸಿಕೊಳ್ಳಬೇಕು. ಮನೆಯ ಸದಸ್ಯರೆಲ್ಲರೂ ಆಕೆಯ ಅವಶ್ಯಕತೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಜೊತೆಗೆ ಅವರು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಬೇಕು. ತಂತಮ್ಮ ಜೇಬುಗಳನ್ನು ಚೆಕ್ ಮಾಡಿಕೊಂಡ ನಂತರ, ಒಗೆಯುವ ಬಟ್ಟೆಗಳನ್ನು ವಾಶಿಂಗ್ ಮಿಷಿನ್ನಿಗೆ ಹಾಕಬೇಕು, ಊಟತಿಂಡಿ ಆದಮೇಲೆ ತಂತಮ್ಮ ತಟ್ಟೆಲೋಟ ತಾನೇ ತೊಳೆಯಬೇಕು, ಹಾಸಿಗೆ ಸರಿಪಡಿಸುವುದು, ಬಟ್ಟೆ ಮಡಿಸಿಡುವುದು, ಅಡುಗೆಮನೆಯ ಸಣ್ಣಪುಟ್ಟ ಕೆಲಸ, ಗಿಡಗಳಿಗೆ ನೀರು ಹನಿಸುವುದು ಇತ್ಯಾದಿಗಳನ್ನು ಮನೆಯವರೆಲ್ಲರೂ ಸೇರಿ ಮಾಡಿಕೊಳ್ಳಬೇಕು.
ಮನೆಯಲ್ಲಿನ ಗಂಡಸರು ಸಹ ಇದು ಕೇವಲ ಹೆಂಗಸರ ಕೆಲಸ, ಇದನ್ನು ತಾವು ಮಾಡಿದರೆ ಘನತೆಗೆ ಕುಂದು ಎಂದೆಲ್ಲ ಖಂಡಿತಾ ಭಾವಿಸಬಾರದು. ಉದ್ಯೋಗಸ್ಥ ವನಿತೆಗಾಗಿ ಆಕೆ ಮನೆ ಆಫೀಸು ಸಮರ್ಥವಾಗಿ ನಿಭಾಯಿಸಬೇಕಾದರೆ, ತಾವು ಎಲ್ಲರೂ ಸಹಕರಿಸಬೇಕು ಎಂಬುದನ್ನು ತಿಳಿದಿರಬೇಕು. ಗಂಡನಿಗೆ ಅಡುಗೆ ಮಾಡಲು ಗೊತ್ತಿದ್ದರೆ ನಡುನಡುವೆ ತಾವೇ ಅಡುಗೆ ಮಾಡಿ, ಪತ್ನಿಯ ಹೆಚ್ಚುವರಿ ಕೆಲಸಗಳಿಗೆ ನೆರವಾಗಬೇಕು. ಮನೆಯಲ್ಲಿನ ಎಲ್ಲಾ ಸದಸ್ಯರೂ ಹೀಗೆ ಒಮ್ಮತದಿಂದ ಕೈ ಜೋಡಿಸಿದರೆ ಮಾತ್ರ, ಉದ್ಯೋಗಸ್ಥ ವನಿತೆ ಎರಡೂ ಕಡೆ ಯಶಸ್ವಿ ಎನಿಸಲು ಸಾಧ್ಯ.
ಧರ್ಮ ಬಯಸುವುದೇನು?
ಎಲ್ಲ ಧರ್ಮಗಳೂ ಹೇಳುವುದೆಂದರೆ ಹೆಣ್ಣು ದುರ್ಬಲಳೇ ಆಗಿರಬೇಕು. ಇದಕ್ಕಾಗಿ ಧರ್ಮದ ವಕ್ತಾರರು ಬಗೆಬಗೆಯ ತಂತ್ರಗಳನ್ನು ಬಳಸಿ ಅವಳನ್ನು ಕಟ್ಟಿಹಾಕಲು ಯತ್ನಿಸುತ್ತಾರೆ. ಪೂಜೆ ಪುನಸ್ಕಾರಗಳಿಂದ ಮನೆಯಲ್ಲಿ ಶಾಂತಿ, ಸೌಹಾರ್ದತೆ ನೆಲೆಸುತ್ತದೆ, ಮಕ್ಕಳಾಗುತ್ತವೆ, ಅವಿವಾಹಿತ ಹುಡುಗಿಗೆ ಬೇಗ ವರ ಸಿಗುತ್ತಾನೆ, ರೋಗಿಗಳು ಬೇಗ ಗುಣಮುಖರಾಗುತ್ತಾರೆ. ಇವೆಲ್ಲದಕ್ಕೂ ಗಂಡಸರು ತಮ್ಮ ಸಮಯ ನೀಡುವುದು ಬಲು ಕಡಿಮೆ. ಹೀಗಾಗಿ ಹೆಂಗಸರೇ ಇದರಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕೆಂದು ಒತ್ತಡ ಹೇರಲಾಗುತ್ತದೆ. ಉದ್ಯೋಗಸ್ಥ ವನಿತೆಯರು ಇದರ ಹಿನ್ನೆಲೆ ಅರ್ಥ ಮಾಡಿಕೊಂಡು, ಧರ್ಮದ ಗೊಡವೆಗೆ ಹೋಗದೆ, ತಮ್ಮ ಪಾಡಿಗೆ ತಮ್ಮ ಕೆರಿಯರ್ ನತ್ತ ಗಮನ ಹರಿಸಬೇಕು.
ತೀರ್ಥಯಾತ್ರೆ ಬಿಟ್ಟು ಜಾಲಿ ಟ್ರಿಪ್ ಮಾಡಿ. ಅಲ್ಲಿ ಧಾರಾಳ ಪುರಸತ್ತು ಇರಬೇಕು, ಅಲ್ಲಿನ ಕಾರ್ಯಕ್ರಮ ನಿಮ್ಮ ಅನುಸಾರ ಇರಬೇಕು, ಎಲ್ಲ ಯಾಂತ್ರಿಕವಾಗಿ ಇನ್ನೊಬ್ಬರು ಕಂಟ್ರೋಲೇ ಮಾಡುವಂತೆ ಇರಬಾರದು. ದೇವಸ್ಥಾನಗಳ ದೊಡ್ಡ ಸಾಲುಗಳಲ್ಲಿ ನಿಂತು ಸಮಯ ಹಾಳು ಮಾಡಿಕೊಳ್ಳಬೇಡಿ, ಸಾಗರ ತೀರ, ಫಾರೆಸ್ಟ್ ರೆಸಾರ್ಟ್…. ಈ ತರಹದ ರೋಮಾಂಚಕ ಅನುಭವ ಪಡೆಯಿರಿ.
ಪೂಜೆ ಪುನಸ್ಕಾರಗಳ ಹೆಸರಿನಲ್ಲಿ ಕಣ್ಣು ಮುಚ್ಚಿ ಗಂಟೆಗಟ್ಟಲೇ ಉಪವಾಸ ಕೂರುವ ಬದಲು, ನಿಮ್ಮದೇ ಆದ ಸಣ್ಣಪುಟ್ಟ ಗೃಹ ಉದ್ಯಮಗಳಲ್ಲಿ ತೊಡಗಿಕೊಳ್ಳಿ. ಗಿಡ ಬೆಳೆಸಿ, ಹವ್ಯಾಸ ರೂಢಿಸಿ, ಪುಸ್ತಕ ಓದು ಸದಭಿರುಚಿ ಬೆಳೆಸಿಕೊಳ್ಳಿ.
ಒಂದು ಸಮೀಕ್ಷೆ ಪ್ರಕಾರ, ಸಣ್ಣ ಮಗುವಿಗೆ ತಾಯಿಯ ಸಾಮೀಪ್ಯ ಕೇವಲ 3 ವರ್ಷ ತುಂಬುವವರೆಗೂ ಸಾಕು ಎಂದಿದೆ. ಮುಂದೆ ಮಗು ಬೆಳೆದಂತೆಲ್ಲ, ಅದರ ಒಂದೊಂದು ಹೆಜ್ಜೆಯನ್ನೂ ಗಮನಿಸುತ್ತಾ ಕೂರುವ ಅಗತ್ಯವಿಲ್ಲ. ತೀರಾ ಅನಿವಾರ್ಯವಾದರೆ, ಮನೆಯಲ್ಲಿ ಮಗುವನ್ನು ನೋಡಿಕೊಳ್ಳುವವರು ಇಲ್ಲದಿದ್ದರೆ, ಮಗುವನ್ನು ಬೇಬಿ ಕೇರ್ ಸೆಂಟರ್ ಗೆ ಸೇರಿಸಿ ಮಹಿಳೆ ತನ್ನ ಜಾಬ್ ಮುಂದುವರಿಸಬಹುದು.
ಇಂಥವರು ತಮ್ಮ ಸಂಬಳವೆಲ್ಲ ಮನೆಗೆಲಸದವಳು, ಬೇಬಿ ಸೆಂಟರ್ ಗೆ ಹೋಗಿಬಿಡುತ್ತದೆ ಎಂದು ಯೋಚಿಸಬಾರದು. ತಮ್ಮ ಕೆಲಸ ಮುಂದುರಿಸುವುದು ಮಾತ್ರ ಮುಖ್ಯ ಎಂಬುದರತ್ತ ಗಮನಕೊಡಬೇಕು. ಈ ಒಂದು ನೆಪದಿಂದಲೇ ಆಕೆ ಬಾಹ್ಯ ಪ್ರಪಂಚಕ್ಕೆ ಸಂಪರ್ಕ ಕಲ್ಪಿಸಿಕೊಳ್ಳಲು ಸಾಧ್ಯ. ಆಗ ಮಾತ್ರ ಗಂಡಸರಿಗೆ ಸರಿಸಮಾನವಾಗಿ ದುಡಿದು ತನ್ನ ನಿಲುವು ಸ್ಥಾಪಿಸಲು ಸಾಧ್ಯ.
ಡಾ. ಮೇಘಾ ವಿವಾಹಿತೆ, 2 ಮಕ್ಕಳ ತಾಯಿ. ಮಕ್ಕಳನ್ನು ಮನೆಯಲ್ಲೇ ಬಿಟ್ಟು ಕ್ಲಿನಿಕ್ ನಿರ್ವಹಣೆ ಮಾಡುವುದು ಆಕೆಗೆ ಬಲು ಕಷ್ಟವಾಗುತ್ತಿತ್ತು. ಹೀಗಾಗಿ ತನ್ನ ನೌಕರಿ ಬಿಡೋಣ ಎಂದೇ ನಿರ್ಧರಿಸಿದ್ದಳು. ಆಗ ಅವಳ ಒಬ್ಬ ಗೆಳತಿ, ಮನೆಯಲ್ಲೇ ಒಬ್ಬ ಬೇಬಿ ಕೇರ್ ಟೇಕರ್ ನ್ನು ಅಪಾಯಿಂಟ್ ಮಾಡಿಕೊಳ್ಳಲು ಹೇಳಿದಳು. ಮೇಘಾ ಹಾಗೆಯೇ ಮಾಡಿ, ತನ್ನ ಕ್ಲಿನಿಕ್‌ರೋಗಿಗಳತ್ತ ಗಮನ ವಹಿಸಿದಳು.
ಬದಲಾದ ಕಾಲಘಟ್ಟ
ಇಂಥದೇ ಮತ್ತೊಂದು ಕಥೆಯನ್ನು ಮುಂಬೈನ ನೀತಾ ಹೇಳುತ್ತಾಳೆ. ಆಕೆ ಒಂದು ಖಾಸಗಿ ನ್ಯೂಸ್ ಚಾನೆಲ್ ನಲ್ಲಿ ಕೆಲಸದಲ್ಲಿದ್ದಾಳೆ. ತನಗೆ ಮಗುವಾದ ನಂತರ ತಾನು ಈ ಕೆಲಸ ಮುಂದುವರಿಸಲು ಸಾಧ್ಯವೇ ಎಂದು ಅವಳಿಗೆ ಡೌಟ್ ಇತ್ತು. ಹೀಗಾಗಿ ಮನೆಗೆಲಸದವಳು, ಮಗುವನ್ನು ನೋಡಿಕೊಳ್ಳುವ ಆಯಾ ನೆರವಿನಿಂದ, ಅವಳು ಸಲೀಸಾಗಿ ತನ್ನ ಕೆಲಸ ಮುಂದುವರಿಸಲು ಸಾಧ್ಯವಾಯಿತು. ಆಕೆ ಪ್ರಕಾರ, ಹೆಂಗಸರು ಎಂದೂ ತಮ್ಮ ಕಾಲ ಮೇಲೆ ತಾವು ನಿಲ್ಲುವುದನ್ನು ಕಲಿತಿರಬೇಕು, ಇದಕ್ಕಾಗಿ ಖಂಡಿತಾ ಅವರು ಮದುವೆ ನಂತರ ಜಾಬ್ ಬಿಡಬಾರದು.
ಉದ್ಯೋಗಸ್ಥ ವನಿತೆಯರಿಗೆ ಕೆಲಸ ಮುಂದುವರಿಸಿಕೊಂಡು, ಮನೆಯಲ್ಲಿ ಸಣ್ಣ ಮಗು, ಮನೆಯ ಸಂಪೂರ್ಣ ಜವಾಬ್ದಾರಿ ನಿರ್ವಹಿಸುವುದು ಸುಲಭದ ಮಾತಲ್ಲ. ಆದರೆ ಇಂದಿನ ಆಧುನಿಕ ಪೀಳಿಗೆಯ ತಾಯಂದಿರು ಇದನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ತೋರಿಸಿದ್ದಾರೆ. ಆಕೆ ಮದುವೆಗೆ ಮೊದಲೇ ಭಾವಿ ಪತಿಯೊಡನೆ, ಮನೆಮಗು ನಿರ್ವಹಣೆ ಕೇವಲ ಹೆಣ್ಣೊಬ್ಬಳ ಕೆಲಸವಲ್ಲ, ಅವನು ಎಲ್ಲದರಲ್ಲೂ ತನ್ನ ಸಹಾಯ ನೀಡಬೇಕಾದೀತು ಎಂದು ಒಪ್ಪಿಸಬೇಕು.
ಜಾಬ್ ನಲ್ಲಿ ಇರುವ ಇಂಥ ಮಹಿಳೆಯರು, ಸರಿಯಾಗಿ ಮನೆಯ ನಿರ್ವಹಣೆ ಮಾಡಲಾರರು ಎಂದು ಟೀಕಿಸುವ ಸಮಾಜಕ್ಕೆ, ಇಂದಿನ ಆಧುನಿಕ ಉದ್ಯೋಗಸ್ಥ ವನಿತೆಯರು ಸರಿಯಾಗಿ ಜವಾಬು ಕೊಟ್ಟಿರುತ್ತಾರೆ. ಶುಗರ್ ಕಾಸ್ಮೆಟಿಕ್ಸ್ ನ ಕೋಫೌಂಡರ್‌ವಿನೀತ ಅಗರ್ವಾಲ್ ಹಾಗೂ ಮಮಾ ಅರ್ಥ್ ನ ಓನರ್ ಗಝಲ್ ಅಲಘ್ ಇದಕ್ಕೆ ನೇರ ಉದಾ. ಅದೇ ಮೀಡಿಯಾ ಇಂಡಿಸ್ಟ್ರಿಯತ್ತ ನೋಡಿದರೆ, ಅಲ್ಲಿನ ಉಚ್ಚ ಅಧಿಕಾರಿಗಳಾದ ಹೆಂಗಸರು, ಉದಾ : ಅಂಜನಾ ಓಂಕಶ್ಯಪ್ ಸಹ ವಿವಾಹಿತೆ, ಆದರೂ ಅಂಥ ನುರಿತ ಜವಾಬ್ದಾರಿ ನಿಭಾಯಿಸುತ್ತಾ ಆಕೆ ಮನೆಯಲ್ಲೂ ಸೈ ಎನಿಸಿದ್ದಾಳೆ.
ಭಾರತದ ಹಲವಾರು ರಾಜ್ಯಗಳ ಪ್ರಮುಖ ನಗರಗಳಲ್ಲಿ ಹೆಂಗಸರು ಎಷ್ಟೋ ಫುಡ್ ಸ್ಟಾಲ್ ಸ್ಥಾಪಿಸಿ ಸ್ವಾವಲಂಬಿಗಳಾಗಿದ್ದಾರೆ. ಅವರು ತಮ್ಮ ಖರ್ಚು ತಾವೇ ನೋಡಿಕೊಳ್ಳುವುದಲ್ಲದೇ, ತಮ್ಮ ಪರಿವಾರದ ಅವಶ್ಯಕತೆಗಳನ್ನೂ ಪೂರೈಸುತ್ತಿದ್ದಾರೆ.
ದೆಹಲಿಯಲ್ಲಿ ಒಂದು ಸ್ಟಾಲ್ ಚಲಾಯಿಸುವ ರೇಖಾ, ಮೋಮೋಸ್ ಒದಗಿಸುವುದರಲ್ಲಿ ಫೇಮಸ್. ಈಕೆ ತರಹವೇ ಹಲವು ಪ್ರಮುಖ ಬೀದಿಗಳಲ್ಲಿ ಮಹಿಳೆಯರು ಜೂಸ್, ಲಸ್ಸಿ, ಬಜ್ಜಿವಡೆ, ಸವೋಸಾ, ಲಸ್ಸಿ ಇತ್ಯಾದಿಗಳ ಸ್ಟಾಲ್ ನಿರ್ವಹಿಸುತ್ತಾರೆ. ಇಂಥ ಮಹಿಳೆಯರು ನಿರುದ್ಯೋಗಿಗಳಿಗೆ ಎಷ್ಟೋ ಪ್ರೇರಣಾದಾಯಕರು. ಮದುವೆ ನಂತರ ಮನೆಯಷ್ಟೇ ನೋಡಿಕೊಂಡರೆ ಸಾಕು ಎನ್ನುವ ಸಹಸ್ರಾರು ಗೃಹಿಣಿಯರಿಗೆ ಇಂಥವರು ಸ್ವಾವಲಂಬಿ ಜೀವನ ನಡೆಸಲು ಮಾದರಿಯಾಗಿದ್ದಾರೆ.
ಹಾಗೆಯೇ ವಿವಾಹಿತಿಯರು ಪಾರ್ಟ್ ಟೈಂ ಜಾಬ್ ಆಗಿ ಸ್ವೀಕರಿಸುವಂಥ ಸಾವಿರಾರು ಉದಾಹರಣೆಗಳಿವೆ. ಇಂಥ ಕೆಲಸಗಳು 4-5 ಗಂಟೆಗಳದಾಗಿದ್ದು, ದಿನದ ಉಳಿದ ಭಾಗವನ್ನು ಹೆಂಗಸರು ತಮ್ಮ ಮನೆಗಾಗಿಯೇ ಮೀಸಲಿಡಬಹುದು. ರೈಟಿಂಗ್, ಪ್ರೂಫ್ ರೀಡಿಂಗ್, ಎಡಿಟಿಂಗ್, ಟೈಪಿಂಗ್, ಟ್ಯೂಷನ್ಸ್ ಇತ್ಯಾದಿ ಏನೇ ಇರಬಹುದು. ಇಂಥ ಪಾರ್ಟ್ ಟೈಂ ಕೆಲಸಗಳಿಗೆ ಸಂಬಂಧಿಸಿದ ಸಾಧನ ಸಲಕರಣೆಗಳನ್ನು ಮನೆಯಲ್ಲೇ ಇಟ್ಟುಕೊಂಡು ಸುಲಭವಾಗಿ ನಿಭಾಯಿಸಬಹುದು. ಒಂದು ಸಾಧಾರಣ ಸ್ಮಾರ್ಟ್ ಫೋನ್, ವೈಫೈ ಇದ್ದರೆ ಬೇಕಾದಷ್ಟಾಯಿತು. ಉದ್ಯೋಗಸ್ಥೆಯರಿಗೆ ಸಿಗುವ ಲಾಭ ಈ ರೀತಿ ಕೆಲಸ ಮಾಡುವ ಹೆಂಗಸರಿಗೆ ಅನೇಕ ಲಾಭಗಳಿವೆ. ಇವರು ಆರ್ಥಿಕವಾಗಿ ಸದೃಢರಾಗುತ್ತಾರೆ, ಹೆಚ್ಚು ಆತ್ಮವಿಶ್ವಾಸ ಗಳಿಸುತ್ತಾರೆ, ಕಾಲಕ್ಕೆ ತಕ್ಕಂತೆ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುತ್ತಾರೆ. ಇವರು ಹೆಚ್ಚು ಖುಷಿ ಖುಷಿಯಾಗಿರುತ್ತಾರೆ, ಜೀವನವನ್ನು ಹೊಸ ದೃಷ್ಟಿಕೋನದಿಂದ ನೋಡುವಲ್ಲಿ ನಂಬಿಕೆ ಉಳ್ಳವರಾಗಿರುತ್ತಾರೆ.
ಆರ್ಥಿಕ ಸ್ಥಿತಿಗತಿ : ಇವರ ಹಣಕಾಸಿನ ಪರಿಸ್ಥಿತಿ ಎಷ್ಟೋ ಸುಧಾರಿಸಿರುತ್ತದೆ. ಸಮಾಜದಲ್ಲಿ ಇವರಿಗೆ ಪ್ರತ್ಯೇಕ ಐಡೆಂಟಿಟಿ ಇರುತ್ತದೆ. ತಮಗೆ ಸಂಬಂಧಿಸಿದ ಆರ್ಥಿಕ ನಿರ್ಧಾರಗಳನ್ನು ಇವರೇ ಕೈಗೊಳ್ಳುವಲ್ಲಿ ಸಮರ್ಥರಾಗಿರುತ್ತಾರೆ. ಅವರು ಒಂದು ಮಿತಿಯಲ್ಲಿ ಬೇಕಾದ್ದನ್ನು ಕೊಳ್ಳಬಲ್ಲರು, ಎಲ್ಲದಕ್ಕೂ ಪತಿಯ ಮುಂದೆ ಕೈಯೊಡ್ಡಬೇಕಾದ ಪರಿಸ್ಥಿತಿ ಇರುವುದಿಲ್ಲ. ವಿವಾಹಿತೆ ಜಾಬ್ ಗೆ ಹೋಗದಿದ್ದರೆ, ಸಣ್ಣಪುಟ್ಟ ಬಳೆ ಬಿಂದಿ ಕೊಳ್ಳಲಿಕ್ಕೂ ಗಂಡನಿಗೆ ಹಣದ ವಿವರ ಒಪ್ಪಿಸಬೇಕಾಗುತ್ತದೆ. ಹೀಗಾಗಿ ಈ ನಿಟ್ಟಿನಲ್ಲಿ ಮದುವೆಯಾಗಲಿರುವ ಹೆಣ್ಣುಮಕ್ಕಳು ಗಂಭೀರವಾಗಿ ವಿಚಾರಿಸಿ ನಿರ್ಧರಿಸಬೇಕು.
ಆಕರ್ಷಕ ವ್ಯಕ್ತಿತ್ವ : ಉದ್ಯೋಗಸ್ಥ ವಿವಾಹಿತೆಯರು ಹೆಚ್ಚು ಸ್ಮಾರ್ಟ್ ಆಗಿರುತ್ತಾರೆ. ಹೊರಗಿನ ಪ್ರಪಂಚದಲ್ಲಿ ಸದಾ ಓಡಾಡುತ್ತಿರುತ್ತಾರೆ. ಲೇಟೆಸ್ಟ್ ಫ್ಯಾಷನ್ ಬಗ್ಗೆ ಅರಿತು, ಡೀಸೆಂಟ್ ಆಗಿ ಡ್ರೆಸ್ ಮಾಡಿರುತ್ತಾರೆ. ಈ ರೀತಿಯಾಗಿ ಪತಿ/ಪಾರ್ಟ್ನರ್ ಜೊತೆ ಹೆಚ್ಚು ರೊಮ್ಯಾಂಟಿಕ್ ಆಗಿಯೂ ಇರುತ್ತಾರೆ. ಅದೇ ಮನೆ ಮಟ್ಟಿಗಿನ ಗೃಹಿಣಿ ಎಂದರೆ, ಆಕೆ ಯಾವುದೋ ನೈಟಿ, ನೂಲು ಸೀರೆಯಲ್ಲೇ ಕೆಲಸ ಮಾಡಿಕೊಳ್ಳುತ್ತಾ, ಮೇಕಪ್ ನಿಂದ ನಮಗೇನಾಗಬೇಕು ಎಂದು ನಿಡುಸುಯ್ಯುತ್ತಾಳೆ. ಫ್ಯಾಷನ್, ಗ್ಲಾಮರ್ ಇವರಿಗೆ ಎಟುಕದ ಪದಗಳು. ಮನೆಗೆಲಸ ಮಾಡುತ್ತಾ, ಮಕ್ಕಳನ್ನು ನೋಡಿಕೊಂಡರೆ ಪ್ರಪಂಚ ಇಷ್ಟೆ ಎಂದುಕೊಳ್ಳುತ್ತಾರೆ.
ಹೆಚ್ಚಿನ ಆತ್ಮವಿಶ್ವಾಸ : ಉದ್ಯೋಗಸ್ಥ ವನಿತೆಯರ ಆತ್ಮ ವಿಶ್ವಾಸದ ಮಟ್ಟ ಸಾಮಾನ್ಯರಿಗಿಂತ ಹೆಚ್ಚು ಎತ್ತರದಲ್ಲಿರುತ್ತದೆ. ಇದು ಅವರನ್ನು ನಾಲ್ಕು ಗೋಡೆಗಳ ಬಂಧನದಿಂದ ಹೊರ ತರುತ್ತದೆ. ಅದೇ ಮನೆಮಟ್ಟದ ಗೃಹಿಣಿಯರಾದರೆ ಜೀವನವಿಡೀ ಕಸಮುಸುರೆ, ಮನೆಗೆಲಸಗಳ ಪೂರೈಕೆಯಲ್ಲೇ ಆಗಿಹೋಗುತ್ತದೆ. ಹೊರ ಪ್ರಪಂಚದ ಕೊಂಡಿಯೇ ಇವರಿಗೆ ಕಳಚಿ ಹೋಗಿರುತ್ತದೆ.
32 ವರ್ಷದ ಸುಪ್ರಿಯಾ ಬೆಂಗಳೂರಿನ ಎಂಎನ್ಸಿಯಲ್ಲಿ ಉನ್ನತ ಹುದ್ದೆಯ ಜಾಬ್ ನಲ್ಲಿದ್ದಾಳೆ. ಆಕೆಯ ಮಾತುಗಳಿಂದ ಜೀವನದ ಕುರಿತಾದ ಆತ್ಮವಿಶ್ವಾಸ ಎದ್ದು ಕಾಣುತ್ತದೆ. ಮಾಮೂಲಿ ಗೃಹಿಣಿಯರು ಹೊರ ಪ್ರಪಂಚದ ಅಪರಿಚಿತರ ಜೊತೆ ಮಾತನಾಡಲು ಬಲು ಹಿಂಜರಿಯುತ್ತಾರೆ.
ಹತ್ತಿರದ ಸಂಬಂಧಗಳಲ್ಲಿ ಹೆಚ್ಚು ಬಾಂಧವ್ಯ : ಈ ವಿಷಯ ಹಲವು ಅಧ್ಯಯನಗಳಲ್ಲಿ ಚರ್ಚಿಸಲ್ಪಟ್ಟಿರುವುದು ಎಂದರೆ, ಕೆಲಸದಲ್ಲಿರುವ ಮಹಿಳೆಯರು ಹೆಚ್ಚು ಯಶಸ್ವಿ ಎಂಬುದು. ಅಂಥವರ ಖಾಸಗಿ ಜೀವನ ಹೆಚ್ಚು ಸುಖಮಯ ಆಗಿರುತ್ತದಂತೆ.
ಹೆಚ್ಚು ಖುಷಿ ಖುಷಿಯಾಗಿರಲು : ಹೊರಗೆ ಹೋಗಿ ಕೆಲಸ ಮಾಡುವುದರ ಜೊತೆಗೆ ಮನೆಯ ಜವಾಬ್ದಾರಿಯೂ ನಿರ್ವಹಿಸುವುದು ಎಂದರೆ ಅತ್ಯಂತ ಕಠಿಣಕರ ಎಂಬುದು ಗೊತ್ತಿರುವ ಸಂಗತಿ. ಮನೆಯಲ್ಲಿ ಹೆಚ್ಚಿನ ವಿಶೇಷಕರ ಕೆಲಸಗಳಿಲ್ಲದಿದ್ದಾಗ, ಹೊರಗೆ ದುಡಿಯುವುದು ತುಸು ಸುಲಭವಾಗುತ್ತದೆ. ಇದರಿಂದ ಅವರು ಸ್ವಾವಲಂಬಿಗಳಾಗುವುದು ಮಾತ್ರವಲ್ಲದೆ, ಒತ್ತಡಮುಕ್ತರಾಗಿರುತ್ತಾರೆ. ಇಂಥವರು ಸಾಮಾನ್ಯ ಗೃಹಿಣಿಯರಿಗಿಂತ ತುಸು ಒತ್ತಡಮುಕ್ತರಾಗಿ, ಬೆಟರ್ ಎನಿಸುತ್ತಾರೆ. ಈ ರೀತಿ ಅವರು ಗೃಹಿಣಿಯರಿಗಿಂತ ಹೆಚ್ಚು ಖುಷಿಯಾಗಿ, ಜಾಲಿಯಾಗಿರುತ್ತಾರೆ.
ಆದರ್ಶ ಮಹಿಳೆಯರು : ಉದ್ಯೋಗಸ್ಥ ವನಿತೆಯರು ತಮ್ಮ ಮಕ್ಕಳೆದುರು ಒಬ್ಬ ಆದರ್ಶ ಮಹಿಳೆಯಾಗಿ ಎದ್ದು ನಿಲ್ಲುತ್ತಾರೆ. ಅದೇ ತರಹ ಕುಟುಂಬ ಹಣಕಾಸಿನ ವಿಚಾರವಾಗಿ ಅತಿ ದುಸ್ತರ ಸ್ಥಿತಿಯಲ್ಲಿರುವಾಗ, ಆ ಸಂದರ್ಭದಲ್ಲಿ ಈ ಮಹಿಳೆಯರು ಹೊರಗೆ ದುಡಿದು ಮನೆಯನ್ನು ಸಲೀಸಾಗಿ ಸಂಭಾಳಿಸಲು ಸಾಧ್ಯ. ಈ ಎಲ್ಲದರ ಪ್ರಭಾವ ಖಂಡಿತಾ ಮಕ್ಕಳ ಮೇಲಾಗುತ್ತದೆ. ಹೀಗೆ ಈ ಮಹಿಳೆಯರು ದಿಟ್ಟವಾಗಿ ಎದ್ದು ನಿಲ್ಲುತ್ತಾರೆ.
ಬದಲಾಗುವ ದೃಷ್ಟಿಕೋನ : ಹೊರಗೆ ದುಡಿಯುವ ಹೆಂಗಸರ ದೃಷ್ಟಿಕೋನ, ಮನೆಯಲ್ಲಿನ ಗೃಹಿಣಿಯರದಕ್ಕಿಂತ ಖಂಡಿತಾ ವಿಶಾಲ, ವಿಭಿನ್ನವಾಗಿರುತ್ತದೆ. ಏಕೆಂದರೆ ಅವರು ಹೊರಗೆ ಹೋಗಿ ಗಂಡಸರಿಗೆ ಸರಿಸಮಾನವಾಗಿ ದುಡಿಯುತ್ತಾ, ಸಮಾಜವನ್ನು ವಿಭಿನ್ನವಾಗಿ ಕಾಣುತ್ತಾರೆ. ಹೀಗಾದಾಗ ಅವರು ಗಂಡಸರ ಕಠಿಣಕರ ಕೆಲಸಗಳನ್ನು ಸುಲಭವಾಗಿ ನಿಭಾಯಿಸಬಲ್ಲರು. ಈ ಮಹಿಳೆಯರು ತಮ್ಮ ಕುಟುಂಬಕ್ಕಾಗಿ ಪಡುವ ಪಾಡು ಶ್ಲಾಘನೀಯ, ಕುಟುಂಬದ ಏಳಿಗೆಗಾಗಿ ಜೀವನವನ್ನೇ ಮುಡಿಪಾಗಿಡುತ್ತಾರೆ.
ಇಲ್ಲಿ ಹಿಂದಿ ಚಿತ್ರ `ಕೀ ಕಾ’ ಕಡೆ ಗಮನಹರಿಸಿದಾಗ, ಹೆಚ್ಚಿನ ಪ್ರೇರಣೆ ಸಿಗುತ್ತದೆ. ಇಲ್ಲಿ ನಾಯಕಿ ಕೆರಿಯರ್ ಓರಿಯೆಂಟೆಡ್ ಆಗಿ ಸದಾ ಹೊರಗೆ ದುಡಿಯುತ್ತಿದ್ದರೆ, ಗಂಡ ಹೌಸ್ ಹಸ್ಬೆಂಡ್ ಆಗಿ ಮನೆಯಲ್ಲೇ ಇದ್ದು, ಗೃಹಿಣಿಯ ಕೆಲಸ ನಿರ್ವಹಿಸುತ್ತಾ, ಬರವಣಿಗೆಯ ಕೆಲಸ ಮಾಡುತ್ತಿರುತ್ತಾನೆ. ಗಂಡಸಾಗಿ ತಾನು ಕಿಚನ್, ಮನೆ ಸಂಭಾಳಿಸಬಲ್ಲೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾನೆ.
ಈ ಚಿತ್ರದಿಂದ ಮನೆಗೆಲಸದ ಜವಾಬ್ದಾರಿ ಗಂಡು ಹೆಣ್ಣು ಇಬ್ಬರಿಗೂ ಸಮಾನವಾಗಿರುತ್ತದೆ ಎಂದು ಗೊತ್ತಾಗುತ್ತದೆ. ಏನೇ ಆಗಲಿ, ಈ ಸಮಾಜ ಹೆಣ್ಣನ್ನು ಮನೆಯಲ್ಲೇ ಕಟ್ಟಿಹಾಕ ಬಯಸುತ್ತದೆ ಎಂಬುದನ್ನು ಹೆಂಗಸರು ಇಲ್ಲಿ ಗುರುತಿಸಬೇಕು. ಇದಕ್ಕಾಗಿ ಅವರು ವಿವಿಧ ವಿಧಾನಗಳನ್ನು ಅನುಸರಿಸುತ್ತಾರೆ. ಮನೆ, ಮಕ್ಕಳು, ಆದರ್ಶ ಸೊಸೆಯಾಗಿರುವುದಷ್ಟೇ ಅವಳ ಕರ್ತವ್ಯ ಎಂದುಬಿಡುತ್ತಾರೆ. ಹೆಂಗಸರು ಇವನ್ನೆಲ್ಲ ದಾಟಿ ಬಂದು, ತಮ್ಮ ಕೆರಿಯರ್ ಸುಧಾರಿಸಲು ಯತ್ನಿಸಬೇಕು. ಎಲ್ಲಕ್ಕೂ ಮುಖ್ಯವಾದುದು ಎಂದರೆ ಹೆಣ್ಣು ಸ್ವಾವಲಂಬಿ ಆಗಬೇಕಾದುದು!
– ಪ್ರತಿನಿಧಿ