ಸಾಂಪ್ರದಾಯಿಕ ಆಭರಣಗಳು ಕೇವಲ ಅಲಂಕಾರದ ವಸ್ತುಗಳಲ್ಲ, ಅವು ಪರಂಪರೆಯ ಭಾಗವಾಗಿವೆ. ಇವು ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಿಸಲ್ಪಡುತ್ತವೆ.
ಹಿಂದಿನ ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಒಬ್ಬರ ಕೈಯಿಂದ ಮತ್ತೊಬ್ಬರಿಗೆ ರವಾನೆಯಾಗುವ ಸಂಗತಿಯೇ ಸಂಪ್ರದಾಯ. ಹಾಗೆಯೇ ಈ ಆಭರಣಗಳು ನಮ್ಮ ಪರಂಪರೆಯ ಪ್ರಮುಖ ಭಾಗವಾಗಿರುತ್ತದೆ. ಅದಕ್ಕಾಗಿಯೇ ತನ್ನ ಜೀವನದ ಅತಿ ದೊಡ್ಡ ದಿನಗಳಲ್ಲಿ ಒಂದಾದ ಮದುವೆಯೆಂದು ಇವುಗಳಲ್ಲಿ ಯಾವುದಾದರೂ ಒಂದನ್ನು ಧರಿಸುವುದು ವಧುವೆಗೆ ತನ್ನ ಮೂಲ ಬೇರುಗಳೊಂದಿಗೆ ಸಂಪರ್ಕ ಹೊಂದಲು ಸಹಾಯ ಮಾಡುತ್ತದೆ.
ಮಿಸ್ಟರ್ ಇಂಡಿಯಾ ಎಂದೇ ಖ್ಯಾತರಾಗಿರುವ ನಟ ಅನಿಲ್ ಕಪೂರ್ ಪುತ್ರಿ ರಿಯಾ ಕಪೂರ್ ತಮ್ಮ ಮದುವೆಯಲ್ಲಿ ದುಬಾರಿ ಮತ್ತು ಟ್ರೆಂಡಿ ಆಭರಣಗಳ ಬದಲಿಗೆ ಅವರ ತಾಯಿಯ ಆಭರಣಗಳನ್ನು ಧರಿಸಿದ್ದರು. ಈ ಮೂಲಕ ಅವರು ತಮ್ಮ ತಾಯಿಯನ್ನು ಗೌರವಿಸುವುದು ಮಾತ್ರವಲ್ಲದೆ, ಅವರ ಸಾಂಪ್ರದಾಯಿಕ ಮೌಲ್ಯಗಳ ಗೌರವವನ್ನು ಹೆಚ್ಚಿಸಿದ್ದರು.
ಅದೇ ರೀತಿ, ಪಟೌಡಿ ಕುಟುಂಬದ ಕಿರಿಯ ಮಗಳು ಸೋಹಾ ಅಲಿಖಾನ್, ಕುನಾಲ್ ಖೇಮುರನ್ನು ವಿವಾಹವಾದಾಗ, ತಮ್ಮ ತಾಯಿ ಶರ್ಮಿಳಾ ಟ್ಯಾಗೋರ್ ರ ರತ್ನಖಚಿತ ಸವ್ಯಸಾಚಿ ಲೆಹಂಗಾ ಮತ್ತು ರಾಣಿಹಾರ ಹಾಕಿಕೊಂಡಿದ್ದರು. ಅದರಲ್ಲಿ ಪಚ್ಚೆ ಕಲ್ಲಿನ ನವರತ್ನ ಹುದುಗಿಸಲಾಗಿದ್ದ ಚಿನ್ನ ಮತ್ತು ದಂತದ ಆಭರಣಗಳನ್ನೂ ಧರಿಸಿದ್ದರು.
ಸಾಮಾನ್ಯ ಜನರಲ್ಲೂ ಪ್ರಚಲಿತ
ಸೆಲೆಬ್ರಿಟಿಗಳಿಂದ ಆರಂಭವಾದ ಈ ಟ್ರೆಂಡ್ ಈಗ ಸಾಮಾನ್ಯ ಜನರಲ್ಲೂ ಜನಪ್ರಿಯವಾಗಿದೆ. ನಗರಗಳಲ್ಲಿ ವಾಸಿಸುವ ಹುಡುಗಿಯರು ಸಹ ವಿಂಟೇಜ್ ಆಭರಣಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ.
ಇದೇ ಕಥೆ ನಮಿತಾ ಮುಖರ್ಜಿಯದ್ದು. ಅವಳಿಗೆ 30 ವರ್ಷ ವಯಸ್ಸು. ಅವಳು ಉತ್ತರ ಪ್ರದೇಶ ಮೂಲದವಳು. ತನ್ನ ದೀರ್ಘಕಾಲದ ಗೆಳೆಯ ವಿನಯ್ ಮೆಹ್ತಾನನ್ನು ಮದುವೆಯಾಗಿದ್ದಾಳೆ.
``ಒಬ್ಬ ಹುಡುಗಿ ಮದುವೆಯಾಗುವಾಗ, ಅವಳು ತುಂಬಾ ಭಾವುಕಳಾಗಿರುತ್ತಾಳೆ. ಮದುವೆಯ ಸಮಯದಲ್ಲಿ ಅವಳು ಹೇಗಾದರೂ ತನ್ನ ಕುಟುಂಬ ಮತ್ತು ನಂಬಿಕೆಗಳೊಂದಿಗೆ ಸಂಪರ್ಕ ಹೊಂದಿರಬೇಕು ಎಂದು ಯೋಚಿಸುತ್ತಾಳೆ. ಹಾಗಾಗಿ, ತನ್ನ ಕುಟುಂಬದ ಪೂರ್ವಜರ ಆಭರಣಗಳನ್ನು ಧರಿಸಲು ಅವಳು ಹಿಂಜರಿಯುವುದಿಲ್ಲ. ಬದಲಿಗೆ ಅವುಗಳನ್ನು ಧರಿಸಿ, ಅವರೊಂದಿಗೆ ತಾನು ಸದಾ ಬೆಸೆದುಕೊಂಡಿರಲು ಬಯಸುತ್ತಾಳೆ,'' ಎನ್ನುತ್ತಾಳೆ ನಮಿತಾ ಮುಖರ್ಜಿ.
``ನಾನು ನನ್ನ ಮದುವೆಗೆ ವಧುವಿನ ಬಣ್ಣ ಎಂದು ಕರೆಯುವ ಕೆಂಪು ಬಣ್ಣವನ್ನು ಆರಿಸಿಕೊಂಡಿದ್ದೆ. ಯಾವ ಆಭರಣಗಳನ್ನು ಧರಿಸಬೇಕು ಎಂದು ನಿರ್ಧರಿಸಲು ನನಗೆ ಸಾಧ್ಯವಾಗಲಿಲ್ಲ. ಆಗ ನಾನು ಸೆಲೆಬ್ರಿಟಿಗಳ ಮದುವೆಗಳ ಬಗ್ಗೆ ಓದಿದಾಗ, ಸಾಂಪ್ರದಾಯಿಕ ಆಭರಣಗಳನ್ನು ಧರಿಸುವುದು ಟ್ರೆಂಡ್ ಆಗಿದೆ ಎಂಬುದು ನನಗೆ ತಿಳಿದುಬಂತು. ನನಗೂ ಇದೇ ಟ್ರೆಂಡ್ ಫಾಲೋ ಮಾಡಬೇಕು ಎನಿಸಿತು.
``ಹಾಗಾಗಿ ನಾನು ಮಾಡಿದ್ದು ಇದನ್ನೇ. ನನ್ನ ಮದುವೆಯಲ್ಲಿ ನನ್ನ ಅಜ್ಜಿ ತಮ್ಮ ಮದುವೆಯಲ್ಲಿ ಹಾಕಿಕೊಂಡಿದ್ದ ಹಣೆಪಟ್ಟಿಯನ್ನು ನಾನು ಧರಿಸಿದ್ದೆ. ಹೌದು, ನಾನು ಫ್ಯಾಷನ್ ಬಗ್ಗೆ ಮಾತನಾಡುವುದಾದರೆ, ನಾವು ಹುಡುಗಿಯರು ಈ ವಿಷಯದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಅದಕ್ಕೆ ಅಜ್ಜಿಯ ಹಣೆಪಟ್ಟಿಗೆ ಎರಡೆರಡು ಚೈನ್ ಸೇರಿಸಿಕೊಂಡು ಹೊಸದಾಗಿ ಹಣೆಪಟ್ಟಿ ಮಾಡಿಸಿಕೊಂಡಿದ್ದೆ. ನಾನು ಸಹ ನನ್ನ ಕುಟುಂಬದ ಪೂರ್ವಜರ ಆಭರಣಗಳು ಮತ್ತು ಅವರ ಭಾವನೆಗಳಿಗೆ ಅನುಗುಣವಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದೇನೆ. ಮಾತ್ರವಲ್ಲ, ಹೊಸ ಫ್ಯಾಷನ್ ಟ್ರೆಂಡ್ ನೊಂದಿಗೂ ನನ್ನನ್ನು ನವೀಕರಿಸಿಕೊಂಡಿದ್ದೇನೆ.''





